ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ
azadi ka amrit mahotsav

ಪಶ್ಚಿಮ ಏಷ್ಯಾದ ಇತ್ತೀಚಿನ ಬೆಳವಣಿಗೆಗಳ ಕುರಿತು ಅಂತರ-ಸಚಿವಾಲಯದ ಸುದ್ದಿಗೋಷ್ಠಿ


ಆದ್ಯತಾ ವಲಯಗಳಿಗೆ ನೈಸರ್ಗಿಕ ಅನಿಲದ ಸಂರಕ್ಷಿತ ಪೂರೈಕೆ ಮುಂದುವರಿಕೆ

ಮಾರ್ಚ್ ತಿಂಗಳಿನಲ್ಲಿ 3.5 ಲಕ್ಷಕ್ಕೂ ಹೆಚ್ಚು ಗೃಹ ಬಳಕೆ ಮತ್ತು ವಾಣಿಜ್ಯ ಪಿ ಎನ್‌ ಜಿ (PNG) ಸಂಪರ್ಕಗಳ ವಿತರಣೆ

ಆತಂಕದಿಂದಾಗಿ ಮುಂಗಡವಾಗಿ ಕಾಯ್ದಿರಿಸುವ ಪ್ರವೃತ್ತಿ ಗಣನೀಯವಾಗಿ ಇಳಿಕೆ

ಗೃಹ ಬಳಕೆಯ ಎಲ್‌ ಪಿ ಜಿ ಸಿಲಿಂಡರ್‌ ಗಳ ವಿತರಣೆಯು ಎಂದಿನಂತೆ ಮುಂದುವರಿಕೆ

ನಿಯಮಿತವಾಗಿ ಜಾರಿ ಕ್ರಮಗಳನ್ನು ಕೈಗೊಳ್ಳಲು ಜಿಲ್ಲಾಧಿಕಾರಿಗಳು ಮತ್ತು ಆಹಾರ ಹಾಗೂ ನಾಗರಿಕ ಸರಬರಾಜು ಅಧಿಕಾರಿಗಳಿಗೆ ವಿನಂತಿ

547ಕ್ಕೂ ಹೆಚ್ಚು ಭಾರತೀಯ ನಾವಿಕರ ಸುರಕ್ಷಿತ ಸ್ವದೇಶ ವಾಪಸಾತಿಗೆ ಸೌಲಭ್ಯ

ಪಶ್ಚಿಮ ಏಷ್ಯಾ ಪ್ರದೇಶದಲ್ಲಿ ನಡೆಯುತ್ತಿರುವ ಸಂಘರ್ಷದ ಕುರಿತು ವಿಶ್ವ ನಾಯಕರೊಂದಿಗೆ ಪ್ರಧಾನಮಂತ್ರಿಯವರ ಮಾತುಕತೆ

ನೌಕಾಯಾನದ ಸ್ವಾತಂತ್ರ್ಯವನ್ನು ರಕ್ಷಿಸುವ ಮತ್ತು ಹಡಗು ಸಂಚಾರ ಮಾರ್ಗಗಳು ಮುಕ್ತವಾಗಿ ಹಾಗೂ ಸುರಕ್ಷಿತವಾಗಿರುವುದನ್ನು ಖಚಿತಪಡಿಸಿಕೊಳ್ಳುವ ಮಹತ್ವವನ್ನು ಪುನರುಚ್ಚರಿಸಿದ ಪ್ರಧಾನಮಂತ್ರಿ

ಪ್ರಕಟಣಾ ದಿನಾಂಕ: 23 MAR 2026 6:03PM by PIB Bengaluru

ಪಶ್ಚಿಮ ಏಷ್ಯಾದ ವಿದ್ಯಮಾನಗಳ ಕುರಿತು ನಡೆಯುತ್ತಿರುವ ಅಂತರ-ಸಚಿವಾಲಯದ ಸುದ್ದಿಗೋಷ್ಠಿಗಳ ಭಾಗವಾಗಿ, ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ, ಬಂದರುಗಳು, ಹಡಗು ಮತ್ತು ಜಲಮಾರ್ಗಗಳ ಸಚಿವಾಲಯ ಹಾಗೂ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಹಿರಿಯ ಅಧಿಕಾರಿಗಳು ಇಂದು ನ್ಯಾಷನಲ್ ಮೀಡಿಯಾ ಸೆಂಟರ್‌ನಲ್ಲಿ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದರು. ಬದಲಾಗುತ್ತಿರುವ ಪರಿಸ್ಥಿತಿಯ ಬಗ್ಗೆ ಸಕಾಲಿಕ ನವೀಕರಣಗಳನ್ನು ನೀಡಲು ಈ ಸುದ್ದಿಗೋಷ್ಠಿಗಳನ್ನು ನಿಯಮಿತವಾಗಿ ಆಯೋಜಿಸಲಾಗುತ್ತಿದೆ. ಇಂದಿನ ಸಂವಾದದ ಸಮಯದಲ್ಲಿ, ಇಂಧನ ಪೂರೈಕೆಯ ಸ್ಥಿತಿ, ಕಡಲ ಕಾರ್ಯಾಚರಣೆಗಳು ಮತ್ತು ಈ ಪ್ರದೇಶದಲ್ಲಿರುವ ಭಾರತೀಯ ಪ್ರಜೆಗಳಿಗೆ ಬೆಂಬಲ ನೀಡಲು ಕೈಗೊಳ್ಳಲಾಗುತ್ತಿರುವ ಪ್ರಯತ್ನಗಳು ಹಾಗೂ ಈ ವಲಯಗಳಲ್ಲಿ ನಿರಂತರ ಸ್ಥಿರತೆಯನ್ನು ಖಚಿತಪಡಿಸಿಕೊಳ್ಳಲು ಜಾರಿಯಲ್ಲಿರುವ ಕ್ರಮಗಳ ಬಗ್ಗೆ ಸಮಗ್ರ ಮಾಹಿತಿಯನ್ನು ಹಂಚಿಕೊಳ್ಳಲಾಯಿತು.

ಇಂಧನ ಪೂರೈಕೆ ಮತ್ತು ಇಂಧನದ ಲಭ್ಯತೆ

ಹಾರ್ಮುಜ್ ಜಲಸಂಧಿಯ ಮುಚ್ಚುವಿಕೆಯ ಹಿನ್ನೆಲೆಯಲ್ಲಿ ಇಂಧನ ಪೂರೈಕೆ ಪರಿಸ್ಥಿತಿ ಹಾಗೂ ಪೆಟ್ರೋಲಿಯಂ ಉತ್ಪನ್ನಗಳು ಮತ್ತು ಎಲ್‌ ಪಿ ಜಿ ಯ ನಿರಂತರ ಲಭ್ಯತೆಯನ್ನು ಕಾಯ್ದುಕೊಳ್ಳಲು ಕೈಗೊಳ್ಳಲಾಗುತ್ತಿರುವ ಕ್ರಮಗಳ ಕುರಿತು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯವು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿತು. ಸಚಿವಾಲಯವು ಈ ಕೆಳಗಿನ ಅಂಶಗಳನ್ನು ಗಮನಿಸಿದೆ:

ಕಚ್ಚಾ ತೈಲ ಮತ್ತು ಶುದ್ಧೀಕರಣ ಘಟಕಗಳು

  • ಎಲ್ಲಾ ತೈಲ ಶುದ್ಧೀಕರಣ ಘಟಕಗಳು ಸಾಕಷ್ಟು ಕಚ್ಚಾ ತೈಲ ದಾಸ್ತಾನುಗಳೊಂದಿಗೆ ಹೆಚ್ಚಿನ ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸುತ್ತಿವೆ ಮತ್ತು ಪೆಟ್ರೋಲ್ ಹಾಗೂ ಡೀಸೆಲ್‌ನ ಸಾಕಷ್ಟು ದಾಸ್ತಾನುಗಳನ್ನು ಕಾಯ್ದುಕೊಳ್ಳಲಾಗುತ್ತಿದೆ.
  • ಬಿಕ್ಕಟ್ಟಿನ ಪೂರ್ವ ಅವಧಿಗೆ ಹೋಲಿಸಿದರೆ ಶುದ್ಧೀಕರಣ ಘಟಕಗಳಿಂದ ದೇಶೀಯ ಎಲ್‌ ಪಿ ಜಿ ಉತ್ಪಾದನೆಯನ್ನು ಹೆಚ್ಚಿಸಲಾಗಿದೆ.

ಚಿಲ್ಲರೆ ಮಾರಾಟ ಕೇಂದ್ರಗಳು 

  • ತೈಲ ಮಾರುಕಟ್ಟೆ ಕಂಪನಿಗಳ ಯಾವುದೇ ಚಿಲ್ಲರೆ ಮಾರಾಟ ಕೇಂದ್ರಗಳಲ್ಲಿ ಇಂಧನ ಖಾಲಿಯಾದ ಪ್ರಕರಣಗಳು ವರದಿಯಾಗಿಲ್ಲ ಮತ್ತು ಪೆಟ್ರೋಲ್ ಹಾಗೂ ಡೀಸೆಲ್ ಪೂರೈಕೆಯನ್ನು ನಿಯಮಿತವಾಗಿ ನಿರ್ವಹಿಸಲಾಗುತ್ತಿದೆ.
  • ಸಾಕಷ್ಟು ದಾಸ್ತಾನು ಲಭ್ಯವಿರುವುದರಿಂದ ನಾಗರಿಕರು ಆತಂಕದಿಂದ ಇಂಧನ ಖರೀದಿಗೆ  ಮುಂದಾಗಬಾರದು ಎಂದು ಸಲಹೆ ನೀಡಲಾಗಿದೆ.

ನೈಸರ್ಗಿಕ ಅನಿಲ

  • ಆದ್ಯತಾ ವಲಯಗಳಿಗೆ ಸಂರಕ್ಷಿತ ಪೂರೈಕೆಗಳು ಮುಂದುವರಿಯುತ್ತಿವೆ; ಇದರಲ್ಲಿ ಗೃಹ ಬಳಕೆಯ PNG ಮತ್ತು CNG ಸಾರಿಗೆಗೆ 100% ಪೂರೈಕೆ ಸೇರಿದೆ. ಕೈಗಾರಿಕಾ ಮತ್ತು ವಾಣಿಜ್ಯ ಗ್ರಾಹಕರಿಗೆ ಪೂರೈಕೆಯನ್ನು ಸುಮಾರು 80% ರಷ್ಟು ನಿಯಂತ್ರಿಸಲಾಗುತ್ತಿದೆ.
  • ವಾಣಿಜ್ಯ ಸಂಸ್ಥೆಗಳಿಗೆ ಪಿಎನ್‌ಜಿ ಸಂಪರ್ಕಗಳಿಗೆ ಆದ್ಯತೆ ನೀಡುವಂತೆ ಸಿಟಿ ಗ್ಯಾಸ್ ಡಿಸ್ಟ್ರಿಬ್ಯೂಷನ್ (CGD) ಘಟಕಗಳಿಗೆ ಸೂಚಿಸಲಾಗಿದೆ ಮತ್ತು IGL, MGL, GAIL Gas ಹಾಗೂ BPCL ನಂತಹ ಕಂಪನಿಗಳಿಂದ ಪ್ರೋತ್ಸಾಹಕಗಳನ್ನು ನೀಡಲಾಗುತ್ತಿದೆ.
  • ಸಿಜಿಡಿ (CGD) ಜಾಲದ ವಿಸ್ತರಣೆಗೆ ಅಗತ್ಯವಿರುವ ಅರ್ಜಿಗಳ ಅನುಮೋದನೆಯನ್ನು ತ್ವರಿತಗೊಳಿಸುವಂತೆ ಭಾರತ ಸರ್ಕಾರವು 16.03.2026 ರ ಪತ್ರದ ಮೂಲಕ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ ಸರ್ಕಾರಗಳನ್ನು ವಿನಂತಿಸಿದೆ.
  • ಎಲ್‌ ಪಿ ಜಿಯಿಂದ ಪಿ ಎನ್‌ ಜಿ ಗೆ ದೀರ್ಘಕಾಲೀನ ಬದಲಾವಣೆಗೆ ಸಹಾಯ ಮಾಡುವುದಾದರೆ, ಎಲ್ಲಾ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ ವಾಣಿಜ್ಯ ಎಲ್‌ಪಿಜಿಯ ಹೆಚ್ಚುವರಿ 10% ಹಂಚಿಕೆಯನ್ನು ನೀಡುವುದಾಗಿ ಭಾರತ ಸರ್ಕಾರವು 18.03.2026 ರ ಪತ್ರದ ಮೂಲಕ ತಿಳಿಸಿದೆ.
  • ಸಚಿವಾಲಯವು ರಾಜಸ್ಥಾನ ಸರ್ಕಾರದಿಂದ 19.03.2026 ರಂದು ಅರ್ಜಿಯನ್ನು ಸ್ವೀಕರಿಸಿದೆ ಮತ್ತು ಮಧ್ಯಪ್ರದೇಶ ಸರ್ಕಾರವು 20.03.2026 ರ ಪತ್ರದ ಮೂಲಕ ಸಿಜಿಡಿ ಪ್ರಚಾರ ಮತ್ತು ಪಿಎನ್‌ಜಿ ಬದಲಾವಣೆಯ ಸುಧಾರಣೆಗಳಿಗೆ ಸಂಬಂಧಿಸಿದಂತೆ ಮಹತ್ವದ ಕ್ರಮಗಳನ್ನು ಕೈಗೊಂಡಿರುವುದಾಗಿ ತಿಳಿಸಿದೆ; ಈ ಪ್ರಸ್ತಾವನೆಗಳು ಪರಿಶೀಲನೆಯಲ್ಲಿವೆ.
  • ಸಿಜಿಡಿ ಮೂಲಸೌಕರ್ಯಕ್ಕೆ ಸಂಬಂಧಿಸಿದ ಎಲ್ಲಾ ಬಾಕಿ ಇರುವ ಮತ್ತು ಹೊಸ ಅನುಮತಿಗಳನ್ನು ತ್ವರಿತವಾಗಿ ವಿಲೇವಾರಿ ಮಾಡುವಂತೆ ಭಾರತ ಸರ್ಕಾರವು ಸಂಬಂಧಪಟ್ಟ ಎಲ್ಲಾ ಕೇಂದ್ರ ಸರ್ಕಾರದ ಸಚಿವಾಲಯಗಳನ್ನು ವಿನಂತಿಸಿದೆ.
  • ಭಾರತ ಸರ್ಕಾರದ ವಿವಿಧ ಸಚಿವಾಲಯಗಳು/ಇಲಾಖೆಗಳ ಅಡಿಯಲಿರುವ ಸಂಸ್ಥೆಗಳಲ್ಲಿ ಪಿಎನ್‌ಜಿ ಸಂಪರ್ಕಗಳ ಸಂಭಾವ್ಯ ಬೇಡಿಕೆಯ ಸಮಗ್ರ ಮೌಲ್ಯಮಾಪನವನ್ನು ಕೈಗೊಳ್ಳಲು ಮತ್ತು ಈ ಪ್ರಕ್ರಿಯೆಯನ್ನು ಸಂಯೋಜಿಸಲು ಪ್ರತಿ ಸಚಿವಾಲಯ/ಇಲಾಖೆಯಿಂದ ನೋಡಲ್ ಅಧಿಕಾರಿಯನ್ನು ನೇಮಿಸುವಂತೆ ಭಾರತ ಸರ್ಕಾರವು 20.03.2026 ರ ಪತ್ರದ ಮೂಲಕ ಎಲ್ಲಾ ಕೇಂದ್ರ ಸಚಿವಾಲಯಗಳನ್ನು ವಿನಂತಿಸಿದೆ.
  • ಭಾರತ ಸರ್ಕಾರದ ಮೇಲಿನ ಪತ್ರಕ್ಕೆ ಪ್ರತಿಕ್ರಿಯೆಯಾಗಿ, ಪೆಟ್ರೋಲಿಯಂ ಮತ್ತು ಸ್ಫೋಟಕಗಳ ಸುರಕ್ಷತಾ ಸಂಸ್ಥೆ (PESO) ತನ್ನ ಎಲ್ಲಾ ಕಚೇರಿಗಳಿಗೆ ಸಿಜಿಡಿ ಅರ್ಜಿಗಳನ್ನು ಆದ್ಯತೆಯ ಮೇರೆಗೆ, ಅಂದರೆ ಸ್ವೀಕರಿಸಿದ 10 ದಿನಗಳೊಳಗೆ ವಿಲೇವಾರಿ ಮಾಡುವಂತೆ ಸೂಚಿಸಿದೆ.
  • ಪ್ರಮುಖ ನಗರಗಳು ಮತ್ತು ನಗರ ಪ್ರದೇಶಗಳಲ್ಲಿನ ವಾಣಿಜ್ಯ ಎಲ್‌ ಪಿ ಜಿ ಗ್ರಾಹಕರು ಪಿ ಎನ್‌ ಜಿ ಗೆ ಬದಲಾಗುವಂತೆ ವಿನಂತಿಸಲಾಗಿದೆ.
  • ಮಾರ್ಚ್ 2026 ರ ಮೊದಲ 3 ವಾರಗಳಲ್ಲಿ ಸಿಜಿಡಿ ಘಟಕಗಳಿಂದ 3.5 ಲಕ್ಷಕ್ಕೂ ಹೆಚ್ಚು ಗೃಹ ಬಳಕೆ ಮತ್ತು ವಾಣಿಜ್ಯ ಪಿ ಎನ್‌ ಜಿ ಸಂಪರ್ಕಗಳನ್ನು ನೀಡಲಾಗಿದೆ/ಸಕ್ರಿಯಗೊಳಿಸಲಾಗಿದೆ.

ಎಲ್‌ ಪಿ ಜಿ

  • ಪ್ರಚಲಿತದಲ್ಲಿರುವ ಭೌಗೋಳಿಕ ರಾಜಕೀಯ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಎಲ್‌ ಪಿ ಜಿ ಪೂರೈಕೆಯನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡಲಾಗುತ್ತಿದೆ.
  • ವಿತರಕರಲ್ಲಿ ದಾಸ್ತಾನು ಖಾಲಿಯಾದ ಯಾವುದೇ ಪ್ರಕರಣಗಳು ವರದಿಯಾಗಿಲ್ಲ.
  • ಆತಂಕದಿಂದಾಗಿ ಮುಂಗಡವಾಗಿ ಕಾಯ್ದಿರಿಸುವ ಪ್ರವೃತ್ತಿ ಗಣನೀಯವಾಗಿ ಕಡಿಮೆಯಾಗಿದೆ ಮತ್ತು ಗೃಹ ಬಳಕೆಯ ಎಲ್‌ಪಿಜಿ ಸಿಲಿಂಡರ್‌ ಗಳ ವಿತರಣೆಯು ಎಂದಿನಂತೆ ಮುಂದುವರಿಯುತ್ತಿದೆ.
  • ಭಾರತ ಸರ್ಕಾರವು ಈಗಾಗಲೇ ಗ್ರಾಹಕರಿಗೆ ಭಾಗಶಃ ವಾಣಿಜ್ಯ ಎಲ್‌ ಪಿ ಜಿ ಪೂರೈಕೆಯನ್ನು (20%) ಪುನಃಸ್ಥಾಪಿಸಿದೆ. ಇದಲ್ಲದೆ, ಪಿ ಎನ್‌ ಜಿ ವಿಸ್ತರಣೆಗಾಗಿ 'ಸುಲಭ ವ್ಯವಹಾರ' (ease of doing business) ಸುಧಾರಣೆಗಳ ಆಧಾರದ ಮೇಲೆ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ ಹೆಚ್ಚುವರಿ 10% ವಾಣಿಜ್ಯ ಎಲ್‌ ಪಿ ಜಿಯನ್ನು ಹಂಚಿಕೆ ಮಾಡಲು ಭಾರತ ಸರ್ಕಾರವು 18.03.2026 ರ ಪತ್ರದ ಮೂಲಕ ಪ್ರಸ್ತಾಪಿಸಿದೆ.
  • ಭಾರತ ಸರ್ಕಾರವು 21.03.2026 ರ ಪತ್ರದ ಮೂಲಕ ರಾಜ್ಯಗಳಿಗೆ ಇನ್ನೂ 20% ವಾಣಿಜ್ಯ ಎಲ್‌ ಪಿ ಜಿ ಹಂಚಿಕೆಯನ್ನು ಅನುಮತಿಸಿದೆ, ಇದರಿಂದ ಒಟ್ಟು ಹಂಚಿಕೆಯು 50% ಕ್ಕೆ (ಪಿಎನ್‌ಜಿ ವಿಸ್ತರಣೆಯ ಸುಧಾರಣೆಗಳ ಆಧಾರದ ಮೇಲೆ ನೀಡುವ 10% ಹಂಚಿಕೆ ಸೇರಿದಂತೆ) ಏರಿಕೆಯಾಗಲಿದೆ. ಈ ಹೆಚ್ಚುವರಿ 20% ಹಂಚಿಕೆಯನ್ನು ಆದ್ಯತೆಯ ಮೇರೆಗೆ ರೆಸ್ಟೋರೆಂಟ್‌ ಗಳು, ಧಾಬಾಗಳು, ಹೋಟೆಲ್‌ ಗಳು, ಕೈಗಾರಿಕಾ ಕ್ಯಾಂಟೀನ್‌ ಗಳು, ಆಹಾರ ಸಂಸ್ಕರಣೆ/ಡೈರಿಗಳು, ರಾಜ್ಯ ಸರ್ಕಾರ ಅಥವಾ ಸ್ಥಳೀಯ ಸಂಸ್ಥೆಗಳು ನಡೆಸುವ ಸಬ್ಸಿಡಿ ದರದ ಕ್ಯಾಂಟೀನ್‌ಗಳು/ಆಹಾರ ಮಳಿಗೆಗಳು, ಸಮುದಾಯ ಅಡುಗೆ ಮನೆಗಳು ಮತ್ತು ವಲಸೆ ಕಾರ್ಮಿಕರಿಗಾಗಿ 5 ಕೆಜಿ ಎಫ್‌ಟಿಎಲ್ (FTL) ನಂತಹ ವಲಯಗಳಿಗೆ ನೀಡಲಾಗುವುದು.
  • ಭಾರತ ಸರ್ಕಾರವು ಹೊರಡಿಸಿದ ಮಾರ್ಗಸೂಚಿಗಳಿಗೆ ಅನುಗುಣವಾಗಿ 20 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು ಗೃಹಬಳಕೆಯಲ್ಲದ ಎಲ್‌ ಪಿ ಜಿ ಯನ್ನು ಹಂಚಿಕೆ ಮಾಡಲು ಆದೇಶ ಹೊರಡಿಸಿವೆ. ಉಳಿದ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ ಸಂಬಂಧಿಸಿದಂತೆ, ಪಿಎಸ್‌ಯು (PSU) ತೈಲ ಮಾರುಕಟ್ಟೆ ಕಂಪನಿಗಳು ವಾಣಿಜ್ಯ ಎಲ್‌ ಪಿ ಜಿ ಸಿಲಿಂಡರ್‌ ಗಳನ್ನು ಬಿಡುಗಡೆ ಮಾಡುತ್ತಿವೆ. ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಲ್ಲಿನ ವಾಣಿಜ್ಯ ಸಂಸ್ಥೆಗಳು 14 ಮಾರ್ಚ್ 2026 ರಿಂದ ಒಟ್ಟು ಸುಮಾರು 15,842 ಮೆಟ್ರಿಕ್ ಟನ್ (MT) ಇಂಧನವನ್ನು ಪಡೆದುಕೊಂಡಿವೆ.

ಸೀಮೆಎಣ್ಣೆ 

  • ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಹೆಚ್ಚುವರಿಯಾಗಿ 48,000 ಕೆಎಲ್ (KL) ಸೀಮೆಎಣ್ಣೆಯನ್ನು ಹಂಚಿಕೆ ಮಾಡಲಾಗಿದ್ದು, ವಿತರಣಾ ಕೇಂದ್ರಗಳನ್ನು ಗುರುತಿಸುವಂತೆ ಅವುಗಳಿಗೆ ವಿನಂತಿಸಲಾಗಿದೆ.
  • 15 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಎಸ್‌ಕೆಒ (SKO) ಹಂಚಿಕೆ ಆದೇಶಗಳನ್ನು ಹೊರಡಿಸಿವೆ, ಆದರೆ ಹಿಮಾಚಲ ಪ್ರದೇಶ ಮತ್ತು ಲಡಾಖ್ ತಮಗೆ ಇದರ ಅವಶ್ಯಕತೆಯಿಲ್ಲ ಎಂದು ತಿಳಿಸಿವೆ. ಇಂದಿನವರೆಗೆ, 17 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು ಇನ್ನೂ ಎಸ್‌ಕೆಒ ಹಂಚಿಕೆ ಆದೇಶಗಳನ್ನು ಹೊರಡಿಸಬೇಕಿದೆ.

ರಾಜ್ಯ ಸರ್ಕಾರಗಳು / ಕೇಂದ್ರಾಡಳಿತ ಪ್ರದೇಶಗಳ ಪಾತ್ರ

  • ಅಗತ್ಯ ವಸ್ತುಗಳ ಕಾಯ್ದೆ ಮತ್ತು ಎಲ್‌ಪಿಜಿ ನಿಯಂತ್ರಣ ಆದೇಶದ ಅಡಿಯಲ್ಲಿ ಪೂರೈಕೆಯನ್ನು ಮೇಲ್ವಿಚಾರಣೆ ಮಾಡುವ ಜವಾಬ್ದಾರಿಯನ್ನು ರಾಜ್ಯ ಸರ್ಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಹೊಂದಿದ್ದು, ಅಕ್ರಮ ದಾಸ್ತಾನು ಮತ್ತು ಕಪ್ಪು ಮಾರುಕಟ್ಟೆಯ ವಿರುದ್ಧ ಜಾಗೃತೆ ವಹಿಸುವಂತೆ ಅವುಗಳಿಗೆ ಸಲಹೆ ನೀಡಲಾಗಿದೆ.
  • ಭಾರತ ಸರ್ಕಾರವು 13.03.2026 ಮತ್ತು 18.03.2026 ರ ಪತ್ರಗಳ ಮೂಲಕ ಎಲ್ಲಾ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ ಈ ಕೆಳಗಿನಂತೆ ವಿನಂತಿಸಿದೆ:

o ಅಕ್ರಮ ದಾಸ್ತಾನು, ಕಪ್ಪು ಮಾರುಕಟ್ಟೆ, ಗೃಹ ಬಳಕೆಯ ಎಲ್‌ಪಿಜಿಯ ದುರುಪಯೋಗ ಮತ್ತು ಇತರ ಅವ್ಯವಹಾರಗಳನ್ನು ತಡೆಗಟ್ಟಲು ಕಟ್ಟುನಿಟ್ಟಿನ ನಿಗಾ ವಹಿಸುವುದು.

o ಅಗತ್ಯ ವಸ್ತುಗಳ ಕಾಯ್ದೆ 1955, ಪೆಟ್ರೋಲಿಯಂ ಕಾಯ್ದೆ 1934, ಪೆಟ್ರೋಲಿಯಂ ನಿಯಮಗಳು 2002, ಮೋಟಾರ್ ಸ್ಪಿರಿಟ್ ಮತ್ತು ಎಚ್‌ಎಸ್‌ಡಿ (HSD) ಆದೇಶ 2005 ಮತ್ತು ಇತರ ಅನ್ವಯವಾಗುವ ಕಾನೂನುಗಳ ಅಡಿಯಲ್ಲಿ ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದು.

o ಸ್ಥಳೀಯ ಆದ್ಯತೆಗಳು ಮತ್ತು ಅವಶ್ಯಕತೆಗಳನ್ನು ಗಮನದಲ್ಲಿಟ್ಟುಕೊಂಡು ವಾಣಿಜ್ಯ ಎಲ್‌ಪಿಜಿಗೆ ಸೂಕ್ತವಾದ ವಿತರಣಾ ವಿಧಾನಗಳನ್ನು ರೂಪಿಸುವುದು.

o ಆತಂಕದಿಂದ ಇಂಧನ ಖರೀದಿಸುವುದನ್ನು ತಡೆಯಲು, ಎಲ್‌ಪಿಜಿಯ ವಿವೇಕಯುತ ಬಳಕೆಯನ್ನು ಉತ್ತೇಜಿಸಲು ಮತ್ತು ನಿಖರವಾದ ಮಾಹಿತಿಯನ್ನು ಪ್ರಸಾರ ಮಾಡಲು ಸಾರ್ವಜನಿಕ ಸಲಹೆಗಳನ್ನು ಹೊರಡಿಸುವುದು.

  • ಎಲ್ಲಾ ಜಿಲ್ಲಾಧಿಕಾರಿಗಳು ಮತ್ತು ಆಹಾರ ಮತ್ತು ನಾಗರಿಕ ಸರಬರಾಜು ಅಧಿಕಾರಿಗಳು ಪ್ರತಿದಿನ ನಿಯಮಿತವಾಗಿ ಜಾರಿ ಕ್ರಮಗಳನ್ನು ಕೈಗೊಳ್ಳಲು ವಿನಂತಿಸಲಾಗಿದೆ.
  • 32 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು ನಿಯಂತ್ರಣ ಕೊಠಡಿಗಳನ್ನು (control rooms) ಸ್ಥಾಪಿಸಿವೆ. ಅನೇಕ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು ಪ್ರತಿದಿನ ಪತ್ರಿಕಾಗೋಷ್ಠಿಗಳನ್ನು ನಡೆಸುತ್ತಿವೆ.
  • 33 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು ಜಿಲ್ಲಾ ಮಟ್ಟದ ಉಸ್ತುವಾರಿ ಸಮಿತಿಗಳನ್ನು ಸ್ಥಾಪಿಸಿವೆ.
  • ನಿಯಂತ್ರಣ ಕೊಠಡಿಗಳು ಮತ್ತು ಜಿಲ್ಲಾ ಉಸ್ತುವಾರಿ ಸಮಿತಿಗಳನ್ನು ಸ್ಥಾಪಿಸದ ಎಲ್ಲಾ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು ತುರ್ತಾಗಿ ಅವುಗಳನ್ನು ಸ್ಥಾಪಿಸಲು ವಿನಂತಿಸಲಾಗಿದೆ.

ಜಾರಿ ಕ್ರಮಗಳು

• ಕಪ್ಪು ಮಾರುಕಟ್ಟೆ ಮತ್ತು ಅಕ್ರಮ ದಾಸ್ತಾನು ತಡೆಯಲು ರಾಜ್ಯಾದ್ಯಂತ ಜಾರಿ ಕ್ರಮಗಳು ಮುಂದುವರಿದಿದ್ದು, ಕಳೆದ 24 ಗಂಟೆಗಳಲ್ಲಿ ಸುಮಾರು 2,400 ದಾಳಿಗಳನ್ನು ನಡೆಸಿ 800ಕ್ಕೂ ಹೆಚ್ಚು ಸಿಲಿಂಡರ್‌ ಗಳನ್ನು ವಶಪಡಿಸಿಕೊಳ್ಳಲಾಗಿದೆ.

• ಆಂಧ್ರಪ್ರದೇಶ, ಉತ್ತರ ಪ್ರದೇಶ ಮತ್ತು ದೆಹಲಿಯಲ್ಲಿ ಪ್ರಮುಖ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಇದರಲ್ಲಿ ವಸ್ತುಗಳ ವಶಪಡಿಸಿಕೊಳ್ಳುವಿಕೆ, ಎಫ್‌ಐಆರ್ (FIR) ಮತ್ತು ಬಂಧನಗಳು ಸೇರಿವೆ.

• ಕಳೆದ ವಾರಾಂತ್ಯದಲ್ಲಿ ಸಾರ್ವಜನಿಕ ವಲಯದ ತೈಲ ಮಾರುಕಟ್ಟೆ ಕಂಪನಿಗಳು ದೇಶಾದ್ಯಂತ ಚಿಲ್ಲರೆ ಮಾರಾಟ ಕೇಂದ್ರಗಳು ಮತ್ತು ಎಲ್‌ ಪಿ ಜಿ ವಿತರಕರಲ್ಲಿ 2,600 ಕ್ಕೂ ಹೆಚ್ಚು ಹಠಾತ್ ತಪಾಸಣೆಗಳನ್ನು ನಡೆಸಿವೆ.

• ಇದುವರೆಗೆ ಸುಮಾರು 550 ಎಫ್‌ ಐ ಆರ್ ದಾಖಲಿಸಲಾಗಿದ್ದು, ಸುಮಾರು 150 ಜನರನ್ನು ಬಂಧಿಸಲಾಗಿದೆ.

ಸರ್ಕಾರದ ಇತರ ಕ್ರಮಗಳು

• ಸರ್ಕಾರವು ಮನೆಗಳಿಗೆ ಮತ್ತು ಆಸ್ಪತ್ರೆಗಳು ಹಾಗೂ ಶಿಕ್ಷಣ ಸಂಸ್ಥೆಗಳಂತಹ ಆದ್ಯತಾ ವಲಯಗಳಿಗೆ ನಿರಂತರ ಎಲ್‌ ಪಿ ಜಿ ಪೂರೈಕೆ ಮತ್ತು ಪಿ ಎನ್‌ ಜಿ ವಿಸ್ತರಣೆಗೆ ಆದ್ಯತೆ ನೀಡುವುದನ್ನು ಮುಂದುವರಿಸಿದೆ.

• ಈ ಕ್ರಮಗಳಲ್ಲಿ ತೈಲ ಶುದ್ಧೀಕರಣ ಉತ್ಪಾದನೆಯ ಹೆಚ್ಚಳ, ಸಿಲಿಂಡರ್ ಕಾಯ್ದಿರಿಸುವಿಕೆಯ ಅವಧಿಯನ್ನು ನಗರ ಪ್ರದೇಶಗಳಲ್ಲಿ 21 ರಿಂದ 25 ದಿನಗಳಿಗೆ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ 45 ದಿನಗಳವರೆಗೆ ಪರಿಷ್ಕರಿಸುವುದು ಮತ್ತು ಆದ್ಯತೆಯ ಹಂಚಿಕೆಗಳು ಸೇರಿವೆ.

• ಎಲ್‌ ಪಿ ಜಿ ಬೇಡಿಕೆಯ ಮೇಲಿನ ಒತ್ತಡವನ್ನು ಕಡಿಮೆ ಮಾಡಲು ಸೀಮೆಎಣ್ಣೆ ಮತ್ತು ಕಲ್ಲಿದ್ದಲಿನಂತಹ ಪರ್ಯಾಯ ಇಂಧನ ಆಯ್ಕೆಗಳನ್ನು ನೀಡಲಾಗಿದೆ.

• ಸಣ್ಣ, ಮಧ್ಯಮ ಮತ್ತು ಇತರ ಗ್ರಾಹಕರಿಗೆ ಕಲ್ಲಿದ್ದಲನ್ನು ವಿತರಿಸಲು ರಾಜ್ಯಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ಕಲ್ಲಿದ್ದಲು ಹಂಚಿಕೆ ಮಾಡುವಂತೆ ಕಲ್ಲಿದ್ದಲು ಸಚಿವಾಲಯವು ಈಗಾಗಲೇ ಕೋಲ್ ಇಂಡಿಯಾ ಮತ್ತು ಸಿಂಗರೇನಿ ಕೋಲಿಯರೀಸ್‌ ಗೆ ಆದೇಶ ನೀಡಿದೆ.

• ಗೃಹಬಳಕೆ ಮತ್ತು ವಾಣಿಜ್ಯ ಗ್ರಾಹಕರಿಗೆ ಪಿ ಎನ್‌ ಜಿ ಸಂಪರ್ಕಗಳನ್ನು ಸುಗಮಗೊಳಿಸಲು ರಾಜ್ಯಗಳಿಗೆ ಸಲಹೆ ನೀಡಲಾಗಿದೆ.

ಸಾರ್ವಜನಿಕ ಸಲಹೆ

• ನಾಗರಿಕರು ಅಧಿಕೃತ ಮೂಲಗಳನ್ನು ಅವಲಂಬಿಸಬೇಕು ಮತ್ತು ವದಂತಿಗಳನ್ನು ನಂಬಬಾರದು ಎಂದು ಸೂಚಿಸಲಾಗಿದೆ.

• ಗ್ರಾಹಕರು ಆತಂಕದಿಂದ ಸಿಲಿಂಡರ್ ಕಾಯ್ದಿರಿಸುವುದನ್ನು (panic bookings) ತಪ್ಪಿಸಬೇಕು, ಡಿಜಿಟಲ್ ಬುಕಿಂಗ್ ವೇದಿಕೆಗಳನ್ನು ಬಳಸಬೇಕು ಮತ್ತು ಎಲ್‌ ಪಿ ಜಿ ವಿತರಕರ ಕಚೇರಿಗಳಿಗೆ ಭೇಟಿ ನೀಡುವುದನ್ನು ತಡೆಯಬೇಕು ಎಂದು ವಿನಂತಿಸಲಾಗಿದೆ.

• ಪಿ ಎನ್‌ ಜಿ ಮತ್ತು ಎಲೆಕ್ಟ್ರಿಕ್ ಅಥವಾ ಇಂಡಕ್ಷನ್ ಕುಕ್‌ ಟಾಪ್‌ ಗಳಂತಹ ಪರ್ಯಾಯ ಇಂಧನಗಳನ್ನು ಬಳಸಲು ಮತ್ತು ಇಂಧನವನ್ನು ಉಳಿಸಲು ನಾಗರಿಕರನ್ನು ಪ್ರೋತ್ಸಾಹಿಸಲಾಗಿದೆ.

ಕಡಲ ಸುರಕ್ಷತೆ ಮತ್ತು ಹಡಗು ಕಾರ್ಯಾಚರಣೆಗಳು

ಪರ್ಷಿಯನ್ ಕೊಲ್ಲಿಯ ಪ್ರಸ್ತುತ ಕಡಲ ಪರಿಸ್ಥಿತಿಯ ಕುರಿತು ಬಂದರುಗಳು, ಹಡಗು ಮತ್ತು ಜಲಮಾರ್ಗಗಳ ಸಚಿವಾಲಯವು ಅಪ್‌ಡೇಟ್ ಹಂಚಿಕೊಂಡಿದೆ ಹಾಗೂ ಭಾರತೀಯ ಹಡಗುಗಳು ಮತ್ತು ಸಿಬ್ಬಂದಿಯ ಸುರಕ್ಷತೆ ಮತ್ತು ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ಕೈಗೊಳ್ಳಲಾಗುತ್ತಿರುವ ಕ್ರಮಗಳ ಬಗ್ಗೆ ಮಾಹಿತಿ ನೀಡಿದೆ. ಸಚಿವಾಲಯವು ಈ ಕೆಳಗಿನಂತೆ ತಿಳಿಸಿದೆ:

• ಈ ಪ್ರದೇಶದಲ್ಲಿರುವ ಎಲ್ಲಾ ಭಾರತೀಯ ನಾವಿಕರು ಸುರಕ್ಷಿತವಾಗಿದ್ದಾರೆ ಮತ್ತು ಕಳೆದ 24 ಗಂಟೆಗಳಲ್ಲಿ ಭಾರತೀಯ ಧ್ವಜ ಹೊಂದಿರುವ ಹಡಗುಗಳಿಗೆ ಸಂಬಂಧಿಸಿದ ಯಾವುದೇ ಅಹಿತಕರ ಘಟನೆಗಳು ವರದಿಯಾಗಿಲ್ಲ.

• ಕಳೆದ 48 ಗಂಟೆಗಳಲ್ಲಿ ಹಡಗುಗಳ ನಿಯೋಜನೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ; ಪ್ರಸ್ತುತ ಪಶ್ಚಿಮ ಪರ್ಷಿಯನ್ ಕೊಲ್ಲಿ ಪ್ರದೇಶದಲ್ಲಿ ಭಾರತೀಯ ಧ್ವಜದ 22 ಹಡಗುಗಳು ಮತ್ತು ಸುಮಾರು 600 ಭಾರತೀಯ ನಾವಿಕರು ಇದ್ದಾರೆ. 11 ನಾವಿಕರು ತಮ್ಮ ಸೇವೆಯಿಂದ ಬಿಡುಗಡೆ ಹೊಂದಿದ್ದು (signed off), ಪ್ರಮಾಣಿತ ಕಾರ್ಯವಿಧಾನಗಳ ಪ್ರಕಾರ ಅವರನ್ನು ಸ್ವದೇಶಕ್ಕೆ ಮರಳಿ ಕರೆತರಲಾಗುತ್ತಿದೆ.

• ಹಡಗು ಮಾಲೀಕರು, ಆರ್‌ ಪಿ ಎಸ್‌ ಎಲ್ (RPSL) ಏಜೆನ್ಸಿಗಳು ಮತ್ತು ಭಾರತೀಯ ಮಿಷನ್‌ ಗಳ ಸಮನ್ವಯದೊಂದಿಗೆ ಹಡಗು ನಿರ್ದೇಶನಾಲಯವು (DG Shipping) ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ.

• ಡಿಜಿ ಶಿಪ್ಪಿಂಗ್ ನಿಯಂತ್ರಣ ಕೊಠಡಿಯು 24x7 ಕಾರ್ಯನಿರ್ವಹಿಸುತ್ತಿದ್ದು, ಸಕ್ರಿಯಗೊಂಡಾಗಿನಿಂದ ಇದುವರೆಗೆ 3,730 ಕರೆಗಳು ಮತ್ತು 7,058 ಇಮೇಲ್‌ ಗಳನ್ನು ನಿರ್ವಹಿಸಿದೆ. ಇದರಲ್ಲಿ ಕಳೆದ 24 ಗಂಟೆಗಳಲ್ಲಿ 60 ಕರೆಗಳು ಮತ್ತು 129 ಇಮೇಲ್‌ ಗಳು ಹಾಗೂ ಕಳೆದ 48 ಗಂಟೆಗಳಲ್ಲಿ 180 ಕರೆಗಳು ಮತ್ತು 310 ಇಮೇಲ್‌ ಗಳು ಸೇರಿವೆ.

• ಡಿಜಿ ಶಿಪ್ಪಿಂಗ್ ಇದುವರೆಗೆ 547 ಕ್ಕೂ ಹೆಚ್ಚು ಭಾರತೀಯ ನಾವಿಕರನ್ನು ಸುರಕ್ಷಿತವಾಗಿ ಸ್ವದೇಶಕ್ಕೆ ಮರಳಿ ಕರೆತರಲು ಅನುವು ಮಾಡಿಕೊಟ್ಟಿದೆ; ಇದರಲ್ಲಿ ಕಳೆದ 24 ಗಂಟೆಗಳಲ್ಲಿ 13 ಮತ್ತು ಕಳೆದ 48 ಗಂಟೆಗಳಲ್ಲಿ 34 ನಾವಿಕರು ಸೇರಿದ್ದಾರೆ.

• ಗುಜರಾತ್, ಮಹಾರಾಷ್ಟ್ರ, ಗೋವಾ, ಕೇರಳ, ಆಂಧ್ರಪ್ರದೇಶ ಮತ್ತು ಪುದುಚೇರಿ ಸೇರಿದಂತೆ ರಾಜ್ಯ ಕಡಲ ಮಂಡಳಿಗಳು ದೃಢಪಡಿಸಿದಂತೆ, ಭಾರತದ ಕಡಲ ವಲಯವು ಸುಗಮವಾಗಿ ಕಾರ್ಯನಿರ್ವಹಿಸುತ್ತಿದೆ ಮತ್ತು ಯಾವುದೇ ಬಂದರುಗಳಲ್ಲಿ ದಟ್ಟಣೆ ವರದಿಯಾಗಿಲ್ಲ.

• ಬಂದರುಗಳು ಹಡಗುಗಳ ಸಂಚಾರ ಮತ್ತು ಸರಕು ಕಾರ್ಯಾಚರಣೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿವೆ. ಜವಾಹರಲಾಲ್ ನೆಹರು ಪೋರ್ಟ್ ಅಥಾರಿಟಿ (JNPA), ವಿ.ಒ. ಚಿದಂಬರನಾರ್ ಪೋರ್ಟ್ ಅಥಾರಿಟಿ (VOCPA), ವಿಶಾಖಪಟ್ಟಣಂ ಬಂದರು, ಮುದ್ರಾ, ದೀನ್ ದಯಾಳ್ ಪೋರ್ಟ್ ಅಥಾರಿಟಿ ಮತ್ತು ನವ ಮಂಗಳೂರು ಪೋರ್ಟ್ ಅಥಾರಿಟಿ (NMPA) ನಂತಹ ಪ್ರಮುಖ ಬಂದರುಗಳಲ್ಲಿ ಈಗಾಗಲೇ ಹೆಚ್ಚುವರಿ ಸಾಮರ್ಥ್ಯವನ್ನು ಸೃಷ್ಟಿಸಲಾಗಿದೆ.

• ಸರಕು ಸಾಗಣೆಯನ್ನು ನಿರ್ವಹಿಸಲು ಮತ್ತು ದಟ್ಟಣೆಯನ್ನು ಕಡಿಮೆ ಮಾಡಲು ಹೆಚ್ಚುವರಿ ಸಂಗ್ರಹಣೆ ಮತ್ತು ನಿರ್ವಹಣಾ ಸಾಮರ್ಥ್ಯವನ್ನು ಸೃಷ್ಟಿಸಲಾಗಿದೆ; ಇದರಲ್ಲಿ ಚೆನ್ನೈ ಪೋರ್ಟ್ ಅಥಾರಿಟಿಯಲ್ಲಿ ಸುಮಾರು 40,000 ಚದರ ಮೀಟರ್ ಬ್ಯಾಕಪ್ ಸ್ಟೋರೇಜ್ ಮತ್ತು ಕೊಚ್ಚಿನ್ ಪೋರ್ಟ್ ಅಥಾರಿಟಿಯಲ್ಲಿ ಸುಮಾರು 2,500 ಟಿಇಯು (TEUs) ಸಾಮರ್ಥ್ಯ ಸೇರಿದೆ.

o ಪಶ್ಚಿಮ ಏಷ್ಯಾದಲ್ಲಿ ಬದಲಾಗುತ್ತಿರುವ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಬಂದರುಗಳು, ಹಡಗು ಮತ್ತು ಜಲಮಾರ್ಗಗಳ ಸಚಿವಾಲಯವು ಹಡಗುಗಳ ಸಂಚಾರ, ಬಂದರು ಕಾರ್ಯಾಚರಣೆಗಳು, ನಾವಿಕರ ಸುರಕ್ಷತೆ ಮತ್ತು ಕಡಲ ವ್ಯಾಪಾರದ ನಿರಂತರತೆಯನ್ನು ಮೇಲ್ವಿಚಾರಣೆ ಮಾಡುವುದನ್ನು ಮುಂದುವರಿಸಿದೆ.

ಈ ಪ್ರದೇಶದಲ್ಲಿರುವ ಭಾರತೀಯ ಪ್ರಜೆಗಳ ಸುರಕ್ಷತೆ

ಭಾರತೀಯ ಮಿಷನ್‌ ಗಳ (ರಾಯಭಾರ ಕಚೇರಿಗಳು) ಮೂಲಕ ನೀಡಲಾಗುತ್ತಿರುವ ನಿರಂತರ ನೆರವು ಮತ್ತು ಸಂಪರ್ಕ ಕಾರ್ಯಕ್ರಮಗಳು ಸೇರಿದಂತೆ ಈ ಪ್ರದೇಶದ ಇತ್ತೀಚಿನ ಬೆಳವಣಿಗೆಗಳ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ಹಂಚಿಕೊಳ್ಳಲಾಯಿತು. ತಿಳಿಸಲಾದ ಪ್ರಮುಖ ಅಂಶಗಳು ಹೀಗಿವೆ:

• ಪಶ್ಚಿಮ ಏಷ್ಯಾ ಪ್ರದೇಶದಲ್ಲಿ ನಡೆಯುತ್ತಿರುವ ಸಂಘರ್ಷದ ಕುರಿತು ಪ್ರಧಾನಮಂತ್ರಿಯವರು ವಿಶ್ವದ ನಾಯಕರೊಂದಿಗೆ ಮಾತನಾಡುತ್ತಿದ್ದಾರೆ.

• ಶನಿವಾರದಂದು, ಅವರು ಇರಾನ್ ಅಧ್ಯಕ್ಷರಾದ ಗೌರವಾನ್ವಿತ ಡಾ. ಮಸೌದ್ ಪೆಜೆಶ್ಕಿಯಾನ್ ಅವರೊಂದಿಗೆ ಮಾತನಾಡಿ ಈದ್ ಮತ್ತು ನೌರೂಜ್ ಶುಭಾಶಯಗಳನ್ನು ತಿಳಿಸಿದರು. ಈ ಹಬ್ಬದ ಸೀಸನ್ ಪಶ್ಚಿಮ ಏಷ್ಯಾಕ್ಕೆ ಶಾಂತಿ, ಸ್ಥಿರತೆ ಮತ್ತು ಸಮೃದ್ಧಿಯನ್ನು ತರಲಿ ಎಂದು ಅವರು ಆಶಿಸಿದರು.

• ಪ್ರಾದೇಶಿಕ ಸ್ಥಿರತೆಗೆ ಧಕ್ಕೆ ತರುವ ಮತ್ತು ಜಾಗತಿಕ ಪೂರೈಕೆ ಸರಪಳಿಗಳನ್ನು ಅಸ್ತವ್ಯಸ್ತಗೊಳಿಸುವ ಈ ಪ್ರದೇಶದ ನಿರ್ಣಾಯಕ ಮೂಲಸೌಕರ್ಯಗಳ ಮೇಲಿನ ದಾಳಿಗಳನ್ನು ಪ್ರಧಾನಮಂತ್ರಿಯವರು ಖಂಡಿಸಿದರು.

• ನೌಕಾಯಾನದ ಸ್ವಾತಂತ್ರ್ಯವನ್ನು ರಕ್ಷಿಸುವ ಮತ್ತು ಹಡಗು ಸಂಚಾರ ಮಾರ್ಗಗಳು ಮುಕ್ತವಾಗಿ ಹಾಗೂ ಸುರಕ್ಷಿತವಾಗಿರುವುದನ್ನು ಖಚಿತಪಡಿಸಿಕೊಳ್ಳುವ ಮಹತ್ವವನ್ನು ಪ್ರಧಾನಮಂತ್ರಿ ಪುನರುಚ್ಚರಿಸಿದರು.

• ಇರಾನ್‌ ನಲ್ಲಿರುವ ಭಾರತೀಯ ಪ್ರಜೆಗಳ ಸುರಕ್ಷತೆ ಮತ್ತು ಭದ್ರತೆಗಾಗಿ ಇರಾನ್ ನೀಡುತ್ತಿರುವ ನಿರಂತರ ಬೆಂಬಲವನ್ನು ಅವರು ಶ್ಲಾಘಿಸಿದರು.

• ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಪಶ್ಚಿಮ ಏಷ್ಯಾ ಮತ್ತು ಕೊಲ್ಲಿ ಪ್ರದೇಶದ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ; ಭಾರತೀಯ ಸಮುದಾಯದ ಸುರಕ್ಷತೆ, ಭದ್ರತೆ ಮತ್ತು ಕಲ್ಯಾಣಕ್ಕೆ ಅತ್ಯಂತ ಹೆಚ್ಚಿನ ಆದ್ಯತೆ ನೀಡಲಾಗಿದೆ.

• ವಿದೇಶಾಂಗ ವ್ಯವಹಾರಗಳ ಸಚಿವಾಲಯದ (MEA) ಮೀಸಲಾದ ನಿಯಂತ್ರಣ ಕೊಠಡಿಯು ಕಾರ್ಯನಿರ್ವಹಿಸುತ್ತಿದ್ದು, ರಾಜ್ಯ ಸರ್ಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳೊಂದಿಗೆ ನಿರಂತರ ಸಮನ್ವಯ ಸಾಧಿಸುತ್ತಿದೆ.

• ಈ ಪ್ರದೇಶದಾದ್ಯಂತ ಇರುವ ಭಾರತೀಯ ಮಿಷನ್‌ಗಳು ಮತ್ತು ಕಚೇರಿಗಳು ದಿನದ 24 ಗಂಟೆಯೂ ಕಾರ್ಯನಿರ್ವಹಿಸುತ್ತಿವೆ, ಸಹಾಯವಾಣಿಗಳನ್ನು ನಿರ್ವಹಿಸುತ್ತಿವೆ, ವಿವಿಧ ಭಾರತೀಯ ಸಮುದಾಯ ಸಂಸ್ಥೆಗಳೊಂದಿಗೆ ಸಂಪರ್ಕದಲ್ಲಿವೆ ಮತ್ತು ಕಾಲಕಾಲಕ್ಕೆ ಮಾರ್ಗಸೂಚಿಗಳನ್ನು (advisories) ಹೊರಡಿಸುತ್ತಿವೆ.

• ಮಿಷನ್‌ ಗಳು ಆತಿಥೇಯ ದೇಶಗಳ ಸರ್ಕಾರಗಳೊಂದಿಗೆ ನಿಕಟ ಸಂಪರ್ಕದಲ್ಲಿದ್ದು, ನಾವಿಕರು, ವಿದ್ಯಾರ್ಥಿಗಳು, ಸಂಕಷ್ಟದಲ್ಲಿರುವ ಭಾರತೀಯ ಪ್ರಜೆಗಳು ಮತ್ತು ಅಲ್ಪಾವಧಿಯ ಸಂದರ್ಶಕರಿಗೆ ವೀಸಾ ಸೌಲಭ್ಯ, ಕನ್ಸುಲರ್ ಸೇವೆಗಳು ಮತ್ತು ಲಾಜಿಸ್ಟಿಕ್ ಬೆಂಬಲದೊಂದಿಗೆ ಸಹಾಯ ಮಾಡುತ್ತಿವೆ.

• ಫೆಬ್ರವರಿ 28 ರಿಂದ, ಸುಮಾರು 3,75,000 ಪ್ರಯಾಣಿಕರು ಈ ಪ್ರದೇಶದಿಂದ ಭಾರತಕ್ಕೆ ಮರಳಿದ್ದಾರೆ ಮತ್ತು ಒಟ್ಟಾರೆ ವಿಮಾನ ಕಾರ್ಯಾಚರಣೆಗಳು ಸುಧಾರಿಸುತ್ತಿವೆ.

• ಯುಎಇ (UAE) ನಲ್ಲಿ, ಸೀಮಿತ ನಿಗದಿತವಲ್ಲದ (non-scheduled) ವಿಮಾನಗಳು ಮುಂದುವರಿದಿದ್ದು, ಇಂದು ಭಾರತಕ್ಕೆ ಸುಮಾರು 95 ವಿಮಾನಗಳನ್ನು ನಿರೀಕ್ಷಿಸಲಾಗಿದೆ.

• ಸೌದಿ ಅರೇಬಿಯಾ ಮತ್ತು ಓಮನ್‌ ನಿಂದ ಭಾರತಕ್ಕೆ ವಿಮಾನಗಳು ಕಾರ್ಯನಿರ್ವಹಿಸುತ್ತಿವೆ.

• ಕತಾರ್ ವೈಮಾನಿಕ ವಲಯವು ಭಾಗಶಃ ಮುಕ್ತವಾಗಿದ್ದು, ಕತಾರ್ ಏರ್ವೇಸ್ ಇಂದು ಭಾರತಕ್ಕೆ ಸುಮಾರು 8-10 ನಿಗದಿತವಲ್ಲದ ವಿಮಾನಗಳನ್ನು ನಿರ್ವಹಿಸುವ ನಿರೀಕ್ಷೆಯಿದೆ.

• ಕುವೈತ್ ಮತ್ತು ಬಹ್ರೇನ್ ವೈಮಾನಿಕ ವಲಯಗಳು ಮುಚ್ಚಲ್ಪಟ್ಟಿವೆ. ಕುವೈತ್‌ ನ ಜಜೀರಾ ಏರ್ವೇಸ್ ಸೌದಿ ಅರೇಬಿಯಾದ ಅಲ್ ಖೈಸೂಮಾ ವಿಮಾನ ನಿಲ್ದಾಣದಿಂದ (AQI) ಭಾರತದ ವಿವಿಧ ಸ್ಥಳಗಳಿಗೆ ವಿಮಾನಗಳನ್ನು ನಿರ್ವಹಿಸುತ್ತಿದೆ. ಬಹ್ರೇನ್‌ನ ಗಲ್ಫ್ ಏರ್ ಕೂಡ ಸೌದಿ ಅರೇಬಿಯಾದ ದಮ್ಮಾಮ್ ವಿಮಾನ ನಿಲ್ದಾಣದಿಂದ ಭಾರತಕ್ಕೆ ವಿಶೇಷ ನಿಗದಿತವಲ್ಲದ ವಾಣಿಜ್ಯ ವಿಮಾನಗಳನ್ನು ನಿರ್ವಹಿಸುತ್ತಿದೆ.

• ಕುವೈತ್, ಬಹ್ರೇನ್ ಮತ್ತು ಇರಾಕ್‌ ನಲ್ಲಿರುವ ಭಾರತೀಯ ಪ್ರಜೆಗಳ ಪ್ರಯಾಣವನ್ನು ಸೌದಿ ಅರೇಬಿಯಾದ ಮೂಲಕ ಸುಗಮಗೊಳಿಸಲಾಗುತ್ತಿದೆ.

• ಇರಾನ್‌ ನಲ್ಲಿರುವ ಭಾರತೀಯ ಪ್ರಜೆಗಳು ಅರ್ಮೇನಿಯಾ ಮತ್ತು ಅಜೆರ್ಬೈಜಾನ್ ಮೂಲಕ ಭಾರತಕ್ಕೆ ಪ್ರಯಾಣಿಸಲು ನೆರವು ನೀಡಲಾಗುತ್ತಿದ್ದು, ಇದುವರೆಗೆ 707 ವಿದ್ಯಾರ್ಥಿಗಳು ಮತ್ತು 324 ಭಾರತೀಯ ಪ್ರಜೆಗಳು ಸೇರಿದಂತೆ ಒಟ್ಟು 1,031 ಭಾರತೀಯರು ಗಡಿ ದಾಟಿದ್ದಾರೆ.

• ಟೆಹ್ರಾನ್, ಇಸ್ಫಹಾನ್ ಮತ್ತು ಶಿರಾಜ್‌ ನಲ್ಲಿರುವ ಭಾರತೀಯ ವಿದ್ಯಾರ್ಥಿಗಳನ್ನು ಇರಾನ್‌ನೊಳಗಿನ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ.

•   ಇಸ್ರೇಲ್‌ ನಲ್ಲಿರುವ ಭಾರತೀಯ ಪ್ರಜೆಗಳು ಜೋರ್ಡಾನ್ ಮೂಲಕ ಭಾರತಕ್ಕೆ ಪ್ರಯಾಣಿಸಲು ಅನುಕೂಲ ಮಾಡಿಕೊಡಲಾಗುತ್ತಿದೆ.


*****


(ಪ್ರಕಟಣೆ ಐ.ಡಿ.: 2244214) ವಿಸಿಟರ್ ಕೌಂಟರ್ : 7
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , Marathi , हिन्दी , Bengali , Gujarati , Odia , Telugu , Malayalam