ಕೃಷಿ ಸಚಿವಾಲಯ
ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿಯ 22 ನೇ ಕಂತನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನಾಳೆ ಬಿಡುಗಡೆ ಮಾಡಲಿದ್ದು, ಈ ಮೂಲಕ 9.32 ಕೋಟಿ ರೈತರಿಗೆ ₹18,640 ಕೋಟಿ ನೇರ ಪ್ರಯೋಜನವನ್ನು ಒದಗಿಸಲಿದ್ದಾರೆ
ಅಸ್ಸಾಂನ ಗುವಾಹಟಿಯಲ್ಲಿ ಆಯೋಜಿಸುವ ಕಾರ್ಯಕ್ರಮದಲ್ಲಿ ನೇರ ಪ್ರಯೋಜನ ವರ್ಗಾವಣೆಯ ಮೂಲಕ ರೈತರ ಖಾತೆಗಳಿಗೆ ಹಣ ತಲುಪಲಿದೆ
2.15 ಕೋಟಿಗೂ ಹೆಚ್ಚು ಮಹಿಳಾ ರೈತರು ತಮ್ಮ ಖಾತೆಗಳಲ್ಲಿ ಪ್ರಧಾನ ಮಂತ್ರಿ ಸಮ್ಮಾನ್ ನಿಧಿ ಮೊತ್ತವನ್ನು ಪಡೆಯಲಿದ್ದಾರೆ
ಆಹಾರ ಧಾನ್ಯ ಉತ್ಪಾದನೆಯಲ್ಲಿ ದಾಖಲೆಯ ಹೆಚ್ಚಳ, ಕೃಷಿ ಸಾಲ ₹28.69 ಲಕ್ಷ ಕೋಟಿ ತಲುಪಿದೆ, ರೈತರಿಗಾಗಿ ಎಐ ಆಧಾರಿತ 'ಭಾರತ ವಿಸ್ತಾರ' ವೇದಿಕೆಯನ್ನು ಪ್ರಾರಂಭಿಸಲಾಗಿದೆ: ಕೇಂದ್ರ ಕೃಷಿ ಸಚಿವರಾದ ಶ್ರೀ ಶಿವರಾಜ್ ಸಿಂಗ್ ಚೌಹಾಣ್
ಭಾರತವು ಧಾನ್ಯ ಉತ್ಪಾದನೆಯಲ್ಲಿ ಜಾಗತಿಕ ಶಕ್ತಿಯಾಗಿದೆ; ಭಾರತದ ಆಹಾರ ಧಾನ್ಯ ಉತ್ಪಾದನೆ 357 ಮಿಲಿಯನ್ ಟನ್ ತಲುಪಿದೆ: ಶ್ರೀ ಶಿವರಾಜ್ ಸಿಂಗ್ ಚೌಹಾಣ್
ಪ್ರಕಟಣಾ ದಿನಾಂಕ:
12 MAR 2026 3:50PM by PIB Bengaluru
ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಮತ್ತು ಗ್ರಾಮೀಣಾಭಿವೃದ್ಧಿ ಸಚಿವರಾದ ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಅವರು ಇಂದು ತಮ್ಮ ನಿವಾಸದಲ್ಲಿ ಪತ್ರಕರ್ತರನ್ನುದ್ದೇಶಿಸಿ ಮಾತನಾಡಿದರು. ಕೃಷಿ ವಲಯ ಮತ್ತು ರೈತರ ಕಲ್ಯಾಣದಲ್ಲಿ ಭಾರತ ಸರ್ಕಾರವು ಅಭೂತಪೂರ್ವ ಪ್ರಗತಿಯನ್ನು ಸಾಧಿಸುವತ್ತ ಒಂದು ಪ್ರಮುಖ ಹೆಜ್ಜೆಯಾಗಿ, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನಾಳೆ ಮಾರ್ಚ್ 13 ರಂದು ಅಸ್ಸಾಂನ ಗುವಾಹಟಿಯಲ್ಲಿ ಆಯೋಜಿಸಲಿರುವ ಕಾರ್ಯಕ್ರಮದಲ್ಲಿ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (ಪಿಎಂ-ಕಿಸಾನ್) ಯೋಜನೆಯ 22ನೇ ಕಂತಿನ ಅಂಗವಾಗಿ ದೇಶದ 9.32 ಕೋಟಿ ರೈತರ ಖಾತೆಗಳಿಗೆ ₹18,640 ಕೋಟಿಗಳನ್ನು ನೇರವಾಗಿ ವರ್ಗಾಯಿಸಲಿದ್ದಾರೆ ಎಂದು ಅವರು ಹೇಳಿದರು.
ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿಯಲ್ಲಿ, ಇಲ್ಲಿಯವರೆಗೆ ₹4,09,000 ಕೋಟಿಗೂ ಹೆಚ್ಚು ಹಣವನ್ನು ಡಿಬಿಟಿ ಮೂಲಕ ವಿತರಿಸಲಾಗಿದೆ ಎಂದು ಕೇಂದ್ರ ಸಚಿವರಾದ ಶ್ರೀ ಶಿವರಾಜ್ ಸಿಂಗ್ ಅವರು ಮಾಹಿತಿ ನೀಡಿದರು. ವಿಶೇಷವಾಗಿ, 2.15 ಕೋಟಿಗೂ ಹೆಚ್ಚು ಮಹಿಳಾ ರೈತರನ್ನು ಸಹ ಇದರಲ್ಲಿ ಸೇರಿಸಲಾಗಿದೆ. ಈ ನೇರ ಆರ್ಥಿಕ ನೆರವು ಕೃಷಿ ಹೂಡಿಕೆಯಲ್ಲಿ ಹೆಚ್ಚಳಕ್ಕೆ ಕಾರಣವಾಗಿದೆ ಮತ್ತು ರೈತರು ಸಾಲದಾತರ ಮೇಲೆ ಅವಲಂಬನೆಯನ್ನು ಕಡಿಮೆ ಮಾಡಿದೆ, ಇದರಿಂದಾಗಿ ಗ್ರಾಮೀಣ ಆರ್ಥಿಕತೆಯನ್ನು ಬಲಪಡಿಸಲಾಗಿದೆ ಎಂದು ಅಧ್ಯಯನಗಳು ತೋರಿಸುತ್ತವೆ ಎಂದು ಅವರು ಹೇಳಿದರು. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ನೇತೃತ್ವದಲ್ಲಿ, ಕೃಷಿ ಅಭಿವೃದ್ಧಿ ಮತ್ತು ರೈತರ ಕಲ್ಯಾಣದ ಮಹಾ 'ಯಜ್ಞ'ವು ನಿರಂತರವಾಗಿ ಮುಂದುವರಿಯುತ್ತದೆ ಎಂದು ಶ್ರೀ ಶಿವರಾಜ್ ಸಿಂಗ್ ಅವರು ಹೇಳಿದರು.
ಕಳೆದ ಒಂದು ದಶಕದಲ್ಲಿ ಕೃಷಿ ಕ್ಷೇತ್ರದಲ್ಲಿನ ಸಾಧನೆಗಳು
ಪತ್ರಕರ್ತರನ್ನು ಉದ್ದೇಶಿಸಿ ಮಾತನಾಡಿದ ಕೇಂದ್ರ ಸಚಿವರಾದ ಶ್ರೀ ಶಿವರಾಜ್ ಸಿಂಗ್ ಅವರು, ಕಳೆದ 12 ವರ್ಷಗಳಲ್ಲಿ ಭಾರತ ಸರ್ಕಾರವು ಕೃಷಿ ಕ್ಷೇತ್ರದಲ್ಲಿ ಸಾಧಿಸಿರುವ ಪ್ರಗತಿಯ ಬಗ್ಗೆ ಬೆಳಕು ಚೆಲ್ಲಿದರು ಮತ್ತು ಧಾನ್ಯಗಳ ಕೊರತೆಯನ್ನು ಎದುರಿಸುತ್ತಿದ್ದ ದೇಶದಿಂದ ಭಾರತವು ಈಗ ಜಾಗತಿಕ ಶಕ್ತಿಯಾಗಿ ಹೊರಹೊಮ್ಮಿದೆ ಮತ್ತು ಸರ್ಕಾರದ ನೀತಿಗಳು ಮತ್ತು ರೈತರ ಕಠಿಣ ಪರಿಶ್ರಮದಿಂದಾಗಿ ಇದು ಸಾಕಾರಗೊಂಡಿದೆ ಎಂದು ಅವರು ಹೇಳಿದರು. 150 ಮಿಲಿಯನ್ ಟನ್ ಅಕ್ಕಿ ಉತ್ಪಾದನೆಯೊಂದಿಗೆ ಭಾರತವು ಈಗ ಚೀನಾವನ್ನು ಮೀರಿಸಿ ಈ ವಿಷಯದಲ್ಲಿ ವಿಶ್ವದಲ್ಲಿಯೇ ಪ್ರಥಮ ಸ್ಥಾನ ಪಡೆದಿದೆ ಎಂದು ಅವರು ಮಾಹಿತಿ ನೀಡಿದರು.
2014 ರಲ್ಲಿ ಒಟ್ಟು 252 ಮಿಲಿಯನ್ ಟನ್ ಆಹಾರ ಧಾನ್ಯ ಉತ್ಪಾದನೆಗೆ ಹೋಲಿಸಿದರೆ, ದೇಶದ ಒಟ್ಟು ಆಹಾರ ಧಾನ್ಯ ಉತ್ಪಾದನೆಯು ಈಗ 357 ಮಿಲಿಯನ್ ಟನ್ ಗಳಿಗೆ ಹೆಚ್ಚಾಗಿದೆ ಎಂದು ಕೇಂದ್ರ ಕೃಷಿ ಸಚಿವರು ಹೇಳಿದ್ದಾರೆ. ತೋಟಗಾರಿಕೆಯಲ್ಲಿಯೂ ಗಮನಾರ್ಹ ಏರಿಕೆ ಕಂಡುಬಂದಿದೆ. ಹಣ್ಣು ಮತ್ತು ತರಕಾರಿ ಉತ್ಪಾದನೆಯು 277 ಮಿಲಿಯನ್ ಟನ್ ಗಳಿಂದ 369 ಮಿಲಿಯನ್ ಟನ್ ಗಳಿಗೆ ಏರಿದೆ. ಇಂದು ಭಾರತವು ದ್ವಿದಳ ಧಾನ್ಯಗಳ ಉತ್ಪಾದನೆಯಲ್ಲಿ ಸ್ವಾವಲಂಬನೆಯತ್ತ ಸಾಗುತ್ತಿದೆ ಎಂದು ಅವರು ಹೇಳಿದರು. ಇಂದು, ಭಾರತವು ದ್ವಿದಳ ಧಾನ್ಯಗಳ ಅತಿದೊಡ್ಡ ಉತ್ಪಾದಕ ಮತ್ತು ಬಳಕೆದಾರ ರಾಷ್ಟ್ರವಾಗಿದೆ. ಸರ್ಕಾರವು ತೊಗರಿ, ಮಸೂರ್ ಮತ್ತು ಉದ್ದಿನ ಬೇಳೆಕಾಳುಗಳ ದಾಖಲೆಯ ಖರೀದಿ-ಸಂಗ್ರಹಣೆಯನ್ನು ಮಾಡುತ್ತಿದೆ ಎಂದು ಅವರು ಮಾಹಿತಿ ನೀಡಿದರು.
ರೈತರಿಗೆ ಸಹಾಯ ಮಾಡಲು, ಕೇಂದ್ರ ಸರ್ಕಾರವು 'ಭಾರತ ವಿಸ್ತಾರʼ ಎಂಬ ಎಐ ಡಿಜಿಟಲ್ ವೇದಿಕೆಯ ಮೊದಲ ಹಂತವನ್ನು ಪ್ರಾರಂಭಿಸಿದೆ ಎಂದು ಕೇಂದ್ರ ಸಚಿವರಾದ ಶ್ರೀ ಶಿವರಾಜ್ ಸಿಂಗ್ ಅವರು ಹೇಳಿದರು. ಇದರ ಮೂಲಕ, ರೈತರು ತಮ್ಮ ಸ್ಥಳೀಯ ಭಾಷೆಯಲ್ಲಿ ಕೇವಲ ಒಂದು ಫೋನ್ ಕರೆಯಲ್ಲಿ ಕೃಷಿಗೆ ಸಂಬಂಧಿಸಿದ ಎಲ್ಲಾ ಮಾಹಿತಿಯನ್ನು ಪಡೆಯಲು ಸಾಧ್ಯವಾಗುತ್ತದೆ. ಕಳೆದ ವರ್ಷಗಳಲ್ಲಿ, ನಾವು ಕನಿಷ್ಠ ಬೆಂಬಲ ಬೆಲೆ (ಎಂ.ಎಸ್.ಪಿ)ಯಲ್ಲಿ ಗೋಧಿ, ಭತ್ತ, ಹತ್ತಿ, ಎಣ್ಣೆ ಬೀಜಗಳು ಮತ್ತು ಬೇಳೆಕಾಳುಗಳ ದಾಖಲೆಯ ಗಾತ್ರದಲ್ಲಿ ಖರೀದಿಗಳನ್ನು ಮಾಡಿದ್ದೇವೆ ಮತ್ತು ರೈತರು ಅಗ್ಗದ ದರದಲ್ಲಿ ರಸಗೊಬ್ಬರಗಳನ್ನು ಖರೀದಿಸುವುದನ್ನು ಖಚಿತಪಡಿಸಿಕೊಂಡಿದ್ದೇವೆ ಎಂದು ಹೇಳಿದರು.
ಆರ್ಥಿಕ ಭದ್ರತಾ ರಂಗದಲ್ಲಿಯೂ ಪ್ರಮುಖ ಸುಧಾರಣೆಗಳು
2014ರಲ್ಲಿ ₹8,45,000 ಕೋಟಿ ಇದ್ದ ಕೃಷಿ ಸಾಲವು ಈಗ ₹28,69,000 ಕೋಟಿಗೆ ಏರಿದೆ ಎಂದು ಕೇಂದ್ರ ಕೃಷಿ ಸಚಿವರು ಹೇಳಿದ್ದಾರೆ. ಬೆಳೆ ವಿಮಾ ಯೋಜನೆಯಡಿ, ಸುಮಾರು ₹2 ಲಕ್ಷ ಕೋಟಿ ಮೊತ್ತದ ಕ್ಲೇಮ್ ಗಳನ್ನು ರೈತರ ಖಾತೆಗಳಿಗೆ ಜಮಾ ಮಾಡಲಾಗಿದೆ. ಇದರೊಂದಿಗೆ, ಬಜೆಟ್ ನಲ್ಲಿ ಭಾರಿ ಹೆಚ್ಚಳವಾಗಿದೆ. ಯು.ಪಿ.ಎ ಸರ್ಕಾರದ ಅವಧಿಯಲ್ಲಿ ₹27,000 ಕೋಟಿಯಷ್ಟಿದ್ದ ಕೃಷಿ ಬಜೆಟ್ ಈಗ ವಾರ್ಷಿಕ ₹1.40 ಲಕ್ಷ ಕೋಟಿಗೂ ಹೆಚ್ಚಾಗಿದೆ ಎಂದು ಕೇಂದ್ರ ಸಚಿವರಾದ ಶ್ರೀ ಶಿವರಾಜ್ ಸಿಂಗ್ ಅವರು ಹೇಳಿದರು.
*****
(ಪ್ರಕಟಣೆ ಐ.ಡಿ.: 2238929)
ವಿಸಿಟರ್ ಕೌಂಟರ್ : 8