ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯ
azadi ka amrit mahotsav

ಅಂತಾರಾಷ್ಟ್ರೀಯ ಸೌರ ಒಕ್ಕೂಟ (ಐ ಎಸ್‌ ಎ) ವು ಜಾಗತಿಕ ಸಹಭಾಗಿತ್ವದ ಶಕ್ತಿಯನ್ನು ಪ್ರತಿಬಿಂಬಿಸುತ್ತದೆ: ಐ ಎಸ್‌ ಎ ಸಂಸ್ಥಾಪನಾ ದಿನದಂದು ಕೇಂದ್ರ ಸಚಿವರಾದ ಶ್ರೀ ಪ್ರಲ್ಹಾದ್ ಜೋಶಿ


ಸೌರಶಕ್ತಿ  ನಿಯೋಜನೆಯನ್ನು ವೇಗಗೊಳಿಸಲು ಕೆಲಸ ಮಾಡುತ್ತಿರುವ 125 ಸದಸ್ಯ ಮತ್ತು ಸಹಿ ಮಾಡಿದ ದೇಶಗಳೊಂದಿಗೆ ಐ ಎಸ್‌ ಎ ಜಾಗತಿಕ ವೇದಿಕೆಯಾಗಿ ಹೊರಹೊಮ್ಮಿದೆ

ಐ ಎಸ್‌ ಎ ಜಾಗತಿಕ ಇಂಧನ ಸಹಕಾರದಲ್ಲಿ 'ವಸುಧೈವ ಕುಟುಂಬಕಂ' ಮನೋಭಾವವನ್ನು ಪ್ರತಿಬಿಂಬಿಸುತ್ತದೆ

ಭಾರತದ ಸೌರ ಪ್ರಯಾಣವು ನಾವೀನ್ಯತೆ ಮತ್ತು ನೀತಿ ನಾಯಕತ್ವದ ಶಕ್ತಿಯನ್ನು ಪ್ರತಿಬಿಂಬಿಸುತ್ತದೆ: ಶ್ರೀ ಪ್ರಲ್ಹಾದ್ ಜೋಶಿ

ಪ್ರಕಟಣಾ ದಿನಾಂಕ: 12 MAR 2026 11:28AM by PIB Bengaluru

ಕೇಂದ್ರ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವರಾದ ಶ್ರೀ ಪ್ರಲ್ಹಾದ್ ಜೋಶಿ ಅವರು, ಸೌರಶಕ್ತಿಯ ಕುರಿತು ಬೆಳೆಯುತ್ತಿರುವ ಜಾಗತಿಕ ಆವೇಗ ಮತ್ತು ಪ್ರಪಂಚದಾದ್ಯಂತ ಶುದ್ಧ ಇಂಧನ ಪರಿವರ್ತನೆಯನ್ನು ವೇಗಗೊಳಿಸುವಲ್ಲಿ ಅಂತಾರಾಷ್ಟ್ರೀಯ ಸೌರ ಒಕ್ಕೂಟದ (ಐ ಎಸ್‌ ಎ) ಪಾತ್ರವನ್ನು ಒತ್ತಿ ಹೇಳಿದರು. ಮಾರ್ಚ್ 11 ರಂದು ನವದೆಹಲಿಯಲ್ಲಿ ನಡೆದ ಐ ಎಸ್‌ ಎ ಸಂಸ್ಥಾಪನಾ ದಿನದ ಆಚರಣೆಯನ್ನು ಉದ್ದೇಶಿಸಿ ಮಾತನಾಡಿದ ಸಚಿವರು, ಸೌರಶಕ್ತಿಯ ಮೂಲಕ ಸುಸ್ಥಿರ ಅಭಿವೃದ್ಧಿಯನ್ನು ಉತ್ತೇಜಿಸುವಲ್ಲಿ ಸಮಾನ ದೃಷ್ಟಿಕೋನ ಮತ್ತು ಜಾಗತಿಕ ಸಹಭಾಗಿತ್ವದ ಶಕ್ತಿಯನ್ನು ಈ ಒಕ್ಕೂಟವು ಪ್ರತಿಬಿಂಬಿಸುತ್ತದೆ ಎಂದು ಹೇಳಿದರು.

120ಕ್ಕೂ ಹೆಚ್ಚು ದೇಶಗಳ ಒಕ್ಕೂಟವಾಗಿ ಎಸ್ ವಿಸ್ತರಣೆ

ಸುಮಾರು ಒಂದು ದಶಕದ ಹಿಂದೆ, ಜಾಗತಿಕ ಅಭಿವೃದ್ಧಿಯ ಕೇಂದ್ರಬಿಂದುವಾಗಿ ಸೌರಶಕ್ತಿಯನ್ನು ಇರಿಸುವ ದಿಟ್ಟ ದೃಷ್ಟಿಕೋನದೊಂದಿಗೆ ಭಾರತ ಮತ್ತು ಫ್ರಾನ್ಸ್ ಒಂದಾದವು ಎಂದು ಶ್ರೀ ಜೋಶಿ ಸ್ಮರಿಸಿದರು. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ದೂರದರ್ಶಿ ನಾಯಕತ್ವವು ಈ ಆಲೋಚನೆಯನ್ನು ಜಾಗತಿಕ ಆಂದೋಲನವನ್ನಾಗಿ ಪರಿವರ್ತಿಸಲು ಸಹಾಯ ಮಾಡಿತು ಎಂದು ಅವರು ಹೇಳಿದರು.

ಐ ಎಸ್‌ ಎ ತನ್ನ ಕ್ರಮಗಳ ಮೂಲಕ ಬೀರಿದ ಪ್ರಭಾವವನ್ನು ಉಲ್ಲೇಖಿಸಿದ ಶ್ರೀ ಜೋಶಿ, “ಕಳೆದ ಒಂದು ದಶಕದಲ್ಲಿ, ಅಂತಾರಾಷ್ಟ್ರೀಯ ಸೌರ ಒಕ್ಕೂಟವು ಸೌರಶಕ್ತಿಯ ಭರವಸೆಯನ್ನು ಪ್ರಪಂಚದಾದ್ಯಂತ ನೈಜ ಮತ್ತು ಜೀವನವನ್ನು ಬದಲಾಯಿಸುವ ಪ್ರಭಾವವಾಗಿ ಪರಿವರ್ತಿಸಲು ಸಹಾಯ ಮಾಡಿದೆ. ಸೌರಶಕ್ತಿ ನಿಯೋಜನೆಯು ಹೆಚ್ಚು ಅಗತ್ಯವಿರುವಲ್ಲಿ ಅದನ್ನು ಉತ್ತೇಜಿಸುವ ಮೂಲಕ, ಐ ಎಸ್‌ ಎ ಜಾಗತಿಕ ಇಂಧನ ಪರಿವರ್ತನೆಯನ್ನು ಉದಯೋನ್ಮುಖ ಮತ್ತು ಅಭಿವೃದ್ಧಿಶೀಲ ಆರ್ಥಿಕತೆಗಳತ್ತ ತಿರುಗಿಸುವಲ್ಲಿ ವೇಗವರ್ಧಕ ಪಾತ್ರವನ್ನು ವಹಿಸಿದೆ, ಇದು ಅತ್ಯಂತ ಅಗತ್ಯವಿರುವ ಸಮುದಾಯಗಳಿಗೆ ಶುದ್ಧ ಹಾಗೂ ವಿಶ್ವಾಸಾರ್ಹವಾದ ವಿದ್ಯುತ್ ತಲುಪಿಸಿದೆ" ಎಂದರು.

ಉದ್ದೇಶಿತ ಹಸ್ತಕ್ಷೇಪಗಳ ಮೂಲಕ, ಐ ಎಸ್‌ ಎ ಪ್ರತಿದಿನ ಜನರ ಜೀವನವನ್ನು ಸುಧಾರಿಸುತ್ತಿದೆ: ಆರೋಗ್ಯ ಕೇಂದ್ರಗಳನ್ನು ಸೌರಶಕ್ತಿಯುತಗೊಳಿಸುವ ಮೂಲಕ ನಿರಂತರ ಆರೋಗ್ಯ ರಕ್ಷಣೆಯನ್ನು ಖಚಿತಪಡಿಸುವುದು, ಸೌರಶಕ್ತಿ ಚಾಲಿತ ನೀರಾವರಿ ಮತ್ತು ಶೀತಲ ಸಂಗ್ರಹಣೆ ವ್ಯವಸ್ಥೆಯೊಂದಿಗೆ ರೈತರನ್ನು ಸಬಲೀಕರಣಗೊಳಿಸುವುದು, ಆಹಾರ ಭದ್ರತೆಯನ್ನು ಬಲಪಡಿಸುವುದು ಮತ್ತು ಶಾಲೆಗಳು ಹಾಗೂ ಸಾರ್ವಜನಿಕ ಸಂಸ್ಥೆಗಳಿಗೆ ಶುದ್ಧ ವಿದ್ಯುತ್ ತಲುಪಿಸುವುದು ಇವುಗಳಲ್ಲಿ ಸೇರಿವೆ. ನವೋದ್ಯಮಗಳು, ಯುವ ವೃತ್ತಿಪರರು ಮತ್ತು ನಾವೀನ್ಯತೆ ಪರಿಸರ ವ್ಯವಸ್ಥೆಗಳಿಗೆ ನೀಡುತ್ತಿರುವ ಬೆಂಬಲವು ಶುದ್ಧ ಇಂಧನದ ಭವಿಷ್ಯಕ್ಕಾಗಿ ಹೊಸ ಅವಕಾಶಗಳು, ಉದ್ಯೋಗಗಳು ಮತ್ತು ನಾಯಕತ್ವವನ್ನು ಸೃಷ್ಟಿಸುತ್ತಿದೆ ಎಂದು ಅವರು ಹೇಳಿದರು.

ಜಾಗತಿಕ ಸೌರಶಕ್ತಿ ಸಾಮರ್ಥ್ಯವು ವೇಗಗೊಳ್ಳುತ್ತಿದ್ದಂತೆ ಮತ್ತು ಶುದ್ಧ ಇಂಧನ ಹೂಡಿಕೆಯು ಐತಿಹಾಸಿಕ ಗರಿಷ್ಠ ಮಟ್ಟವನ್ನು ತಲುಪುತ್ತಿದ್ದಂತೆ, ಇಂಧನ ಪರಿವರ್ತನೆಯು ಎಲ್ಲರನ್ನೂ ಒಳಗೊಳ್ಳುವ, ಜನಕೇಂದ್ರಿತ ಮತ್ತು ಪರಿವರ್ತನಾತ್ಮಕವಾಗಿರಲು ಸಾಧ್ಯ ಎಂಬುದಕ್ಕೆ ಐ ಎಸ್‌ ಎ ಕಾರ್ಯವು ಪುರಾವೆಯಾಗಿ ನಿಂತಿದೆ. ಐ ಎಸ್‌ ಎ ಸಂಸ್ಥಾಪನಾ ದಿನದ ವಾರ್ಷಿಕೋತ್ಸವದಂದು, ಐ ಎಸ್‌ ಎ ಅಸೆಂಬ್ಲಿಯ ಅಧ್ಯಕ್ಷರಾದ ರಾಷ್ಟ್ರವಾಗಿರುವ ಭಾರತವು ಸಾಧಿಸಿದ ಪ್ರಗತಿಯ ಪ್ರಮಾಣವನ್ನು ಮಾತ್ರವಲ್ಲದೆ, ಲಕ್ಷಾಂತರ ಜನರ ಜೀವನದ ಉನ್ನತಿಯನ್ನು ಆಚರಿಸುತ್ತದೆ ಮತ್ತು ಸೌರಶಕ್ತಿಯ ಮೂಲಕ ಪ್ರವೇಶಾವಕಾಶ, ಸ್ಥಿತಿಸ್ಥಾಪಕತ್ವ ಮತ್ತು ಅವಕಾಶಗಳನ್ನು ವಿಸ್ತರಿಸುವ ನಮ್ಮ ಬದ್ಧತೆಯನ್ನು ಪುನರುಚ್ಚರಿಸುತ್ತದೆ ಎಂದು ಅವರು ಹೇಳಿದರು.

ಐ ಎಸ್‌ ಎ ರಚನೆಯು ಭಾರತೀಯ ತತ್ತ್ವವಾದ 'ವಸುಧೈವ ಕುಟುಂಬಕಂ'—ಜಗತ್ತೇ ಒಂದು ಕುಟುಂಬ ಎಂಬ ನಂಬಿಕೆಯಲ್ಲಿ ಬೇರೂರಿದೆ ಮತ್ತು ಶುದ್ಧ ಇಂಧನದ ಪ್ರಯೋಜನಗಳನ್ನು ಸಮಾನವಾಗಿ ಹಂಚಿಕೊಳ್ಳುವುದನ್ನು ಖಚಿತಪಡಿಸಿಕೊಳ್ಳಲು ರಾಷ್ಟ್ರಗಳು ಒಟ್ಟಾಗಿ ಕೆಲಸ ಮಾಡುವ ಮನೋಭಾವವನ್ನು ಪ್ರತಿಬಿಂಬಿಸುತ್ತದೆ ಎಂದು ಸಚಿವರು ಹೇಳಿದರು. ಒಕ್ಕೂಟದ ಬೆಳವಣಿಗೆಯನ್ನು ಉಲ್ಲೇಖಿಸಿದ ಶ್ರೀ ಜೋಶಿ, ಒಂದು ಪ್ರಬಲ ದೃಷ್ಟಿಕೋನವಾಗಿ ಪ್ರಾರಂಭವಾದದ್ದು ಇಂದು ಜಾಗತಿಕ ಸೌರ ಪರಿವರ್ತನೆಯನ್ನು ವೇಗಗೊಳಿಸಲು ಸಾಮೂಹಿಕವಾಗಿ ಕೆಲಸ ಮಾಡುತ್ತಿರುವ 120 ಕ್ಕೂ ಹೆಚ್ಚು ದೇಶಗಳ ಒಕ್ಕೂಟವಾಗಿ ಬೆಳೆದಿದೆ ಎಂದು ಹೇಳಿದರು.

ಭಾರತದ ಸೌರ ಬೆಳವಣಿಗೆಯು ಬಲವಾದ ನೀತಿ ಬದ್ಧತೆಯ ಪ್ರಭಾವವನ್ನು ಪ್ರದರ್ಶಿಸುತ್ತದೆ

ಸ್ವತಃ ಭಾರತದ ಪ್ರಗತಿಯನ್ನು ಉಲ್ಲೇಖಿಸಿದ ಸಚಿವರು, ದೇಶದ ಸ್ಥಾಪಿತ ಸೌರಶಕ್ತಿ ಸಾಮರ್ಥ್ಯವು ಸುಮಾರು 136 ಗಿಗಾವ್ಯಾಟ್‌ ಗಳನ್ನು ತಲುಪಿದೆ, ಇದು ಭಾರತದ ನವೀಕರಿಸಬಹುದಾದ ಇಂಧನ  ಸಾಮರ್ಥ್ಯದ ಅರ್ಧದಷ್ಟು ಭಾಗವನ್ನು ಹೊಂದಿದೆ ಎಂದು ಹೇಳಿದರು. ಈ ಬೆಳವಣಿಗೆಯು ನಿರಂತರ ನೀತಿ ಬದ್ಧತೆ ಮತ್ತು ನಾವೀನ್ಯತೆ ಏನನ್ನು ಸಾಧಿಸಬಹುದು ಎಂಬುದನ್ನು ತೋರಿಸುತ್ತದೆ ಎಂದು ಅವರು ಹೇಳಿದರು.

ಸೌರ ಇಂಧನದ ಪ್ರಯೋಜನಗಳು ನೇರವಾಗಿ ಜನರನ್ನು ತಲುಪಲು ಅನುವು ಮಾಡಿಕೊಡುತ್ತಿರುವ ಪ್ರಮುಖ ಉಪಕ್ರಮಗಳನ್ನು ಸಚಿವರು ಒತ್ತಿ ಹೇಳಿದರು. 'ಪಿಎಂ ಸೂರ್ಯ ಘರ್: ಮುಫ್ತ್ ಬಿಜ್ಲಿ ಯೋಜನೆ'ಯಂತಹ ಕಾರ್ಯಕ್ರಮಗಳು ಲಕ್ಷಾಂತರ ಕುಟುಂಬಗಳಿಗೆ ತಮ್ಮದೇ ಆದ ಶುದ್ಧ ವಿದ್ಯುತ್ ಉತ್ಪಾದಿಸಲು ಅನುವು ಮಾಡಿಕೊಡುತ್ತಿವೆ, ಹಾಗೆಯೇ 'ಪಿಎಂ-ಕುಸುಮ್' ಸೌರಶಕ್ತಿ ಚಾಲಿತ ನೀರಾವರಿ ವ್ಯವಸ್ಥೆಗಳ ಮೂಲಕ ರೈತರನ್ನು ಸಬಲೀಕರಣಗೊಳಿಸುತ್ತಿದೆ ಎಂದು ಅವರು ಹೇಳಿದರು.

ಜಾಗತಿಕ ಸೌರಶಕ್ತಿ ನಿಯೋಜನೆಯು ವೇಗವಾಗಿ ತೀವ್ರಗೊಳ್ಳುತ್ತಿದೆ

ಸೌರಶಕ್ತಿಯ ಕುರಿತು ಇರುವ ಗಮನಾರ್ಹ ಜಾಗತಿಕ ವೇಗವನ್ನು ಶ್ರೀ ಜೋಶಿ ಒತ್ತಿ ಹೇಳಿದರು. ಜಗತ್ತು ಮೊದಲ 1,000 ಗಿಗಾವ್ಯಾಟ್ ಸೌರ ಸಾಮರ್ಥ್ಯವನ್ನು ಸ್ಥಾಪಿಸಲು ಸುಮಾರು ಇಪ್ಪತ್ತೈದು ವರ್ಷಗಳನ್ನು ತೆಗೆದುಕೊಂಡರೆ, ಮುಂದಿನ 1,000 ಗಿಗಾವ್ಯಾಟ್ ಅನ್ನು ಹೆಚ್ಚು ವೇಗವಾಗಿ ಸಾಧಿಸುವ ನಿರೀಕ್ಷೆಯಿದೆ, ಇದು ಜಾಗತಿಕ ಇಂಧನ ಪರಿವರ್ತನೆಯಲ್ಲಿ ಹೊಸ ಯುಗವನ್ನು ಸೂಚಿಸುತ್ತದೆ ಎಂದು ಅವರು ಹೇಳಿದರು.

ಶುದ್ಧ ಇಂಧನ ಪರಿವರ್ತನೆಯ ಕೇಂದ್ರಬಿಂದುವು ಹೆಚ್ಚಾಗಿ 'ಗ್ಲೋಬಲ್ ಸೌತ್' (ಜಾಗತಿಕ ದಕ್ಷಿಣ) ಕಡೆಗೆ ಸರಿಯುತ್ತಿದೆ, ಅಲ್ಲಿ ಹೆಚ್ಚುತ್ತಿರುವ ಇಂಧನ ಬೇಡಿಕೆ ಮತ್ತು ಹೇರಳವಾದ ಸೌರ ಸಂಪನ್ಮೂಲಗಳು ಸಾಂಪ್ರದಾಯಿಕ ಇಂಧನ ಮಾರ್ಗಗಳನ್ನು ದಾಟಿ ಮುನ್ನಡೆಯಲು ಅಭೂತಪೂರ್ವ ಅವಕಾಶವನ್ನು ಒದಗಿಸುತ್ತವೆ ಎಂದು ಸಚಿವರು ಹೇಳಿದರು. ಈ ಸಂದರ್ಭದಲ್ಲಿ, ಅಂತಾರಾಷ್ಟ್ರೀಯ ಸೌರ ಒಕ್ಕೂಟವು ಸರ್ಕಾರಗಳು, ಅಭಿವೃದ್ಧಿ ಪಾಲುದಾರರು, ಹಣಕಾಸು ಸಂಸ್ಥೆಗಳು ಮತ್ತು ಖಾಸಗಿ ವಲಯವನ್ನು ಒಗ್ಗೂಡಿಸಿ ಸೌರಶಕ್ತಿ ನಿಯೋಜನೆಯನ್ನು ವಿಸ್ತರಿಸಲು ಮತ್ತು ಸುಸ್ಥಿರ ಅಭಿವೃದ್ಧಿಗಾಗಿ ಹೊಸ ಅವಕಾಶಗಳನ್ನು ತೆರೆಯಲು ಒಂದು ವಿಶಿಷ್ಟ ವೇದಿಕೆಯಾಗಿ ಹೊರಹೊಮ್ಮಿದೆ ಎಂದು ಅವರು ಹೇಳಿದರು.

ವಿಕೇಂದ್ರೀಕೃತ ನವೀಕರಿಸಬಹುದಾದ ಇಂಧನ ವ್ಯವಸ್ಥೆಗಳು, ಸೌರಶಕ್ತಿ ನೀರಾವರಿ ಮತ್ತು 'ಗ್ಲೋಬಲ್ ಸೋಲಾರ್ ಫೆಸಿಲಿಟಿ' ಸೇರಿದಂತೆ ನವೀನ ಹಣಕಾಸು ವೇದಿಕೆಗಳಂತಹ ಉಪಕ್ರಮಗಳ ಮೂಲಕ, ಐ ಎಸ್‌ ಎ ದೇಶಗಳಿಗೆ ಇಂಧನ ಲಭ್ಯತೆಯನ್ನು ಸುಧಾರಿಸುವ, ಜೀವನೋಪಾಯವನ್ನು ಬಲಪಡಿಸುವ ಮತ್ತು ಸುಸ್ಥಿರ ಬೆಳವಣಿಗೆಯನ್ನು ಬೆಂಬಲಿಸುವ ಸೌರ ಪರಿಹಾರಗಳನ್ನು ನಿಯೋಜಿಸಲು ಸಹಾಯ ಮಾಡುತ್ತಿದೆ ಎಂದು ಅವರು ತಿಳಿಸಿದರು.

ಎಐ ಮತ್ತು ಡಿಜಿಟಲ್ ತಂತ್ರಜ್ಞಾನಗಳು ಭವಿಷ್ಯದ ಇಂಧನ ವ್ಯವಸ್ಥೆಗಳನ್ನು ರೂಪಿಸಲಿವೆ

ಇಂಧನ ಪರಿವರ್ತನೆಯು ಹೊಸ ಹಂತವನ್ನು ಪ್ರವೇಶಿಸುತ್ತಿದೆ, ಅಲ್ಲಿ ಡಿಜಿಟಲ್ ತಂತ್ರಜ್ಞಾನಗಳು ಮತ್ತು ಕೃತಕ ಬುದ್ಧಿಮತ್ತೆ (ಎಐ) ಪ್ರಮುಖ ಪಾತ್ರವನ್ನು ವಹಿಸುತ್ತವೆ ಎಂದು ಶ್ರೀ ಜೋಶಿ ಹೇಳಿದರು. ಶಕ್ತಿಯುತ ಮತ್ತು ಸ್ಥಿತಿಸ್ಥಾಪಕ ಇಂಧನ ವ್ಯವಸ್ಥೆಗಳನ್ನು ನಿರ್ಮಿಸಲು ನಾವೀನ್ಯತೆಯನ್ನು ಬಳಸಿಕೊಳ್ಳುವ ಗುರಿಯನ್ನು ಹೊಂದಿರುವ 'ಗ್ಲೋಬಲ್ ಮಿಷನ್ ಆನ್ ಎಐ ಫಾರ್ ಎನರ್ಜಿ'ಯನ್ನು ಮುನ್ನಡೆಸುವಲ್ಲಿ ಐ ಎಸ್‌ ಎ ನಾಯಕತ್ವವನ್ನು ಅವರು ಎತ್ತಿ ತೋರಿಸಿದರು.

ಜಾಗತಿಕ ಸೌರಶಕ್ತಿ ಪರಿವರ್ತನೆಯನ್ನು ಮುನ್ನಡೆಸುವಲ್ಲಿ ಐ ಎಸ್‌ ಎ ಸದಸ್ಯ ರಾಷ್ಟ್ರಗಳ ಸಾಮೂಹಿಕ ಬದ್ಧತೆಯನ್ನು ಅವರು ಪುನರುಚ್ಚರಿಸಿದರು. ಸೌರ ಶಕ್ತಿ ಪರಿವರ್ತನೆಯು ಅಂತಿಮವಾಗಿ ಕೇವಲ ಇಂಧನದ ಬಗ್ಗೆ ಮಾತ್ರವಲ್ಲ, ಇದು ಪ್ರಪಂಚದಾದ್ಯಂತ ಅಭಿವೃದ್ಧಿ, ಸ್ಥಿತಿಸ್ಥಾಪಕತ್ವ ಮತ್ತು ಸಮೃದ್ಧಿಗಾಗಿ ಅವಕಾಶಗಳನ್ನು ಸೃಷ್ಟಿಸುವ ಬಗ್ಗೆಯಾಗಿದೆ ಎಂದು ಹೇಳಿದ ಸಚಿವರು ತಮ್ಮ ಮಾತು ಮುಕ್ತಾಯಗೊಳಿಸಿದರು.

ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯದ ಕಾರ್ಯದರ್ಶಿ ಶ್ರೀ ಸಂತೋಷ್ ಕುಮಾರ್ ಸಾರಂಗಿ ಅವರು ಮಾತನಾಡಿ, “ಸೌರಶಕ್ತಿಯುಯ ನಿಜವಾಗಿಯೂ ನಮ್ಮ ಕಾಲದ ಅತ್ಯಂತ ಅಮೂಲ್ಯವಾದ ಸಾರ್ವಜನಿಕ ಹಿತದ ವಸ್ತುವಾಗಿ ಹೊರಹೊಮ್ಮಿದೆ; ರಾಷ್ಟ್ರಗಳು ತಮ್ಮ ಜನರ ಸಾಮೂಹಿಕ ಕಲ್ಯಾಣಕ್ಕಾಗಿ ಹೆಚ್ಚು ಹೆಚ್ಚು ಬಳಸಿಕೊಳ್ಳುತ್ತಿರುವ ಹೇರಳವಾದ, ಪರೋಪಕಾರಿ ಶಕ್ತಿ ಇದು. ಭಾರತದಲ್ಲಿ, ಈ ತಿಳುವಳಿಕೆಯು ನಿರ್ಣಾಯಕ ಕ್ರಮವಾಗಿ ಪರಿವರ್ತನೆಗೊಂಡಿದೆ. 2030ರ ವೇಳೆಗೆ 500 ಗಿಗಾವ್ಯಾಟ್ ನವೀಕರಿಸಬಹುದಾದ ಇಂಧನ ಸಾಮರ್ಥ್ಯವನ್ನು ಸಾಧಿಸುವ ದೃಷ್ಟಿಕೋನದಿಂದ ಮಾರ್ಗದರ್ಶಿಸಲ್ಪಟ್ಟ ನಾವು, ಬಲವಾದ ನೀತಿ ಮತ್ತು ಅನುಷ್ಠಾನದ ಚೌಕಟ್ಟನ್ನು ನಿರ್ಮಿಸಿದ್ದೇವೆ, ಅದು ನಿಯೋಜನೆಯನ್ನು ವೇಗಗೊಳಿಸಿದೆ, ದೇಶೀಯ ಉತ್ಪಾದನೆಯನ್ನು ಬಲಪಡಿಸಿದೆ ಮತ್ತು ಇಂಧನ ಪರಿವರ್ತನೆಯಲ್ಲಿ ನೇರವಾಗಿ ಭಾಗವಹಿಸಲು ನಾಗರಿಕರನ್ನು ಸಬಲೀಕರಣಗೊಳಿಸಿದೆ" ಎಂದು ತಿಳಿಸಿದರು.

ಭಾರತವು ತನ್ನ ಅನುಭವವನ್ನು ಪ್ರಪಂಚದೊಂದಿಗೆ ಹಂಚಿಕೊಳ್ಳಲು ಬದ್ಧವಾಗಿದೆ ಎಂದು ಶ್ರೀ ಸಾರಂಗಿ ಹೇಳಿದರು. ಅಂತಾರಾಷ್ಟ್ರೀಯ ಸೌರ ಒಕ್ಕೂಟದಂತಹ ವೇದಿಕೆಗಳ ಮೂಲಕ ಮತ್ತು 'ಆಫ್ರಿಕಾ ಸೋಲಾರ್ ಫೆಸಿಲಿಟಿ'ಯಂತಹ ಉಪಕ್ರಮಗಳ ಮೂಲಕ, ನಾವು ಸೌರ ಇಂಧನದ ಪ್ರಯೋಜನಗಳನ್ನು ನಮ್ಮ ಗಡಿಗಳನ್ನು ಮೀರಿ ವಿಸ್ತರಿಸಲು ಕೆಲಸ ಮಾಡುತ್ತಿದ್ದೇವೆ, ನಮ್ಮ ಪಾಲುದಾರರಿಂದ ಕಲಿಯುತ್ತಾ ಮುಂದಿನ ಪೀಳಿಗೆಗೆ ಸ್ವಚ್ಛ, ಹಸಿರು ಮತ್ತು ಹೆಚ್ಚು ಸ್ಥಿತಿಸ್ಥಾಪಕ ಭವಿಷ್ಯಕ್ಕೆ ಕೊಡುಗೆ ನೀಡುತ್ತಿದ್ದೇವೆ ಎಂದು ಅವರು ಹೇಳಿದರು.

ಅಂತಾರಾಷ್ಟ್ರೀಯ ಸೌರ ಒಕ್ಕೂಟದ ಮಹಾನಿರ್ದೇಶಕ ಶ್ರೀ ಆಶಿಶ್ ಖನ್ನಾ ಅವರು ಮಾತನಾಡಿ, “ಅಂತಾರಾಷ್ಟ್ರೀಯ ಸೌರ ಒಕ್ಕೂಟದ ಸ್ಥಾಪನಾ ದಿನದಂದು, ಈ ಒಕ್ಕೂಟವನ್ನು ರೂಪಿಸಿದ ಮತ್ತು ಬಲಪಡಿಸಿದ ನಮ್ಮ ಸದಸ್ಯ ರಾಷ್ಟ್ರಗಳು, ಪಾಲುದಾರ ಸಂಸ್ಥೆಗಳು ಮತ್ತು ಸಹೋದ್ಯೋಗಿಗಳಿಗೆ ನಾನು ಹೃತ್ಪೂರ್ವಕ ಕೃತಜ್ಞತೆಯನ್ನು ಅರ್ಪಿಸುತ್ತೇನೆ. ಒಕ್ಕೂಟವು ಇಂದು 125 ಸದಸ್ಯ ಮತ್ತು ಸಹಿ ಮಾಡಿದ ದೇಶಗಳ ಜಾಗತಿಕ ಒಕ್ಕೂಟವಾಗಿ ಬೆಳೆದಿದೆ, ಪ್ರಪಂಚದ ಅತ್ಯಂತ ಹೇರಳವಾದ ಇಂಧನ ಮೂಲವು ಅತ್ಯಂತ ಪ್ರಜಾಪ್ರಭುತ್ವದ ಮೂಲವೂ ಆಗಿರಬೇಕು ಎಂಬ ನಂಬಿಕೆಯಿಂದ ನಾವೆಲ್ಲರೂ ಒಂದಾಗಿದ್ದೇವೆ" ಎಂದರು.

ಶ್ರೀ ಖನ್ನಾ ಅವರು, "ಆಫ್ರಿಕಾ, ಏಷ್ಯಾ ಮತ್ತು ಪೆಸಿಫಿಕ್, ಲ್ಯಾಟಿನ್ ಅಮೇರಿಕಾ ಮತ್ತು ಕೆರಿಬಿಯನ್, ಮತ್ತು ಯುರೋಪ್ ಹಾಗೂ ಇತರ ಪ್ರದೇಶಗಳಲ್ಲಿನ ನಮ್ಮ ಸದಸ್ಯರು ಐ ಎಸ್‌ ಎ ಪ್ರಗತಿಯ ನಿಜವಾದ ರಕ್ಷಕರು. ಅವರ ವಿಶ್ವಾಸ, ನಾಯಕತ್ವ ಮತ್ತು ಮಹತ್ವಾಕಾಂಕ್ಷೆಯು ನಾವು ಸಾಧಿಸುವ ಪ್ರತಿಯೊಂದು ಮೈಲಿಗಲ್ಲನ್ನು ವ್ಯಾಖ್ಯಾನಿಸುತ್ತದೆ. ನಮ್ಮ 77 ಪಾಲುದಾರ ಸಂಸ್ಥೆಗಳಿಗೆ ಮತ್ತು ಐಐಟಿ ದೆಹಲಿಯಲ್ಲಿ ತರಬೇತಿ ಪಡೆದ ಯುವ ಸೌರ ವೃತ್ತಿಪರರ ಬೆಳೆಯುತ್ತಿರುವ ಸಮುದಾಯಕ್ಕೆ ನಾನು ಸಮಾನವಾಗಿ ಕೃತಜ್ಞನಾಗಿದ್ದೇನೆ" ಎಂದು ಹೇಳಿದರು.

ಐ ಎಸ್‌ ಎ ನಮ್ರತೆ ಮತ್ತು ಉದ್ದೇಶದೊಂದಿಗೆ ಕೆಲಸ ಮಾಡುವುದನ್ನು ಮುಂದುವರಿಸುತ್ತದೆ, ಈ ವೇಗವನ್ನು ಸ್ಪಷ್ಟ ಫಲಿತಾಂಶಗಳಾಗಿ ಪರಿವರ್ತಿಸಲು ನಮ್ಮ ಸದಸ್ಯ ರಾಷ್ಟ್ರಗಳನ್ನು ಬೆಂಬಲಿಸುತ್ತದೆ: ವಿಸ್ತರಿತ ಇಂಧನ ಲಭ್ಯತೆ, ಬಲವಾದ ಜೀವನೋಪಾಯ ಮತ್ತು ಹಂಚಿಕೆಯ ಸಮೃದ್ಧಿ. ಒಟ್ಟಾಗಿ, ನಾವು ಸೂರ್ಯನ ಬೆಳಕನ್ನು ಎಲ್ಲರಿಗೂ ಅವಕಾಶ, ಸ್ಥಿತಿಸ್ಥಾಪಕ ಮತ್ತು ಪ್ರಗತಿಯನ್ನಾಗಿ ಪರಿವರ್ತಿಸುವುದನ್ನು ಮುಂದುವರಿಸುತ್ತೇವೆ ಎಂದು ಅವರು ಹೇಳಿದರು.

ಈ ಸಂದರ್ಭವು ಹಸಿರು ಹೈಡ್ರೋಜನ್ ಮತ್ತು ಇಂಧನ ಸಂಗ್ರಹಣೆಯ ಪರಿಹಾರಗಳಲ್ಲಿ ಮುಂಚೂಣಿಯಲ್ಲಿ ಕೆಲಸ ಮಾಡುವ ನವೀನ ನವೋದ್ಯಮಗಳನ್ನು ಗುರುತಿಸಲು ಮತ್ತು ಬೆಂಬಲಿಸಲು 'ಐಎಸ್‌ಎ ಗ್ರೀನ್ ಹೈಡ್ರೋಜನ್ & ಸ್ಟೋರೇಜ್ ಸ್ಟಾರ್ಟ್-ಅಪ್ ಚಾಲೆಂಜ್ 2026' ಘೋಷಣೆಗೆ ಸಾಕ್ಷಿಯಾಯಿತು. ಈ ಸವಾಲು ಆಯ್ದ ನವೋದ್ಯಮಗಳಿಗೆ ವ್ಯವಸ್ಥಿತ ವೇಗವರ್ಧನೆ ಮತ್ತು ಮಾರ್ಗದರ್ಶನ ಬೆಂಬಲವನ್ನು ನೀಡುವುದರ ಜೊತೆಗೆ, ತಂತ್ರಜ್ಞಾನ ವರ್ಗಾವಣೆ ಮತ್ತು ವಿಸ್ತರಣೆಯನ್ನು ಸಕ್ರಿಯಗೊಳಿಸಲು ಐ ಎಸ್‌ ಎ ಸದಸ್ಯ ರಾಷ್ಟ್ರಗಳ ಮಾರುಕಟ್ಟೆಗಳಿಗೆ ಪ್ರವೇಶವನ್ನು ನೀಡುತ್ತದೆ. ಈ ಉಪಕ್ರಮವು ವಿಶ್ವಾದ್ಯಂತ ಹಸಿರು ಹೈಡ್ರೋಜನ್ ಮತ್ತು ಸಂಗ್ರಹಣಾ ತಂತ್ರಜ್ಞಾನಗಳ ನಿಯೋಜನೆಯನ್ನು ವೇಗಗೊಳಿಸುವ ಬಲವಾದ ಜಾಗತಿಕ ಪರಿಸರ ವ್ಯವಸ್ಥೆಯನ್ನು ನಿರ್ಮಿಸುವ ಗುರಿಯನ್ನು ಹೊಂದಿದೆ.

ಇದರ ಜೊತೆಗೆ, ಅಂತಾರಾಷ್ಟ್ರೀಯ ಸೌರ ಒಕ್ಕೂಟವು ತನ್ನ ಸದಸ್ಯ ರಾಷ್ಟ್ರಗಳು ಮತ್ತು ಪಾಲುದಾರರ ಬೆಳೆಯುತ್ತಿರುವ ಅಗತ್ಯಗಳನ್ನು ಪೂರೈಸಲು ವಿನ್ಯಾಸಗೊಳಿಸಲಾದ ಹೊಸ, ಸುಧಾರಿತ ವೆಬ್‌ಸೈಟ್ ಗೂ ಚಾಲನೆ ನೀಡಿತು. ಮೇಲ್ದರ್ಜೆಗೇರಿಸಿದ ವೇದಿಕೆಯು ಜ್ಞಾನ, ಕಾರ್ಯಕ್ರಮಗಳು ಮತ್ತು ಅವಕಾಶಗಳಿಗೆ ಪ್ರವೇಶವನ್ನು ಬಲಪಡಿಸುತ್ತದೆ, ಮಧ್ಯಸ್ಥಗಾರರ ತೊಡಗಿಸಿಕೊಳ್ಳುವಿಕೆಯನ್ನು ಸುಧಾರಿಸುತ್ತದೆ ಮತ್ತು ಐ ಎಸ್‌ ಎ ನ ವಿಸ್ತರಿಸುತ್ತಿರುವ ಪೋರ್ಟ್ಫೋಲಿಯೊ ಮತ್ತು ಜಾಗತಿಕ ಮಹತ್ವಾಕಾಂಕ್ಷೆಗಳನ್ನು ಪ್ರತಿಬಿಂಬಿಸುತ್ತದೆ. ಇದು ಒಕ್ಕೂಟದ ಕೆಲಸ ಮತ್ತು ಪ್ರಭಾವಕ್ಕೆ ಹೆಚ್ಚು ಕ್ರಿಯಾತ್ಮಕ ಮತ್ತು ಬಳಕೆದಾರ-ಕೇಂದ್ರಿತ ದ್ವಾರವಾಗಿ ಕಾರ್ಯನಿರ್ವಹಿಸುತ್ತದೆ.

ಅಂತಾರಾಷ್ಟ್ರೀಯ ಸೌರ ಒಕ್ಕೂಟದ ಬಗ್ಗೆ

ಜಾಗತಿಕ ಸೌರ ಕ್ರಾಂತಿಯು ಅಭೂತಪೂರ್ವ ವೇಗವನ್ನು ಪಡೆಯುತ್ತಿದೆ. ಈ ವೇಗವರ್ಧನೆಯು ಸ್ವಚ್ಛ ಮತ್ತು ಹೆಚ್ಚು ಸುಸ್ಥಿರ ಇಂಧನ ವ್ಯವಸ್ಥೆಗಳತ್ತ ಜಾಗತಿಕ ಪರಿವರ್ತನೆಯಲ್ಲಿ ಸೌರ ಇಂಧನದ ಬೆಳೆಯುತ್ತಿರುವ ಪ್ರಾಮುಖ್ಯತೆಯನ್ನು ಪ್ರತಿಬಿಂಬಿಸುತ್ತದೆ. ಅಂತಾರಾಷ್ಟ್ರೀಯ ಸೌರ ಒಕ್ಕೂಟವು (ಐ ಎಸ್‌ ಎ) ಪ್ರಪಂಚದಾದ್ಯಂತ ಸೌರಶಕ್ತಿ ನಿಯೋಜನೆಯನ್ನು ವಿಸ್ತರಿಸಲು ಸರ್ಕಾರಗಳು, ಅಭಿವೃದ್ಧಿ ಸಂಸ್ಥೆಗಳು, ಉದ್ಯಮ ಮತ್ತು ಹೂಡಿಕೆದಾರರ ನಡುವೆ ಸಹಭಾಗಿತ್ವವನ್ನು ಸಜ್ಜುಗೊಳಿಸುವ ಮೂಲಕ ಈ ರೂಪಾಂತರದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.

ಒಕ್ಕೂಟವನ್ನು 2015ರಲ್ಲಿ ಪ್ಯಾರಿಸ್‌ ನಲ್ಲಿ ನಡೆದ ಸಿಒಪಿ21 ಹವಾಮಾನ ಸಮ್ಮೇಳನದ ಸಂದರ್ಭದಲ್ಲಿ ಭಾರತದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಭಾರತ ಮತ್ತು ಫ್ರಾನ್ಸ್ ಜಂಟಿಯಾಗಿ ಪ್ರಾರಂಭಿಸಿದವು. ಹೇರಳವಾದ ಸೌರ ಸಂಪನ್ಮೂಲಗಳನ್ನು ಹೊಂದಿರುವ ದೇಶಗಳು ಸುಸ್ಥಿರ ಅಭಿವೃದ್ಧಿ ಮತ್ತು ಇಂಧನ ಲಭ್ಯತೆಯನ್ನು ಉತ್ತೇಜಿಸಲು ಸೂರ್ಯನ ಶಕ್ತಿಯನ್ನು ಬಳಸಿಕೊಳ್ಳಲು ಒಟ್ಟಾಗಿ ಕೆಲಸ ಮಾಡಬಹುದು ಎಂಬ ದೃಷ್ಟಿಕೋನದ ಮೇಲೆ ಈ ಉಪಕ್ರಮವನ್ನು ಸ್ಥಾಪಿಸಲಾಯಿತು.

ನಂತರದ ವರ್ಷಗಳಲ್ಲಿ, ಒಕ್ಕೂಟವು ಸೌರಶಕ್ತಿ ಕುರಿತಾದ ಅಂತಾರಾಷ್ಟ್ರೀಯ ಸಹಕಾರಕ್ಕಾಗಿ ಒಂದು ಪ್ರಮುಖ ವೇದಿಕೆಯಾಗಿ ವಿಕಸನಗೊಂಡಿದೆ. ಇಂದು, 120 ಕ್ಕೂ ಹೆಚ್ಚು ಸದಸ್ಯ ರಾಷ್ಟ್ರಗಳೊಂದಿಗೆ, ಅಂತಾರಾಷ್ಟ್ರೀಯ ಸೌರ ಒಕ್ಕೂಟವು ಸೌರಶಕ್ತಿ ನಿಯೋಜನೆಯನ್ನು ವಿಸ್ತರಿಸಲು ಮೀಸಲಾದ ಅತ್ಯಂತ ಮಹತ್ವದ ಜಾಗತಿಕ ಪಾಲುದಾರಿಕೆಗಳಲ್ಲಿ ಒಂದಾಗಿದೆ. ಆಫ್ರಿಕಾ, ಏಷ್ಯಾ, ಲ್ಯಾಟಿನ್ ಅಮೇರಿಕಾ ದೇಶಗಳು ಮತ್ತು ಅಭಿವೃದ್ಧಿ ಹೊಂದುತ್ತಿರುವ ಸಣ್ಣ ದ್ವೀಪ ರಾಷ್ಟ್ರಗಳನ್ನು ಬೆಂಬಲಿಸಲು ಐ ಎಸ್‌ ಎ ವಿಶೇಷ ಒತ್ತು ನೀಡುತ್ತದೆ, ಅಲ್ಲಿ ಸೌರಶಕ್ತಿಯು ಇಂಧನ ಲಭ್ಯತೆಯನ್ನು ವಿಸ್ತರಿಸುವಲ್ಲಿ, ಜೀವನೋಪಾಯವನ್ನು ಬಲಪಡಿಸುವಲ್ಲಿ ಮತ್ತು ಸ್ಥಿತಿಸ್ಥಾಪಕತ್ವವನ್ನು ಹೆಚ್ಚಿಸುವಲ್ಲಿ ಪರಿವರ್ತನಾತ್ಮಕ ಪಾತ್ರವನ್ನು ವಹಿಸುತ್ತದೆ.

ಐ ಎಸ್‌ ಎ ನ ವಿಕಸನಗೊಳ್ಳುತ್ತಿರುವ ದೃಷ್ಟಿಕೋನವು ನಾಲ್ಕು ಕಾರ್ಯತಂತ್ರದ ಸ್ತಂಭಗಳ ಮೇಲೆ ನಿಂತಿದೆ: (1) ದೊಡ್ಡ ಪ್ರಮಾಣದಲ್ಲಿ ಹೂಡಿಕೆಗಳನ್ನು ಮುಕ್ತಗೊಳಿಸಲು ಮತ್ತು ಸಜ್ಜುಗೊಳಿಸಲು ಕ್ಯಾಟಲಿಟಿಕ್ ಫೈನಾನ್ಸ್ ಹಬ್; (2) ಸದಸ್ಯ ರಾಷ್ಟ್ರಗಳಲ್ಲಿ ನಾವೀನ್ಯತೆ, ಡಿಜಿಟಲ್ ವೇದಿಕೆಗಳು ಮತ್ತು ಸಾಮರ್ಥ್ಯ ವೃದ್ಧಿಯನ್ನು ಉತ್ತೇಜಿಸಲು ಜಾಗತಿಕ ಸಾಮರ್ಥ್ಯ ಕೇಂದ್ರ ಮತ್ತು ಡಿಜಿಟಲೀಕರಣ; (3) ಕಾರ್ಯತಂತ್ರದ ಪಾಲುದಾರಿಕೆಗಳ ಮೂಲಕ ಸೂಕ್ತ ಕ್ರಮಗಳನ್ನು ಕೈಗೊಳ್ಳಲು ಪ್ರಾದೇಶಿಕ ಮತ್ತು ದೇಶ-ಮಟ್ಟದ ತೊಡಗಿಸಿಕೊಳ್ಳುವಿಕೆ ಮತ್ತು (4) ಕಾರ್ಯಸಾಧ್ಯವಾದ ನೀತಿ ಚೌಕಟ್ಟುಗಳು ಮತ್ತು ಜ್ಞಾನ ಸಂಪನ್ಮೂಲಗಳ ಮೂಲಕ ಉದಯೋನ್ಮುಖ ಸೌರ ತಂತ್ರಜ್ಞಾನಗಳ ನಿಯೋಜನೆಯನ್ನು ವೇಗಗೊಳಿಸಲು ತಂತ್ರಜ್ಞಾನ ಮಾರ್ಗಸೂಚಿ ಮತ್ತು ನೀತಿ. ಒಪ್ಪಂದ ಆಧಾರಿತ ಅಂತರ್ ಸರ್ಕಾರಿ ವೇದಿಕೆಯಾಗಿ, ಐ ಎಸ್‌ ಎ ತನ್ನ ಸದಸ್ಯ ರಾಷ್ಟ್ರಗಳಿಗೆ ಸೌರಶಕ್ತಿಯನ್ನು ವಿಸ್ತರಿಸಲು ತಾಂತ್ರಿಕ ಮಾರ್ಗದರ್ಶನ, ನೀತಿ ನಾಯಕತ್ವ ಮತ್ತು ಜಾಗತಿಕ ಸಮನ್ವಯವನ್ನು ಒದಗಿಸುತ್ತದೆ. ಹೆಚ್ಚಿನ ವಿವರಗಳಿಗಾಗಿ www.isa.int ಗೆ ಭೇಟಿ ನೀಡಿ.

 


(ಪ್ರಕಟಣೆ ಐ.ಡಿ.: 2238786) ವಿಸಿಟರ್ ಕೌಂಟರ್ : 9
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , हिन्दी , Marathi , Gujarati , Tamil , Malayalam