ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ತಮಿಳುನಾಡಿನ ತಿರುಚಿರಾಪಳ್ಳಿಯಲ್ಲಿ ಸುಮಾರು ₹5,650 ಕೋಟಿ ಮೌಲ್ಯದ ಬಹು ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಿ, ರಾಷ್ಟ್ರಕ್ಕೆ ಸಮರ್ಪಿಸಿ, ಶಿಲಾನ್ಯಾಸ ಮಾಡಿ, ಹಸಿರು ನಿಶಾನೆ ತೋರಿಸಿದ  ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ


ಶುದ್ಧ ಇಂಧನ, ಪೆಟ್ರೋಲಿಯಂ ಸಂಬಂಧಿತ ಉತ್ಪಾದನೆ, ಹೆದ್ದಾರಿಗಳು, ರೈಲ್ವೆಗಳು ಮತ್ತು ಗ್ರಾಮೀಣ ರಸ್ತೆಗಳಿಗೆ ಸಂಬಂಧಿಸಿದ ಈ ಯೋಜನೆಗಳು ತಮಿಳುನಾಡಿನ ಯುವಜನರಿಗೆ ಇಂಧನ ಲಭ್ಯತೆ, ಸಂಪರ್ಕವನ್ನು ಹೆಚ್ಚಿಸುತ್ತವೆ ಮತ್ತು ಸಾವಿರಾರು ಉದ್ಯೋಗಗಳನ್ನು ಸೃಷ್ಟಿಸುತ್ತವೆ: ಪ್ರಧಾನಮಂತ್ರಿ

ಇಂದು ಚೆನ್ನೈನಲ್ಲಿರುವ ಇಂಡಿಯನ್ ಆಯಿಲ್ ಕಾರ್ಪೊರೇಷನ್‌ನ ಲ್ಯೂಬ್ ಮಿಶ್ರಣ ಸ್ಥಾವರವನ್ನು ರಾಷ್ಟ್ರಕ್ಕೆ ಸಮರ್ಪಿಸಲಾಗುತ್ತಿದೆ, ಇದು ವಿಶ್ವದ ಅತಿದೊಡ್ಡ ಸೌಲಭ್ಯಗಳಲ್ಲಿ ಒಂದಾಗಿದೆ: ಪ್ರಧಾನಮಂತ್ರಿ

ನಾವು ಇಂದು ಮುನ್ನೂರ ಎಪ್ಪತ್ತು ಕಿಲೋಮೀಟರ್‌ಗಳಷ್ಟು ವಿಸ್ತಾರವಾದ ಗ್ರಾಮೀಣ ರಸ್ತೆಗಳನ್ನು ಉದ್ಘಾಟಿಸುತ್ತಿದ್ದೇವೆ, ಒಟ್ಟಾರೆಯಾಗಿ ಪ್ರತಿಯೊಂದು ರಸ್ತೆಯೂ ಗ್ರಾಮೀಣ ಆರ್ಥಿಕತೆಯನ್ನು ಎತ್ತಿ ಹಿಡಿಯುತ್ತದೆ ಮತ್ತು ಜೀವನ ಸುಗಮತೆಯನ್ನು ಹೆಚ್ಚಿಸುತ್ತದೆ: ಪ್ರಧಾನಮಂತ್ರಿ

ಹಲವಾರು ಹೊಸ ರೈಲು ಸೇವೆಗಳಿಗೆ ಚಾಲನೆ ನೀಡಲಾಗುತ್ತಿದೆ, ಇವು ಪ್ರವಾಸೋದ್ಯಮವನ್ನು ಹೆಚ್ಚಿಸುತ್ತವೆ, ಸ್ಥಳೀಯ ಆರ್ಥಿಕತೆಯನ್ನು ಉತ್ತೇಜಿಸುತ್ತವೆ ಮತ್ತು ಯುವಜನರಿಗೆ ಅನೇಕ ಉದ್ಯೋಗಗಳನ್ನು ಸೃಷ್ಟಿಸುತ್ತವೆ: ಪ್ರಧಾನಮಂತ್ರಿ

ಅಭಿವೃದ್ಧಿ ಹೊಂದಿದ ಭಾರತಕ್ಕಾಗಿ ಅಭಿವೃದ್ಧಿ ಹೊಂದಿದ ತಮಿಳುನಾಡನ್ನು ಸೃಷ್ಟಿಸುವುದು ನಮ್ಮ ಗುರಿಯಾಗಿದೆ: ಪ್ರಧಾನಮಂತ್ರಿ

ಪ್ರಕಟಣಾ ದಿನಾಂಕ: 11 MAR 2026 7:03PM by PIB Bengaluru

ತಮಿಳುನಾಡಿನ ಮೂಲಸೌಕರ್ಯ ಮತ್ತು ಆರ್ಥಿಕತೆಯನ್ನು ಬಲಪಡಿಸುವ ಗುರಿಯನ್ನು ಹೊಂದಿರುವ ಪರಿವರ್ತನಾತ್ಮಕ ಅಭಿವೃದ್ಧಿ ಯೋಜನೆಗಳ ಸರಣಿಯನ್ನು ಉದ್ಘಾಟಿಸಲು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಇಂದು ಐತಿಹಾಸಿಕ ನಗರವಾದ ತಿರುಚ್ಚಿಗೆ ಭೇಟಿ ನೀಡಿದರು. ಒಟ್ಟು ಐದು ಸಾವಿರದ ಆರುನೂರು ಕೋಟಿ ರೂಪಾಯಿಗಳ ಹೂಡಿಕೆಯೊಂದಿಗೆ, ಈ ಉಪಕ್ರಮಗಳು ಶುದ್ಧ ಇಂಧನ, ಪೆಟ್ರೋಲಿಯಂ ಸಂಬಂಧಿತ ಉತ್ಪಾದನೆ ಮತ್ತು ಹೆದ್ದಾರಿಗಳು, ರೈಲ್ವೆಗಳು ಮತ್ತು ಗ್ರಾಮೀಣ ರಸ್ತೆಗಳ ಮೂಲಕ ವರ್ಧಿತ ಬಹು-ಮಾದರಿ ಸಂಪರ್ಕ ವಿಸ್ತರಣೆಯ ಉದ್ದೇಶಗಳನ್ನು  ಒಳಗೊಂಡಿವೆ. ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿ, "ಈ ಯೋಜನೆಗಳು ಇಂಧನ ಲಭ್ಯತೆ ಸಂಪರ್ಕವನ್ನು ಹೆಚ್ಚಿಸುತ್ತವೆ ಮತ್ತು ತಮಿಳುನಾಡಿನ ಯುವಜನರಿಗೆ ಸಾವಿರಾರು ಉದ್ಯೋಗಗಳನ್ನು ಸೃಷ್ಟಿಸುತ್ತವೆ" ಎಂದು ಒತ್ತಿ ಹೇಳಿದರು.

ಸುಸ್ಥಿರ ಇಂಧನದ ಮೇಲೆ ಗಮನ ಕೇಂದ್ರೀಕರಿಸಿದ ಪ್ರಧಾನಮಂತ್ರಿ, ಭಾರತ್ ಪೆಟ್ರೋಲಿಯಂನ ನಗರ ಅನಿಲ ವಿತರಣಾ (ಸಿಜಿಡಿ) ಜಾಲಕ್ಕೆ ಅಡಿಪಾಯ ಹಾಕಿದರು. ಈ ₹3,700 ಕೋಟಿ ಯೋಜನೆಯು ಸುಮಾರು ಒಂಬತ್ತು ಲಕ್ಷ ಕುಟುಂಬಗಳು ಮತ್ತು ಹಲವಾರು ವಾಣಿಜ್ಯ ಘಟಕಗಳಿಗೆ ಪೈಪ್ ಮೂಲಕ ನೈಸರ್ಗಿಕ ಅನಿಲವನ್ನು (ಪಿಎನ್‌ಜಿ) ಒದಗಿಸಿ ನೀಲಗಿರಿ ಮತ್ತು ಈರೋಡ್ ಜಿಲ್ಲೆಗಳನ್ನು ಪರಿವರ್ತಿಸಲು ಸಜ್ಜಾಗಿದೆ. ಇದರ ಪರಿಸರ ಸಂಬಂಧಿ ಪ್ರಯೋಜನಗಳನ್ನು ಎತ್ತಿ ತೋರಿಸುತ್ತಾ, ಶ್ರೀ ಮೋದಿ, "ಕೇವಲ ಎಂಟು ವರ್ಷಗಳಲ್ಲಿ ಯೋಜನೆಯ ಸಕಾರಾತ್ಮಕ ಪರಿಸರ ಪರಿಣಾಮವು ನಾಲ್ಕು ಕೋಟಿ ಮರಗಳನ್ನು ನೆಡುವುದಕ್ಕೆ ಸಮನಾಗಿರುತ್ತದೆ " ಎಂಬುದರತ್ತ ಗಮನ ಸೆಳೆದರು.

ಚೆನ್ನೈನಲ್ಲಿರುವ ಇಂಡಿಯನ್ ಆಯಿಲ್ ಕಾರ್ಪೊರೇಷನ್‌ನ ಲ್ಯೂಬ್ ಬ್ಲೆಂಡಿಂಗ್ ಪ್ಲಾಂಟ್ (ಲ್ಯೂಬ್ ಮಿಶ್ರಣ ಘಟಕ) ಅನ್ನು ದೇಶಕ್ಕೆ ಸಮರ್ಪಿಸುವುದು 'ಮೇಕ್ ಇನ್ ಇಂಡಿಯಾ' ಉಪಕ್ರಮವನ್ನು ಬಲಪಡಿಸುವ ಮಹತ್ವದ ಕ್ರಮವಾಗಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಜಾಗತಿಕವಾಗಿ ರೀತಿಯ ಅತಿದೊಡ್ಡ ಸೌಲಭ್ಯಗಳಲ್ಲಿ ಒಂದಾಗಿರುವ ಸ್ಥಾವರವನ್ನು ರಾಜ್ಯದ ಒಳಗೆ ಮತ್ತು ಹೊರಗೆ ವಿವಿಧ ಕೈಗಾರಿಕೆಗಳ ಹೆಚ್ಚಿನ ಬೇಡಿಕೆಗಳನ್ನು ಪೂರೈಸಲು ವಿನ್ಯಾಸಗೊಳಿಸಲಾಗಿದೆ ಎಂದು ಪ್ರಧಾನಮಂತ್ರಿ ಮೋದಿ ಎತ್ತಿ ತೋರಿಸಿದರು. "ಸ್ಥಳೀಯವಾಗಿ  ಲೂಬ್ರಿಕಂಟ್‌ಗಳ ಉತ್ಪಾದನೆಯಲ್ಲಿನ ಹೆಚ್ಚಳವು ಆಮದುಗಳನ್ನು ಕಡಿಮೆ ಮಾಡುತ್ತದೆ ಮತ್ತು ರಾಷ್ಟ್ರಕ್ಕೆ ಹಣವನ್ನು ಉಳಿಸುತ್ತದೆ" ಎಂಬುದರತ್ತಲೂ  ಶ್ರೀ ಮೋದಿ ಗಮನ ಸೆಳೆದರು.

ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯಡಿ ನಿರ್ಮಿಸಲಾದ 370 ಕಿಲೋಮೀಟರ್ ಗ್ರಾಮೀಣ ರಸ್ತೆಗಳನ್ನು ಉದ್ಘಾಟಿಸುವ ಮೂಲಕ ಗ್ರಾಮೀಣ ಸಂಪರ್ಕದ ಮಹತ್ವವನ್ನು ಪ್ರಧಾನಮಂತ್ರಿ ಒತ್ತಿ ಹೇಳಿದರು. ಈ ರಸ್ತೆಗಳು ಗ್ರಾಮಸ್ಥರಿಗೆ ಆರೋಗ್ಯ ರಕ್ಷಣೆ, ಶಿಕ್ಷಣ ಮತ್ತು ಮಾರುಕಟ್ಟೆಗಳಿಗೆ ಉತ್ತಮ ಪ್ರವೇಶವನ್ನು ಒದಗಿಸುವ ನಿರೀಕ್ಷೆಯಿದೆ, ಇದರಿಂದಾಗಿ ಗ್ರಾಮೀಣ ಆರ್ಥಿಕತೆಯು ಮುಖ್ಯವಾಹಿನಿಯೊಂದಿಗೆ ಸಂಯೋಜಿಸಲ್ಪಡುತ್ತದೆ. ಎಂದವರು ಅಭಿಪ್ರಾಯಪಟ್ಟರು. ಈ ಬೆಳವಣಿಗೆಯ ಬಗ್ಗೆ ಮಾತನಾಡಿದ ಅವರು, "ಪ್ರತಿಯೊಂದು ರಸ್ತೆಯೂ ಗ್ರಾಮೀಣ ಆರ್ಥಿಕತೆಯನ್ನು ಮೇಲಕ್ಕೆತ್ತುತ್ತದೆ ಮತ್ತು ಜೀವನ ಸುಲಭತೆಯನ್ನು ಹೆಚ್ಚಿಸುತ್ತದೆ."ಎಂದರು.

ಈ ಪ್ರದೇಶದ ಸಾಂಸ್ಕೃತಿಕ ಪರಂಪರೆಯನ್ನು ಪ್ರತಿಬಿಂಬಿಸುವಂತೆ , ಪ್ರಧಾನ ಮಂತ್ರಿಯವರು ಗಂಗೈಕೊಂಡ ಚೋಳಪುರಂನಲ್ಲಿ ಹೊಸ ಹೆದ್ದಾರಿ ಬೈಪಾಸ್ ಯೋಜನೆಯನ್ನು ಘೋಷಿಸಿದರು. ಈ ಯೋಜನೆಯು ಯುನೆಸ್ಕೋ ಮಾನ್ಯತೆ ಪಡೆದ ಮತ್ತು ಚಕ್ರವರ್ತಿ ರಾಜೇಂದ್ರ ಚೋಳ ಅವರಿಂದ ನಿರ್ಮಿಸಲ್ಪಟ್ಟ ಭವ್ಯ ದೇವಾಲಯದ  ಪ್ರದೇಶವನ್ನು ವಾಹನ ದಟ್ಟಣೆಯಿಂದ ಮುಕ್ತ ಮಾಡುವ,  ಅದನ್ನು  ಬೇರೆಡೆಗೆ ತಿರುಗಿಸುವ ಮೂಲಕ ದೇವಾಲಯವನ್ನು ರಕ್ಷಿಸುವ ಗುರಿಯನ್ನು ಹೊಂದಿದೆ, ಇದು ಸ್ಮಾರಕ ಮತ್ತು ಅದರ ಸಂದರ್ಶಕರ ಸುರಕ್ಷತೆಯನ್ನು ಖಚಿತಪಡಿಸುತ್ತದೆ. ಹೊಸ ಮೂಲಸೌಕರ್ಯದ ಬಗ್ಗೆ  ಉಲ್ಲೇಖಿಸಿದ ಶ್ರೀ ಮೋದಿ "ಇದರರ್ಥ ಎಲ್ಲರಿಗೂ ಉತ್ತಮ ಸುರಕ್ಷತೆ "ಎಂದೂ ಹೇಳಿದರು.

ಭಾಷಣದ ಮುಕ್ತಾಯದಲ್ಲಿ ಪ್ರಧಾನಮಂತ್ರಿಯವರು ಅಮೃತ ಭಾರತ ಕಾರ್ಯಕ್ರಮದಡಿಯಲ್ಲಿ ಎಂಟು ನಿಲ್ದಾಣಗಳ ಇತ್ತೀಚಿನ ಆಧುನೀಕರಣ ಮತ್ತು ಪುನರಾಭಿವೃದ್ಧಿಯ ನಂತರ  ರಾಜ್ಯದ ಸಾರಿಗೆ ಕ್ಷೇತ್ರದಲ್ಲಿ ಆಗಿರುವ  ತ್ವರಿತ ಆಧುನೀಕರಣವನ್ನು ಎತ್ತಿ ತೋರಿಸಿದರು.  ಪ್ರವಾಸೋದ್ಯಮ ಮತ್ತು ಸ್ಥಳೀಯ ವ್ಯಾಪಾರವನ್ನು ಉತ್ತೇಜಿಸಲು ನಾಗರಕೋಯಿಲ್, ಕೊಯಮತ್ತೂರು, ರಾಮೇಶ್ವರಂ, ತಿರುನಲ್ವೇಲಿ, ಮೈಲಾಡುತುರೈ, ಕಾರೈಕ್ಕುಡಿಯಂತಹ ಪ್ರಮುಖ ಸ್ಥಳಗಳನ್ನು ಇತರ ಪ್ರದೇಶಗಳೊಂದಿಗೆ ಸಂಪರ್ಕಿಸುವ ಹೊಸ ರೈಲು ಸೇವೆಗಳಿಗೆ ಇಂದು ಚಾಲನೆ ನೀಡಲಾಯಿತು. ರಾಜ್ಯದ ಭವಿಷ್ಯದ ಬಗ್ಗೆ ತಮ್ಮ ಚಿಂತನೆ/ ದೃಷ್ಟಿಕೋನವನ್ನು ಪುನರುಚ್ಚರಿಸಿದ , ಶ್ರೀ ಮೋದಿ, "ನಾವು ರಾಜ್ಯದ ಪ್ರಗತಿಗಾಗಿ ಹಗಲಿರುಳು ಶ್ರಮಿಸುತ್ತಿದ್ದೇವೆ ಮತ್ತು ಅದನ್ನು ಮುಂದುವರಿಸುತ್ತೇವೆ" ಎಂದು ಹೇಳಿದರು.

 

*****


(ಪ್ರಕಟಣೆ ಐ.ಡಿ.: 2238760) ವಿಸಿಟರ್ ಕೌಂಟರ್ : 2
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , Marathi , हिन्दी , Manipuri , Bengali , Assamese , Gujarati , Odia , Tamil , Telugu , Malayalam