ಪ್ರಧಾನ ಮಂತ್ರಿಯವರ ಕಛೇರಿ
ದೆಹಲಿಯಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳ ಉದ್ಘಾಟನಾ ಸಮಾರಂಭ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
ಪ್ರಕಟಣಾ ದಿನಾಂಕ:
08 MAR 2026 3:54PM by PIB Bengaluru
ಭಾರತ್ ಮಾತಾ ಕಿ ಜೈ!
ಭಾರತ್ ಮಾತಾ ಕಿ ಜೈ!
ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಜಿ, ದೆಹಲಿಯ ಲೆಫ್ಟಿನೆಂಟ್ ಗವರ್ನರ್ ವಿನಯ್ ಸಕ್ಸೇನಾ ಜಿ, ಕೇಂದ್ರ ಸಚಿವ ಸಂಪುಟದ ನನ್ನ ಸಹೋದ್ಯೋಗಿಗಳಾದ ಮನೋಹರ್ ಲಾಲ್ ಜಿ, ಹರ್ಷ್ ಮಲ್ಹೋತ್ರಾ ಜಿ, ತೋಖಾನ್ ಸಾಹು ಜಿ, ರಾಜ್ಯ ಸರ್ಕಾರದ ಎಲ್ಲಾ ಸಚಿವರೆ, ಎಲ್ಲಾ ಗೌರವಾನ್ವಿತ ಸಂಸತ್ ಸದಸ್ಯರೆ, ಗೌರವಾನ್ವಿತ ಶಾಸಕರೆ ಮತ್ತು ದೆಹಲಿಯ ನನ್ನ ಪ್ರೀತಿಯ ಸಹೋದರ ಸಹೋದರಿಯರೆ.
ಇಂದು ನಾವೆಲ್ಲರೂ ದೆಹಲಿಯಲ್ಲಿ ಅಭಿವೃದ್ಧಿಗೆ ಹೊಸ ಆವೇಗ ನೀಡಲು ಒಟ್ಟುಗೂಡಿದ್ದೇವೆ. ಸ್ವಲ್ಪ ಸಮಯದ ಹಿಂದೆ, 33 ಸಾವಿರದ 500 ಕೋಟಿ ರೂಪಾಯಿ ಮೊತ್ತದ ಯೋಜನೆಗಳನ್ನು ಉದ್ಘಾಟಿಸಲಾಯಿತು ಮತ್ತು ಇಲ್ಲಿ ಶಂಕುಸ್ಥಾಪನೆ ನೆರವೇರಿಸಲಾಯಿತು. ಮೆಟ್ರೋ ವಿಸ್ತರಣೆಯಿಂದ ಹಿಡಿದು ವಸತಿ ಕಲ್ಪಿಸುವ ತನಕ ರಾಜಧಾನಿಯು ಸಾವಿರಾರು ಸರ್ಕಾರಿ ನೌಕರರಿಗೆ ಸೌಲಭ್ಯಗಳನ್ನು ಒದಗಿಸುವ ನಿರಂತರ ಬಲವರ್ಧನೆಗೆ ಸಾಕ್ಷಿಯಾಗುತ್ತಿದೆ, ಇದು ಹೊಸ ಚೇತರಿಕೆಯನ್ನು ನೀಡುತ್ತಿದೆ. ದೆಹಲಿಯ ಜನರೆ, ನೀವು ಒಂದು ವರ್ಷದ ಹಿಂದೆ ಇಲ್ಲಿ ಬಿಜೆಪಿಯ ಡಬಲ್-ಎಂಜಿನ್ ಸರ್ಕಾರವನ್ನು ಸ್ಥಾಪಿಸಿದ ಹೊಸ ಭರವಸೆ ಮತ್ತು ಸಂಕಲ್ಪವು ಈಗ ಈ ಅಭಿವೃದ್ಧಿ ಕಾರ್ಯಗಳಲ್ಲಿ ಗೋಚರಿಸುತ್ತಿದೆ. ಈ ನಿರಂತರ ಪ್ರಗತಿಯ ಪ್ರವಾಹಕ್ಕಾಗಿ ದೆಹಲಿಯ ಎಲ್ಲಾ ನಾಗರಿಕರಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.
ಸ್ನೇಹಿತರೆ,
ಇಂದಿನ ಕಾರ್ಯಕ್ರಮವು ಇನ್ನೊಂದು ಕಾರಣಕ್ಕಾಗಿಯೂ ವಿಶೇಷವಾಗಿದೆ. ಇಂದು ಅಂತಾರಾಷ್ಟ್ರೀಯ ಮಹಿಳಾ ದಿನ. ಇಂದು ಭಾರತ ಮಹಿಳಾ ಸಬಲೀಕರಣದ ಹೊಸ ಕಥೆಯನ್ನು ಬರೆಯುತ್ತಿದೆ. ರೇಖಾ ಗುಪ್ತಾ ಜಿ ಅವರ ಯಶಸ್ವಿ ನಾಯಕತ್ವದಲ್ಲಿ ರಾಜಧಾನಿ ದೆಹಲಿ ಪ್ರಗತಿ ಸಾಧಿಸುತ್ತಿದೆ. ರಾಜಕೀಯ, ಆಡಳಿತ, ವಿಜ್ಞಾನ, ಕ್ರೀಡೆ ಅಥವಾ ಸಾಮಾಜಿಕ ಸೇವೆಯಲ್ಲಿ ಭಾರತದ ಮಹಿಳಾ ಶಕ್ತಿಯು ಪ್ರತಿಯೊಂದು ಕ್ಷೇತ್ರದಲ್ಲೂ ಹೊಸ ಶಕ್ತಿಯೊಂದಿಗೆ ಮುನ್ನಡೆಯುತ್ತಿದೆ. ಮಹಿಳಾ ದಿನದಂದು ಇಡೀ ರಾಷ್ಟ್ರದ ಸ್ತ್ರೀಶಕ್ತಿಯನ್ನು ನಾನು ಹೃತ್ಪೂರ್ವಕವಾಗಿ ಅಭಿನಂದಿಸುತ್ತೇನೆ, ರಾಷ್ಟ್ರೀಯ ಅಭಿವೃದ್ಧಿಗೆ ಅವರ ಅಪಾರ ಕೊಡುಗೆಯನ್ನು ಅಂಗೀಕರಿಸುತ್ತೇನೆ. ಸಮಾಜ ಮತ್ತು ರಾಷ್ಟ್ರವನ್ನು ಬಲಪಡಿಸುವುದನ್ನು ಮುಂದುವರಿಸಲು ಮತ್ತು ದೇಶವನ್ನು ಪ್ರಗತಿಯ ಹಾದಿಯಲ್ಲಿ ಮುನ್ನಡೆಸಲು ಹೊಸ ಶಕ್ತಿಯನ್ನು ಒದಗಿಸಲು ಅಸಂಖ್ಯಾತ ಶುಭಾಶಯಗಳನ್ನು ಕೋರುತ್ತೇನೆ.
ಸ್ನೇಹಿತರೆ,
ಜಗತ್ತಿನಲ್ಲಿ ಯಾರಾದರೂ ಭಾರತದಂತಹ ವಿಶಾಲ ಪ್ರಜಾಪ್ರಭುತ್ವದ ಬಗ್ಗೆ ಯೋಚಿಸಿದಾಗಲೆಲ್ಲಾ, ಆಗಾಗ್ಗೆ ದೆಹಲಿಯ ಚಿತ್ರಣವು ಅವರಿಗೆ ನೆನಪಿಗೆ ಬರುತ್ತದೆ. ದೆಹಲಿ ಭಾರತದ ರಾಜಧಾನಿ ಮಾತ್ರವಲ್ಲ. ಅದು ಭಾರತದ ಗುರುತಾಗಿದೆ, ಭಾರತದ ಶಕ್ತಿಯ ಸಂಕೇತವೂ ಆಗಿದೆ. ಆದ್ದರಿಂದ, ದೆಹಲಿಯ ಅಭಿವೃದ್ಧಿ ಕೇವಲ ಒಂದು ನಗರದ ಅಭಿವೃದ್ಧಿಯಲ್ಲ, ಅದು ಇಡೀ ದೇಶದ ಚಿತ್ರಣಕ್ಕೆ ಸಂಬಂಧಿಸಿದೆ. ದೆಹಲಿ ಹೆಚ್ಚು ಆಧುನಿಕವಾದಷ್ಟೂ, ದೆಹಲಿ ಹೆಚ್ಚು ಅನುಕೂಲಕರವಾಗುತ್ತದೆ, ದೆಹಲಿಯ ಸಂಪರ್ಕವು ಉತ್ತಮವಾಗುತ್ತದೆ, ಭಾರತದ ಆತ್ಮವಿಶ್ವಾಸವು ಪ್ರಪಂಚದ ಮುಂದೆ ಹೆಚ್ಚು ಬಲವಾಗಿ ಗೋಚರಿಸುತ್ತದೆ. ಅದಕ್ಕಾಗಿಯೇ ಇಂದು ನಮ್ಮ ದೆಹಲಿ ಸೌಲಭ್ಯಗಳು ಮತ್ತು ಮೂಲಸೌಕರ್ಯಗಳ ವಿಷಯದಲ್ಲಿ ವೇಗವಾಗಿ ಮುಂದುವರಿಯುತ್ತಿದೆ ಎಂಬುದರಿಂದ ನನಗೆ ತುಂಬಾ ಸಂತೋಷವಾಗಿದೆ. ದೆಹಲಿಯಲ್ಲಿ ಇದ್ದ ಕಳಪೆ ವ್ಯವಸ್ಥೆಗಳ ಬಗ್ಗೆ ಮಾತ್ರ ಚರ್ಚಿಸಲಾಗುತ್ತಿದ್ದ ಕಾಲವಿತ್ತು. ನಗರದ ಒಂದು ಭಾಗದಿಂದ ಇನ್ನೊಂದು ಭಾಗಕ್ಕೆ ಪ್ರಯಾಣಿಸಲು ಹಲವು ಗಂಟೆಗಳು ಬೇಕಾಗುತ್ತಿದ್ದವು. ತಾಯಂದಿರು ಮತ್ತು ಸಹೋದರಿಯರು ಬಸ್ ನಿಲ್ದಾಣಗಳಲ್ಲಿ, ಬಸ್‌ಗಳು ಮತ್ತು ಆಟೋಗಳಿಗಾಗಿ ಕಾಯುತ್ತಾ ತಮ್ಮ ಅಮೂಲ್ಯ ಸಮಯ ವ್ಯರ್ಥ ಮಾಡುತ್ತಿದ್ದರು. ಆದರೆ ಇಂದು ದೆಹಲಿಯ ಚಿತ್ರಣ ಬದಲಾಗುತ್ತಿದೆ. ಕೆಲವೇ ದಿನಗಳ ಹಿಂದೆ, ದೆಹಲಿಯನ್ನು ವೇಗದ ನಮೋ ಭಾರತ್ ರೈಲಿನ ಮೂಲಕ ಮೀರತ್‌ಗೆ ಸಂಪರ್ಕಿಸಲಾಯಿತು. ಇದು ದೆಹಲಿ ಮತ್ತು ಉತ್ತರ ಪ್ರದೇಶದ ಪಶ್ಚಿಮ ಭಾಗದ ನಡುವಿನ ಪ್ರಯಾಣವನ್ನು ಸುಲಭಗೊಳಿಸಿದೆ. ಇಂದು ಮೆಟ್ರೋ 4ನೇ ಹಂತದ ಪ್ರಾರಂಭದೊಂದಿಗೆ, ದೆಹಲಿ ಮೆಟ್ರೋದ ಜಾಲವು 375 ಕಿಲೋಮೀಟರ್‌ಗಳನ್ನು ದಾಟಿ ಹೋಗಿದೆ. ವಿಶ್ವದ ಅನೇಕ ದೊಡ್ಡ ನಗರಗಳು ಸಹ ಅಂತಹ ದೊಡ್ಡ ಮೆಟ್ರೋ ಜಾಲವನ್ನು ಹೊಂದಿಲ್ಲ.
ಸ್ನೇಹಿತರೆ,
ಇಂದು ಪ್ರಾರಂಭವಾದ ಹೊಸ ಮೆಟ್ರೋ ವಿಭಾಗವು ರಾಜಧಾನಿಯಲ್ಲಿ ಲಕ್ಷಾಂತರ ಜನರಿಗೆ ಹೆಚ್ಚಿನ ಅನುಕೂಲವನ್ನು ಒದಗಿಸುತ್ತದೆ. ವಿಶೇಷವಾಗಿ ಪೂರ್ವ ಮತ್ತು ಈಶಾನ್ಯ ದೆಹಲಿಯ ಜನರಿಗೆ ದೈನಂದಿನ ಪ್ರಯಾಣವು ಈಗ ಹೆಚ್ಚು ಸುಲಭವಾಗುತ್ತದೆ. ಇದರೊಂದಿಗೆ, ದೆಹಲಿ ಮತ್ತು ಘಾಜಿಯಾಬಾದ್, ನೋಯ್ಡಾ, ಫರಿದಾಬಾದ್ ಮತ್ತು ಗುರುಗ್ರಾಮ್‌ನಂತಹ ಎನ್‌ಸಿಆರ್ ನಗರಗಳ ನಡುವಿನ ಪ್ರಯಾಣವು ಹೆಚ್ಚು ಅನುಕೂಲಕರವಾಗುತ್ತದೆ.
ಸ್ನೇಹಿತರೆ,
ಒಂದು ವರ್ಷದ ಹಿಂದೆ ದೆಹಲಿಯನ್ನು ವಿಪತ್ತಿನ ಸರ್ಕಾರದಿಂದ ಮುಕ್ತಗೊಳಿಸುವುದು ಎಷ್ಟು ಅಗತ್ಯವಾಗಿತ್ತು ಎಂಬುದಕ್ಕೆ ಇಂದಿನ ಕಾರ್ಯಕ್ರಮವು ಪುರಾವೆಯಾಗಿದೆ. ಇಲ್ಲಿ ವಿಪತ್ತಿನ ಸರ್ಕಾರ ಇಲ್ಲದಿದ್ದರೆ, ಮೆಟ್ರೋ ಹಂತ-4 ಯೋಜನೆಯು ಬಹಳ ಹಿಂದೆಯೇ ಪೂರ್ಣಗೊಳ್ಳುತ್ತಿತ್ತು. ಆದರೆ ವಿಪತ್ತಿನ ಆಡಳಿತಗಾರರು, ತಮ್ಮ ರಾಜಕೀಯ ಹಿತಾಸಕ್ತಿಗಳಿಗಾಗಿ, ದೆಹಲಿಯ ಲಕ್ಷಾಂತರ ಜನರ ಅನುಕೂಲ ಬದಿಗಿಟ್ಟರು. ಈಗ ಬಿಜೆಪಿ ಸರ್ಕಾರ ಇಲ್ಲಿಗೆ ಬಂದ ನಂತರ, ದೆಹಲಿಯ ಸರ್ವತೋಮುಖ ಅಭಿವೃದ್ಧಿಯು ಹೆಚ್ಚಿನ ವೇಗವನ್ನು ಪಡೆದುಕೊಂಡಿದೆ.
ಸ್ನೇಹಿತರೆ,
ಡಬಲ್-ಎಂಜಿನ್ ಸರ್ಕಾರದಲ್ಲಿ, ದೆಹಲಿಯಲ್ಲಿರುವ ಪ್ರತಿಯೊಂದು ಸಾರಿಗೆ ಸೌಲಭ್ಯವನ್ನು ನವೀಕರಿಸಲಾಗುತ್ತಿದೆ. ಪ್ರತಿದಿನ, ದೆಹಲಿಯಲ್ಲಿ ಲಕ್ಷಾಂತರ ಜನರು ಬಸ್‌ನಲ್ಲಿ ಪ್ರಯಾಣಿಸುತ್ತಾರೆ. ಆದ್ದರಿಂದ, ದೆಹಲಿಯ ಜನರಿಗೆ ಸ್ವಚ್ಛ, ಆರಾಮದಾಯಕ ಮತ್ತು ಆಧುನಿಕ ಬಸ್ ಸೇವೆಗಳನ್ನು ಒದಗಿಸುವುದು ನಮ್ಮ ಪ್ರಯತ್ನವಾಗಿದೆ. ಕೇಂದ್ರ ಸರ್ಕಾರವು ಒದಗಿಸಿದ 4 ಸಾವಿರಕ್ಕೂ ಹೆಚ್ಚು ವಿದ್ಯುತ್ ಬಸ್‌ಗಳು ಇಂದು ದೆಹಲಿಯ ಜನರಿಗೆ ಸೇವೆ ಸಲ್ಲಿಸುತ್ತಿವೆ. ಕಳೆದ ವರ್ಷದಲ್ಲಿ ದೆಹಲಿಯ ರಸ್ತೆಗಳಲ್ಲಿ ಸುಮಾರು 1,800 ಹೊಸ ಬಸ್‌ಗಳನ್ನು ನಿಯೋಜಿಸಲಾಗಿದೆ. ಇವುಗಳಲ್ಲಿ ದೆಹಲಿಯ ಕಾಲೋನಿಗಳು ಮತ್ತು ನೆರೆಹೊರೆಗಳನ್ನು ಪರಸ್ಪರ ಸಂಪರ್ಕಿಸುವ ನೂರಾರು "ದೇವಿ ಬಸ್‌ಗಳು" ಸೇರಿವೆ.
ಸ್ನೇಹಿತರೆ,
ಸುಮಾರು 10 ವರ್ಷಗಳಿಂದ ಇಲ್ಲಿದ್ದ ವಿಪತ್ತಿನ ಸರ್ಕಾರವು ಪ್ರತಿಯೊಂದು ಅಭಿವೃದ್ಧಿ ಕಾರ್ಯವನ್ನು ಸ್ಥಗಿತಗೊಳಿಸಿತು. ಈಗ ನಮ್ಮ ಸರ್ಕಾರವು ದೆಹಲಿಗೆ ಸಂಬಂಧಿಸಿದ ವಿವಿಧ ಸವಾಲುಗಳನ್ನು ಪರಿಹರಿಸಲು ಕಾರ್ಯಾಚರಣೆ ಮಾದರಿಯಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಪೆರಿಫೆರಲ್ ಎಕ್ಸ್‌ಪ್ರೆಸ್‌ವೇ ನಿರ್ಮಾಣದೊಂದಿಗೆ, ಲಕ್ಷಾಂತರ ವಾಹನಗಳು ಇನ್ನು ಮುಂದೆ ದೆಹಲಿಗೆ ಪ್ರವೇಶಿಸುವ ಅಗತ್ಯವಿಲ್ಲ. ಯಮುನಾ ನದಿಯ ಶುದ್ಧೀಕರಣಕ್ಕಾಗಿ ಬಿಜೆಪಿ ಸರ್ಕಾರವು ದೊಡ್ಡ ಪ್ರಮಾಣದಲ್ಲಿ ಕೆಲಸ ಮಾಡುತ್ತಿದೆ. ಇದಕ್ಕಾಗಿ ಕೋಟ್ಯಂತರ ರೂಪಾಯಿಗಳ ಯೋಜನೆಗಳನ್ನು ಪ್ರಾರಂಭಿಸಲಾಗಿದೆ.
ಸ್ನೇಹಿತರೆ,
ದೆಹಲಿಯಲ್ಲಿದ್ದ ಹಿಂದಿನ ವಿಪತ್ತಿನ ಸರ್ಕಾರವು ಬಡವರ, ಮಧ್ಯಮ ವರ್ಗದ ಅಥವಾ ಬೇರೆಯವರ ಸಮಸ್ಯೆಗಳ ಬಗ್ಗೆ ಕಾಳಜಿ ವಹಿಸಲಿಲ್ಲ. ವಿಪತ್ತಿನ ಸರ್ಕಾರವು ಆರೋಗ್ಯ ಕ್ಷೇತ್ರವನ್ನೂ ಹಾಳು ಮಾಡಿತ್ತು. ನಾವು ಅವರಿಗೆ ಪತ್ರಗಳನ್ನು ಬರೆದೆವು, ಭಾರತ ಸರ್ಕಾರವು ಸಹ ಆಯುಷ್ಮಾನ್ ಯೋಜನೆ ಜಾರಿಗೆ ತರುವಂತೆ ಒತ್ತಾಯಿಸಿ ಪತ್ರಗಳನ್ನು ಬರೆದಿತ್ತು. ಆದರೆ ವಿಪತ್ತಿನ ಆಡಳಿತಗಾರರು ಎಂದಿಗೂ ಬಡವರ ಬಗ್ಗೆ ಕಾಳಜಿ ವಹಿಸಲಿಲ್ಲ. ರೇಖಾ ಜಿ ಅವರ ನೇತೃತ್ವದಲ್ಲಿ ಬಿಜೆಪಿ ಸರ್ಕಾರವು ಪರಿಸ್ಥಿತಿಯನ್ನು ಬದಲಾಯಿಸಲು ನಿರಂತರವಾಗಿ ಕೆಲಸ ಮಾಡುತ್ತಿದೆ ಎಂಬುದರಿಂದ ನನಗೆ ಸಂತೋಷವಾಗಿದೆ. ಕಳೆದ ವರ್ಷವಷ್ಟೇ, ಇಲ್ಲಿ ಹಲವಾರು ಆಯುಷ್ಮಾನ್ ಆರೋಗ್ಯ ಮಂದಿರಗಳನ್ನು ಸ್ಥಾಪಿಸಲಾಗಿದೆ. ಇದು ಬಡವರು ಮತ್ತು ಮಧ್ಯಮ ವರ್ಗದವರಿಗೆ ಹೆಚ್ಚಿನ ಪ್ರಯೋಜನ ನೀಡುತ್ತಿದೆ. ಈಗ ಆಯುಷ್ಮಾನ್ ಯೋಜನೆಯನ್ನು ದೆಹಲಿಯಲ್ಲಿಯೂ ಜಾರಿಗೆ ತರಲಾಗಿದೆ. ದೆಹಲಿಯ ಜನರು ಉಚಿತ ಚಿಕಿತ್ಸೆ ಪಡೆಯುತ್ತಿದ್ದು, ಬದಾಲವಣೆ ಸ್ಪಷ್ಟವಾಗಿದೆ. ವಿಪತ್ತಿನ ಆಡಳಿತಗಾರರ ಮಾರ್ಗವೆಂದರೆ - ಕಡಿಮೆ ಕೆಲಸ, ಹೆಚ್ಚು ನೆಪಗಳು. ಇಂದು ದೆಹಲಿಯ ಮಾದರಿ – ಮನ್ನಿಸುವುದು ನಿಂತಿದೆ, ಕೆಲಸ ಪ್ರಾರಂಭವಾಗಿದೆ. ಹಿಂದಿನ ಯೋಜನೆಗಳು ಕಡತಗಳಲ್ಲಿ ಸತ್ತುಹೋದವು. ಆದರೆ ಇಂದು ಎಲ್ಲಾ ಯೋಜನೆಗಳನ್ನು ನೆಲದ ಮೇಲೆ ವಾಸ್ತವವಾಗಿ ಕಾರ್ಯಗತಗೊಳಿಸಲಾಗುತ್ತಿದೆ.
ಸ್ನೇಹಿತರೆ,
ಇಂದು ಇಲ್ಲಿಗೆ ಬರುವ ಮೊದಲು, ನಾನು ಸರೋಜಿನಿ ನಗರಕ್ಕೆ ಹೋಗಿದ್ದೆ. ಅಲ್ಲಿ ಹೊಸದಾಗಿ ನಿರ್ಮಿಸಲಾದ ಸರ್ಕಾರಿ ವಸತಿಗಳನ್ನು ನೋಡುವ ಅವಕಾಶ ನನಗೆ ಸಿಕ್ಕಿತು. ಈ ಮನೆಗಳನ್ನು ಪ್ರತಿಯೊಂದು ರಾಷ್ಟ್ರೀಯ ಸಂಕಲ್ಪವನ್ನು ಪೂರೈಸಲು ಹಗಲಿರುಳು ಕೆಲಸ ಮಾಡುವ ಸರ್ಕಾರಿ ನೌಕರರಿಗಾಗಿ ನಿರ್ಮಿಸಲಾಗಿದೆ. ಅವರಿಗೆ ಸುರಕ್ಷಿತ, ಸ್ವಚ್ಛ ಮತ್ತು ಅನುಕೂಲಕರ ವಸತಿ ಸಿಗುವುದು ಅತ್ಯಗತ್ಯ. ಅದಕ್ಕಾಗಿಯೇ ಈ ಹೊಸ ಮತ್ತು ಆಧುನಿಕ ಕಟ್ಟಡಗಳನ್ನು ನಿರ್ಮಿಸಲಾಗುತ್ತಿದೆ. ಇಂದು ಸಾವಿರಾರು ಹೊಸ ಫ್ಲಾಟ್‌ಗಳನ್ನು ಫಲಾನುಭವಿಗಳಿಗೆ ಹಸ್ತಾಂತರಿಸಲಾಗಿದೆ. ಈ ಹೊಸ ಮನೆಗಳು ನಮ್ಮ ಕರ್ಮಯೋಗಿಗಳು ಮತ್ತು ಅವರ ಕುಟುಂಬಗಳ ಜೀವನದಲ್ಲಿ ಹೊಸ ಸಂತೋಷ ಮತ್ತು ಹೊಸ ಭರವಸೆ ತರುತ್ತವೆ ಎಂಬ ವಿಶ್ವಾಸ ನನಗಿದೆ.
ಸ್ನೇಹಿತರೆ,
ಇಂದು ದೇಶದಲ್ಲಿ ಬಿಜೆಪಿ ಸರ್ಕಾರ ಇರುವಲ್ಲೆಲ್ಲಾ, ಪ್ರತಿ ರಾಜ್ಯದಲ್ಲೂ, ಪ್ರತಿ ಹಳ್ಳಿ ಮತ್ತು ನಗರದಲ್ಲೂ ಜನರು ಖಂಡಿತವಾಗಿಯೂ ಒಂದಲ್ಲ ಒಂದು ಯೋಜನೆಯಿಂದ ಪ್ರಯೋಜನ ಪಡೆಯುತ್ತಿದ್ದಾರೆ. ನಮ್ಮ ಬಡ ಕುಟುಂಬಗಳು, ನಮ್ಮ ತಾಯಂದಿರು ಮತ್ತು ಸಹೋದರಿಯರು, ನಮ್ಮ ಕಾರ್ಮಿಕರು ಮತ್ತು ರೈತರು, ಸಣ್ಣ ಕೆಲಸಗಳನ್ನು ಮಾಡುವ ನಮ್ಮ ಸಹೋದರ ಸಹೋದರಿಯರು - ಸರ್ಕಾರ ಅವರೆಲ್ಲರಿಗೂ ಏನನ್ನಾದರೂ ಮಾಡುತ್ತಿದೆ. ನಮ್ಮ ಬೀದಿ ವ್ಯಾಪಾರಿಗಳ ಉದಾಹರಣೆಯನ್ನು ನಾನು ನಿಮಗೆ ನೀಡುತ್ತೇನೆ. ಕೊರೊನಾ ಅವಧಿಯಲ್ಲಿ ನಮ್ಮ ದೈನಂದಿನ ಜೀವನದಲ್ಲಿ ಅವರ ಮಹತ್ವವನ್ನು ನಾವು ಅರಿತುಕೊಂಡಿದ್ದೇವೆ. ಇವರು ಗಾಡಿಗಳನ್ನು ಬಾಡಿಗೆಗೆ ಪಡೆಯಬೇಕಾಗಿತ್ತು. ಸಣ್ಣ ವ್ಯವಹಾರ ಪ್ರಾರಂಭಿಸಲು ಅವರು ಇತರರಿಂದ ಹೆಚ್ಚಿನ ಬಡ್ಡಿಗೆ 1 ಅಥವಾ 2 ಸಾವಿರ ರೂಪಾಯಿ ಸಾಲ ಪಡೆಯಬೇಕಾಗಿತ್ತು. ಆದರೆ ನಮ್ಮ ಸರ್ಕಾರ ಅವರ ನೋವನ್ನು ಅರ್ಥ ಮಾಡಿಕೊಂಡು ಅವರನ್ನು ಬ್ಯಾಂಕಿಂಗ್ ವ್ಯವಸ್ಥೆಗೆ ಸಂಪರ್ಕಿಸಿದೆ. ಇಂದು ಪ್ರಧಾನ ಮಂತ್ರಿ ಸ್ವನಿಧಿ ಯೋಜನೆಯ ಮೂಲಕ ಅಂತಹ ಫಲಾನುಭವಿಗಳು ತಮ್ಮ ಕೆಲಸಕ್ಕೆ ಸುಲಭವಾಗಿ ಸಾಲ ಪಡೆಯುತ್ತಿದ್ದಾರೆ. ದೆಹಲಿಯಲ್ಲೂ ಸಹ, ಸುಮಾರು 2 ಲಕ್ಷ ಬೀದಿ ವ್ಯಾಪಾರಿಗಳು ಈ ಯೋಜನೆಯ ಮೂಲಕ ಸುಮಾರು 350 ಕೋಟಿ ರೂಪಾಯಿ ಸಹಾಯ ಪಡೆದಿದ್ದಾರೆ.
ಸ್ನೇಹಿತರೆ,
ಇದೀಗ ಬೀದಿ ಗಾಡಿಗಳಲ್ಲಿ ಕೆಲಸ ಮಾಡುವ ಕೆಲವು ಮಹಿಳೆಯರೊಂದಿಗೆ ಸಂವಹನ ನಡೆಸಲು ನನಗೆ ಅವಕಾಶ ಸಿಕ್ಕಿತು, ಅವರು ಎಷ್ಟು ಯಶಸ್ವಿಯಾಗಿ ಮುಂದುವರಿಯುತ್ತಿದ್ದಾರೆ ಎಂಬುದನ್ನು ಕೇಳಿದಾಗ ನನ್ನ ಹೃದಯ ಹೆಮ್ಮೆಯಿಂದ ತುಂಬಿತು.
ಸ್ನೇಹಿತರೆ,
ಈ ದೆಹಲಿಯಲ್ಲಿ, ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್‌ಗಳು ಒಂದು ಕಾಲದಲ್ಲಿ ಶ್ರೀಮಂತರ ಕೈಯಲ್ಲಿ ಮಾತ್ರ ಇದ್ದವು. ಆದರೆ ಇಂದು ಪರಿಸ್ಥಿತಿ ಬದಲಾಗುತ್ತಿದೆ. ಈಗ ನಮ್ಮ ಬೀದಿ ವ್ಯಾಪಾರಿಗಳು ಮತ್ತು ಗಾಡಿ ಕಾರ್ಮಿಕರು ಸಹ ಕ್ರೆಡಿಟ್ ಕಾರ್ಡ್ ಸೌಲಭ್ಯಗಳನ್ನು ಪಡೆಯುತ್ತಿದ್ದಾರೆ. ಈ ಬೀದಿ ವ್ಯಾಪಾರಿಗಳಿಗೆ ಸ್ವನಿಧಿ ಕ್ರೆಡಿಟ್ ಕಾರ್ಡ್‌ಗಳನ್ನು ಒದಗಿಸಲು ಸರ್ಕಾರ ಅಭಿಯಾನ ಪ್ರಾರಂಭಿಸಿದೆ. ಈಗ ಅವರ ಜೇಬಿನಲ್ಲಿ ಕ್ರೆಡಿಟ್ ಕಾರ್ಡ್ ಇರುತ್ತದೆ, ಅದನ್ನು ಅವರು ತಮ್ಮ ಅಗತ್ಯಗಳಿಗೆ ಅನುಗುಣವಾಗಿ ಬಳಸಬಹುದು. ಸ್ವಲ್ಪ ಸಮಯದ ಹಿಂದೆ ಈ ಹಂತದಲ್ಲಿಯೇ, ಈ ಸ್ವನಿಧಿ ಕ್ರೆಡಿಟ್ ಕಾರ್ಡ್‌ಗಳಲ್ಲಿ ಕೆಲವನ್ನು ಮಹಿಳೆಯರಿಗೆ ಹಸ್ತಾಂತರಿಸುವ ಸೌಭಾಗ್ಯ ನನಗೆ ಸಿಕ್ಕಿತು. ಈ ಕಾರ್ಡ್‌ಗಳು ಬಡವರಿಗೆ ಘನತೆಯ ಹೊಸ ಮಾಧ್ಯಮವಾಗುತ್ತಿವೆ.
ಸ್ನೇಹಿತರೆ,
ಈ ಅಂತಾರಾಷ್ಟ್ರೀಯ ಮಹಿಳಾ ದಿನದಂದು, ದೇಶಾದ್ಯಂತದ ನನ್ನ ಲಕ್ಷಾಂತರ ಸಹೋದರಿಯರೊಂದಿಗೆ ನಾನು ಮತ್ತೊಂದು ಸಂತೋಷ ಹಂಚಿಕೊಳ್ಳಲು ಬಯಸುತ್ತೇನೆ. ಕೆಲವು ವರ್ಷಗಳ ಹಿಂದೆ, ನಾವು ದೇಶದ 3 ಕೋಟಿ ಮಹಿಳೆಯರನ್ನು "ಲಖ್ಪತಿ ದೀದಿ"ಗಳನ್ನಾಗಿ ಮಾಡಲು ನಿರ್ಧರಿಸಿದ್ದೇವೆ. ಹಳ್ಳಿಗಳಲ್ಲಿ ಮಹಿಳೆಯರು ಲಖ್ಪತಿಗಳಾಗುವುದು ಚುನಾವಣೆಯಲ್ಲಿ ಗೆಲ್ಲಲು ಮೋದಿ ಹೇಳಿದ ಮಾತು ಎಂದು ಅನೇಕರು ನನ್ನನ್ನು ಅಪಹಾಸ್ಯ ಮಾಡಿದರು. ನನ್ನನ್ನು ಟೀಕಿಸಿದರು. ಸಾಮಾಜಿಕ ಮಾಧ್ಯಮಗಳು ಹಾಸ್ಯ ಮಾಡಿದವು. ಆದರೆ ಇಂದು ಅಂತಾರಾಷ್ಟ್ರೀಯ ಮಹಿಳಾ ದಿನದಂದು, ನನ್ನ ತಾಯಂದಿರು ಮತ್ತು ಸಹೋದರಿಯರಿಗೆ ಅಪಾರ ಶಕ್ತಿ ಬಂದಿದೆ ಎಂದು ನಾನು ಹೆಮ್ಮೆಯಿಂದ ಘೋಷಿಸುತ್ತೇನೆ. ಅವಕಾಶ ನೀಡಿದರೆ ಅವರು ಅಸಾಧಾರಣ ಸಾಧನೆಗಳನ್ನು ಸಾಧಿಸಬಹುದು. 3 ಕೋಟಿ ಮಹಿಳೆಯರನ್ನು "ಲಖ್ಪತಿ ದೀದಿ"ಗಳನ್ನಾಗಿ ಮಾಡುವ ಸಂಕಲ್ಪ ಈಡೇರಿದೆ ಎಂದು ಹೇಳಲು ನನಗೆ ಸಂತೋಷವಾಗಿದೆ. 3 ಕೋಟಿಗೂ ಹೆಚ್ಚು ಸಹೋದರಿಯರು ಈಗ ಲಖ್ಪತಿಗಳಾಗಿದ್ದಾರೆ.
ಸ್ನೇಹಿತರೆ,
ದಶಕಗಳಿಂದ ಹಳ್ಳಿಗಳ ನಮ್ಮ ಸಹೋದರಿಯರು ಕೌಶಲ್ಯಗಳನ್ನು ಹೊಂದಿದ್ದರು, ಕಷ್ಟಪಟ್ಟು ಕೆಲಸ ಮಾಡುತ್ತಿದ್ದರು, ಆದರೆ ಅವರಿಗೆ ಬಂಡವಾಳ ಮತ್ತು ಅವಕಾಶಗಳ ಕೊರತೆಯಿತ್ತು. ಅದಕ್ಕಾಗಿಯೇ ನಾವು ಅವರನ್ನು ಸ್ವಸಹಾಯ ಗುಂಪುಗಳೊಂದಿಗೆ ಸಂಪರ್ಕಿಸಿದ್ದೇವೆ, ಅವರನ್ನು ಬ್ಯಾಂಕುಗಳೊಂದಿಗೆ ಸಂಪರ್ಕಿಸಿದ್ದೇವೆ, ಅವರಿಗೆ ಹೊಸ ತರಬೇತಿ, ಅವಕಾಶಗಳು ಮತ್ತು ಮಾರುಕಟ್ಟೆಗಳಿಗೆ ಪ್ರವೇಶ ಒದಗಿಸಿದ್ದೇವೆ. ಇಂದು ದೇಶದಲ್ಲಿ 10 ಕೋಟಿಗೂ ಹೆಚ್ಚು ಮಹಿಳೆಯರು ಅಂತಹ ಗುಂಪುಗಳೊಂದಿಗೆ ಸಂಬಂಧ ಹೊಂದಿದ್ದಾರೆ. ಈ ಸ್ವಸಹಾಯ ಗುಂಪುಗಳು ಲಕ್ಷ ಕೋಟಿ ರೂಪಾಯಿಗಳ ಆರ್ಥಿಕ ಬೆಂಬಲ ಪಡೆದಿವೆ. ಪರಿಣಾಮವಾಗಿ, ಗ್ರಾಮೀಣ ಮಹಿಳೆಯರು ಸ್ವಾವಲಂಬಿಗಳಾಗುತ್ತಿದ್ದಾರೆ, ಅವರ ಕುಟುಂಬದ ಆದಾಯ ಹೆಚ್ಚಿಸುತ್ತಿದ್ದಾರೆ. "ಲಖ್ಪತಿ ದೀದಿ"ಗಳಾಗುವ ಮೂಲಕ ಗ್ರಾಮೀಣ ಆರ್ಥಿಕತೆಯನ್ನು ಬಲಪಡಿಸುತ್ತಿದ್ದಾರೆ.
ನಮ್ಮ ಸಹೋದರಿಯರ ಯಶಸ್ಸು ನಮಗೆ ಹೊಸ ಸಂಕಲ್ಪ ಸ್ವೀಕರಿಸಲು ಪ್ರೇರಣೆ ನೀಡಿದೆ. 3 ಕೋಟಿ "ಲಖ್ಪತಿ ದೀದಿಗಳು" ಆಗುವುದು ಅಸಾಧ್ಯವೆಂದು ತೋರುತ್ತಿತ್ತು, ಆದರೆ ಅದನ್ನು ಸಾಧಿಸಲಾಗಿದೆ. ಈಗ ಸರ್ಕಾರ ಇನ್ನೂ 3 ಕೋಟಿ ಮಹಿಳೆಯರನ್ನು ಸೇರಿಸಲು ನಿರ್ಧರಿಸಿದೆ. ಅಂದರೆ, ಈಗಾಗಲೇ ಲಖ್ಪತಿಗಳಾಗಿರುವ 3 ಕೋಟಿ ಜನರ ಜೊತೆಗೆ, ನಾವು ಈಗ ಹೊಸ 3 ಕೋಟಿ ಜನರನ್ನು ಸೇರಿಸಲು ಸಂಕಲ್ಪ ಮಾಡಿದ್ದೇವೆ. ನಮ್ಮ ರಾಷ್ಟ್ರದ ಮಹಿಳಾ ಶಕ್ತಿಯ ಆಶೀರ್ವಾದದಿಂದ, ಈ ಸಂಕಲ್ಪವೂ ಈಡೇರುತ್ತದೆ ಎಂದು ನನಗೆ ಸಂಪೂರ್ಣ ವಿಶ್ವಾಸವಿದೆ.
ಸಹೋದರ ಸಹೋದರಿಯರೆ,
ಇಂದು ದೇಶವು ನಮ್ಮ ತಾಯಂದಿರು, ಸಹೋದರಿಯರು ಮತ್ತು ಹೆಣ್ಣು ಮಕ್ಕಳ ಸಾಧನೆಗಳನ್ನು ಆಚರಿಸುತ್ತಿರುವಾಗ, ದೆಹಲಿಯ ಜನರು ಮತ್ತು ದೇಶದ ಜನರೊಂದಿಗೆ ನಾನು ನೋವು ಹಂಚಿಕೊಳ್ಳಲು ಬಯಸುತ್ತೇನೆ. ಈ ನೋವು, ಈ ದುಃಖವು ಹೃದಯಕ್ಕೆ ಆಳವಾದ ಗಾಯವಾಗಿದೆ, ಇದನ್ನು ನಾನು ನಾಗರಿಕರ ಮುಂದೆ ವ್ಯಕ್ತಪಡಿಸಲು ಬಯಸುತ್ತೇನೆ. ರಾಷ್ಟ್ರವು ಇಂದು ಅಂತಾರಾಷ್ಟ್ರೀಯ ಮಹಿಳಾ ದಿನ ಆಚರಿಸುತ್ತಿರುವಾಗ, ನಿನ್ನೆ ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಸರ್ಕಾರವು ಭಾರತದ ರಾಷ್ಟ್ರಪತಿ ಗೌರವಾನ್ವಿತ ದ್ರೌಪದಿ ಮುರ್ಮು ಜಿ ಅವರನ್ನು ತೀವ್ರವಾಗಿ ಅವಮಾನಿಸಿದೆ. ಅವರು ಸಂತಾಲ್ ಬುಡಕಟ್ಟು ಸಂಪ್ರದಾಯದ ಪ್ರಮುಖ ಉತ್ಸವದಲ್ಲಿ ಭಾಗವಹಿಸಲು ಬಂಗಾಳಕ್ಕೆ ಹೋಗಿದ್ದರು. ಆದರೆ ರಾಷ್ಟ್ರಪತಿ ಮತ್ತು ಈ ಪ್ರಮುಖ ಬುಡಕಟ್ಟು ಕಾರ್ಯಕ್ರಮವನ್ನು ಗೌರವಿಸುವ ಬದಲು ಟಿಎಂಸಿ, ಸಂತಾಲ್ ಜನರ ಪವಿತ್ರ ಕಾರ್ಯಕ್ರಮವನ್ನು ಬಹಿಷ್ಕರಿಸಿ ಸ್ವತಃ ರಾಷ್ಟ್ರಪತಿ ಅವರನ್ನೇ ಬಹಿಷ್ಕರಿಸಿತು. ಅವರು ಸ್ವತಃ ಬುಡಕಟ್ಟು ಸಮುದಾಯದಿಂದ ಬಂದವರು ಮತ್ತು ಸಂತಾಲ್ ಜನರ ಅಭಿವೃದ್ಧಿಗಾಗಿ ಕೆಲಸ ಮಾಡಿದ್ದಾರೆ. ಟಿಎಂಸಿ ಸರ್ಕಾರವು ಕಾರ್ಯಕ್ರಮವನ್ನು ಅಸ್ತವ್ಯಸ್ತಗೊಳಿಸಿದೆ.
ಸ್ನೇಹಿತರೆ,
ಇದು ರಾಷ್ಟ್ರಪತಿಗಳಿಗೆ ಮಾಡಿದ ಅವಮಾನ ಮಾತ್ರವಲ್ಲ, ಭಾರತದ ಸಂವಿಧಾನಕ್ಕೆ, ಸಂವಿಧಾನದ ಚೈತನ್ಯಕ್ಕೆ ಮತ್ತು ಪ್ರಜಾಪ್ರಭುತ್ವದ ಶ್ರೇಷ್ಠ ಸಂಪ್ರದಾಯಕ್ಕೆ ಮಾಡಿದ ಅವಮಾನ. ಇದು ಹೋರಾಟಗಳ ಮೂಲಕ ಎತ್ತರವನ್ನು ಸಾಧಿಸಿದ ಪ್ರತಿಯೊಬ್ಬ ಸಹೋದರಿ ಮತ್ತು ಮಗಳಿಗೂ ಮಾಡಿದ ಅವಮಾನವಾಗಿದೆ.
ಸ್ನೇಹಿತರೆ,
ನಮ್ಮ ಪರಂಪರೆಯಲ್ಲಿ ಹೀಗೆ ಹೇಳಲಾಗಿದೆ: ಅಹಂಕಾರೇ ಹತಃ ಪುಷ್ಟಃ ಸಮೂಲಂ ಚ ವಿನಶ್ಯತಿ - ಅಂದರೆ, ದುರಹಂಕಾರದಿಂದ ತುಂಬಿದ ವ್ಯಕ್ತಿ, ಎಷ್ಟೇ ಶಕ್ತಿಶಾಲಿಯಾಗಿದ್ದರೂ, ಅಂತಿಮವಾಗಿ ನಾಶವಾಗುತ್ತಾನೆ! ಇಂದು, ರಾಷ್ಟ್ರ ರಾಜಧಾನಿಯಿಂದ ನಾನು ನಿಮ್ಮೆಲ್ಲರನ್ನು ಕರೆ ನೀಡುತ್ತೇನೆ - ಬುಡಕಟ್ಟು ಸಮುದಾಯಕ್ಕೆ ಸೇರಿದ ರಾಷ್ಟ್ರಪತಿ ಅವರನ್ನು ಅವಮಾನಿಸಿದ ಟಿಎಂಸಿಯ ಕೊಳಕು ರಾಜಕೀಯ ಮತ್ತು ಅಧಿಕಾರ ದುರಹಂಕಾರವು ಶೀಘ್ರದಲ್ಲೇ ಛಿದ್ರಗೊಳ್ಳುತ್ತದೆ. ಪಶ್ಚಿಮ ಬಂಗಾಳದ ಪ್ರಬುದ್ಧ ಜನರು ಮಹಿಳೆಯನ್ನು ಅವಮಾನಿಸಿದ್ದಕ್ಕಾಗಿ, ಬುಡಕಟ್ಟು ಜನಾಂಗವನ್ನು ಅವಮಾನಿಸಿದ್ದಕ್ಕಾಗಿ ಮತ್ತು ರಾಷ್ಟ್ರದ ಗೌರವಾನ್ವಿತ ರಾಷ್ಟ್ರಪತಿ ಅವರನ್ನು ಅವಮಾನಿಸಿದ್ದಕ್ಕಾಗಿ ಟಿಎಂಸಿಯನ್ನು ಎಂದಿಗೂ ಕ್ಷಮಿಸುವುದಿಲ್ಲ. ದೇಶವು ಅವರನ್ನು ಎಂದಿಗೂ ಕ್ಷಮಿಸುವುದಿಲ್ಲ, ಬುಡಕಟ್ಟು ಸಮಾಜವು ಅವರನ್ನು ಎಂದಿಗೂ ಕ್ಷಮಿಸುವುದಿಲ್ಲ ಮತ್ತು ರಾಷ್ಟ್ರದ ಮಹಿಳಾ ಶಕ್ತಿ ಅವರನ್ನು ಎಂದಿಗೂ ಕ್ಷಮಿಸುವುದಿಲ್ಲ.
ಸ್ನೇಹಿತರೆ,
ನಮ್ಮ ಸಂಸ್ಕೃತಿಯು ಪ್ರತಿಯೊಂದು ವರ್ಗ, ಪ್ರತಿಯೊಂದು ಚಿಂತನೆಯನ್ನು ಗೌರವಿಸಲು ನಮಗೆ ಕಲಿಸುತ್ತದೆ. ನಮ್ಮ ಸಂಸ್ಕೃತಿಯು ನಮ್ಮ ಪರಂಪರೆಯ ಬಗ್ಗೆ ಹೆಮ್ಮೆ ಪಡುವುದನ್ನು ಕಲಿಸುತ್ತದೆ. ಇದರಿಂದ ಪ್ರೇರಿತರಾಗಿ ಇಂದು ನಾವು ದೆಹಲಿಯ ಪರಂಪರೆಯನ್ನು ಸಂರಕ್ಷಿಸಲು ಕೆಲಸ ಮಾಡುತ್ತಿದ್ದೇವೆ. ಇತ್ತೀಚಿನ ವರ್ಷಗಳಲ್ಲಿ, ಕೇಂದ್ರದಲ್ಲಿರುವ ಬಿಜೆಪಿ ಸರ್ಕಾರವು "ಪರಂಪರೆಯ ಜೊತೆಗೆ ಅಭಿವೃದ್ಧಿ" ಎಂಬ ಮಂತ್ರದೊಂದಿಗೆ ಕೆಲಸ ಮಾಡಿದೆ, ದೆಹಲಿಯ ಅನೇಕ ಐತಿಹಾಸಿಕ ತಾಣಗಳನ್ನು ಸುಧಾರಿಸುತ್ತಿದೆ. ದೆಹಲಿಯಲ್ಲಿ ಅನೇಕ ಹೊಸ ಸ್ಥಳಗಳನ್ನು ಸಹ ನಿರ್ಮಿಸಲಾಗಿದೆ. ರಾಷ್ಟ್ರಕ್ಕಾಗಿ ಪ್ರಾಣ ತ್ಯಾಗ ಮಾಡಿದ ವೀರರ ಗೌರವಾರ್ಥವಾಗಿ ರಾಷ್ಟ್ರೀಯ ಯುದ್ಧ ಸ್ಮಾರಕ ನಿರ್ಮಿಸಲಾಗಿದೆ. ಹೊಸ ಸಂಸತ್ತು ಕಟ್ಟಡ, ಕರ್ತವ್ಯ ಪಥ, ಕರ್ತವ್ಯ ಭವನ ಮತ್ತು ಸೇವಾ ತೀರ್ಥಗಳು 21 ನೇ ಶತಮಾನದ ಭಾರತದ ಹೊಸ ದೃಷ್ಟಿಕೋನವನ್ನು ಪ್ರತಿಬಿಂಬಿಸುತ್ತಿವೆ. ಕೆಲವೇ ದಿನಗಳ ಹಿಂದೆ, ಐತಿಹಾಸಿಕ ಜಾಗತಿಕ ಎಐ ಶೃಂಗಸಭೆಯನ್ನು ಭಾರತ್ ಮಂಟಪದಲ್ಲಿ ನಡೆಸಲಾಯಿತು. ಭಾರತ್ ಮಂಟಪ ಮತ್ತು ಯಶೋಭೂಮಿಯಂತಹ ಸ್ಥಳಗಳು ಭಾರತದ ಸಂಸ್ಕೃತಿ, ವ್ಯಾಪಾರ ಮತ್ತು ಸಾಮರ್ಥ್ಯಗಳನ್ನು ಜಗತ್ತಿಗೆ ಪ್ರದರ್ಶಿಸಲು ಪ್ರಮುಖ ವೇದಿಕೆಗಳಾಗಿವೆ. ಪ್ರಧಾನ ಮಂತ್ರಿಗಳ ವಸ್ತುಸಂಗ್ರಹಾಲಯ ಮತ್ತು ಯುಗೇ-ಯುಗೀನ್ ಭಾರತ್ ವಸ್ತುಸಂಗ್ರಹಾಲಯದಂತಹ ಹೊಸ ವಸ್ತುಸಂಗ್ರಹಾಲಯಗಳು ದೆಹಲಿಯ ಗುರುತನ್ನು ಬಲಪಡಿಸುತ್ತಿವೆ.
ಸ್ನೇಹಿತರೆ,
ದೆಹಲಿ ಭಾರತದ ಐತಿಹಾಸಿಕ ಪ್ರಯಾಣದ ನಗರ, ಇಂದು ಈ ದೆಹಲಿಯೇ ರಾಷ್ಟ್ರದ ಹೊಸ ಯುಗಕ್ಕೆ ಸಾಕ್ಷಿಯಾಗುತ್ತಿದೆ. ಇದು ನವ ಭಾರತದ ಆತ್ಮವಿಶ್ವಾಸದ ಯುಗ. ಈ ಆತ್ಮವಿಶ್ವಾಸವು ನಮ್ಮನ್ನು ಅಭಿವೃದ್ಧಿ ಹೊಂದಿದ ಭವಿಷ್ಯದತ್ತ ಕೊಂಡೊಯ್ಯುತ್ತದೆ. ಆದ್ದರಿಂದ, ಪ್ರತಿಯೊಂದು ಸಂಕಲ್ಪವನ್ನು ಪೂರೈಸಲು ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡಬೇಕು. ರೇಖಾ ಗುಪ್ತಾ ಜಿ ಮತ್ತು ಅವರ ಇಡೀ ತಂಡದ ನೇತೃತ್ವದಲ್ಲಿ, ದೆಹಲಿಯ ಪ್ರತಿಯೊಂದು ಅಭಿವೃದ್ಧಿ ಕಾರ್ಯವು ಇನ್ನಷ್ಟು ವೇಗ ಪಡೆಯುತ್ತದೆ ಎಂಬ ವಿಶ್ವಾಸ ನನಗಿದೆ. ದೆಹಲಿಯಲ್ಲಿರುವ ಪ್ರತಿಯೊಂದು ಕುಟುಂಬದ ಜೀವನವು ಉತ್ತಮ, ಸಂತೋಷದಾಯಕ ಮತ್ತು ಹೆಚ್ಚು ಸಮೃದ್ಧವಾಗುತ್ತದೆ. ಈ ಸಾಮರಸ್ಯದ ಮನೋಭಾವದಿಂದ, ಮತ್ತೊಮ್ಮೆ, ಈ ಅಭಿವೃದ್ಧಿ ಕಾರ್ಯಗಳಿಗಾಗಿ ನಾನು ನಿಮ್ಮೆಲ್ಲರಿಗೂ ನನ್ನ ಹೃತ್ಪೂರ್ವಕ ಅಭಿನಂದನೆಗಳು ಮತ್ತು ಶುಭಾಶಯಗಳನ್ನು ಸಲ್ಲಿಸುತ್ತೇನೆ. ನನ್ನೊಂದಿಗೆ ಹೇಳಿ-
ಭಾರತ್ ಮಾತಾ ಕಿ ಜೈ!
ಭಾರತ್ ಮಾತಾ ಕಿ ಜೈ!
ವಂದೇ ಮಾತರಂ!
ವಂದೇ ಮಾತರಂ!
ವಂದೇ ಮಾತರಂ!
ವಂದೇ ಮಾತರಂ!
ವಂದೇ ಮಾತರಂ!
ವಂದೇ ಮಾತರಂ!
ವಂದೇ ಮಾತರಂ!
ವಂದೇ ಮಾತರಂ!
ವಂದೇ ಮಾತರಂ!
*****
(ಪ್ರಕಟಣೆ ಐ.ಡಿ.: 2236701)
ವಿಸಿಟರ್ ಕೌಂಟರ್ : 11
ಪ್ರಕಟಣೆಯನ್ನು ಇದರಲ್ಲಿ ಓದಿ:
English
,
Urdu
,
हिन्दी
,
Marathi
,
Bengali
,
Assamese
,
Manipuri
,
Punjabi
,
Gujarati
,
Odia
,
Telugu