ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

“ಕೃಷಿ ಮತ್ತು ಗ್ರಾಮೀಣ ಪರಿವರ್ತನೆ” ಕುರಿತ ಬಜೆಟ್ ನಂತರದ ವೆಬಿನಾರ್‌ ಉದ್ದೇಶಿಸಿ ಪ್ರಧಾನಮಂತ್ರಿ ಅವರ​​​​​​​ ಭಾಷಣ

ಪ್ರಕಟಣಾ ದಿನಾಂಕ: 06 MAR 2026 1:14PM by PIB Bengaluru

ನಮಸ್ಕಾರ!

ಬಜೆಟ್ ವೆಬಿನಾರ್ ಸರಣಿಯ 3ನೇ ವೆಬಿನಾರ್‌ನಲ್ಲಿ, ನಿಮ್ಮೆಲ್ಲರಿಗೂ ನನ್ನ ಆತ್ಮೀಯ ಸ್ವಾಗತ ಕೋರುತ್ತೇನೆ. ಇದಕ್ಕೂ ಮೊದಲು ತಂತ್ರಜ್ಞಾನ, ಸುಧಾರಣೆಗಳು ಮತ್ತು ಆರ್ಥಿಕ ಬೆಳವಣಿಗೆಯಂತಹ ಪ್ರಮುಖ ವಿಷಯಗಳ ಕುರಿತು 2 ವೆಬಿನಾರ್‌ಗಳನ್ನು ನಡೆಸಲಾಯಿತು. ಇಂದು ಚರ್ಚೆಯು ಗ್ರಾಮೀಣ ಆರ್ಥಿಕತೆ ಮತ್ತು ಕೃಷಿಯಂತಹ ನಿರ್ಣಾಯಕ ಕ್ಷೇತ್ರಗಳ ಮೇಲೆ ಕೇಂದ್ರೀಕೃತವಾಗಿದೆ. ನೀವೆಲ್ಲರೂ ನಿಮ್ಮ ಅಮೂಲ್ಯ ಸಲಹೆಗಳೊಂದಿಗೆ ಬಜೆಟ್ ತಯಾರಿಕೆಯ ಪ್ರಕ್ರಿಯೆಗೆ ಅಪಾರ ಕೊಡುಗೆ ನೀಡಿದ್ದೀರಿ. ನಿಮ್ಮ ಸಲಹೆ ಸೂಚನೆಗಳು ಬಜೆಟ್‌ನಲ್ಲಿ ಪ್ರತಿಫಲಿಸುತ್ತಿವೆ, ಅವು ತುಂಬಾ ಉಪಯುಕ್ತವಾಗಿವೆ ಎಂಬುದನ್ನು ನೀವು ಗಮನಿಸಿರಬೇಕು. ಆದರೆ ಈಗ ಬಜೆಟ್ ಮಂಡಿಸಲಾಗಿದೆ, ದೇಶವು ತನ್ನ ಸಂಪೂರ್ಣ ಸಾಮರ್ಥ್ಯ ಪಡೆಯುವುದನ್ನು ಖಚಿತಪಡಿಸಿಕೊಳ್ಳುವುದು ಅಷ್ಟೇ ಮುಖ್ಯವಾಗಿದೆ. ನಿಮ್ಮ ಅನುಭವ, ನಿಮ್ಮ ಸಲಹೆಗಳು ಮತ್ತು ಹೆಚ್ಚಿನ ಸಂಖ್ಯೆಯ ಜನರಿಗೆ ಬಜೆಟ್‌ನ ಪ್ರಯೋಜನಗಳನ್ನು ಗರಿಷ್ಠಗೊಳಿಸಲು ಸರಳ ಮಾರ್ಗಗಳು ಅತ್ಯಗತ್ಯ. ಬಜೆಟ್‌ನಲ್ಲಿ ನಿಗದಿಪಡಿಸಿದ ಪ್ರತಿ ಪೈಸೆಯನ್ನು ಸಂಪೂರ್ಣವಾಗಿ ಮತ್ತು ತ್ವರಿತವಾಗಿ ಹೇಗೆ ಬಳಸಿಕೊಳ್ಳಬಹುದು? ಈ ವೆಬಿನಾರ್‌ನಲ್ಲಿ ನಿಮ್ಮ ಸಲಹೆಗಳು ಸಹ ಅಷ್ಟೇ ಮುಖ್ಯವಾಗಿವೆ.

ಸ್ನೇಹಿತರೆ,

ಕೃಷಿ, ಬೇಸಾಯ ಮತ್ತು ಕರಕುಶಲತೆಯು ನಮ್ಮ ಆರ್ಥಿಕತೆಯ ಪ್ರಮುಖ ಆಧಾರಸ್ತಂಭಗಳು ಎಂಬುದು ನಿಮಗೆಲ್ಲರಿಗೂ ತಿಳಿದಿದೆ. ಕೃಷಿ ಭಾರತದ ದೀರ್ಘಕಾಲೀನ ಅಭಿವೃದ್ಧಿ ಪ್ರಯಾಣದ ಕಾರ್ಯತಂತ್ರ ಆಧಾರಸ್ತಂಭವಾಗಿದೆ. ಈ ದೃಷ್ಟಿಕೋನದಿಂದ, ನಮ್ಮ ಸರ್ಕಾರವು ನಿರಂತರವಾಗಿ ಕೃಷಿ ವಲಯವನ್ನು ಬಲಪಡಿಸಿದೆ. ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿಯಡಿ ಸುಮಾರು 100 ದಶಲಕ್ಷ ರೈತರು 4 ಲಕ್ಷ ಕೋಟಿ ರೂಪಾಯಿಗಿಂತ ಹೆಚ್ಚಿನ ನೆರವು ಪಡೆದಿದ್ದಾರೆ. ಕನಿಷ್ಠ ಬೆಂಬಲ ಬೆಲೆಯ ಸುಧಾರಣೆಗಳು ರೈತರಿಗೆ ಒಂದೂವರೆ ಪಟ್ಟು ಆದಾಯ ಪಡೆಯುವುದನ್ನು ಖಚಿತಪಡಿಸಿವೆ. ಸಾಂಸ್ಥಿಕ ಸಾಲ ವ್ಯಾಪ್ತಿ 75 ಪ್ರತಿಶತ ದಾಟಿದೆ. ಪ್ರಧಾನಮಂತ್ರಿ ಬೆಳೆ ವಿಮಾ ಯೋಜನೆಯಡಿ, ಸುಮಾರು 2 ಲಕ್ಷ ಕೋಟಿ ರೂಪಾಯಿ ಮೌಲ್ಯದ ಕ್ಲೇಮ್‌ಗಳನ್ನು ಇತ್ಯರ್ಥಪಡಿಸಲಾಗಿದೆ. ಈ ಪ್ರಯತ್ನಗಳು ರೈತರ ಅಪಾಯಗಳನ್ನು ಗಮನಾರ್ಹವಾಗಿ ಕಡಿಮೆ ಮಾಡಿವೆ, ಅವರಿಗೆ ಮೂಲಭೂತ ಆರ್ಥಿಕ ಭದ್ರತೆ ಒದಗಿಸಿವೆ. ಇದು ಕೃಷಿ ಕ್ಷೇತ್ರದ ವಿಶ್ವಾಸವನ್ನು ಹೆಚ್ಚಿಸಿದೆ. ಇಂದು ಆಹಾರ ಧಾನ್ಯಗಳು ಮತ್ತು ದ್ವಿದಳ ಧಾನ್ಯಗಳಿಂದ ಎಣ್ಣೆಬೀಜಗಳವರೆಗೆ, ದೇಶವು ದಾಖಲೆಯ ಉತ್ಪಾದನೆ ಸಾಧಿಸುತ್ತಿದೆ. ಆದರೆ ಈಗ 21ನೇ ಶತಮಾನದ 2ನೇ ಅವಧಿ ಆರಂಭವಾಗುತ್ತಿದ್ದಂತೆ, ಮೊದಲ 25 ವರ್ಷಗಳು ಕಳೆದಿವೆ, ಕೃಷಿಗೆ ಹೊಸ ಶಕ್ತಿ ತುಂಬುವುದು ಅಷ್ಟೇ ಅಗತ್ಯವಾಗಿದೆ. ಈ ವರ್ಷದ ಬಜೆಟ್ ಈ ದಿಕ್ಕಿನಲ್ಲಿ ಹೊಸ ಹೆಜ್ಜೆಗಳನ್ನು ಇಟ್ಟಿದೆ. ಈ ವೆಬಿನಾರ್‌ನಿಂದ ಹೊರಹೊಮ್ಮುವ ಚರ್ಚೆಗಳು ಮತ್ತು ಸಲಹೆಗಳು ಬಜೆಟ್ ಪ್ರಸ್ತಾವನೆಗಳನ್ನು ತ್ವರಿತವಾಗಿ ಅನುಷ್ಠಾನಗೊಳಿಸಲು ಸಹಾಯ ಮಾಡುತ್ತದೆ ಎಂಬ ವಿಶ್ವಾಸ ನನಗಿದೆ.

ಸ್ನೇಹಿತರೆ,

ಇಂದು ಜಾಗತಿಕ ಮಾರುಕಟ್ಟೆಗಳು ತೆರೆದುಕೊಳ್ಳುತ್ತಿವೆ, ಜಾಗತಿಕ ಬೇಡಿಕೆಯೂ ಬದಲಾಗುತ್ತಿದೆ. ಈ ವೆಬಿನಾರ್‌ನಲ್ಲಿ, ನಮ್ಮ ಕೃಷಿಯನ್ನು ರಫ್ತು-ಆಧಾರಿತವಾಗಿಸುವುದು ಹೇಗೆ ಎಂದು ಚರ್ಚಿಸುವುದು ಅತ್ಯಗತ್ಯ. ನಮ್ಮಲ್ಲಿ ವೈವಿಧ್ಯಮಯ ಹವಾಮಾನವಿದೆ, ನಾವು ಅವುಗಳ ಸಂಪೂರ್ಣ ಪ್ರಯೋಜನ ಪಡೆದುಕೊಳ್ಳಬೇಕು. ನಾವು ಕೃಷಿ-ಹವಾಮಾನ ವಲಯಗಳಲ್ಲಿ ಬಹಳ ಶ್ರೀಮಂತರಾಗಿದ್ದೇವೆ. ಈ ವರ್ಷದ ಬಜೆಟ್ ಈ ನಿಟ್ಟಿನಲ್ಲಿ ಲೆಕ್ಕವಿಲ್ಲದಷ್ಟು ಹೊಸ ಅವಕಾಶಗಳನ್ನು ನೀಡಿದೆ. ಇದು ಉತ್ಪಾದಕತೆ ಹೆಚ್ಚಿಸಲು ಮತ್ತು ರಫ್ತು ಬಲ ಹೆಚ್ಚಿಸಲು ನಿರ್ದೇಶನವನ್ನು ಹೊಂದಿಸುತ್ತದೆ. ಬಜೆಟ್ ಹೆಚ್ಚಿನ ಮೌಲ್ಯದ ಕೃಷಿಯ ಮೇಲೆ ಗಮನ ಕೇಂದ್ರೀಕರಿಸಿದೆ. ತೆಂಗಿನಕಾಯಿ, ಗೋಡಂಬಿ, ಕೋಕೋ ಮತ್ತು ಶ್ರೀಗಂಧದಂತಹ ಉತ್ಪನ್ನಗಳಿಗೆ ಪ್ರಾದೇಶಿಕ-ನಿರ್ದಿಷ್ಟ ಉತ್ತೇಜನವನ್ನು ಪ್ರಸ್ತಾಪಿಸಲಾಗಿದೆ. ನಮ್ಮ ದಕ್ಷಿಣ ರಾಜ್ಯಗಳು, ವಿಶೇಷವಾಗಿ ಕೇರಳ ಮತ್ತು ತಮಿಳುನಾಡು ಬಹಳಷ್ಟು ತೆಂಗಿನಕಾಯಿಗಳನ್ನು ಉತ್ಪಾದಿಸುತ್ತವೆ ಎಂಬುದು ನಿಮಗೆ ತಿಳಿದಿದೆ. ಆದರೆ ಈಗ, ಆ ಮರಗಳು ಹಳೆಯದಾಗಿ, ಉತ್ಪಾದಕ ಕಳೆದುಕೊಂಡಿವೆ. ಕೇರಳ ಮತ್ತು ತಮಿಳುನಾಡಿನ ರೈತರಿಗೆ ಹೆಚ್ಚುವರಿ ಪ್ರಯೋಜನಗಳನ್ನು ಒದಗಿಸಲು, ಈ ಬಾರಿ ತೆಂಗಿನಕಾಯಿಗಳ ಮೇಲೆ ವಿಶೇಷ ಒತ್ತು ನೀಡಲಾಗಿದೆ, ಇದು ಮುಂಬರುವ ದಿನಗಳಲ್ಲಿ ರೈತರಿಗೆ ಪ್ರಯೋಜನ ನೀಡುತ್ತದೆ.

ಸ್ನೇಹಿತರೆ,

ಈಶಾನ್ಯವನ್ನು ನೋಡಿದರೆ, "ಅಗರಬತ್ತಿ" ಎಂಬ ಪದವು ಅಗರ್‌ವುಡ್‌ನಿಂದ ಬಂದಿದೆ ಎಂದು ಕೆಲವೇ ಜನರಿಗೆ ತಿಳಿದಿದೆ. ಹಿಮಾಲಯ ರಾಜ್ಯಗಳಲ್ಲಿ, ಈ ಬಜೆಟ್‌ನಲ್ಲಿ ಸಮಶೀತೋಷ್ಣ ಅಡಿಕೆ ಬೆಳೆಗಳನ್ನು ಉತ್ತೇಜಿಸಲಾಗುತ್ತಿದೆ. ರಫ್ತು-ಆಧಾರಿತ ಉತ್ಪಾದನೆ ಹೆಚ್ಚಾದಾಗ, ಗ್ರಾಮೀಣ ಪ್ರದೇಶಗಳು ಸಂಸ್ಕರಣೆ ಮತ್ತು ಮೌಲ್ಯವರ್ಧನೆಯ ಮೂಲಕ ಉದ್ಯೋಗ ಸೃಷ್ಟಿ ಕಾಣುತ್ತವೆ. ಈ ದಿಕ್ಕಿನಲ್ಲಿ ಸಂಘಟಿತ ಕ್ರಮ ಅತ್ಯಗತ್ಯ, ಈ ನಿಟ್ಟಿನಲ್ಲಿ ಎಲ್ಲಾ ಪಾಲುದಾರರು ಒಟ್ಟಾಗಿ ಯೋಚಿಸಬೇಕು. ನಾವು ಸಾಮೂಹಿಕವಾಗಿ ಹೆಚ್ಚಿನ ಮೌಲ್ಯದ ಕೃಷಿ ಕೈಗೊಂಡರೆ, ಅದು ಕೃಷಿಯನ್ನು ಜಾಗತಿಕವಾಗಿ ಸ್ಪರ್ಧಾತ್ಮಕ ವಲಯವಾಗಿ ಪರಿವರ್ತಿಸಬಹುದು. ಕೃಷಿ ತಜ್ಞರು, ಕೈಗಾರಿಕೆ ಮತ್ತು ರೈತರು ಒಟ್ಟಿಗೆ ಹೇಗೆ ಬರಬಹುದು? ರೈತರು ಜಾಗತಿಕ ಮಾರುಕಟ್ಟೆಗಳಿಗೆ ಹೇಗೆ ಸಂಪರ್ಕ ಸಾಧಿಸಬಹುದು? ಗುಣಮಟ್ಟ, ಬ್ರ್ಯಾಂಡಿಂಗ್ ಮತ್ತು ಮಾನದಂಡಗಳಿಗೆ ಗುರಿಗಳನ್ನು ಹೇಗೆ ಹೊಂದಿಸಬಹುದು? ಈ ಎಲ್ಲಾ ಅಂಶಗಳನ್ನು ಉತ್ತೇಜಿಸುವುದು ಈ ವೆಬಿನಾರ್‌ನ ಪ್ರಾಮುಖ್ಯತೆಯನ್ನು ಹೆಚ್ಚಿಸುತ್ತದೆ. ನಾನು ಇನ್ನೊಂದು ಅಂಶವನ್ನು ಒತ್ತಿ ಹೇಳಲು ಬಯಸುತ್ತೇನೆ. ಇಂದು ಜಗತ್ತು ಹೆಚ್ಚು ಆರೋಗ್ಯ ಪ್ರಜ್ಞೆ ಹೊಂದಿದೆ. ಸಮಗ್ರ ಆರೋಗ್ಯ ರಕ್ಷಣೆ, ಸಾವಯವ ಆಹಾರ ಪದ್ಧತಿ ಮತ್ತು ಸಾವಯವ ಆಹಾರವು ಆಸಕ್ತಿಯನ್ನು ಗಳಿಸುತ್ತಿದೆ. ಭಾರತದಲ್ಲಿ ನಾವು ರಾಸಾಯನಿಕ ಮುಕ್ತ ಕೃಷಿ ಮತ್ತು ನೈಸರ್ಗಿಕ ಕೃಷಿಗೆ ಒತ್ತು ನೀಡಬೇಕು. ನೈಸರ್ಗಿಕ ಕೃಷಿ ಮತ್ತು ರಾಸಾಯನಿಕ ಮುಕ್ತ ಉತ್ಪನ್ನಗಳು ಜಾಗತಿಕ ಮಾರುಕಟ್ಟೆಗಳಿಗೆ ಹೆದ್ದಾರಿಯಾಗಬಹುದು. ಇದಕ್ಕಾಗಿ, ಸರ್ಕಾರವು ಪ್ರಮಾಣೀಕರಣ ಮತ್ತು ಪ್ರಯೋಗಾಲಯ ಸೌಲಭ್ಯಗಳನ್ನು ಯೋಜಿಸುತ್ತಿದೆ. ಆದರೆ ನೀವು ಇದರ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಸಹ ಹಂಚಿಕೊಳ್ಳಬೇಕು.

ಸ್ನೇಹಿತರೆ,

ರಫ್ತು ಹೆಚ್ಚಿಸುವಲ್ಲಿ ಪ್ರಮುಖ ಅಂಶವೆಂದರೆ ಅದು ಮೀನುಗಾರಿಕೆ ಕ್ಷೇತ್ರದ ಸಾಮರ್ಥ್ಯ. ಭಾರತವು ವಿಶ್ವದ 2ನೇ ಅತಿದೊಡ್ಡ ಮೀನು ಉತ್ಪಾದಕ ರಾಷ್ಟ್ರವಾಗಿದೆ. ಇಂದು ನಮ್ಮ ಜಲಾಶಯಗಳು, ಕೊಳಗಳು ಮತ್ತು ಜಲಮೂಲಗಳು ಒಟ್ಟಾಗಿ ಸುಮಾರು 4 ಲಕ್ಷ ಟನ್ ಮೀನುಗಳನ್ನು ಉತ್ಪಾದಿಸುತ್ತಿವೆ. ಆದರೆ ಹೆಚ್ಚುವರಿಯಾಗಿ 20 ಲಕ್ಷ ಟನ್ ಉತ್ಪಾದನೆಗೆ ಅವಕಾಶವಿದೆ. ಪ್ರಸ್ತುತ 4 ಲಕ್ಷ ಟನ್‌ಗಳಿಗೆ 20 ಲಕ್ಷ ಟನ್‌ಗಳನ್ನು ಸೇರಿಸಿದರೆ, ನಮ್ಮ ಬಡ ಮೀನುಗಾರರ ಜೀವನ ಎಷ್ಟು ಬದಲಾಗುತ್ತದೆ ಎಂಬುದನ್ನು ಊಹಿಸಿ. ಗ್ರಾಮೀಣ ಆದಾಯವನ್ನು ವೈವಿಧ್ಯಗೊಳಿಸಲು ನಮಗೆ ಅವಕಾಶವಿದೆ. ಜಾಗತಿಕ ಬೇಡಿಕೆ ಇರುವುದರಿಂದ ಮೀನುಗಾರಿಕೆ ರಫ್ತು ಆರ್ಥಿಕ ಬೆಳವಣಿಗೆಗೆ ಪ್ರಮುಖ ವೇದಿಕೆಯಾಗಬಹುದು. ಜಲಾಶಯ ಸಾಮರ್ಥ್ಯದ ನಿಖರವಾದ ನಕ್ಷೆ, ಕ್ಲಸ್ಟರ್ ಯೋಜನೆ ಮತ್ತು ಮೀನುಗಾರಿಕೆ ಇಲಾಖೆಗಳು ಮತ್ತು ಸ್ಥಳೀಯ ಸಮುದಾಯಗಳ ನಡುವಿನ ಬಲವಾದ ಸಮನ್ವಯದಂತಹ ಪ್ರಾಯೋಗಿಕ ಸಲಹೆಗಳು ಈ ವೆಬಿನಾರ್‌ನಿಂದ ಹೊರಹೊಮ್ಮಿದರೆ, ಅದು ಅತ್ಯುತ್ತಮವಾಗಿರುತ್ತದೆ. ಮೊಟ್ಟೆ ಕೇಂದ್ರಗಳು, ಫೀಡ್, ಸಂಸ್ಕರಣೆ, ಬ್ರ್ಯಾಂಡಿಂಗ್, ರಫ್ತು ಮತ್ತು ಅಗತ್ಯ ಸರಕು ಸಾಗಣೆ - ಎಲ್ಲದಕ್ಕೂ ಹೊಸ ವ್ಯವಹಾರ ಮಾದರಿಗಳು ಬೇಕಾಗುತ್ತವೆ. ಗ್ರಾಮೀಣ ಸಮೃದ್ಧಿಗಾಗಿ ಮೀನುಗಾರಿಕೆಯನ್ನು ಹೆಚ್ಚಿನ ಮೌಲ್ಯದ, ಹೆಚ್ಚಿನ ಪ್ರಭಾವ ಬೀರುವ ವಲಯವಾಗಿ ಪರಿವರ್ತಿಸಲು ಇದು ಒಂದು ಅವಕಾಶವಾಗಿದೆ, ನಾವೆಲ್ಲರೂ ಈ ದಿಕ್ಕಿನಲ್ಲಿ ಒಟ್ಟಾಗಿ ಕೆಲಸ ಮಾಡಬೇಕು.

ಸ್ನೇಹಿತರೆ,

ಪಶುಪಾಲನೆ ಗ್ರಾಮೀಣ ಆರ್ಥಿಕತೆಯ ಹೆಚ್ಚಿನ ಬೆಳವಣಿಗೆಯ ಆಧಾರಸ್ತಂಭವಾಗಿದೆ. ಭಾರತವು ವಿಶ್ವದಲ್ಲೇ ಅತಿ ದೊಡ್ಡ ಹಾಲು ಉತ್ಪಾದಕ ರಾಷ್ಟ್ರವಾಗಿದ್ದು, ಮೊಟ್ಟೆ ಉತ್ಪಾದನೆಯಲ್ಲಿ 2ನೇ ಸ್ಥಾನದಲ್ಲಿದೆ. ಇದನ್ನು ಮತ್ತಷ್ಟು ಮುಂದುವರಿಸಲು, ನಾವು ಸಂತಾನೋತ್ಪತ್ತಿ ಗುಣಮಟ್ಟ, ರೋಗ ತಡೆಗಟ್ಟುವಿಕೆ ಮತ್ತು ವೈಜ್ಞಾನಿಕ ನಿರ್ವಹಣೆಯತ್ತ ಗಮನ ಹರಿಸಬೇಕು. ಮತ್ತೊಂದು ಪ್ರಮುಖ ಅಂಶವೆಂದರೆ, ಅದು ಜಾನುವಾರು ಆರೋಗ್ಯ. ನಾನು ಒಂದು ಭೂಮಿ, ಒಂದು ಆರೋಗ್ಯದ ಬಗ್ಗೆ ಮಾತನಾಡುವಾಗ, ಇದು ಸಸ್ಯಗಳು ಮತ್ತು ಪ್ರಾಣಿಗಳ ಆರೋಗ್ಯವನ್ನು ಒಳಗೊಂಡಿದೆ. ಭಾರತವು ಈಗ ಲಸಿಕೆ ಉತ್ಪಾದನೆಯಲ್ಲಿ ಸ್ವಾವಲಂಬಿಯಾಗಿದೆ. ಕಾಲು ಮತ್ತು ಬಾಯಿ ರೋಗದಿಂದ ರಾಸುಗಳನ್ನು ರಕ್ಷಿಸಲು 125 ಕೋಟಿಗೂ ಹೆಚ್ಚು ಡೋಸ್‌ಗಳನ್ನು ನೀಡಲಾಗಿದೆ. ರಾಷ್ಟ್ರೀಯ ಗೋಕುಲ್ ಮಿಷನ್ ಅಡಿ, ತಂತ್ರಜ್ಞಾನವನ್ನು ವಿಸ್ತರಿಸಲಾಗುತ್ತಿದೆ. ಪಶುಸಂಗೋಪನೆಯಲ್ಲಿ ತೊಡಗಿರುವ ರೈತರು ಈಗ ಕಿಸಾನ್ ಕ್ರೆಡಿಟ್ ಕಾರ್ಡ್‌ನಿಂದ ಪ್ರಯೋಜನ ಪಡೆಯುತ್ತಿದ್ದಾರೆ. ಖಾಸಗಿ ಹೂಡಿಕೆ ಪ್ರೋತ್ಸಾಹಿಸಲು, ಪಶುಸಂಗೋಪನಾ ಮೂಲಸೌಕರ್ಯ ಅಭಿವೃದ್ಧಿ ನಿಧಿ ಪ್ರಾರಂಭಿಸಲಾಗಿದೆ. ನಾವು ಗೋವರ್ಧನ್ ಯೋಜನೆ ಜಾರಿಗೆ ತಂದಿದ್ದೇವೆ ಎಂಬುದು ನಿಮಗೆ ತಿಳಿದಿದೆ. ಹಳ್ಳಿಗಳನ್ನು ಸ್ವಚ್ಛವಾಗಿಡಲು ಈ ಯೋಜನೆಯಡಿ ಪಶು ತ್ಯಾಜ್ಯ ಮತ್ತು ಗ್ರಾಮ ತ್ಯಾಜ್ಯವನ್ನು ಬಳಸಬಹುದು. ಹಾಲು ಆದಾಯ ಗಳಿಸುವಂತೆಯೇ, ಗೋಬರ್ (ಗೋವಿನ ಸಗಣಿ) ಸಹ ಆದಾಯ ಗಳಿಸಬಹುದು. ಅನಿಲ ಪೂರೈಕೆಯ ಮೂಲಕ ಗೋವರ್ಧನ್ ಇಂಧನ ಭದ್ರತೆಗೆ ಗಮನಾರ್ಹವಾಗಿ ಕೊಡುಗೆ ನೀಡಬಹುದು. ಇದು ಬಹುಪಯೋಗಿ ಪ್ರಯೋಜನವಾಗಿದೆ, ಹಳ್ಳಿಗಳಿಗೆ ತುಂಬಾ ಉಪಯುಕ್ತವಾಗಿದೆ. ಈ ಯೋಜನೆಗೆ ಆದ್ಯತೆ ನೀಡುವಂತೆ ಮತ್ತು ಉತ್ತೇಜಿಸುವಂತೆ ನಾನು ಎಲ್ಲಾ ರಾಜ್ಯ ಸರ್ಕಾರಗಳನ್ನು ಒತ್ತಾಯಿಸುತ್ತೇನೆ.

ಸ್ನೇಹಿತರೆ,

ಹಿಂದಿನ ಅನುಭವಗಳಿಂದ, ಒಂದೇ ಬೆಳೆಯನ್ನು ಅವಲಂಬಿಸುವುದು ರೈತರಿಗೆ ಅಪಾಯಕಾರಿ ಎಂದು ನಾವು ಕಲಿತಿದ್ದೇವೆ. ಇದು ಆದಾಯದ ಆಯ್ಕೆಗಳನ್ನು ಮಿತಿಗೊಳಿಸುತ್ತದೆ. ಆದ್ದರಿಂದ, ನಾವು ಬೆಳೆ ವೈವಿಧ್ಯೀಕರಣದತ್ತ ಗಮನ ಹರಿಸುತ್ತಿದ್ದೇವೆ. ಇದರ ಜತೆಗೆ, ರಾಷ್ಟ್ರೀಯ ಖಾದ್ಯ ತೈಲಗಳು ಮತ್ತು ದ್ವಿದಳ ಧಾನ್ಯಗಳ ಮಿಷನ್ ಮತ್ತು ರಾಷ್ಟ್ರೀಯ ನೈಸರ್ಗಿಕ ಕೃಷಿ ಮಿಷನ್ ಕೃಷಿ ವಲಯವನ್ನು ಬಲಪಡಿಸುತ್ತಿವೆ.

ಸ್ನೇಹಿತರೆ,

ಕೃಷಿಯು ರಾಜ್ಯ ವಿಷಯವಾಗಿದೆ, ಈ ವಿಷಯದಲ್ಲಿ ರಾಜ್ಯಗಳು ಗಮನಾರ್ಹ ಕೃಷಿ ಬಜೆಟ್‌ಗಳನ್ನು ಹೊಂದಿವೆ ಎಂಬುದು ನಿಮಗೆ ತಿಳಿದಿದೆ. ರಾಜ್ಯಗಳು ತಮ್ಮ ಜವಾಬ್ದಾರಿಗಳನ್ನು ಪೂರೈಸುವಂತೆ ನಾವು ನಿರಂತರವಾಗಿ ಪ್ರೋತ್ಸಾಹಿಸಬೇಕು. ನಾವು ಅವರಿಗೆ ಹೇಗೆ ಸಹಾಯ ಮಾಡಬಹುದು? ನಮ್ಮ ಸಲಹೆಗಳು ಅವರಿಗೆ ಹೇಗೆ ಉಪಯುಕ್ತವಾಗಬಹುದು? ಹಳ್ಳಿಗಳು ಮತ್ತು ರೈತರಿಗೆ ನಿಗದಿಪಡಿಸಿದ ಪ್ರತಿ ರೂಪಾಯಿಯನ್ನು ಸರಿಯಾಗಿ ಬಳಸಿಕೊಳ್ಳಬೇಕು. ಜಿಲ್ಲಾ ಮಟ್ಟದವರೆಗೆ ನಾವು ಬಜೆಟ್ ಪ್ರಸ್ತಾವನೆಗಳನ್ನು ಬಲಪಡಿಸಬೇಕು. ಆಗ ಮಾತ್ರ ಹೊಸ ನೀತಿಗಳು ಗರಿಷ್ಠ ಸಂಖ್ಯೆಯ ಜನರಿಗೆ ಪ್ರಯೋಜನ ನೀಡಬಹುದು.

ಸ್ನೇಹಿತರೆ,

ಇದು ತಂತ್ರಜ್ಞಾನದ ಶತಮಾನ, ಸರ್ಕಾರವು ಕೃಷಿಯಲ್ಲಿ ತಂತ್ರಜ್ಞಾನ ಸಂಸ್ಕೃತಿಯನ್ನು ತರಲು ಒತ್ತು ನೀಡುತ್ತಿದೆ. ಇ-ನ್ಯಾಮ್ ಮೂಲಕ ಮಾರುಕಟ್ಟೆ ಪ್ರವೇಶವನ್ನು ಸಾರ್ವತ್ರೀಕರಣಗೊಳಿಸಲಾಗಿದೆ. ಸರ್ಕಾರವು ಅಗ್ರಿಸ್ಯಾಕ್ ಮೂಲಕ ಕೃಷಿಗಾಗಿ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ ಅಭಿವೃದ್ಧಿಪಡಿಸುತ್ತಿದೆ. ಇದರ ಅಡಿ, ಡಿಜಿಟಲ್ ಗುರುತುಗಳು, ಅಂದರೆ ರೈತ ಐಡಿಗಳನ್ನು ರಚಿಸಲಾಗುತ್ತಿದೆ. ಇಲ್ಲಿಯವರೆಗೆ, ಸುಮಾರು 9 ಕೋಟಿ ರೈತರ ಐಡಿಗಳನ್ನು ರಚಿಸಲಾಗಿದೆ, ಸುಮಾರು 30 ಕೋಟಿ ಭೂ ಭಾಗಗಳ ಡಿಜಿಟಲ್ ಸಮೀಕ್ಷೆ ಮಾಡಲಾಗಿದೆ. ಭಾರತ್-ವಿಸ್ಟಾರ್‌ನಂತಹ ಎಐ ಆಧಾರಿತ ವೇದಿಕೆಗಳು ಸಂಶೋಧನಾ ಸಂಸ್ಥೆಗಳು ಮತ್ತು ರೈತರ ನಡುವಿನ ಅಂತರವನ್ನು ಕಡಿಮೆ ಮಾಡುತ್ತಿವೆ.

ಆದರೆ ಸ್ನೇಹಿತರೆ,

ತಂತ್ರಜ್ಞಾನವು ವ್ಯವಸ್ಥೆಗಳನ್ನು ಅಳವಡಿಸಿಕೊಂಡಾಗ, ಸಂಸ್ಥೆಗಳು ಅದನ್ನು ಸಂಯೋಜಿಸಿದಾಗ ಮತ್ತು ಉದ್ಯಮಿಗಳು ಅದರ ಮೇಲೆ ನಾವೀನ್ಯತೆಗಳನ್ನು ನಿರ್ಮಿಸಿದಾಗ ಮಾತ್ರ ಫಲಿತಾಂಶಗಳನ್ನು ನೀಡುತ್ತದೆ. ಈ ವೆಬಿನಾರ್‌ನಲ್ಲಿ, ನೀವು ಇದಕ್ಕೆ ಸಂಬಂಧಿಸಿದ ಬಲವಾದ ಸಲಹೆಗಳನ್ನು ಪ್ರಸ್ತುತಪಡಿಸಬೇಕು. ನಾವು ತಂತ್ರಜ್ಞಾನವನ್ನು ಹೇಗೆ ಪರಿಣಾಮಕಾರಿಯಾಗಿ ಸಂಯೋಜಿಸಬಹುದು? ಈ ವೆಬಿನಾರ್‌ನಿಂದ ಹೊರಹೊಮ್ಮುವ ಸಲಹೆಗಳು ಈ ದಿಕ್ಕಿನಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ.

ಸ್ನೇಹಿತರೆ,

ನಮ್ಮ ಸರ್ಕಾರ ಗ್ರಾಮೀಣ ಸಮೃದ್ಧಿಗೆ ಬದ್ಧವಾಗಿದೆ. ಪ್ರಧಾನ ಮಂತ್ರಿ ಆವಾಸ್ ಯೋಜನೆ, ಸ್ವಾಮಿತ್ವ ಯೋಜನೆ, ಪ್ರಧಾನ ಮಂತ್ರಿ ಗ್ರಾಮೀಣ ರಸ್ತೆ ಯೋಜನೆ ಮತ್ತು ಸ್ವ-ಸಹಾಯ ಗುಂಪುಗಳಿಗೆ ಆರ್ಥಿಕ ಬೆಂಬಲದಂತಹ ಯೋಜನೆಗಳು ನಿರಂತರವಾಗಿ ಗ್ರಾಮೀಣ ಆರ್ಥಿಕತೆಯನ್ನು ಬಲಪಡಿಸಿವೆ. ನಾವು ಲಖ್ಪತಿ ದೀದಿ ಅಭಿಯಾನದ ಯಶಸ್ಸನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಬೇಕು. ಇಲ್ಲಿಯವರೆಗೆ, ನಾವು ಹಳ್ಳಿಗಳಲ್ಲಿ 3 ಕೋಟಿ ಮಹಿಳೆಯರನ್ನು "ಲಖ್ಪತಿ ದೀದಿಗಳು" ಮಾಡುವಲ್ಲಿ ಯಶಸ್ವಿಯಾಗಿದ್ದೇವೆ. 2029ರ ವೇಳೆಗೆ, ನಾವು ಇನ್ನೂ 3 ಕೋಟಿ ಜನರನ್ನು ಸೇರಿಸುವ ಗುರಿ ಹೊಂದಿದ್ದೇವೆ, ಒಟ್ಟು 6 ಕೋಟಿ ಲಖ್ಪತಿ ದೀದಿಗಳು. ಈ ಗುರಿಯನ್ನು ಹೇಗೆ ವೇಗವಾಗಿ ಸಾಧಿಸಬಹುದು? ನಿಮ್ಮ ಸಲಹೆಗಳು ನಿರ್ಣಾಯಕವಾಗುತ್ತವೆ.

ಸ್ನೇಹಿತರೆ,

ದೇಶದಲ್ಲಿ ದಾಸ್ತುನು ಅಥವಾಸಂಗ್ರಹಣೆಗಾಗಿ ಬೃಹತ್ ಅಭಿಯಾನ ನಡೆಯುತ್ತಿದೆ. ಲಕ್ಷಾಂತರ ಗೋದಾಮುಗಳನ್ನು ನಿರ್ಮಿಸಲಾಗುತ್ತಿದೆ. ಸಂಗ್ರಹಣೆಯ ಹೊರತಾಗಿ, ಕೃಷಿ ಉದ್ಯಮಿಗಳು ಸಂಸ್ಕರಣೆ, ಪೂರೈಕೆ ಸರಪಳಿಗಳು, ಕೃಷಿ ತಂತ್ರಜ್ಞಾನ, ಕೃಷಿ-ಫಿಹಣಕಾಸು ತಂತ್ರಜ್ಞಾನ ಮತ್ತು ರಫ್ತುಗಳಲ್ಲಿ ನಾವೀನ್ಯತೆ ಮತ್ತು ಹೂಡಿಕೆಯನ್ನು ಹೆಚ್ಚಿಸಬೇಕು. ಇಂದಿನ ಚರ್ಚೆಗಳು ಗ್ರಾಮೀಣ ಆರ್ಥಿಕತೆಯನ್ನು ಹೊಸ ಶಕ್ತಿಯೊಂದಿಗೆ ಚೈತನ್ಯಗೊಳಿಸುತ್ತದೆ ಎಂಬ ವಿಶ್ವಾಸ ನನಗಿದೆ. ಈ ವೆಬಿನಾರ್‌ಗಾಗಿ ನಿಮ್ಮೆಲ್ಲರಿಗೂ ನನ್ನ ಶುಭಾಶಯಗಳು, ಈ ಬಜೆಟ್ ಅನ್ನು ಯಶಸ್ವಿಗೊಳಿಸುವಲ್ಲಿ ಮತ್ತು ಪ್ರತಿಯೊಂದು ಹಳ್ಳಿಯನ್ನು ತಲುಪುವಲ್ಲಿ ತಳಮಟ್ಟದ ವಿಚಾರಗಳು ಪ್ರಮುಖ ಪಾತ್ರ ವಹಿಸುತ್ತವೆ ಎಂದು ನಾನು ಸದೃಢವಾಗಿ ನಂಬುತ್ತೇನೆ. ನಿಮ್ಮೆಲ್ಲರಿಗೂ ಶುಭಾಶಯಗಳು.

ತುಂಬು ಧನ್ಯವಾದಗಳು. ನಮಸ್ಕಾರ!

 

*****

 


(ಪ್ರಕಟಣೆ ಐ.ಡಿ.: 2236688) ವಿಸಿಟರ್ ಕೌಂಟರ್ : 20
ಪ್ರಕಟಣೆಯನ್ನು ಇದರಲ್ಲಿ ಓದಿ: हिन्दी , Manipuri , Gujarati , Odia , Assamese , Bengali , Bengali-TR , Telugu , English , Urdu , Marathi , Punjabi