ಉಪರಾಷ್ಟ್ರಪತಿಗಳ ಕಾರ್ಯಾಲಯ
azadi ka amrit mahotsav

ಉಪರಾಷ್ಟ್ರಪತಿ ಅವರು ಬೆಳಗಾವಿಯ ಯಡೂರಿನ ಶ್ರೀ ವೀರಭದ್ರೇಶ್ವರ ದೇವಸ್ಥಾನದ ರಾಜಗೋಪುರ ಉದ್ಘಾಟನೆ, ಕಳಸಾರೋಹಣ ಮತ್ತು ಮಹಾಕುಂಭಾಭಿಷೇಕ ಮಹೋತ್ಸವದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡರು


ಹಿಂದೂ ಪ್ರಜ್ಞೆಯು ಕೇವಲ ಆಚರಣೆಗಳಿಗೆ ಸೀಮಿತವಾಗಿಲ್ಲ, ಅದೊಂದು ಜೀವನ ವಿಧಾನ: ಉಪರಾಷ್ಟ್ರಪತಿ

ಆಧ್ಯಾತ್ಮಿಕ, ಶೈಕ್ಷಣಿಕ, ಸಾಂಸ್ಕೃತಿಕ ಮತ್ತು ಸಾಮಾಜಿಕ ಉನ್ನತಿಗೆ ವೀರಶೈವ ಲಿಂಗಾಯತ ಪರಂಪರೆಯ ಮಹತ್ವದ ಕೊಡುಗೆಯನ್ನು ಉಪರಾಷ್ಟ್ರಪತಿಯವರು ಒತ್ತಿ ಹೇಳಿದರು

ಭಾರತದ ಆಧ್ಯಾತ್ಮಿಕ ದೃಷ್ಟಿಕೋನವು ಪ್ರಕೃತಿಯಲ್ಲಿ ಮತ್ತು ಪ್ರತಿಯೊಬ್ಬ ಮನುಷ್ಯನಲ್ಲಿ ದೈವತ್ವವನ್ನು ಕಾಣುತ್ತದೆ: ಉಪರಾಷ್ಟ್ರಪತಿ

ಸನಾತನ ಧರ್ಮವು ಕಾಲಕಾಲಕ್ಕೆ ಪರೀಕ್ಷಿಸಲ್ಪಡಬಹುದು, ಆದರೆ ಅದನ್ನು ಎಂದಿಗೂ ಅಳಿಸಲು ಸಾಧ್ಯವಿಲ್ಲ: ಉಪರಾಷ್ಟ್ರಪತಿ

ಪ್ರಧಾನಮಂತ್ರಿಯವರ “ವಿಕಾಸದ ಜೊತೆಗೆ ಪರಂಪರೆ” (ವಿಕಾಸ್ ಭಿ, ವಿರಾಸತ್ ಭಿ) ಎಂಬ ದೃಷ್ಟಿಕೋನವು ಕೇವಲ ಒಂದು ಹೇಳಿಕೆಯಲ್ಲ; ಇದು ಭಾರತದ ಅಭಿವೃದ್ಧಿ ಮತ್ತು ಪರಂಪರೆ ಜೊತೆಯಾಗಿ ಸಾಗಬೇಕು ಎಂಬುದನ್ನು ಪ್ರತಿಪಾದಿಸುತ್ತದೆ: ಉಪರಾಷ್ಟ್ರಪತಿ

ಪವಿತ್ರ ಸ್ಥಳಗಳ ಪುನರುಜ್ಜೀವನವು ಕೇವಲ ವಾಸ್ತುಶಿಲ್ಪಕ್ಕೆ ಸಂಬಂಧಿಸಿದ್ದಲ್ಲ, ಅದು ಸಾಂಸ್ಕೃತಿಕ ಆತ್ಮವಿಶ್ವಾಸ ಮತ್ತು ಆಧ್ಯಾತ್ಮಿಕ ಜಾಗೃತಿಯನ್ನು ಮರುಸ್ಥಾಪಿಸುವುದಾಗಿದೆ: ಉಪರಾಷ್ಟ್ರಪತಿ

ಪ್ರಕಟಣಾ ದಿನಾಂಕ: 05 MAR 2026 12:45PM by PIB Bengaluru

ಉಪರಾಷ್ಟ್ರಪತಿ ಶ್ರೀ ಸಿ. ಪಿ. ರಾಧಾಕೃಷ್ಣನ್ ಅವರು ಇಂದು ಕರ್ನಾಟಕದ ಬೆಳಗಾವಿ ಜಿಲ್ಲೆಯ ಯಡೂರಿನ ಶ್ರೀ ವೀರಭದ್ರೇಶ್ವರ ದೇವಸ್ಥಾನದ ರಾಜಗೋಪುರ ಉದ್ಘಾಟನೆ, ಕಳಸಾರೋಹಣ ಮತ್ತು ಮಹಾಕುಂಭಾಭಿಷೇಕ ಮಹೋತ್ಸವದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದರು.

ಯಡೂರು ಶ್ರೀಕ್ಷೇತ್ರದಲ್ಲಿ ನೆರೆದಿದ್ದ ಸಭಿಕರನ್ನು ಉದ್ದೇಶಿಸಿ ಮಾತನಾಡಿದ ಉಪರಾಷ್ಟ್ರಪತಿಯವರು, ಈ ಸಂದರ್ಭವನ್ನು ಆಧ್ಯಾತ್ಮಿಕ ಪುನರುತ್ಥಾನ ಮತ್ತು ನಾಗರಿಕತೆಯ ಪುನಶ್ಚೇತನದ ಕ್ಷಣ ಎಂದು ಬಣ್ಣಿಸಿದರು. ಭಾರತ ಎಂಬುದು ಕೇವಲ ಒಂದು ರಾಷ್ಟ್ರವಲ್ಲ, ಅದೊಂದು ಜೀವಂತ ನಾಗರಿಕತೆ; ಸಿಂಧೂ ಕಣಿವೆಯಿಂದ ಕನ್ಯಾಕುಮಾರಿಯವರೆಗೆ ಹರಿಯುತ್ತಿರುವ ಅವಿಚ್ಛಿನ್ನ ಪ್ರಜ್ಞೆಯ ಪ್ರವಾಹ ಎಂದು ಉಪರಾಷ್ಟ್ರಪತಿಯವರು ಬಣ್ಣಿಸಿದರು. ವೇದಗಳ ಶಾಶ್ವತ ಜ್ಞಾನವು ಮೊದಲು ಮೊಳಗಿದ ಪವಿತ್ರ ಭೂಮಿ ಇದಾಗಿದ್ದು, ಭಗವದ್ಗೀತೆಯ ಗಹನವಾದ ಸಂದೇಶವು ಮಾನವಕುಲಕ್ಕೆ ಧೈರ್ಯದಿಂದ ಕರ್ತವ್ಯ ನಿರ್ವಹಿಸಲು, ಧರ್ಮದ ಹಾದಿಯಲ್ಲಿ ಬದುಕಲು ಮತ್ತು ಅಚಲ ನಂಬಿಕೆಯೊಂದಿಗೆ ಶರಣಾಗಲು ಇಂದಿಗೂ ದಾರಿದೀಪವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು

ಹಿಂದೂ ಪ್ರಜ್ಞೆಯು ಕೇವಲ ಆಚರಣೆಗಳಿಗೆ ಸೀಮಿತವಾಗಿಲ್ಲ, ಅದೊಂದು ಜೀವನ ವಿಧಾನ ಎಂದು ಹೇಳಿದ ಅವರು, "ವಸುಧೈವ ಕುಟುಂಬಕಂ" (ಜಗತ್ತೇ ಒಂದು ಕುಟುಂಬ) ಎಂಬ ಕಾಲಾತೀತ ತತ್ವವನ್ನು ಮತ್ತು ಪ್ರಕೃತಿಯಲ್ಲಿ ಹಾಗೂ ಪ್ರತಿಯೊಬ್ಬ ಮನುಷ್ಯನಲ್ಲಿ ದೈವತ್ವವನ್ನು ಕಾಣುವ ಭಾರತದ ಆಧ್ಯಾತ್ಮಿಕ ದೃಷ್ಟಿಕೋನವನ್ನು ಉಲ್ಲೇಖಿಸಿದರು.

ವೀರಶೈವ ಲಿಂಗಾಯತ ಪರಂಪರೆಯನ್ನು ಉಲ್ಲೇಖಿಸಿದ ಉಪರಾಷ್ಟ್ರಪತಿಯವರು, ಕರ್ನಾಟಕ ಮತ್ತು ನೆರೆಯ ಮಹಾರಾಷ್ಟ್ರದಲ್ಲಿ ಆಧ್ಯಾತ್ಮಿಕ, ಶೈಕ್ಷಣಿಕ, ಸಾಂಸ್ಕೃತಿಕ ಮತ್ತು ಸಾಮಾಜಿಕ ಉನ್ನತಿಗೆ ಈ ಪರಂಪರೆಯು ನೀಡಿದ ಮಹತ್ವದ ಕೊಡುಗೆಯನ್ನು ಒತ್ತಿ ಹೇಳಿದರು. ವೀರಶೈವ ಮಠಗಳು ಮತ್ತು ದೇವಾಲಯಗಳು ನಂಬಿಕೆ, ಸೇವೆ ಮತ್ತು ಸಾಮಾಜಿಕ ಸಾಮರಸ್ಯದ ಮೌಲ್ಯಗಳನ್ನು ಪೋಷಿಸುವಲ್ಲಿ ಪರಿವರ್ತನಾತ್ಮಕ ಪಾತ್ರವನ್ನು ವಹಿಸಿವೆ ಎಂದು ಅವರು ಹೇಳಿದರು.

ಕಾಲಕ್ರಮೇಣ ಮರೆಯಾಗಿದ್ದ ಪವಿತ್ರ ಸ್ಥಳವನ್ನು ಮರುಶೋಧಿಸಿ, ಪುನರುಜ್ಜೀವನಗೊಳಿಸುವ ಮೂಲಕ ಸನಾತನ ಧರ್ಮದ ಶಾಶ್ವತ ಜ್ಯೋತಿಯನ್ನು ಮರುಸೃಷ್ಟಿಸಿದ ಶಿವಯೋಗಿ ಶ್ರೀ ಕಾಡಸಿದ್ಧೇಶ್ವರ ಸ್ವಾಮೀಜಿಯವರ ಆಧ್ಯಾತ್ಮಿಕ ದೃಷ್ಟಿಕೋನಕ್ಕೆ ಉಪರಾಷ್ಟ್ರಪತಿಯವರ ಗೌರವ ಸಲ್ಲಿಸಿದರು. ಸನಾತನ ಧರ್ಮವು ಕಾಲಕಾಲಕ್ಕೆ ಪರೀಕ್ಷಿಸಲ್ಪಡಬಹುದು, ಆದರೆ ಅದನ್ನು ಎಂದಿಗೂ ಅಳಿಸಲು ಸಾಧ್ಯವಿಲ್ಲ ಎಂದು ಅವರು ಹೇಳಿದರು.

ದೈನಂದಿನ ಪೂಜೆ, ಆಚರಣೆಗಳು, ನವೀಕರಣ ಕಾರ್ಯಗಳು ಮತ್ತು ಆಧ್ಯಾತ್ಮಿಕ ಸೇವೆಯನ್ನು ಸಂರಕ್ಷಿಸುವಲ್ಲಿ ಶ್ರೀ ಕಾಡಸಿದ್ಧೇಶ್ವರ ಮಠದ ಎಲ್ಲ ಮಠಾಧೀಶರು ಮಾಡುತ್ತಿರುವ ಅವಿರತ ಶ್ರಮವನ್ನು ಅವರು ಶ್ಲಾಘಿಸಿದರು.

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಪ್ರತಿಪಾದಿಸಿದ “ವಿಕಾಸ್ ಭಿ, ವಿರಾಸತ್ ಭಿ” (ವಿಕಾಸದ ಜೊತೆಗೆ ಪರಂಪರೆ) ಎಂಬ ದೃಷ್ಟಿಕೋನವನ್ನು ಉಲ್ಲೇಖಿಸಿದ ಉಪರಾಷ್ಟ್ರಪತಿಯವರು, ಭಾರತದ ಅಭಿವೃದ್ಧಿ ಮತ್ತು ಪರಂಪರೆ ಜೊತೆಜೊತೆಯಾಗಿ ಸಾಗಬೇಕು ಎಂದು ಹೇಳಿದರು. ಭಾರತವು ಇಂದು ತಾಂತ್ರಿಕವಾಗಿ ಮುಂದುವರಿದ, ಆರ್ಥಿಕವಾಗಿ ಸದೃಢವಾದ ಮತ್ತು ಜಾಗತಿಕವಾಗಿ ಪ್ರಭಾವಶಾಲಿ ರಾಷ್ಟ್ರವಾಗಿ ಪ್ರಗತಿ ಹೊಂದುತ್ತಿದೆ, ಅದೇ ಸಮಯದಲ್ಲಿ ತನ್ನ ನಾಗರಿಕತೆಯ ಮೌಲ್ಯಗಳಲ್ಲಿ ದೃಢವಾಗಿ ಬೇರೂರಿದೆ ಎಂದು ಅವರು ಹೇಳಿದರು.

ರಾಜಗೋಪುರದ ಉದ್ಘಾಟನೆಯನ್ನು ನಂಬಿಕೆಯ ಪುನರುಚ್ಚಾರ ಮತ್ತು ಸಂಪ್ರದಾಯದ ಮುಂದುವರಿಕೆ ಎಂದು ಬಣ್ಣಿಸಿದ ಉಪರಾಷ್ಟ್ರಪತಿಯವರು, ಪವಿತ್ರ ಸ್ಥಳಗಳ ಪುನರುಜ್ಜೀವನವು ಕೇವಲ ವಾಸ್ತುಶಿಲ್ಪಕ್ಕೆ ಸಂಬಂಧಿಸಿದ್ದಲ್ಲ, ಅದು ಸಾಂಸ್ಕೃತಿಕ ಆತ್ಮವಿಶ್ವಾಸ ಮತ್ತು ಆಧ್ಯಾತ್ಮಿಕ ಜಾಗೃತಿಯನ್ನು ಮರುಸ್ಥಾಪಿಸುವುದಾಗಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಕರ್ನಾಟಕದ ರಾಜ್ಯಪಾಲರಾದ ಶ್ರೀ ಥಾವರಚಂದ್ ಗೆಹ್ಲೋಟ್; ಕರ್ನಾಟಕ ಸರ್ಕಾರದ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲಸೌಕರ್ಯ ಅಭಿವೃದ್ಧಿ ಸಚಿವರಾದ ಶ್ರೀ ಎಂ ಬಿ ಪಾಟೀಲ್; ಶ್ರೀಶೈಲ ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ; ರಾಜ್ಯಸಭಾ ಸದಸ್ಯರಾದ ಶ್ರೀ ಈರಣ್ಣ ಕಡಾಡಿ; ಧಾರ್ಮಿಕ ಮುಖಂಡರು ಮತ್ತು ಇತರ ಗಣ್ಯರು ಉಪಸ್ಥಿತರಿದ್ದರು. ಅಪಾರ ಸಂಖ್ಯೆಯ ಭಕ್ತಾದಿಗಳು ಸಮಾರಂಭದಲ್ಲಿ ಭಾಗವಹಿಸಿದ್ದರು.

 

*****


(ಪ್ರಕಟಣೆ ಐ.ಡಿ.: 2235483) ವಿಸಿಟರ್ ಕೌಂಟರ್ : 78
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , हिन्दी , Bengali , Bengali-TR , Gujarati , Tamil , Telugu , Malayalam