ಸಂಪುಟ
ಭಾರತದ ಸ್ಟಾರ್ಟ್ ಅಪ್ ಪರಿಸರ ವ್ಯವಸ್ಥೆಗಾಗಿ ವೆಂಚರ್ ಕ್ಯಾಪಿಟಲ್ ಕ್ರೋಢೀಕರಿಸಲು ಸ್ಟಾರ್ಟ್ ಅಪ್ ಇಂಡಿಯಾ ಫಂಡ್ ಆಫ್ ಫಂಡ್ಸ್ 2.0 ಕ್ಕೆ ಕೇಂದ್ರ ಸಚಿವ ಸಂಪುಟದ ಅನುಮೋದನೆ
ಡೀಪ್ ಟೆಕ್, ತಂತ್ರಜ್ಞಾನ ಆಧಾರಿತ ನವೀನ ಉತ್ಪಾದನಾ ಸ್ಟಾರ್ಟ್ ಅಪ್ ಗಳು ಮತ್ತು ಆರಂಭಿಕ ಬೆಳವಣಿಗೆಯ ಹಂತದ ಸ್ಟಾರ್ಟ್‌ಅಪ್‌ಗಳನ್ನು ಬೆಂಬಲಿಸಲು ₹10,000 ಕೋಟಿ ನಿಧಿ
ಪ್ರಕಟಣಾ ದಿನಾಂಕ:
14 FEB 2026 1:11PM by PIB Bengaluru
ಭಾರತದ ಬೆಳೆಯುತ್ತಿರುವ ಸ್ಟಾರ್ಟ್ ಅಪ್ ಪರಿಸರ ವ್ಯವಸ್ಥೆಗೆ ಭಾರಿ ಉತ್ತೇಜನ ನೀಡುವ ಸಲುವಾಗಿ, ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯು, ದೇಶದ ಸ್ಟಾರ್ಟ್ ಅಪ್ ಗಳಿಗಾಗಿ ವೆಂಚರ್ ಕ್ಯಾಪಿಟಲ್ ಕ್ರೋಢೀಕರಿಸುವ ಉದ್ದೇಶದಿಂದ ₹10,000 ಕೋಟಿಗಳ ಒಟ್ಟು ನಿಧಿಯೊಂದಿಗೆ 'ಸ್ಟಾರ್ಟ್ ಅಪ್ ಇಂಡಿಯಾ ಫಂಡ್ ಆಫ್ ಫಂಡ್ಸ್ 2.0' (Startup India FoF 2.0) ಸ್ಥಾಪನೆಗೆ ಅನುಮೋದನೆ ನೀಡಿದೆ.
ದೀರ್ಘಾವಧಿಯ ದೇಶೀಯ ಬಂಡವಾಳವನ್ನು ಸಜ್ಜುಗೊಳಿಸುವ ಮೂಲಕ, ವೆಂಚರ್ ಕ್ಯಾಪಿಟಲ್ ಪರಿಸರ ವ್ಯವಸ್ಥೆಯನ್ನು ಬಲಪಡಿಸುವ ಮೂಲಕ ಮತ್ತು ದೇಶಾದ್ಯಂತ ನಾವೀನ್ಯತೆ ಆಧಾರಿತ ಉದ್ಯಮಶೀಲತೆಯನ್ನು ಬೆಂಬಲಿಸುವ ಮೂಲಕ ಭಾರತದ ಸ್ಟಾರ್ಟ್‌ಅಪ್ ಪ್ರಯಾಣದ ಮುಂದಿನ ಹಂತವನ್ನು ವೇಗಗೊಳಿಸಲು ಈ ಯೋಜನೆಯನ್ನು ರೂಪಿಸಲಾಗಿದೆ.
'ಸ್ಟಾರ್ಟ್ ಅಪ್ ಇಂಡಿಯಾ' ಉಪಕ್ರಮದ ಅಡಿಯಲ್ಲಿ ಪ್ರಾರಂಭಿಸಲಾದ 'ಸ್ಟಾರ್ಟ್ ಅಪ್ ಇಂಡಿಯಾ FoF 2.0', ಭಾರತವನ್ನು ವಿಶ್ವದ ಪ್ರಮುಖ ಸ್ಟಾರ್ಟ್ ಅಪ್ ರಾಷ್ಟ್ರಗಳಲ್ಲಿ ಒಂದನ್ನಾಗಿ ಮಾಡಲು ಸುಮಾರು ಒಂದು ದಶಕದಿಂದ ನಡೆಯುತ್ತಿರುವ ನಿರಂತರ ಪ್ರಯತ್ನಗಳ ಮುಂದಿನ ಹಂತವಾಗಿದೆ. 2016 ರಲ್ಲಿ ಸ್ಟಾರ್ಟ್ ಅಪ್ ಇಂಡಿಯಾ ಪ್ರಾರಂಭವಾದಾಗಿನಿಂದ, ಭಾರತದ ಸ್ಟಾರ್ಟ್‌ಅಪ್ ಪರಿಸರ ವ್ಯವಸ್ಥೆಯು ಅಸಾಧಾರಣ ಬದಲಾವಣೆಗೆ ಸಾಕ್ಷಿಯಾಗಿದೆ. ಆಗ 500 ಕ್ಕಿಂತ ಕಡಿಮೆ ಇದ್ದ ಸ್ಟಾರ್ಟ್‌ಅಪ್‌ಗಳ ಸಂಖ್ಯೆ ಇಂದು ಕೈಗಾರಿಕೆ ಮತ್ತು ಆಂತರಿಕ ವ್ಯಾಪಾರ ಉತ್ತೇಜನ ಇಲಾಖೆ (DPIIT) ಮಾನ್ಯತೆ ಪಡೆದ 2 ಲಕ್ಷಕ್ಕೂ ಅಧಿಕ ಸ್ಟಾರ್ಟ್ ಅಪ್‌ಗಳಿಗೆ ಬೆಳೆದಿದೆ. ವಿಶೇಷವೆಂದರೆ, 2025 ರ ವರ್ಷವು ಇದುವರೆಗಿನ ಅತಿ ಹೆಚ್ಚು ವಾರ್ಷಿಕ ಸ್ಟಾರ್ಟ್ ಅಪ್ ನೋಂದಣಿಗಳಿಗೆ ಸಾಕ್ಷಿಯಾಗಿದೆ.
ಸ್ಟಾರ್ಟ್ ಅಪ್ ಗಳಿಗಾಗಿನ ಫಂಡ್ ಆಫ್ ಫಂಡ್ಸ್ 1.0 ರ ಯಶಸ್ಸಿನ ಮೇಲೆ ನಿರ್ಮಾಣ:
ಸ್ಟಾರ್ಟ್ ಅಪ್ ಇಂಡಿಯಾ FoF 2.0 ಯೋಜನೆಯು, 2016ರಲ್ಲಿ ಧನಸಹಾಯದ ಕೊರತೆಯನ್ನು ನೀಗಿಸಲು ಮತ್ತು ಸ್ಟಾರ್ಟ್ ಅಪ್ ಗಳಿಗಾಗಿ ದೇಶೀಯ ಸಾಹಸೋದ್ಯಮ ಬಂಡವಾಳ (Venture Capital) ಮಾರುಕಟ್ಟೆಯನ್ನು ಉತ್ತೇಜಿಸಲು ಪ್ರಾರಂಭಿಸಲಾದ 'ಫಂಡ್ ಆಫ್ ಫಂಡ್ಸ್ ಫಾರ್ ಸ್ಟಾರ್ಟ್‌ಅಪ್ಸ್' (FFS 1.0) ನ ಪ್ರಬಲ ಕಾರ್ಯಕ್ಷಮತೆಯನ್ನು ಆಧರಿಸಿದೆ.
FFS 1.0 ಅಡಿಯಲ್ಲಿ, ₹10,000 ಕೋಟಿಗಳ ಸಂಪೂರ್ಣ ನಿಧಿಯನ್ನು 145 ಪರ್ಯಾಯ ಹೂಡಿಕೆ ನಿಧಿಗಳಿಗೆ ವಿನಿಯೋಗಿಸಲಾಗಿದೆ. ಈ ಬೆಂಬಲಿತ AIF ಗಳು ದೇಶಾದ್ಯಂತ ಕೃಷಿ, ಕೃತಕ ಬುದ್ಧಿಮತ್ತೆ (AI), ರೋಬೋಟಿಕ್ಸ್, ಆಟೋಮೊಬೈಲ್, ಕ್ಲೀನ್ ಟೆಕ್, ಗ್ರಾಹಕ ಸರಕು ಮತ್ತು ಸೇವೆಗಳು, ಇ-ಕಾಮರ್ಸ್, ಶಿಕ್ಷಣ, ಫಿನ್‌ಟೆಕ್, ಆಹಾರ ಮತ್ತು ಪಾನೀಯಗಳು, ಆರೋಗ್ಯ ಸೇವೆ, ಉತ್ಪಾದನೆ, ಬಾಹ್ಯಾಕಾಶ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಸೇರಿದಂತೆ ವಿವಿಧ ಕ್ಷೇತ್ರಗಳ 1,370 ಕ್ಕೂ ಹೆಚ್ಚು ಸ್ಟಾರ್ಟ್ ಅಪ್ ಗಳಲ್ಲಿ ₹25,500 ಕೋಟಿಗೂ ಹೆಚ್ಚು ಹೂಡಿಕೆ ಮಾಡಿವೆ.
ಮೊದಲ ಬಾರಿಯ ಉದ್ಯಮಿಗಳನ್ನು ಪ್ರೋತ್ಸಾಹಿಸಲು, ಖಾಸಗಿ ಬಂಡವಾಳವನ್ನು ಆಕರ್ಷಿಸಲು ಮತ್ತು ಭಾರತದ ಸಾಹಸೋದ್ಯಮ ಬಂಡವಾಳ ಪರಿಸರ ವ್ಯವಸ್ಥೆಗೆ ಬಲವಾದ ಅಡಿಪಾಯವನ್ನು ನಿರ್ಮಿಸುವಲ್ಲಿ FFS 1.0 ಪ್ರಮುಖ ಪಾತ್ರ ವಹಿಸಿದೆ.
ಯೋಜನೆಯ ಪ್ರಮುಖ ಲಕ್ಷಣಗಳು:
ಮೊದಲ ಹಂತವು ಪರಿಸರ ವ್ಯವಸ್ಥೆಯನ್ನು ನಿರ್ಮಿಸಿದರೆ, ಸ್ಟಾರ್ಟ್ ಅಪ್ ಇಂಡಿಯಾ FoF 2.0 ಭಾರತೀಯ ನಾವೀನ್ಯತೆಯನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಲು ವಿನ್ಯಾಸಗೊಳಿಸಲಾಗಿದೆ. ಹೊಸ ನಿಧಿಯು ಈ ಕೆಳಗಿನವುಗಳನ್ನು ಬೆಂಬಲಿಸಲು ಉದ್ದೇಶಿತ, ವಿಭಾಗೀಯ ಧನಸಹಾಯ ವಿಧಾನವನ್ನು ಹೊಂದಿರುತ್ತದೆ:
a. ಡೀಪ್ ಟೆಕ್ ಮತ್ತು ತಂತ್ರಜ್ಞಾನ ಆಧಾರಿತ ನವೀನ ಉತ್ಪಾದನೆ: ದೀರ್ಘಕಾಲದ, ತಾಳ್ಮೆಯ ಬಂಡವಾಳದ ಅಗತ್ಯವಿರುವ ಉನ್ನತ ತಂತ್ರಜ್ಞಾನದ ಕ್ಷೇತ್ರಗಳಲ್ಲಿನ ಮಹತ್ವದ ಆವಿಷ್ಕಾರಗಳಿಗೆ ಆದ್ಯತೆ ನೀಡುವುದು.
b. ಆರಂಭಿಕ ಬೆಳವಣಿಗೆಯ ಹಂತದ ಸಂಸ್ಥಾಪಕರ ಸಬಲೀಕರಣ: ಹೊಸ ಮತ್ತು ನವೀನ ಆಲೋಚನೆಗಳಿಗೆ ಸುರಕ್ಷಾ ಜಾಲವನ್ನು ಒದಗಿಸುವುದು, ಧನಸಹಾಯದ ಕೊರತೆಯಿಂದಾಗಿ ಆರಂಭಿಕ ಹಂತದ ವೈಫಲ್ಯಗಳನ್ನು ಕಡಿಮೆ ಮಾಡುವುದು.
c. ರಾಷ್ಟ್ರೀಯ ವ್ಯಾಪ್ತಿ: ಪ್ರಮುಖ ಮೆಟ್ರೋ ನಗರಗಳ ಆಚೆಗೂ ಹೂಡಿಕೆಯನ್ನು ಉತ್ತೇಜಿಸುವುದು, ಇದರಿಂದ ದೇಶದ ಮೂಲೆ ಮೂಲೆಗಳಲ್ಲೂ ನಾವೀನ್ಯತೆ ಬೆಳೆಯುತ್ತದೆ.
d. ಹೆಚ್ಚಿನ ಅಪಾಯದ ಬಂಡವಾಳದ ಕೊರತೆಯನ್ನು ನೀಗಿಸಲು ವಿನ್ಯಾಸಗೊಳಿಸಲಾಗಿದೆ: ಸ್ವಾವಲಂಬನೆಗೆ ಮತ್ತು ಆರ್ಥಿಕ ಬೆಳವಣಿಗೆಯನ್ನು ಹೆಚ್ಚಿಸಲು ಪ್ರಮುಖವಾಗಿರುವ ಆದ್ಯತೆಯ ಕ್ಷೇತ್ರಗಳಿಗೆ ಹೆಚ್ಚಿನ ಬಂಡವಾಳವನ್ನು ನಿರ್ದೇಶಿಸುವುದು.
e. ಭಾರತದ ದೇಶೀಯ ಸಾಹಸೋದ್ಯಮ ಬಂಡವಾಳದ ನೆಲೆಯನ್ನು ಬಲಪಡಿಸುವುದು, ವಿಶೇಷವಾಗಿ ದೇಶೀಯ ಹೂಡಿಕೆಯ ವಾತಾವರಣವನ್ನು ಮತ್ತಷ್ಟು ಉತ್ತೇಜಿಸಲು ಸಣ್ಣ ನಿಧಿಗಳನ್ನು ಬಲಪಡಿಸುವುದು.
ಸ್ಟಾರ್ಟ್ ಅಪ್ ಇಂಡಿಯಾ ಫಂಡ್ ಆಫ್ ಫಂಡ್ಸ್ 2.0 ಭಾರತದ ಆರ್ಥಿಕ ಪಥವನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸುವ ಮತ್ತು ಪರಿವರ್ತಕ ಪ್ರಭಾವಕ್ಕೆ ಕಾರಣವಾಗುವ ನಿರೀಕ್ಷೆಯಿದೆ.
ಭಾರತದ ನಾವೀನ್ಯತೆ ಆಧಾರಿತ ಬೆಳವಣಿಗೆಯ ಕಾರ್ಯಸೂಚಿಯನ್ನು ಮುನ್ನಡೆಸುವಲ್ಲಿ ಸ್ಟಾರ್ಟ್‌ಅಪ್ ಇಂಡಿಯಾ ಫಂಡ್ ಆಫ್ ಫಂಡ್ಸ್ 2.0 ನಿರ್ಣಾಯಕ ಪಾತ್ರ ವಹಿಸುವ ನಿರೀಕ್ಷೆಯಿದೆ. ಜಾಗತಿಕವಾಗಿ ಸ್ಪರ್ಧಾತ್ಮಕವಾದ ತಂತ್ರಜ್ಞಾನಗಳು, ಉತ್ಪನ್ನಗಳು ಮತ್ತು ಪರಿಹಾರಗಳನ್ನು ನಿರ್ಮಿಸುವ ಸ್ಟಾರ್ಟ್‌ಅಪ್‌ಗಳನ್ನು ಬೆಂಬಲಿಸುವ ಮೂಲಕ, ಈ ನಿಧಿಯು ಭಾರತದ ಆರ್ಥಿಕ ಸ್ಥಿತಿಸ್ಥಾಪಕತ್ವವನ್ನು ಬಲಪಡಿಸಲು, ಉತ್ಪಾದನಾ ಸಾಮರ್ಥ್ಯಗಳನ್ನು ಹೆಚ್ಚಿಸಲು, ಉತ್ತಮ ಗುಣಮಟ್ಟದ ಉದ್ಯೋಗಗಳನ್ನು ಸೃಷ್ಟಿಸಲು ಮತ್ತು ಭಾರತವನ್ನು ಜಾಗತಿಕ ನಾವೀನ್ಯತೆಯ ಕೇಂದ್ರವಾಗಿ ರೂಪಿಸಲು ಕೊಡುಗೆ ನೀಡುತ್ತದೆ.
'ವಿಕಸಿತ ಭಾರತ @ 2047' ರ ರಾಷ್ಟ್ರೀಯ ದೃಷ್ಟಿಕೋನಕ್ಕೆ ಅನುಗುಣವಾಗಿ, ಈ ನಿಧಿಯು ಉದ್ಯಮಿಗಳನ್ನು ಸಬಲೀಕರಣಗೊಳಿಸಲು, ನಾವೀನ್ಯತೆಯನ್ನು ಉತ್ತೇಜಿಸಲು ಮತ್ತು ಭಾರತದ ಸ್ಟಾರ್ಟ್‌ಅಪ್ ಪರಿಸರ ವ್ಯವಸ್ಥೆಯ ಸಂಪೂರ್ಣ ಸಾಮರ್ಥ್ಯವನ್ನು ಹೊರತರಲು ಸರ್ಕಾರದ ನಿರಂತರ ಬದ್ಧತೆಯನ್ನು ಪ್ರತಿನಿಧಿಸುತ್ತದೆ.
*****
(ಪ್ರಕಟಣೆ ಐ.ಡಿ.: 2228053)
ವಿಸಿಟರ್ ಕೌಂಟರ್ : 14
ಪ್ರಕಟಣೆಯನ್ನು ಇದರಲ್ಲಿ ಓದಿ:
Malayalam
,
English
,
Urdu
,
हिन्दी
,
Marathi
,
Assamese
,
Bengali
,
Manipuri
,
Punjabi
,
Gujarati
,
Odia
,
Telugu