ರೈಲ್ವೇ ಸಚಿವಾಲಯ
ಮುಂಬೈ-ಅಹಮದಾಬಾದ್ ಬುಲೆಟ್ ರೈಲು ಯೋಜನೆಯ ಅನುಭವ ಭಾರತದಲ್ಲಿ ಭವಿಷ್ಯದ ಹೈಸ್ಪೀಡ್ ರೈಲ್ವೆ ಜಾಲಕ್ಕೆ ಭದ್ರ ಬುನಾದಿ
ಭಾರಿ ನಿರ್ಮಾಣ ಯಾಂತ್ರೀಕತೆಯಲ್ಲಿ ದೇಶೀಯತೆ, ದೇಶೀಯವಾಗಿ ನಿರ್ಮಿಸಿದ ಸ್ಲ್ಯಾಬ್ ಟ್ರ್ಯಾಕ್ ಬಿಡಿ ಭಾಗಗಳು ಮತ್ತು ವಿಶೇಷ ಟ್ರ್ಯಾಕ್ ಯಂತ್ರಗಳಿಂದ ಭಾರತದ ದೇಶೀಯ ಉತ್ಪಾದನಾ ಸಾಮರ್ಥ್ಯ ಉತ್ತೇಜನ
ಸುಮಾರು 1,000 ಭಾರತೀಯ ಇಂಜಿನಿಯರ್ ಗಳು ಮತ್ತು ಕೌಶಲ್ಯಹೊಂದಿದ ಕಾರ್ಮಿಕರಿಗೆ ಜಪಾನ್ ವಿಧಾನದ ಬಗ್ಗೆ ತರಬೇತಿ
ಹಾಲಿ ಇರುವ ರೈಲು/ವಿಮಾನ ಪ್ರಯಾಣಕ್ಕೆ ಸ್ಪರ್ಧಾತ್ಮಕ ದರಗಳೊಂದಿಗೆ ಹೆಚ್ಚಿನ ಆವರ್ತನ ಕಾರ್ಯಾಚರಣೆಗಳಿಗಾಗಿ ಎಂಎಎಚ್ಎಸ್ಆರ್ ವಿನ್ಯಾಸ
406 ರೈಲುಗಳು ಪ್ರತಿ ದಿನ ಇ ಡಿ ಎಫ್ ಸಿ ಮತ್ತು ಡಬ್ಲ್ಯೂಡಿಎಫ್ ಸಿ ನಡುವೆ ಕಾರ್ಯಾಚರಣೆ / ಇದರಿಂದ ಸಾಂಪ್ರದಾಯಿಕ ರೈಲ್ವೆ ಜಾಲದ ಹೆಚ್ಚುವರಿ ಸಾಮರ್ಥ್ಯ ಸೃಷ್ಟಿ
ಪ್ರಕಟಣಾ ದಿನಾಂಕ:
11 FEB 2026 6:53PM by PIB Bengaluru
ಸದ್ಯ ಮುಂಬೈ – ಅಹಮದಾಬಾದ್ ಹೈಸ್ಪೀಡ್ ರೈಲು (ಎಂಎಎಸ್ಎಸ್ಆರ್) ಯೋಜನೆ (508 ಕಿಮೀ)ಯ ಕಾಮಗಾರಿ ಜಪಾನ್ ಸರ್ಕಾರದ ತಾಂತ್ರಿಕ ಮತ್ತು ಹಣಕಾಸು ನೆರವಿನೊಂದಿಗೆ ಪ್ರಗತಿಯಲ್ಲಿದೆ. ಎಂಎಎಚ್ಎಸ್ ಆರ್ ಯೋಜನೆ ಅತ್ಯಂತ ಯೋಜಿತವಾಗಿದ್ದು ಮತ್ತು ಅದನ್ನು ಎತ್ತರಿಸಿದ ವಯಡಕ್ಟ್ ಮೇಲೆ ನಿರ್ಮಿಸಲಾಗುತ್ತಿದೆ. ಕಾರಿಡಾರ್ ನ ನಿಲ್ದಾಣಗಳನ್ನು ಹೆಚ್ಚು ಸುರಕ್ಷಿತ ಕ್ರಮಗಳೊಂದಿಗೆ ವಿನ್ಯಾಸಗೊಳಿಸಲಾಗಿದ್ದು, ಪ್ರವೇಶ ದ್ವಾರಗಳಲ್ಲಿ ನಿಯಂತ್ರಣ, ಬ್ಯಾಗೇಜ್ ಸ್ಕ್ಯಾನರ್ ಗಳು, ಡಿಎಫ್ಎಂಡಿಗಳು (ಡೋರ್ ಫ್ರೇಮ್ ಮೆಟಲ್ ಡಿಟೆಕ್ಟರ್ಸ್), ಸಿಸಿಟಿವಿ(ಕ್ಲೋಸ್ ಸರ್ಕ್ಯೂಟ್ ಟೆಲಿವಿಷನ) ಕ್ಯಾಮರಾ ಇತ್ಯಾದಿ ಒಳಗೊಂಡಿವೆ.
ಎಂಎಎಚ್ಎಸ್ಆರ್ ಯೋಜನೆ ಮೂಲಕ ಅಂದರೆ ವಿಶೇಷವಾಗಿ ರೈಲು ಟ್ರ್ಯಾಕ್ ನಿರ್ಮಾಣ, ಅತ್ಯಾಧುನಿಕ ಸಿಗ್ನಲಿಂಗ್ ವ್ಯವಸ್ಥೆ, ಬೋಗಿಗಳ ಉತ್ಪಾದನೆ ಮತ್ತು ನಿರ್ವಹಣೆ, ಯೋಜನೆಯ ನಿರ್ವಹಣೆ ಇತ್ಯಾದಿಗಳ ಅನುಭವ ಮತ್ತು ತಾಂತ್ರಿಕ ಸಾಮರ್ಥ್ಯಗಳ ಅಭಿವೃದ್ಧಿಯಿಂದಾಗಿ ದೇಶದಲ್ಲಿ ಭವಿಷ್ಯದ ಹೈಸ್ಪೀಡ್ ರೈಲು ಕಾರಿಡಾರ್ ಗಳ ನಿರ್ಮಾಣಕ್ಕೆ ಭದ್ರ ಬುನಾದಿ ಹಾಕಲಾಗಿದೆ ಎಂದು ನಿರೀಕ್ಷಿಸಲಾಗಿದೆ. ಇಂತಹ ಅನುಭವಗಳನ್ನು ಪಡೆಯುವ ಮೂಲಕ ಭಾರತ ಎಚ್ಎಸ್ಎಆರ್ ವಲಯದಲ್ಲಿ ಅತ್ಯಂತ ಯೋಜಿತ ಮತ್ತು ನಿರ್ಣಾಯಕ ಸ್ಥಾನವನ್ನು ಬಲವರ್ಧನೆಗೊಳಿಸಲಿದೆ.
ದೇಶೀಕರಣ ಮತ್ತು ಸಾಮರ್ಥ್ಯ ವೃದ್ಧಿ:
- ಭಾರತೀಯ ಕಾರ್ಯಾಗಾರದಲ್ಲಿ ದೀರ್ಘಾವಧಿಯ ಉಕ್ಕಿನ ಟ್ರುಸ್ ಗ್ರಿಡರ್ ಗಳನ್ನು ಫ್ಯಾಬ್ರಿಕೇಟ್ ಮಾಡಲಾಗಿದ್ದು, ಅವುಗಳಿಗೆ ಅನಾಲಿಟಿಕಲ್ ಮಾಡೆಲಿಂಗ್ ಬೆಂಬಲ ನೀಡಲಾಗಿದೆ ಮತ್ತು ದೇಶೀಯ ಎಚ್ಎಸ್ಆರ್ ವಿನ್ಯಾಸ ಸಾಮರ್ಥ್ಯವನ್ನು ಬಲವರ್ಧನೆಗೊಳಿಸಲು ತಳಮಟ್ಟದಲ್ಲಿ ಕ್ರಮಗಳನ್ನು ಕೈಗೊಳ್ಳಲಾಗಿದೆ.
- ಭಾರೀ ನಿರ್ಮಾಣ ಯಂತ್ರೋಪಕರಣಗಳನ್ನು ಬಳಕೆ ಮಾಡಲಾಗುತ್ತಿದ್ದು, ಅವುಗಳನ್ನು ದೇಶೀಯವಾಗಿ ಪೂರ್ಣ ಪ್ರಮಾಣದಲ್ಲಿ ಅಭಿವೃದ್ಧಿಪಡಿಸಲಾಗಿದೆ ಮತ್ತು ಅವುಗಳನ್ನು ಭಾರತದಲ್ಲೇ ಉತ್ಪಾದಿಸಲಾಗುತ್ತಿದೆ.
- ಬಹುತೇಕ ಸ್ಲ್ಯಾಬ್, ಟ್ರ್ಯಾಕ್ ಸಾಮಗ್ರಿಗಳು ಮತ್ತು ವಿಶೇಷ ಟ್ರ್ಯಾಕ್ ಯಂತ್ರಗಳು ಭಾರತೀಯ ಉತ್ಪಾದಕರು ಅಭಿವೃದ್ಧಿ ಮತ್ತು ವಿನ್ಯಾಸಗೊಳಿಸಿದ್ದಾರೆ. ಇದು ದೇಶೀಯ ಉತ್ಪಾದನಾ ಸಾಮರ್ಥ್ಯವನ್ನು ಉತ್ತೇಜಿಸಿದೆ.
- ಐಐಟಿಗಳ ಸಹಭಾಗಿತ್ವದಲ್ಲಿ ಭಾರತೀಯ ಸಂಸ್ಥೆಗಳು ವಿನ್ಯಾಸ ವ್ಯತ್ಯಾಸಗಳನ್ನು ಮತ್ತು ವಿಸ್ತೃತ ಡೈನಾಮಿಕ್ ವಿಶ್ಲೇಷಣೆಗಳನ್ನು ನಡೆಸುತ್ತಿದ್ದು, ಅದರಲ್ಲಿ ಅತ್ಯಾಧುನಿಕ ಡೈನಾಮಿಕ್ ವಿಶ್ಲೇಷಣಾ ಸಾಧನಗಳನ್ನು ಬಳಕೆ ಮಾಡುತ್ತಿದ್ದು, ದೀರ್ಘಾವಧಿಯ ಎಚ್ಎಸ್ಆರ್ ಪರಿಣಿತಿಯನ್ನು ಅಭಿವೃದ್ಧಿಪಡಿಸಲು ವಿನ್ಯಾಸ ಚಾರ್ಟ್ ಗಳನ್ನು ರೂಪಿಸಲಾಗಿದೆ.
ನಾವೀನ್ಯತೆ:
- 40 ಎಂ ಪ್ರಿ ಸ್ಟ್ರೆಸ್ಡ್ ಬಾಕ್ಸ್ ಗ್ರಿಡರ್ ಗಳು(~1000 MT),ಗಳನ್ನು ಪರಿಚಯಿಸಲು ಭಾರತ ಇದೇ ಮೊದಲ ಬಾರಿಗೆ ಪೂರ್ಣ ಪ್ರಮಾಣದ ಕಾರ್ಯ ವಿಧಾನವನ್ನು ಅಳವಡಿಸಿಕೊಂಡಿದ್ದು, ಅವುಗಳನ್ನು ಅತ್ಯಂತ ವೇಗವಾಗಿ 16 ಗಂಟೆಗಳೊಳಗೆ ಉತ್ಪಾದಿಸಲಾಗಿದೆ.
- ಎತ್ತರಿಸಿದ ಮಾರ್ಗದುದ್ದಕ್ಕೂ ಸಮೀಪದ ನಿವಾಸಿಗಳಿಗೆ ಶಬ್ದವನ್ನು ತಗ್ಗಿಸಲು ದೇಶೀಯ ಶಬ್ದ ನಿಯಂತ್ರಕಗಳನ್ನು ಅಳವಡಿಕೆ ಮಾಡಲಾಗಿದೆ.
- OHE-ಪ್ಯಾಂಟೋಗ್ರಾಫ್ ಸಂವಹನಕ್ಕಾಗಿ ಸುಧಾರಿತ ಸಿಮ್ಯುಲೇಶನ್ ಪರಿಕರಗಳು ಮತ್ತು ಎಳೆತ ವಿದ್ಯುತ್ ಸರಬರಾಜಿನ ವಿನ್ಯಾಸಕ್ಕಾಗಿ ಸಿಮ್ಯುಲೇಶನ್ ಮಾದರಿಯನ್ನು ನಿಖರವಾದ ವಿನ್ಯಾಸ ಮತ್ತು ಯೋಜನೆಗಾಗಿ IIT ದೆಹಲಿಯೊಂದಿಗೆ ಅಭಿವೃದ್ಧಿಪಡಿಸಲಾಗಿದೆ.
- 90 ಮೀಟರ್ ಎತ್ತರದ ಕಟ್ಟಡಕ್ಕೆ ಭದ್ರ ಬುನಾದಿ ಹಾಕುವ ಮೂಲಕ ನೆಲದಾಳದಲ್ಲಿ ನಿಲ್ದಾಣಗಳನ್ನು ನಿರ್ಮಿಸಲಾಗಿದೆ.
- ರೈಲು ಹಳಿ ತಪ್ಪುವುದನ್ನು ತಪ್ಪಿಸಲು ಹಾಗೂ ಸುರಕ್ಷತಾ ಕ್ರಮಗಳನ್ನು ಹೆಚ್ಚಿಸಲು ದೇಶೀಯವಾಗಿ ಅಭಿವೃದ್ಧಿಪಡಿಸಿದ ರೈಲು ಟರ್ನ್ ಓವರ್ ಪ್ರಿವೆನ್ಶನ್ ಡಿವೈಸ್ (ಆರ್ ಟಿಪಿಡಿ)ಯನ್ನು ಪರಿಚಯಿಸಲಾಗಿದೆ.
ತರಬೇತಿ:
- ಸುಮಾರು 1000 ಭಾರತೀಯ ಇಂಜಿನಿಯರ್ ಗಳು ಮತ್ತು ಕೌಶಲ್ಯ ಹೊಂದಿದ ಕಾರ್ಮಿಕರಿಗೆ ಜಪಾನ್ ವಿಧಾನದ ಬಗ್ಗೆ ತರಬೇತಿ ನೀಡಲಾಗಿದೆ. ಸದ್ಯ ಅವರ ಮೇಲ್ವಿಚಾರಣೆಯಲ್ಲಿ ಟ್ರ್ಯಾಕ್ ಅಳವಡಿಕೆ ಕಾರ್ಯ ಮಾಡಲಾಗುತ್ತಿದೆ.
- ಸೂರತ್ ನಲ್ಲಿ ತರಬೇತಿ ಮತ್ತು ನಿರಂತರ ಪುನರ್ ಮನನ ಕೋರ್ಸ್ ಗಳಿಗಾಗಿ ವಿಶೇಷ ಟ್ರ್ಯಾಕ್ ಟ್ರೈನಿಂಗ್ ಸೌಕರ್ಯವನ್ನು ಸೃಷ್ಟಿಸಲಾಗಿದೆ.
ನಿಲ್ದಾಣಗಳು:
- ಎಚ್ಎಸ್ಆರ್ ನಿಲ್ದಾಣಗಳನ್ನು ಸ್ಥಳೀಯ ಅಸ್ಮಿತೆಯನ್ನು ಪ್ರತಿಬಿಂಬಿಸುವ ನಗರದ ದ್ವಾರಗಳಂತೆ ವಿನ್ಯಾಸಗೊಳಿಸಲಾಗಿದೆ. ಅವುಗಳು ಅತ್ಯಾಧುನಿಕ ಭದ್ರತಾ ಅಂಶಗಳಾದ ನಿಯಂತ್ರಿತ ಪ್ರವೇಶ ದ್ವಾರಗಳು, ಸರಕು ಸ್ಕ್ಯಾನರ್ ಗಳು, ಡೋರ್ ಫ್ರೇಮ್ ಮೆಟಲ್ ಡಿಟೆಕ್ಟರ್ ಗಳು(ಡಿಎಫ್ಎಂಡಿಎಸ್) ಮತ್ತು ಕ್ಲೋಸ್ ಸರ್ಕೀಟ್ ಟೆಲಿವಿಷನ್(ಸಿಸಿಟಿವಿ) ಮೇಲ್ವಿಚಾರಣೆ ಒಳಗೊಂಡಿವೆ.
- ಸುರಕ್ಷತೆಗೆ ಆದ್ಯತೆ ನೀಡಿ ವಿನ್ಯಾಸಗೊಳಿಸಲಾಗಿದ್ದು, ಅದರಲ್ಲಿ ಕಂಪನ ನಿಗ್ರಹ ಕ್ರಮಗಳು, ನಿಲ್ದಾಣ ಮೇಲ್ಛಾವಣಿಯಲ್ಲಿ ಗಾಳಿ ಒತ್ತಡ ನಿಯಂತ್ರಣ ವ್ಯವಸ್ಥೆ ಹಾಗೂ ಕಂಪನ ನಿಗ್ರಹ ಹ್ಯಾಂಗರ್ ಗಳು, ಕ್ಲ್ಯಾಂಪ್ ಗಳು ಮತ್ತು ಬೋಲ್ಟಿಂಗ್ ಪ್ಲೇಟ್ ಗಳನ್ನು ನಿರ್ಮಾಣದ ವೇಳೆ ಬಳಕೆ ಮಾಡಲಾಗುವುದು.
- ಸಾಕಷ್ಟು ವಿಶಾಲವಾದ ವಾಹನ ನಿಲುಗಡೆ ಸ್ಥಳ, ಪ್ರಯಾಣಿಕರನ್ನು ಇಳಿಸುವ ಜಾಗ ಮತ್ತು ಅಡೆತಡೆ ರಹಿತ ಮಲ್ಟಿ ಮಾಡಲ್ ಸಂಪರ್ಕದ ಮೂಲಕ ಪ್ರಯಾಣಿಕರಿಗೆ ಅನುಕೂಲಕರ ವಾತಾವರಣ ನಿರ್ಮಿಸಲಾಗುವುದು ಮತ್ತು ನಗರದ ಕ್ರಿಯಾ ಯೋಜನೆಯ ಜೊತೆ ಸಮನ್ವಯಗೊಳಿಸಲಾಗುವುದು.
- ಭಾರತೀಯ ಹಸಿರು ಕಟ್ಟಡ ಕೌನ್ಸಿಲ್(ಐಜಿಬಿಸಿ) ಪ್ಲಾಟಿನಂ ಮಾನದಂಡಗಳಿಗೆ ಅನುಗುಣವಾಗಿ ಸುಸ್ಥಿರ ಮತ್ತು ಇಂಧನ ದಕ್ಷತೆ ಅಂಶಗಳು ಒಳಗೊಂಡಿವೆ.
ಭೌಗೋಳಿಕ-ತಾಂತ್ರಿಕ ಪರಿಶೀಲನೆ:
- ಭೌಗೋಳಿಕ ತಾಂತ್ರಿಕ ತಪಾಸಣೆ(ಜಿಟಿಐ) ಗಳಿಗೆ ಹೆಚ್ಚಿನ ಒತ್ತು ನೀಡಲಾಗಿದ್ದು, ಅದರಿಂದ ಕಟ್ಟಡಗಳ ಸುರಕ್ಷತೆ ಖಾತ್ರಿಪಡಿಸುವುದಲ್ಲದೆ, ಭೌಗೋಳಿಕ ಆಶ್ಚರ್ಯಗಳು ಉಂಟಾಗುವ ಸಾಧ್ಯತೆಗಳನ್ನು ತಗ್ಗಿಸಲಾಗುವುದು.
- ಜಿಟಿಐಅನ್ನು ಸಾಮಾನ್ಯವಾಗಿ 100 ಮೀ. ವ್ಯಾಪ್ತಿಯಲ್ಲಿ ನಡೆಸಲಾಗುವುದು ಮತ್ತು ವಿಶೇಷ ಕಟ್ಟಡಗಳಿರುವಾಗಿ ಇನ್ನೂ ಅತಿ ಕಡಿಮೆ ಅಂತರದಲ್ಲಿ ನಡೆಸಲಾಗುವುದು.
- ಹೊಸದಾಗಿ ಭೌಗೋಳಿಕ ತಾಂತ್ರಿಕ ಪ್ರಯೋಗಾಲಯವನ್ನು ಸ್ಥಾಪಿಸಲಾಗಿದೆ.
ಸುರಕ್ಷತೆ ಮತ್ತು ಭದ್ರತೆ:
- ಪ್ರಯಾಣಿಕರ ಸುರಕ್ಷತೆಗಾಗಿ ಕಾರ್ಯಾಚರಣೆಯ ಪ್ರದೇಶ ಮತ್ತು ವಸತಿ ಕಟ್ಟಡಗಳ ಸಮೀಪ ಉನ್ನತ ಮಟ್ಟದ ಭದ್ರತಾ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಲಾಗಿದೆ.
- ಉತ್ತಮ ಅಂತಾರಾಷ್ಟ್ರೀಯ ಪದ್ಧತಿಗಳ ಅನುಸಾರ ಸಿವಿಲ್ ಕಾಮಗಾರಿಗಳನ್ನು ವಿನ್ಯಾಸ ಮತ್ತು ನಿರ್ಮಾಣ ಕೈಗೊಳ್ಳಲಾಗುತ್ತಿದ್ದು, ಅದನ್ನು ಜಪಾನಿನ ಉನ್ನತ ಮಟ್ಟದ ಸಮಿತಿ ವಿನ್ಯಾಸಗೊಳಿಸಿದೆ.
- ಭೂಕಂಪನದಿಂದ ಸುರಕ್ಷತೆ ಹೆಚ್ಚಿಸಲು ಕಟ್ಟಡಗಳನ್ನು ಸೂಕ್ತ ಭೂಕಂಪನ ಶಾಸ್ತ್ರ ವಲಯಕ್ಕೆ ಅನುಗುನವಾಗಿ ವಿನ್ಯಾಸಗೊಳಿಸಲಾಗಿದ್ದು, ಉಕ್ಕು ಮತ್ತು ಡ್ಯಾಂಪರ್ ಸ್ಟಾಪರ್ ಗಳನ್ನು ವಯಡಕ್ಟ್ ಮತ್ತು ಸೇತುವೆಗಳ ಸಮೀಪ ಅಳವಡಿಸಲಾಗಿದೆ. ಅವುಗಳು ಬೀಳದಂತೆ ತಡೆಯುತ್ತವೆ ಮತ್ತು ಭೂಕಂಪನ ಮುನ್ನೆಚ್ಚರಿಕೆ ವ್ಯವಸ್ಥೆ(ಇಕ್ಯೂಇಡಬ್ಲ್ಯೂಎಸ್) ಅಳವಡಿಸಿಕೊಳ್ಳಲಾಗಿದೆ.
ಮುಂಬೈ-ಅಹಮದಾಬಾದ್ ಹೈ ಸ್ಪೀಡ್ ರೈಲು ಯೋಜನೆ ಪ್ರಗತಿ
ಮುಂಬೈ-ಅಹಮದಾಬಾದ್ ಹೈಸ್ಪೀಡ್ ರೈಲು (ಎಂಎಎಚ್ಎಸ್ಆರ್) ಯೋಜನೆ (508 ಕಿಮೀ) ಗುಜರಾತ್, ಮಹಾರಾಷ್ಟ್ರ ಮತ್ತು ಕೇಂದ್ರಾಡಳಿತ ಪ್ರದೇಶವಾದ ದಾದ್ರಾ ಮತ್ತು ನಗರ ಹವೇಲಿಯ ಮೂಲಕ ಹಾದುಹೋಗುತ್ತಿದ್ದು, ಮುಂಬೈ, ಥಾಣೆ, ವಿರಾರ್, ಬೋಯಿಸರ್, ವಾಪಿ, ಬಿಲ್ಲಿಮೋರಾ, ಸೂರತ್, ಭರೂಚ್, ವಡೋದರಾ, ಆನಂದ್, ಅಹಮದಾಬಾದ್ ಮತ್ತು ಸಬರಮತಿಗಳಲ್ಲಿ 12 ನಿಲ್ದಾಣಗಳನ್ನು ನಿರ್ಮಿಸಲಾಗುವುದು.
ಎಂಎಎಚ್ಎಸ್ಆರ್ ಯೋಜನೆಗಾಗಿ ಒಟ್ಟು ಭೂಮಿ(1389.5 ಹೆಕ್ಟೇರ್)ಗಳನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ. ಎಲ್ಲಾ ಅಗತ್ಯ ಅನುಮತಿಗಳನ್ನು ಪಡೆದುಕೊಳ್ಳಲಾಗಿದೆ. ಎಲ್ಲಾ 1651 ಸೌಕರ್ಯಗಳನ್ನು ಸ್ಥಳಾಂತರಿಸಲಾಗಿದೆ. ಮಹಾರಾಷ್ಟ್ರದಲ್ಲಿ ಭೂಮಿಯ ಸ್ವಾಧೀನ 2021ರ ವರೆಗೆ ವಿಳಂಬವಾಗಿತ್ತು. ಮಹಾರಾಷ್ಟ್ರದಲ್ಲಿ 2022ರಿಂದೀಚೆಗೆ ಸ್ವಾಧೀನ ಪ್ರಕ್ರಿಯೆ ಚುರುಕುಗೊಂಡಿದೆ.
ಯೋಜನೆಯ ಪ್ರಮುಖವಾರು ಕಾಮಗಾರಿಗಳ ಪ್ರಗತಿ ಈ ಕೆಳಗಿನಂತಿದೆ :
ಗುಜರಾತ್ :
|
ಕಾಮಗಾರಿ
|
ಪ್ರಗತಿ
|
|
ಅಡಿಪಾಯ
|
352 ಕಿ.ಮೀ.ಗಳು
|
|
ಪಿಲ್ಲರ್ ಗಳು
|
352 ಕಿ.ಮೀ.ಗಳು
|
|
ಗ್ರಿಡರ್ ಕಾಸ್ಟಿಂಗ್
|
342 ಕಿ.ಮೀ.ಗಳು
|
|
ಗ್ರಿಡರ್ ಲಾಂಚಿಂಗ್
|
331 ಕಿ.ಮೀ.ಗಳು
|
|
ಹಳಿ ಬೆಡ್ ನಿರ್ಮಾಣ
|
152 ಕಿ.ಮೀ.ಗಳು
|
|
OHE Masts Erection
|
121 ಕಿ.ಮೀ.ಗಳು
|
ಮಹಾರಾಷ್ಟ್ರ:
|
ಕಾಮಗಾರಿ
|
ಪ್ರಗತಿ
|
|
ಅಡಿಪಾಯ
|
74 ಕಿ.ಮೀ.ಗಳು
|
|
ಪಿಲ್ಲರ್ ಗಳು
|
65 ಕಿ.ಮೀ.ಗಳು
|
|
ಗ್ರಿಡರ್ ಕಾಸ್ಟಿಂಗ್
|
9 ಕಿ.ಮೀ.ಗಳು.
|
|
ಗ್ರಿಡರ್ ಲಾಂಚಿಂಗ್
|
3 ಕಿ.ಮೀ.ಗಳು
|
12 ನಿಲ್ದಾಣಗಳ ಪೈಕಿ, 8 ನಿಲ್ದಾಣಗಳ ಅಡಿಪಾಯ ಕಾಮಗಾರಿ ಪೂರ್ಣಗೊಂಡಿದೆ (ವಾಪಿ, ಬಿಲಿಮೋರಾ, ಸೂರತ್, ಭರೂಚ್, ಆನಂದ್, ವಡೋದರಾ, ಅಹಮದಾಬಾದ್ ಮತ್ತು ಸಬರಮತಿ) ಮಹಾರಾಷ್ಟ್ರ ವಿಭಾಗದಲ್ಲಿ, 3 ನಿಲ್ದಾಣಗಳ ಕಾಮಗಾರಿ ಪ್ರಗತಿಯಲ್ಲಿದೆ.(ಥಾಣೆ, ವಿರಾರ್, ಬೋಯಿಸರ್) ಮತ್ತು ಬಿಕೆಸಿ ನಿಲ್ದಾಣದಲ್ಲಿ ಉತ್ಖನನ ಕಾರ್ಯವು ಪೂರ್ಣಗೊಳ್ಳುವ ಹಂತದಲ್ಲಿದೆ ಮತ್ತು ಬೇಸ್ ಸ್ಲ್ಯಾಬ್ ಅಳವಡಿಸುವ ಕೆಲಸ ಆರಂಭವಾಗಿದೆ.
17 ನದಿ ಸೇತುವೆಗಳ ನಿರ್ಮಾಣ ಕಾರ್ಯ ಪೂರ್ಣಗೊಂಡಿವೆ. ಗುಜರಾತ್‌ನಲ್ಲಿ 4 ಪ್ರಮುಖ ನದಿ ಸೇತುವೆಗಳ (ನರ್ಮದಾ, ಮಾಹಿ, ತಪತಿ ಮತ್ತು ಸಬರಮತಿ) ಕಾಮಗಾರಿ ಆರಂಭ ಹಂತದಲ್ಲಿದೆ ಮತ್ತು ಮಹಾರಾಷ್ಟ್ರದಲ್ಲಿ 4 ನದಿ ಸೇತುವೆಗಳ ಕಾಮಗಾರಿ ಪ್ರಗತಿಯಲ್ಲಿದೆ. ಡಿಪೋಗಳ (ಥಾಣೆ, ಸೂರತ್ ಮತ್ತು ಸಬರಮತಿ) ಕಾಮಗಾರಿ ಪೂರ್ಣ ಪ್ರಮಾಣದಲ್ಲಿ ನಡೆಯುತ್ತಿದೆ.
ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್(ಬಿಕೆಸಿ)ಯಲ್ಲಿ ಸಿವಿಲ್ ಕಾಮಗಾರಿಗಳು ತೃಪ್ತಿದಾಯಕವಾಗಿ ಮುಂದುವರಿದಿವೆ. ಉತ್ಖನನ ಕಾರ್ಯಗಳು ಶೇ.91ರಷ್ಟು ಪ್ರಗತಿ ಸಾಧಿಸಿವೆ ಮತ್ತು ಕಾಂಕ್ರೀಟ್ ಕಾಮಗಾರಿಗಳು ನಾನಾ ಹಂತಗಳಲ್ಲಿವೆ ಹಾಗೂ ತಳಮಟ್ಟದ ಸ್ಲ್ಯಾಬ್ ಅಳವಡಿಕೆ ನಾಲ್ಕನೇ ಹಂತದಲ್ಲಿ ಶೇ. 100ರಷ್ಟು ಪೂರ್ಣಗೊಂಡಿದೆ. ಸಾಗರದಾಳದಲ್ಲಿ ಸುರಂಗ ಕಾಮಗಾರಿ(ಸುಮಾರು 21 ಕಿ.ಮೀ.) ಆರಂಭವಾಗಿದೆ. ಆ ಪೈಕಿ 4.8 ಕಿ.ಮೀ. ಸುರಂಗಮಾರ್ಗ ಮಹಾರಾಷ್ಟ್ರದ ಘನ್ಸೋಲಿ ಮತ್ತು ಶಿಲ್ ಪಾತ ನಡುವೆ ಪೂರ್ಣಗೊಂಡಿದೆ.
ಮೇಕ್ ಇನ್ ಇಂಡಿಯಾ ಮತ್ತು ಆತ್ಮನಿರ್ಭರ ಭಾರತ ಉಪಕ್ರಮಗಳಿಗೆ ಅನುಗುಣವಾಗಿ ಭಾರತೀಯ ರೈಲ್ವೆ, ಹೈಸ್ಪೀಡ್ ರೈಲು ವ್ಯವಸ್ಥೆಗಾಗಿ ದೇಶೀಯ ಉತ್ಪಾದನೆಯನ್ನು ಉತ್ತೇಜಿಸುತ್ತಿದೆ ಮತ್ತು ಬಿಡಿ ಭಾಗಗಳಿಗಾಗಿ ಆಮದು ಅವಲಂಬನೆ ತಗ್ಗಿಸುತ್ತಿದೆ. ವಂದೇ ಭಾರತ್ ಯಶಸ್ಸಿನ ಆಧಾರದಲ್ಲಿ ಇಂಟಿಗ್ರಲ್ ಕೋಚ್ ಫ್ಯಾಕ್ಟ್ರಿ(ಐಸಿಎಫ್) ಮೆಸರ್ಸ್ ಭಾರತ್ ಅರ್ಥ್ ಮೂವರ್ಸ್ ಲಿಮಿಟೆಡ್(ಬಿಇಎಂಎಲ್) ಸಹಭಾಗಿತ್ವದಲ್ಲಿ ಗಂಟೆಗೆ 280 ಕಿ.ಮೀ. ವೇಗದಲ್ಲಿ ಚಲಿಸುವ ರೈಲಿಗಾಗಿ ಅತಿ ವೇಗದ ಬೋಗಿಗಳನ್ನು ವಿನ್ಯಾಸ ಮತ್ತು ಅಭಿವೃದ್ಧಿಗೊಳಿಸುತ್ತಿದೆ.
ಅನ್ವಯಿಸುವ ಕಾನೂನುಗಳಡಿ ಯೋಜನೆಗಾಗಿ ಭೂಸ್ವಾಧೀನ ಕಾರ್ಯವನ್ನು ಕೈಗೊಳ್ಳಲಾಗಿದೆ ಮತ್ತು ಸಂತ್ರಸ್ತರಿಗೆ ಭೂಸ್ವಾಧೀನ ನ್ಯಾಯಯುತ ಪರಿಹಾರ, ಪಾರದರ್ಶಕತೆ ಮತ್ತು ಪುನರ್ವಸತಿ ಹಾಗೂ ಪುನರ್ ಸ್ಥಾಪನೆ ಕಾಯ್ದೆ ಅನ್ವಯ ಸೂಕ್ತ ಪರಿಹಾರವನ್ನು ನೀಡಲಾಗಿದೆ. ಹೆಚ್ಚುವರಿ ಪ್ರಯೋಜನ ಮತ್ತು ಪರಿಹಾರ ಸೇರಿದಂತೆ ಪುನರ್ವಸತಿ ಮತ್ತು ಪುನರ್ ಸ್ಥಾಪನೆ ಕಾರ್ಯಗಳನ್ನು ರಾಜ್ಯ ಸರ್ಕಾರಗಳ ಸಮನ್ವಯದೊಂದಿಗೆ ಕೈಗೊಳ್ಳಲಾಗಿದೆ.
ಎಂಎಎಚ್ಎಸ್ಆರ್ ಕಾರಿಡಾರ್ ಅನ್ನು ಗಣನೀಯ ಪ್ರಯಾಣಿಕರ ಸಾಗಣೆ ಸಾಮರ್ಥ್ಯದೊಂದಿಗೆ ಹೆಚ್ಚಿನ ಆವರ್ತನ ಕಾರ್ಯಾಚರಣೆಗಳಿಗಾಗಿ ವಿನ್ಯಾಸಗೊಳಿಸಲಾಗಿದೆ. ಅಸ್ತಿತ್ವದಲ್ಲಿರುವ ರೈಲು/ವಿಮಾನ ಪ್ರಯಾಣ ಆಯ್ಕೆಗಳಿಗೆ ಸಂಬಂಧಿಸಿದಂತೆ ಟಿಕೆಟ್ ಬೆಲೆಯನ್ನು ಸ್ಪರ್ಧಾತ್ಮಕವಾಗಿಸಲು ಪ್ರಸ್ತಾಪಿಸಲಾಗಿದೆ. ಯೋಜನೆಯ ಕಾರ್ಯಸಾಧ್ಯತೆಯನ್ನು ದೀರ್ಘಾವಧಿಯ ಆಧಾರದ ಮೇಲೆ ನಿರ್ಣಯಿಸಲಾಗಿದೆ, ನಿರೀಕ್ಷಿತ ಪ್ರಯಾಣಿಕರ ಬೇಡಿಕೆ, ಆರ್ಥಿಕ ಪ್ರಯೋಜನಗಳು, ಸಮಯ ಉಳಿತಾಯ ಮತ್ತು ಪ್ರಾದೇಶಿಕ ಅಭಿವೃದ್ಧಿಯನ್ನು ಗಣನೆಗೆ ತೆಗೆದುಕೊಳ್ಳಲಾಗಿದೆ.
ಮುಂಬೈ-ಅಹಮದಾಬಾದ್ ಹೈ ಸ್ಪೀಡ್ ರೈಲು (ಎಂಎಎಚ್ಎಸ್ಆರ್) ಯೋಜನೆ (508 ಕಿಮೀ) ಜಪಾನ್ ಸರ್ಕಾರದ ತಾಂತ್ರಿಕ ಮತ್ತು ಆರ್ಥಿಕ ನೆರವಿನೊಂದಿಗೆ ಕಾರ್ಯಗತಗೊಳ್ಳುತ್ತಿರುವ ಏಕೈಕ HSR ಯೋಜನೆಯಾಗಿದೆ. 31.12.2025 ರವರೆಗೆ ಈ ಯೋಜನೆಗೆ 86,939/- ಕೋಟಿ ರೂ.ವೆಚ್ಚ ಮಾಡಲಾಗಿದೆ.
ನಿರ್ದಿಷ್ಟ ಸರಕು ಕಾರಿಡಾರ್ ಗಳು
ರೈಲ್ವೆ ಸಚಿವಾಲಯವು ಎರಡು ನಿರ್ದಿಷ್ಟ ಸರಕು ಸಾಗಣೆ ಕಾರಿಡಾರ್‌ಗಳ (ಡಿ ಎಫ್ ಸಿ) ನಿರ್ಮಾಣವನ್ನು ಕೈಗೆತ್ತಿಕೊಂಡಿದೆ, ಅವುಗಳೆಂದರೆ, ಲುಧಿಯಾನದಿಂದ ಸೋನ್ನಗರ್‌ವರೆಗೆ (1337 ಕಿ.ಮೀ) ಪೂರ್ವ ನಿರ್ದಿಷ್ಟ ಸರಕು ಸಾಗಣೆ ಕಾರಿಡಾರ್ (ಇ ಡಿ ಎಫ್ ಸಿ) ಮತ್ತು ಜವಾಹರಲಾಲ್ ನೆಹರು ಬಂದರು ಟರ್ಮಿನಲ್ (ಜೆಎನ್ ಪಿಟಿ) ನಿಂದ ದಾದ್ರಿವರೆಗೆ (1506 ಕಿ.ಮೀ) ಪಶ್ಚಿಮ ಮೀಸಲಾದ ಸರಕು ಸಾಗಣೆ ಕಾರಿಡಾರ್ (ಡಬ್ಲೂಡಿಎಫ್ ಸಿ) ಒಟ್ಟು 1,24,005 ಕೋಟಿ ರೂ. ವೆಚ್ಚದಲ್ಲಿ. ಇಡಿಎಫ್ ಸಿ ಕಾಮಗಾರಿ ಪೂರ್ಣಗೊಂಡು ಕಾರ್ಯಾರಂಭಗೊಂಡಿದೆ. ಡಬ್ಲೂಡಿಎಫ್ ಸಿ ಯಲ್ಲಿ, ಒಟ್ಟು 1506 ಆರ್ ಕೆಎಂ ಗಳಲ್ಲಿ 1404 ಆರ್ ಕೆ ಎಂ ಪೂರ್ಣಗೊಂಡು ಕಾರ್ಯಾರಂಭಗೊಂಡಿದೆ. ವೈತರ್ಣ- ಜೆಎನ್ ಪಿಟಿ ವಿಭಾಗದಿಂದ (102 ಆರ್ ಕೆ ಎಂ) ಡಬ್ಲೂಡಿಎಫ್ ಸಿ ಯ ಬಾಕಿ ಕೆಲಸವನ್ನು ಕೈಗೆತ್ತಿಕೊಳ್ಳಲಾಗಿದೆ.
ಸರಕು ಸಾಗಣೆಯನ್ನು ಇ ಡಿ ಎಫ್ ಸಿ ಮತ್ತು ಡಬ್ಲೂ ಡಿ ಎಫ್ ಸಿ ಗೆ ತಿರುಗಿಸುವ ಮೂಲಕ ಸಾಂಪ್ರದಾಯಿಕ ಜಾಲದಲ್ಲಿ ಹೆಚ್ಚುವರಿ ಮಾರ್ಗಗಳನ್ನು ರಚಿಸಲು ಡಿಎಫ್ ಸಿ ಕೊಡುಗೆ ನೀಡಿದೆ. ಪ್ರಸ್ತುತ ಈ ಕಾರಿಡಾರ್‌ಗಳಲ್ಲಿ ದಿನಕ್ಕೆ 406 ಸರಾಸರಿ ರೈಲುಗಳನ್ನು ಓಡಿಸಲಾಗುತ್ತಿದೆ.
ಈ ಮಾಹಿತಿಯನ್ನು ಕೇಂದ್ರ ರೈಲ್ವೆ, ವಾರ್ತಾ ಮತ್ತು ಪ್ರಸಾರ ಹಾಗೂ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್ ಅವರು ಲೋಕಸಭೆಯಲ್ಲಿಂದು ಪ್ರಶ್ನೆಗಳಿಗೆ ನೀಡಿದ ಉತ್ತರದಲ್ಲಿ ನೀಡಿದ್ದಾರೆ.
*****
(ಪ್ರಕಟಣೆ ಐ.ಡಿ.: 2226720)
ವಿಸಿಟರ್ ಕೌಂಟರ್ : 8