ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ
ಅಮೆರಿಕ-ಭಾರತ ಜಂಟಿ ಹೇಳಿಕೆ
ಪ್ರಕಟಣಾ ದಿನಾಂಕ:
07 FEB 2026 4:29AM by PIB Bengaluru
ಭಾರತ ಮತ್ತು ಅಮೆರಿಕ (ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಕ) ಪರಸ್ಪರ ಲಾಭದಾಯಕ ವ್ಯಾಪಾರಕ್ಕೆ ಸಂಬಂಧಿಸಿದಂತೆ ಮಧ್ಯಂತರ ಒಪ್ಪಂದದ ರೂಪುರೇಷೆಗೆ ಸಮ್ಮತಿ ಸೂಚಿಸಿವೆ ಎಂದು ಘೋಷಿಸಲು ಹರ್ಷಿಸುತ್ತವೆ. ಇಂದಿನ ರೂಪುರೇಷೆಯು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಜೆ ಟ್ರಂಪ್ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರು ಫೆಬ್ರವರಿ 13, 2025 ರಂದು ಪ್ರಾರಂಭಿಸಿದ ವಿಶಾಲವಾದ ಅಮೆರಿಕ-ಭಾರತ ದ್ವಿಪಕ್ಷೀಯ ವ್ಯಾಪಾರ ಒಪ್ಪಂದ (ಬಿಟಿಎ) ಮಾತುಕತೆಗಳಿಗೆ ಉಭಯ ದೇಶಗಳ ಬದ್ಧತೆಯನ್ನು ಪುನರುಚ್ಚರಿಸುತ್ತದೆ. ಹೆಚ್ಚುವರಿ ಮಾರುಕಟ್ಟೆ ಪ್ರವೇಶ ಬದ್ಧತೆಗಳನ್ನು ಒಳಗೊಂಡಿರುವ ಈ ಒಪ್ಪಂದವು ಹೆಚ್ಚು ಸದೃಢ ಪೂರೈಕೆ ಸರಪಳಿಗಳಿಗೆ ಅನುವು ಮಾಡಿಕೊಡುತ್ತದೆ. ಅಮೆರಿಕ ಮತ್ತು ಭಾರತದ ನಡುವಿನ ಮಧ್ಯಂತರ ಒಪ್ಪಂದವು ನಮ್ಮ ದೇಶಗಳ ಪಾಲುದಾರಿಕೆಯಲ್ಲಿ ಐತಿಹಾಸಿಕ ಮೈಲುಗಲ್ಲಾಗಿದೆ. ಪರಸ್ಪರ ಹಿತಾಸಕ್ತಿಗಳು ಮತ್ತು ದೃಢವಾದ ಫಲಿತಾಂಶಗಳ ಆಧಾರದ ಮೇಲೆ ಪರಸ್ಪರ ಮತ್ತು ಸಮತೋಲಿತ ವ್ಯಾಪಾರಕ್ಕೆ ಸಮಾನ ಬದ್ಧತೆಯನ್ನು ಇದು ಪ್ರದರ್ಶಿಸುತ್ತದೆ.
ಅಮೆರಿಕ ಮತ್ತು ಭಾರತ ನಡುವಿನ ಮಧ್ಯಂತರ ಒಪ್ಪಂದದ ಪ್ರಮುಖ ನಿಯಮಗಳು ಈ ಕೆಳಗಿನಂತಿವೆ:
- ಭಾರತವು ಎಲ್ಲಾ ಅಮೆರಿಕದ ಕೈಗಾರಿಕಾ ಸರಕುಗಳು ಹಾಗೂ ವ್ಯಾಪಕ ಶ್ರೇಣಿಯ ಆಹಾರ ಮತ್ತು ಕೃಷಿ ಉತ್ಪನ್ನಗಳಾದ - ಒಣಗಿದ ಡಿಸ್ಟಿಲರ್ಸ್ ಧಾನ್ಯಗಳು (ಡಿಡಿಜಿಗಳು), ಪ್ರಾಣಿಗಳ ಆಹಾರಕ್ಕಾಗಿ ಕೆಂಪು ಜೋಳ, ಮರದ ಬೀಜಗಳು, ತಾಜಾ ಮತ್ತು ಸಂಸ್ಕರಿಸಿದ ಹಣ್ಣುಗಳು, ವೈನ್ ಮತ್ತು ಸ್ಪಿರಿಟ್, ಸೋಯಾಬೀನ್ ಎಣ್ಣೆ ಮತ್ತು ಹೆಚ್ಚುವರಿ ಉತ್ಪನ್ನಗಳ ಮೇಲಿನ ಸುಂಕವನ್ನು ತೆಗೆದುಹಾಕುತ್ತದೆ ಅಥವಾ ಕಡಿಮೆ ಮಾಡುತ್ತದೆ.
- ಅಮೆರಿಕವು ಏಪ್ರಿಲ್ 2, 2025ರ ಪರಿಷ್ಕೃತ ʻಕಾರ್ಯಕಾರಿ ಆದೇಶ 14257 (ಅಮೆರಿಕದ ಸರಕುಗಳ ವಾರ್ಷಿಕ ವ್ಯಾಪಾರ ಕೊರತೆಗಳಿಗೆ ದೊಡ್ಡ ಮಟ್ಟದಲ್ಲಿ ಮತ್ತು ನಿರಂತರವಾಗಿ ಕಾರಣೀಭೂತವಾಗುವ ವ್ಯಾಪಾರ ಅಭ್ಯಾಸಗಳನ್ನು ಸರಿಪಡಿಸಲು ಪ್ರತಿ ಸುಂಕದೊಂದಿಗೆ ಆಮದುಗಳನ್ನು ನಿಯಂತ್ರಿಸುವುದು)ʼ ಅಡಿಯಲ್ಲಿ ಜವಳಿ ಮತ್ತು ಉಡುಪುಗಳು, ಚರ್ಮ ಮತ್ತು ಪಾದರಕ್ಷೆಗಳು ಪ್ಲಾಸ್ಟಿಕ್ ಮತ್ತು ರಬ್ಬರ್, ಸಾವಯವ ರಾಸಾಯನಿಕಗಳು, ಮನೆ ಅಲಂಕಾರ, ಕುಶಲಕರ್ಮಿ ಉತ್ಪನ್ನಗಳು ಮತ್ತು ಕೆಲವು ಯಂತ್ರೋಪಕರಣಗಳು ಸೇರಿದಂತೆ ಭಾರತ ಮೂಲದ ಸರಕುಗಳ ಮೇಲೆ ಶೇಕಡಾ 18ರ ದರದಲ್ಲಿ ಪ್ರತಿ ಸುಂಕ ವಿಧಿಸುತ್ತದೆ. ಅಲ್ಲದೆ, ಮಧ್ಯಂತರ ಒಪ್ಪಂದದ ಯಶಸ್ವಿ ತೀರ್ಮಾನಕ್ಕೆ ಒಳಪಟ್ಟು, ಸೆಪ್ಟೆಂಬರ್ 5, 2025ರ ಪರಿಷ್ಕೃತ ʻಕಾರ್ಯಕಾರಿ ಆದೇಶ 14346 (ಪರಸ್ಪರ ಸುಂಕಗಳ ವ್ಯಾಪ್ತಿಯನ್ನು ಮಾರ್ಪಡಿಸುವುದು ಹಾಗೂ ವ್ಯಾಪಾರ ಮತ್ತು ಭದ್ರತಾ ಒಪ್ಪಂದಗಳನ್ನು ಅನುಷ್ಠಾನಗೊಳಿಸಲು ಕಾರ್ಯವಿಧಾನಗಳನ್ನು ಸ್ಥಾಪಿಸುವುದು) ಅಡಿಯಲ್ಲಿ ಜೆನೆರಿಕ್ ಔಷಧಗಳು, ರತ್ನಗಳು ಮತ್ತು ವಜ್ರಗಳು ಮತ್ತು ವಿಮಾನದ ಭಾಗಗಳನ್ನು ಒಳಗೊಂಡಂತೆ ಸಂಭಾವ್ಯ ಸುಂಕ ಹೊಂದಾಣಿಕೆಗಳಲ್ಲಿ ಗುರುತಿಸಲಾದ ವ್ಯಾಪಕ ಶ್ರೇಣಿಯ ಸರಕುಗಳ ಮೇಲಿನ ಪ್ರತಿ ಸುಂಕವನ್ನು ತೆಗೆದುಹಾಕುತ್ತದೆ.
- ಮಾರ್ಚ್ 8, 2018ರಂದು ಹೊರಡಿಸಲಾದ ʻಘೋಷಣೆ 9704 (ಅಮೆರಿಕದ ಅಲ್ಯೂಮಿನಿಯಂ ಆಮದುಗಳನ್ನು ಸರಿಹೊಂದಿಸುವುದು)ʼ; ಮಾರ್ಚ್ 8, 2018ರ ʻಘೋಷಣೆ 9705ʼ(ಅಮೆರಿಕಕ್ಕೆ ಉಕ್ಕಿನ ಆಮದುಗಳನ್ನು ಸರಿಹೊಂದಿಸುವುದು); ಮತ್ತು ಜುಲೈ 30, 2025ರ ʻಘೋಷಣೆ 10962ʼ(ಅಮೆರಿಕಕ್ಕೆ ತಾಮ್ರದ ಆಮದುಗಳನ್ನು ಸರಿಹೊಂದಿಸುವುದು) ಅಡಿಯಲ್ಲಿ ರಾಷ್ಟ್ರೀಯ ಭದ್ರತೆಗೆ ಅಪಾಯವನ್ನು ನಿವಾರಿಸುವ ನಿಟ್ಟಿನಲ್ಲಿ ಭಾರತದ ಕೆಲವೊಂದು ವಿಮಾನಗಳು ಮತ್ತು ವಿಮಾನ ಭಾಗಗಳ ಮೇಲಿನ ವಿಧಿಸಲಾಗುತ್ತಿರುವ ಸುಂಕವನ್ನೂ ಅಮೆರಿಕ ರದ್ದುಪಡಿಸಲಿದೆ. ಅಂತೆಯೇ, ಅಮೆರಿಕದ ರಾಷ್ಟ್ರೀಯ ಭದ್ರತಾ ಅವಶ್ಯಕತೆಗಳಿಗೆ ಅನುಗುಣವಾಗಿ, ಭಾರತವು ವಾಹನದ ಬಿಡಿ ಭಾಗಗಳಿಗೆ ಆದ್ಯತೆಯ ಸುಂಕ ದರದ ಕೋಟಾವನ್ನು ಪಡೆಯುತ್ತದೆ. ಆದರೆ ಇದು ಮೇ 17, 2019ರ ʻಘೋಷಣೆ 9888ʼ (ಅಮೆರಿಕಕ್ಕೆ ವಾಹನಗಳು ಮತ್ತು ವಾಹನ ಭಾಗಗಳ ಆಮದನ್ನು ಸರಿಹೊಂದಿಸುವುದು) ಅಡಿಯಲ್ಲಿ ಅಮೆರಿಕದ ರಾಷ್ಟ್ರೀಯ ಭದ್ರತೆಗೆ ಅಪಾಯಗಳನ್ನು ತೊಡೆದುಹಾಕಲು ವಿಧಿಸಲಾದ ಸುಂಕದ ಮೇಲೆ ಆಧರಿತವಾಗಿದೆ. ಔಷಧಗಳು ಮತ್ತು ಔಷಧೀಯ ಪದಾರ್ಥಗಳ ಕುರಿತಾಗಿ ಅಮೆರಿಕದ ʻಸೆಕ್ಷನ್ 232ʼ ತನಿಖೆಯ ಸಂಶೋಧನೆಗಳ ಆಧಾರದ ಮೇಲೆ, ಭಾರತವು ಜೆನೆರಿಕ್ ಔಷಧಗಳು ಮತ್ತು ಪದಾರ್ಥಗಳಿಗೆ ಸಂಬಂಧಿಸಿದಂತೆ ಸುಂಕದಲ್ಲಿ ಸಡಿಲತೆಯನ್ನು ಪಡೆಯಲಿದೆ.
- ಅಮೆರಿಕ ಮತ್ತು ಭಾರತ ನಿರಂತರವಾಗಿ ಆಯಾ ಆಸಕ್ತಿಯ ಕ್ಷೇತ್ರಗಳಲ್ಲಿ ಪರಸ್ಪರರಿಗೆ ಆದ್ಯತೆಯ ಮಾರುಕಟ್ಟೆ ಪ್ರವೇಶವನ್ನು ಒದಗಿಸಲು ಬದ್ಧವಾಗಿವೆ.
- ಅಮೆರಿಕ ಮತ್ತು ಭಾರತ ಒಪ್ಪಂದದ ಪ್ರಯೋಜನಗಳು ಪ್ರಧಾನವಾಗಿ ಅಮೆರಿಕ ಮತ್ತು ಭಾರತಕ್ಕೆ ದೊರೆಯುವುದನ್ನು ಖಚಿತಪಡಿಸಿಕೊಳ್ಳುವ ಮೂಲ ನಿಯಮಗಳನ್ನು ಸೇರಿಸಲಾಗುವುದು.
- ದ್ವಿಪಕ್ಷೀಯ ವ್ಯಾಪಾರದ ಮೇಲೆ ಪರಿಣಾಮ ಬೀರುವ ಸುಂಕರಹಿತ ಅಡೆತಡೆಗಳನ್ನು ಅಮೆರಿಕ ಮತ್ತು ಭಾರತ ಪರಿಹರಿಸಲಿವೆ. ಅಮೆರಿಕದ ವೈದ್ಯಕೀಯ ಸಾಧನಗಳ ವ್ಯಾಪಾರಕ್ಕೆ ದೀರ್ಘಕಾಲದ ಅಡೆತಡೆಗಳನ್ನು ಪರಿಹರಿಸಲು ಭಾರತ ಸಮ್ಮತಿಸಿದೆ. ಅಮೆರಿಕದ ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ(ಐಸಿಟಿ) ಸರಕುಗಳಿಗೆ ಮಾರುಕಟ್ಟೆ ಪ್ರವೇಶವನ್ನು ವಿಳಂಬಗೊಳಿಸುವ ಅಥವಾ ಪ್ರಮಾಣ ಸಂಬಂಧಿತ ನಿರ್ಬಂಧಗಳನ್ನು ವಿಧಿಸುವ ನಿರ್ಬಂಧಿತ ಆಮದು ಪರವಾನಗಿ ಕಾರ್ಯವಿಧಾನಗಳನ್ನು ಭಾರತ ತೊಡೆದುಹಾಕಲಿದೆ. ಜೊತೆಗೆ ಸಕಾರಾತ್ಮಕ ಫಲಿತಾಂಶದ ದೃಷ್ಟಿಯಿಂದ, ಒಪ್ಪಂದವು ಜಾರಿಗೆ ಬಂದ ಆರು ತಿಂಗಳೊಳಗೆ ಪರೀಕ್ಷಾ ಅವಶ್ಯಕತೆಗಳು ಸೇರಿದಂತೆ ಅಮೆರಿಕ-ರೂಪಿಸಿದ ಅಥವಾ ಅಂತರರಾಷ್ಟ್ರೀಯ ಮಾನದಂಡಗಳ ಆಧರಿತವಾಗಿ, ಗುರುತಿಸಲಾದ ಕ್ಷೇತ್ರಗಳಲ್ಲಿ ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸುವ ಅಮೆರಿಕದ ರಫ್ತುಗಳು ಸ್ವೀಕಾರಾರ್ಹವಾಗಿದೆಯೇ ಎಂದು ಭಾರತ ನಿರ್ಧರಿಸಲಿದೆ. ದೀರ್ಘಕಾಲದ ಕಳವಳಗಳನ್ನು ಪರಿಹರಿಸಲು ಒಟ್ಟಾಗಿ ಕೆಲಸ ಮಾಡುವ ಮಹತ್ವವನ್ನು ಗುರುತಿಸಿ, ಅಮೆರಿಕದ ಆಹಾರ ಮತ್ತು ಕೃಷಿ ಉತ್ಪನ್ನಗಳ ವ್ಯಾಪಾರಕ್ಕೆ ದೀರ್ಘಕಾಲೀನ ಸುಂಕ ರಹಿತ ಅಡೆತಡೆಗಳನ್ನು ಪರಿಹರಿಸಲು ಭಾರತ ಸಮ್ಮತಿಸಿದೆ.
- ತಾಂತ್ರಿಕ ನಿಯಮಗಳ ಅನುಸರಣೆಯನ್ನು ಸುಗಮಗೊಳಿಸುವ ನಿಟ್ಟಿನಲ್ಲಿ, ಅಮೆರಿಕ ಮತ್ತು ಭಾರತ ಪರಸ್ಪರ ಸಮ್ಮತಿತ ವಲಯಗಳಿಗೆ ಸಙಂಬಂಧಿಸಿದ ಮಾನದಂಡಗಳು ಮತ್ತು ಅನುಸರಣೆ ಮೌಲ್ಯಮಾಪನ ಕಾರ್ಯವಿಧಾನಗಳನ್ನು ಚರ್ಚಿಸಲು ಉದ್ದೇಶಿಸಿವೆ.
- ಎರಡೂ ದೇಶಗಳ ಒಪ್ಪಿತ ಸುಂಕಗಳಲ್ಲಿ ಯಾವುದೇ ಬದಲಾವಣೆಗಳ ಸಂದರ್ಭದಲ್ಲಿ, ಇತರ ದೇಶವು ತನ್ನ ಬದ್ಧತೆಗಳನ್ನು ಮಾರ್ಪಡಿಸಬಹುದು ಎಂದು ಅಮೆರಿಕ ಮತ್ತು ಭಾರತ ಒಪ್ಪುತ್ತವೆ.
- ʻಬಿಟಿಎʼ ಮಾತುಕತೆಗಳ ಮೂಲಕ ಮಾರುಕಟ್ಟೆ ಪ್ರವೇಶಾವಕಾಶಗಳನ್ನು ಮತ್ತಷ್ಟು ವಿಸ್ತರಿಸುವ ನಿಟ್ಟಿನಲ್ಲಿ ಅಮೆರಿಕ ಮತ್ತು ಭಾರತ ಕೆಲಸ ಮಾಡಲಿವೆ. ʻಬಿಟಿಎʼ ಮಾತುಕತೆಗಳ ಸಮಯದಲ್ಲಿ, ಭಾರತೀಯ ಸರಕುಗಳ ಮೇಲಿನ ಸುಂಕವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಅಮೆರಿಕ ಕೆಲಸ ಮುಂದುವರಿಸಬೇಕು ಎಂಬ ಭಾರತದ ಮನವಿಯನ್ನು ಗಣನೆಗೆ ತೆಗೆದುಕೊಳ್ಳಲು ಉದ್ದೇಶಿಸಿದೆ ಎಂದು ಅಮೆರಿಕ ದೃಢಪಡಿಸಿದೆ.
- ಪೂರಕ ಕ್ರಮಗಳ ಮೂಲಕ ಪೂರೈಕೆ ಸರಪಳಿಯ ಸದೃಢತೆ ಮತ್ತು ನಾವೀನ್ಯತೆಯನ್ನು ಹೆಚ್ಚಿಸಲು ಹಾಗೂ ಮೂರನೇ ವ್ಯಕ್ತಿಗಳ (ಥರ್ಡ್ ಪಾರ್ಟಿ) ಮಾರುಕಟ್ಟೆಯೇತರ ನೀತಿಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಆರ್ಥಿಕ ಭದ್ರತಾ ಹೊಂದಾಣಿಕೆಯನ್ನು ಬಲಪಡಿಸಲು ಅಮೆರಿಕ ಮತ್ತು ಭಾರತ ಸಮ್ಮತಿಸಿವೆ.
- ಮುಂದಿನ 5 ವರ್ಷಗಳಲ್ಲಿ 500 ಶತಕೋಟಿ ಡಾಲರ್ ಮೌಲ್ಯದ ಅಮೆರಿಕದ ಇಂಧನ ಉತ್ಪನ್ನಗಳು, ವಿಮಾನ ಮತ್ತು ವಿಮಾನದ ಬಿಡಿಭಾಗಗಳು, ಅಮೂಲ್ಯ ಲೋಹಗಳು, ತಂತ್ರಜ್ಞಾನ ಉತ್ಪನ್ನಗಳು ಮತ್ತು ಕೋಕಿಂಗ್ ಕಲ್ಲಿದ್ದಲನ್ನು ಖರೀದಿಸಲು ಭಾರತ ಉದ್ದೇಶಿಸಿದೆ. ಭಾರತ ಮತ್ತು ಅಮೆರಿಕ ʻಗ್ರಾಫಿಕ್ಸ್ ಸಂಸ್ಕರಣಾ ಘಟಕʼಗಳು(ಜಿಪಿಯುಗಳು) ಮತ್ತು ಡೇಟಾ ಕೇಂದ್ರಗಳಲ್ಲಿ ಬಳಸುವ ಇತರ ಸರಕುಗಳು ಸೇರಿದಂತೆ ತಂತ್ರಜ್ಞಾನ ಉತ್ಪನ್ನಗಳ ವ್ಯಾಪಾರವನ್ನು ಗಮನಾರ್ಹವಾಗಿ ಹೆಚ್ಚಿಸುತ್ತವೆ ಮತ್ತು ಜಂಟಿ ತಂತ್ರಜ್ಞಾನ ಸಹಕಾರವನ್ನು ವಿಸ್ತರಿಸುತ್ತವೆ.
- ತಾರತಮ್ಯದ ಅಥವಾ ಹೊರೆಯಾದ ಅಭ್ಯಾಸಗಳು ಹಾಗೂ ಡಿಜಿಟಲ್ ವ್ಯಾಪಾರಕ್ಕೆ ಇತರ ಅಡೆತಡೆಗಳನ್ನು ಪರಿಹರಿಸಲು ಮತ್ತು ʻಬಿಟಿಎʼ ಭಾಗವಾಗಿ ದೃಢವಾದ, ಮಹತ್ವಾಕಾಂಕ್ಷೆಯ ಮತ್ತು ಪರಸ್ಪರ ಪ್ರಯೋಜನಕಾರಿ ಡಿಜಿಟಲ್ ವ್ಯಾಪಾರ ನಿಯಮಗಳನ್ನು ಸಾಧಿಸಲು ಸ್ಪಷ್ಟ ಮಾರ್ಗವನ್ನು ನಿಗದಿಪಡಿಸಲು ಅಮೆರಿಕ ಮತ್ತು ಭಾರತ ಬದ್ಧವಾಗಿವೆ.
ಅಮೆರಿಕ ಮತ್ತು ಭಾರತ ಈ ಷರತ್ತುಗಳನ್ನು ತಕ್ಷಣವೇ ಪ್ರಾಮಾಣಿಕವಾಗಿ ಕಾರ್ಯಗತಗೊಳಿಸಲಿವೆ. ಜೊತೆಗೆ ಉಲ್ಲೇಖಿತ ನಿಯಮಗಳಲ್ಲಿ ಒಪ್ಪಿದ ಮಾರ್ಗಸೂಚಿಗೆ ಅನುಗುಣವಾಗಿ ಪರಸ್ಪರ ಲಾಭದಾಯಕ ʻಬಿಟಿಎʼ ಅನ್ನು ಅಂತಿಮಗೊಳಿಸುವ ನಿಟ್ಟಿನಲ್ಲಿ ಮಧ್ಯಂತರ ಒಪ್ಪಂದವನ್ನು ಅಂತಿಮಗೊಳಿಸಲು ಕೆಲಸ ಮಾಡುತ್ತವೆ.
*****
(ಪ್ರಕಟಣೆ ಐ.ಡಿ.: 2224808)
ವಿಸಿಟರ್ ಕೌಂಟರ್ : 32