ರೈಲ್ವೇ ಸಚಿವಾಲಯ
azadi ka amrit mahotsav

ವಂದೇ ಭಾರತ್ ಸ್ಲೀಪರ್ ರೈಲು ಸೆಟ್ ಗಳ 260 ರೇಕ್ ಗಳ ತಯಾರಿಕೆಗೆ ಯೋಜನೆ: ಶ್ರೀ ಅಶ್ವಿನಿ ವೈಷ್ಣವ್

ಪ್ರಕಟಣಾ ದಿನಾಂಕ: 04 FEB 2026 4:59PM by PIB Bengaluru

 

ಸುರಕ್ಷಿತ, ವಿಶ್ವಾಸಾರ್ಹ ಮತ್ತು ಆರಾಮದಾಯಕ ಪ್ರಯಾಣವನ್ನು ಖಚಿತಪಡಿಸಲು ವಂದೇ ಸ್ಲೀಪರ್ ನಂತಹ ಹೊಸ ರೋಲಿಂಗ್ ಸ್ಟಾಕ್ ಗಳ ಅಭಿವೃದ್ಧಿ ಪ್ರಕ್ರಿಯೆಯಡಿ ತಾಂತ್ರಿಕ ನಾವಿನ್ಯತೆ, ಕಾರ್ಯತಂತ್ರದ ಯೋಜನೆ ಮತ್ತು ತಯಾರಿಕೆಯನ್ನು ಸಂಯೋಜಿಸುವ ಸಮಗ್ರ ವಿಧಾನ ಅಗತ್ಯವಾಗಿದೆ. ಇದು ಮೂಲಮಾದರಿಯ ಅಭಿವೃದ್ಧಿ, ವ್ಯಾಪಕ ಪರೀಕ್ಷೆ ಮತ್ತು ಪ್ರಯೋಗಗಳ ನಂತರ ಸರಣಿ ಉತ್ಪಾದನೆಯನ್ನು ಒಳಗೊಂಡಿರಲಿದೆ.

ವಂದೇ ಭಾರತ್ ಸ್ಲೀಪರ್ ರೈಲು ಉತ್ಪಾದನಾ ಕಾರ್ಯವನ್ನು ಚೆನ್ನೈನ ಬಿಇಎಂಎಲ್ ಮತ್ತು ಇಂಟಿಗ್ರಲ್ ಕೋಚ್ ಫ್ಯಾಕ್ಟರಿ ಹಾಗೂ ತಂತ್ರಜ್ಞಾನ ಪಾಲುದಾರರೊಂದಿಗೆ ಮೂಲಮಾದರಿ ಅಭಿವೃದ್ಧಿ, ಪ್ರಯೋಗಗಳು ಮತ್ತು ಸರಣಿ ಉತ್ಪಾದನೆಯ ಮೂಲಕ ಹಂತ ಹಂತವಾಗಿ ಕಾರ್ಯಗತಗೊಳಿಸಲಾಗುತ್ತದೆ.

ಬೇಡಿಕೆ ಮತ್ತು ಕಾರ್ಯಾಚರಣೆಯ ಸಿದ್ಧತೆಯ ಆಧಾರದ ಮೇಲೆ ಈ ರೈಲು ಸೆಟ್  ಗಳನ್ನು ನಿಯಮಿತ ಪ್ರಯಾಣಿಕ ಸೇವೆಗೆ ಹಂತ ಹಂತವಾಗಿ ಸೇರ್ಪಡೆ ಮಾಡಲಾಗುವುದು. 

ವಂದೇ ಭಾರತ್ ಸ್ಲೀಪರ್ ರೈಲು ಸೆಟ್ ಗಳ ಒಟ್ಟು 260 ರೇಕ್ ಗಳನ್ನು ತಯಾರಿಸಲು ಯೋಜಿಸಲಾಗಿದೆ.

ಪ್ರಯಾಣಿಕರ ಪ್ರಯಾಣದ ಅನುಭೂತಿ ಸುಧಾರಿಸಲು ಹಾಗೂ ಸುರಕ್ಷಿತ ಮತ್ತು ಆರಾಮದಾಯಕ ಪಯಣಕ್ಕಾಗಿ ಹೊಸ ಮಾನದಂಡಗಳನ್ನು ಹೊಂದಿಸಲು, ಈ ರೈಲು ಸೆಟ್ ಗಳಿಗೆ ಸುಧಾರಿತ ಸುರಕ್ಷತಾ ವೈಶಿಷ್ಟ್ಯಗಳು ಮತ್ತು ಈ ಕೆಳಗೆ ಉಲ್ಲೇಖಿಸಿರುವಂತಹ ಪ್ರಯಾಣಿಕ ಸೌಕರ್ಯಗಳನ್ನು ಹೊಂದಿರುವ ಆಧುನಿಕ ಕೋಚ್ ಗಳನ್ನು ಒದಗಿಸಲಾಗಿದೆ:

• ಜರ್ಕ್-ಮುಕ್ತ ಅರೆ ಶಾಶ್ವತ ಸಂಯೋಜಕಗಳು ಮತ್ತು ಆ್ಯಂಟಿ ಕ್ಲೈಂಬರ್ ಗಳು (ಢಿಕ್ಕಿ ಹೊಡದಾದ ಒಂದರ ಮೇಲೆ ಏರುವುದನ್ನು ತಪ್ಪಿಸುವ ಸುರಕ್ಷತಾ ವ್ಯವಸ್ಥೆ)
• ಕವಚ್‌ ಅಳವಡಿಕೆ
• ಗಂಟೆಗೆ 180/160 ಕಿಲೋಮೀಟರ್ ವಿನ್ಯಾಸ/ಕಾರ್ಯಾಚರಣಾ ವೇಗದೊಂದಿಗೆ ಹೆಚ್ಚಿನ ವೇಗೋತ್ಕರ್ಷಣೆ
• ಇಎನ್‌ (ಯೂರೋಪಿಯನ್) ಮಾನದಂಡಗಳನ್ನು ಅನುಸರಿಸುವ ಕ್ರ್ಯಾಶ್ ವರ್ತಿ ಕಾರ್ ಬಾಡಿ ವಿನ್ಯಾಸ
• ಅಗ್ನಿ ಸುರಕ್ಷತಾ ಮಾನದಂಡಗಳ ಅನುಸರಣೆಗಾಗಿ ಪ್ರತಿ ಕೋಚ್ ನ ಕೊನೆಯಲ್ಲಿ ಅಗ್ನಿಶಾಮಕ ತಡೆಗೋಡೆ ಬಾಗಿಲುಗಳು
• ಸುಧಾರಿತ ಅಗ್ನಿ ಸುರಕ್ಷತೆ - ವಿದ್ಯುತ್ ಕ್ಯಾಬಿನೆಟ್ ಗಳು ಮತ್ತು ಶೌಚಾಲಯಗಳಲ್ಲಿ ಏರೋಸಾಲ್ ಆಧಾರಿತ ಬೆಂಕಿ ಪತ್ತೆ ಮತ್ತು ನಿಗ್ರಹ ವ್ಯವಸ್ಥೆ
• ಇಂಧನ ದಕ್ಷತೆಗಾಗಿ ಪುನರುತ್ಪಾದಕ ಬ್ರೇಕಿಂಗ್ ವ್ಯವಸ್ಥೆ
• ಪ್ರಯಾಣಿಕರ ಪ್ರದೇಶದಲ್ಲಿ ನೈರ್ಮಲ್ಯ ಮಾನದಂಡಗಳನ್ನು ಸುಧಾರಿಸಲು ನಿಯಂತ್ರಿತ ಗಾಳಿಯಿಂದ ಶೇ. 99 ರಷ್ಟು ಹಾನಿಕಾರಕ ಬ್ಯಾಕ್ಟೀರಿಯಾಗಳನ್ನು ನಿಷ್ಕ್ರಿಯಗೊಳಿಸಲು ಹವಾನಿಯಂತ್ರಣ ಘಟಕಗಳಿಗೆ ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ UV-C ದೀಪ (ನೇರಳಾತೀತ ಬೆಳಕು) ಆಧಾರಿತ ಸೋಂಕುನಿವಾರಕ ವ್ಯವಸ್ಥೆ ಒದಗಿಸುವಿಕೆ
• ಕೇಂದ್ರೀಯವಾಗಿ ನಿಯಂತ್ರಿತ ಸ್ವಯಂಚಾಲಿತ ಪ್ಲಗ್ ಬಾಗಿಲುಗಳು ಮತ್ತು ಸಂಪೂರ್ಣವಾಗಿ ಮುಚ್ಚಿದ ಅಗಲವಾದ ಗ್ಯಾಂಗ್ ವೇಗಳು (ಪ್ರಯಾಣಿಕರು ನಡೆದಾಡಲು ಎತ್ತರಿಸಿದ ವೇದಿಕೆ)
• ಎಲ್ಲಾ ಬೋಗಿಗಳಲ್ಲಿ ಸಿಸಿಟಿವಿಗಳು
• ತುರ್ತು ಸಂದರ್ಭಗಳಲ್ಲಿ ಪ್ರಯಾಣಿಕರು ಮತ್ತು ರೈಲು ವ್ಯವಸ್ಥಾಪಕ/ಲೋಕೋಪೈಲಟ್ ನಡುವಿನ ಸಂವಹನಕ್ಕಾಗಿ ತುರ್ತು ಟಾಕ್-ಬ್ಯಾಕ್ ಘಟಕ
• ದಿವ್ಯಾಂಗ ಪ್ರಯಾಣಿಕರಿಗಾಗಿ, ಚಾಲನಾ ಬೋಗಿಗಳ ಎರಡೂ ಬದಿಗಳಲ್ಲಿ ವಿಶೇಷ ಶೌಚಾಲಯ
• ಹವಾನಿಯಂತ್ರಣ, ಸಲೂನ್ ಲೈಟಿಂಗ್ (ಬಹು ಹಂತದ ಬೆಳಕಿನ ವಿನ್ಯಾಸ) ಮುಂತಾದ ಪ್ರಯಾಣಿಕರ ಸೌಲಭ್ಯಗಳ ಉತ್ತಮ ಸ್ಥಿತಿಯ ಮೇಲ್ವಿಚಾರಣೆಗಾಗಿ ಕೇಂದ್ರೀಕೃತ ಬೋಗಿ ನಿಗಾ ವ್ಯವಸ್ಥೆ
• ಮೇಲಿನ ಬರ್ತ್‌ ಗಳಿಗೆ ಸುಲಭವಾಗಿ ಹತ್ತಲು ಸಾಧ್ಯವಾಗುವಂತೆ ವಿನ್ಯಾಸಗೊಳಿಸಲಾದ ಏಣಿ.
 
ಕೇಂದ್ರ ರೈಲ್ವೆ, ವಾರ್ತಾ ಮತ್ತು ಪ್ರಸಾರ ಹಾಗೂ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಖಾತೆ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್ ಅವರು ಲೋಕಸಭೆಯಲ್ಲಿಂದು ಪ್ರಶ್ನೆಯೊಂದಕ್ಕೆ ನೀಡಿದ ಲಿಖಿತ ಉತ್ತರದಲ್ಲಿ ಈ ಮಾಹಿತಿ ಒದಗಿಸಿದ್ದಾರೆ.

 

******


(ಪ್ರಕಟಣೆ ಐ.ಡಿ.: 2223466) ವಿಸಿಟರ್ ಕೌಂಟರ್ : 9
ಪ್ರಕಟಣೆಯನ್ನು ಇದರಲ್ಲಿ ಓದಿ: हिन्दी , English , Urdu , Marathi , Gujarati , Odia , Tamil , Malayalam