ಭಾರೀ ಕೈಗಾರಿಕೆಗಳ ಸಚಿವಾಲಯ
ಪಿಎಂ ಇ-ಡ್ರೈವ್ ಯೋಜನೆ
ಪ್ರಕಟಣಾ ದಿನಾಂಕ:
03 FEB 2026 4:41PM by PIB Bengaluru
ವಿದ್ಯುತ್ ವಾಹನಗಳ ಉತ್ತೇಜನಕ್ಕೆ ಜಾರಿಗೆ ತಂದಿರುವ ನಾವಿನ್ಯತಾ ವಾಹನ ವೃದ್ಧಿ ಕಾರ್ಯಕ್ರಮದಡಿಯಲ್ಲಿನ ಪ್ರಧಾನಮಂತ್ರಿ ವಿದ್ಯುತ್ ಚಾಲನ ಕ್ರಾಂತಿ (ಪಿಎಂ ಎಲೆಕ್ಟ್ರಿಕ್ ಡ್ರೈವ್ ರೆವಲ್ಯೂಷನ್ ಇನ್ ಇನ್ನೋವೇಟಿವ್ ವೆಹಿಕಲ್ ಎನ್ಹ್ಯಾನ್ಸ್ಮೆಂಟ್ - ಪಿಎಂ ಇ-ಡ್ರೈವ್) ಯೋಜನೆಯಡಿಯಲ್ಲಿ ಇ-ದ್ವಿಚಕ್ರ ವಾಹನಗಳು (ಇ-2ಡಬ್ಲ್ಯೂ), ಇ-ತ್ರಿಚಕ್ರ ವಾಹನಗಳು (ಇ-ರಿಕ್ಷಾಗಳು, ಇ-ಕಾರ್ಟ್‌ಗಳು ಮತ್ತು ಎಲ್ 5 ವರ್ಗ), ಇ-ಆಂಬ್ಯುಲೆನ್ಸ್‌ಗಳು ಮತ್ತು ಇ-ಟ್ರಕ್‌ಗಳು ಸೇರಿದಂತೆ ಬಹು ವಿದ್ಯುತ್ ವಾಹನ ವಿಭಾಗಗಳಿಗೆ ಉದ್ದೇಶಿತ ಬೇಡಿಕೆ ಪ್ರೋತ್ಸಾಹಕವನ್ನು ಒದಗಿಸುವ ಮೂಲಕ, ವಿದ್ಯುತ್ ಚಲನಶೀಲ ವಾಹನ ಬಳಕೆಗಾಗಿನ ಮುಂಗಡ ವೆಚ್ಚವನ್ನು ಕಡಿಮೆ ಮಾಡಲಿದ್ದು, ದೇಶಾದ್ಯಂತ ಎಲೆಕ್ಟ್ರಿಕ್ ವಾಹನಗಳ (ಇವಿ) ಬಳಕೆ ಹೆಚ್ಚಿಸುವ ಪ್ರಕ್ರಿಯೆಗೆ ವೇಗ ನೀಡಿದೆ. ಈ ಯೋಜನೆಯಡಿಯಲ್ಲಿ, ವಿದ್ಯುತ್ ವಾಹನಗಳ ಖರೀದಿ ಬೆಲೆಯನ್ನು ಕಡಿಮೆ ಮಾಡಲು ಗ್ರಾಹಕರಿಗೆ (ಖರೀದಿದಾರರು/ಅಂತಿಮ ಬಳಕೆದಾರರಿಗೆ) ಮುಂಗಡ ಪ್ರೋತ್ಸಾಹ ಧನವನ್ನು ನೀಡಲಾಗುತ್ತಿದ್ದು, ಇವುಗಳನ್ನು ಭಾರತ ಸರ್ಕಾರವು ಸಾಧನದ ಮೂಲ ತಯಾರಕರಿಗೆ (OEM ಗಳಿಗೆ) ಮರುಪಾವತಿ ಮಾಡುತ್ತಿದೆ.
ಈ ಯೋಜನೆಯು 28 ಲಕ್ಷಕ್ಕೂ ಹೆಚ್ಚು ವಿದ್ಯುತ್ ವಾಹನಗಳಿಗೆ ಬೆಂಬಲ ನೀಡಿದೆ. ಈ ಯೋಜನೆಯಡಿಯಲ್ಲಿ 2026 ರ ಜನವರಿ 27ರ ವೇಳೆಗೆ, 19.19 ಲಕ್ಷ ಇ-2ಡಬ್ಲ್ಯೂ ಮತ್ತು 2.93 ಲಕ್ಷ ಇ-3ಡಬ್ಲ್ಯೂ ಸೇರಿದಂತೆ ಒಟ್ಟು 22.12 ಲಕ್ಷ ವಿದ್ಯುತ್ ವಾಹನಗಳನ್ನು ಮಾರಾಟ ಮಾಡಲಾಗಿದೆ.
ಇದಲ್ಲದೆ, ಈ ಯೋಜನೆಯು 14,028 ಎಲೆಕ್ಟ್ರಿಕ್ ಬಸ್‌ಗಳ ನಿಯೋಜನೆಗಾಗಿ ರೂ.4,391 ಕೋಟಿ ಹಂಚಿಕೆಯನ್ನು ಹೊಂದಿದೆ. ಈ ಪೈಕಿ, ಬೆಂಗಳೂರು, ದೆಹಲಿ, ಮುಂಬೈ, ಹೈದರಾಬಾದ್, ಅಹಮದಾಬಾದ್, ಪುಣೆ ಮತ್ತು ಸೂರತ್ ನಂತಹ ನಾಲ್ಕು ದಶಲಕ್ಷಕ್ಕಿಂತ ಹೆಚ್ಚಿನ ಜನಸಂಖ್ಯೆಯನ್ನು ಹೊಂದಿರುವ ಏಳು ನಗರಗಳಲ್ಲಿ ನಿಯೋಜನೆಗಾಗಿ ಎರಡು ಹಂತಗಳಲ್ಲಿ 13,800 ಇ-ಬಸ್ ಗಳನ್ನು ಹಂಚಿಕೆ ಮಾಡಲಾಗಿದೆ. ಮೊದಲ ಹಂತದಲ್ಲಿ ಹಂಚಿಕೆಯಾದ 10,900 ಇ-ಬಸ್ ಗಳ ಟೆಂಡರ್ ಗಳನ್ನು ಕನ್ವರ್ಜೆನ್ಸ್ ಎನರ್ಜಿ ಸರ್ವೀಸ್ ಲಿಮಿಟೆಡ್ (ಸಿಇಎಸ್‌ಎಲ್) ಈಗಾಗಲೇ ಪೂರ್ಣಗೊಳಿಸಿದ್ದು, ಹಂಚಿಕೆಯಾಗದೇ ಉಳಿದಿದ್ದ 2,900 ಇ-ಬಸ್ ಗಳಿಗೆ ಎರಡನೇ ಹಂತದಲ್ಲಿ ದಿನಾಂಕ : 09.01.2026 ರಂದು ಟೆಂಡರ್ ಗಳನ್ನು ಕರೆಯಲಾಗಿದೆ.
ಈ ಯೋಜನೆಯು ಇವಿ ಚಾರ್ಜಿಂಗ್ ಮೂಲಸೌಕರ್ಯಗಳ ನಿಯೋಜನೆ ಮತ್ತು ಪರೀಕ್ಷಾ ಸೌಕರ್ಯಗಳ ಮೇಲ್ದರ್ಜೆಗೇರಿಸುವಿಕೆಗೆ ಸಹ ಪೂರಕವಾಗಿದೆ. ದೇಶವ್ಯಾಪಿಯಾಗಿ ವಿದ್ಯುತ್ ವಾಹನ ಸಾರ್ವಜನಿಕ ಚಾರ್ಜಿಂಗ್ ಕೇಂದ್ರಗಳ (ಇವಿಪಿಸಿಎಸ್) ಸ್ಥಾಪನೆಗೆ ಈ ಯೋಜನೆಯಡಿಯಲ್ಲಿ ರೂ.2,000 ಕೋಟಿ ಹಂಚಿಕೆ ಮಾಡಲಾಗಿದೆ.
ಈ ಕ್ರಮಗಳು ವಿದ್ಯುತ್ ವಾಹನ ಪರಿಸರ ವ್ಯವಸ್ಥೆಯನ್ನು ಬಲಪಡಿಸಿದ್ದು ಗ್ರಾಹಕರ ವಿಶ್ವಾಸವನ್ನು ವರ್ಧಿಸಿದೆ ಹಾಗೂ ಶುದ್ಧ ಮತ್ತು ಸುಸ್ಥಿರ ಸಾರಿಗೆ ಪರಿಹಾರದ ಬೃಹತ್ ಪ್ರಮಾಣದ ಅಳವಡಿಕೆ ಸಾಧ್ಯವಾಗಿಸಿದೆ.
ಪಿಎಂ ಇ-ಡ್ರೈವ್ ಯೋಜನೆಯಡಿಯಲ್ಲಿ 2025 ರ ಡಿಸೆಂಬರ್ 31 ರ ವೇಳೆಗೆ, ಇ-2ಡಬ್ಲ್ಯೂ ಮತ್ತು ಇ-3ಡಬ್ಲ್ಯೂಗಳ ಖರೀದಿದಾರರಿಗೆ ಒದಗಿಸಿದ ಬೇಡಿಕೆ ಪ್ರೋತ್ಸಾಹ ಧನದ ಮೊತ್ತವಾದ ಒಟ್ಟು 1,703 ಕೋಟಿ ರೂ.ಗಳನ್ನು ಈ ವಾಹನಗಳ ಸಾಧನಗಳ ಮೂಲ ತಯಾರಕರಿಗೆ (ಒಇಎಂ) ಮರುಪಾವತಿ ಮಾಡಲಾಗಿದೆ.
ಕೇಂದ್ರ ಭಾರೀ ಕೈಗಾರಿಕೆಗಳ ರಾಜ್ಯ ಖಾತೆ ಸಚಿವರಾದ ಶ್ರೀ ಭೂಪತಿರಾಜು ಶ್ರೀನಿವಾಸ ವರ್ಮಾ ಅವರು ಲೋಕಸಭೆಯಲ್ಲಿಂದು ನೀಡಿದ ಲಿಖಿತ ಉತ್ತರದಲ್ಲಿ ಈ ಮಾಹಿತಿ ತಿಳಿಸಿದ್ದಾರೆ.
*****
(ಪ್ರಕಟಣೆ ಐ.ಡಿ.: 2222883)
ವಿಸಿಟರ್ ಕೌಂಟರ್ : 8