ಗೃಹ ವ್ಯವಹಾರಗಳ ಸಚಿವಾಲಯ
azadi ka amrit mahotsav

ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ದಿಬ್ರೂಗಢದಲ್ಲಿ ಅಸ್ಸಾಂ ವಿಧಾನಸಭೆಯ ಹೊಸ ಕಟ್ಟಡಕ್ಕೆ ಶಂಕುಸ್ಥಾಪನೆ ನೆರವೇರಿಸಿದರು, ಇದರೊಂದಿಗೆ ಸುಮಾರು ₹1,715 ಕೋಟಿ ಒಟ್ಟು ವೆಚ್ಚದ 5 ಯೋಜನೆಗಳ ಭೂಮಿಪೂಜೆ ಮತ್ತು ಉದ್ಘಾಟನೆಯನ್ನು ನೆರವೇರಿಸಿದರು


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಭಾರತ-ಯುರೋಪಿಯನ್ ಒಕ್ಕೂಟದ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ, ಇದು ಅಸ್ಸಾಂನ ಚಹಾವು ಶೂನ್ಯ ಸುಂಕದೊಂದಿಗೆ ಪ್ಯಾರಿಸ್‌ ನಿಂದ ಬರ್ಲಿನ್‌ ವರೆಗೆ ತಲುಪಲು ಅನುವು ಮಾಡಿಕೊಟ್ಟಿದೆ

ನುಸುಳುಕೋರರು ಇನ್ನು ಮುಂದೆ ಭಾರತಕ್ಕೆ ಪ್ರವೇಶಿಸಲು ಸಾಧ್ಯವಾಗದಂತೆ ನಾವು ವ್ಯವಸ್ಥೆಗಳನ್ನು ರೂಪಿಸುತ್ತಿದ್ದೇವೆ ಮತ್ತು ಈಗಾಗಲೇ ಪ್ರವೇಶಿಸಿರುವವರನ್ನು ಬಿಡುವುದಿಲ್ಲ; ನಾವು ಅವರನ್ನು ಒಬ್ಬೊಬ್ಬರಾಗಿ ಗುರುತಿಸಿ ಹೊರಹಾಕುತ್ತೇವೆ

ಅಸ್ಸಾಂನ ಜನಸಂಖ್ಯಾ ಸ್ವರೂಪವನ್ನು ಬದಲಿಸುವ ಮತ್ತು ದೇಶದ ಭದ್ರತೆಗೆ ಧಕ್ಕೆ ತರುವ ನುಸುಳುಕೋರರ ಪ್ರಯತ್ನಗಳನ್ನು ತಡೆಯಲು ನಮ್ಮ ಸರ್ಕಾರದಿಂದ ಮಾತ್ರ ಸಾಧ್ಯ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಸ್ಸಾಂ ಮತ್ತು ಈಶಾನ್ಯ ಭಾಗಕ್ಕೆ ಪ್ರತಿ ಅವಕಾಶದಲ್ಲೂ ಆದ್ಯತೆ ನೀಡುತ್ತಾರೆ, ಏಕೆಂದರೆ ಈ ಪ್ರದೇಶವು ಅವರ ಹೃದಯದಲ್ಲಿದೆ

ವಿರೋಧ ಪಕ್ಷವು ವೋಟ್ ಬ್ಯಾಂಕ್‌ ಗಾಗಿ ಶ್ರೀಮಂತ ಶಂಕರದೇವ್ ಅವರ ಪವಿತ್ರ ಭೂಮಿಯನ್ನು ನುಸುಳುಕೋರರಿಗೆ ಹಸ್ತಾಂತರಿಸಿತ್ತು, ಆದರೆ ಅಸ್ಸಾಂನ ಹಿಮಂತ ಸರ್ಕಾರವು ಈಗ ಅದನ್ನು ನುಸುಳುಕೋರ ಮುಕ್ತಗೊಳಿಸುತ್ತಿದೆ

ಅಸ್ಸಾಂ ಅನ್ನು ಹೆಚ್ಚು ಒಳಗೊಳ್ಳುವಂತೆ ಮಾಡುವ ಪ್ರಯತ್ನದ ಭಾಗವಾಗಿ, ದಿಬ್ರೂಗಢವನ್ನು ರಾಜ್ಯದ ಎರಡನೇ ರಾಜಧಾನಿಯನ್ನಾಗಿ ಅಭಿವೃದ್ಧಿಪಡಿಸುವ ನಿರ್ಧಾರ ತೆಗೆದುಕೊಳ್ಳಲಾಗಿದೆ

ವಿರೋಧ ಪಕ್ಷದ ಸರ್ಕಾರದ ಅವಧಿಯಲ್ಲಿ ಕರ್ಫ್ಯೂಗಳು ಮತ್ತು ಸ್ಫೋಟಗಳ ಸದ್ದು ಕೇಳಿಸುತ್ತಿತ್ತು; ಇಂದು ನಮ್ಮ ಪಕ್ಷದ ಆಡಳಿತದಲ್ಲಿ ಅಸ್ಸಾಂನಲ್ಲಿ ಭೂಪೇನ್ ದಾ ಅವರ ಸಂಗೀತ ಮೊಳಗುತ್ತಿದೆ

ಅಸ್ಸಾಂನ ಹಿಮಂತ ಅವರ ಸರ್ಕಾರದ ನೇತೃತ್ವದಲ್ಲಿ, ಚಹಾ ತೋಟಗಳ 3 ಲಕ್ಷಕ್ಕೂ ಹೆಚ್ಚು ಸಂತಾಲ್, ಕೋಲ್, ಭಿಲ್, ಮುಂಡಾ ಮತ್ತು ಬಂಗಾಳಿ ಕಾರ್ಮಿಕರನ್ನು ಭೂಮಿಯ ಮಾಲೀಕರನ್ನಾಗಿ ಮಾಡಲಾಗಿದೆ

ವಿರೋಧ ಪಕ್ಷದ ಆಡಳಿತದಲ್ಲಿ ಅಸ್ಸಾಂ ಬಾಂಬ್ ಸ್ಫೋಟಗಳು, ಹಿಂಸಾಚಾರ ಮತ್ತು ಯುವಕರ ಸಾವುಗಳಿಗೆ ಹೆಸರಾಗಿತ್ತು, ಆದರೆ ಮೋದಿ ಸರ್ಕಾರದ ಅವಧಿಯಲ್ಲಿ ಯುವಕರ ಆದಾಯವು ಶೇಕಡಾ 50 ರಷ್ಟು ಹೆಚ್ಚಾಗಿದೆ

ಒಂದು ಕಾಲದಲ್ಲಿ ಇಲ್ಲಿ ಕರ್ಫ್ಯೂ, ಬಾಂಬ್ ಸ್ಫೋಟಗಳು ಮತ್ತು ಗುಂಡಿನ ಮೊರೆತಗಳು ತುಂಬಿದ್ದವು; ಇಂದು ಭೂಪೇನ್ ದಾ ಅವರ ಸಂಗೀತವು ಇಲ್ಲಿಂದ ಇಡೀ ಜಗತ್ತನ್ನು ತಲುಪುತ್ತಿದೆ

ಕೇಂದ್ರ ಗೃಹ ಸಚಿವರು ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿರುವ ವಿಶ್ವದರ್ಜೆಯ ಬಹುಪಯೋಗಿ ಕ್ರೀಡಾ ಸಂಕೀರ್ಣದ ಮೊದಲ ಹಂತವನ್ನು ಉದ್ಘಾಟಿಸಿದರು, ಅದರ ಎರಡನೇ ಹಂತಕ್ಕೆ ಶಂಕುಸ್ಥಾಪನೆ ನೆರವೇರಿಸಿದರು, ಶಾಸಕರ ವಸತಿ ಗೃಹಗಳ ನಿರ್ಮಾಣಕ್ಕೆ ಚಾಲನೆ ನೀಡಿದರು ಮತ್ತು ವನ್ಯಜೀವಿ ಸಂಶೋಧನಾ ಸಂಸ್ಥೆಯ ಭೂಮಿಪೂಜೆ ನೆರವೇರಿಸಿದರು

प्रविष्टि तिथि: 30 JAN 2026 6:14PM by PIB Bengaluru

ಕೇಂದ್ರ ಗೃಹ ಸಚಿವರು ಹಾಗೂ ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ಇಂದು ದಿಬ್ರೂಗಢದಲ್ಲಿ ಅಸ್ಸಾಂ ವಿಧಾನಸಭೆಯ ನೂತನ ಕಟ್ಟಡಕ್ಕೆ ಶಂಕುಸ್ಥಾಪನೆ ನೆರವೇರಿಸಿದರು. ಇದರೊಂದಿಗೆ ಸುಮಾರು ₹1,715 ಕೋಟಿ ವೆಚ್ಚದ ಒಟ್ಟು 5 ಯೋಜನೆಗಳ ಭೂಮಿಪೂಜೆ ಮತ್ತು ಉದ್ಘಾಟನೆಯನ್ನು ಅವರು ನೆರವೇರಿಸಿದರು. ಈ ಸಂದರ್ಭದಲ್ಲಿ ಅಸ್ಸಾಂ ಮುಖ್ಯಮಂತ್ರಿ ಶ್ರೀ ಹಿಮಂತ ಬಿಸ್ವ ಶರ್ಮಾ, ಕೇಂದ್ರ ಬಂದರು, ಹಡಗು ಮತ್ತು ಜಲಸಾರಿಗೆ ಸಚಿವ ಶ್ರೀ ಸರ್ಬಾನಂದ ಸೋನೊವಾಲ್, ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವರಾದ ಶ್ರೀ ಪವಿತ್ರ ಮಾರ್ಗರಿಟಾ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು, ಅಸ್ಸಾಂ ಅನ್ನು ಸರ್ವವ್ಯಾಪಿಯಾಗಿಸುವ ಪ್ರಯತ್ನದ ಭಾಗವಾಗಿ ದಿಬ್ರೂಗಢವನ್ನು ರಾಜ್ಯದ ಎರಡನೇ ರಾಜಧಾನಿಯನ್ನಾಗಿ ಮಾಡಲಾಗುವುದು ಎಂದು ಅಸ್ಸಾಂ ಮುಖ್ಯಮಂತ್ರಿ ಶ್ರೀ ಹಿಮಂತ ಬಿಸ್ವ ಶರ್ಮಾ ಅವರು 2025 ರಲ್ಲಿ ಘೋಷಿಸಿದ್ದರು ಎಂದು ಸ್ಮರಿಸಿದರು. ವಿರೋಧ ಪಕ್ಷಗಳ ಸರ್ಕಾರಗಳಲ್ಲಿ ಅನೇಕ ಘೋಷಣೆಗಳು ಕೇವಲ ಘೋಷಣೆಗಳಾಗಿಯೇ ಉಳಿಯುತ್ತಿದ್ದವು, ಆದರೆ ಈಗ ನಮ್ಮ ಪಕ್ಷದ ಸರ್ಕಾರವಿದೆ ಎಂದು ಅವರು ಹೇಳಿದರು. ಮುಖ್ಯಮಂತ್ರಿ ಶ್ರೀ ಶರ್ಮಾ ಅವರು ಘೋಷಣೆ ಮಾಡಿದ್ದರು ಮತ್ತು ಅದರಂತೆ ಇಂದು 57 ಬಿಘಾ ಭೂಮಿಯಲ್ಲಿ ಅಸ್ಸಾಂನ ಎರಡನೇ ವಿಧಾನಸಭಾ ಸಂಕೀರ್ಣಕ್ಕೆ ಶಂಕುಸ್ಥಾಪನೆ ನೆರವೇರಿಸಲಾಗಿದೆ ಎಂದು ತಿಳಿಸಿದರು. ಇನ್ನು ಮುಂದೆ ದಿಬ್ರೂಗಢದ ನಿವಾಸಿಗಳನ್ನು ಸಹ ಅಸ್ಸಾಂ ರಾಜಧಾನಿಯ ನಿವಾಸಿಗಳೆಂದು ಪರಿಗಣಿಸಲಾಗುವುದು ಎಂದು ಅವರು ಹೇಳಿದರು. ಅಸ್ಸಾಂ ಅನ್ನು ಒಳಗೊಳ್ಳುವಿಕೆಯ ಹಾದಿಯಲ್ಲಿ ಮುನ್ನಡೆಸಲು ದಿಬ್ರೂಗಢವನ್ನು ಎರಡನೇ ರಾಜಧಾನಿಯನ್ನಾಗಿ ಮಾಡುವ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಶ್ರೀ ಶಾ ತಿಳಿಸಿದರು. ಇಲ್ಲಿ ಅನೇಕ ಜಾತಿಗಳು, ಸಮುದಾಯಗಳು ಮತ್ತು ಬುಡಕಟ್ಟುಗಳು ವಾಸಿಸುತ್ತವೆ; ಇವರೆಲ್ಲರಿಗೂ ಅಸ್ಸಾಂ ಮೇಲೆ ಹಕ್ಕಿದೆ ಮತ್ತು ನಾವೆಲ್ಲರೂ ಸೇರಿ ಶ್ರೇಷ್ಠ ಅಸ್ಸಾಂ ಅನ್ನು ನಿರ್ಮಿಸುತ್ತೇವೆ ಎಂದು ಅವರು ಈ ಸಂದರ್ಭದಲ್ಲಿ ಭರವಸೆ ನೀಡಿದರು.

ಅಸ್ಸಾಂನ ನದಿಗಳು ನಮ್ಮ ಸಂಸ್ಕೃತಿಯ ಪರಂಪರೆ, ನಮ್ಮ ರೈತರ ಆರ್ಥಿಕ ಜೀವನಾಡಿ ಮತ್ತು ನಮಗೆ ತಾಯಿಯಿದ್ದಂತೆ ಎಂದು ಕೇಂದ್ರ ಗೃಹ ಮತ್ತು ಸಹಕಾರ ಸಚಿವರು ಹೇಳಿದರು. ವರ್ಷಗಳಿಂದ ಅಸ್ಸಾಂ ಪ್ರವಾಹದ ಸಮಸ್ಯೆಯಿಂದ ತತ್ತರಿಸುತ್ತಿದೆ ಎಂದು ಅವರು ಹೇಳಿದರು. ಅಸ್ಸಾಂ ಅನ್ನು ಪ್ರವಾಹದಿಂದ ರಕ್ಷಿಸಲು, ನಾವು ಬಾಹ್ಯಾಕಾಶ ಅನ್ವಯಿಕ ಕೇಂದ್ರದ ಮೂಲಕ ರಾಜ್ಯದ ಸಮೀಕ್ಷೆಯನ್ನು ನಡೆಸಿದ್ದೇವೆ ಮತ್ತು ಅದರ ಆಧಾರದ ಮೇಲೆ ದೊಡ್ಡ ಜೌಗು ಪ್ರದೇಶಗಳನ್ನು ಗುರುತಿಸಿದ್ದೇವೆ ಎಂದು ಶ್ರೀ ಶಾ ಹೇಳಿದರು. ಮೊದಲ ಹಂತದಲ್ಲಿ 15 ಜೌಗು ಪ್ರದೇಶಗಳನ್ನು ಅಭಿವೃದ್ಧಿಪಡಿಸಲು ಭಾರತ ಸರ್ಕಾರದ ಗೃಹ ಸಚಿವಾಲಯವು ₹692 ಕೋಟಿ ವ್ಯಯಿಸಿದೆ ಎಂದು ಅವರು ತಿಳಿಸಿದರು. ಇದರಿಂದ ಸುಮಾರು 7.5 ಲಕ್ಷ ಜನರು ಪ್ರವಾಹದಿಂದ ರಕ್ಷಿಸಲ್ಪಡುತ್ತಾರೆ, ಸುಮಾರು 77,000 ಹೆಕ್ಟೇರ್ ಭೂಮಿಗೆ ನೀರಾವರಿ ಒದಗಿಸಲಾಗುತ್ತದೆ, ಪ್ರವಾಹದ ತೀವ್ರತೆ ಕಡಿಮೆಯಾಗುತ್ತದೆ ಮತ್ತು ನೀರು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಹೆಚ್ಚಾಗುವುದರಿಂದ ಅಂತರ್ಜಲ ಮಟ್ಟವೂ ವೃದ್ಧಿಸುತ್ತದೆ ಎಂದು ಅವರು ಹೇಳಿದರು. ಈ 15 ದೊಡ್ಡ ಕೊಳಗಳಿಂದ ನೀರಾವರಿ ಒದಗಿಸಲಾಗುವುದು, ಇದು ಅಸ್ಸಾಂನ ರೈತರು ವರ್ಷಕ್ಕೆ ಮೂರು ಬಾರಿ ಬೆಳೆಗಳನ್ನು ಬೆಳೆಯಲು ಸಹಾಯ ಮಾಡುತ್ತದೆ, ಪಶುಸಂಗೋಪನೆಯನ್ನು ಉತ್ತೇಜಿಸುತ್ತದೆ ಮತ್ತು ಹೈನುಗಾರಿಕೆ ಉದ್ಯಮಕ್ಕೂ ಉತ್ತೇಜನ ನೀಡುತ್ತದೆ ಎಂದು ಅವರು ಹೇಳಿದರು. ಇವುಗಳನ್ನು ಜಲಕ್ರೀಡೆಗಳಿಗೂ ಬಳಸಲಾಗುವುದು ಮತ್ತು ಇವು ಪ್ರವಾಸಿಗರ ಆಕರ್ಷಣೆಯ ಕೇಂದ್ರಗಳಾಗಲಿವೆ ಎಂದು ಅವರು ತಿಳಿಸಿದರು.

ಪ್ರಧಾನಮಂತ್ರಿ ಮೋದಿ ಜೀ ಅವರ ನೇತೃತ್ವದಲ್ಲಿ, ಭಾರತ ಸರ್ಕಾರವು ಇತ್ತೀಚೆಗೆ ಯುರೋಪಿಯನ್ ಒಕ್ಕೂಟದ 27 ದೇಶಗಳೊಂದಿಗೆ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಿದೆ ಮತ್ತು ಇದರ ದೊಡ್ಡ ಪ್ರಯೋಜನವು ದಿಬ್ರೂಗಢಕ್ಕೆ ಸಿಗಲಿದೆ ಎಂದು ಶ್ರೀ ಅಮಿತ್ ಶಾ ಹೇಳಿದರು. ಪ್ರಧಾನಮಂತ್ರಿ ಮೋದಿ ಜೀ ಅವರು ಯುರೋಪಿಯನ್ ಒಕ್ಕೂಟದ (EU) ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ, ಇದು ಅಸ್ಸಾಂನ ಚಹಾವು ಶೂನ್ಯ ಸುಂಕದೊಂದಿಗೆ ಪ್ಯಾರಿಸ್‌ ನಿಂದ ಬರ್ಲಿನ್‌ ವರೆಗೆ ತಲುಪಲು ಅನುವು ಮಾಡಿಕೊಡುತ್ತದೆ ಎಂದು ಅವರು ಹೇಳಿದರು.

ದಶಕಗಳ ಕಾಲ ಅಸ್ಸಾಂನ ಅಭಿವೃದ್ಧಿಗೆ ವಿರೋಧ ಪಕ್ಷದ ಸರ್ಕಾರಗಳು ಏನನ್ನೂ ಮಾಡಲಿಲ್ಲ ಎಂದು ಕೇಂದ್ರ ಗೃಹ ಮತ್ತು ಸಹಕಾರ ಸಚಿವರು ಹೇಳಿದರು. ಮೂಲಸೌಕರ್ಯ, ವನ್ಯಜೀವಿ ಮತ್ತು ಪರಿಸರ ಸಂರಕ್ಷಣೆ, ಸೆಮಿಕಂಡಕ್ಟರ್ ಮತ್ತು ಚಿಪ್ ಉದ್ಯಮ ಸೇರಿದಂತೆ ಪ್ರತಿಯೊಂದು ವಲಯದಲ್ಲೂ ಅಸ್ಸಾಂಗೆ ಮೊದಲ ಪ್ರಾಶಸ್ತ್ಯ ನೀಡುವುದು ಮೋದಿ ಸರ್ಕಾರದ ಆದ್ಯತೆಯಾಗಿದೆ ಎಂದು ಅವರು ತಿಳಿಸಿದರು. ರೈಲ್ವೆ, ಜಲಮಾರ್ಗ, ವಿಮಾನ ನಿಲ್ದಾಣ ಅಥವಾ ಕೈಗಾರಿಕೆಗಳ ಸ್ಥಾಪನೆ ಇರಲಿ, ಪ್ರತಿಯೊಂದು ಕ್ಷೇತ್ರದಲ್ಲೂ ಪ್ರಧಾನಮಂತ್ರಿ ಮೋದಿ ಜೀ ಅವರು ಅಸ್ಸಾಂಗೆ ಆದ್ಯತೆ ನೀಡುತ್ತಾರೆ ಎಂದು ಶ್ರೀ ಶಾ ಹೇಳಿದರು. ಈ ಪ್ರದೇಶವು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಜೀ ಅವರ ಹೃದಯದಲ್ಲಿದೆ, ಹಾಗಾಗಿ ಅವರು ಅಸ್ಸಾಂ ಮತ್ತು ಈಶಾನ್ಯ ರಾಜ್ಯಗಳಿಗೆ ಎಲ್ಲೆಡೆ ಆದ್ಯತೆ ನೀಡುತ್ತಾರೆ ಎಂದು ಅವರು ತಿಳಿಸಿದರು.

ಅಸ್ಸಾಂಗೆ ವಿರೋಧ ಪಕ್ಷದ ಸರ್ಕಾರಗಳು ಗುಂಡುಗಳು, ಬಾಂಬ್ ಸ್ಫೋಟಗಳು, ಸಂಘರ್ಷ ಮತ್ತು ಯುವಕರ ಸಾವುಗಳನ್ನು ನೀಡಿದ್ದವು ಎಂದು ಶ್ರೀ ಅಮಿತ್ ಶಾ ಹೇಳಿದರು. ಮೋದಿ ಜೀ ಪ್ರಧಾನಮಂತ್ರಿಯಾದ ನಂತರ, 20ಕ್ಕೂ ಹೆಚ್ಚು ಒಪ್ಪಂದಗಳ ಅಡಿಯಲ್ಲಿ ಇಡೀ ಈಶಾನ್ಯ ಭಾಗದಾದ್ಯಂತ 10,000 ಕ್ಕೂ ಹೆಚ್ಚು ಯುವಕರು ಶಸ್ತ್ರಾಸ್ತ್ರಗಳನ್ನು ತ್ಯಜಿಸಿದ್ದಾರೆ, ಇದರಿಂದಾಗಿ ಅಸ್ಸಾಂ ಮತ್ತು ಈಶಾನ್ಯ ಭಾರತ ಸುರಕ್ಷಿತವಾಗಿದೆ ಎಂದು ಅವರು ತಿಳಿಸಿದರು. ಒಂದು ಕಾಲದಲ್ಲಿ ಇಲ್ಲಿ ಕರ್ಫ್ಯೂ, ಬಾಂಬ್ ಸ್ಫೋಟಗಳು ಮತ್ತು ಗುಂಡಿನ ಮೊರೆತವೇ ಕೇಳಿಬರುತ್ತಿತ್ತು, ಆದರೆ ಇಂದು ಈ ಪ್ರದೇಶದಿಂದ ಭೂಪೇನ್ ದಾ ಅವರ ಸಂಗೀತವು ಇಡೀ ಜಗತ್ತನ್ನು ತಲುಪುತ್ತಿದೆ ಎಂದು ಶ್ರೀ ಶಾ ಹೇಳಿದರು. ಭೂಪೇನ್ ಹಜಾರಿಕಾ ಮತ್ತು ಭಾರತ ಮಾತೆಯ ಶ್ರೇಷ್ಠ ಪುತ್ರ ಗೋಪಿನಾಥ್ ಬೊರ್ಡೊಲೋಯ್ ಅವರಿಗೆ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ 'ಭಾರತ ರತ್ನ'ವನ್ನು ನೀಡಿದ್ದು ಮೋದಿ ಸರ್ಕಾರವೇ ಆಗಿದೆ ಎಂದು ಅವರು ಹೇಳಿದರು. ನಾವು ಇಲ್ಲಿ ಶಾಂತಿ, ಸುಶಾಸನ, ಅಭಿವೃದ್ಧಿ ಮತ್ತು ಎಲ್ಲರನ್ನೂ ಒಟ್ಟಾಗಿ ಕೊಂಡೊಯ್ಯುವ ಹೊಸ ಸಂಪ್ರದಾಯವನ್ನು ಪ್ರಾರಂಭಿಸಿದ್ದೇವೆ ಎಂದು ಅವರು ತಿಳಿಸಿದರು.

2021 ರಲ್ಲಿ ದಿಬ್ರೂಗಢದ ಮಣ್ಣಿನಲ್ಲಿ, ವಿರೋಧ ಪಕ್ಷದ ಸರ್ಕಾರವು ಅಸ್ಸಾಂ ವಿರೋಧಿಯಾದ ಮತ್ತು ಅಸ್ಸಾಂನ ಚಹಾದ ಪ್ರತಿಷ್ಠೆಯನ್ನು ವಿಶ್ವಾದ್ಯಂತ ಕುಂದಿಸುವ ಗುರಿಯನ್ನು ಹೊಂದಿದ್ದ ಟೂಲ್‌ ಕಿಟ್ ಅನ್ನು ಹರಡಿತ್ತು ಎಂದು ಕೇಂದ್ರ ಗೃಹ ಮತ್ತು ಸಹಕಾರ ಸಚಿವರು ಹೇಳಿದರು. ಅಸ್ಸಾಂನಲ್ಲಿರುವ ನಮ್ಮ ಚಹಾ ತೋಟದ ಕಾರ್ಮಿಕರ ಕಲ್ಯಾಣಕ್ಕಾಗಿ ವಿರೋಧ ಪಕ್ಷದ ಸರ್ಕಾರಗಳು ಇಂದಿನವರೆಗೂ ಏನನ್ನೂ ಮಾಡಿಲ್ಲ ಎಂದು ಅವರು ಹೇಳಿದರು. ನಮ್ಮ ಪಕ್ಷದ ಸರ್ಕಾರವು 2025 ರಲ್ಲಿ ಭೂ ಹಿಡುವಳಿ ತಿದ್ದುಪಡಿ ಕಾಯ್ದೆಯನ್ನು (Land Holding Amendment Act) ಅಂಗೀಕರಿಸಿತು, ಆ ಮೂಲಕ 825 ಚಹಾ ತೋಟಗಳ 3 ಲಕ್ಷಕ್ಕೂ ಹೆಚ್ಚು ಸಂತಾಲ್, ಕೋಲ್, ಭಿಲ್, ಮುಂಡಾ ಮತ್ತು ಬಂಗಾಳಿ ಕಾರ್ಮಿಕರನ್ನು ಭೂಮಿಯ ಮಾಲೀಕರನ್ನಾಗಿ ಮಾಡಿದೆ ಎಂದು ಶ್ರೀ ಶಾ ಹೇಳಿದರು. ಪ್ರಧಾನಮಂತ್ರಿ ಮೋದಿ ಜೀ ಮತ್ತು ಅಸ್ಸಾಂ ಸರ್ಕಾರವು ಲಚಿತ್ ಬರ್ಫುಕನ್ ಅವರ ಜೀವನ ಚರಿತ್ರೆಯನ್ನು ದೇಶದ 23 ಭಾಷೆಗಳಿಗೆ ಅನುವಾದಿಸಿದೆ ಎಂದು ಅವರು ತಿಳಿಸಿದರು.

ಅಸ್ಸಾಂನಲ್ಲಿ ನುಸುಳುವಿಕೆಗೆ ಅವಕಾಶ ಮಾಡಿಕೊಡುವ ಮೂಲಕ ವಿರೋಧ ಪಕ್ಷದ ಸರ್ಕಾರಗಳು ಅಧಿಕಾರ ಪಡೆಯಲು ಅದನ್ನು ವೋಟ್ ಬ್ಯಾಂಕ್ ರಾಜಕಾರಣದ ಅಸ್ತ್ರವನ್ನಾಗಿ ಮಾಡಿಕೊಂಡಿವೆ ಎಂದು ಶ್ರೀ ಅಮಿತ್ ಶಾ ಹೇಳಿದರು. ಅಸ್ಸಾಂ ಸರ್ಕಾರವು ಜನಸಂಖ್ಯಾ ಬದಲಾವಣೆಯ ಪ್ರಕ್ರಿಯೆಯನ್ನು ತಡೆದಿದೆ ಮತ್ತು ನುಸುಳುಕೋರರಿಂದ 1 ಲಕ್ಷ 26 ಸಾವಿರ ಎಕರೆ ಭೂಮಿಯನ್ನು ಮುಕ್ತಗೊಳಿಸಿದೆ ಎಂದು ಅವರು ಹೇಳಿದರು. ಹಿಮಂತ ಬಿಸ್ವ ಶರ್ಮಾ ಜೀ ಅವರ ನೇತೃತ್ವದಲ್ಲಿ, ನಾವು ಅಸ್ಸಾಂನಿಂದ ಪ್ರತಿಯೊಬ್ಬ ನುಸುಳುಕೋರನನ್ನು ಹೊರಹಾಕುತ್ತೇವೆ ಎಂದು ಶ್ರೀ ಶಾ ಹೇಳಿದರು. ನುಸುಳುಕೋರರು ನಮ್ಮ ಜನಸಂಖ್ಯಾ ಸ್ವರೂಪವನ್ನು ಬದಲಾಯಿಸುತ್ತಿದ್ದಾರೆ ಮತ್ತು ದೇಶದ ಭದ್ರತೆಗೂ ಬೆದರಿಕೆಯೊಡ್ಡುತ್ತಿದ್ದಾರೆ, ಆದ್ದರಿಂದ ಅವರು ಯಾವುದೇ ರೀತಿಯಲ್ಲಿ ಅಸ್ಸಾಂಗೆ ಅಥವಾ ದೇಶಕ್ಕೆ ಪ್ರಯೋಜನಕಾರಿಯಲ್ಲ ಎಂದು ಅವರು ತಿಳಿಸಿದರು. ಜನಸಂಖ್ಯಾ ಬದಲಾವಣೆಯನ್ನು ತಡೆಯದಿದ್ದರೆ ಮುಂದಿನ ದಿನಗಳಲ್ಲಿ ಅಸ್ಸಾಂ ಸಂಕಷ್ಟಗಳನ್ನು ಎದುರಿಸಬೇಕಾಗಬಹುದು ಮತ್ತು ಇದನ್ನು ತಡೆಯಲು ನಮ್ಮ ಸರ್ಕಾರದಿಂದ ಮಾತ್ರ ಸಾಧ್ಯ ಎಂದು ಅವರು ಹೇಳಿದರು. ಈ ಹಿಂದೆ ಅಸ್ಸಾಂನ ಗಡಿಗಳು ನುಸುಳುಕೋರರಿಗಾಗಿ ಮುಕ್ತವಾಗಿದ್ದವು, ಆದರೆ ಪ್ರಧಾನಮಂತ್ರಿ ಮೋದಿ ಜೀ ಮತ್ತು ಅಸ್ಸಾಂ ಸರ್ಕಾರ ಸೇರಿ ಅಸ್ಸಾಂ ಗಡಿಯೊಳಗೆ ನುಸುಳುಕೋರರ ಪ್ರವೇಶವನ್ನು ತಡೆದಿವೆ ಎಂದು ಶ್ರೀ ಶಾ ಹೇಳಿದರು. ವಿರೋಧ ಪಕ್ಷವು ವೋಟ್ ಬ್ಯಾಂಕ್‌ ಗಾಗಿ ಶ್ರೀಮಂತ ಶಂಕರದೇವ್ ಜೀ ಅವರ ಪವಿತ್ರ ಭೂಮಿಯನ್ನು ನುಸುಳುಕೋರರಿಗೆ ಹಸ್ತಾಂತರಿಸಿತ್ತು, ಅದನ್ನು ಅಸ್ಸಾಂನ ಹಿಮಂತ ಸರ್ಕಾರವು ಈಗ ನುಸುಳುಕೋರ ಮುಕ್ತಗೊಳಿಸುತ್ತಿದೆ ಎಂದು ಶ್ರೀ ಶಾ ಹೇಳಿದರು.

ಕಳೆದ 5 ವರ್ಷಗಳಲ್ಲಿ ಅಸ್ಸಾಂನಲ್ಲಿ ನಾವು ಅತ್ಯಂತ ಗಮನಾರ್ಹ ಆರ್ಥಿಕ ಸುಧಾರಣೆಗಳನ್ನು ಸಾಧಿಸಿದ್ದೇವೆ ಎಂದು ಶ್ರೀ ಅಮಿತ್ ಶಾ ಹೇಳಿದರು. ಅಸ್ಸಾಂನ ಒಟ್ಟು ರಾಜ್ಯ ದೇಶೀಯ ಉತ್ಪನ್ನವನ್ನು (GSDP) ₹4.1 ಲಕ್ಷ ಕೋಟಿಯಿಂದ ₹7.2 ಲಕ್ಷ ಕೋಟಿಗೆ ಹೆಚ್ಚಿಸಿದ್ದೇವೆ ಎಂದು ಅವರು ತಿಳಿಸಿದರು. ವಿರೋಧ ಪಕ್ಷದ ಆಡಳಿತದಲ್ಲಿ ಅಸ್ಸಾಂ ಬಾಂಬ್ ಸ್ಫೋಟಗಳು, ಹಿಂಸಾಚಾರ ಮತ್ತು ಯುವಕರ ಸಾವುಗಳಿಗೆ ಹೆಸರಾಗಿತ್ತು, ಆದರೆ ಮೋದಿ ಸರ್ಕಾರದ ಅವಧಿಯಲ್ಲಿ ಯುವಕರ ಆದಾಯವು ಶೇಕಡಾ 50 ರಷ್ಟು ಹೆಚ್ಚಾಗಿದೆ ಎಂದು ಅವರು ಹೇಳಿದರು. ನಮಗೆ ಶಾಂತಿ, ಅಭಿವೃದ್ಧಿ, ಶಿಕ್ಷಣ, ಉದ್ಯಮ ಮತ್ತು ಉದ್ಯೋಗ ಬೇಕಿದ್ದರೆ, ಅದನ್ನು ನಮ್ಮ ಸರ್ಕಾರ ಮಾತ್ರ ನೀಡಲು ಸಾಧ್ಯ ಎಂದು ಅವರು ತಿಳಿಸಿದರು.

ಇಡೀ ದೇಶದ ಯುವಜನರಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಜೀ ಅವರು ಕ್ರೀಡೆಯ ಬಗ್ಗೆ ಉತ್ಸಾಹ ಮೂಡಿಸಿದ್ದಾರೆ ಎಂದು ಕೇಂದ್ರ ಗೃಹ ಮತ್ತು ಸಹಕಾರ ಸಚಿವರು ಹೇಳಿದರು. ರಾಷ್ಟ್ರೀಯ ಅಥವಾ ಅಂತಾರಾಷ್ಟ್ರೀಯ ಸ್ಪರ್ಧೆಗಳಿರಲಿ, ಭಾರತದ ಯುವಕರು ಇಂದು ಕ್ರೀಡೆಯಲ್ಲಿ ಉತ್ತಮ ಸಾಧನೆ ಮಾಡುತ್ತಿದ್ದಾರೆ ಎಂದು ಅವರು ತಿಳಿಸಿದರು. ಯುವಕರಲ್ಲಿ ಕೇವಲ ಉತ್ಸಾಹವಿದ್ದರೆ ಸಾಲದು, ಅದಕ್ಕೆ ಪೂರಕವಾಗಿ ಮೂಲಸೌಕರ್ಯ, ಕ್ರೀಡಾ ಸೌಲಭ್ಯಗಳು, ಆಧುನಿಕ ತರಬೇತಿ ವ್ಯವಸ್ಥೆಗಳು, ಪಾರದರ್ಶಕ ಆಯ್ಕೆ ಪ್ರಕ್ರಿಯೆ ಮತ್ತು ಆಟಗಾರರಿಗೆ ಸರ್ಕಾರದ ಪೂರ್ಣ ಬೆಂಬಲ ಸಿಗದ ಹೊರತು ಏನನ್ನೂ ಸಾಧಿಸಲು ಸಾಧ್ಯವಿಲ್ಲ ಎಂದು ಶ್ರೀ ಶಾ ಹೇಳಿದರು. ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿರುವ ವಿಶ್ವದರ್ಜೆಯ ಬಹುಪಯೋಗಿ ಕ್ರೀಡಾ ಸಂಕೀರ್ಣದ (Multi-Disciplinary Sports Complex) ಮೊದಲ ಹಂತದ ಉದ್ಘಾಟನೆಯು ಇಂದು ದಿಬ್ರೂಗಢದಲ್ಲಿ ನಡೆದಿದೆ ಎಂದು ಅವರು ತಿಳಿಸಿದರು. 106 ಬಿಘಾ ಭೂಮಿಯಲ್ಲಿ ₹238 ಕೋಟಿ ವೆಚ್ಚದಲ್ಲಿ ಒಳಾಂಗಣ ಕ್ರೀಡಾಂಗಣ, ಈಜುಕೊಳ, ಫುಟ್ಬಾಲ್ ಮೈದಾನ, ಲಾನ್ ಟೆನಿಸ್ ಕೋರ್ಟ್‌ ಗಳು, ಬಾಸ್ಕೆಟ್‌ ಬಾಲ್ ಕೋರ್ಟ್, ವಾಲಿಬಾಲ್ ಕೋರ್ಟ್, ಆಟಗಾರರಿಗಾಗಿ ಹಾಸ್ಟೆಲ್ ಮತ್ತು ತರಬೇತುದಾರರಿಗೆ ವಸತಿ ವ್ಯವಸ್ಥೆಯನ್ನು ನಿರ್ಮಿಸಲಾಗಿದೆ ಎಂದು ಅವರು ವಿವರಿಸಿದರು. ಇದರೊಂದಿಗೆ ₹209 ಕೋಟಿ ವೆಚ್ಚದ ಕ್ರೀಡಾ ಸಂಕೀರ್ಣದ ಎರಡನೇ ಹಂತಕ್ಕೂ ಶಂಕುಸ್ಥಾಪನೆ ನೆರವೇರಿಸಲಾಗಿದೆ ಎಂದು ಅವರು ಹೇಳಿದರು.

ದಿಬ್ರೂಗಢದಲ್ಲಿ ಅಸ್ಸಾಂ ವಿಧಾನಸಭಾ ಸಂಕೀರ್ಣದ ಜೊತೆಗೆ, ರಾಜ್ಯದ ಶಾಸಕರ ವಸತಿ ಯೋಜನೆಯ ಶಂಕುಸ್ಥಾಪನೆಯನ್ನೂ ನೆರವೇರಿಸಲಾಗಿದೆ ಎಂದು ಗೃಹ ಸಚಿವರು ಹೇಳಿದರು. ₹292 ಕೋಟಿ ವೆಚ್ಚದಲ್ಲಿ ದಿಬ್ರೂಗಢದಲ್ಲಿ ವನ್ಯಜೀವಿ ಸಂಶೋಧನಾ ಸಂಸ್ಥೆಯನ್ನು ಸಹ ನಿರ್ಮಿಸಲಾಗುವುದು ಎಂದು ಅವರು ತಿಳಿಸಿದರು. ಈ ಸಂಸ್ಥೆಯು ರೋಗಗಳ ಕಣ್ಗಾವಲು, ಸಂಶೋಧನೆ ಮತ್ತು ರೋಗನಿರ್ಣಯ ಹಾಗೂ ಸಾಮರ್ಥ್ಯ ವೃದ್ಧಿಯ ಸೌಲಭ್ಯಗಳನ್ನು ಹೊಂದಿರುತ್ತದೆ. ಈ ಸಂಸ್ಥೆಯಲ್ಲಿ ಕೇವಲ ಪ್ರಾಣಿಗಳಿಗಷ್ಟೇ ಅಲ್ಲದೆ, ಪಕ್ಷಿಗಳಿಗೂ ಸಹ ಅಗತ್ಯ ವ್ಯವಸ್ಥೆಗಳನ್ನು ಮಾಡುವಂತೆ ಅವರು ರಾಜ್ಯ ಸರ್ಕಾರಕ್ಕೆ ವಿನಂತಿಸಿದರು. ಈ ಸಂಸ್ಥೆಯು ವೈಜ್ಞಾನಿಕ ಸಂಶೋಧನೆ ಮತ್ತು ಆನುವಂಶಿಕ ರೋಗಗಳ ಅಧ್ಯಯನಕ್ಕೆ ವ್ಯವಸ್ಥೆಯನ್ನು ಹೊಂದಿರುತ್ತದೆ, ಇದರಿಂದಾಗಿ ಇದು ವಿಶ್ವದ ಪ್ರಮುಖ ಸಂಸ್ಥೆಯಾಗಿ ಸ್ಥಾಪಿತವಾಗಲಿದೆ ಎಂದು ಶ್ರೀ ಶಾ ಹೇಳಿದರು.

ಕೇಂದ್ರ ಗೃಹ ಮತ್ತು ಸಹಕಾರ ಸಚಿವರು ಮಹಾತ್ಮಾ ಗಾಂಧೀಜಿಯವರ ಪುಣ್ಯತಿಥಿಯಂದು ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದರು. ಬಾಪು ಅವರು ತಮ್ಮ ಚಳವಳಿಗಳ ಮೂಲಕ ಇಡೀ ದೇಶವನ್ನು ಜಾಗೃತಗೊಳಿಸಿದರು ಮತ್ತು ನಮಗೆ ಸ್ವರಾಜ್ಯವನ್ನು ತಂದುಕೊಟ್ಟರು, ಅಂತಹ ಪುಣ್ಯಾತ್ಮ ಮಹಾತ್ಮಾ ಗಾಂಧೀಜಿಯವರಿಗೆ ನಾನು ನಮಿಸುತ್ತೇನೆ ಎಂದು ಅವರು ತಿಳಿಸಿದರು.

 

*****


(रिलीज़ आईडी: 2221094) आगंतुक पटल : 4
इस विज्ञप्ति को इन भाषाओं में पढ़ें: Odia , English , Urdu , हिन्दी , Assamese , Gujarati , Tamil