ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ
ಇಂಡಿಯಾ ಎಐ ಇಂಪ್ಯಾಕ್ಟ್ ಶೃಂಗಸಭೆಗೆ ಜಾಗತಿಕ ಮಟ್ಟದಲ್ಲಿ ಅದ್ಭುತ ಪ್ರತಿಕ್ರಿಯೆ, ಭಾರತದ ಎಐ ಪರಿಸರ ವ್ಯವಸ್ಥೆಯು ವ್ಯವಸ್ಥಿತವಾಗಿ ಅಭಿವೃದ್ಧಿಗೊಳ್ಳುತ್ತಿದೆ: ಕೇಂದ್ರ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್
ಇಂಡಿಯಾ ಎಐ ಇಂಪ್ಯಾಕ್ಟ್ ಶೃಂಗಸಭೆ 2026 ಕ್ಕೂ ಮುನ್ನ ಪ್ರಮುಖ ಮೈಲಿಗಲ್ಲುಗಳ ಘೋಷಣೆ
60 ಪ್ರಮುಖ ಉದ್ಯಮ ತಜ್ಞರ ಚಿಂತನೆಗಳನ್ನೊಳಗೊಂಡ 'ಎಐ ಭವಿಷ್ಯʼಕುರಿತ ಸಂಕಲನ'ವನ್ನು ಬಿಡುಗಡೆ ಮಾಡಿದ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ
प्रविष्टि तिथि:
30 JAN 2026 7:03PM by PIB Bengaluru
ಭಾರತ ಸರ್ಕಾರದ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು, 'ಇಂಡಿಯಾ ಎಐ ಇಂಪ್ಯಾಕ್ಟ್ ಶೃಂಗಸಭೆ 2026' ಕ್ಕೂ ಮುನ್ನ ಇಂದು ಉನ್ನತ ಮಟ್ಟದ ಪತ್ರಿಕಾಗೋಷ್ಠಿಯನ್ನು ನಡೆಸಿತು. ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್ ಅವರು ಇದರ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ರಾಜ್ಯಖಾತೆ ಸಚಿವರದಾ ಶ್ರೀ ಜಿತಿನ್ ಪ್ರಸಾದ್, ಭಾರತ ಸರ್ಕಾರದ ಪ್ರಧಾನ ವೈಜ್ಞಾನಿಕ ಸಲಹೆಗಾರ ಶ್ರೀ ಅಜಯ್ ಸೂದ್ ಮತ್ತು ಸಚಿವಾಲಯದ ಇತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು. 2026ರ ಫೆಬ್ರವರಿ 16-20 ರವರೆಗೆ ನವದೆಹಲಿಯ ಭಾರತ ಮಂಟಪದಲ್ಲಿ 'ಜಾಗತಿಕ ದಕ್ಷಿಣ'ದ ಪ್ರಥಮ ಜಾಗತಿಕ ಎಐ ಶೃಂಗಸಭೆಯನ್ನು ಆಯೋಜಿಸಲು ಭಾರತ ಸಜ್ಜಾಗುತ್ತಿರುವ ಹಿನ್ನೆಲೆಯಲ್ಲಿ, ಈ ಪತ್ರಿಕಾಗೋಷ್ಠಿಯು ಪ್ರಮುಖ ಬೆಳವಣಿಗೆಗಳು, ಜಾಗತಿಕ ಸಹಭಾಗಿತ್ವದ ದೃಢೀಕರಣ ಮತ್ತು ಶೃಂಗಸಭೆಯ ನಿರೀಕ್ಷಿತ ಫಲಿತಾಂಶಗಳ ಬಗ್ಗೆ ಮಾಹಿತಿ ನೀಡಿತು.

ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಶ್ರೀ ಅಶ್ವಿನಿ ವೈಷ್ಣವ್ ಅವರು, ಇಂಡಿಯಾ ಎಐ ಇಂಪ್ಯಾಕ್ಟ್ ಶೃಂಗಸಭೆಗೆ ವಿಶ್ವದಾದ್ಯಂತ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗಿದೆ ಮತ್ತು ಇದು ಜಾಗತಿಕವಾಗಿ ಇದುವರೆಗೆ ನಡೆದ ಅತಿದೊಡ್ಡ ಎಐ ಶೃಂಗಸಭೆಯಾಗಿ ರೂಪುಗೊಳ್ಳುತ್ತಿದೆ ಎಂದು ಹೇಳಿದರು. ಎಐ ಮೌಲ್ಯವರ್ಧಿತ ಸರಪಳಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಉದ್ಯಮದ ಮುಖಂಡರು, ಡೆವಲಪರ್ ಗಳು ಮತ್ತು ಸಂಶೋಧಕರೊಂದಿಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇತ್ತೀಚೆಗೆ ನಡೆಸಿದ ಸಂವಾದಗಳನ್ನು ಉಲ್ಲೇಖಿಸಿದ ಸಚಿವರು, ಈ ಸಂವಾದಗಳು ಭಾರತದ ಎಐ ಪರಿಸರ ವ್ಯವಸ್ಥೆಯ ವ್ಯವಸ್ಥಿತ ಪ್ರಗತಿ ಮತ್ತು ಅನುಷ್ಠಾನ-ಆಧಾರಿತ ಪರಿಹಾರಗಳ ಮೇಲಿನ ಬಲವಾದ ಗಮನವನ್ನು ಪ್ರತಿಬಿಂಬಿಸುತ್ತವೆ ಎಂದು ತಿಳಿಸಿದರು. ಪ್ರಮುಖ ಐಟಿ ಕಂಪನಿಗಳು 200ಕ್ಕೂ ಹೆಚ್ಚು ನಿರ್ದಿಷ್ಟ ವಲಯದ ಎಐ ಮಾದರಿಗಳನ್ನು ಅಭಿವೃದ್ಧಿಪಡಿಸಿದ್ದು, ಅವುಗಳನ್ನು ಈ ಶೃಂಗಸಭೆಯಲ್ಲಿ ಬಿಡುಗಡೆ ಮಾಡಲು ಉದ್ದೇಶಿಸಲಾಗಿದೆ ಎಂದು ಅವರು ಹೇಳಿದರು. ಸುಮಾರು 70 ಬಿಲಿಯನ್ ಡಾಲರ್ ಹೂಡಿಕೆಯು ಈಗಾಗಲೇ ಎಐ ಮೂಲಸೌಕರ್ಯ ವಲಯಕ್ಕೆ ಹರಿದುಬರುತ್ತಿದ್ದು, ಶೃಂಗಸಭೆಯ ಮುಕ್ತಾಯದ ವೇಳೆಗೆ ಇದು ದುಪ್ಪಟ್ಟಾಗುವ ಸಾಧ್ಯತೆಯಿದೆ. ಅಲ್ಲದೆ, ಎಐ ಮೂಲಸೌಕರ್ಯ ಮತ್ತು ಉದ್ಯಮ-ನಿರ್ಧರಿತ ಪಠ್ಯಕ್ರಮವನ್ನು 500 ವಿಶ್ವವಿದ್ಯಾಲಯಗಳಿಗೆ ವಿಸ್ತರಿಸುವ ಮೂಲಕ ಎಐ ಪ್ರತಿಭೆಗಳ ಅಭಿವೃದ್ಧಿಯನ್ನು ಬಲಪಡಿಸಲಾಗುವುದು ಎಂದು ಅವರು ಹೇಳಿದರು.

ಇದೇ ಸಂದರ್ಭದಲ್ಲಿ ಶ್ರೀ ಅಶ್ವಿನಿ ವೈಷ್ಣವ್ ಅವರು "ದಿ ಇಂಪ್ಯಾಕ್ಟ್ ಅಜೆಂಡಾ: ಲೀಡರ್‌ಶಿಪ್ ರಿಫ್ಲೆಕ್ಷನ್ಸ್" ಎಂಬ ಶೀರ್ಷಿಕೆಯ ಸಂಕಲನವನ್ನು ಬಿಡುಗಡೆ ಮಾಡಿದರು. ಇದು ಎಐ ಭವಿಷ್ಯ ಮತ್ತು ಸಮಗ್ರ ಬೆಳವಣಿಗೆ, ನಾವೀನ್ಯತೆ ಹಾಗೂ ಸಾಮಾಜಿಕ ಪರಿಣಾಮವನ್ನು ಬೀರುವ ಅದರ ಪಾತ್ರದ ಕುರಿತು ಸುಮಾರು 60 ಪ್ರಮುಖ ಉದ್ಯಮ ತಜ್ಞರ ಚಿಂತನೆಗಳನ್ನು ಒಳಗೊಂಡಿದೆ.

ಪತ್ರಿಕಾಗೋಷ್ಠಿಯು ಶೃಂಗಸಭೆಯ ಪೂರ್ವಭಾವಿಯಾಗಿ ಸಾಧಿಸಿದ ಮೈಲಿಗಲ್ಲುಗಳತ್ತ ಗಮನ ಸೆಳೆಯಿತು ಮತ್ತು ಉದ್ಯಮ, ಸರ್ಕಾರಗಳು, ಶಿಕ್ಷಣ ತಜ್ಞರು ಮತ್ತು ನಾಗರಿಕ ಸಮಾಜದ ಈ ಐತಿಹಾಸಿಕ ಸಮಾವೇಶದಲ್ಲಿ ಏನನ್ನು ನಿರೀಕ್ಷಿಸಬಹುದು ಎಂಬುದನ್ನು ವಿವರಿಸಿತು. 'ಜನರು, ಭೂಮಿ ಮತ್ತು ಪ್ರಗತಿ' ಎಂಬ ಸೂತ್ರಗಳ ಮೇಲೆ ಆಧಾರಿತವಾದ ಎಲ್ಲಾ ಏಳು ವಿಷಯಾಧಾರಿತ ಕಾರ್ಯಕಾರಿ ಗುಂಪುಗಳ ಹೈಬ್ರಿಡ್ ಸಭೆಗಳು ಯಶಸ್ವಿಯಾಗಿ ಮುಕ್ತಾಯಗೊಂಡಿವೆ ಮತ್ತು ಅವುಗಳ ಪ್ರಮುಖ ವರದಿಗಳು ಅಂತಿಮ ಹಂತದಲ್ಲಿವೆ ಎಂದು ಸಚಿವಾಲಯದ ಕಾರ್ಯದರ್ಶಿ ಶ್ರೀ ಎಸ್. ಕೃಷ್ಣನ್ ತಿಳಿಸಿದರು. ಇದರ ಜೊತೆಗೆ, ಮೇಘಾಲಯ, ಗುಜರಾತ್, ಒಡಿಶಾ, ಮಧ್ಯಪ್ರದೇಶ, ಉತ್ತರ ಪ್ರದೇಶ, ರಾಜಸ್ಥಾನ ಮತ್ತು ಕೇರಳಗಳಲ್ಲಿ ನಡೆದ ಏಳು ಪ್ರಾದೇಶಿಕ ಎಐ ಇಂಪ್ಯಾಕ್ಟ್ ಸಮ್ಮೇಳನಗಳು ಮುಕ್ತಾಯಗೊಂಡಿದ್ದು, ರಾಷ್ಟ್ರೀಯ ಎಐ ಆದ್ಯತೆಗಳನ್ನು ಪ್ರಾದೇಶಿಕ ಸಾಮರ್ಥ್ಯಗಳೊಂದಿಗೆ ಸಂಯೋಜಿಸಲಾಗಿದೆ. ಶೃಂಗಸಭೆಯ ಈ ಸಹಭಾಗಿತ್ವದ ಮಾದರಿಯು ಭಾರತ ಮತ್ತು ಜಾಗತಿಕವಾಗಿ ನಡೆದ 480 ಕ್ಕೂ ಹೆಚ್ಚು ಪೂರ್ವ-ಶೃಂಗಸಭೆ ಕಾರ್ಯಕ್ರಮಗಳಲ್ಲಿ ಪ್ರತಿಫಲಿಸುತ್ತದೆ. ಇದರಲ್ಲಿ 30 ದೇಶಗಳಲ್ಲಿ ನಡೆದ 83 ಅಂತರರಾಷ್ಟ್ರೀಯ ಕಾರ್ಯಕ್ರಮಗಳು ಸೇರಿವೆ ಮತ್ತು ಫೆಬ್ರವರಿ 10, 2026 ರವರೆಗೆ ಮತ್ತಷ್ಟು ಚಟುವಟಿಕೆಗಳನ್ನು ನಿಗದಿಪಡಿಸಲಾಗಿದೆ ಎಂದು ಅವರು ಹೇಳಿದರು.
ಇಂಡಿಯಾ ಎಐ ಇಂಪ್ಯಾಕ್ಟ್ ಶೃಂಗಸಭೆಯ ಕೇಂದ್ರ ಉದ್ದೇಶವು ತಂತ್ರಜ್ಞಾನದ ಪ್ರಜಾಪ್ರಭುತ್ವೀಕರಣವನ್ನು ಮುನ್ನಡೆಸುವುದಾಗಿದೆ, ಅದರಲ್ಲೂ ವಿಶೇಷವಾಗಿ ಕೃತಕ ಬುದ್ಧಿಮತ್ತೆಯ ಪ್ರಯೋಜನಗಳು ಸಮಾಜದ ಎಲ್ಲಾ ವರ್ಗಗಳನ್ನು ತಲುಪುವುದನ್ನು ಖಚಿತಪಡಿಸಿಕೊಳ್ಳುವುದು ಇದರ ಗುರಿಯಾಗಿದೆ ಎಂದು ಶ್ರೀ ಎಸ್ ಕೃಷ್ಣನ್ ಹೇಳಿದರು. ಜಾಗತಿಕ ದಕ್ಷಿಣದಲ್ಲಿ ಆಯೋಜಿಸಲಾಗುತ್ತಿರುವ ಮೊದಲ ಜಾಗತಿಕ ಎಐ ಶೃಂಗಸಭೆಯಾಗಿರುವ ಇದು, ಎಐ ಆಡಳಿತ ಮತ್ತು ಮಾನದಂಡಗಳ ಹೊಂದಾಣಿಕೆಗೆ ಮಹತ್ವ ನೀಡುತ್ತದೆ. ನೈಜ ಜಗತ್ತಿನ ಅನ್ವಯಿಕೆಗಳಲ್ಲಿ ಎಐನ ಸುರಕ್ಷಿತ ಮತ್ತು ಜವಾಬ್ದಾರಿಯುತ ಬಳಕೆಯ ಬಗ್ಗೆ ಹಂಚಿಕೆಯ ಜಾಗತಿಕ ತಿಳುವಳಿಕೆಯನ್ನು ಬೆಳೆಸುವ ಗುರಿಯನ್ನು ಇದು ಹೊಂದಿದೆ ಎಂದು ಅವರು ಹೇಳಿದರು.
ಹೆಚ್ಚುವರಿಯಾಗಿ, ಶೃಂಗಸಭೆಯ ವಾರದಲ್ಲಿ ಭಾರತ ಮಂಟಪ ಮತ್ತು ಸುಷ್ಮಾ ಸ್ವರಾಜ್ ಭವನದಾದ್ಯಂತ 500 ಕ್ಕೂ ಹೆಚ್ಚು ಸಂಘಟಿತ ಕಾರ್ಯಕ್ರಮಗಳು ನಡೆಯಲಿವೆ ಎಂದು ಘೋಷಿಸಲಾಯಿತು. ಎಐ ಇಂಪ್ಯಾಕ್ಟ್ ಎಕ್ಸ್‌ಪೋ 840 ಕ್ಕೂ ಹೆಚ್ಚು ಪ್ರದರ್ಶಕರನ್ನು ಹೊಂದಿರಲಿದ್ದು, ಇದರಲ್ಲಿ ವಿವಿಧ ದೇಶಗಳ ಪೆವಿಲಿಯನ್ ಗಳು, ಸಚಿವಾಲಯಗಳು, ರಾಜ್ಯ ಸರ್ಕಾರಗಳು, ಉದ್ಯಮಗಳು, ನವೋದ್ಯಮಗಳು ಮತ್ತು ಸಂಶೋಧನಾ ಸಂಸ್ಥೆಗಳು ಭಾಗವಹಿಸಲಿವೆ. ಭಾರತದ ಮೂಲಭೂತ ಎಐ ಮಾದರಿಗಳ ಪ್ರಗತಿಯನ್ನು ಕೂಡ ಈ ಸಂದರ್ಭದಲ್ಲಿ ಪ್ರದರ್ಶಿಸಲಾಗುತ್ತದೆ.
ಇದಲ್ಲದೆ, 15 ರಾಷ್ಟ್ರದ ಮುಖ್ಯಸ್ಥರು/ಸರ್ಕಾರದ ಮುಖ್ಯಸ್ಥರು, 40ಕ್ಕೂ ಹೆಚ್ಚು ಸಚಿವರು, 100ಕ್ಕೂ ಹೆಚ್ಚು ಪ್ರಮುಖ ಸಿಇಒ ಮತ್ತು ಸಿಎಕ್ಸ್‌ಒ ಗಳು ಹಾಗೂ 100ಕ್ಕೂ ಹೆಚ್ಚು ಪ್ರಖ್ಯಾತ ಶಿಕ್ಷಣ ತಜ್ಞರು ಭಾಗವಹಿಸುವುದನ್ನು ಪತ್ರಿಕಾಗೋಷ್ಠಿ ದೃಢಪಡಿಸಿತು. ಉದ್ಯಮದ ಸಹಭಾಗಿತ್ವವು ಈ ಶೃಂಗಸಭೆಯ ಪ್ರಮುಖ ಆಧಾರಸ್ತಂಭವಾಗಿದೆ. ಜಿಯೋ, ಕ್ವಾಲ್ಕಾಮ್, ಓಪನ್ ಎಐ, ಎನ್ವಿಡಿಯಾ, ಗೂಗಲ್, ಮೈಕ್ರೋಸಾಫ್ಟ್, ಅಡೋಬ್ ಮತ್ತು ಗೇಟ್ಸ್ ಫೌಂಡೇಶನ್ ಸೇರಿದಂತೆ ಹಲವು ಪ್ರಮುಖ ಸಂಸ್ಥೆಗಳು ಶೃಂಗಸಭೆಯಲ್ಲಿ ಭಾಗವಹಿಸುವ ನಿರೀಕ್ಷೆಯಿದೆ.
ಇಂಡಿಯಾ ಎಐ ಇಂಪ್ಯಾಕ್ಟ್ ಶೃಂಗಸಭೆ 2026 ರ ಮೂಲಕ ನಾವೀನ್ಯತೆ, ಆರ್ಥಿಕ ಬೆಳವಣಿಗೆ ಮತ್ತು ಸಾಮಾಜಿಕ ಪ್ರಭಾವವನ್ನು ಉತ್ತೇಜಿಸುವ ಜೊತೆಗೆ, ಎಐ ಸುರಕ್ಷಿತ, ವಿಶ್ವಾಸಾರ್ಹ ಮತ್ತು ಎಲ್ಲರನ್ನೂ ಒಳಗೊಳ್ಳುವಂತೆ ಮಾಡಲು ಭಾರತ ಸರ್ಕಾರ ಬದ್ಧವಾಗಿದೆ ಎಂದು ಪತ್ರಿಕಾಗೋಷ್ಠಿಯು ಪುನರುಚ್ಚರಿಸಿತು.
******
(रिलीज़ आईडी: 2221057)
आगंतुक पटल : 28