ಹಣಕಾಸು ಸಚಿವಾಲಯ
azadi ka amrit mahotsav

ಭಾರತವು ವಿಶ್ವದ ಅತಿ ದೊಡ್ಡ ಹಣ ರವಾನೆ ಸ್ವೀಕರಿಸುವ ರಾಷ್ಟ್ರವಾಗಿ ಉಳಿದಿದೆ, ಹಣಕಾಸು ವರ್ಷ 25 ರಲ್ಲಿ ಒಳಹರಿವು 135.4 ಬಿಲಿಯನ್ ಅಮೆರಿಕನ್ ಡಾಲರ್ ಗೆ ತಲುಪಿದೆ.


ಜನವರಿ 16, 2026ರ ವೇಳೆಗೆ ದೇಶಿ ವಿನಿಮಯ ಮೀಸಲು 701.4 ಶತಕೋಟಿ ಅಮೆರಿಕನ್ ಡಾಲರಿಗೆ ಏರಿತು, ಇದು 11 ತಿಂಗಳ ಆಮದು ಮತ್ತು ಬಾಹ್ಯ ಸಾಲದ 94% ರಷ್ಟಕ್ಕೆ ರಕ್ಷಣಾ ಬಾಧ್ಯತೆಯನ್ನು ಒದಗಿಸುತ್ತದೆ

ದಕ್ಷಿಣ ಏಷ್ಯಾದಲ್ಲಿ ಒಟ್ಟು ಎಫ್.ಡಿ.ಐ. ಒಳಹರಿವಿನ ಅತಿದೊಡ್ಡ ಸ್ವೀಕೃತಿ ರಾಷ್ಟ್ರವಾಗಿ ಭಾರತ ಉಳಿದಿದೆ ಮತ್ತು ಯು.ಎನ್.ಸಿ.ಟಿ.ಎ.ಡಿ ಪ್ರಕಾರ ಇಂಡೋನೇಷ್ಯಾ ಮತ್ತು ವಿಯೆಟ್ನಾಂನಂತಹ ಪ್ರಮುಖ ಏಷ್ಯನ್ ಸಮಾನಸ್ಥರನ್ನು ಮೀರಿಸಿದೆ

2020-24ರ ನಡುವೆ ಗ್ರೀನ್‌ಫೀಲ್ಡ್ ಡಿಜಿಟಲ್ ಹೂಡಿಕೆಗಳಿಗೆ ಭಾರತವು ಅತಿದೊಡ್ಡ ತಾಣವಾಗಿದೆ, 114 ಶತಕೋಟಿ ಯು.ಎಸ್.ಡಿ. ಆಕರ್ಷಿಸಿದೆ

प्रविष्टि तिथि: 29 JAN 2026 2:05PM by PIB Bengaluru

ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವರಾದ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು ಇಂದು ಸಂಸತ್ತಿನಲ್ಲಿ 2025-26ರ ಆರ್ಥಿಕ ಸಮೀಕ್ಷೆಯನ್ನು ಮಂಡಿಸಿದರು. ಆರ್ಥಿಕ ಸಮೀಕ್ಷೆಯು ಬಲವಾದ ರಫ್ತುಗಳು, ಸೇವಾ ವ್ಯಾಪಾರದ ದೃಢತೆ ಮತ್ತು ವಿಸ್ತರಿಸುತ್ತಿರುವ ವ್ಯಾಪಾರ ಜಾಲಗಳಿಂದ ನಡೆಸಲ್ಪಡುವ ಆಳವಾದ ಜಾಗತಿಕ ಏಕೀಕರಣದೊಂದಿಗೆ. ಭಾರತದ ಬಾಹ್ಯ ವಲಯವು ಬಲಿಷ್ಠವಾಗಿ ಉಳಿದಿದೆ. ಇದು ಹೆಚ್ಚಿದ ಸ್ಪರ್ಧಾತ್ಮಕತೆ, ವೈವಿಧ್ಯೀಕರಣ ಮತ್ತು ಜಾಗತಿಕ ಬೇಡಿಕೆಗೆ ಹೊಂದಿಕೊಳ್ಳುವಿಕೆಯನ್ನು ಪ್ರತಿಬಿಂಬಿಸುತ್ತದೆ' ಎಂದು ಹೇಳುತ್ತದೆ.

ಚಾಲ್ತಿ  ಖಾತೆ

ಸೇವೆಗಳು ಮತ್ತು ಖಾಸಗಿ ವರ್ಗಾವಣೆಗಳಲ್ಲಿ ಹೆಚ್ಚುತ್ತಿರುವ ಉಳಿತಾಯ/ಹೆಚ್ಚುವರಿಗಳಿಂದಾಗಿ ಭಾರತದ ಚಾಲ್ತಿ ಖಾತೆ ರಚನೆಯು ಅದೃಶ್ಯ ವಸ್ತುಗಳ ಬಲವಾದ ನಿವ್ವಳ ಒಳಹರಿವಿನಿಂದ ಸರಕು ವ್ಯಾಪಾರ ಕೊರತೆಯನ್ನು ಸರಿದೂಗಿಸುವುದನ್ನು ಪ್ರತಿಬಿಂಬಿಸುತ್ತದೆ. H1 ಹಣಕಾಸು ವರ್ಷ 26 ರಲ್ಲಿ, ಚಾಲ್ತಿ ಖಾತೆ ಕೊರತೆ (CAD) H1 ಹಣಕಾಸು ವರ್ಷ 25 ರಲ್ಲಿ ಇದ್ದ 25.3 ಬಿಲಿಯನ್ ಯು.ಎಸ್.ಡಿ. (ಜಿಡಿಪಿ ಯ ಶೇಕಡಾ 1.3) ರಿಂದ 15 ಬಿಲಿಯನ್ ಯು.ಎಸ್.ಡಿ. (GDP ಯ ಶೇಕಡಾ 0.8) ಗೆ ಮಧ್ಯಮವಾಯಿತು. ಹಣಕಾಸು ವರ್ಷ 26 ರ ಎರಡನೇ ತ್ರೈಮಾಸಿಕದಲ್ಲಿ ಭಾರತವು ತನ್ನ ಹೆಚ್ಚು ಕೊರತೆಯ ಗೆಳೆಯರಾದ ನ್ಯೂಜಿಲೆಂಡ್, ಬ್ರೆಜಿಲ್, ಆಸ್ಟ್ರೇಲಿಯಾ, ಯು.ಕೆ. ಮತ್ತು ಕೆನಡಾಕ್ಕಿಂತ ಉತ್ತಮ ಸ್ಥಾನದಲ್ಲಿದೆ.

ಆರ್ಥಿಕ ಸಮೀಕ್ಷೆಯ ಪ್ರಕಾರ, ಭಾರತವು ವಿಶ್ವದ ಅತಿದೊಡ್ಡ ಹಣ ರವಾನೆ ಸ್ವೀಕರಿಸುವ ರಾಷ್ಟ್ರವಾಗಿ ಉಳಿದಿದೆ, ಹಣಕಾಸು ವರ್ಷ 25ರಲ್ಲಿ ಒಳಹರಿವು ್ 135.4 ಶತಕೋಟಿ ಯು.ಎಸ್.ಡಿ. ತಲುಪಿದೆ, ಇದು ಬಾಹ್ಯ ಖಾತೆಯಲ್ಲಿ ಸ್ಥಿರತೆಯನ್ನು ಬೆಂಬಲಿಸುತ್ತದೆ. ಮುಂದುವರಿದ ಆರ್ಥಿಕತೆಗಳಿಂದ ಹಣ ರವಾನೆಯ ಪಾಲು ಹೆಚ್ಚಾಗಿದೆ, ಇದು ಕೌಶಲ್ಯಪೂರ್ಣ ಮತ್ತು ವೃತ್ತಿಪರ ಕೆಲಸಗಾರರಿಂದ ಹೆಚ್ಚುತ್ತಿರುವ ಕೊಡುಗೆಯನ್ನು ಪ್ರತಿಬಿಂಬಿಸುತ್ತದೆ.

ಬಂಡವಾಳ ಖಾತೆ

ಜಾಗತಿಕ ಆರ್ಥಿಕ ಪರಿಸ್ಥಿತಿಗಳು ಬಿಗಿಗೊಳ್ಳುತ್ತಿದ್ದರೂ ಸಹ, ಭಾರತವು ಹಣಕಾಸು ವರ್ಷ 25 ರಲ್ಲಿ ಜಿ.ಡಿ.ಪಿ. ಶೇಕಡಾ 18.5 ರಷ್ಟು ಮೊತ್ತದ ಗಣನೀಯ ಒಟ್ಟು ಹೂಡಿಕೆ ಒಳಹರಿವನ್ನು ನಿರಂತರವಾಗಿ ಆಕರ್ಷಿಸಿದೆ. ಯು.ಎನ್.ಸಿ.ಟಿ.ಎ.ಡಿ. ದತ್ತಾಂಶದ ಪ್ರಕಾರ, ಭಾರತವು ದಕ್ಷಿಣ ಏಷ್ಯಾದಲ್ಲಿ ಒಟ್ಟು ಎಫ್.ಡಿ.ಐ. ಒಳಹರಿವಿನ ಅತಿದೊಡ್ಡ ಸ್ವೀಕೃತಿ ರಾಷ್ಟ್ರವಾಗಿ ಉಳಿದಿದೆ ಮತ್ತು ಇಂಡೋನೇಷ್ಯಾ ಹಾಗು ವಿಯೆಟ್ನಾಂನಂತಹ ಪ್ರಮುಖ ಏಷ್ಯಾದ ಗೆಳೆಯರನ್ನು ಮೀರಿಸಿದೆ.

2024 ರಲ್ಲಿ ಗ್ರೀನ್‌ಫೀಲ್ಡ್ ಹೂಡಿಕೆ ಘೋಷಣೆಗಳಲ್ಲಿ ಭಾರತವು ಜಾಗತಿಕವಾಗಿ ನಾಲ್ಕನೇ ಸ್ಥಾನದಲ್ಲಿದೆ, 1,000 ಕ್ಕೂ ಹೆಚ್ಚು ಯೋಜನೆಗಳೊಂದಿಗೆ ಮತ್ತು 2020-24 ರ ನಡುವೆ ಗ್ರೀನ್‌ಫೀಲ್ಡ್ ಡಿಜಿಟಲ್ ಹೂಡಿಕೆಗಳಿಗೆ ಅತಿದೊಡ್ಡ ತಾಣವಾಗಿ ಹೊರಹೊಮ್ಮಿತು, 114 ಶತಕೋಟಿ ಯು.ಎಸ್.ಡಿ. ಯನ್ನು ಆಕರ್ಷಿಸಿತು. ಏಪ್ರಿಲ್-ನವೆಂಬರ್ 2025 ರಲ್ಲಿ, ಒಟ್ಟು ಎಫ್.ಡಿ.ಐ. ಒಳಹರಿವು 64.7 ಶತಕೋಟಿ ಯು.ಎಸ್.ಡಿ.ಗೆ ಬಲಗೊಂಡಿತು, ಇದು ಏಪ್ರಿಲ್-ನವೆಂಬರ್ 2024 ರಲ್ಲಿ ಇದ್ದ 55.8 ಶತಕೋಟಿ ಯು.ಎಸ್.ಡಿ.ಗೆ ಹೋಲಿಸಿದರೆ ಬಹಳ ಹೆಚ್ಚು. ಇದು ದುರ್ಬಲ ಜಾಗತಿಕ ಪರಿಸರದ ಹೊರತಾಗಿಯೂ ನಿರಂತರ ಹೂಡಿಕೆದಾರರ ವಿಶ್ವಾಸವನ್ನು ಎತ್ತಿ ತೋರಿಸುತ್ತದೆ ಮತ್ತು ಭಾರತದ ಡಿಜಿಟಲ್ ಆರ್ಥಿಕತೆಯಲ್ಲಿ ಅಡಗಿರುವ  ಶಕ್ತಿಯನ್ನು ಪ್ರತಿಬಿಂಬಿಸುತ್ತದೆ.

ಭಾರತದ ಎಫ್.ಪಿ.ಐ. ಮಾದರಿಯು ಒಳಹರಿವು ಮತ್ತು ಹೊರಹರಿವಿನ ಪುನರಾವರ್ತಿತ ಚಕ್ರಗಳನ್ನು ತೋರಿಸುತ್ತದೆ, ಗಮನಾರ್ಹ ಬದಲಾವಣೆಗಳು ಹೆಚ್ಚಾಗಿ ಜಾಗತಿಕ ಆರ್ಥಿಕ ಬದಲಾವಣೆಗಳಿಗೆ ಸಂಬಂಧಿಸಿವೆ. ಆರು ತಿಂಗಳ ನಿವ್ವಳ ಹೊರಹರಿವು ಮತ್ತು ಮೂರು ತಿಂಗಳ ನಿವ್ವಳ ಒಳಹರಿವಿನೊಂದಿಗೆ ಚಂಚಲತೆಯನ್ನು ದತ್ತಾಂಶ ಸೂಚಿಸುತ್ತದೆ, ಇದರ ಪರಿಣಾಮವಾಗಿ ವರ್ಷದಿಂದ ಇಲ್ಲಿಯವರೆಗೆ ಸಾಧಾರಣ ನಿವ್ವಳ ಸಮತೋಲನ ಉಂಟಾಗುತ್ತದೆ. ಈ ಅವಧಿಗಳಲ್ಲಿ ಒಳಹರಿವಿನ ತ್ವರಿತ ಲಾಭವು ವಿದೇಶಿ ಹೂಡಿಕೆದಾರರು ಭಾರತದ ಬಗ್ಗೆ ಹೊಂದಿರುವ  ಮಧ್ಯಮ-ಅವಧಿಯ ದೃಷ್ಟಿಕೋನವು ಸಕಾರಾತ್ಮಕವಾಗಿ ಉಳಿದಿದೆ ಎಂಬುದನ್ನು ಉಲ್ಲೇಖಿಸುತ್ತದೆ, ಆದರೂ ಅವರ ಅಲ್ಪಾವಧಿಯ ಹಂಚಿಕೆಗಳು/ವಿತರಣೆಗಳು ಭಾರತೀಯ ಷೇರುಗಳ ಉನ್ನತ ಮೌಲ್ಯಮಾಪನಗಳು ಮತ್ತು ಜಾಗತಿಕ ಅನಿಶ್ಚಿತತೆಯಿಂದ ಪ್ರಭಾವಿತವಾಗಿವೆ.

ವಿದೇಶಿ ವಿನಿಮಯ ಮೀಸಲುಗಳು

ಭಾರತದ ವಿದೇಶಿ ವಿನಿಮಯ ಮೀಸಲು ಜನವರಿ 16, 2026 ರ ಹೊತ್ತಿಗೆ 701.4 ಶತಕೋಟಿ ಅಮೆರಿಕನ್ ಡಾಲರಿಗೆ ಏರಿದೆ, ಇದು ಮಾರ್ಚ್ 2025 ರ ಅಂತ್ಯದ ವೇಳೆಗೆ ಇದ್ದ 668 ಶತಕೋಟಿ ಯು.ಎಸ್.ಡಿ. (ಅಮೆರಿಕನ್ ಡಾಲರ್ ) ಗೆ ಹೋಲಿಸಿದಾಗ  ಹೆಚ್ಚಾಗಿದೆ. ಸಮರ್ಪಕತೆಯ ದೃಷ್ಟಿಯಿಂದ, ಮೀಸಲುಗಳು ಸುಮಾರು 11 ತಿಂಗಳ ಸರಕುಗಳ ಆಮದು ಮತ್ತು ಸೆಪ್ಟೆಂಬರ್ 2025 ರ ಅಂತ್ಯದ ವೇಳೆಗೆ ಬಾಕಿ ಇರುವ ಬಾಹ್ಯ ಸಾಲದ ಸುಮಾರು 94 ಪ್ರತಿಶತವನ್ನು ಪೂರೈಸಲು ಸಾಕಾಗುತ್ತದೆ, ಇದು ಆರಾಮದಾಯಕ ದ್ರವ್ಯತೆ ಬಫರ್ ಅನ್ನು ಒದಗಿಸುತ್ತದೆ.

ವಿನಿಮಯ ದರ

ಭಾರತೀಯ ರೂಪಾಯಿ (INR) ಏಪ್ರಿಲ್ 1, 2025 ಮತ್ತು ಜನವರಿ 15, 2026 ರ ನಡುವೆ ಅಮೆರಿಕನ್  ಡಾಲರ್ ಎದುರು ಸರಿಸುಮಾರು 5.4 ಪ್ರತಿಶತದಷ್ಟು ಅಪಮೌಲ್ಯಗೊಂಡಿದೆ. ದೇಶೀಯ ಉಳಿತಾಯವನ್ನು ಹೆಚ್ಚಿಸುವ, ಬಾಹ್ಯ ಸಮತೋಲನವನ್ನು ಉಳಿಸಿಕೊಳ್ಳುವ, ಸ್ಥಿರವಾಗಿ ಎಫ್.ಡಿ.ಐ.ಯನ್ನು ಆಕರ್ಷಿಸುವ ಮತ್ತು ನಾವೀನ್ಯತೆಯಲ್ಲಿ ಬೇರೂರಿರುವ, ಉತ್ಪಾದಕತೆ ಮತ್ತು ಗುಣಮಟ್ಟದಲ್ಲಿ ಬೇರೂರಿರುವ ರಫ್ತು ಸ್ಪರ್ಧಾತ್ಮಕತೆಯನ್ನು ನಿರ್ಮಿಸುವ ಆರ್ಥಿಕತೆಯ ಸಾಮರ್ಥ್ಯದಿಂದ ಕರೆನ್ಸಿ ಕಾರ್ಯಕ್ಷಮತೆಯನ್ನು ನಿರ್ಧರಿಸಲಾಗುತ್ತದೆ ಎಂದು ಆರ್ಥಿಕ ಸಮೀಕ್ಷೆ ಗಮನಿಸುತ್ತದೆ.

ಬಾಹ್ಯ ಸಾಲ

ಸೆಪ್ಟೆಂಬರ್ 2025 ರ ಅಂತ್ಯದ ವೇಳೆಗೆ ಭಾರತದ ಬಾಹ್ಯ ಸಾಲವು ಯು.ಎಸ್.ಡಿ. 746 ಬಿಲಿಯನ್ ಆಗಿದ್ದು, ಮಾರ್ಚ್ 2025 ರ ಅಂತ್ಯದ ವೇಳೆಗೆ ಯು.ಎಸ್.ಡಿ. 736.3 ಬಿಲಿಯನ್ ಆಗಿತ್ತು, ಬಾಹ್ಯ ಸಾಲ ಮತ್ತು ಜಿ.ಡಿ.ಪಿ. ಅನುಪಾತವು ಸೆಪ್ಟೆಂಬರ್ 2025 ರ ಅಂತ್ಯದ ವೇಳೆಗೆ ಶೇಕಡಾ 19.2 ರಷ್ಟಿತ್ತು. ಇದಲ್ಲದೆ, ಬಾಹ್ಯ ಸಾಲವು ಭಾರತದ ಒಟ್ಟು ಸಾಲದ ಶೇಕಡಾ 5 ಕ್ಕಿಂತ ಕಡಿಮೆಯಿದೆ, ಇದು ಬಾಹ್ಯ ವಲಯದ ಅಪಾಯಗಳನ್ನು ತಗ್ಗಿಸುತ್ತದೆ.

ಡಿಸೆಂಬರ್ 2024 ರ ಅಂತ್ಯದ ವೇಳೆಗೆ, ಭಾರತವು ಜಾಗತಿಕ ಬಾಹ್ಯ ಸಾಲದ ಶೇಕಡಾ 0.69 ರಷ್ಟನ್ನು ಮಾತ್ರ ಹೊಂದಿದೆ, ಇದು ತುಲನಾತ್ಮಕವಾಗಿ ಜಾಗತಿಕ ಸಾಲಕ್ಕೆ ಅದರ ಸಣ್ಣ ಕೊಡುಗೆಯನ್ನು ಹೇಳುತ್ತದೆ.

ಬಾಹ್ಯ ನೋಟ

ಭಾರತದ ರಫ್ತು ಸ್ಪರ್ಧಾತ್ಮಕತೆಯನ್ನು ಹೆಚ್ಚಿಸಲು ಉತ್ಪಾದನಾ ವೆಚ್ಚವನ್ನು ಕಡಿಮೆ ಮಾಡಲು ಏಕೀಕೃತ ಪ್ರಯತ್ನದ ಅಗತ್ಯವಿದೆ ಎಂದು ಆರ್ಥಿಕ ಸಮೀಕ್ಷೆ ಒತ್ತಿಹೇಳುತ್ತದೆ. ಇದಲ್ಲದೆ, ಶಿಸ್ತುಬದ್ಧ, ಉತ್ಪಾದಕತೆ-ಆಧಾರಿತ ಕೈಗಾರಿಕಾ ನೀತಿ, ಮೌಲ್ಯ ಸರಪಳಿಗಳಲ್ಲಿ  ಒಳಸುರಿಗಳ (ಇನ್‌ಪುಟ್)  ವೆಚ್ಚಗಳ ಎಚ್ಚರಿಕೆಯ ನಿರ್ವಹಣೆ ಮತ್ತು ಹೆಚ್ಚಿನ ಮೌಲ್ಯದ ಸೇವೆಗಳ ಪೂರಕ ಬೆಳವಣಿಗೆಯಿಂದ ಬೆಂಬಲಿತವಾದ ಉತ್ಪಾದನಾ ರಫ್ತು ಸಾಮರ್ಥ್ಯವನ್ನು ಹೆಚ್ಚಿಸುವುದರಿಂದ ಬಾಳಿಕೆ ಬರುವ ಬಾಹ್ಯ ಸ್ಥಿತಿಸ್ಥಾಪಕತ್ವ ಮತ್ತು ಬಲವಾದ ಕರೆನ್ಸಿ ವಿಶ್ವಾಸಾರ್ಹತೆ ಹೊರಹೊಮ್ಮಬಹುದು.

 

******

 

 


(रिलीज़ आईडी: 2220458) आगंतुक पटल : 5
इस विज्ञप्ति को इन भाषाओं में पढ़ें: Malayalam , English , Urdu , Marathi , हिन्दी , Bengali , Punjabi , Gujarati