ಹಣಕಾಸು ಸಚಿವಾಲಯ
azadi ka amrit mahotsav

ಟೆಲಿ-ಡೆನ್ಸಿಟಿಯು (ದೂರಸಂಪರ್ಕ ಸಾಂದ್ರತೆ) ಶೇ. 86.76 ತಲುಪಿದೆ ಮತ್ತು ದೇಶದ ಶೇ. 99.9 ರಷ್ಟು ಜಿಲ್ಲೆಗಳಲ್ಲಿ ಈಗ 5G ಸೇವೆಗಳು ಲಭ್ಯವಿವೆ


ಸ್ವಾಯತ್ತ ಉಪಗ್ರಹ ಡಾಕಿಂಗ್ ಸಾಮರ್ಥ್ಯವನ್ನು ಸಾಧಿಸಿದ ವಿಶ್ವದ ನಾಲ್ಕನೇ ರಾಷ್ಟ್ರ ಎಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಗಿದೆ

ಜಲ ಜೀವನ್ ಮಿಷನ್ ಅಡಿಯಲ್ಲಿ ಶೇ. 81 ಕ್ಕೂ ಹೆಚ್ಚು ಗ್ರಾಮೀಣ ಕುಟುಂಬಗಳು ಈಗ ಶುದ್ಧ ನಲ್ಲಿ ನೀರಿನ ಸೌಲಭ್ಯವನ್ನು ಹೊಂದಿವೆ

प्रविष्टि तिथि: 29 JAN 2026 1:40PM by PIB Bengaluru

ಮೂಲಸೌಕರ್ಯ ಎಂಬ ಪರಿಕಲ್ಪನೆಯು ಕೇವಲ ಭೌತಿಕ ಜಾಲಗಳ ಆಚೆಗೆ ವಿಕಸನಗೊಳ್ಳುತ್ತಿದ್ದು, ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ, ಸ್ವಚ್ಛ ಇಂಧನ ವ್ಯವಸ್ಥೆಗಳು, ಚೇತರಿಸಿಕೊಳ್ಳುವ ನೀರಿನ ನಿರ್ವಹಣೆ ಮತ್ತು ಭವಿಷ್ಯದ ಸಿದ್ಧ ತಂತ್ರಜ್ಞಾನಗಳನ್ನು ತನ್ನೊಳಗೆ ಒಳಗೊಳ್ಳುತ್ತಿದೆ. ಕಳೆದ 11 ವರ್ಷಗಳು ಕೇವಲ ಹೆದ್ದಾರಿಗಳು, ರೈಲ್ವೆಗಳು, ಬಂದರುಗಳು ಮತ್ತು ಇಂಧನ ವ್ಯವಸ್ಥೆಗಳಂತಹ ಸಾಂಪ್ರದಾಯಿಕ ಮೂಲಸೌಕರ್ಯಗಳ ವೇಗವರ್ಧಿತ ವಿಸ್ತರಣೆಗೆ ಮಾತ್ರವಲ್ಲದೆ, ಭವಿಷ್ಯದ ಸಿದ್ಧತೆಯುಳ್ಳ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ (DPI), ದತ್ತಾಂಶ ವ್ಯವಸ್ಥೆಗಳು ಮತ್ತು ನವೀಕರಿಸಬಹುದಾದ ಇಂಧನಕ್ಕೆ ಅನುಗುಣವಾಗಿರುವ ಆಸ್ತಿಗಳ ವಿಸ್ತರಣೆಗೂ ಸಾಕ್ಷಿಯಾಗಿವೆ ಎಂದು ಕೇಂದ್ರ ಹಣಕಾಸು ಮತ್ತು ಸಾಂಸ್ಥಿಕ ವ್ಯವಹಾರಗಳ ಸಚಿವರಾದ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು ಇಂದು ಸಂಸತ್ತಿನಲ್ಲಿ ಮಂಡಿಸಿದ ಆರ್ಥಿಕ ಸಮೀಕ್ಷೆ 2025-26 ತಿಳಿಸಿದೆ.

ಭವಿಷ್ಯಕ್ಕೆ ಸಿದ್ಧವಾದ ಡಿಜಿಟಲ್ ಮೂಲಸೌಕರ್ಯ:

ದೂರಸಂಪರ್ಕ:

ಭಾರತದ ದೂರಸಂಪರ್ಕ ವಲಯವು ಗಮನಾರ್ಹ ರೂಪಾಂತರಕ್ಕೆ ಒಳಗಾಗಿದ್ದು, ಇದು ದೇಶವನ್ನು ಡಿಜಿಟಲ್ ರೂಪದಲ್ಲಿ ಸಬಲೀಕರಣಗೊಳಿಸಬೇಕೆಂಬ ಸರ್ಕಾರದ ದೂರದೃಷ್ಟಿಯನ್ನು ಪ್ರತಿಬಿಂಬಿಸುತ್ತದೆ. ಈ ಪ್ರಯತ್ನಗಳು ಸಮಾವೇಶಿತ (ಸರ್ವವ್ಯಾಪಿ ಸಂಪರ್ಕದ ಮೂಲಕ ಒಳಗೊಳ್ಳುವ ಬೆಳವಣಿಗೆ), ವಿಕಸಿತ (ಪ್ರದರ್ಶನ, ಸುಧಾರಣೆ ಮತ್ತು ರೂಪಾಂತರದ ಮೂಲಕ ಅಭಿವೃದ್ಧಿ ಹೊಂದಿದ ಭಾರತ), ತ್ವರಿತ (ವೇಗವರ್ಧಿತ ಅಭಿವೃದ್ಧಿ ಮತ್ತು ತ್ವರಿತ ಪರಿಹಾರಗಳು) ಮತ್ತು ಸುರಕ್ಷಿತ (ಸುರಕ್ಷಿತ ಮತ್ತು ಸುಭದ್ರ) ದೂರಸಂಪರ್ಕ ಪರಿಸರ ವ್ಯವಸ್ಥೆಯನ್ನು ನಿರ್ಮಿಸುವುದರ ಮೇಲೆ ಕೇಂದ್ರೀಕೃತವಾಗಿವೆ.

ಇದರ ಪರಿಣಾಮವಾಗಿ, ಭಾರತದ ದೂರಸಂಪರ್ಕ ವಲಯವು ಕಳೆದ ದಶಕದಲ್ಲಿ ವೇಗವಾಗಿ ವಿಸ್ತರಿಸಿದ್ದು, ಟೆಲಿ-ಡೆನ್ಸಿಟಿಯು (ದೂರಸಂಪರ್ಕ ಸಾಂದ್ರತೆ) ಶೇ. 75.23 ರಿಂದ ಶೇ. 86.76 ಕ್ಕೆ ಏರಿದೆ ಮತ್ತು ಗ್ರಾಮೀಣ ಹಾಗೂ ನಗರಗಳ ನಡುವಿನ ಡಿಜಿಟಲ್ ಲಭ್ಯತೆಯ ಅಂತರವನ್ನು ಕಡಿಮೆ ಮಾಡಿದೆ. ವೈರ್ಲೆಸ್ ಡೇಟಾ ಬೆಲೆಗಳಲ್ಲಿನ ತೀವ್ರ ಕುಸಿತವು ಸರಾಸರಿ ಮಾಸಿಕ ಡೇಟಾ ಬಳಕೆಯ ಘಾತೀಯ ಏರಿಕೆಗೆ ಕಾರಣವಾಗಿದೆ; ಇದು ಸಾಮೂಹಿಕ ಡಿಜಿಟಲ್ ಅಳವಡಿಕೆಯನ್ನು ಉತ್ತೇಜಿಸುವಲ್ಲಿ ಕೈಗೆಟುಕುವ ದರದ ಪಾತ್ರವನ್ನು ಎತ್ತಿ ತೋರಿಸುತ್ತದೆ. ಟೆಲಿ-ಡೆನ್ಸಿಟಿಯು ಶೇ. 86.76 ತಲುಪಿದೆ ಮತ್ತು ದೇಶದ ಶೇ. 99.9 ರಷ್ಟು ಜಿಲ್ಲೆಗಳಲ್ಲಿ ಈಗ 5G ಸೇವೆಗಳು ಲಭ್ಯವಿವೆ ಎಂದು ಆರ್ಥಿಕ ಸಮೀಕ್ಷೆ 2025-26 ತಿಳಿಸಿದೆ.

ಮಾಹಿತಿ ತಂತ್ರಜ್ಞಾನ:

ಭಾರತದ ಐಟಿ (IT) ಮೂಲಸೌಕರ್ಯವು ಡಿಜಿಟಲ್ ಆಡಳಿತ, ಆರ್ಥಿಕ ಚಟುವಟಿಕೆ ಮತ್ತು ಸುಧಾರಿತ ತಂತ್ರಜ್ಞಾನಗಳ ವಿಸ್ತರಣೆಗೆ ಬೆನ್ನೆಲುಬಾಗಿದೆ. ಉದ್ಯಮದ ಅಂದಾಜಿನ ಪ್ರಕಾರ, ಜೂನ್ 2025 ರ ಹೊತ್ತಿಗೆ, ಭಾರತದ ಸ್ಥಾಪಿತ ದತ್ತಾಂಶ ಕೇಂದ್ರದ (Data Centre) ಸಾಮರ್ಥ್ಯವು ಸುಮಾರು 1,280 ಮೆಗಾವ್ಯಾಟ್ (MW) ಆಗಿತ್ತು. ಇದರಲ್ಲಿ ಸುಮಾರು 130 ಖಾಸಗಿ ನಿರ್ವಹಣೆಯ ದತ್ತಾಂಶ ಕೇಂದ್ರಗಳು ಮತ್ತು ಕೇಂದ್ರ ಹಾಗೂ ರಾಜ್ಯ ಮಟ್ಟದ ಸರ್ಕಾರಿ ಏಜೆನ್ಸಿಗಳು ನಡೆಸುತ್ತಿರುವ 49 ದತ್ತಾಂಶ ಕೇಂದ್ರಗಳು ಸೇರಿವೆ. ಕ್ಷಿಪ್ರ ಡಿಜಿಟಲೀಕರಣ ಮತ್ತು ಕ್ಲೌಡ್ ಕಂಪ್ಯೂಟಿಂಗ್, ಕೃತಕ ಬುದ್ಧಿಮತ್ತೆ (AI), ಐಒಟಿ (IoT) ಮತ್ತು 5G ನಂತಹ ತಂತ್ರಜ್ಞಾನಗಳ ಅಳವಡಿಕೆಯಿಂದಾಗಿ, ದತ್ತಾಂಶ ಕೇಂದ್ರದ ಸಾಮರ್ಥ್ಯವು 2030 ರ ವೇಳೆಗೆ ಸುಮಾರು 4 ಗಿಗಾವ್ಯಾಟ್ (GW) ಗೆ ವಿಸ್ತರಿಸಲಿದೆ ಎಂದು ಆರ್ಥಿಕ ಸಮೀಕ್ಷೆ 2025-26 ಅಂದಾಜಿಸಿದೆ.

ಸಾಮಾಜಿಕ ಮತ್ತು ಉದಯೋನ್ಮುಖ ವಲಯದ ಮೂಲಸೌಕರ್ಯ 

ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ: 

ಜಲ ಜೀವನ್ ಮಿಷನ್ ಅಡಿಯಲ್ಲಿ ಭಾರತವು ಮಹತ್ವದ ಮೈಲಿಗಲ್ಲನ್ನು ಸಾಧಿಸಿದ್ದು, ಅಕ್ಟೋಬರ್ 2025 ರ ವೇಳೆಗೆ ಜಲ ಜೀವನ್ ಮಿಷನ್ ಅಡಿಯಲ್ಲಿ ಶೇ. 81 ಕ್ಕೂ ಹೆಚ್ಚು ಗ್ರಾಮೀಣ ಕುಟುಂಬಗಳು ನಲ್ಲಿಯ ಮೂಲಕ ಶುದ್ಧ ಕುಡಿಯುವ ನೀರನ್ನು ಪಡೆಯುತ್ತಿವೆ.

ಜಲಸಂಪನ್ಮೂಲ ನಿರ್ವಹಣಾ ವಲಯ: 

ಜಲಸಂಪನ್ಮೂಲ ನಿರ್ವಹಣೆಯ ಪ್ರಮುಖ ಉಪಕ್ರಮಗಳಲ್ಲಿ ನಮಾಮಿ ಗಂಗೆ ಕಾರ್ಯಕ್ರಮ, ಕಮಾಂಡ್ ಏರಿಯಾ ಡೆವಲಪ್ಮೆಂಟ್ನ ಆಧುನೀಕರಣ (M-CADWM), ಸಿ-ಫ್ಲಡ್ (C-Flood) ಪ್ಲಾಟ್ ಫಾರ್ಮ್, ನಿರ್ದಿಷ್ಟ ಅಣೆಕಟ್ಟುಗಳ ರಾಷ್ಟ್ರೀಯ ನೋಂದಣಿ 2025, ನದಿ ನಗರಗಳ ಒಕ್ಕೂಟ (RCA) - ಕ್ರಿಯಾ ಯೋಜನೆ 2025 ಮತ್ತು ರಾಷ್ಟ್ರೀಯ ಜಲಸಂಪನ್ಮೂಲ ಗಣತಿಗಳು ಸೇರಿವೆ.

ಪ್ರವಾಸೋದ್ಯಮ ಕ್ಷೇತ್ರ:

ಸುಸ್ಥಿರ ಮತ್ತು ಜವಾಬ್ದಾರಿಯುತ ಪ್ರವಾಸೋದ್ಯಮ ತಾಣಗಳನ್ನು ಅಭಿವೃದ್ಧಿಪಡಿಸುವ ಉದ್ದೇಶದಿಂದ ಭಾರತ ಸರ್ಕಾರವು 'ಸ್ವದೇಶ್ ದರ್ಶನ್' ಯೋಜನೆಯನ್ನು 'ಸ್ವದೇಶ್ ದರ್ಶನ್ 2.0' (SD 2.0) ಆಗಿ ಪರಿಷ್ಕರಿಸಿದೆ. ಆಯ್ದ ಯಾತ್ರಾ ಸ್ಥಳಗಳು ಮತ್ತು ಪರಂಪರೆಯ ತಾಣಗಳ ಸಮಗ್ರ ಅಭಿವೃದ್ಧಿಗೆ ಬೆಂಬಲ ನೀಡಲು, ಕೇಂದ್ರ ವಲಯದ ಯೋಜನೆಯಾಗಿ 'ಪ್ರಸಾದ್' (PRASHAD - National Mission on Pilgrimage Rejuvenation and Spiritual, Heritage Augmentation Drive) ಯೋಜನೆಯನ್ನು ಪ್ರಾರಂಭಿಸಲಾಗಿದೆ.

ಬಾಹ್ಯಾಕಾಶ ಕ್ಷೇತ್ರ:

ಭಾರತವು ಪ್ರಸ್ತುತ 56 ಸಕ್ರಿಯ ಬಾಹ್ಯಾಕಾಶ ಸ್ವತ್ತುಗಳನ್ನು ಹೊಂದಿದ್ದು, ಇದರಲ್ಲಿ 20 ಸಂವಹನ ಉಪಗ್ರಹಗಳು, ಎಂಟು ನ್ಯಾವಿಗೇಷನ್ ಉಪಗ್ರಹಗಳು, ನಾಲ್ಕು ವೈಜ್ಞಾನಿಕ ಉಪಗ್ರಹಗಳು, 21 ಭೂ ವೀಕ್ಷಣಾ ಉಪಗ್ರಹಗಳು ಮತ್ತು ಮೂರು ತಂತ್ರಜ್ಞಾನ ಪ್ರಾತ್ಯಕ್ಷಿಕೆ ಮಿಷನ್ಗಳು ಸೇರಿವೆ. ಬಲವರ್ಧಿತ ಬಾಹ್ಯಾಕಾಶ ಮೂಲಸೌಕರ್ಯದೊಂದಿಗೆ, 2025ರ ವರ್ಷವು ಭಾರತದ ಬಾಹ್ಯಾಕಾಶ ಕಾರ್ಯಕ್ರಮದಲ್ಲಿ ಮಹತ್ವದ ಸಾಧನೆಗೆ ಸಾಕ್ಷಿಯಾಯಿತು. ಸ್ವಯಂಚಾಲಿತ ಉಪಗ್ರಹ ಡಾಕಿಂಗ್ (SpaDeX) ಸಾಧಿಸಿದ ವಿಶ್ವದ ನಾಲ್ಕನೇ ರಾಷ್ಟ್ರವಾಗಿ ಭಾರತ ಹೊರಹೊಮ್ಮಿತು. ಇದರೊಂದಿಗೆ ಸ್ವದೇಶಿ ಮಿಷನ್ ಗಳ ವಿಸ್ತರಣೆ ಮತ್ತು ಖಾಸಗಿ ವಲಯದ ಭಾಗವಹಿಸುವಿಕೆಯು ಹೆಚ್ಚಾಯಿತು. ಹೆಚ್ಚುವರಿಯಾಗಿ, 29 ಜನವರಿ 2025 ರಂದು ಸ್ವದೇಶಿ ಕ್ರಯೋಜೆನಿಕ್ ಹಂತವನ್ನು ಹೊಂದಿರುವ GSLV-F15 ರಾಕೆಟ್, NVS-02 ಉಪಗ್ರಹವನ್ನು ಉಡಾವಣೆ ಮಾಡಿತು. ಇದು ಶ್ರೀಹರಿಕೋಟಾದಿಂದ ನಡೆದ 100ನೇ ಉಡಾವಣೆ ಎಂಬ ಹೆಗ್ಗುರುತನ್ನು ಸ್ಥಾಪಿಸಿತು.

 

*****


(रिलीज़ आईडी: 2220099) आगंतुक पटल : 3
इस विज्ञप्ति को इन भाषाओं में पढ़ें: English , Urdu , हिन्दी , Marathi , Bengali , Gujarati , Malayalam