ರಾಷ್ಟ್ರಪತಿಗಳ ಕಾರ್ಯಾಲಯ
azadi ka amrit mahotsav

ಭಾರತದ ಗೌರವಾನ್ವಿತ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರು ಸಂಸತ್ತನ್ನು ಉದ್ದೇಶಿಸಿ ಮಾಡಿದ ಭಾಷಣ

प्रविष्टि तिथि: 28 JAN 2026 12:57PM by PIB Bengaluru

 ಗೌರವಾನ್ವಿತ ಸದಸ್ಯರೇ,

ಸಂಸತ್ತಿನ ಉಭಯ ಸದನಗಳ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಲು ನನಗೆ ಅಪಾರ ಸಂತೋಷವಾಗುತ್ತಿದೆ. ಕಳೆದ ವರ್ಷವು ಭಾರತದ ಕ್ಷಿಪ್ರ ಅಭಿವೃದ್ಧಿ ಮತ್ತು ಅದರ ಶ್ರೀಮಂತ ಪರಂಪರೆಯನ್ನು ಆಚರಿಸುವಲ್ಲಿ ಸ್ಮರಣೀಯವಾಗಿದೆ. ಈ ಅವಧಿಯು ತನ್ನೊಂದಿಗೆ ಅನೇಕ ಸ್ಫೂರ್ತಿಗಳನ್ನು ತಂದಿದೆ. ಪ್ರಸ್ತುತ, ಭಾರತವು ‘ವಂದೇ ಮಾತರಂ’ನ 150 ವರ್ಷಗಳನ್ನು ಆಚರಿಸುತ್ತಿದೆ. ಭಾರತದ ಜನರು ಈ ಗಹನವಾದ ಸ್ಫೂರ್ತಿಯ ಸೆಲೆಯಾದ ಋಷಿ ಬಂಕಿಮ ಚಂದ್ರ ಚಟ್ಟೋಪಾಧ್ಯಾಯ ಅವರಿಗೆ ಗೌರವ ನಮನಗಳನ್ನು ಸಲ್ಲಿಸುತ್ತಿದ್ದಾರೆ. ಈ ಶುಭ ಸಂದರ್ಭದಲ್ಲಿ ಸಂಸತ್ತಿನಲ್ಲಿ ವಿಶೇಷ ಚರ್ಚೆಯನ್ನು ಆಯೋಜಿಸಿದ್ದಕ್ಕಾಗಿ ನಾನು ಗೌರವಾನ್ವಿತ ಸದಸ್ಯರನ್ನು ಅಭಿನಂದಿಸುತ್ತೇನೆ.

ಗೌರವಾನ್ವಿತ ಸದಸ್ಯರೇ,

ಈ ಅವಧಿಯಲ್ಲಿ, ನಾಗರಿಕರು ಶ್ರೀ ಗುರು ತೇಜ್ ಬಹದ್ದೂರ್ ಜೀ ಅವರ 350ನೇ ಪುಣ್ಯತಿಥಿಯನ್ನು ಆಳವಾದ ಭಕ್ತಿಯಿಂದ ಆಚರಿಸಿದರು. ಭಗವಾನ್ ಬಿರ್ಸಾ ಮುಂಡಾ ಅವರ 150ನೇ ಜನ್ಮದಿನದ ವರ್ಷದಲ್ಲಿ, ರಾಷ್ಟ್ರವು ಅವರಿಗೆ ಗೌರವ ಸಲ್ಲಿಸಿತು ಮತ್ತು ಬುಡಕಟ್ಟು ಸಮುದಾಯದ ಕೊಡುಗೆಗಳನ್ನು ಸ್ಮರಿಸಿತು. ಸರ್ದಾರ್ ಪಟೇಲರ 150ನೇ ಜನ್ಮದಿನದ ಆಚರಣೆಗಳಿಗೆ ಸಂಬಂಧಿಸಿದ ಕಾರ್ಯಕ್ರಮಗಳು 'ಏಕ ಭಾರತ, ಶ್ರೇಷ್ಠ ಭಾರತ'ದ ಮನೋಭಾವವನ್ನು ಬಲಪಡಿಸಿವೆ. ಭಾರತ ರತ್ನ ಭೂಪೇನ್ ಹಜಾರಿಕಾ ಅವರ ಜನ್ಮಶತಮಾನೋತ್ಸವದ ಆಚರಣೆಗಳು ಮಧುರ ಸಂಗೀತ ಮತ್ತು ರಾಷ್ಟ್ರೀಯ ಏಕತೆಯ ಮನೋಭಾವದಿಂದ ತುಂಬಿರುವುದನ್ನು ಎಲ್ಲಾ ನಾಗರಿಕರು ಸಾಕ್ಷೀಕರಿಸಿದ್ದಾರೆ. ನಾಗರಿಕರು ತಮ್ಮ ವೈಭವಯುತ ಗತಕಾಲದ ಇಂತಹ ಮಹಾನ್ ಮೈಲಿಗಲ್ಲುಗಳನ್ನು ಮತ್ತು ತಮ್ಮ ಪೂರ್ವಜರ ಗಮನಾರ್ಹ ಕೊಡುಗೆಗಳನ್ನು ನೆನಪಿಸಿಕೊಂಡಾಗ, ಅದು ಹೊಸ ಪೀಳಿಗೆಗೆ ಸ್ಫೂರ್ತಿ ನೀಡುತ್ತದೆ. ಈ ಸ್ಫೂರ್ತಿಯು ರಾಷ್ಟ್ರವು ‘ವಿಕಸಿತ ಭಾರತ’ದತ್ತ ಸಾಗುವ ಪ್ರಯಾಣವನ್ನು ಮತ್ತಷ್ಟು ವೇಗಗೊಳಿಸುತ್ತದೆ.

ಗೌರವಾನ್ವಿತ ಸದಸ್ಯರೇ,

2026ನೇ ವರ್ಷದ ಆರಂಭದೊಂದಿಗೆ, ದೇಶವು ಈ ಶತಮಾನದ ಎರಡನೇ ಹಂತಕ್ಕೆ ಕಾಲಿಟ್ಟಿದೆ. ಭಾರತಕ್ಕೆ, ಈ ಶತಮಾನದ ಮೊದಲ 25 ವರ್ಷಗಳು ಹಲವಾರು ಯಶಸ್ಸುಗಳು, ವೈಭವದ ಸಾಧನೆಗಳು ಮತ್ತು ಅಸಾಧಾರಣ ಅನುಭವಗಳಿಂದ ಗುರುತಿಸಲ್ಪಟ್ಟಿವೆ. ಕಳೆದ 10-11 ವರ್ಷಗಳಲ್ಲಿ, ಭಾರತವು ಪ್ರತಿಯೊಂದು ಕ್ಷೇತ್ರದಲ್ಲೂ ತನ್ನ ಅಡಿಪಾಯವನ್ನು ಬಲಪಡಿಸಿಕೊಂಡಿದೆ. 2047ರ ವೇಳೆಗೆ ಭಾರತವು ‘ವಿಕಸಿತ ಭಾರತ’ವಾಗುವತ್ತ ಸಾಗುತ್ತಿರುವ ಕ್ಷಿಪ್ರ ಪ್ರಯಾಣಕ್ಕೆ ಈ ಅವಧಿಯು ಬಲವಾದ ಅಡಿಪಾಯವಾಗಿದೆ.

ಗೌರವಾನ್ವಿತ ಸದಸ್ಯರೇ,

ಬಾಬಾಸಾಹೇಬ್ ಅಂಬೇಡ್ಕರ್ ಅವರು ಯಾವಾಗಲೂ ಸಮಾನತೆ ಮತ್ತು ಸಾಮಾಜಿಕ ನ್ಯಾಯಕ್ಕೆ ಒತ್ತು ನೀಡುತ್ತಿದ್ದರು. ನಮ್ಮ ಸಂವಿಧಾನವು ನಮಗೆ ಅದೇ ಸ್ಫೂರ್ತಿಯನ್ನು ನೀಡುತ್ತದೆ. ಸಾಮಾಜಿಕ ನ್ಯಾಯ ಎಂದರೆ ಪ್ರತಿಯೊಬ್ಬ ನಾಗರಿಕನೂ ಯಾವುದೇ ತಾರತಮ್ಯವಿಲ್ಲದೆ ಪೂರ್ಣ ಹಕ್ಕುಗಳನ್ನು ಚಲಾಯಿಸುವುದು ಎಂದರ್ಥ. ನನ್ನ ಸರ್ಕಾರವು ಸಾಮಾಜಿಕ ನ್ಯಾಯಕ್ಕೆ ಅದರ ನೈಜ ಅರ್ಥದಲ್ಲಿ ಸಂಪೂರ್ಣ ಬದ್ಧವಾಗಿದೆ. ಇದರ ಪರಿಣಾಮವಾಗಿ, ಕಳೆದ ದಶಕದಲ್ಲಿ 25 ಕೋಟಿ ನಾಗರಿಕರು ಬಡತನದಿಂದ ಹೊರಬಂದಿದ್ದಾರೆ. ನನ್ನ ಸರ್ಕಾರದ ಮೂರನೇ ಅವಧಿಯಲ್ಲಿ, ಬಡವರ ಸಬಲೀಕರಣದ ಅಭಿಯಾನವು ಹೆಚ್ಚಿನ ವೇಗದಲ್ಲಿ ಮುಂದುವರಿದಿದೆ.

  • ಕಳೆದ ದಶಕದಲ್ಲಿ ಬಡವರಿಗಾಗಿ ನಾಲ್ಕು ಕೋಟಿ ಪಕ್ಕಾ ಮನೆಗಳನ್ನು ನಿರ್ಮಿಸಲಾಗಿದೆ. ಕಳೆದ ಒಂದು ವರ್ಷದಲ್ಲಿ ಬಡವರಿಗೆ 32 ಲಕ್ಷ ಹೊಸ ಮನೆಗಳನ್ನು ಹಸ್ತಾಂತರ ಮಾಡಲಾಗಿದೆ.
  • ಜಲಜೀವನ್ ಮಿಷನ್‌ ನ ಐದು ವರ್ಷಗಳ ಅವಧಿಯಲ್ಲಿ, 12.5 ಕೋಟಿ ಹೊಸ ಮನೆಗಳಿಗೆ ನಲ್ಲಿ ಮೂಲಕ ನೀರು ಒದಗಿಸಲಾಗಿದೆ. ಕಳೆದ ವರ್ಷದಲ್ಲಿ ಸುಮಾರು ಒಂದು ಕೋಟಿ ಹೊಸ ಮನೆಗಳಿಗೆ ನಲ್ಲಿ ನೀರು ತಲುಪಿದೆ.
  • ಉಜ್ವಲ ಯೋಜನೆಯ ಮೂಲಕ, ಇಲ್ಲಿಯವರೆಗೆ 10 ಕೋಟಿಗೂ ಹೆಚ್ಚು ಮನೆಗಳಿಗೆ ಎಲ್‌ ಪಿ ಜಿ ಸಂಪರ್ಕಗಳನ್ನು ಒದಗಿಸಲಾಗಿದೆ ಮತ್ತು ಈ ಅಭಿಯಾನವು ಕಳೆದ ವರ್ಷದಲ್ಲಿ ಕ್ಷಿಪ್ರ ಗತಿಯಲ್ಲಿ ಪ್ರಗತಿ ಸಾಧಿಸಿದೆ.
  • ನನ್ನ ಸರ್ಕಾರವು ವ್ಯವಸ್ಥೆಗಳಲ್ಲಿ ಪಾರದರ್ಶಕತೆ ಮತ್ತು ಪ್ರಾಮಾಣಿಕತೆಯನ್ನು ಸಾಂಸ್ಥಿಕಗೊಳಿಸುತ್ತಿದೆ. ಕಳೆದ ಒಂದು ವರ್ಷದಲ್ಲಿ, ನನ್ನ ಸರ್ಕಾರವು ನೇರ ಲಾಭ ವರ್ಗಾವಣೆ ಮೂಲಕ 6.75 ಲಕ್ಷ ಕೋಟಿ ರೂಪಾಯಿಗಳಿಗೂ ಹೆಚ್ಚಿನ ಮೊತ್ತದ ಪ್ರಯೋಜನಗಳನ್ನು ನೇರವಾಗಿ ಫಲಾನುಭವಿಗಳಿಗೆ ಒದಗಿಸಿದೆ.

ಗೌರವಾನ್ವಿತ ಸದಸ್ಯರೇ,

ನನ್ನ ಸರ್ಕಾರವು ದಲಿತರು, ಹಿಂದುಳಿದ ವರ್ಗಗಳು, ವಂಚಿತರು ಮತ್ತು ಬುಡಕಟ್ಟು ಸಮುದಾಯಗಳು ಹೀಗೆ ಎಲ್ಲರಿಗೂ ಪೂರ್ಣ ಸಂವೇದನಾಶೀಲತೆಯಿಂದ ಕೆಲಸ ಮಾಡುತ್ತಿದೆ. ‘ಸಬ್ಕಾ ಸಾಥ್, ಸಬ್ಕಾ ವಿಕಾಸ್’ ದೃಷ್ಟಿಕೋನವು ದೇಶದ ಎಲ್ಲಾ ನಾಗರಿಕರ ಜೀವನದಲ್ಲಿ ಸಕಾರಾತ್ಮಕ ಬದಲಾವಣೆಯನ್ನು ತರುತ್ತಿದೆ. 2014 ರ ಆರಂಭದಲ್ಲಿ, ಸಾಮಾಜಿಕ ಭದ್ರತಾ ಯೋಜನೆಗಳು ಕೇವಲ 25 ಕೋಟಿ ನಾಗರಿಕರನ್ನು ತಲುಪಲು ಸಾಧ್ಯವಾಗಿತ್ತು. ನನ್ನ ಸರ್ಕಾರದ ನಿರಂತರ ಪ್ರಯತ್ನದಿಂದ ಇಂದು ಸುಮಾರು 95 ಕೋಟಿ ಭಾರತೀಯರು ಸಾಮಾಜಿಕ ಭದ್ರತೆಯ ರಕ್ಷಣೆ ಹೊಂದಿದ್ದಾರೆ.

  • ಬಡ ರೋಗಿಗಳಿಗಾಗಿ ಆರಂಭಿಸಲಾದ ಆಯುಷ್ಮಾನ್ ಭಾರತ್ ಯೋಜನೆಯಡಿ ಕಳೆದ ವರ್ಷದವರೆಗೆ ದೇಶಾದ್ಯಂತದ ಆಸ್ಪತ್ರೆಗಳಲ್ಲಿ 11 ಕೋಟಿಗೂ ಹೆಚ್ಚು ಉಚಿತ ವೈದ್ಯಕೀಯ ಚಿಕಿತ್ಸೆಗಳನ್ನು ನೀಡಲಾಗಿದೆ. ಕಳೆದ ವರ್ಷವೊಂದರಲ್ಲೇ 2.5 ಕೋಟಿ ಬಡ ರೋಗಿಗಳು ಈ ಯೋಜನೆಯಡಿ ಉಚಿತ ವೈದ್ಯಕೀಯ ಚಿಕಿತ್ಸೆ ಪಡೆದಿದ್ದಾರೆ.
  • ಕಳೆದ ಸುಮಾರು ಒಂದೂವರೆ ವರ್ಷಗಳಲ್ಲಿ ಸುಮಾರು ಒಂದು ಕೋಟಿ ಹಿರಿಯ ನಾಗರಿಕರಿಗೆ ‘ವಯೋ ವಂದನಾ’ ಕಾರ್ಡ್‌ ಗಳನ್ನು ನೀಡಲಾಗಿದೆ. ಈ ಕಾರ್ಡ್‌ ಗಳ ನೆರವಿನಿಂದ ಸುಮಾರು 8 ಲಕ್ಷ ಹಿರಿಯ ನಾಗರಿಕರು ಆಸ್ಪತ್ರೆಗಳಲ್ಲಿ ಒಳರೋಗಿಗಳಾಗಿ ಉಚಿತ ಚಿಕಿತ್ಸೆ ಪಡೆದಿದ್ದಾರೆ.
  • ಇಂದು ದೇಶಾದ್ಯಂತ ಸ್ಥಾಪಿಸಲಾದ 1 ಲಕ್ಷ 80 ಸಾವಿರ ಆಯುಷ್ಮಾನ್ ಆರೋಗ್ಯ ಮಂದಿರಗಳ ನೆರವಿನಿಂದ, ರೋಗಿಗಳು ತಮ್ಮ ಮನೆಗೆ ಹತ್ತಿರದಲ್ಲಿ ವೈದ್ಯಕೀಯ ಚಿಕಿತ್ಸೆ ಪಡೆಯುವ ಭರವಸೆ ಹೊಂದಿದ್ದಾರೆ.

ನನ್ನ ಸರ್ಕಾರವು ಪ್ರಮುಖ ಕಾಯಿಲೆಗಳ ವಿರುದ್ಧ ನಿರ್ಣಾಯಕ ಹೋರಾಟ ನಡೆಸಿದೆ. ಅನುವಂಶಿಕ (ಸಿಕಲ್ ಸೆಲ್) ರಕ್ತಹೀನತೆ ನಿರ್ಮೂಲನಾ ಮಿಷನ್ ಅಡಿಯಲ್ಲಿ 6.5 ಕೋಟಿಗೂ ಹೆಚ್ಚು ನಾಗರಿಕರ ತಪಾಸಣೆ ನಡೆಸಲಾಗಿದೆ. ಇದು ಹಲವಾರು ಬುಡಕಟ್ಟು ಪ್ರದೇಶಗಳಲ್ಲಿ ಈ ರೋಗವನ್ನು ನಿಯಂತ್ರಿಸಲು ಸಹಾಯ ಮಾಡಿದೆ. ಮಿಷನ್ ಮೋಡ್‌ ನಲ್ಲಿ ನಡೆಸಲಾದ ಅಭಿಯಾನಗಳು ಜಪಾನೀಸ್ ಎನ್ಸೆಫಾಲಿಟಿಸ್‌ ನಂತಹ ಕಾಯಿಲೆಗಳ ಮೇಲೆ ಪರಿಣಾಮಕಾರಿ ನಿಯಂತ್ರಣಕ್ಕೆ ಕಾರಣವಾಗಿವೆ. ಉತ್ತರ ಪ್ರದೇಶದ ಅನೇಕ ಕಡಿಮೆ ಅಭಿವೃದ್ಧಿ ಹೊಂದಿದ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಈ ರೋಗದ ಪರಿಣಾಮಕಾರಿ ತಡೆಗಟ್ಟುವಿಕೆಯನ್ನು ಖಚಿತಪಡಿಸಿಕೊಳ್ಳಲಾಗಿದೆ. ವಿಶ್ವ ಆರೋಗ್ಯ ಸಂಸ್ಥೆಯು ಭಾರತವು ಕಣ್ಣಿನ ಕಾಯಿಲೆಯಾದ ಟ್ರಾಕೋಮಾದಿಂದ ಮುಕ್ತವಾಗಿದೆ ಎಂದು ಘೋಷಿಸಿರುವುದು ಹೆಮ್ಮೆಯ ವಿಷಯವಾಗಿದೆ.

ನನ್ನ ಸರ್ಕಾರವು ಪ್ರತಿ ನಾಗರಿಕನಿಗೂ ವಿಮಾ ರಕ್ಷಣೆ ನೀಡಲು ಬದ್ಧವಾಗಿದೆ. ಪ್ರಧಾನ ಮಂತ್ರಿ ಜೀವನ ಜ್ಯೋತಿ ವಿಮಾ ಯೋಜನೆ ಮತ್ತು ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆ ಈ ಪ್ರಯತ್ನದಲ್ಲಿ ನಿರ್ಣಾಯಕ ಪಾತ್ರ ವಹಿಸಿವೆ. ಈ ಯೋಜನೆಗಳ ಮೂಲಕ ಬೆಂಬಲದ ಅಗತ್ಯವಿರುವ ಕೋಟ್ಯಂತರ ನಾಗರಿಕರು ವಿಮಾ ರಕ್ಷಣೆಯನ್ನು ಪಡೆದಿದ್ದಾರೆ. ಈ ಯೋಜನೆಗಳ ಅಡಿಯಲ್ಲಿ 24 ಸಾವಿರ ಕೋಟಿ ರೂಪಾಯಿಗಳಿಗಿಂತ ಹೆಚ್ಚಿನ ವಿಮಾ ಮೊತ್ತವನ್ನು ವಿತರಿಸಲಾಗಿದೆ. ಈ ಯೋಜನೆಗಳು ಬಿಕ್ಕಟ್ಟಿನ ಪರಿಸ್ಥಿತಿಯಲ್ಲಿ ಕೋಟ್ಯಂತರ ಬಡ ಜನರಿಗೆ ಸಹಾಯ ಮಾಡಿವೆ.

ಗೌರವಾನ್ವಿತ ಸದಸ್ಯರೇ,

ನಮ್ಮ ದೇಶದ ಯುವಜನರು, ರೈತರು, ಕಾರ್ಮಿಕರು ಮತ್ತು ಉದ್ಯಮಿಗಳು ವಿಕಸಿತ ಭಾರತ ನಿರ್ಮಾಣದ ನಿಟ್ಟಿನಲ್ಲಿ ತಮ್ಮ ಪಾತ್ರವನ್ನು ನಿರಂತರವಾಗಿ ವಿಸ್ತರಿಸುತ್ತಿರುವುದನ್ನು ನೋಡಿ ನನಗೆ ತೃಪ್ತಿಯ ಭಾವನೆ ಉಂಟಾಗುತ್ತಿದೆ. ಕಳೆದ ವರ್ಷದ ಆಶಾದಾಯಕ ಅಂಕಿಅಂಶಗಳು ಇದಕ್ಕೆ ಸಾಕ್ಷಿಯಾಗಿವೆ.

  • ಕಳೆದ ವರ್ಷ ಭಾರತವು 350 ಮಿಲಿಯನ್ ಟನ್‌ ಗಳಿಗಿಂತ ಹೆಚ್ಚು ದಾಖಲೆ ಪ್ರಮಾಣದ ಆಹಾರ ಧಾನ್ಯಗಳ ಉತ್ಪಾದನೆಯನ್ನು ಸಾಧಿಸಿದೆ.
  • 150 ಮಿಲಿಯನ್ ಟನ್ ಉತ್ಪಾದನೆಯೊಂದಿಗೆ, ಭಾರತವು ವಿಶ್ವದ ಅತಿದೊಡ್ಡ ಅಕ್ಕಿ ಉತ್ಪಾದಿಸುವ ದೇಶವಾಗಿದೆ.
  • ನಮ್ಮ ದೇಶವು ಜಾಗತಿಕವಾಗಿ ಎರಡನೇ ಅತಿದೊಡ್ಡ ಮೀನು ಉತ್ಪಾದಕ ರಾಷ್ಟ್ರವಾಗಿ ಹೊರಹೊಮ್ಮಿದೆ. ಇದು 'ನೀಲಿ ಆರ್ಥಿಕತೆ'ಯಲ್ಲಿ ರಾಷ್ಟ್ರದ ಯಶಸ್ಸನ್ನು ಪ್ರತಿಬಿಂಬಿಸುತ್ತದೆ.
  • ಹಾಲು ಉತ್ಪಾದನಾ ಕ್ಷೇತ್ರದಲ್ಲೂ ಭಾರತವು ವಿಶ್ವದ ಅತ್ಯಂತ ಯಶಸ್ವಿ ದೇಶ ಎಂದು ಗುರುತಿಸಲ್ಪಟ್ಟಿದೆ. ಇದು ಸಹಕಾರಿ ಚಳವಳಿಯ ಶಕ್ತಿಯ ಫಲಿತಾಂಶವಾಗಿದೆ.
  • ಈ ಅವಧಿಯಲ್ಲಿ ದೇಶದ ಉತ್ಪಾದನಾ ವಲಯವು ದಾಖಲೆಯ ಬೆಳವಣಿಗೆಯನ್ನು ತೋರಿಸಿದೆ. ಮೊಬೈಲ್ ಉತ್ಪಾದನೆಯಂತಹ ಕ್ಷೇತ್ರದಲ್ಲಿ ಭಾರತವು ಈಗ ವಿಶ್ವದ ಎರಡನೇ ಅತಿದೊಡ್ಡ ದೇಶವಾಗಿದೆ. 2025-26 ರ ಮೊದಲ ಐದು ತಿಂಗಳಲ್ಲಿ, ಭಾರತದ ಸ್ಮಾರ್ಟ್‌ಫೋನ್ ರಫ್ತು 1 ಲಕ್ಷ ಕೋಟಿ ರೂಪಾಯಿಗಳನ್ನು ಮೀರಿದೆ. ಈ ವರ್ಷ ಭಾರತವು 100ಕ್ಕೂ ಹೆಚ್ಚು ದೇಶಗಳಿಗೆ ಎಲೆಕ್ಟ್ರಿಕ್ ವಾಹನಗಳನ್ನು ರಫ್ತು ಮಾಡಲು ಪ್ರಾರಂಭಿಸಿದೆ.

ಗೌರವಾನ್ವಿತ ಸದಸ್ಯರೇ,

ಭ್ರಷ್ಟಾಚಾರ ಮತ್ತು ಹಗರಣ ಮುಕ್ತ ವ್ಯವಸ್ಥೆಯನ್ನು ನಿರ್ಮಿಸುವಲ್ಲಿ ನನ್ನ ಸರ್ಕಾರವು ಯಶಸ್ವಿಯಾಗುತ್ತಿದೆ. ಇದರ ಪರಿಣಾಮವಾಗಿ, ತೆರಿಗೆದಾರರ ಪ್ರತಿಯೊಂದು ರೂಪಾಯಿಯನ್ನು ದೇಶದ ಅಭಿವೃದ್ಧಿ ಮತ್ತು ಕಲ್ಯಾಣಕ್ಕಾಗಿ ವ್ಯಯಿಸಲಾಗುತ್ತಿದೆ. ಇಂದು ಭಾರತವು ಆಧುನಿಕ ಮೂಲಸೌಕರ್ಯಗಳಲ್ಲಿ ಅಭೂತಪೂರ್ವ ಹೂಡಿಕೆ ಮಾಡುತ್ತಿದೆ. ಭೂಮಿ, ಸಮುದ್ರ ಮತ್ತು ವಾಯು ಮಾರ್ಗಗಳಲ್ಲಿ ಭಾರತದ ಕ್ಷಿಪ್ರ ಪ್ರಗತಿಯು ಈಗ ಜಾಗತಿಕ ಚರ್ಚೆಯ ವಿಷಯವಾಗಿದೆ.

  • ಅಟಲ್ ಅವರ ಅವಧಿಯಲ್ಲಿ ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯನ್ನು ಪ್ರಾರಂಭಿಸಲಾಯಿತು. ಕಳೆದ ಒಂದು ವರ್ಷದಲ್ಲಿ ಭಾರತವು ಸುಮಾರು 18 ಸಾವಿರ ಕಿಲೋಮೀಟರ್ ಹೊಸ ಗ್ರಾಮೀಣ ರಸ್ತೆಗಳನ್ನು ಸೇರಿಸಿದೆ. ಈಗ ಭಾರತದ ಬಹುತೇಕ ಗ್ರಾಮೀಣ ಜನಸಂಖ್ಯೆಯು ರಸ್ತೆಯ ಮೂಲಕ ಸಂಪರ್ಕ ಹೊಂದಿದೆ.
  • ಬಡ ಮತ್ತು ಮಧ್ಯಮ ವರ್ಗದವರಿಗೆ ಸೇವೆ ಸಲ್ಲಿಸುತ್ತಿರುವ ಭಾರತೀಯ ರೈಲ್ವೆಯು ಶೇ.100 ರಷ್ಟು ವಿದ್ಯುದ್ದೀಕರಣದ ಗುರಿಯನ್ನು ಸಾಧಿಸುವತ್ತ ವೇಗವಾಗಿ ಸಾಗುತ್ತಿದೆ.
  • ಮಿಜೋರಾಂನ ಐಜ್ವಾಲ್ ಮತ್ತು ನವದೆಹಲಿ ನೇರ ರೈಲು ಮಾರ್ಗದ ಮೂಲಕ ಸಂಪರ್ಕ ಹೊಂದಿವೆ. ಕಳೆದ ವರ್ಷ ಐಜ್ವಾಲ್ ರೈಲು ನಿಲ್ದಾಣಕ್ಕೆ ಮೊದಲ ಬಾರಿಗೆ ರಾಜಧಾನಿ ಎಕ್ಸ್‌ಪ್ರೆಸ್ ಬಂದಾಗ ಅಲ್ಲಿನ ಸ್ಥಳೀಯರು ತೋರಿದ ಉತ್ಸಾಹ ಇಡೀ ದೇಶಕ್ಕೆ ಸಂತೋಷ ತಂದಿತು.
  • ಜಮ್ಮು ಮತ್ತು ಕಾಶ್ಮೀರದಲ್ಲಿ ವಿಶ್ವದ ಅತಿ ಎತ್ತರದ ರೈಲ್ವೆ ಕಮಾನು ಸೇತುವೆಯಾದ ಚೆನಾಬ್ ಸೇತುವೆ ಮತ್ತು ತಮಿಳುನಾಡಿನಲ್ಲಿ ಹೊಸ ಪಾಂಬನ್ ಸೇತುವೆಯನ್ನು ನಿರ್ಮಿಸುವ ಮೂಲಕ ಭಾರತವು ಮೂಲಸೌಕರ್ಯ ಕ್ಷೇತ್ರದಲ್ಲಿ ಐತಿಹಾಸಿಕ ಮೈಲಿಗಲ್ಲನ್ನು ಸಾಧಿಸಿದೆ.
  • ಇಂದು ಜಮ್ಮು ಮತ್ತು ಕಾಶ್ಮೀರದಿಂದ ಕೇರಳದವರೆಗೆ 150 ಕ್ಕೂ ಹೆಚ್ಚು ವಂದೇ ಭಾರತ್ ರೈಲುಗಳ ಜಾಲವನ್ನು ಸ್ಥಾಪಿಸಲಾಗಿದೆ.
  • ಕೆಲವು ದಿನಗಳ ಹಿಂದಷ್ಟೇ ಹೊಸ ಪೀಳಿಗೆಯ ವಂದೇ ಭಾರತ್ ರೈಲುಗಳನ್ನು ಸೇರ್ಪಡೆಗೊಳಿಸಲಾಗಿದೆ. ಬಂಗಾಳ ಮತ್ತು ಅಸ್ಸಾಂ ನಡುವೆ ವಂದೇ ಭಾರತ್ ಸ್ಲೀಪರ್ ರೈಲುಗಳ ಪರಿಚಯವು ಭಾರತದ ರೈಲ್ವೆ ಪ್ರಗತಿಯಲ್ಲಿ ಹೊಸ ಸಾಧನೆಯಾಗಿದೆ.
  • ಭಾರತದ ಮೆಟ್ರೋ ಜಾಲದ ಬಗ್ಗೆ ನಾಗರಿಕರು ಹೆಮ್ಮೆಪಡುತ್ತಿದ್ದಾರೆ. 2025 ರಲ್ಲಿ ಭಾರತದ ಒಟ್ಟು ಮೆಟ್ರೋ ಜಾಲವು ಒಂದು ಸಾವಿರ ಕಿಲೋಮೀಟರ್‌ ಗಳ ಐತಿಹಾಸಿಕ ಗಡಿಯನ್ನು ದಾಟಿದೆ. ಈಗ ಭಾರತವು ವಿಶ್ವದ ಮೂರನೇ ಅತಿದೊಡ್ಡ ಮೆಟ್ರೋ ಜಾಲವನ್ನು ಹೊಂದಿದೆ.
  • ಒಳನಾಡು ಜಲಮಾರ್ಗಗಳ ಅಭಿವೃದ್ಧಿಗಾಗಿ ನನ್ನ ಸರ್ಕಾರವು ಹಲವಾರು ಕ್ರಮಗಳನ್ನು ಕೈಗೊಂಡಿದೆ. ಮೊದಲು ಭಾರತವು ಕೇವಲ ಐದು ರಾಷ್ಟ್ರೀಯ ಜಲಮಾರ್ಗಗಳನ್ನು ಹೊಂದಿತ್ತು, ಅವುಗಳ ಸಂಖ್ಯೆ ಈಗ 100 ದಾಟಿದೆ. ಇದರಿಂದ ಉತ್ತರ ಪ್ರದೇಶ, ಬಂಗಾಳ ಮತ್ತು ಬಿಹಾರ ಸೇರಿದಂತೆ ಪೂರ್ವ ಭಾರತದ ರಾಜ್ಯಗಳು ಲಾಜಿಸ್ಟಿಕ್ಸ್ ಹಬ್‌ ಗಳಾಗಿ ಹೊರಹೊಮ್ಮುತ್ತಿವೆ.
  • ಕ್ರೂಸ್ ಪ್ರವಾಸೋದ್ಯಮವು ನದಿ ಮತ್ತು ಕರಾವಳಿಯ ಸಮೀಪವಿರುವ ಪ್ರದೇಶಗಳಲ್ಲಿ ಪ್ರವಾಸೋದ್ಯಮದ ಹೆಚ್ಚಳಕ್ಕೆ ಕಾರಣವಾಗುತ್ತಿದೆ, ಇದರಿಂದಾಗಿ ಸ್ಥಳೀಯ ಆರ್ಥಿಕತೆಯು ಬಲಗೊಳ್ಳುತ್ತಿದೆ.

ಗೌರವಾನ್ವಿತ ಸದಸ್ಯರೇ,

ಈಗ ಬಾಹ್ಯಾಕಾಶ ಪ್ರವಾಸೋದ್ಯಮವೂ ಭಾರತಕ್ಕೆ ಎಟುಕದ ವಿಷಯವಲ್ಲ. ಭಾರತದ ಯುವ ಗಗನಯಾತ್ರಿ ಶುಭಾಂಶು ಶುಕ್ಲಾ ಅವರು ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ನೀಡಿದ ಭೇಟಿಯು ಐತಿಹಾಸಿಕ ಪ್ರಯಾಣದ ಆರಂಭವನ್ನು ಸೂಚಿಸುತ್ತದೆ. ಮುಂಬರುವ ವರ್ಷಗಳಲ್ಲಿ ನಮ್ಮ ದೇಶವು ಬಾಹ್ಯಾಕಾಶದಲ್ಲಿ ಭಾರತೀಯ ನಿಲ್ದಾಣವನ್ನು ಸ್ಥಾಪಿಸುವತ್ತ ಮುನ್ನಡೆಯಲಿದೆ. ರಾಷ್ಟ್ರವು ಗಗನಯಾನ ಮಿಷನ್‌ ನಲ್ಲಿಯೂ ಉತ್ಸಾಹದಿಂದ ಕೆಲಸ ಮಾಡುತ್ತಿದೆ.

ಗೌರವಾನ್ವಿತ ಸದಸ್ಯರೇ,

ದಶಕಗಳಿಂದ ಬಾಕಿ ಉಳಿದಿರುವ ಯೋಜನೆಗಳನ್ನು ವೇಗಗೊಳಿಸಲು ಮತ್ತು ಪ್ರತಿಯೊಬ್ಬ ಫಲಾನುಭವಿಗೆ ಯೋಜನೆಗಳ ಪ್ರಯೋಜನಗಳನ್ನು ಒದಗಿಸಲು ನನ್ನ ಸರ್ಕಾರವು ‘ಪ್ರಗತಿ’ (PRAGATI) ಎಂಬ ಹೊಸ ಉಪಕ್ರಮವನ್ನು ಪ್ರಾರಂಭಿಸಿತು. 2025 ರ ಡಿಸೆಂಬರ್‌ ನಲ್ಲಿ ‘ಪ್ರಗತಿ’ಯ 50ನೇ ಸಭೆಯ ಐತಿಹಾಸಿಕ ಮೈಲಿಗಲ್ಲನ್ನು ಸಾಧಿಸಲಾಯಿತು. ಕಳೆದ ವರ್ಷಗಳಲ್ಲಿ ‘ಪ್ರಗತಿ’ ಸಭೆಗಳು 85 ಲಕ್ಷ ಕೋಟಿ ರೂಪಾಯಿಗಳಿಗೂ ಅಧಿಕ ಮೌಲ್ಯದ ಯೋಜನೆಗಳನ್ನು ವೇಗಗೊಳಿಸಿವೆ ಮತ್ತು ಲಕ್ಷಾಂತರ ಕೋಟಿ ರೂಪಾಯಿಗಳ ಕಲ್ಯಾಣ ಯೋಜನೆಗಳನ್ನು ನೆಲಮಟ್ಟದಲ್ಲಿ ಜಾರಿಗೆ ತರಲು ಸಹಾಯ ಮಾಡಿವೆ. ದೇಶದ ‘ರಿಫಾರ್ಮ್-ಪರ್ಫಾರ್ಮ್-ಟ್ರಾನ್ಸ್‌ಫಾರ್ಮ್’ ಮಂತ್ರದ ಯಶಸ್ಸಿಗೆ ಈ ‘ಪ್ರಗತಿ’ ಸಭೆಗಳು ಬಹಳವಾಗಿ ಸಹಕಾರಿಯಾಗಿವೆ.

ಗೌರವಾನ್ವಿತ ಸದಸ್ಯರೇ,

ಕಳೆದ 11 ವರ್ಷಗಳಲ್ಲಿ ದೇಶದ ಆರ್ಥಿಕ ಅಡಿಪಾಯವು ಗಮನಾರ್ಹವಾಗಿ ಬಲಗೊಂಡಿದೆ. ವಿವಿಧ ಜಾಗತಿಕ ಬಿಕ್ಕಟ್ಟುಗಳ ಹೊರತಾಗಿಯೂ ಭಾರತವು ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕತೆಯಾಗಿ ಉಳಿದಿದೆ. ಹಣದುಬ್ಬರವನ್ನು ಹತೋಟಿಯಲ್ಲಿಡುವಲ್ಲಿ ಭಾರತವು ತನ್ನ ದಾಖಲೆಯನ್ನು ಮತ್ತಷ್ಟು ಸುಧಾರಿಸಿದೆ. ಇದು ದೇಶದ ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳಿಗೆ ನೇರ ಲಾಭ ನೀಡುತ್ತಿದೆ. ನನ್ನ ಸರ್ಕಾರದ ನೀತಿಗಳ ಪರಿಣಾಮವಾಗಿ ನಾಗರಿಕರ ಆದಾಯ ಹೆಚ್ಚಿದೆ, ಅವರ ಉಳಿತಾಯ ಬೆಳೆದಿದೆ ಮತ್ತು ಅವರ ಖರೀದಿ ಸಾಮರ್ಥ್ಯವೂ ಸುಧಾರಿಸಿದೆ. ಐರೋಪ್ಯ ಒಕ್ಕೂಟದೊಂದಿಗೆ ಮುಕ್ತ ವ್ಯಾಪಾರ ಒಪ್ಪಂದದ ಮಾತುಕತೆಗಳು ಮುಕ್ತಾಯಗೊಂಡಿದ್ದಕ್ಕಾಗಿ ನಾನು ಎಲ್ಲಾ ನಾಗರಿಕರನ್ನು ಅಭಿನಂದಿಸುತ್ತೇನೆ. ಇದು ಭಾರತದಲ್ಲಿ ಉತ್ಪಾದನೆ ಮತ್ತು ಸೇವಾ ವಲಯಗಳಿಗೆ ಉತ್ತೇಜನ ನೀಡುತ್ತದೆ ಮತ್ತು ಭಾರತದ ಯುವಜನರಿಗೆ ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ.

ಗೌರವಾನ್ವಿತ ಸದಸ್ಯರೇ,

ಇಂದು ನನ್ನ ಸರ್ಕಾರವು ‘ಸುಧಾರಣೆಗಳ ಎಕ್ಸ್‌ಪ್ರೆಸ್’ ಹಾದಿಯಲ್ಲಿ ಸಾಗುತ್ತಿದೆ. ಹಳೆಯ ನಿಯಮಗಳು ಮತ್ತು ನಿಬಂಧನೆಗಳನ್ನು ಭವಿಷ್ಯದ ಅಗತ್ಯಗಳಿಗೆ ಅನುಗುಣವಾಗಿ ನಿರಂತರವಾಗಿ ನವೀಕರಿಸಲಾಗುತ್ತಿದೆ. ಜಿ ಎಸ್‌ ಟಿ ಯಲ್ಲಿನ ಐತಿಹಾಸಿಕ ಮುಂದಿನ ಪೀಳಿಗೆಯ ಸುಧಾರಣೆಯು ನಾಗರಿಕರಲ್ಲಿ ಹೇಗೆ ಉತ್ಸಾಹ ತುಂಬಿದೆ ಎಂಬುದನ್ನು ಎಲ್ಲರೂ ಗಮನಿಸಿದ್ದಾರೆ. ಈ ಸುಧಾರಣೆಯು ನಾಗರಿಕರಿಗೆ ಒಂದು ಲಕ್ಷ ಕೋಟಿ ರೂಪಾಯಿಗಳ ಉಳಿತಾಯವನ್ನು ಖಚಿತಪಡಿಸಿದೆ. ಜಿ ಎಸ್‌ ಟಿ ಕಡಿತದ ನಂತರ 2025 ರಲ್ಲಿ ದ್ವಿಚಕ್ರ ವಾಹನಗಳ ನೋಂದಣಿ ಎರಡು ಕೋಟಿಯ ಗಡಿಯನ್ನು ದಾಟಿದೆ, ಇದು ಸ್ವತಃ ಒಂದು ಹೊಸ ದಾಖಲೆಯಾಗಿದೆ. ಆದಾಯ ತೆರಿಗೆ ಕಾನೂನನ್ನು ಸಹ ಪರಿಷ್ಕರಿಸಲಾಗಿದೆ. 12 ಲಕ್ಷ ರೂಪಾಯಿಗಳವರೆಗಿನ ಆದಾಯಕ್ಕೆ ತೆರಿಗೆಯಿಂದ ವಿನಾಯಿತಿ ನೀಡುವ ಐತಿಹಾಸಿಕ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಈ ಸುಧಾರಣೆಗಳು ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳಿಗೆ ಅಭೂತಪೂರ್ವ ಪ್ರಯೋಜನಗಳನ್ನು ನೀಡುತ್ತಿವೆ. ಇದು ದೇಶದ ಆರ್ಥಿಕತೆಗೆ ಹೊಸ ವೇಗವನ್ನೂ ನೀಡಿದೆ.

ಗೌರವಾನ್ವಿತ ಸದಸ್ಯರೇ,

ದೇಶದಲ್ಲಿ ಅನೇಕ ಹೊಸ ಕ್ಷೇತ್ರಗಳ ಉದಯದೊಂದಿಗೆ ಕಾರ್ಮಿಕರ ಹಿತಾಸಕ್ತಿಗಳನ್ನು ರಕ್ಷಿಸುವುದು ಅಷ್ಟೇ ಮುಖ್ಯವಾಗಿದೆ. ಹೊಸ ಕಾರ್ಮಿಕ ಕಾಯ್ದೆಗಳ ಅನುಷ್ಠಾನದ ಹಿಂದಿನ ಪ್ರಾಥಮಿಕ ಉದ್ದೇಶವೂ ಇದೇ ಆಗಿದೆ. ದೀರ್ಘಕಾಲದವರೆಗೆ ದೇಶದ ಕಾರ್ಮಿಕ ವರ್ಗವು ಡಜನ್ಗಟ್ಟಲೆ ಕಾರ್ಮಿಕ ಕಾನೂನುಗಳಲ್ಲಿ ಸಿಲುಕಿಕೊಂಡಿತ್ತು. ಇವುಗಳನ್ನು ಈಗ ಕೇವಲ ನಾಲ್ಕು ಸಂಹಿತೆಗಳಾಗಿ ಕ್ರೋಡೀಕರಿಸಲಾಗಿದೆ, ಇದರಿಂದಾಗಿ ಕಾರ್ಮಿಕರಿಗೆ ನ್ಯಾಯಯುತ ವೇತನ, ಭತ್ಯೆಗಳು ಮತ್ತು ಇತರ ಕಲ್ಯಾಣ ಪ್ರಯೋಜನಗಳನ್ನು ಪಡೆಯುವುದು ಸುಲಭವಾಗಿದೆ. ಈ ಸುಧಾರಣೆಗಳಿಂದ ದೇಶದ ಯುವಜನರು ಮತ್ತು ವಿಶೇಷವಾಗಿ ಮಹಿಳೆಯರು ಗಮನಾರ್ಹವಾಗಿ ಪ್ರಯೋಜನ ಪಡೆಯಲಿದ್ದಾರೆ.

ಗೌರವಾನ್ವಿತ ಸದಸ್ಯರೇ,

ಭಾರತವನ್ನು ಹಸಿರು ಬೆಳವಣಿಗೆ ಮತ್ತು ಆಧುನಿಕ ತಂತ್ರಜ್ಞಾನದ ಶಕ್ತಿಕೇಂದ್ರವನ್ನಾಗಿ ಮಾಡಲು ನನ್ನ ಸರ್ಕಾರ ತೊಡಗಿಸಿಕೊಂಡಿದೆ. ವೇಗವಾಗಿ ಬೆಳೆಯುತ್ತಿರುವ ಡಿಜಿಟಲ್ ಆರ್ಥಿಕತೆ, ಕೃತಕ ಬುದ್ಧಿಮತ್ತೆ ಮತ್ತು ಡೇಟಾ ಸೆಂಟರ್‌ ಗಳಲ್ಲಿ ಹೂಡಿಕೆಗಳು ಹೆಚ್ಚುತ್ತಿವೆ. ಈ ಹೊಸ ರೂಪದ ಆರ್ಥಿಕತೆಯು ಹೆಚ್ಚಿನ ಇಂಧನ ಅಗತ್ಯತೆಗಳನ್ನು ಹೊಂದಿದೆ. ಈ ನಿಟ್ಟಿನಲ್ಲಿ ಪರಮಾಣು ಶಕ್ತಿಯು ಪ್ರಮುಖ ಪಾತ್ರ ವಹಿಸುತ್ತದೆ. ಇತ್ತೀಚೆಗೆ ಅಂಗೀಕರಿಸಲಾದ ‘ಶಾಂತಿ’ (SHANTI) ಕಾಯ್ದೆಯು 2047ರ ವೇಳೆಗೆ 100 ಗಿಗಾವ್ಯಾಟ್ ಪರಮಾಣು ಇಂಧನದ ಗುರಿಯನ್ನು ಸಾಧಿಸಲು ಸಹಾಯ ಮಾಡುತ್ತದೆ. ಈ ಐತಿಹಾಸಿಕ ಸುಧಾರಣೆಗಾಗಿ ನಾನು ನಿಮ್ಮೆಲ್ಲರನ್ನು ಅಭಿನಂದಿಸುತ್ತೇನೆ. ಪರಮಾಣು ಇಂಧನದ ಹೊರತಾಗಿ ಭಾರತವು ಸೌರಶಕ್ತಿ ಕ್ಷೇತ್ರದಲ್ಲಿ ವೇಗವಾಗಿ ಮುನ್ನಡೆಯುತ್ತಿದೆ. ‘ಪಿಎಂ ಸೂರ್ಯ ಘರ್ ಮುಫ್ತ್ ಬಿಜ್ಲಿ’ ಯೋಜನೆಯ ಮೂಲಕ ಸಾಮಾನ್ಯ ಗ್ರಾಹಕರು ಈಗ ವಿದ್ಯುತ್ ಉತ್ಪಾದಕರಾಗುತ್ತಿದ್ದಾರೆ. ಇದುವರೆಗೆ ಸುಮಾರು 20 ಲಕ್ಷ ಮೇಲ್ಛಾವಣಿ ಸೌರ ವ್ಯವಸ್ಥೆಗಳನ್ನು ಅಳವಡಿಸಲಾಗಿದೆ. ಇದರ ಪರಿಣಾಮವಾಗಿ ವಿದ್ಯುತ್ ಉತ್ಪಾದನೆ ಹೆಚ್ಚಿದೆ ಮತ್ತು ಲಕ್ಷಾಂತರ ಮನೆಗಳ ವಿದ್ಯುತ್ ಬಿಲ್ ಕಡಿಮೆಯಾಗಿದೆ. ಈ ಎಲ್ಲಾ ಪ್ರಯತ್ನಗಳೊಂದಿಗೆ ಭಾರತವು ಈ ದಶಕದ ಅಂತ್ಯದ ವೇಳೆಗೆ 500 ಗಿಗಾವ್ಯಾಟ್ ನವೀಕರಿಸಬಹುದಾದ ಇಂಧನ ಸಾಮರ್ಥ್ಯದ ಗುರಿಯನ್ನು ಖಂಡಿತವಾಗಿಯೂ ಸಾಧಿಸಲಿದೆ.

ಗೌರವಾನ್ವಿತ ಸದಸ್ಯರೇ,

ಯಾವುದೇ ನ್ಯಾಯ ವ್ಯವಸ್ಥೆಯ ನಿಜವಾದ ಯಶಸ್ಸು ನಾಗರಿಕರಲ್ಲಿ ಭಯಕ್ಕಿಂತ ಹೆಚ್ಚಾಗಿ ಭದ್ರತೆ, ಸುಲಭತೆ ಮತ್ತು ಸಬಲೀಕರಣದ ಭಾವನೆಯನ್ನು ಮೂಡಿಸುವ ಸಾಮರ್ಥ್ಯದಲ್ಲಿದೆ. ಈ ತತ್ವವನ್ನು ಗಮನದಲ್ಲಿಟ್ಟುಕೊಂಡು ‘ಭಾರತೀಯ ನ್ಯಾಯ ಸಂಹಿತೆ’ಯನ್ನು ತ್ವರಿತವಾಗಿ ಜಾರಿಗೆ ತರಲಾಗುತ್ತಿದೆ. ಇದರೊಂದಿಗೆ ‘ಜನ-ವಿಶ್ವಾಸ್’ ಕಾಯ್ದೆಯ ಹೊಸ ಆವೃತ್ತಿಯನ್ನು ಪರಿಚಯಿಸಲಾಗಿದೆ. ಇಲ್ಲಿಯವರೆಗೆ 300 ಕ್ಕೂ ಹೆಚ್ಚು ನಿಬಂಧನೆಗಳನ್ನು ಅಪರಾಧಗಳ ವರ್ಗದಿಂದ ತೆಗೆದುಹಾಕಲಾಗಿದೆ. ವಿಕಸಿತ ಭಾರತದ ದೃಷ್ಟಿಕೋನವನ್ನು ಪೂರೈಸಲು ನನ್ನ ಸರ್ಕಾರವು ಈ ‘ಸುಧಾರಣಾ ಎಕ್ಸ್‌ಪ್ರೆಸ್’ನ ವೇಗವನ್ನು ಮುಂದುವರಿಸಲಿದೆ.

ಗೌರವಾನ್ವಿತ ಸದಸ್ಯರೇ,

ಸ್ವಾತಂತ್ರ್ಯದ ನಂತರ ಭಾರತದ ಪ್ರಗತಿಯು ಕೆಲವು ನಗರಗಳು ಮತ್ತು ಪ್ರದೇಶಗಳಿಂದ ವೇಗವನ್ನು ಪಡೆಯಿತು. ಭಾರತದ ದೊಡ್ಡ ಭಾಗ ಮತ್ತು ಜನಸಂಖ್ಯೆಯ ಗಮನಾರ್ಹ ಭಾಗಕ್ಕೆ ಸಾಕಷ್ಟು ಅವಕಾಶಗಳು ಸಿಗಲಿಲ್ಲ. ಇಂದು ನನ್ನ ಸರ್ಕಾರವು ಹಿಂದುಳಿದ ಪ್ರದೇಶಗಳ ಮತ್ತು ಅಂಚಿನಲ್ಲಿರುವ ಜನಸಂಖ್ಯೆಯ ಸಾಮರ್ಥ್ಯವನ್ನು ವಿಕಸಿತ ಭಾರತದ ಚಾಲನಾ ಶಕ್ತಿಯನ್ನಾಗಿ ಪರಿವರ್ತಿಸುತ್ತಿದೆ. ‘ಪೂರ್ವೋದಯ’ಕ್ಕೆ ಅಂದರೆ ಪೂರ್ವ ಭಾರತದ ಕ್ಷಿಪ್ರ ಅಭಿವೃದ್ಧಿಗೆ ಈಗ ವಿಶೇಷ ಒತ್ತು ನೀಡಲಾಗುತ್ತಿದೆ. ಇಂದು ಪಶ್ಚಿಮ ಬಂಗಾಳ ಮತ್ತು ಒಡಿಶಾದ ಕರಾವಳಿ ಪ್ರದೇಶಗಳಲ್ಲಿ ಪ್ರಗತಿಯ ಹೊಸ ದಾರಿಗಳು ಕಾಣಿಸಿಕೊಳ್ಳುತ್ತಿವೆ. ಈಗ ಈಶಾನ್ಯ ಪ್ರದೇಶವು ಅಭಿವೃದ್ಧಿಯ ಮುಖ್ಯವಾಹಿನಿಯೊಂದಿಗೆ ಬೆರೆಯುತ್ತಿದೆ. ಈಶಾನ್ಯ ಭಾಗದ ಅಸ್ಸಾಂ ಶ್ರೀಮಂತ ಶಂಕರದೇವ ಅವರಂತಹ ಮಹಾನ್ ಪುರುಷರ ನಾಡು. ಶೀಘ್ರದಲ್ಲೇ ಅಸ್ಸಾಂನಲ್ಲಿ ತಯಾರಾದ ಸೆಮಿಕಂಡಕ್ಟರ್ ಚಿಪ್ ವಿಶ್ವಾದ್ಯಂತ ಎಲೆಕ್ಟ್ರಾನಿಕ್ ಉತ್ಪನ್ನಗಳ ಜೀವನಾಡಿಯಾಗಲಿದೆ. ಈ ಪ್ರದೇಶದಲ್ಲಿ ಸಂಪರ್ಕವನ್ನು ಸುಧಾರಿಸಲು ಅಭೂತಪೂರ್ವ ಗಮನ ನೀಡಲಾಗುತ್ತಿದೆ.

ಗೌರವಾನ್ವಿತ ಸದಸ್ಯರೇ,

ಕಳೆದ 11 ವರ್ಷಗಳಲ್ಲಿ ಈಶಾನ್ಯ ಪ್ರದೇಶದಲ್ಲಿ 7,200 ಕಿಲೋಮೀಟರ್‌ ಗಿಂತಲೂ ಹೆಚ್ಚು ರಾಷ್ಟ್ರೀಯ ಹೆದ್ದಾರಿಗಳನ್ನು ನಿರ್ಮಿಸಲಾಗಿದೆ. ಇದು ದೂರದ ಗುಡ್ಡಗಾಡು, ಬುಡಕಟ್ಟು ಮತ್ತು ಗಡಿ ಪ್ರದೇಶಗಳನ್ನು ತಲುಪುವುದನ್ನು ಸುಲಭಗೊಳಿಸಿದೆ. ಹೆಚ್ಚುವರಿಯಾಗಿ ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯಡಿ ಸುಮಾರು 50 ಸಾವಿರ ಕಿಲೋಮೀಟರ್ ಗ್ರಾಮೀಣ ರಸ್ತೆಗಳನ್ನು ನಿರ್ಮಿಸಲಾಗಿದೆ. ಇದು ಮಾರುಕಟ್ಟೆಗಳು, ಆಸ್ಪತ್ರೆಗಳು ಮತ್ತು ಶಾಲೆಗಳಿಗೆ ಪ್ರವೇಶವನ್ನು ಸುಧಾರಿಸಿದೆ. ಕಳೆದ 11 ವರ್ಷಗಳಲ್ಲಿ ಈಶಾನ್ಯ ಪ್ರದೇಶದಲ್ಲಿ ರೈಲ್ವೆ ಅಭಿವೃದ್ಧಿಗಾಗಿ 80 ಸಾವಿರ ಕೋಟಿ ರೂಪಾಯಿಗಳಿಗಿಂತ ಹೆಚ್ಚು ಹೂಡಿಕೆ ಮಾಡಲಾಗಿದೆ. ಅರುಣಾಚಲ ಪ್ರದೇಶ, ತ್ರಿಪುರಾ ಮತ್ತು ಮಿಜೋರಾಂನ ರಾಜಧಾನಿಗಳು ಈಗ ಬ್ರಾಡ್-ಗೇಜ್ ರೈಲು ಮಾರ್ಗಗಳ ಮೂಲಕ ಸಂಪರ್ಕ ಹೊಂದಿವೆ. ಇದು ಈ ಪ್ರದೇಶಗಳಲ್ಲಿ ಆರ್ಥಿಕ ಪ್ರಗತಿ, ಉದ್ಯೋಗ ಮತ್ತು ಪ್ರವಾಸೋದ್ಯಮಕ್ಕೆ ಹೊಸ ಅವಕಾಶಗಳನ್ನು ತೆರೆದಿದೆ. ಈ ದಶಕವು ಈಶಾನ್ಯದಲ್ಲಿ ಆರೋಗ್ಯ ಸೌಲಭ್ಯಗಳನ್ನು ಖಚಿತಪಡಿಸುವ ಉಪಕ್ರಮಗಳ ದಶಕವೂ ಆಗಿದೆ. ಇಟಾನಗರದಲ್ಲಿ ರಾಜ್ಯ ಕ್ಯಾನ್ಸರ್ ಸಂಸ್ಥೆ ಮತ್ತು ಅಸ್ಸಾಂನ ಶಿವಸಾಗರದಲ್ಲಿ ವೈದ್ಯಕೀಯ ಕಾಲೇಜು ಸ್ಥಾಪನೆಯು ಕೋಟ್ಯಂತರ ಕುಟುಂಬಗಳಿಗೆ ಚಿಕಿತ್ಸೆ ನೀಡಲು ಸಹಾಯ ಮಾಡುತ್ತದೆ. ಹಾಗೆಯೇ ಸಿಕ್ಕಿಂನ ಸಿಚೆಯಲ್ಲಿ ವೈದ್ಯಕೀಯ ಕಾಲೇಜು ಮತ್ತು ಅಗರ್ತಲಾದಲ್ಲಿ ಮಹಿಳೆಯರು ಮತ್ತು ಮಕ್ಕಳಿಗಾಗಿ ಆಸ್ಪತ್ರೆಯ ಸ್ಥಾಪನೆಯು ಆರೋಗ್ಯ ಸೌಲಭ್ಯಗಳನ್ನು ಹೆಚ್ಚಿಸಲಿದೆ. ಇಂತಹ ಪ್ರಯತ್ನಗಳು ಈಶಾನ್ಯ ಪ್ರದೇಶದಲ್ಲಿ ಬಲವಾದ ಆರೋಗ್ಯ ಮೂಲಸೌಕರ್ಯವನ್ನು ಸೃಷ್ಟಿಸುತ್ತಿವೆ.

ಗೌರವಾನ್ವಿತ ಸದಸ್ಯರೇ,

ಯಾರು ಹಿಂದೆ ಉಳಿದಿದ್ದಾರೋ ಅವರು ನನ್ನ ಸರ್ಕಾರಕ್ಕೆ ಆದ್ಯತೆಯಾಗಿದ್ದಾರೆ. 'ಪಿಎಂ ಜನಮನ್' ಯೋಜನೆಯು ಈ ಆದ್ಯತೆಯ ಮೇಲೆಯೇ ಕಾರ್ಯನಿರ್ವಹಿಸುತ್ತಿದೆ. ಈ ಯೋಜನೆಯಡಿ ಬುಡಕಟ್ಟುಗಳ ಅತ್ಯಂತ ವಂಚಿತ ಸಮುದಾಯಗಳ 20 ಸಾವಿರಕ್ಕೂ ಹೆಚ್ಚು ಗ್ರಾಮಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಈ ಗ್ರಾಮಗಳಲ್ಲಿ ಬಡವರಿಗಾಗಿ ಸುಮಾರು 2.5 ಲಕ್ಷ ಮನೆಗಳನ್ನು ಈ ಯೋಜನೆಯ ಮೂಲಕ ನಿರ್ಮಿಸಲಾಗಿದೆ. 'ಧರ್ತಿ ಆಬಾ ಜನಜಾತೀಯ ಗ್ರಾಮ ಉತ್ಕರ್ಷ ಅಭಿಯಾನ'ವು ಬುಡಕಟ್ಟು ಪ್ರದೇಶಗಳಲ್ಲಿ ಅಭೂತಪೂರ್ವ ವೇಗದಲ್ಲಿ ಅಭಿವೃದ್ಧಿಯನ್ನು ಉತ್ತೇಜಿಸುತ್ತಿದೆ. ಈ ಎರಡು ಕಾರ್ಯಕ್ರಮಗಳ ಮೇಲೆ ನನ್ನ ಸರ್ಕಾರವು ಒಂದು ಲಕ್ಷ ಕೋಟಿ ರೂಪಾಯಿಗಳಿಗಿಂತ ಹೆಚ್ಚು ವ್ಯಯಿಸುತ್ತಿದೆ. ಕಳೆದ 11 ವರ್ಷಗಳಲ್ಲಿ ಪರಿಶಿಷ್ಟ ಜಾತಿ ಸಮುದಾಯದ ಲಕ್ಷಾಂತರ ವಿದ್ಯಾರ್ಥಿಗಳಿಗೆ 42 ಸಾವಿರ ಕೋಟಿ ರೂಪಾಯಿಗಳಿಗಿಂತ ಹೆಚ್ಚು ಮೆಟ್ರಿಕ್ ನಂತರದ ವಿದ್ಯಾರ್ಥಿವೇತನವನ್ನು ನೀಡಲಾಗಿದೆ. ಇದರಿಂದ ಸುಮಾರು ಐದು ಕೋಟಿ ವಿದ್ಯಾರ್ಥಿಗಳಿಗೆ ಪ್ರಯೋಜನವಾಗಿದೆ. ಸರ್ಕಾರವು ಬುಡಕಟ್ಟು ಪ್ರದೇಶಗಳಲ್ಲಿ 400ಕ್ಕೂ ಹೆಚ್ಚು ಏಕಲವ್ಯ ಮಾದರಿ ವಸತಿ ಶಾಲೆಗಳನ್ನು ಸ್ಥಾಪಿಸಿದೆ. ಇವು ಬುಡಕಟ್ಟು ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಮತ್ತು ಉತ್ತಮ ಭವಿಷ್ಯವನ್ನು ಒದಗಿಸುತ್ತಿವೆ.

ಗೌರವಾನ್ವಿತ ಸದಸ್ಯರೇ,

ಸಂತ ತಿರುವಳ್ಳುವರ್ ಅವರು ಕೃಷಿಯ ಮಹತ್ವವನ್ನು ವಿವರಿಸುತ್ತಾ ಹೀಗೆ ಹೇಳಿದ್ದಾರೆ - ಸಮಾಜದಲ್ಲಿ ವ್ಯಕ್ತಿಗಳು ಯಾವುದೇ ವೃತ್ತಿಯನ್ನು ಮಾಡುತ್ತಿದ್ದರೂ ಪ್ರತಿಯೊಬ್ಬರ ಜೀವನವೂ ಕಷ್ಟಪಟ್ಟು ದುಡಿಯುವ ರೈತನ ಶ್ರಮದ ಮೇಲೆ ಅವಲಂಬಿತವಾಗಿದೆ. ಇದನ್ನು ಗಮನದಲ್ಲಿಟ್ಟುಕೊಂಡಿರುವ ನನ್ನ ಸರ್ಕಾರಕ್ಕೆ ವಿಕಸಿತ ಭಾರತಕ್ಕಾಗಿ ಸಮೃದ್ಧ ರೈತನೇ ಮೊದಲ ಆದ್ಯತೆಯಾಗಿದ್ದಾನೆ. ಇದೇ ಮನೋಭಾವದಿಂದ ಸರ್ಕಾರವು ‘ಪಿಎಂ ಕಿಸಾನ್ ಸಮ್ಮಾನ್ ನಿಧಿ’ಯಂತಹ ಯೋಜನೆಯನ್ನು ಪ್ರಾರಂಭಿಸಿತು. ಈ ಯೋಜನೆಯಡಿ ಇದುವರೆಗೆ 4 ಲಕ್ಷ ಕೋಟಿ ರೂಪಾಯಿಗಳಿಗಿಂತ ಹೆಚ್ಚಿನ ಮೊತ್ತವನ್ನು ನೇರವಾಗಿ ರೈತರ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಲಾಗಿದೆ. ನನ್ನ ಸರ್ಕಾರದ ಸದೃಢ ನೀತಿಗಳು ಮತ್ತು ಉಪಕ್ರಮಗಳು ದೇಶದಲ್ಲಿ ಕೃಷಿ ಉತ್ಪಾದನೆಯ ಕ್ಷಿಪ್ರ ಹೆಚ್ಚಳಕ್ಕೆ ಕಾರಣವಾಗಿವೆ. 2024-25 ರಲ್ಲಿ ಆಹಾರ ಧಾನ್ಯಗಳು ಮತ್ತು ತೋಟಗಾರಿಕಾ ಬೆಳೆಗಳ ದಾಖಲೆ ಉತ್ಪಾದನೆಯಾಗಿದೆ. ನಮ್ಮ ಕೃಷಿ ಕ್ಷೇತ್ರವು ಯಾವ ಬೆಳೆಗಳಲ್ಲಿ ಹಿಂದೆ ಬಿದ್ದಿದೆಯೋ ಆ ಬೆಳೆಗಳ ಉತ್ಪಾದನೆಯನ್ನು ಹೆಚ್ಚಿಸಲು ನನ್ನ ಸರ್ಕಾರವು ಶ್ರಮಿಸುತ್ತಿದೆ. ಕೃಷಿ ಉತ್ಪನ್ನಗಳ ಆಮದನ್ನು ಕಡಿಮೆ ಮಾಡುವುದು ಸರ್ಕಾರದ ಉದ್ದೇಶವಾಗಿದೆ. ಖಾದ್ಯ ತೈಲಗಳು, ಎಣ್ಣೆಕಾಳುಗಳು ಮತ್ತು ಬೇಳೆಕಾಳುಗಳ ಮೇಲಿನ ರಾಷ್ಟ್ರೀಯ ಮಿಷನ್‌ ಗಳ ಮೂಲಕ ರಾಷ್ಟ್ರವು ಈ ಕ್ಷೇತ್ರಗಳಲ್ಲಿ ಸ್ವಾವಲಂಬನೆಯತ್ತ ಸಾಗುತ್ತಿದೆ. ಇದರ ಪರಿಣಾಮವಾಗಿ 2024-25 ರಲ್ಲಿ ಎಣ್ಣೆಕಾಳು ಬೆಳೆಗಳ ಉತ್ಪಾದನೆಯೂ ಹೆಚ್ಚಿದೆ. ರೈತರಿಗೆ ಹೆಚ್ಚಿನ ಆದಾಯವನ್ನು ಒದಗಿಸಲು ನನ್ನ ಸರ್ಕಾರವು ಸಿರಿಧಾನ್ಯಗಳು ಅಥವಾ 'ಶ್ರೀ-ಅನ್ನ'ವನ್ನು ಜಾಗತಿಕವಾಗಿ ಪ್ರೋತ್ಸಾಹಿಸುವುದನ್ನು ಮುಂದುವರಿಸಿದೆ.

ಗೌರವಾನ್ವಿತ ಸದಸ್ಯರೇ,

ಇಂದು ಆಹಾರ ಧಾನ್ಯ ಉತ್ಪಾದನೆಯ ಜೊತೆಗೆ ರೈತರನ್ನು ಜಾನುವಾರು ಸಾಕಣೆ, ಮೀನುಗಾರಿಕೆ ಮತ್ತು ಜೇನು ಸಾಕಣೆಯಂತಹ ಆರ್ಥಿಕ ಪ್ರಗತಿಯ ಹೊಸ ಮಾರ್ಗಗಳಿಗೆ ಸಂಪರ್ಕಿಸಲಾಗುತ್ತಿದೆ. ಕರಾವಳಿಯಲ್ಲಿ ವಾಸಿಸುವ ಮೀನುಗಾರರಿಗೆ 'ವಿಶೇಷ ಆರ್ಥಿಕ ವಲಯ'ದ ಪ್ರಯೋಜನಗಳನ್ನು ಒದಗಿಸಲು ಹೊಸ ನೀತಿಯನ್ನು ರೂಪಿಸಲಾಗಿದೆ. ಇದಲ್ಲದೆ ಆಳ ಸಮುದ್ರದ ಸಂಪನ್ಮೂಲಗಳನ್ನು ಬಳಸಿಕೊಳ್ಳಲು ಅವರಿಗೆ ಅನುವು ಮಾಡಿಕೊಡುವ ಹೊಸ ನೀತಿಯನ್ನು ಸಹ ರೂಪಿಸಲಾಗಿದೆ. 2024-25 ರಲ್ಲಿ ದೇಶದ ಮೀನು ಉತ್ಪಾದನೆಯು ಸುಮಾರು 200 ಲಕ್ಷ ಟನ್‌ ಗಳಿಗೆ ಏರಿದೆ. ಇದು 2014 ಕ್ಕೆ ಹೋಲಿಸಿದರೆ ಶೇಕಡಾ 105 ರಷ್ಟು ಹೆಚ್ಚಳವನ್ನು ಪ್ರತಿಬಿಂಬಿಸುತ್ತದೆ.

ಗೌರವಾನ್ವಿತ ಸದಸ್ಯರೇ,

ಕೃಷಿ ವಲಯವನ್ನು ಆಧುನೀಕರಿಸಲು ಮತ್ತು ಉತ್ತಮ ಲಾಜಿಸ್ಟಿಕ್ಸ್ ಸೌಲಭ್ಯಗಳನ್ನು ಸ್ಥಾಪಿಸಲು ನನ್ನ ಸರ್ಕಾರವು ‘ಕೃಷಿ ಮೂಲಸೌಕರ್ಯ ನಿಧಿ’ಯನ್ನು ಸೃಷ್ಟಿಸಿದೆ. ಈ ಉಪಕ್ರಮವು ಇಲ್ಲಿಯವರೆಗೆ 1.25 ಲಕ್ಷ ಕೋಟಿ ರೂಪಾಯಿಗಳಿಗೂ ಹೆಚ್ಚಿನ ಖಾಸಗಿ ಹೂಡಿಕೆಯನ್ನು ಆಕರ್ಷಿಸಿದೆ ಎಂದು ನಿಮ್ಮೊಂದಿಗೆ ಹಂಚಿಕೊಳ್ಳಲು ನನಗೆ ಸಂತೋಷವಾಗಿದೆ. ಇದು ಯುವಜನರಿಗೆ ಲಕ್ಷಾಂತರ ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸಿದೆ. ನನ್ನ ಸರ್ಕಾರದ ದೂರದೃಷ್ಟಿಯಿಂದಾಗಿ ದೇಶದ ಆಹಾರ ಸಂಸ್ಕರಣಾ ಸಾಮರ್ಥ್ಯವು ಇಪ್ಪತ್ತು ಪಟ್ಟು ಹೆಚ್ಚಿದೆ, ಇದು ರೈತರು ತಮ್ಮ ಬೆಳೆಗಳಿಗೆ ಉತ್ತಮ ಬೆಲೆ ಪಡೆಯಲು ಅನುವು ಮಾಡಿಕೊಡುತ್ತಿದೆ.

ಗೌರವಾನ್ವಿತ ಸದಸ್ಯರೇ,

ಗ್ರಾಮೀಣ ಪ್ರದೇಶಗಳಲ್ಲಿ ಉದ್ಯೋಗ ಮತ್ತು ಅಭಿವೃದ್ಧಿಗಾಗಿ ‘ವಿಕಸಿತ ಭಾರತ - ಜಿ ರಾಮ್ ಜಿ’ ಎಂಬ ಕಾಯ್ದೆಯನ್ನು ಜಾರಿಗೊಳಿಸಲಾಗಿದೆ. ಈ ಹೊಸ ಕಾನೂನು ಹಳ್ಳಿಗಳಲ್ಲಿ 125 ದಿನಗಳ ಉದ್ಯೋಗ ಖಾತರಿಯನ್ನು ಖಚಿತಪಡಿಸುತ್ತದೆ. ಅದೇ ಸಮಯದಲ್ಲಿ ಇದು ಭ್ರಷ್ಟಾಚಾರ ಮತ್ತು ಸೋರಿಕೆಗಳನ್ನು ತಡೆಯುವುದನ್ನು ಖಚಿತಪಡಿಸುತ್ತದೆ, ಇದಕ್ಕಾಗಿ ನನ್ನ ಸರ್ಕಾರವು ದೀರ್ಘಕಾಲದಿಂದ ಪ್ರಯತ್ನಿಸುತ್ತಿದೆ. ಈ ಯೋಜನೆಯು ಗ್ರಾಮೀಣ ಅಭಿವೃದ್ಧಿಗೆ ಹೊಸ ವೇಗವನ್ನು ನೀಡುತ್ತದೆ ಮತ್ತು ರೈತರು, ಪಶುಪಾಲಕರು ಮತ್ತು ಮೀನುಗಾರರಿಗೆ ಹೊಸ ಸೌಲಭ್ಯಗಳನ್ನು ಸೃಷ್ಟಿಸುತ್ತದೆ.

ಗೌರವಾನ್ವಿತ ಸದಸ್ಯರೇ,

ನನ್ನ ಸರ್ಕಾರವು ಕೃಷಿ ಮತ್ತು ಪಶುಸಂಗೋಪನೆಯಂತಹ ಕ್ಷೇತ್ರಗಳಲ್ಲಿ ಸಹಕಾರಿ ಚಳವಳಿಯನ್ನು ಬಲಪಡಿಸುತ್ತಿದೆ. ಇಂದು ತ್ರಿಭುವನ್ ಸಹಕಾರಿ ವಿಶ್ವವಿದ್ಯಾಲಯದ ಮೂಲಕ ಸಹಕಾರ ಸಂಘಗಳೊಂದಿಗೆ ಸಂಬಂಧ ಹೊಂದಿರುವ ವ್ಯಕ್ತಿಗಳಿಗೆ ಕಲಿಯಲು ಮತ್ತು ಮುಂದೆ ಸಾಗಲು ಅವಕಾಶಗಳು ಸಿಗುತ್ತಿವೆ. ಇದರ ಜೊತೆಗೆ 10 ಸಾವಿರಕ್ಕೂ ಹೆಚ್ಚು ಎಫ್‌ ಪಿ ಒ ಗಳ ಮೂಲಕ ಕೃಷಿ ಕ್ಷೇತ್ರವನ್ನು ಸಬಲಗೊಳಿಸಲಾಗುತ್ತಿದೆ.

ಗೌರವಾನ್ವಿತ ಸದಸ್ಯರೇ,

ಎಲ್ಲಾ ನಾಗರಿಕರಿಗೆ ಪ್ರಗತಿಯ ಸಮಾನ ಅವಕಾಶಗಳನ್ನು ನೀಡುವ ಮೂಲಕ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ ಎಂದು ನನ್ನ ಸರ್ಕಾರವು ದೃಢವಾಗಿ ನಂಬುತ್ತದೆ. ಆದ್ದರಿಂದ ರಾಷ್ಟ್ರವು ಇಂದು ‘ಮಹಿಳಾ ನೇತೃತ್ವದ ಅಭಿವೃದ್ಧಿ’ ಮಂತ್ರದೊಂದಿಗೆ ಮುನ್ನಡೆಯುತ್ತಿದೆ. ನನ್ನ ಸರ್ಕಾರವು ಮಹಿಳೆಯರಿಗಾಗಿ ಮೀಸಲಾದ ವಿಶೇಷ ಯೋಜನೆಗಳನ್ನು ಪ್ರಾರಂಭಿಸಿದೆ. ಇತರ ಯೋಜನೆಗಳಲ್ಲೂ ಮಹಿಳೆಯರನ್ನು ಕೇಂದ್ರಬಿಂದುವಾಗಿ ಇರಿಸಲಾಗಿದೆ. ಪ್ರಧಾನ ಮಂತ್ರಿ ಆವಾಸ್ ಯೋಜನೆಯಿಂದ ಜಲಜೀವನ್ ಮಿಷನ್ ವರೆಗೆ ಮಹಿಳಾ ಫಲಾನುಭವಿಗಳಿಗೆ ಪ್ರತಿಯೊಂದು ಯೋಜನೆಯಲ್ಲೂ ಹೆಚ್ಚಿನ ಆದ್ಯತೆ ನೀಡಲಾಗಿದೆ. ರಾಷ್ಟ್ರೀಯ ಅಭಿವೃದ್ಧಿಯಲ್ಲಿ ಮಹಿಳೆಯರ ಭಾಗವಹಿಸುವಿಕೆಯನ್ನು ಹೆಚ್ಚಿಸಲು ನನ್ನ ಸರ್ಕಾರವು 10 ಕೋಟಿ ಮಹಿಳೆಯರನ್ನು ಸ್ವಸಹಾಯ ಸಂಘಗಳೊಂದಿಗೆ ಸಂಪರ್ಕಿಸಿದೆ. ಇಂದು ದೇಶದಲ್ಲಿ ‘ಲಕ್ಷಾಧಿಪತಿ ದೀದಿ’ಯರ ಸಂಖ್ಯೆ ಎರಡು ಕೋಟಿಗೂ ಹೆಚ್ಚಿದೆ. ಕಳೆದ ವರ್ಷವೊಂದರಲ್ಲೇ 60 ಲಕ್ಷಕ್ಕೂ ಹೆಚ್ಚು ಮಹಿಳೆಯರು ಲಕ್ಷಾಧಿಪತಿ ದೀದಿಯರಾಗಿದ್ದಾರೆ. ಸರ್ಕಾರವು ಶೀಘ್ರದಲ್ಲೇ ಮೂರು ಕೋಟಿ ಮಹಿಳೆಯರನ್ನು ಲಕ್ಷಾಧಿಪತಿ ದೀದಿಯರನ್ನಾಗಿ ಸಬಲೀಕರಣಗೊಳಿಸುವ ಗುರಿಯನ್ನು ಸಾಧಿಸಲಿದೆ.

ಗೌರವಾನ್ವಿತ ಸದಸ್ಯರೇ,

ದೇಶದ ದೂರದ ಪ್ರದೇಶಗಳಲ್ಲಿ ‘ನಮೋ ಡ್ರೋನ್ ದೀದಿ’ ಉಪಕ್ರಮವು ಮಹಿಳಾ ಸಬಲೀಕರಣದ ಸಂಕೇತವಾಗಿ ಹೊರಹೊಮ್ಮಿದೆ. ಈ ತರಬೇತಿ ಪಡೆದ ಡ್ರೋನ್ ದೀದಿಯರು ಈಗ ಆಧುನಿಕ ತಂತ್ರಜ್ಞಾನವನ್ನು ಬಳಸಿ ಕೃಷಿ ಕ್ಷೇತ್ರವನ್ನು ಬದಲಾಯಿಸುತ್ತಿದ್ದಾರೆ. ಮಹಿಳೆಯರ ಆರ್ಥಿಕ ಪ್ರಗತಿಯ ಜೊತೆಗೆ ನನ್ನ ಸರ್ಕಾರವು ಅವರ ಪೌಷ್ಟಿಕಾಂಶ, ಆರೋಗ್ಯ ಮತ್ತು ಶಿಕ್ಷಣದಂತಹ ಎಲ್ಲಾ ಕ್ಷೇತ್ರಗಳ ಮೇಲೆ ಗಮನ ಕೇಂದ್ರೀಕರಿಸುತ್ತಿದೆ. 2025 ರ ಸೆಪ್ಟೆಂಬರ್‌ ನಲ್ಲಿ ಪ್ರಾರಂಭಿಸಲಾದ ‘ಸ್ವಸ್ಥ ನಾರಿ, ಸಶಕ್ತ ಪರಿವಾರ್’ ಅಭಿಯಾನದ ಅಡಿಯಲ್ಲಿ ಸುಮಾರು ಏಳು ಕೋಟಿ ಮಹಿಳೆಯರ ಆರೋಗ್ಯ ತಪಾಸಣೆ ನಡೆಸಲಾಗಿದೆ. ಈ ಅಭಿಯಾನವು ಮಹಿಳೆಯರಿಗೆ ತಮ್ಮ ಚಿಕಿತ್ಸೆಯನ್ನು ಮೊದಲೇ ಪ್ರಾರಂಭಿಸಲು ಸಹಾಯ ಮಾಡಿದೆ.

ಗೌರವಾನ್ವಿತ ಸದಸ್ಯರೇ,

ನನ್ನ ಸರ್ಕಾರದ ಪ್ರಗತಿಪರ ದೃಷ್ಟಿಕೋನ ಮತ್ತು ನೀತಿಗಳ ಪರಿಣಾಮವಾಗಿ ಮಹಿಳೆಯರು ದೇಶದ ಪ್ರತಿಯೊಂದು ಮಹತ್ವಾಕಾಂಕ್ಷಿ ಕ್ಷೇತ್ರಗಳಲ್ಲಿ ವೇಗವಾಗಿ ಮುನ್ನಡೆದಿದ್ದಾರೆ. ಇದೇ ದಿಕ್ಕಿನಲ್ಲಿ ರಾಷ್ಟ್ರವು ಕೆಲವು ತಿಂಗಳ ಹಿಂದಷ್ಟೇ ಮತ್ತೊಂದು ಮಹತ್ವದ ಮೈಲಿಗಲ್ಲನ್ನು ಸಾಧಿಸಿದೆ. ಮಹಿಳಾ ಕೆಡೆಟ್‌ ಗಳ ಮೊದಲ ತಂಡ ರಾಷ್ಟ್ರೀಯ ರಕ್ಷಣಾ ಅಕಾಡೆಮಿಯಿಂದ ಪದವಿ ಪಡೆದಿದೆ. ಇದು ನಾರಿ ಶಕ್ತಿಯು ದೇಶದ ಅಭಿವೃದ್ಧಿ ಮತ್ತು ಸಬಲೀಕರಣದ ಮುಂಚೂಣಿಯಲ್ಲಿದೆ ಎಂಬ ನಂಬಿಕೆಯನ್ನು ಬಲಪಡಿಸಿದೆ.

ಗೌರವಾನ್ವಿತ ಸದಸ್ಯರೇ,

ಶ್ರೀ ಗುರು ತೇಜ್ ಬಹದ್ದೂರ್ ಜೀ - “ಭಯ್ ಕಹು ಕೋ ದೇತ್ ನೈ, ನೈ ಭಯ್ ಮನತ್ ಆನ್” – ಎಂದು ನಮಗೆ ಕಲಿಸಿದ್ದಾರೆ. ಅಂದರೆ ನಾವು ಇತರರಲ್ಲಿ ಭಯ ಹುಟ್ಟಿಸಬಾರದು ಅಥವಾ ಇತರರ ಭಯದಲ್ಲಿ ಬದುಕಬಾರದು. ಈ ನಿರ್ಭಯತೆಯ ಮನೋಭಾವದಿಂದ ಮಾತ್ರ ದೇಶದ ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ಸಾಧ್ಯ. ಅಧಿಕಾರವನ್ನು ಜವಾಬ್ದಾರಿ ಮತ್ತು ವಿವೇಕದಿಂದ ಬಳಸಬಹುದು ಎಂದು ಭಾರತ ಸಾಬೀತುಪಡಿಸಿದೆ. ‘ಆಪರೇಷನ್ ಸಿಂಧೂರ’ ಸಂದರ್ಭದಲ್ಲಿ ಜಗತ್ತು ಭಾರತೀಯ ರಕ್ಷಣಾ ಪಡೆಗಳ ಶೌರ್ಯ ಮತ್ತು ಪರಾಕ್ರಮವನ್ನು ಕಂಡಿದೆ. ತನ್ನದೇ ಆದ ಸಂಪನ್ಮೂಲಗಳನ್ನು ಬಳಸಿಕೊಂಡು ನಮ್ಮ ದೇಶವು ಭಯೋತ್ಪಾದಕರ ನೆಲೆಗಳನ್ನು ಧ್ವಂಸಗೊಳಿಸಿದೆ. ಭಾರತದ ಮೇಲೆ ಯಾವುದೇ ಭಯೋತ್ಪಾದಕ ದಾಳಿ ನಡೆದರೆ ಅದಕ್ಕೆ ತಕ್ಕ ಮತ್ತು ನಿರ್ಣಾಯಕ ಪ್ರತ್ಯುತ್ತರ ನೀಡಲಾಗುವುದು ಎಂಬ ಬಲವಾದ ಸಂದೇಶವನ್ನು ನನ್ನ ಸರ್ಕಾರ ರವಾನಿಸಿದೆ. ಸಿಂಧೂ ನದಿ ನೀರು ಒಪ್ಪಂದದ ಅಮಾನತು ಕೂಡ ಭಯೋತ್ಪಾದನೆಯ ವಿರುದ್ಧದ ಭಾರತದ ಹೋರಾಟದ ಭಾಗವಾಗಿದೆ. ರಾಷ್ಟ್ರದ ರಕ್ಷಣಾ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಲು ‘ಮಿಷನ್ ಸುದರ್ಶನ ಚಕ್ರ’ ಪ್ರಗತಿಯಲ್ಲಿದೆ.

ಗೌರವಾನ್ವಿತ ಸದಸ್ಯರೇ,

ನನ್ನ ಸರ್ಕಾರದ ನೀತಿಗೆ ಅನುಗುಣವಾಗಿ ಭದ್ರತಾ ಪಡೆಗಳು ಮಾವೋವಾದಿ ಭಯೋತ್ಪಾದನೆಯ ವಿರುದ್ಧವೂ ನಿರ್ಣಾಯಕ ಕ್ರಮ ಕೈಗೊಂಡಿವೆ. ವರ್ಷಗಳಿಂದ ದೇಶದ 126 ಜಿಲ್ಲೆಗಳಲ್ಲಿ ಅಸುರಕ್ಷತೆ, ಭಯ ಮತ್ತು ಅಪನಂಬಿಕೆಯ ವಾತಾವರಣವಿತ್ತು. ಮಾವೋವಾದಿ ಸಿದ್ಧಾಂತವು ಅನೇಕ ತಲೆಮಾರುಗಳ ಭವಿಷ್ಯವನ್ನು ಕತ್ತಲೆಗೆ ತಳ್ಳಿತು. ನಮ್ಮ ಯುವಕರು, ಬುಡಕಟ್ಟು ಜನಾಂಗದವರು ಮತ್ತು ದಲಿತ ಸಹೋದರ ಸಹೋದರಿಯರು ಇದರಿಂದ ಹೆಚ್ಚು ಬಾಧಿತರಾಗಿದ್ದರು. ಇಂದು ಮಾವೋವಾದಿ ಭಯೋತ್ಪಾದನೆಯ ಸವಾಲು 126 ಜಿಲ್ಲೆಗಳಿಂದ ಕೇವಲ ಎಂಟು ಜಿಲ್ಲೆಗಳಿಗೆ ಇಳಿದಿದೆ. ಇವುಗಳಲ್ಲಿ ಕೇವಲ ಮೂರು ಜಿಲ್ಲೆಗಳು ಮಾತ್ರ ಹೆಚ್ಚು ಪೀಡಿತವಾಗಿ ಉಳಿದಿವೆ. ಕಳೆದ ಒಂದು ವರ್ಷದಲ್ಲಿ ಮಾವೋವಾದದೊಂದಿಗೆ ಸಂಬಂಧ ಹೊಂದಿದ್ದ ಸುಮಾರು ಎರಡು ಸಾವಿರ ವ್ಯಕ್ತಿಗಳು ಶರಣಾಗಿದ್ದಾರೆ. ಇದು ಲಕ್ಷಾಂತರ ನಾಗರಿಕರ ಜೀವನದಲ್ಲಿ ಶಾಂತಿಯನ್ನು ಮರಳಿ ತಂದಿದೆ. ಇಡೀ ದೇಶವು ಮಾವೋವಾದದಿಂದ ಬಾಧಿತವಾದ ಪ್ರದೇಶಗಳ ರೂಪಾಂತರಕ್ಕೆ ಸಾಕ್ಷಿಯಾಗುತ್ತಿದೆ. 25 ವರ್ಷಗಳ ನಂತರ ಬಿಜಾಪುರದ ಹಳ್ಳಿಯೊಂದಕ್ಕೆ ಬಸ್ ತಲುಪಿದಾಗ ಗ್ರಾಮಸ್ಥರು ಅದನ್ನು ಹಬ್ಬದಂತೆ ಆಚರಿಸಿದರು. ಬಸ್ತಾರ್ ಒಲಿಂಪಿಕ್ಸ್‌ ನಲ್ಲಿ ಯುವಕರು ಉತ್ಸಾಹದಿಂದ ಭಾಗವಹಿಸುತ್ತಿದ್ದಾರೆ. ಶಸ್ತ್ರಾಸ್ತ್ರ ತ್ಯಜಿಸಿದ ಜನರು ಈಗ ಜಗದಲ್‌ಪುರದ ‘ಪಂಡುಮ್ ಕೆಫೆ’ಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ಗೌರವಾನ್ವಿತ ಸದಸ್ಯರೇ,

ಶಸ್ತ್ರಾಸ್ತ್ರಗಳನ್ನು ತ್ಯಜಿಸಿ ಸಮಾಜದ ಮುಖ್ಯವಾಹಿನಿಗೆ ಸೇರಿದವರಿಗೆ ಸಾಮಾನ್ಯ ಮತ್ತು ಘನತೆಯ ಜೀವನವನ್ನು ನನ್ನ ಸರ್ಕಾರ ಖಚಿತಪಡಿಸುತ್ತಿದೆ. ದೇಶವು ಮಾವೋವಾದಿ ಭಯೋತ್ಪಾದನೆಯ ಸಂಪೂರ್ಣ ನಿರ್ಮೂಲನೆಗೆ ಸಾಕ್ಷಿಯಾಗುವ ದಿನ ದೂರವಿಲ್ಲ.

ಗೌರವಾನ್ವಿತ ಸದಸ್ಯರೇ,

ಗುರುದೇವ ರವೀಂದ್ರನಾಥ ಟಾಗೋರ್ ಅವರು ಸ್ವಾತಂತ್ರ್ಯವು ಸ್ವಾವಲಂಬಿ ಜೀವನವಿಲ್ಲದೆ ಅಪೂರ್ಣ ಎಂದು ಹೇಳಿದ್ದರು. ಭಾರತವನ್ನು ಸ್ವಾವಲಂಬಿಯನ್ನಾಗಿ ಮಾಡುವ ನಿಟ್ಟಿನಲ್ಲಿ ನನ್ನ ಸರ್ಕಾರ ನಿರಂತರ ಮತ್ತು ದೃಢವಾದ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಇಂದು ‘ಮೇಕ್ ಇನ್ ಇಂಡಿಯಾ’ ದೃಷ್ಟಿಕೋನದೊಂದಿಗೆ ತಯಾರಾದ ಉತ್ಪನ್ನಗಳು ವಿವಿಧ ಜಾಗತಿಕ ಮಾರುಕಟ್ಟೆಗಳನ್ನು ತಲುಪುತ್ತಿವೆ. ನಾಗರಿಕರಲ್ಲಿ ‘ಸ್ವದೇಶಿ’ ಬಗ್ಗೆಯೂ ಹೆಚ್ಚಿನ ಉತ್ಸಾಹವಿದೆ.

ಗೌರವಾನ್ವಿತ ಸದಸ್ಯರೇ,

ಪಿ ಎಲ್‌ ಐ ಯೋಜನೆಯಡಿ ಇಲ್ಲಿಯವರೆಗೆ ಸುಮಾರು ಎರಡು ಲಕ್ಷ ಕೋಟಿ ರೂಪಾಯಿಗಳ ಹೂಡಿಕೆಯನ್ನು ಆಕರ್ಷಿಸಲಾಗಿದೆ. ಅಲ್ಲದೆ 17 ಲಕ್ಷ ಕೋಟಿ ರೂಪಾಯಿಗಳಿಗೂ ಹೆಚ್ಚಿನ ಮೌಲ್ಯದ ಉತ್ಪಾದನೆಯನ್ನು ಮಾಡಲಾಗಿದೆ. ಭಾರತದ ಎಲೆಕ್ಟ್ರಾನಿಕ್ಸ್ ಕ್ಷೇತ್ರವು ಅಭೂತಪೂರ್ವ ವೇಗದಲ್ಲಿ ಅಭಿವೃದ್ಧಿ ಹೊಂದುತ್ತಿದೆ. ಕಳೆದ 11 ವರ್ಷಗಳಲ್ಲಿ ಎಲೆಕ್ಟ್ರಾನಿಕ್ಸ್ ಉತ್ಪಾದನೆಯು ಆರು ಪಟ್ಟು ಹೆಚ್ಚಾಗಿದೆ. ಇಂದು ಅದು 11 ಲಕ್ಷ ಕೋಟಿ ರೂಪಾಯಿಗಳ ಗಡಿಯನ್ನು ತಲುಪಿದೆ. 2025 ರಲ್ಲಿ ಭಾರತದ ರಕ್ಷಣಾ ಉತ್ಪಾದನೆಯು 1.5 ಲಕ್ಷ ಕೋಟಿ ರೂಪಾಯಿಗಳನ್ನು ಮೀರಿದೆ. ರಕ್ಷಣಾ ರಫ್ತು ಕೂಡ 23 ಸಾವಿರ ಕೋಟಿ ರೂಪಾಯಿಗಳ ದಾಖಲೆಯನ್ನು ದಾಟಿದೆ. ಆಪರೇಷನ್ ಸಿಂಧೂರದ ನಂತರ 'ಮೇಡ್-ಇನ್-ಇಂಡಿಯಾ' ರಕ್ಷಣಾ ಪ್ಲಾಟ್‌ಫಾರ್ಮ್‌ ಗಳ ಮೇಲಿನ ವಿಶ್ವಾಸ ಬಲಗೊಂಡಿದೆ.

ಗೌರವಾನ್ವಿತ ಸದಸ್ಯರೇ,

ಜಾಗತಿಕ ಹೂಡಿಕೆ ಮತ್ತು ರಫ್ತಿನಲ್ಲಿ ಭಾರತದ ಪಾಲು ಸ್ಥಿರವಾಗಿ ಹೆಚ್ಚುತ್ತಿದೆ. ಕಳೆದ 11 ವರ್ಷಗಳಲ್ಲಿ ಭಾರತವು ಸುಮಾರು 750 ಬಿಲಿಯನ್ ಡಾಲರ್ ಎಫ್‌ ಡಿ ಐ ಸ್ವೀಕರಿಸಿದೆ. ನನ್ನ ಸರ್ಕಾರವು ಭಾರತದಲ್ಲಿ ಹೊಸ ಕ್ಷೇತ್ರಗಳನ್ನು ಉತ್ತೇಜಿಸುತ್ತಿದೆ. ಆಧುನಿಕ ಉತ್ಪಾದನೆ ಮತ್ತು ಭವಿಷ್ಯದ ತಂತ್ರಜ್ಞಾನಗಳಿಗೆ ಮೈಕ್ರೋಚಿಪ್ ತಯಾರಿಕೆಯಲ್ಲಿ ಸ್ವಾವಲಂಬನೆ ಅತ್ಯಗತ್ಯ. 2025 ರಲ್ಲಿ ಇನ್ನೂ ನಾಲ್ಕು ಸೆಮಿಕಂಡಕ್ಟರ್ ಉತ್ಪಾದನಾ ಘಟಕಗಳನ್ನು ಮಂಜೂರು ಮಾಡಲಾಗಿದೆ. ಒಟ್ಟು ಅಂತಹ 10 ಕಾರ್ಖಾನೆಗಳು ಮುಂದಿನ ದಿನಗಳಲ್ಲಿ ತಮ್ಮ ಕಾರ್ಯಾಚರಣೆಯನ್ನು ಪ್ರಾರಂಭಿಸಲಿವೆ. ಭಾರತವು ನ್ಯಾನೋ-ಚಿಪ್ಸ್ ತಯಾರಿಕೆಗೂ ದೃಢವಾದ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ.

ಗೌರವಾನ್ವಿತ ಸದಸ್ಯರೇ,

ಚಿಪ್‌ ಗಳ ಹೊರತಾಗಿ ನನ್ನ ಸರ್ಕಾರವು ಮಿಷನ್ ಮೋಡ್‌ ನಲ್ಲಿ ಕೆಲಸ ಮಾಡಲು ಪ್ರಾರಂಭಿಸಿರುವ ಇನ್ನೊಂದು ಪ್ರಮುಖ ಕ್ಷೇತ್ರವಿದೆ. ‘ರಾಷ್ಟ್ರೀಯ ನಿರ್ಣಾಯಕ ಖನಿಜ ಮಿಷನ್’ ಮೂಲಕ ಅಗತ್ಯ ಖನಿಜಗಳಿಗಾಗಿ ಇತರ ದೇಶಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲಾಗುತ್ತಿದೆ.

ಗೌರವಾನ್ವಿತ ಸದಸ್ಯರೇ,

ಹಿಂದೆ ಭಾರತವು ಕಡಲ ವ್ಯಾಪಾರದಲ್ಲಿ ಮಹಾಶಕ್ತಿಯಾಗಿತ್ತು. ಆದಾಗ್ಯೂ ವಸಾಹತುಶಾಹಿಯ ನಂತರ ದಶಕಗಳ ನಿರ್ಲಕ್ಷ್ಯದಿಂದಾಗಿ ಇಂದು ಭಾರತದ ಶೇಕಡಾ 95 ರಷ್ಟು ವ್ಯಾಪಾರವು ವಿದೇಶಿ ಹಡಗುಗಳಲ್ಲಿ ನಡೆಯುತ್ತಿದೆ. ಇದಕ್ಕೆ ವಾರ್ಷಿಕವಾಗಿ ಆರು ಲಕ್ಷ ಕೋಟಿ ರೂಪಾಯಿಗಳಿಗಿಂತ ಹೆಚ್ಚು ವ್ಯಯಿಸಲಾಗುತ್ತಿದೆ. ಈ ಪರಿಸ್ಥಿತಿಯಿಂದ ದೇಶವನ್ನು ಹೊರತರಲು ನನ್ನ ಸರ್ಕಾರ ಸಕ್ರಿಯವಾಗಿ ತೊಡಗಿಸಿಕೊಂಡಿದೆ. ಶಿಪ್ಪಿಂಗ್ ಕ್ಷೇತ್ರಕ್ಕಾಗಿ ಸುಮಾರು 70 ಸಾವಿರ ಕೋಟಿ ರೂಪಾಯಿಗಳ ಐತಿಹಾಸಿಕ ಪ್ಯಾಕೇಜ್ ಅನ್ನು ನನ್ನ ಸರ್ಕಾರ ಘೋಷಿಸಿದೆ. ದೊಡ್ಡ ಹಡಗುಗಳಿಗೆ ಮೂಲಸೌಕರ್ಯ ಸ್ಥಾನಮಾನ ನೀಡಲಾಗಿದೆ. ಇದಲ್ಲದೆ ಪ್ರಸ್ತುತ ಅಗತ್ಯಗಳನ್ನು ಪೂರೈಸಲು ಹಳೆಯ ಕಡಲ ಕಾನೂನುಗಳನ್ನು ಸಹ ಪರಿಷ್ಕರಿಸಲಾಗಿದೆ.

ಗೌರವಾನ್ವಿತ ಸದಸ್ಯರೇ,

ಕೇರಳದ ಮಹಾನ್ ಸಂತ ಶ್ರೀನಾರಾಯಣ ಗುರುಗಳು ಹೀಗೆ ಹೇಳಿದ್ದಾರೆ: “ಶಿಕ್ಷಣದ ಮೂಲಕ ಜ್ಞಾನವನ್ನು ಪಡೆದುಕೊಳ್ಳಿ ಮತ್ತು ಸಂಘಟನೆಯ ಮೂಲಕ ಶಕ್ತಿಶಾಲಿಯಾಗಿ”. ಏಕೆಂದರೆ ಒಂದು ದೇಶವು ಕನಸು ಕಂಡಾಗ ಅಂತಹ ಕನಸುಗಳನ್ನು ಆ ದೇಶದ ಯುವಜನರು ಮಾತ್ರ ಕಾಣುತ್ತಾರೆ ಮತ್ತು ಆ ಯುವಜನರಿಂದಲೇ ಅವು ನನಸಾಗುತ್ತವೆ. ಎಲೆಕ್ಟ್ರಾನಿಕ್ಸ್ ಉತ್ಪಾದನಾ ಕ್ಷೇತ್ರದಲ್ಲಿಯೇ ಕಳೆದ 11 ವರ್ಷಗಳಲ್ಲಿ 25 ಲಕ್ಷಕ್ಕೂ ಹೆಚ್ಚು ಹೊಸ ಉದ್ಯೋಗಗಳು ಸೃಷ್ಟಿಯಾಗಿವೆ ಎಂದು ತಿಳಿಸಲು ಸಂತೋಷವಾಗುತ್ತದೆ. ನನ್ನ ಸರ್ಕಾರದ ಪೂರಕ ನೀತಿಗಳೊಂದಿಗೆ ದೇಶದಲ್ಲಿ ಅನೇಕ ಹೊಸ ಕ್ಷೇತ್ರಗಳು ಹೊರಹೊಮ್ಮುತ್ತಿವೆ. ಸೆಮಿಕಂಡಕ್ಟರ್‌, ಹಸಿರು ಇಂಧನ ಮತ್ತು ಹಸಿರು ಹೈಡ್ರೋಜನ್‌ ನಂತಹ ಹೊಸ ಕ್ಷೇತ್ರಗಳಲ್ಲಿ ಹೊಸ ಉದ್ಯೋಗಾವಕಾಶಗಳು ಸೃಷ್ಟಿಯಾಗುತ್ತಿವೆ.

ಗೌರವಾನ್ವಿತ ಸದಸ್ಯರೇ,

ಕಳೆದ ಕೆಲವು ವರ್ಷಗಳಲ್ಲಿ ನನ್ನ ಸರ್ಕಾರವು ಆಧುನಿಕ ಮೂಲಸೌಕರ್ಯಗಳ ಅಭಿವೃದ್ಧಿಯಲ್ಲಿ 50 ಲಕ್ಷ ಕೋಟಿ ರೂಪಾಯಿಗಳಿಗಿಂತ ಹೆಚ್ಚು ಹೂಡಿಕೆ ಮಾಡಿದೆ. ಮೂಲಸೌಕರ್ಯದಲ್ಲಿನ ಈ ಹೂಡಿಕೆಯು ಯುವಜನರಿಗೆ ಹೆಚ್ಚಿನ ಉದ್ಯೋಗಾವಕಾಶಗಳನ್ನು ಸೃಷ್ಟಿಸಿದೆ.

ಗೌರವಾನ್ವಿತ ಸದಸ್ಯರೇ,

ಇಂದು ನಾವು ಭಾರತದ ಯುವ ಮನಸ್ಸುಗಳಲ್ಲಿ ಮತ್ತೊಂದು ಸಕಾರಾತ್ಮಕ ಬದಲಾವಣೆಯನ್ನು ಕಾಣುತ್ತಿದ್ದೇವೆ. ದೇಶದ ಯುವಜನರು ಆತ್ಮನಿರ್ಭರ ಭಾರತ, ಸ್ವದೇಶಿ ಮತ್ತು ಮೇಕ್ ಇನ್ ಇಂಡಿಯಾವನ್ನು ತಮ್ಮ ಜವಾಬ್ದಾರಿಯಾಗಿ ಸ್ವೀಕರಿಸುತ್ತಿದ್ದಾರೆ. ಮುದ್ರಾ ಯೋಜನೆಯಂತಹ ಉಪಕ್ರಮಗಳು ಈ ಯುವಜನರಲ್ಲಿ ಉದ್ಯಮಶೀಲತೆ ಮತ್ತು ಸ್ವಯಂ ಉದ್ಯೋಗದ ಮನೋಭಾವವನ್ನು ಬೆಳೆಸುತ್ತಿವೆ. ಈ ಯೋಜನೆಯಡಿ ಸಣ್ಣ ಉದ್ಯಮಿಗಳಿಗೆ 38 ಲಕ್ಷ ಕೋಟಿ ರೂಪಾಯಿಗಳಿಗೂ ಅಧಿಕ ಹಣವನ್ನು ಒದಗಿಸಲಾಗಿದೆ. ಮೊದಲ ಬಾರಿಗೆ ಸ್ವಯಂ ಉದ್ಯೋಗಕ್ಕಾಗಿ ಸುಮಾರು 12 ಕೋಟಿ ಸಾಲಗಳನ್ನು ವಿತರಿಸಲಾಗಿದೆ. ಅಂತೆಯೇ ಪಿಎಂ ವಿಶ್ವಕರ್ಮ ಯೋಜನೆಯಡಿ ದೇಶಾದ್ಯಂತ 20 ಲಕ್ಷಕ್ಕೂ ಹೆಚ್ಚು ಕುಶಲಕರ್ಮಿಗಳಿಗೆ ತರಬೇತಿ ಮತ್ತು ಬ್ಯಾಂಕಿಂಗ್ ಬೆಂಬಲವನ್ನು ನೀಡಲಾಗುತ್ತಿದೆ. ಪಿಎಂ ಸ್ವನಿಧಿ ಯೋಜನೆಯಡಿ 72 ಲಕ್ಷ ಬೀದಿ ಬದಿ ವ್ಯಾಪಾರಿಗಳು 16 ಸಾವಿರ ಕೋಟಿ ರೂಪಾಯಿಗಳ ಆರ್ಥಿಕ ನೆರವು ಪಡೆದಿದ್ದಾರೆ.

ಗೌರವಾನ್ವಿತ ಸದಸ್ಯರೇ,

ಇತ್ತೀಚೆಗೆ ಸ್ಟಾರ್ಟ್ಅಪ್ ಇಂಡಿಯಾ ಕಾರ್ಯಕ್ರಮವು 10 ವರ್ಷಗಳನ್ನು ಪೂರೈಸಿದೆ. ಈ 10 ವರ್ಷಗಳಲ್ಲಿ ಭಾರತವು ವಿಶ್ವದ ಮೂರನೇ ಅತಿದೊಡ್ಡ ನವೋದ್ಯಮ ಪರಿಸರ ವ್ಯವಸ್ಥೆಯಾಗಿ ಬೆಳೆದಿದೆ. ಒಂದು ದಶಕದ ಹಿಂದೆ ದೇಶದಲ್ಲಿ 500 ಕ್ಕಿಂತ ಕಡಿಮೆ ನವೋದ್ಯಮಗಳಿದ್ದವು. ಇಂದು ಸುಮಾರು ಎರಡು ಲಕ್ಷ ನವೋದ್ಯಮಗಳು ನೋಂದಾಯಿಸಲ್ಪಟ್ಟಿವೆ, ಅವುಗಳಲ್ಲಿ ಸುಮಾರು 50 ಸಾವಿರ ಹೊಸ ನವೋದ್ಯಮಗಳು ಕಳೆದ ವರ್ಷವೊಂದರಲ್ಲೇ ನೋಂದಾಯಿಸಲ್ಪಟ್ಟಿವೆ. ಭಾರತದ ನವೋದ್ಯಮ ಜಾಲದಲ್ಲಿ 20 ಲಕ್ಷಕ್ಕೂ ಹೆಚ್ಚು ಯುವಜನರು ಕೆಲಸ ಮಾಡುತ್ತಿದ್ದಾರೆ. ಈ ನವೋದ್ಯಮಗಳ ಪೈಕಿ ಶೇಕಡಾ 45 ರಷ್ಟು ಕನಿಷ್ಠ ಒಬ್ಬ ಮಹಿಳಾ ನಿರ್ದೇಶಕರನ್ನು ಹೊಂದಿವೆ.

ಗೌರವಾನ್ವಿತ ಸದಸ್ಯರೇ,

ಕಳೆದ ವರ್ಷದಲ್ಲಿ ನನ್ನ ಸರ್ಕಾರವು ವಿವಿಧ ಉದ್ಯೋಗ ಮೇಳಗಳ ಮೂಲಕ ಲಕ್ಷಾಂತರ ಯುವಜನರಿಗೆ ಕಾಯಂ ಉದ್ಯೋಗಗಳನ್ನು ಒದಗಿಸಿದೆ. ಖಾಸಗಿ ವಲಯದಲ್ಲಿಯೂ ಒಂದು ಲಕ್ಷ ಕೋಟಿ ರೂಪಾಯಿ ಬಜೆಟ್‌ನೊಂದಿಗೆ ‘ಪ್ರಧಾನ ಮಂತ್ರಿ ವಿಕಸಿತ ಭಾರತ ಉದ್ಯೋಗ ಯೋಜನೆ’ ಪ್ರಾರಂಭಿಸಲಾಗಿದೆ. ಈ ಯೋಜನೆಯಡಿ 3.5 ಕೋಟಿಗೂ ಹೆಚ್ಚು ಹೊಸ ಉದ್ಯೋಗಗಳು ಸೃಷ್ಟಿಯಾಗುತ್ತಿವೆ. ನನ್ನ ಸರ್ಕಾರದ ಪ್ರಯತ್ನಗಳಿಂದ ಐಟಿ ಸೇವೆಗಳು, ಎಲೆಕ್ಟ್ರಾನಿಕ್ಸ್ ಉತ್ಪಾದನೆ ಮತ್ತು ಜಾಗತಿಕ ಸಾಮರ್ಥ್ಯ ಕೇಂದ್ರಗಳಲ್ಲಿ ಒಂದು ಕೋಟಿಗೂ ಹೆಚ್ಚು ಯುವಜನರು ಉದ್ಯೋಗ ಪಡೆದಿದ್ದಾರೆ.

ಗೌರವಾನ್ವಿತ ಸದಸ್ಯರೇ,

ಕಳೆದ ವರ್ಷದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಮೊಬೈಲ್ ಟವರ್‌ ಗಳ ಮೂಲಕ 4ಜಿ ಮತ್ತು 5ಜಿ ನೆಟ್‌ವರ್ಕ್ ಸೇವೆಗಳು ದೇಶದ ಪ್ರತಿಯೊಂದು ಮೂಲೆಗೂ ತಲುಪಿವೆ. ಡಿಜಿಟಲ್ ಇಂಡಿಯಾದ ವಿಸ್ತರಣೆಯು ಭಾರತವನ್ನು ಸಾವಿರಾರು ಕೋಟಿ ಮೌಲ್ಯದ ಸೃಜನಶೀಲ ಆರ್ಥಿಕತೆ (ಕ್ರಿಯೇಟಿವ್ ಎಕಾನಮಿ) ಯ ಪ್ರಮುಖ ಜಾಗತಿಕ ಕೇಂದ್ರವಾಗಿ ಪರಿಚಯಿಸಿದೆ. ಕ್ರಿಯೇಟಿವ್ ಎಕಾನಮಿಯನ್ನು ಮತ್ತಷ್ಟು ವೇಗಗೊಳಿಸಲು ನನ್ನ ಸರ್ಕಾರವು ‘ವೇವ್ಸ್‌’ ಎಂಬ ಹೊಸ ವೇದಿಕೆಯನ್ನು ಸಹ ಪ್ರಾರಂಭಿಸಿದೆ.

ಗೌರವಾನ್ವಿತ ಸದಸ್ಯರೇ,

ಇಂದು ತಂತ್ರಜ್ಞಾನವು ವೇಗವಾಗಿ ವಿಕಸನಗೊಳ್ಳುತ್ತಿದೆ. ಇದರ ಪರಿಣಾಮವಾಗಿ ಉದ್ಯೋಗಗಳ ಸ್ವರೂಪವೂ ವೇಗವಾಗಿ ಬದಲಾಗುತ್ತಿದೆ. ಆದ್ದರಿಂದ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಪ್ರಸ್ತುತ ಮತ್ತು ಭವಿಷ್ಯದ ಅಗತ್ಯಗಳನ್ನು ಪೂರೈಸಲು ವಿನ್ಯಾಸಗೊಳಿಸಲಾಗಿದೆ. ಇಂದು ಶಾಲಾ ಮಟ್ಟದಲ್ಲಿಯೇ ಮಕ್ಕಳಿಗೆ ತಂತ್ರಜ್ಞಾನ ಮತ್ತು ನಾವೀನ್ಯತೆಯ ಮನೋಭಾವವನ್ನು ಬೆಳೆಸಲಾಗುತ್ತಿದೆ. ಅಟಲ್ ಇನ್ನೋವೇಶನ್ ಮಿಷನ್ ಇದರಲ್ಲಿ ಪರಿಣಾಮಕಾರಿ ಪಾತ್ರ ವಹಿಸುತ್ತಿದೆ. ಇದುವರೆಗೆ ದೇಶಾದ್ಯಂತ ಒಂದು ಕೋಟಿಗೂ ಹೆಚ್ಚು ವಿದ್ಯಾರ್ಥಿಗಳು ಅಟಲ್ ಟಿಂಕರಿಂಗ್ ಲ್ಯಾಬ್‌ಗಳಿಂದ ಪ್ರಯೋಜನ ಪಡೆದಿದ್ದಾರೆ. ಇದಲ್ಲದೆ ‘ಅನುಸಂಧಾನ ರಾಷ್ಟ್ರೀಯ ಸಂಶೋಧನಾ ಪ್ರತಿಷ್ಠಾನ’ದ ಮೂಲಕ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಕೃತಿಯನ್ನು ಸಹ ಉತ್ತೇಜಿಸಲಾಗುತ್ತಿದೆ.

ಗೌರವಾನ್ವಿತ ಸದಸ್ಯರೇ,

ದೇಶದಲ್ಲಿ ಐಟಿಐ ಜಾಲವನ್ನು ಮೇಲ್ದರ್ಜೆಗೇರಿಸಲು ಒಂದು ಸಾವಿರ ಐಟಿಐಗಳನ್ನು ಭವಿಷ್ಯಕ್ಕೆ ಸಜ್ಜುಗೊಳಿಸಲಾಗುತ್ತಿದೆ. ಇದಕ್ಕಾಗಿ ‘ಪಿಎಂ ಸೇತು’ ಯೋಜನೆಯಡಿ 60 ಸಾವಿರ ಕೋಟಿ ರೂಪಾಯಿಗಳನ್ನು ವ್ಯಯಿಸಲಾಗುತ್ತಿದೆ. ಆಧುನಿಕ ತಂತ್ರಜ್ಞಾನಕ್ಕಾಗಿ ಉದ್ಯಮ-ಸಿದ್ಧ ಕಾರ್ಯಪಡೆಯನ್ನು ನನ್ನ ಸರ್ಕಾರವು ತಯಾರು ಮಾಡುತ್ತಿದೆ. ಇದುವರೆಗೆ ಸೆಮಿಕಂಡಕ್ಟರ್ ಉದ್ಯಮಕ್ಕಾಗಿ 60 ಸಾವಿರ ಯುವಜನರಿಗೆ ತರಬೇತಿ ನೀಡಲಾಗಿದೆ. ಕೃತಕ ಬುದ್ಧಿಮತ್ತೆ ಕ್ಷೇತ್ರದಲ್ಲಿ 10 ಲಕ್ಷ ಯುವಜನರಿಗೆ ತರಬೇತಿ ನೀಡಲಾಗುತ್ತಿದೆ.

ಗೌರವಾನ್ವಿತ ಸದಸ್ಯರೇ,

ಇಂದು, ಕೃತಕ ಬುದ್ಧಿಮತ್ತೆಯ ದುರುಪಯೋಗದಿಂದ ಉಂಟಾಗುವ ಅಪಾಯಗಳ ದೃಷ್ಟಿಯಿಂದ, ಈ ವಿಷಯದ ಬಗ್ಗೆ ಗಂಭೀರವಾಗಿರುವುದು ಅತ್ಯಗತ್ಯ. ಡೀಪ್‌ ಫೇಕ್, ತಪ್ಪು ಮಾಹಿತಿ ಮತ್ತು ನಕಲಿ ವಿಷಯಗಳು ಪ್ರಜಾಪ್ರಭುತ್ವ, ಸಾಮಾಜಿಕ ಸಾಮರಸ್ಯ ಮತ್ತು ಸಾರ್ವಜನಿಕ ನಂಬಿಕೆಗೆ ಗಮನಾರ್ಹ ಬೆದರಿಕೆಗಳಾಗುತ್ತಿವೆ. ನೀವೆಲ್ಲರೂ ಈ ಗಂಭೀರ ಸಮಸ್ಯೆಯ ಬಗ್ಗೆ ಚರ್ಚಿಸುವುದು ಅತ್ಯವಶ್ಯಕವಾಗಿದೆ.

ಗೌರವಾನ್ವಿತ ಸದಸ್ಯರೇ,

ಭಾರತದ ಯುವಜನತೆಯ ಮತ್ತು ನನ್ನ ಸರ್ಕಾರದ ಸಂಯೋಜಿತ ಪ್ರಯತ್ನಗಳ ಮೂಲಕ, ದೇಶವು ಕ್ರೀಡಾ ಕ್ಷೇತ್ರದಲ್ಲಿಯೂ ಅಭೂತಪೂರ್ವ ಅಭಿವೃದ್ಧಿಯನ್ನು ಕಾಣುತ್ತಿದೆ. ನಮ್ಮ ಹೆಣ್ಣುಮಕ್ಕಳು ಮತ್ತು ದಿವ್ಯಾಂಗ ಸಹನಾಗರಿಕರ ಪ್ರದರ್ಶನವು ಸುಧಾರಿಸಿರುವ ರೀತಿ ನಿಜಕ್ಕೂ ಗಮನಾರ್ಹವಾಗಿದೆ. ಭಾರತದ ಮಹಿಳಾ ಕ್ರಿಕೆಟ್ ತಂಡ ಮೊದಲ ಬಾರಿಗೆ ವಿಶ್ವಕಪ್ ಗೆದ್ದಿದೆ. ಅದೇ ರೀತಿ, ಅಂಧ ಮಹಿಳೆಯರ ಕ್ರಿಕೆಟ್ ತಂಡವೂ ವಿಶ್ವಕಪ್ ಗೆದ್ದಿದೆ. ನಮ್ಮ ಹೆಣ್ಣುಮಕ್ಕಳಿಗೆ ನಾನು ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.

ಗೌರವಾನ್ವಿತ ಸದಸ್ಯರೇ,

ಕಳೆದ ದಶಕದಲ್ಲಿ, ಭಾರತದಲ್ಲಿ ಕ್ರೀಡೆಗೆ ಸಂಬಂಧಿಸಿದ ಪ್ರತಿಯೊಂದು ವ್ಯವಸ್ಥೆಯಲ್ಲೂ ಸುಧಾರಣೆಗಳನ್ನು ತರಲಾಗಿದೆ. ನನ್ನ ಸರ್ಕಾರವು ‘ಖೇಲೋ ಇಂಡಿಯಾ’ ನೀತಿಯನ್ನು ರೂಪಿಸಿದೆ ಮತ್ತು ಕ್ರೀಡಾ ಸಂಬಂಧಿತ ಸಂಸ್ಥೆಗಳನ್ನು ಪಾರದರ್ಶಕಗೊಳಿಸಿದೆ. ತನ್ನ ಸಿದ್ಧತೆ ಮತ್ತು ಆತ್ಮವಿಶ್ವಾಸದ ಫಲವಾಗಿ, ಭಾರತಕ್ಕೆ 2030 ರ ಕಾಮನ್‌ವೆಲ್ತ್ ಕ್ರೀಡಾಕೂಟವನ್ನು ಆಯೋಜಿಸುವ ಜವಾಬ್ದಾರಿಯನ್ನು ವಹಿಸಿಕೊಡಲಾಗಿದೆ. ದೇಶದ ಸಮರ್ಥ ಯುವಶಕ್ತಿಯು ವಿಕಸಿತ ಭಾರತ ನಿರ್ಮಾಣದಲ್ಲಿ ನಿರ್ಣಾಯಕ ಪಾತ್ರ ವಹಿಸಲಿದೆ ಎಂಬ ವಿಶ್ವಾಸ ನನಗಿದೆ. ಯುವಕರನ್ನು ರಾಷ್ಟ್ರ ನಿರ್ಮಾಣದ ಕಲ್ಪನೆಯೊಂದಿಗೆ ಜೋಡಿಸಲು, ನನ್ನ ಸರ್ಕಾರವು ‘ವಿಕಸಿತ ಭಾರತ ಯುವ ನಾಯಕರ ಸಂವಾದ ವೇದಿಕೆ’ಯನ್ನು ಸಹ ಪ್ರಾರಂಭಿಸಿದೆ. ಈ ವರ್ಷ, ಸುಮಾರು 50 ಲಕ್ಷ ಯುವಜನರು ಈ ವೇದಿಕೆಯ ಮೂಲಕ ನೋಂದಾಯಿಸಿಕೊಂಡಿದ್ದಾರೆ. ಇದುವರೆಗೆ ಸುಮಾರು ಎರಡು ಕೋಟಿ ಯುವಜನರು ‘ಮೈ ಭಾರತ್’ ವೇದಿಕೆಗೆ ಸೇರಿದ್ದಾರೆ.

ಗೌರವಾನ್ವಿತ ಸದಸ್ಯರೇ,

ಜಗತ್ತು ಸಂಕೀರ್ಣತೆಗಳ ಹಂತದ ಮೂಲಕ ಹಾದುಹೋಗುತ್ತಿದೆ ಎಂಬುದು ನಿಮ್ಮೆಲ್ಲರಿಗೂ ತಿಳಿದಿದೆ. ದೀರ್ಘಕಾಲದ ಜಾಗತಿಕ ಸಮೀಕರಣಗಳು ಸಹ ಬದಲಾವಣೆಗೆ ಒಳಗಾಗುತ್ತಿವೆ. ನಡೆಯುತ್ತಿರುವ ಸಂಘರ್ಷಗಳಿಂದ ಉಂಟಾಗುವ ಅನಿಶ್ಚಿತತೆಗಳು ಜಾಗತಿಕ ಸ್ಥಿರತೆ ಮತ್ತು ಆರ್ಥಿಕತೆಯ ಮೇಲೆ ಒತ್ತಡ ಹೇರಿವೆ. ಇಂತಹ ಸವಾಲಿನ ಸಂದರ್ಭಗಳ ನಡುವೆಯೂ ಭಾರತವು ಅಭಿವೃದ್ಧಿಯ ಪಥದಲ್ಲಿ ವೇಗವಾಗಿ ಮುನ್ನಡೆಯುತ್ತಿದೆ. ಈ ಯಶಸ್ಸಿನ ಹಿಂದೆ ನನ್ನ ಸರ್ಕಾರದ ಸಮತೋಲಿತ ವಿದೇಶಾಂಗ ನೀತಿ ಮತ್ತು ದೂರದೃಷ್ಟಿ ಅಡಗಿದೆ.

ಗೌರವಾನ್ವಿತ ಸದಸ್ಯರೇ,

ಪ್ರಸ್ತುತ ನಡೆಯುತ್ತಿರುವ ಸಂಕೀರ್ಣ ಜಾಗತಿಕ ಸಂದರ್ಭಗಳ ನಡುವೆ, ಭಾರತವು ವಿಶ್ವದಲ್ಲಿ ಒಂದು ಸೇತುವೆಯ ಪಾತ್ರವನ್ನು ನಿರ್ವಹಿಸುತ್ತಿದೆ. ಸಂಘರ್ಷದಲ್ಲಿ ತೊಡಗಿರುವ ರಾಷ್ಟ್ರಗಳು ಸಹ ಪ್ರಮುಖ ವಿಷಯಗಳಲ್ಲಿ ಭಾರತದ ಮೇಲೆ ತಮ್ಮ ನಂಬಿಕೆಯನ್ನು ವ್ಯಕ್ತಪಡಿಸುತ್ತಿವೆ. ಭಾರತವು ಸಮತೋಲನ, ನಿಷ್ಪಕ್ಷಪಾತ ಮತ್ತು ಮಾನವೀಯ ಪರಿಗಣನೆಗಳಿಗೆ ಸತತವಾಗಿ ಆದ್ಯತೆ ನೀಡಿರುವುದು ತೃಪ್ತಿಯ ವಿಷಯವಾಗಿದೆ. ಅದೇ ಸಮಯದಲ್ಲಿ, ಅದು ‘ಇಂಡಿಯಾ ಫಸ್ಟ್’ (ಭಾರತ ಮೊದಲು) ಎಂಬ ತನ್ನ ಸಂಕಲ್ಪದಲ್ಲಿ ಅಚಲವಾಗಿ ಉಳಿದಿದೆ.

ಗೌರವಾನ್ವಿತ ಸದಸ್ಯರೇ,

ಭಾರತವು ವಿಶ್ವಾದ್ಯಂತ ‘ಗ್ಲೋಬಲ್ ಸೌತ್’ನ ಧ್ವನಿಯನ್ನು ಬಲಪಡಿಸಿದೆ. ಆಫ್ರಿಕಾ ಮತ್ತು ಲ್ಯಾಟಿನ್ ಅಮೆರಿಕಾ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಭಾರತವು ಹೊಸ ಪಾಲುದಾರಿಕೆಗಳನ್ನು ರೂಪಿಸಿದೆ ಮತ್ತು ದೀರ್ಘಕಾಲದ ಸಂಬಂಧಗಳನ್ನು ಬಲಪಡಿಸಿದೆ. ಬಿಮ್‌ಸ್ಟೆಕ್ (BIMSTEC), ಜಿ20 (G20), ಬ್ರಿಕ್ಸ್ (BRICS) ಮತ್ತು ಎಸ್‌ ಸಿ ಒ (SCO) ಸೇರಿದಂತೆ ವಿವಿಧ ಅಂತರರಾಷ್ಟ್ರೀಯ ವೇದಿಕೆಗಳಲ್ಲಿ ಭಾರತವು ತನ್ನ ಉಪಸ್ಥಿತಿಯನ್ನು ನಿರಂತರವಾಗಿ ಬಲಪಡಿಸಿದೆ.

ಗೌರವಾನ್ವಿತ ಸದಸ್ಯರೇ,

ಮನುಕುಲದ ಸೇವೆಯೇ ಜಾಗತಿಕ ರಾಜಕೀಯ ಮತ್ತು ಸಹಕಾರದ ಅಂತಿಮ ಉದ್ದೇಶವಾಗಿರಬೇಕು ಎಂದು ಭಾರತ ಯಾವಾಗಲೂ ನಂಬಿದೆ. ಭಾರತವು ತನ್ನ ಕಾರ್ಯಗಳ ಮೂಲಕ ಇದಕ್ಕೆ ಸ್ಪೂರ್ತಿದಾಯಕ ಉದಾಹರಣೆಗಳನ್ನು ನೀಡಿದೆ. ಲ್ಯಾಟಿನ್ ಅಮೆರಿಕಾ, ಆಗ್ನೇಯ ಏಷ್ಯಾ, ಪೆಸಿಫಿಕ್ ದ್ವೀಪಗಳು ಮತ್ತು ನೆರೆಯ ದೇಶಗಳಲ್ಲಿನ ಬಿಕ್ಕಟ್ಟಿನ ಸಮಯದಲ್ಲಿ, ಭಾರತವು ಸಾಧ್ಯವಿರುವ ಎಲ್ಲ ಸಹಾಯವನ್ನು ನೀಡಲು ಯಾವಾಗಲೂ ಮುಂದೆ ಬಂದಿದೆ. ನವೆಂಬರ್ 2025 ರಲ್ಲಿ, ಶ್ರೀಲಂಕಾದಲ್ಲಿ ಸಂಭವಿಸಿದ ‘ದಿತ್ವಾ’ ಚಂಡಮಾರುತದ ಸಮಯದಲ್ಲಿ, ನನ್ನ ಸರ್ಕಾರವು ‘ಆಪರೇಷನ್ ಸಾಗರ್ ಬಂಧು’ ಕಾರ್ಯಾಚರಣೆಯನ್ನು ನಡೆಸಿತು. ಮ್ಯಾನ್ಮಾರ್ ಮತ್ತು ಅಫ್ಘಾನಿಸ್ತಾನಗಳಲ್ಲಿಯೂ ಭಾರತವು ಮೊದಲ ಸ್ಪಂದನಕಾರನ ಪಾತ್ರವನ್ನು ನಿರ್ವಹಿಸಿದೆ.

ಗೌರವಾನ್ವಿತ ಸದಸ್ಯರೇ,

ಇಂದು, ಭಾರತವು ಹಲವಾರು ಜಾಗತಿಕ ಸಂಸ್ಥೆಗಳಲ್ಲಿ ತನ್ನ ವ್ಯಾಪಕ ಪಾತ್ರ ಮತ್ತು ಸಕ್ರಿಯ ತೊಡಗಿಸಿಕೊಳ್ಳುವಿಕೆಯೊಂದಿಗೆ ಪ್ರಮುಖ ಜವಾಬ್ದಾರಿಗಳನ್ನು ಹೊತ್ತುಕೊಂಡಿದೆ. ಈ ವರ್ಷ, ಭಾರತವು ಬ್ರಿಕ್ಸ್‌ ಅಧ್ಯಕ್ಷತೆಯನ್ನು ಹೊಂದಿದೆ ಮತ್ತು ಜಗತ್ತು ಇದನ್ನು ಹೆಚ್ಚಿನ ಆಶಾವಾದದಿಂದ ನೋಡುತ್ತಿದೆ. ಭವಿಷ್ಯದ ಅವಕಾಶಗಳು ಮತ್ತು ಸವಾಲುಗಳನ್ನು ಗಮನದಲ್ಲಿಟ್ಟುಕೊಂಡು, ಅಂತರರಾಷ್ಟ್ರೀಯ ಸಮುದಾಯವನ್ನು ಒಂದೇ ವೇದಿಕೆಗೆ ತರಲು ಭಾರತವು ‘ಜಾಗತಿಕ ಎಐ ಇಂಪ್ಯಾಕ್ಟ್‌ ಶೃಂಗಸಭೆ’ಯನ್ನು ಆಯೋಜಿಸಲಿದೆ. ಇದು ಕೂಡ ವಿಶ್ವಕ್ಕೆ ಮಹತ್ವದ ಘಟನೆಯಾಗಲಿದೆ.

ಗೌರವಾನ್ವಿತ ಸದಸ್ಯರೇ,

ವಿಕಸಿತ ಭಾರತದ ಗುರಿಯನ್ನು ತಲುಪಲು, ಆಧುನಿಕ ಅಭಿವೃದ್ಧಿಯಷ್ಟೇ ರಾಷ್ಟ್ರೀಯ ಸ್ವಾಭಿಮಾನ ಮತ್ತು ಸಾಂಸ್ಕೃತಿಕ ಹೆಮ್ಮೆಗೂ ಪ್ರಾಮುಖ್ಯತೆ ನೀಡುವ ಅಗತ್ಯವಿದೆ. ಸಾಂಸ್ಕೃತಿಕ ದೃಷ್ಟಿಕೋನದಿಂದ, ಭಾರತವು ವಿಶ್ವದ ಶ್ರೀಮಂತ ರಾಷ್ಟ್ರಗಳಲ್ಲಿ ಒಂದಾಗಿದೆ. ಈ ಪರಂಪರೆಯನ್ನು ದೇಶದ ಶಕ್ತಿಯ ಮೂಲವನ್ನಾಗಿ ಪರಿವರ್ತಿಸಲು ನನ್ನ ಸರ್ಕಾರ ಕೆಲಸ ಮಾಡುತ್ತಿದೆ. ಮೆಕಾಲೆಯ ಸಂಚುಗಳ ಮೂಲಕ, ವಸಾಹತುಶಾಹಿ ಅವಧಿಯಲ್ಲಿ ಭಾರತದ ಜನರಲ್ಲಿ ಕೀಳರಿಮೆಯ ಭಾವನೆಯನ್ನು ಬಿತ್ತಲಾಗಿತ್ತು. ಈಗ, ಸ್ವಾತಂತ್ರ್ಯದ ನಂತರ ಮೊದಲ ಬಾರಿಗೆ, ನನ್ನ ಸರ್ಕಾರವು ಇದರ ಮೇಲೆ ಪ್ರಹಾರ ಮಾಡುವ ಧೈರ್ಯವನ್ನು ತೋರಿಸಿದೆ.

ಗೌರವಾನ್ವಿತ ಸದಸ್ಯರೇ,

ಇಂದು ರಾಷ್ಟ್ರವು ತನ್ನ ಸಾಂಸ್ಕೃತಿಕ ಪರಂಪರೆಯನ್ನು ಸಂರಕ್ಷಿಸಲು ಮತ್ತು ಶ್ರೀಮಂತಗೊಳಿಸಲು ಪ್ರತಿಯೊಂದು ರಂಗದಲ್ಲೂ ಕೆಲಸ ಮಾಡುತ್ತಿದೆ. ಈ ನಿಟ್ಟಿನಲ್ಲಿ, ನನ್ನ ಸರ್ಕಾರದ ಪ್ರಯತ್ನದಿಂದ ಭಗವಾನ್ ಬುದ್ಧನ ಪವಿತ್ರ ಅವಶೇಷಗಳು ನೂರ ಇಪ್ಪತ್ತೈದು ವರ್ಷಗಳ ನಂತರ ಭಾರತಕ್ಕೆ ಮರಳಿವೆ. ಈ ಅವಶೇಷಗಳನ್ನು ಈಗ ಸಾರ್ವಜನಿಕರ ದರ್ಶನಕ್ಕಾಗಿ ಇರಿಸಲಾಗಿದೆ. ಈ ವರ್ಷವು ಸೌರಾಷ್ಟ್ರದ ಸೋಮನಾಥ ದೇವಾಲಯದ ಪುನರ್ನಿರ್ಮಾಣದ 75 ನೇ ವರ್ಷವನ್ನು ಸಹ ಗುರುತಿಸುತ್ತದೆ. ಸೋಮನಾಥ ದೇವಾಲಯದ ಮೇಲಿನ ದಾಳಿಗಳ ನಂತರದ ಸಾವಿರ ವರ್ಷಗಳ ಪ್ರಯಾಣವು ಭಾರತದ ಧಾರ್ಮಿಕ ಭಕ್ತಿ, ಸನಾತನ ಸಂಸ್ಕೃತಿ ಮತ್ತು ಅಚಲ ನಂಬಿಕೆಯ ಸಂಕೇತವಾಗಿ ನಿಂತಿದೆ. ದೇಶಾದ್ಯಂತ ಜನರು ‘ಸೋಮನಾಥ ಸ್ವಾಭಿಮಾನ ಪರ್ವ’ದಲ್ಲಿ ಭಾಗವಹಿಸಿದ ಉತ್ಸಾಹವು ನಿಜಕ್ಕೂ ಸಾಟಿಯಿಲ್ಲದ್ದು. ಕೆಲವು ಸಮಯದ ಹಿಂದೆ, ರಾಜೇಂದ್ರ ಚೋಳನಿಂದ ಗಂಗೈಕೊಂಡ-ಚೋಳಪುರಂ ಸ್ಥಾಪನೆಯಾಗಿ ಒಂದು ಸಾವಿರ ವರ್ಷಗಳು ಪೂರ್ಣಗೊಂಡಿವೆ. ಈ ಸಂದರ್ಭವೂ ಕೋಟ್ಯಂತರ ಭಾರತೀಯರಿಗೆ ತಮ್ಮ ಗತವೈಭವದ ಬಗ್ಗೆ ಹೆಮ್ಮೆ ಪಡುವ ಅವಕಾಶವನ್ನು ನೀಡಿದೆ.

ಗೌರವಾನ್ವಿತ ಸದಸ್ಯರೇ,

ನಮ್ಮ ರಾಷ್ಟ್ರವು ಪ್ರಾಚೀನ ಜ್ಞಾನದ ಕೇಂದ್ರವಾಗಿದೆ. ಈ ಜ್ಞಾನದ ಸಂಪತ್ತನ್ನು ಸಾವಿರಾರು ವರ್ಷಗಳಿಂದ, ಪೀಳಿಗೆಯಿಂದ ಪೀಳಿಗೆಗೆ ಪ್ರಾಚೀನ ಹಸ್ತಪ್ರತಿಗಳ ರೂಪದಲ್ಲಿ ಸಂರಕ್ಷಿಸಲಾಗಿತ್ತು. ಆದಾಗ್ಯೂ, ವಿದೇಶಿ ಆಕ್ರಮಣಗಳು ಮತ್ತು ಸ್ವಾತಂತ್ರ್ಯದ ನಂತರದ ವರ್ಷಗಳಲ್ಲಿ ಉಂಟಾದ ನಿರ್ಲಕ್ಷ್ಯದಿಂದಾಗಿ, ಈ ಅಮೂಲ್ಯ ಪರಂಪರೆಯು ತೀವ್ರ ನಷ್ಟವನ್ನು ಅನುಭವಿಸಿದೆ. ಈಗ ನನ್ನ ಸರ್ಕಾರವು ಈ ವಿಶಾಲವಾದ ಜ್ಞಾನದ ಭಂಡಾರವನ್ನು ಸಂರಕ್ಷಿಸಲು ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ‘ಜ್ಞಾನ ಭಾರತಂ’ ಮಿಷನ್ ಮೂಲಕ ದೇಶಾದ್ಯಂತ ಪ್ರಾಚೀನ ಹಸ್ತಪ್ರತಿಗಳ ಡಿಜಿಟಲೀಕರಣ ಪ್ರಾರಂಭವಾಗಿದೆ. ಈ ಪ್ರಯತ್ನಗಳು ಭಾರತೀಯ ಜ್ಞಾನ ಪರಂಪರೆಯನ್ನು ಸಂರಕ್ಷಿಸುವಲ್ಲಿ ಮತ್ತು ಭವಿಷ್ಯದಲ್ಲಿ ಅದನ್ನು ಜನರಿಗೆ ತಲುಪಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ.

ಗೌರವಾನ್ವಿತ ಸದಸ್ಯರೇ,

ದೇಶದ ಶ್ರೀಮಂತ ಬುಡಕಟ್ಟು ಪರಂಪರೆಯನ್ನು ಸಂರಕ್ಷಿಸಲು ನನ್ನ ಸರ್ಕಾರವು ಬುಡಕಟ್ಟು ವಸ್ತುಸಂಗ್ರಹಾಲಯಗಳನ್ನು ಸ್ಥಾಪಿಸುತ್ತಿದೆ. ಇದರ ಭಾಗವಾಗಿ, ಛತ್ತೀಸಗಢದಲ್ಲಿ ‘ಶಹೀದ್ ವೀರ್ ನಾರಾಯಣ್ ಸಿಂಗ್ ಬುಡಕಟ್ಟು ಸ್ವಾತಂತ್ರ್ಯ ಹೋರಾಟಗಾರರ ವಸ್ತುಸಂಗ್ರಹಾಲಯ’ವನ್ನು ಇತ್ತೀಚೆಗೆ ಉದ್ಘಾಟಿಸಲಾಯಿತು. ಸಂವಿಧಾನವನ್ನು ‘ಸಂತಾಲಿ’ ಭಾಷೆಗೆ ಅನುವಾದಿಸುವ ಮೂಲಕ ನನ್ನ ಸರ್ಕಾರವು ಬುಡಕಟ್ಟು ಸಮುದಾಯದ ಹೆಮ್ಮೆಯನ್ನು ಹೆಚ್ಚಿಸಿದೆ ಎಂದು ಘೋಷಿಸಲು ನನಗೆ ಸಂತೋಷವಾಗಿದೆ.

ಗೌರವಾನ್ವಿತ ಸದಸ್ಯರೇ,

ನಾವು ನಮ್ಮ ಸಂಪ್ರದಾಯಗಳು ಮತ್ತು ಸಂಸ್ಕೃತಿಯನ್ನು ಗೌರವಿಸಿದಾಗ, ಜಗತ್ತು ಕೂಡ ಅವುಗಳನ್ನು ಗೌರವಿಸುತ್ತದೆ. ಕಳೆದ ವರ್ಷ ಯುನೆಸ್ಕೋ ನಮ್ಮ ದೀಪಾವಳಿ ಹಬ್ಬವನ್ನು ಮಾನವಕುಲದ ಅಮೂರ್ತ ಸಾಂಸ್ಕೃತಿಕ ಪರಂಪರೆಯ ಪಟ್ಟಿಗೆ ಸೇರಿಸಿದೆ. ವಿಶ್ವಾದ್ಯಂತ ದೀಪಾವಳಿಯ ಹೆಚ್ಚುತ್ತಿರುವ ಜನಪ್ರಿಯತೆಯ ಜೊತೆಗೆ, ಯುನೆಸ್ಕೋದ ಈ ಮಾನ್ಯತೆಯು ಎಲ್ಲಾ ಭಾರತೀಯರಿಗೆ ಹೆಮ್ಮೆಯ ವಿಷಯವಾಗಿದೆ.

ಗೌರವಾನ್ವಿತ ಸದಸ್ಯರೇ,

ವಿಭಿನ್ನ ಅಭಿಪ್ರಾಯಗಳು ಮತ್ತು ವೈವಿಧ್ಯಮಯ ದೃಷ್ಟಿಕೋನಗಳ ನಡುವೆಯೂ, ರಾಷ್ಟ್ರಕ್ಕಿಂತ ದೊಡ್ಡದು ಯಾವುದೂ ಇಲ್ಲ ಎಂಬ ವಿಷಯದಲ್ಲಿ ಸರ್ವಾನುಮತವಿದೆ. ಪೂಜ್ಯ ಮಹಾತ್ಮ ಗಾಂಧಿ, ನೆಹರೂ ಜೀ, ಬಾಬಾಸಾಹೇಬ್, ಸರ್ದಾರ್ ಪಟೇಲ್, ಜೆಪಿ ಜೀ, ಲೋಹಿಯಾ ಜೀ, ಪಂಡಿತ್ ದೀನ್ ದಯಾಳ್ ಉಪಾಧ್ಯಾಯ, ಅಟಲ್ ಜೀ ಅವರೆಲ್ಲರೂ ಪ್ರಜಾಪ್ರಭುತ್ವದಲ್ಲಿ ವಿಷಯಗಳ ಬಗ್ಗೆ ಭಿನ್ನಾಭಿಪ್ರಾಯಗಳು ಸ್ವಾಭಾವಿಕ, ಆದರೆ ಎಲ್ಲಾ ಭಿನ್ನಾಭಿಪ್ರಾಯಗಳಿಗಿಂತ ಮಿಗಿಲಾದ ಕೆಲವು ವಿಷಯಗಳಿವೆ ಎಂಬ ನಂಬಿಕೆಯನ್ನು ಹಂಚಿಕೊಂಡಿದ್ದಾರೆ. ವಿಕಸಿತ ಭಾರತದ ಸಂಕಲ್ಪ, ಭಾರತದ ಭದ್ರತೆ, ಆತ್ಮನಿರ್ಭರತೆ, ಸ್ವದೇಶಿ ಅಭಿಯಾನ, ರಾಷ್ಟ್ರೀಯ ಏಕತೆಯ ಪ್ರಯತ್ನಗಳು, ಸ್ವಚ್ಛತೆ ಮತ್ತು ರಾಷ್ಟ್ರಕ್ಕೆ ಸಂಬಂಧಿಸಿದ ಇಂತಹ ಎಲ್ಲಾ ವಿಷಯಗಳಲ್ಲಿ ಸಂಸದರು ಒಗ್ಗಟ್ಟಾಗಿ ನಿಲ್ಲಬೇಕು. ಇದುವೇ ನಮ್ಮ ಸಂವಿಧಾನದ ಆಶಯವಾಗಿದೆ. ಆದ್ದರಿಂದ, ಇಂದು ನಾನು ನಿಮ್ಮೆಲ್ಲರನ್ನೂ ಒತ್ತಾಯಿಸುತ್ತೇನೆ: ಪ್ರತಿಯೊಬ್ಬ ಸಂಸದರೂ ರಾಷ್ಟ್ರದ ಹಿತಾಸಕ್ತಿಯ ವಿಷಯಗಳಲ್ಲಿ ರಾಷ್ಟ್ರದ ಅಭಿವೃದ್ಧಿಯ ಪಾಲುದಾರರಾಗಿ ಏಕೀಕೃತ ನಿಲುವನ್ನು ತೆಗೆದುಕೊಳ್ಳಲಿ ಮತ್ತು ಭಾರತದ ಪ್ರಗತಿಗೆ ಹೊಸ ಶಕ್ತಿಯನ್ನು ತುಂಬಲಿ.

ಗೌರವಾನ್ವಿತ ಸದಸ್ಯರೇ,

ಇಂದು ಭಾರತವು ಭವಿಷ್ಯದತ್ತ ಸಾಗುವ ತನ್ನ ಪ್ರಯಾಣದಲ್ಲಿ ಒಂದು ಪ್ರಮುಖ ಹಂತದಲ್ಲಿದೆ ಎಂಬುದನ್ನು ಎಲ್ಲಾ ನಾಗರಿಕರು ನೋಡಬಹುದು. ಇಂದು ತೆಗೆದುಕೊಳ್ಳುತ್ತಿರುವ ನಿರ್ಧಾರಗಳ ಪ್ರಭಾವವು ಮುಂಬರುವ ವರ್ಷಗಳಲ್ಲಿ ಕಂಡುಬರಲಿದೆ. ವಿಕಸಿತ ಭಾರತದ ಗುರಿಯು ಯಾವುದೇ ಒಂದು ಸರ್ಕಾರಕ್ಕೆ ಅಥವಾ ಒಂದು ಪೀಳಿಗೆಗೆ ಸೀಮಿತವಾಗಿಲ್ಲ. ಇದು ನಿರಂತರ ಪ್ರಯಾಣವಾಗಿದೆ. ಈ ಪ್ರಯಾಣದಲ್ಲಿ ನಮ್ಮೆಲ್ಲರ ಪ್ರಯತ್ನಗಳು, ಶಿಸ್ತು ಮತ್ತು ನಿರಂತರತೆ ಮುಖ್ಯವಾಗಿದೆ. ಮುಂಬರುವ ಕಾಲದಲ್ಲಿ, ರಾಷ್ಟ್ರದ ಪ್ರಗತಿಯು ಅದರ ಸಾಮೂಹಿಕ ನಿರ್ಧಾರದಿಂದ ರೂಪಿಸಲ್ಪಡುತ್ತದೆ. ಸಂಸತ್ತು, ಸರ್ಕಾರ ಮತ್ತು ನಾಗರಿಕರು ಒಟ್ಟಾಗಿ ವಿಕಸಿತ ಭಾರತದ ಸಂಕಲ್ಪವನ್ನು ಪೂರೈಸುತ್ತಾರೆ ಎಂಬ ವಿಶ್ವಾಸ ನನಗಿದೆ. ಭಾರತದ ನಾಗರಿಕರು ರಾಷ್ಟ್ರೀಯ ಹಿತಾಸಕ್ತಿಗೆ ಸರ್ವೋಚ್ಚ ಪ್ರಾಮುಖ್ಯತೆ ನೀಡುತ್ತಾ ಮತ್ತು ಸಾಂವಿಧಾನಿಕ ಮೌಲ್ಯಗಳನ್ನು ಎತ್ತಿಹಿಡಿಯುತ್ತಾ ಮುನ್ನಡೆಯುತ್ತಾರೆ. ಎಲ್ಲಾ ನಾಗರಿಕರು ರಾಷ್ಟ್ರೀಯ ಹಿತಾಸಕ್ತಿ ಮತ್ತು ದೇಶದ ಕಲ್ಯಾಣಕ್ಕಾಗಿ ತಮ್ಮ ಕರ್ತವ್ಯಗಳನ್ನು ನಿರ್ವಹಿಸುತ್ತಾರೆ ಎಂದು ನನಗೆ ನಂಬಿಕೆಯಿದೆ. ಈ ವಿಶ್ವಾಸದೊಂದಿಗೆ, ಮುಂಬರುವ ಯಶಸ್ವಿ ಮತ್ತು ಅರ್ಥಪೂರ್ಣ ಅಧಿವೇಶನಕ್ಕಾಗಿ ನಾನು ಎಲ್ಲಾ ಸಂಸದರಿಗೆ ನನ್ನ ಶುಭ ಹಾರೈಕೆಗಳನ್ನು ತಿಳಿಸುತ್ತೇನೆ.

ಧನ್ಯವಾದಗಳು!

ಜೈ ಹಿಂದ್!

ಜೈ ಭಾರತ್!

 

*****

 

  

 


(रिलीज़ आईडी: 2219650) आगंतुक पटल : 16
इस विज्ञप्ति को इन भाषाओं में पढ़ें: English , Urdu , हिन्दी , Bengali , Gujarati , Odia , Telugu , Malayalam