ರೈಲ್ವೇ ಸಚಿವಾಲಯ
azadi ka amrit mahotsav

ಭಾರತೀಯ ರೈಲ್ವೆಯ ಎಲ್ಲಾ ಹವಾಮಾನಗಳಲ್ಲೂ ಕಾರ್ಯನಿರ್ವಹಿಸುವ ಕಾಶ್ಮೀರ ಕಣಿವೆಯ ಸಂಪರ್ಕವು ಆಹಾರ ಧಾನ್ಯಗಳ ವಿಶ್ವಾಸಾರ್ಹ ಪೂರೈಕೆಯನ್ನು ಖಚಿತಪಡಿಸುತ್ತದೆ ಮತ್ತು ಪ್ರತಿಕೂಲ ಹವಾಮಾನದ ನಡುವೆಯೂ ಲಾಜಿಸ್ಟಿಕ್ಸ್ ವೆಚ್ಚವನ್ನು ಕಡಿತಗೊಳಿಸುತ್ತದೆ


2,768 ಮೆಟ್ರಿಕ್ ಟನ್ ಅಕ್ಕಿಯನ್ನು ಹೊತ್ತ 42 ವ್ಯಾಗನ್‌ ಗಳ ಮೊದಲ ಪೂರ್ಣ ಪ್ರಮಾಣದ ರೇಕ್ ಅನಂತನಾಗ್ ತಲುಪಿದೆ

प्रविष्टि तिथि: 24 JAN 2026 5:56PM by PIB Bengaluru

22 ಜನವರಿ 2026 ರಂದು ಮೊದಲ ಪೂರ್ಣ ಪ್ರಮಾಣದ ಆಹಾರ ಧಾನ್ಯದ (ಅಕ್ಕಿ) ರೇಕ್ ಅನಂತನಾಗ್ ತಲುಪಿತು. ಇದು ಕಾಶ್ಮೀರ ಕಣಿವೆಯ ಸರಕು ಸಾಗಣೆಯಲ್ಲಿ ಒಂದು ಪ್ರಮುಖ ಮೈಲಿಗಲ್ಲಾಗಿದ್ದು, ಈ ಪ್ರದೇಶಕ್ಕೆ ಎಲ್ಲಾ ಹವಾಮಾನಗಳಲ್ಲೂ ರೈಲ್ವೆ ಸಂಪರ್ಕದ ಸಾಮರ್ಥ್ಯವನ್ನು ಇದು ಪ್ರದರ್ಶಿಸುತ್ತದೆ. ಇದೇ ಮೊದಲ ಬಾರಿಗೆ ಎನ್ನುವಂತೆ, ಭಾರತೀಯ ಆಹಾರ ನಿಗಮದ (FCI) ಜೊತೆಗಿನ ಸತತ ಸಮನ್ವಯದೊಂದಿಗೆ ಸಾಗಾಟ ವೆಚ್ಚವನ್ನು ಕಡಿಮೆ ಮಾಡಲು, 2,768 ಮೆಟ್ರಿಕ್ ಟನ್ ಅಕ್ಕಿಯನ್ನು ಹೊತ್ತ 42 ವ್ಯಾಗನ್‌ ಗಳ ಸಂಪೂರ್ಣ ರೇಕ್ ಅನ್ನು ರೈಲಿನ ಮೂಲಕ ಅನಂತನಾಗ್ ಸರಕು ಶೆಡ್‌ಗೆ ಸಾಗಿಸಲಾಯಿತು.

ಈ ಹಿಂದೆ, 1,384 ಮೆಟ್ರಿಕ್ ಟನ್ ಆಹಾರ ಧಾನ್ಯವನ್ನು ಹೊತ್ತ ಕೇವಲ 21 ವ್ಯಾಗನ್‌ಗಳ ಮಿನಿ ರೇಕ್‌ ಗಳನ್ನು ಮಾತ್ರ ರೈಲಿನ ಮೂಲಕ ಸಾಗಿಸಲಾಗುತ್ತಿತ್ತು. ಆದರೆ, ಈ ಬಾರಿ ಪೂರ್ಣ ಪ್ರಮಾಣದ ರೇಕ್ ಅನ್ನು ಜನವರಿ 21 ರಂದು ಪಂಜಾಬ್‌ ನ ಸಂಗ್ರೂರ್ ರೈಲ್ವೆ ಟರ್ಮಿನಲ್‌ನಿಂದ ಯಶಸ್ವಿಯಾಗಿ ಲೋಡ್ ಮಾಡಿ, 24 ಗಂಟೆಗಳ ಒಳಗೆ ಅನಂತನಾಗ್ ತಲುಪಿಸಲಾಯಿತು. ಒಂದು ದಿನದ ಹಿಂದೆ ಅನ್ಲೋಡಿಂಗ್ ಚಟುವಟಿಕೆಗಳಿಗೆ ಅಡ್ಡಿಪಡಿಸಿದ್ದ ಪ್ರತಿಕೂಲ ಹವಾಮಾನದ ನಡುವೆಯೂ, ಈ ರೇಕ್ ಅನ್ನು ಯಶಸ್ವಿಯಾಗಿ ನಿರ್ವಹಿಸಲಾಯಿತು. ಇದು ಕಣಿವೆಯ ಆಹಾರ ಧಾನ್ಯ ಪೂರೈಕೆ ಸರಪಳಿ ಮತ್ತು ವಿತರಣಾ ಜಾಲಕ್ಕೆ ಗಮನಾರ್ಹ ಉತ್ತೇಜನ ನೀಡಿದೆ.

ಈ ಮೈಲಿಗಲ್ಲು ಕಾಶ್ಮೀರ ಕಣಿವೆಯ ಆಹಾರ ಧಾನ್ಯ ವಿತರಣಾ ಜಾಲವನ್ನು ಬಲಪಡಿಸುವಲ್ಲಿ ಒಂದು ಪ್ರಮುಖ ಆರಂಭವಾಗಿದೆ. ಮಿನಿ ರೇಕ್‌ ಗಳು ಮತ್ತು ರಸ್ತೆ ಸಾರಿಗೆಯಿಂದ ಪೂರ್ಣ ಪ್ರಮಾಣದ ರೈಲ್ವೆ ವ್ಯಾಗನ್‌ ಗಳ ಮೂಲಕ ಸಾಗಾಟಕ್ಕೆ ಬದಲಾಗಿರುವುದು, ಒಟ್ಟಾರೆ ಸಾಗಾಟ ವೆಚ್ಚವನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ. ಇದರ ಜೊತೆಗೆ, ಅಗತ್ಯ ವಸ್ತುಗಳ ವೇಗವಾದ ಮತ್ತು ಹೆಚ್ಚು ವಿಶ್ವಾಸಾರ್ಹ ಸಾಗಾಟವನ್ನು ಇದು ಖಚಿತಪಡಿಸುತ್ತದೆ. ಇದು ವಿಶೇಷವಾಗಿ ಪ್ರತಿಕೂಲ ಹವಾಮಾನದ ಸಮಯದಲ್ಲಿ ಕಣಿವೆಯಲ್ಲಿ ಸಾಕಷ್ಟು ಬಫರ್ ಸ್ಟಾಕ್ (ಕಾಯ್ದಿರಿಸಿದ ದಾಸ್ತಾನು) ಕಾಯ್ದುಕೊಳ್ಳಲು ಸಹಾಯ ಮಾಡುತ್ತದೆ ಮತ್ತು ಸ್ಥಳೀಯ ಕುಟುಂಬಗಳಿಗೆ ಆಹಾರ ಧಾನ್ಯಗಳ ಲಭ್ಯತೆಯನ್ನು ಸುಧಾರಿಸುತ್ತದೆ.

ರಾಷ್ಟ್ರೀಯ ಹೆದ್ದಾರಿಗಳಲ್ಲಿ ಭಾರಿ ಟ್ರಕ್‌ ಗಳ ಸಂಚಾರದ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವುದು ಪರಿಸರಕ್ಕೆ ಪ್ರಯೋಜನಕಾರಿಯಾಗಿದೆ ಮತ್ತು ಕಾರ್ಯಕ್ಷಮತೆಯನ್ನು ಹೆಚ್ಚಿಸುತ್ತದೆ. ಸೇಬು, ಸಿಮೆಂಟ್, ರಸಗೊಬ್ಬರ ಮತ್ತು ಈಗ ಆಹಾರ ಧಾನ್ಯಗಳ ಯಶಸ್ವಿ ಸಾಗಾಟದ ಹಾದಿಯಲ್ಲಿ, ರೈಲ್ವೆ ಆಧಾರಿತ ಈ ಸಾಗಾಟ ವ್ಯವಸ್ಥೆಯು ಈ ಪ್ರದೇಶದಲ್ಲಿ ನಿರಂತರ ಆರ್ಥಿಕ ಚಟುವಟಿಕೆ, ಸ್ಥಿತಿಸ್ಥಾಪಕತ್ವ ಮತ್ತು ದೀರ್ಘಕಾಲದ ಪೂರೈಕೆ ಸರಪಳಿಯ ಸ್ಥಿರತೆಯನ್ನು ಬೆಂಬಲಿಸುತ್ತಿದೆ.

ಈ ಬೆಳವಣಿಗೆಗಳು ಸ್ವತಂತ್ರ ಭಾರತದ ಅತ್ಯಂತ ಮಹತ್ವಾಕಾಂಕ್ಷೆಯ ರೈಲ್ವೆ ಎಂಜಿನಿಯರಿಂಗ್ ಯೋಜನೆಗಳಲ್ಲಿ ಒಂದಾದ ಉಧಂಪುರ-ಶ್ರೀನಗರ-ಬಾರಾಮುಲ್ಲಾ ರೈಲು ಲಿಂಕ್ (USBRL) ಯೋಜನೆಯ ಪರಿವರ್ತಕ ಪ್ರಭಾವವನ್ನು ಒತ್ತಿಹೇಳುತ್ತವೆ. ಕಣಿವೆಯು ತೀವ್ರ ಹಿಮಪಾತ ಮತ್ತು ಚಳಿಗಾಲದ ಕಠಿಣ ಪರಿಸ್ಥಿತಿಗಳನ್ನು ಎದುರಿಸುತ್ತಿದ್ದರೂ ಸಹ, ಸುಧಾರಿತ ರೈಲು ಸಂಪರ್ಕವು ವ್ಯಾಪಾರ ಮತ್ತು ಸಾಗಾಟ ವ್ಯವಸ್ಥೆಯನ್ನು ಬಲಪಡಿಸುತ್ತಿದೆ. ಅಗತ್ಯ ವಸ್ತುಗಳ ಪೂರೈಕೆಯಲ್ಲಿ ಹೆಚ್ಚಿನ ವಿಶ್ವಾಸಾರ್ಹತೆಯನ್ನು ಖಚಿತಪಡಿಸುವ ಮೂಲಕ ಇದು ರೈತರು, ವ್ಯಾಪಾರಿಗಳು ಮತ್ತು ಸಾಮಾನ್ಯ ಕುಟುಂಬಗಳಿಗೆ ನೇರ ಪ್ರಯೋಜನವನ್ನು ನೀಡುತ್ತಿದೆ.

 

*****


(रिलीज़ आईडी: 2218256) आगंतुक पटल : 8
इस विज्ञप्ति को इन भाषाओं में पढ़ें: English , Urdu , हिन्दी , Gujarati , Malayalam