ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ
azadi ka amrit mahotsav

ಗೋವಾದಲ್ಲಿ ಜಾಗತಿಕ ಇಂಧನ ನಾಯಕತ್ವವನ್ನು ಒಂದುಗೂಡಿಸಲಿರುವ ಭಾರತ ಇಂಧನ ಸಪ್ತಾಹ 2026: ಶ್ರೀ ಹರ್ ದೀಪ್ ಎಸ್ ಪುರಿ

प्रविष्टि तिथि: 23 JAN 2026 6:05PM by PIB Bengaluru

2026ರ ಜನವರಿ 27–30 ರವರೆಗೆ ಗೋವಾದ ಒ ಎನ್‌ ಜಿ ಸಿ ಎಟಿಐನಲ್ಲಿ ನಡೆಯಲಿರುವ ಭಾರತ ಇಂಧನ ಸಪ್ತಾಹ (ಐಇಡಬ್ಲ್ಯೂ) 2026, ಜಾಗತಿಕ ಇಂಧನ ವಲಯದ ನಿರ್ಣಾಯಕ ಸಂದರ್ಭದಲ್ಲಿ ಜಾಗತಿಕ ಇಂಧನ ಸಚಿವರು, ಉದ್ಯಮದ ಮುಖಂಡರು, ನೀತಿ ನಿರೂಪಕರು, ಹಣಕಾಸು ಸಂಸ್ಥೆಗಳು, ಶೈಕ್ಷಣಿಕ ವಲಯ ಮತ್ತು ತಂತ್ರಜ್ಞಾನ ಪೂರೈಕೆದಾರರನ್ನು ಒಂದೆಡೆ ಸೇರಿಸಲಿದೆ ಎಂದು ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವರಾದ ಶ್ರೀ ಹರ್ ದೀಪ್ ಸಿಂಗ್ ಪುರಿ ಹೇಳಿದರು. ಅವರು ಇಂದು ಐಇಡಬ್ಲ್ಯೂ 2026 ಕುರಿತ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು. ಭಾರತ ಇಂಧನ ಸಪ್ತಾಹವನ್ನು ವರ್ಷದ ಮೊದಲ ಪ್ರಮುಖ ಅಂತಾರಾಷ್ಟ್ರೀಯ ಇಂಧನ ಕಾರ್ಯಕ್ರಮ ಎಂದು ಬಣ್ಣಿಸಿದ ಸಚಿವರು, ಈ ವೇದಿಕೆಯು ಇಂಧನ ಭದ್ರತೆಯನ್ನು ಬಲಪಡಿಸುವುದು, ಹೂಡಿಕೆಯನ್ನು ಉತ್ತೇಜಿಸುವುದು ಮತ್ತು ಪ್ರಾಯೋಗಿಕ ಡಿಕಾರ್ಬೊನೈಸೇಶನ್ ಮಾರ್ಗಗಳನ್ನು ಮುನ್ನಡೆಸುವತ್ತ ಗಮನ ಹರಿಸಲಿದೆ ಎಂದರು.

ಈ ಕಾರ್ಯಕ್ರಮದ ಬೆಳೆಯುತ್ತಿರುವ ಜಾಗತಿಕ ಘನತೆಯನ್ನು ಒತ್ತಿ ಹೇಳಿದ ಶ್ರೀ ಪುರಿ, ಭಾರತ ಇಂಧನ ಸಪ್ತಾಹ ಪ್ರಾರಂಭವಾದಾಗಿನಿಂದ ವರ್ಷದಿಂದ ವರ್ಷಕ್ಕೆ ಗಣನೀಯವಾಗಿ ವಿಸ್ತರಿಸಿದೆ ಎಂದರು. 2023ರ ಉದ್ಘಾಟನಾ ಆವೃತ್ತಿಯು ಸುಮಾರು 30,000 ಪ್ರತಿನಿಧಿಗಳು ಮತ್ತು 316 ಪ್ರದರ್ಶಕರ ಭಾಗವಹಿಸುವಿಕೆಗೆ ಸಾಕ್ಷಿಯಾಗಿದ್ದರೆ, ಈ ಕಾರ್ಯಕ್ರಮವು 2024ರಲ್ಲಿ 45,000ಕ್ಕೂ ಹೆಚ್ಚು ಮಂದಿಯ ಭಾಗವಹಿಸುವಿಕೆ ಮತ್ತು 2025ರಲ್ಲಿ 68,000 ಮಂದಿ ಭಾಗವಹಿಸುವಿಕೆಯವರೆಗೆ ಬೆಳೆಯಿತು. ಭಾರತ ಇಂಧನ ಸಪ್ತಾಹ 2026 ಇಲ್ಲಿಯವರೆಗಿನ ಅತಿದೊಡ್ಡ ಆವೃತ್ತಿಯಾಗುವ ನಿರೀಕ್ಷೆಯಿದೆ, ಇದರಲ್ಲಿ 75,000ಕ್ಕೂ ಹೆಚ್ಚು ಪ್ರತಿನಿಧಿಗಳು, 180 ಅಂತರರಾಷ್ಟ್ರೀಯ ಪ್ರದರ್ಶಕರು ಸೇರಿದಂತೆ 600ಕ್ಕೂ ಹೆಚ್ಚು ಪ್ರದರ್ಶಕರು, 500ಕ್ಕೂ ಹೆಚ್ಚು ಜಾಗತಿಕ ಭಾಷಣಕಾರರು ಮತ್ತು 120ಕ್ಕೂ ಹೆಚ್ಚು ಸಮ್ಮೇಳನ ಗೋಷ್ಠಿಗಳು ಇರಲಿವೆ. ಈ ಭಾಗವಹಿಸುವಿಕೆಯ ಪ್ರಮಾಣ ಮತ್ತು ವೈವಿಧ್ಯತೆಯು ಜಾಗತಿಕ ಇಂಧನ ಸಂವಾದವನ್ನು ರೂಪಿಸುವಲ್ಲಿ ಭಾರತದ ಬೆಳೆಯುತ್ತಿರುವ ನಾಯಕತ್ವದ ಪಾತ್ರವನ್ನು ಪ್ರತಿಬಿಂಬಿಸುತ್ತದೆ ಎಂದು ಸಚಿವರು ಒತ್ತಿಹೇಳಿದರು.

ಯುಎಇ, ಕೆನಡಾ, ನೆದರ್ಲ್ಯಾಂಡ್ಸ್, ಓಮನ್, ಬ್ರೂನಿ, ಮ್ಯಾನ್ಮಾರ್, ಟಾಂಜಾನಿಯಾ ಮತ್ತು ಇತರ ದೇಶಗಳ 17 ಸಚಿವರು ಮತ್ತು ಉಪ ಸಚಿವರು ತಮ್ಮ ಭಾಗವಹಿಸುವಿಕೆಯನ್ನು ಖಚಿತಪಡಿಸಿದ್ದಾರೆ, ಜೊತೆಗೆ ಅಂತರರಾಷ್ಟ್ರೀಯ ಇಂಧನ ವೇದಿಕೆ, ಬಿಮ್‌ಸ್ಟೆಕ್ ಮತ್ತು ಯುರೇಷಿಯನ್ ಆರ್ಥಿಕ ಒಕ್ಕೂಟದಂತಹ ಅಂತಾರಾಷ್ಟ್ರೀಯ ಸಂಸ್ಥೆಗಳು ಭಾಗವಹಿಸಲಿವೆ ಎಂದು ಶ್ರೀ ಪುರಿ ತಿಳಿಸಿದರು. ಈ ಪ್ರದರ್ಶನವನ್ನು ಪ್ರಮುಖ ಸಾರ್ವಜನಿಕ ವಲಯದ ಉದ್ಯಮಗಳು ಆಯೋಜಿಸುವ 11 ವಿಷಯಾಧಾರಿತ ವಲಯಗಳಲ್ಲಿ ಆಯೋಜಿಸಲಾಗುವುದು. ಇದು ಡಿಜಿಟಲೀಕರಣ ಮತ್ತು ಕೃತಕ ಬುದ್ಧಿಮತ್ತೆ, ಹೈಡ್ರೋಜನ್, ನವೀಕರಿಸಬಹುದಾದ ಇಂಧನ, ಪೆಟ್ರೋಕೆಮಿಕಲ್ಸ್, ಜೈವಿಕ ಇಂಧನಗಳು, ಎಲ್‌ ಎನ್‌ ಜಿ ಪರಿಸರ ವ್ಯವಸ್ಥೆ, ನಗರ ಅನಿಲ  ವಿತರಣೆ, ಮೇಕ್ ಇನ್ ಇಂಡಿಯಾ ಮತ್ತು ನೆಟ್-ಝೀರೋ ಪರಿಹಾರಗಳಂತಹ ಕ್ಷೇತ್ರಗಳನ್ನು ಒಳಗೊಂಡಿರುತ್ತದೆ; ಪರಮಾಣು ಇಂಧನ ವಲಯ ಮತ್ತು ಸುಸ್ಥಿರ ವಿಮಾನಯಾನ ಇಂಧನ ವಲಯವನ್ನು ಹೊಸದಾಗಿ ಸೇರಿಸಲಾಗಿದೆ ಎಂದು ಅವರು ಹೇಳಿದರು.

ಕಾರ್ಯತಂತ್ರದ ಸಮ್ಮೇಳನ ಕಾರ್ಯಕ್ರಮದ ಬಗ್ಗೆ ಪ್ರಸ್ತಾಪಿಸಿದ ಸಚಿವರು, ಭಾರತ ಇಂಧನ ಸಪ್ತಾಹ 2026 ಜಾಗತಿಕ ಆದ್ಯತೆಗಳು ಮತ್ತು ಭಾರತದ ವಿಕಸನಗೊಳ್ಳುತ್ತಿರುವ ನಾಯಕತ್ವದ ಪಾತ್ರವನ್ನು ಪ್ರತಿಬಿಂಬಿಸುವ 10 ಕಾರ್ಯತಂತ್ರದ ವಿಷಯಗಳ ಸುತ್ತ ರಚನೆಯಾಗಲಿದೆ ಎಂದು ಹೇಳಿದರು. ಈ ಸಮ್ಮೇಳನವು ಇಂಧನ ಸಚಿವರು ಮತ್ತು ಹಿರಿಯ ನೀತಿ ನಿರೂಪಕರನ್ನು ಒಟ್ಟುಗೂಡಿಸುವ ಉದ್ಘಾಟನಾ ಅಧಿವೇಶನ ಸೇರಿದಂತೆ ನಾಲ್ಕು ಸಚಿವ ಮಟ್ಟದ ಅಧಿವೇಶನಗಳನ್ನು ಹೊಂದಿರುತ್ತದೆ, ಜೊತೆಗೆ ಜಾಗತಿಕ ಉದ್ಯಮದ ಮುಖಂಡರು ಮತ್ತು ತಜ್ಞರನ್ನು ಒಳಗೊಂಡ 47 ನಾಯಕತ್ವ ಮತ್ತು ಸ್ಪಾಟ್‌ಲೈಟ್ ಪ್ಯಾನೆಲ್ ಚರ್ಚೆಗಳನ್ನು ಒಳಗೊಂಡಿರುತ್ತದೆ. ಹೆಚ್ಚುವರಿಯಾಗಿ, ತಂತ್ರಜ್ಞಾನ, ಮಾರುಕಟ್ಟೆಗಳು ಮತ್ತು ಸುಸ್ಥಿರತೆಯ ಮೇಲೆ ಕೇಂದ್ರೀಕರಿಸುವ ಜಾಗತಿಕ ಇಂಧನ ನಾಯಕರೊಂದಿಗೆ ಮುಖಾಮುಖಿ ಸಂವಾದಗಳಾಗಿ ಐದು 'ಇಂಧನ ಮಾತುಕತೆ'ಗಳನ್ನು ನಡೆಸಲಾಗುವುದು ಎಂದು ಅವರು ಹೇಳಿದರು.

ದೇಶೀಯ ಉತ್ಪಾದನೆಗೆ ಸರ್ಕಾರದ ಗಮನವನ್ನು ಒತ್ತಿಹೇಳುತ್ತಾ, ಇಂಜಿನಿಯರ್ಸ್ ಇಂಡಿಯಾ ಲಿಮಿಟೆಡ್ ನೇತೃತ್ವದ 'ಮೇಕ್ ಇನ್ ಇಂಡಿಯಾ' ಮತ್ತು ದೇಶೀಯ ಉತ್ಪಾದನಾ ಪೆವಿಲಿಯನ್ ಎಂ ಎಸ್ ಎಂ ಇ ಗಳು, ಮಾರಾಟಗಾರರು ಮತ್ತು ನವೋದ್ಯಮಗಳೊಂದಿಗೆ ಸಹಯೋಗವನ್ನು ಉತ್ತೇಜಿಸುತ್ತದೆ, ಇದು ನಿರ್ಣಾಯಕ ಉಪಕರಣಗಳ ಸ್ಥಳೀಕರಣದ ಮೂಲಕ 'ಆತ್ಮನಿರ್ಭರ ಭಾರತ'ದ ದೃಷ್ಟಿಕೋನವನ್ನು ಬೆಂಬಲಿಸುತ್ತದೆ ಎಂದು ಶ್ರೀ ಪುರಿ ಹೇಳಿದರು. ಈ ಪೆವಿಲಿಯನ್ ತಂತ್ರಜ್ಞಾನ ಆಧಾರಿತ ರೂಪಾಂತರ ಮತ್ತು ಸುಸ್ಥಿರತೆಯನ್ನು ಎತ್ತಿ ತೋರಿಸುವ ದೈನಂದಿನ ಇಂಧನ ಮಾತುಕತೆಗಳನ್ನು ಸಹ ಆಯೋಜಿಸುತ್ತದೆ, ಹಾಗೆಯೇ ಜಪಾನ್, ಅಮೆರಿಕ, ಜರ್ಮನಿ, ಯುಕೆ, ನೆದರ್ಲ್ಯಾಂಡ್ಸ್, ನಾರ್ವೆ, ಕೆನಡಾ, ರಷ್ಯಾ ಮತ್ತು ಚೀನಾ ಸೇರಿದಂತೆ 11 ದೇಶಗಳ ಪೆವಿಲಿಯನ್‌ ಗಳು ಅಂತರರಾಷ್ಟ್ರೀಯ ತೊಡಗಿಸಿಕೊಳ್ಳುವಿಕೆಯನ್ನು ಮತ್ತಷ್ಟು ಬಲಪಡಿಸುತ್ತವೆ ಎಂದು ಅವರು ಹೇಳಿದರು.

ಭಾರತ ಇಂಧನ ಸಪ್ತಾಹ 2026 ದೃಢವಾದ ವ್ಯಾಪಾರ ಫಲಿತಾಂಶಗಳಿಗೆ ವೇದಿಕೆಯಾಗಿ ಕಾರ್ಯನಿರ್ವಹಿಸುತ್ತದೆ, ಈ ಕಾರ್ಯಕ್ರಮದ ಸಮಯದಲ್ಲಿ ಹಲವಾರು ಪ್ರಮುಖ ಒಪ್ಪಂದಗಳು ಮತ್ತು ತಿಳುವಳಿಕಾ ಪತ್ರಗಳಿಗೆ ಸಹಿ ಹಾಕಲು ಪ್ರಸ್ತಾಪಿಸಲಾಗಿದೆ ಎಂದು ಶ್ರೀ ಪುರಿ ತಿಳಿಸಿದರು. ಇವುಗಳಲ್ಲಿ ಒ ಎನ್‌ ಜಿ ಸಿ, ಜಪಾನ್‌ ನ ಮಿತ್ಸುಯಿ ಓ.ಎಸ್.ಕೆ. ಲೈನ್ಸ್ ಮತ್ತು ದಕ್ಷಿಣ ಕೊರಿಯಾದ ಸ್ಯಾಮ್‌ಸಂಗ್ ಹೆವಿ ಇಂಡಸ್ಟ್ರೀಸ್ ಒಳಗೊಂಡ ಹಡಗು ನಿರ್ಮಾಣ ಒಪ್ಪಂದಗಳು; ಬ್ರೆಜಿಲಿಯನ್ ಕಚ್ಚಾ ತೈಲ ಪೂರೈಕೆಗಾಗಿ ಬಿಪಿಸಿಎಲ್ ಮತ್ತು ಪೆಟ್ರೋಬ್ರಾಸ್ ನಡುವಿನ ಅವಧಿ ಒಪ್ಪಂದ; ಜಾಗತಿಕ ಅಪ್‌ಸ್ಟ್ರೀಮ್ ಅವಕಾಶಗಳಿಗಾಗಿ ಬಿ ಪಿ ಆರ್‌ ಎಲ್ ಮತ್ತು ಶೆಲ್ ನಡುವಿನ ಸಹಯೋಗ ಒಪ್ಪಂದಗಳು; ಎಲ್‌ ಎನ್‌ ಜಿ ಸೋರ್ಸಿಂಗ್‌ ಗಾಗಿ ಒಐಎಲ್, ಎನ್‌ ಆರ್‌ ಎಲ್ ಮತ್ತು ಟೋಟಲ್ ಎನರ್ಜಿಸ್ ಒಳಗೊಂಡ ಒಪ್ಪಂದಗಳು; ಮತ್ತು ಒಡಿಶಾದ ಪಾರದೀಪ್‌ ನಲ್ಲಿ 200 ಕೆಟಿಪಿಎ ಸುಸ್ಥಿರ ವಿಮಾನಯಾನ ಇಂಧನ ಯೋಜನೆಯನ್ನು ಸ್ಥಾಪಿಸಲು ಎನ್‌ ಆರ್‌ ಎಲ್ ಮತ್ತು ಟೋಟಲ್ ಎನರ್ಜಿಸ್ ನಡುವಿನ ಸಹಯೋಗ ಸೇರಿವೆ ಎಂದು ಹೇಳಿದರು.

ಉನ್ನತ ಮಟ್ಟದ ತೊಡಗಿಸಿಕೊಳ್ಳುವಿಕೆಯ ಮಹತ್ವವನ್ನು ಒತ್ತಿ ಹೇಳಿದ ಸಚಿವರು, ಮುಖ್ಯ ಸಮ್ಮೇಳನದ ಜೊತೆಗೆ ಪ್ರಮುಖ ಕಾರ್ಯಕ್ರಮಗಳು ಮತ್ತು ದುಂಡುಮೇಜಿನ ಸಭೆಗಳ ಸರಣಿಯನ್ನು ಆಯೋಜಿಸಲಾಗುವುದು ಎಂದು ಹೇಳಿದರು. ಇವುಗಳಲ್ಲಿ 9ನೇ ಪ್ರಧಾನ ಮಂತ್ರಿಯವರ ದುಂಡುಮೇಜಿನ ಸಭೆ ಸೇರಿದೆ, ಅಲ್ಲಿ ಗೌರವಾನ್ವಿತ ಪ್ರಧಾನಮಂತ್ರಿಯವರು ಜಾಗತಿಕ ಸಿಇಒಗಳು, ಭಾರತೀಯ ಸಾರ್ವಜನಿಕ ವಲಯದ ಉದ್ಯಮಗಳು ಮತ್ತು ಪ್ರಮುಖ ಜಾಗತಿಕ ಇಂಧನ ಮತ್ತು ತಂತ್ರಜ್ಞಾನ ಕಂಪನಿಗಳ ಹಿರಿಯ ಕಾರ್ಯನಿರ್ವಾಹಕರು ಸೇರಿದಂತೆ ಖಾಸಗಿ ವಲಯದ ನಾಯಕರೊಂದಿಗೆ ಸಂವಾದ ನಡೆಸಲಿದ್ದಾರೆ. ಈ ಪ್ರಮುಖ ಕಾರ್ಯಕ್ರಮವು ಇಂಧನ ವಲಯದಲ್ಲಿ ಕಾರ್ಯತಂತ್ರದ ಪಾಲುದಾರಿಕೆ ಮತ್ತು ಹೂಡಿಕೆ ಆಧಾರಿತ ಬೆಳವಣಿಗೆಯನ್ನು ಉತ್ತೇಜಿಸುವ ಭಾರತದ ಬದ್ಧತೆಯನ್ನು ಒತ್ತಿಹೇಳುತ್ತದೆ ಎಂದರು.

ಇತರ ಪ್ರಮುಖ ಕಾರ್ಯಕ್ರಮಗಳಲ್ಲಿ ಭಾರತ-ಅರಬ್ ಇಂಧನ ಸಂವಾದ (ಇದನ್ನು ಗೌರವಾನ್ವಿತ ಸಚಿವರು ಅಂತಾರಾಷ್ಟ್ರೀಯ ಇಂಧನ ವೇದಿಕೆಯೊಂದಿಗೆ ಸಹ-ಅಧ್ಯಕ್ಷತೆ ವಹಿಸುತ್ತಾರೆ); ಟೋಕಿಯೊ ಅಧಿವೇಶನದ ಮುಂದುವರಿದ ಭಾಗವಾಗಿ ಭಾರತ-ಜಪಾನ್ ಇಂಧನ ದುಂಡುಮೇಜಿನ ಸಭೆ; ಜಿಯೋ ಥರ್ಮಲ್‌ ಶಕ್ತಿ ಮತ್ತು ಕಾರ್ಬನ್ ಕ್ಯಾಪ್ಚರ್, ಬಳಕೆ ಮತ್ತು ಸಂಗ್ರಹಣೆಯ ಮೇಲೆ ಕೇಂದ್ರೀಕರಿಸುವ ಭಾರತ-ಐಸ್ಲ್ಯಾಂಡ್ ದುಂಡುಮೇಜಿನ ಸಭೆ; ಭಾರತ-ನೆದರ್ಲ್ಯಾಂಡ್ಸ್ ಇಂಧನ ದುಂಡುಮೇಜಿನ ಸಭೆ; ಮತ್ತು ಭಾರತ-ಅಮೆರಿಕ ವ್ಯಾಪಾರ ಮತ್ತು ಇಂಧನ ವಲಯದಲ್ಲಿ ಹೂಡಿಕೆ ಸಂಬಂಧಗಳನ್ನು ಬಲಪಡಿಸುವ ಗುರಿಯನ್ನು ಹೊಂದಿರುವ ಯು ಎಸ್‌ ಐ ಬಿ ಸಿ ಮತ್ತು ಯು ಎಸ್‌ ಐ ಎಸ್‌ ಪಿ ಎಫ್ ಜೊತೆಗಿನ ದುಂಡುಮೇಜಿನ ಸಭೆಗಳು ಸೇರಿವೆ ಎಂದು ಶ್ರೀ ಪುರಿ ತಿಳಿಸಿದರು.

ಭಾರತ ಇಂಧನ ಸಪ್ತಾಹ 2026 ನಾವೀನ್ಯತೆ ಮತ್ತು ನವೋದ್ಯಮ ಭಾಗವಹಿಸುವಿಕೆಗೆ 'ಅವಿನಿಯಾ 2026' – ಸ್ಟಾರ್ಟ್-ಅಪ್ ಚಾಲೆಂಜ್, ಜಾಗತಿಕ ಭಾಗವಹಿಸುವಿಕೆಯೊಂದಿಗೆ 'ವಸುಧಾ 3.0', ಮತ್ತು ಐಐಟಿಗಳನ್ನು ಒಳಗೊಂಡ 'ಹ್ಯಾಕಥಾನ್ ಚಾಲೆಂಜ್ 2026' ನಂತಹ ಉಪಕ್ರಮಗಳ ಮೂಲಕ ಬಲವಾದ ಒತ್ತು ನೀಡಲಿದೆ. ಈ ಸವಾಲುಗಳು ಎಐ-ಆಧಾರಿತ ಅನ್ವೇಷಣೆ, ಇಂಧನ ದಕ್ಷತೆ, ಹೈಡ್ರೋಜನ್ ಆರ್ಥಿಕತೆ ಮತ್ತು ಮರುಬಳಕೆ ಆರ್ಥಿಕತೆ ಸೇರಿದಂತೆ ನಿರ್ಣಾಯಕ ಇಂಧನ ವಲಯದ ಸವಾಲುಗಳ ಮೇಲೆ ಕೇಂದ್ರೀಕರಿಸುತ್ತವೆ ಎಂದು ಸಚಿವರು ಹೇಳಿದರು.

ಜೈವಿಕ ಇಂಧನ ಹಣಕಾಸು ಕುರಿತ ಶ್ವೇತಪತ್ರ ಮತ್ತು ಸುಸ್ಥಿರ ವಿಮಾನಯಾನ ಇಂಧನ ಮೈಕ್ರೋಸೈಟ್ ಸೇರಿದಂತೆ ಹಲವಾರು ಪ್ರಮುಖ ಜ್ಞಾನ ಉತ್ಪನ್ನಗಳನ್ನು ಕಾರ್ಯಕ್ರಮದ ಸಮಯದಲ್ಲಿ ಬಿಡುಗಡೆ ಮಾಡಲಾಗುವುದು, ಜೊತೆಗೆ ಐಇಎ ಮತ್ತು ಪಿಪಿಎಸಿ ವತಿಯಿಂದ 'ಇಂಡಿಯಾ ಬಯೋಎನರ್ಜಿ ಔಟ್‌ಲುಕ್ 2030' ಬಿಡುಗಡೆ ಮಾಡಲಾಗುವುದು ಎಂದು ಶ್ರೀ ಪುರಿ ಹೇಳಿದರು. ಈ ಜ್ಞಾನ ಉಪಕ್ರಮಗಳು ಉದಯೋನ್ಮುಖ ಇಂಧನ ವಲಯಗಳಲ್ಲಿ ತಿಳುವಳಿಕೆಯುಳ್ಳ ನೀತಿ ನಿರೂಪಣೆ ಮತ್ತು ಹೂಡಿಕೆ ನಿರ್ಧಾರಗಳನ್ನು ಬೆಂಬಲಿಸುತ್ತವೆ ಎಂದು ಅವರು ಹೇಳಿದರು.

ಭಾರತ ಇಂಧನ ಸಪ್ತಾಹ 2026 ಇಂಧನ ಭದ್ರತೆ, ಆರ್ಥಿಕ ಬೆಳವಣಿಗೆ ಮತ್ತು ಸುಸ್ಥಿರತೆಯನ್ನು ಸಮತೋಲನಗೊಳಿಸುವ ಭಾರತದ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ, ಜೊತೆಗೆ ದೇಶವನ್ನು ಪ್ರಮುಖ ಜಾಗತಿಕ ಇಂಧನ ಕೇಂದ್ರವಾಗಿ ಮತ್ತು ಜಾಗತಿಕ ಇಂಧನ ಸಂಕ್ರಮಣ ಕಾಲದಲ್ಲಿ ವಿಶ್ವಾಸಾರ್ಹ ಧ್ವನಿಯಾಗಿ ಗುರುತಿಸುತ್ತದೆ ಎಂದು ಸಚಿವರು ಹೇಳಿದರು.

 

*****

 


(रिलीज़ आईडी: 2217942) आगंतुक पटल : 20
इस विज्ञप्ति को इन भाषाओं में पढ़ें: English , Urdu , Marathi , हिन्दी , Gujarati , Tamil , Malayalam