ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಜೂನ್ 23 ರಂದು ಕೇರಳಕ್ಕೆ ಪ್ರಧಾನಮಂತ್ರಿ ಭೇಟಿ


ತಿರುವನಂತಪುರಂನಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ, ಉದ್ಘಾಟನೆ ಮತ್ತು ಚಾಲನೆ ನೀಡಲಿರುವ ಪ್ರಧಾನಮಂತ್ರಿ

ರೈಲು ಸಂಪರ್ಕ, ನಗರ ಜೀವನೋಪಾಯ, ವಿಜ್ಞಾನ ಮತ್ತು ನಾವೀನ್ಯತೆ, ನಾಗರಿಕ ಕೇಂದ್ರಿತ ಸೇವೆಗಳು ಮತ್ತು ಸುಧಾರಿತ ಆರೋಗ್ಯ ರಕ್ಷಣೆ ಸೇರಿದಂತೆ ಪ್ರಮುಖ ಕ್ಷೇತ್ರಗಳ ಯೋಜನೆಗಳು

ಪಿಎಂ ಸ್ವನಿಧಿ ಕ್ರೆಡಿಟ್ ಕಾರ್ಡ್ ಬಿಡುಗಡೆ ಮಾಡಲಿರುವ ಪ್ರಧಾನಮಂತ್ರಿ; ಒಂದು ಲಕ್ಷ ಫಲಾನುಭವಿಗಳಿಗೆ ಪಿಎಂ ಸ್ವನಿಧಿ ಸಾಲ ವಿತರಣೆ

ಕೇರಳದಾದ್ಯಂತ ರೈಲು ಸಂಪರ್ಕವನ್ನು ಹೆಚ್ಚಿಸುವ ಮೂರು ಅಮೃತ್ ಭಾರತ್ ಎಕ್ಸ್ ಪ್ರೆಸ್ ರೈಲುಗಳಿಗೆ ಚಾಲನೆ ನೀಡಲಿರುವ ಪ್ರಧಾನಮಂತ್ರಿ

ತಿರುವನಂತಪುರಂನಲ್ಲಿ 'CSIR–NIIST ಇನ್ನೋವೇಶನ್, ಟೆಕ್ನಾಲಜಿ ಅಂಡ್ ಎಂಟರ್ ಪ್ರೆನರ್ ಶಿಪ್ ಹಬ್'ಗೆ ಶಂಕುಸ್ಥಾಪನೆ ನೆರವೇರಿಸಲಿರುವ ಪ್ರಧಾನಮಂತ್ರಿ

प्रविष्टि तिथि: 22 JAN 2026 2:08PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2026ರ ಜನವರಿ 23ರಂದು ಕೇರಳಕ್ಕೆ ಭೇಟಿ ನೀಡಲಿದ್ದಾರೆ. ಅಂದು ಬೆಳಗ್ಗೆ ಸುಮಾರು 10:45 ಗಂಟೆಗೆ, ಪ್ರಧಾನಮಂತ್ರಿ ಅವರು ತಿರುವನಂತಪುರಂನಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ, ಉದ್ಘಾಟನೆ ಮತ್ತು  ಚಾಲನೆ ನೀಡಲಿದ್ದಾರೆ. ಈ ಸಂದರ್ಭದಲ್ಲಿ ಅವರು ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

ಈ ಯೋಜನೆಗಳು ರೈಲು ಸಂಪರ್ಕ, ನಗರ ಜೀವನೋಪಾಯ, ವಿಜ್ಞಾನ ಮತ್ತು ನಾವೀನ್ಯತೆ, ನಾಗರಿಕ ಕೇಂದ್ರಿತ ಸೇವೆಗಳು ಮತ್ತು ಸುಧಾರಿತ ಆರೋಗ್ಯ ರಕ್ಷಣೆ ಸೇರಿದಂತೆ ಪ್ರಮುಖ ಕ್ಷೇತ್ರಗಳನ್ನು ಒಳಗೊಂಡಿವೆ. ಇದು ಸಮಗ್ರ ಬೆಳವಣಿಗೆ, ತಾಂತ್ರಿಕ ಪ್ರಗತಿ ಮತ್ತು ನಾಗರಿಕರ ಜೀವನದ ಗುಣಮಟ್ಟವನ್ನು ಸುಧಾರಿಸುವ ಬಗ್ಗೆ ಪ್ರಧಾನಮಂತ್ರಿಯವರ ನಿರಂತರ ಗಮನವನ್ನು ಪ್ರತಿಬಿಂಬಿಸುತ್ತದೆ.

ರೈಲು ಸಂಪರ್ಕಕ್ಕೆ ಹೆಚ್ಚಿನ ಉತ್ತೇಜನ ನೀಡುವ ನಿಟ್ಟಿನಲ್ಲಿ, ಪ್ರಧಾನಮಂತ್ರಿಯವರು ಮೂರು ಅಮೃತ್ ಭಾರತ್ ಎಕ್ಸ್ ಪ್ರೆಸ್ ರೈಲುಗಳು ಮತ್ತು ಒಂದು ಪ್ಯಾಸೆಂಜರ್ ರೈಲು ಸೇರಿದಂತೆ ನಾಲ್ಕು ಹೊಸ ರೈಲು ಸೇವೆಗಳಿಗೆ ಚಾಲನೆ ನೀಡಲಿದ್ದಾರೆ. ಇವುಗಳಲ್ಲಿ ನಾಗರ್ ಕೋವಿಲ್-ಮಂಗಳೂರು ಅಮೃತ್ ಭಾರತ್ ಎಕ್ಸ್ ಪ್ರೆಸ್, ತಿರುವನಂತಪುರಂ-ತಾಂಬರಂ ಅಮೃತ್ ಭಾರತ್ ಎಕ್ಸ್ ಪ್ರೆಸ್, ತಿರುವನಂತಪುರಂ-ಚರ್ಲಪಲ್ಲಿ ಅಮೃತ್ ಭಾರತ್ ಎಕ್ಸ್ ಪ್ರೆಸ್ ಮತ್ತು ತ್ರಿಶೂರ್ ಹಾಗೂ ಗುರುವಾಯೂರು ನಡುವಿನ ಹೊಸ ಪ್ಯಾಸೆಂಜರ್ ರೈಲು ಸೇರಿವೆ. ಈ ಸೇವೆಗಳ ಪ್ರಾರಂಭವು ಕೇರಳ, ತಮಿಳುನಾಡು, ಕರ್ನಾಟಕ, ತೆಲಂಗಾಣ ಮತ್ತು ಆಂಧ್ರಪ್ರದೇಶದ ನಡುವಿನ ಸುದೀರ್ಘ ಪ್ರಯಾಣ ಹಾಗೂ ಪ್ರಾದೇಶಿಕ ಸಂಪರ್ಕವನ್ನು ಗಮನಾರ್ಹವಾಗಿ ಹೆಚ್ಚಿಸಲಿದೆ. ಇದು ಪ್ರಯಾಣಿಕರಿಗೆ ಕೈಗೆಟುಕುವ ದರದಲ್ಲಿ, ಸುರಕ್ಷಿತ ಮತ್ತು ಸಮಯೋಚಿತ ಪ್ರಯಾಣವನ್ನು ಒದಗಿಸಲಿದೆ. ಈ ಸುಧಾರಿತ ಸಂಪರ್ಕವು ಈ ಭಾಗದ ಪ್ರವಾಸೋದ್ಯಮ, ವ್ಯಾಪಾರ, ಶಿಕ್ಷಣ, ಉದ್ಯೋಗ ಮತ್ತು ಸಾಂಸ್ಕೃತಿಕ ವಿನಿಮಯಕ್ಕೆ ಬಲವಾದ ಉತ್ತೇಜನ ನೀಡಲಿದೆ.

ನಗರ ಜೀವನೋಪಾಯವನ್ನು ಬಲಪಡಿಸುವ ಪ್ರಯತ್ನಗಳ ಭಾಗವಾಗಿ, ಬೀದಿ ಬದಿ ವ್ಯಾಪಾರಿಗಳ ಆರ್ಥಿಕ ಒಳಗೊಳ್ಳುವಿಕೆಯ ಮುಂದಿನ ಹಂತವಾಗಿ ಪ್ರಧಾನಮಂತ್ರಿಯವರು 'ಪಿಎಂ ಸ್ವನಿಧಿ ಕ್ರೆಡಿಟ್ ಕಾರ್ಡ್' ಅನ್ನು ಬಿಡುಗಡೆ ಮಾಡಲಿದ್ದಾರೆ. ಯುಪಿಐ ನೊಂದಿಗೆ ಸಂಯೋಜಿತವಾಗಿರುವ ಈ ಬಡ್ಡಿರಹಿತ ಆವರ್ತಕ ಸಾಲ ಸೌಲಭ್ಯವು, ತಕ್ಷಣದ ಹಣಕಾಸು ಲಭ್ಯತೆಯನ್ನು ಒದಗಿಸುತ್ತದೆ, ಡಿಜಿಟಲ್ ವಹಿವಾಟುಗಳನ್ನು ಉತ್ತೇಜಿಸುತ್ತದೆ ಮತ್ತು ಫಲಾನುಭವಿಗಳು ಅಧಿಕೃತ ಸಾಲದ ಇತಿಹಾಸವನ್ನು  ರೂಪಿಸಿಕೊಳ್ಳಲು ಸಹಾಯ ಮಾಡುತ್ತದೆ. ಇದೇ ಸಂದರ್ಭದಲ್ಲಿ ಪ್ರಧಾನಮಂತ್ರಿಯವರು ಕೇರಳದ ಬೀದಿ ಬದಿ ವ್ಯಾಪಾರಿಗಳು ಸೇರಿದಂತೆ ಒಂದು ಲಕ್ಷ ಫಲಾನುಭವಿಗಳಿಗೆ ಪಿಎಂ ಸ್ವನಿಧಿ ಸಾಲವನ್ನು ವಿತರಿಸಲಿದ್ದಾರೆ. 2020ರಲ್ಲಿ ಪ್ರಾರಂಭವಾದಾಗಿನಿಂದ, ಪಿಎಂ ಸ್ವನಿಧಿ ಯೋಜನೆಯು ಬಹುಪಾಲು ಫಲಾನುಭವಿಗಳಿಗೆ ಮೊದಲ ಬಾರಿಗೆ ಅಧಿಕೃತ ಸಾಲದ ಸೌಲಭ್ಯವನ್ನು ಪಡೆಯಲು ಅನುವು ಮಾಡಿಕೊಟ್ಟಿದೆ ಮತ್ತು ನಗರದ ಅಸಂಘಟಿತ ವಲಯದ ಕಾರ್ಮಿಕರಲ್ಲಿ ಬಡತನ ನಿರ್ಮೂಲನೆ ಹಾಗೂ ಜೀವನೋಪಾಯದ ಭದ್ರತೆಯಲ್ಲಿ ಪ್ರಮುಖ ಪಾತ್ರ ವಹಿಸಿದೆ.

ವಿಜ್ಞಾನ ಮತ್ತು ನಾವೀನ್ಯತೆ ಕ್ಷೇತ್ರದಲ್ಲಿ, ಪ್ರಧಾನಮಂತ್ರಿಯವರು ತಿರುವನಂತಪುರಂನಲ್ಲಿ 'CSIR–NIIST ಇನ್ನೋವೇಶನ್, ಟೆಕ್ನಾಲಜಿ ಅಂಡ್ ಎಂಟರ್ ಪ್ರೆನರ್ ಶಿಪ್ ಹಬ್'ಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಈ ಕೇಂದ್ರವು ಜೀವ ವಿಜ್ಞಾನ ಮತ್ತು ಜೈವಿಕ ಆರ್ಥಿಕತೆಯ ಮೇಲೆ ಗಮನ ಕೇಂದ್ರೀಕರಿಸಲಿದ್ದು, ಆಯುರ್ವೇದದಂತಹ ಸಾಂಪ್ರದಾಯಿಕ ಜ್ಞಾನ ವ್ಯವಸ್ಥೆಗಳನ್ನು ಆಧುನಿಕ ಜೈವಿಕ ತಂತ್ರಜ್ಞಾನ, ಸುಸ್ಥಿರ ಪ್ಯಾಕೇಜಿಂಗ್ ಮತ್ತು ಹಸಿರು ಹೈಡ್ರೋಜನ್ ನೊಂದಿಗೆ ಸಂಯೋಜಿಸಲಿದೆ. ಅಲ್ಲದೆ, ಇದು ಸ್ಟಾರ್ಟ್ ಅಪ್ ಗಳ ರಚನೆ, ತಂತ್ರಜ್ಞಾನ ವರ್ಗಾವಣೆ ಮತ್ತು ಜಾಗತಿಕ ಸಹಯೋಗವನ್ನು ಉತ್ತೇಜಿಸಲಿದೆ. ಸಂಶೋಧನೆಗಳನ್ನು ಮಾರುಕಟ್ಟೆಗೆ ಸಿದ್ಧವಿರುವ ಪರಿಹಾರಗಳನ್ನಾಗಿ ಮತ್ತು ಉದ್ಯಮಗಳನ್ನಾಗಿ ಪರಿವರ್ತಿಸಲು ಇದು ಒಂದು ವೇದಿಕೆಯಾಗಿ ಕಾರ್ಯನಿರ್ವಹಿಸಲಿದೆ.

ಆರೋಗ್ಯ ರಕ್ಷಣೆಯ ಮೂಲಸೌಕರ್ಯವನ್ನು ಬಲಪಡಿಸುವುದು ಈ ಭೇಟಿಯ ಮತ್ತೊಂದು ಪ್ರಮುಖ ಉದ್ದೇಶವಾಗಿದೆ. ಪ್ರಧಾನಮಂತ್ರಿಯವರು ತಿರುವನಂತಪುರಂನ ಶ್ರೀ ಚಿತ್ರ ತಿರುನಾಳ್ ವೈದ್ಯಕೀಯ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆಯಲ್ಲಿ ಅತ್ಯಾಧುನಿಕ ರೇಡಿಯೋ ಸರ್ಜರಿ ಕೇಂದ್ರಕ್ಕೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಈ ಸೌಲಭ್ಯವು ಸಂಕೀರ್ಣ ಮೆದುಳಿನ ಕಾಯಿಲೆಗಳಿಗೆ ಅತ್ಯಂತ ನಿಖರವಾದ ಮತ್ತು ಕನಿಷ್ಠ ಶಸ್ತ್ರಚಿಕಿತ್ಸೆಯ ಚಿಕಿತ್ಸೆಯನ್ನು ನೀಡಲಿದ್ದು, ಈ ಭಾಗದ ತೃತೀಯ ಹಂತದ ಆರೋಗ್ಯ ರಕ್ಷಣಾ ಸಾಮರ್ಥ್ಯವನ್ನು ಹೆಚ್ಚಿಸಲಿದೆ.

ಪ್ರಧಾನಮಂತ್ರಿಯವರು ತಿರುವನಂತಪುರಂನಲ್ಲಿ ನೂತನವಾಗಿ ನಿರ್ಮಿಸಲಾದ ಪೂಜಪ್ಪುರ ಪ್ರಧಾನ ಅಂಚೆ ಕಚೇರಿಯನ್ನು ಸಹ ಉದ್ಘಾಟಿಸಲಿದ್ದಾರೆ. ಆಧುನಿಕ ಮತ್ತು ತಂತ್ರಜ್ಞಾನ ಆಧಾರಿತವಾದ ಈ ಸೌಲಭ್ಯವು ಅಂಚೆ, ಬ್ಯಾಂಕಿಂಗ್, ವಿಮೆ ಮತ್ತು ಡಿಜಿಟಲ್ ಸೇವೆಗಳ ಸಮಗ್ರ ಶ್ರೇಣಿಯನ್ನು ನೀಡಲಿದ್ದು, ನಾಗರಿಕ ಕೇಂದ್ರಿತ ಸೇವಾ ವಿತರಣೆಯನ್ನು ಮತ್ತಷ್ಟು ಬಲಪಡಿಸಲಿದೆ.

 

*****


(रिलीज़ आईडी: 2217237) आगंतुक पटल : 13
इस विज्ञप्ति को इन भाषाओं में पढ़ें: Assamese , English , Urdu , Marathi , हिन्दी , Bengali , Manipuri , Punjabi , Gujarati , Tamil , Telugu , Malayalam