ರೈಲ್ವೇ ಸಚಿವಾಲಯ
azadi ka amrit mahotsav

ಹಳಿಗಳ ಆಧುನೀಕರಣ ಮತ್ತು ಸುರಕ್ಷತೆಯಲ್ಲಿ ಭಾರತೀಯ ರೈಲ್ವೆ ಪ್ರಮುಖ ಪ್ರಗತಿ


2024-25 ರಲ್ಲಿ 6,851 ಕಿ.ಮೀ. ಹಳಿ ಮೇಲ್ದರ್ಜೆ ಕಾರ್ಯ ಪೂರ್ಣ; 7,500 ಕಿ.ಮೀ ಗೂ ಹೆಚ್ಚಿನ ಮಾರ್ಗದಲ್ಲಿ ಕಾಮಗಾರಿ ಪ್ರಗತಿಯಲ್ಲಿ; ಮುಂದಿನ ಎರಡು ವರ್ಷಗಳಲ್ಲಿ 7,900 ಕಿ.ಮೀ. ಮಾರ್ಗಕ್ಕಾಗಿ ಯೋಜನೆ ಸಿದ್ಧವಾಗಿದ್ದು, ಕೆಲಸಗಳು ವೇಗಗೊಂಡು ಸುಸ್ಥಿರ ಹೂಡಿಕೆಯೊಂದಿಗೆ ರೈಲು ಸುರಕ್ಷತೆಗೆ ಬಲ

2014 ರಲ್ಲಿ 31,445 ಕಿ.ಮೀ. ಇದ್ದ ಹೈ-ಸ್ಪೀಡ್-ಸಾಮರ್ಥ್ಯದ ಹಳಿಗಳ ಉದ್ದ ಈಗ ದ್ವಿಗುಣಗೊಂಡು 84,244 ಕಿಮೀ ನಷ್ಟಿದೆ; ರಾಷ್ಟ್ರೀಯ ರೈಲು ಜಾಲದ ಸುಮಾರು ಶೇಕಡ 80 ರಷ್ಟು ಭಾಗದಲ್ಲಿ ಗಂಟೆಗೆ 110 ಕಿ.ಮೀ ವೇಗದಲ್ಲಿ ಕಾರ್ಯಾಚರಣೆ

प्रविष्टि तिथि: 18 JAN 2026 2:39PM by PIB Bengaluru

ಭಾರತೀಯ ರೈಲ್ವೆಯು ಕಳೆದ ಹನ್ನೊಂದು ವರ್ಷಗಳಲ್ಲಿ ನಿರಂತರ ಹೂಡಿಕೆ ಮತ್ತು ಕೇಂದ್ರೀಕೃತ ಅನುಷ್ಠಾನದ ಮೂಲಕ ಹಳಿಗಳ ಮೂಲಸೌಕರ್ಯವನ್ನು ಬಲಪಡಿಸುವಲ್ಲಿ ಮತ್ತು ಸುರಕ್ಷತಾ ಮಾನದಂಡಗಳನ್ನು ಹೆಚ್ಚಿಸುವಲ್ಲಿ ಗಮನಾರ್ಹ ಪ್ರಗತಿಯನ್ನು ದಾಖಲಿಸಿದೆ. ಈ ಪ್ರಯತ್ನಗಳು ದೇಶಾದ್ಯಂತ ಸುರಕ್ಷಿತ, ವೇಗದ ಮತ್ತು ಹೆಚ್ಚು ವಿಶ್ವಾಸಾರ್ಹ ರೈಲು ಕಾರ್ಯಾಚರಣೆಗಳಿಗೆ ಕೊಡುಗೆ ನೀಡಿವೆ.

ಭಾರತೀಯ ರೈಲ್ವೆಯು 2024–25ರ ಆರ್ಥಿಕ ವರ್ಷದಲ್ಲಿ, 6,851 ಹಳಿ ಕಿಲೋಮೀಟರ್‌ ಗಿಂತ ಹೆಚ್ಚಿನ ಮಾರ್ಗದ ಹಳಿಯ ಮೇಲ್ದರ್ಜೆ ಕಾರ್ಯ ನಡೆಸಿದೆ. ಪ್ರಸ್ತುತ 2025–26ರ ಹಣಕಾಸು ವರ್ಷದಲ್ಲಿ, 7,500 ಹಳಿ ಕಿಲೋಮೀಟರ್‌ ಗಿಂತ ಹೆಚ್ಚು ಉದ್ದದಲ್ಲಿ ಹಳಿ ಮೇಲ್ದರ್ಜೆ ಕಾರ್ಯ ನಡೆದಿದೆ. ಇದಲ್ಲದೆ, 2026–27ರಲ್ಲಿ 7,900 ಟ್ರ್ಯಾಕ್ ಕಿಲೋಮೀಟರ್‌ ಗಳನ್ನು ಒಳಗೊಂಡ ಹಳಿ ನವೀಕರಣವನ್ನು ಯೋಜಿಸಲಾಗಿದ್ದು ಇದು ಸಮರ್ಥ ಕಾರ್ಯಾಚರಣೆ ಮತ್ತು ಸುರಕ್ಷತೆಗೆ ನಿರಂತರ ಆದ್ಯತೆಯನ್ನು ಪ್ರತಿಬಿಂಬಿಸಿದೆ.

ಸುಗಮ ರೈಲು ಸಂಚಾರಕ್ಕೆ ಹಳೆ ಹಳಿಗಳ ದುರಸ್ತಿ, ಬದಲಾವಣೆ ಮತ್ತು ಆಧುನೀಕರಣವು ನಿರ್ಣಾಯಕವಾಗಿದ್ದು, ಗಣನೀಯ ಪ್ರಗತಿ ಸಾಧಿಸಲಾಗಿದೆ. 2024–25ರಲ್ಲಿ, 7,161 ಥಿಕ್ ವೆಬ್ ಸ್ವಿಚ್‌ಗಳು (ಅತಿವೇಗದ ರೈಲುಗಳಲ್ಲಿ ರೈಲಿನ ಭಾರವನ್ನು ತಡೆದುಕೊಳ್ಳಬಲ್ಲ ದಪ್ಪಗಿನ ಸ್ವಿಚ್ ಗಳ ಸರಣಿ) ಮತ್ತು 1,704 ವೆಲ್ಡಬಲ್ ಸಿಎಂಎಸ್ (ಕಾಸ್ಟ್ ಮ್ಯಾಂಗನೀಸ್ ಸ್ಟೀಲ್) ಕ್ರಾಸಿಂಗ್‌ಗಳನ್ನು ಒದಗಿಸಲಾಗಿದೆ. 2025–26ರಲ್ಲಿ, 8,000 ಕ್ಕೂ ಹೆಚ್ಚು ಥಿಕ್ ವೆಬ್ ಸ್ವಿಚ್‌ಗಳು ಮತ್ತು 3,000 ಕ್ಕೂ ಹೆಚ್ಚು ವೆಲ್ಡಬಲ್ ಸಿಎಂಎಸ್ ಕ್ರಾಸಿಂಗ್‌ಗಳನ್ನು ಒದಗಿಸಲಾಗುತ್ತಿದೆ.

ಹಳಿಗಳ ಸ್ಥಿರತೆಯನ್ನು ಕಾಪಾಡಲು ಮತ್ತು ಸವಾರಿ ಗುಣಮಟ್ಟವನ್ನು ಸುಧಾರಿಸಲು ಅಗತ್ಯವಾದ ಬ್ಯಾಲಸ್ಟ್‌ (ಚರಂಡಿಗೆ ಮತ್ತು ಬೆಂಬಲಕ್ಕಾಗಿ ಒದಗಿಸುವ ಭಾರದ ವಸ್ತು) ನ ಯಾಂತ್ರಿಕೃತ ಡೀಪ್ ಸ್ಕ್ರೀನಿಂಗ್ (ಶುದ್ಧೀಕರಣ ಕಾರ್ಯ) ಅನ್ನು  ನಿರಂತರವಾಗಿ ನಡೆಸಲಾಗುತ್ತಿದೆ. 2024–25ರ ಅವಧಿಯಲ್ಲಿ, 7,442 ಹಳಿ ಕಿಲೋಮೀಟರ್‌ ಗಳ ಡೀಪ್ ಸ್ಕ್ರೀನಿಂಗ್ ಪೂರ್ಣಗೊಂಡಿದ್ದು, 2025–26ರಲ್ಲಿ 7,500 ಟ್ರ್ಯಾಕ್ ಕಿಲೋಮೀಟರ್‌ ಗಳಿಗೂ ಹೆಚ್ಚು ಡೀಪ್ ಸ್ಕ್ರೀನಿಂಗ್ ಕಾರ್ಯವನ್ನು ಕೈಗೊಳ್ಳಲಾಗುತ್ತಿದೆ.

ಯಾಂತ್ರೀಕೃತ ನಿರ್ವಹಣೆಯನ್ನು ಬೆಂಬಲಿಸಲು ಮತ್ತು ಉತ್ಪಾದಕತೆಯನ್ನು ಸುಧಾರಿಸಲು, ಭಾರತೀಯ ರೈಲ್ವೆ ತನ್ನ ಟ್ರ್ಯಾಕ್ ಮಷಿನ್ ಪಡೆಯನ್ನು ಗಮನಾರ್ಹವಾಗಿ ವಿಸ್ತರಿಸಿದೆ. 2014 ರಿಂದ 1,100 ಕ್ಕೂ ಹೆಚ್ಚು ಟ್ರ್ಯಾಕ್ ಯಂತ್ರಗಳನ್ನು ಖರೀದಿಸಲಾಗಿದ್ದು, ರೈಲ್ವೆ ಜಾಲದ ವೇಗವಾದ ಮತ್ತು ಹೆಚ್ಚು ಪರಿಣಾಮಕಾರಿ ನಿರ್ವಹಣೆಯನ್ನು ಸಾಧ್ಯವಾಗಿಸಿದೆ.

ಜಾನುವಾರುಗಳ ಓಡಾಟ ಮತ್ತು ಅತಿಕ್ರಮಣ ಕಡಿಮೆ ಮಾಡಲು ರೈಲ್ವೆ ಹಳಿಗಳ ಉದ್ದಕ್ಕೂ ಸುರಕ್ಷತಾ ಬೇಲಿ ಹಾಕುವ ಕಾರ್ಯವನ್ನು ಆದ್ಯತೆಯ ಮೇರೆಗೆ ಕೈಗೊಳ್ಳಲಾಗಿದ್ದು, ಒಟ್ಟಾರೆ ಸುರಕ್ಷತೆ ವರ್ಧಿಸಿದೆ. ಇಲ್ಲಿಯವರೆಗೆ ಸುಮಾರು 15,000 ಕಿಲೋಮೀಟರ್ ಬೇಲಿ ಹಾಕಲಾಗಿದ್ದು, ರೈಲುಗಳು ಗಂಟೆಗೆ 110 ಕಿಮೀಗಿಂತ ಹೆಚ್ಚಿನ ವೇಗದಲ್ಲಿ ಚಲಿಸುವ ವಿಭಾಗಗಳಲ್ಲಿ ಸುರಕ್ಷತೆ ಸುಧಾರಣೆಯಾಗಿದೆ.

ಭಾರತೀಯ ರೈಲ್ವೆಯ ಈ ನಿರಂತರ ಸುಸ್ಥಿರ ಪ್ರಯತ್ನಗಳ ಪರಿಣಾಮವಾಗಿ ಹಳಿಗಳ ಮೇಲ್ದರ್ಜೆ ಕಾರ್ಯದಲ್ಲಿ ಗಮನಾರ್ಹ ಪ್ರಗತಿ ಸಾಧಿಸಿದೆ. 110 ಕಿ.ಮೀ ಮತ್ತು ಅದಕ್ಕಿಂತ ಹೆಚ್ಚಿನ ವೇಗದ ಸಂಚಾರ ಸಾಧ್ಯವಾಗುವ ಹಳಿಗಳ ಉದ್ದವು 2014 ರಲ್ಲಿ 31,445 ಕಿಲೋಮೀಟರ್‌ ಗಳಷ್ಟಿದ್ದು (ಜಾಲದ ಸುಮಾರು ಶೇಕಡ 40 ರಷ್ಟು) ಪ್ರಸ್ತುತ 84,244 ಕಿಲೋಮೀಟರ್‌ ಗಳಿಗೆ (ಜಾಲದ ಸುಮಾರು ಶೇಕಡ 80 ರಷ್ಟು) ಹೆಚ್ಚಾಗಿದೆ; ಇದು ವೇಗ ಮತ್ತು ಹೆಚ್ಚು ಪರಿಣಾಮಕಾರಿ ರೈಲು ಕಾರ್ಯಾಚರಣೆಗಳನ್ನು ಸಾಧ್ಯವಾಗಿಸಿದೆ.

 

*****


(रिलीज़ आईडी: 2215834) आगंतुक पटल : 14
इस विज्ञप्ति को इन भाषाओं में पढ़ें: English , Urdu , हिन्दी , Gujarati , Odia , Tamil , Malayalam