ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ
azadi ka amrit mahotsav

ಸ್ಟಾರ್ಟ್ ಅಪ್ ಇಂಡಿಯಾ ನವ ಭಾರತದ ಒಂದು ನಿರ್ಣಾಯಕ ಚಳುವಳಿಯಾಗಿ ವಿಕಸನಗೊಂಡಿದೆ: ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ


ಒಂದು ದಶಕದಲ್ಲಿ 400 ರಿಂದ ಎರಡು ಲಕ್ಷಕ್ಕೂ ಅಧಿಕ ಸ್ಟಾರ್ಟಪ್‌ಗಳು: ಸ್ಟಾರ್ಟ್ ಅಪ್ ಇಂಡಿಯಾದ ಪ್ರಭಾವವನ್ನು ಎತ್ತಿ ತೋರಿಸಿದ ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಶ್ರೀ ಪಿಯೂಷ್ ಗೋಯಲ್

50ಕ್ಕೂ ಹೆಚ್ಚು ಕ್ಷೇತ್ರಗಳಿಗೆ ಸ್ಟಾರ್ಟಪ್‌ ಗಳು ವಿಸ್ತರಣೆಯಾಗುತ್ತಿರುವಂತೆ ಸರ್ಕಾರವು ಡೀಪ್ ಟೆಕ್‌ಗೆ (Deep Tech) ಆದ್ಯತೆ ನೀಡುತ್ತಿದೆ; ಫಂಡ್ ಆಫ್ ಫಂಡ್ಸ್ ಭಾರತದ ಬೆಳೆಯುತ್ತಿರುವ ಸ್ಟಾರ್ಟ್ ಅಪ್ ಪರಿಸರ ವ್ಯವಸ್ಥೆಯನ್ನು ಬಲಪಡಿಸುತ್ತದೆ: ಶ್ರೀ ಪಿಯೂಷ್ ಗೋಯಲ್

ಡೀಪ್ ಟೆಕ್ ಸಂಶೋಧನೆಯನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯಲು ₹1 ಲಕ್ಷ ಕೋಟಿ ಸಂಶೋಧನೆ ಮತ್ತು ಅಭಿವೃದ್ಧಿ (R&D) ನಿಧಿ: ಶ್ರೀ ಪಿಯೂಷ್ ಗೋಯಲ್

ದ್ವಿತೀಯ ಮತ್ತು ತೃತೀಯ ಹಂತದ ನಗರಗಳಿಂದ ಪ್ರೇರಿತವಾದ ಸ್ಟಾರ್ಟ್ ಅಪ್ ಕ್ರಾಂತಿ ಭಾರತದಾದ್ಯಂತ ಹರಡುತ್ತಿದೆ: ಶ್ರೀ ಪಿಯೂಷ್ ಗೋಯಲ್

ಭಾರತದ ಬಗ್ಗೆ ಜಾಗತಿಕ ಆಸಕ್ತಿ ಹೆಚ್ಚುತ್ತಿರುವಂತೆ ಮುಕ್ತ ವ್ಯಾಪಾರ ಒಪ್ಪಂದದ ಮಾತುಕತೆಗಳಲ್ಲಿ ಸ್ಟಾರ್ಟ್ ಅಪ್ ಸಹಯೋಗಕ್ಕೆ ಪ್ರಾಮುಖ್ಯತೆ: ಶ್ರೀ ಪಿಯೂಷ್ ಗೋಯಲ್

ಐದನೇ ರಾಷ್ಟ್ರೀಯ ಸ್ಟಾರ್ಟ್ ಅಪ್ ಪ್ರಶಸ್ತಿಗಳು ಮತ್ತು ರಾಜ್ಯಗಳ ಸ್ಟಾರ್ಟ್ ಅಪ್ ಶ್ರೇಯಾಂಕದ ಫಲಿತಾಂಶಗಳನ್ನು ಘೋಷಿಸಿದ ಡಿಪಿಐಐಟಿ

प्रविष्टि तिथि: 16 JAN 2026 4:49PM by PIB Bengaluru

ನವದೆಹಲಿಯ ಭಾರತ್ ಮಂಟಪದಲ್ಲಿ ಇಂದು ಆಯೋಜಿಸಲಾಗಿದ್ದ 'ರಾಷ್ಟ್ರೀಯ ಸ್ಟಾರ್ಟ್ ಅಪ್ ದಿನ'ದ ಅಂಗವಾಗಿ ಸ್ಟಾರ್ಟ್ ಅಪ್ ಸಂಸ್ಥಾಪಕರು, ನಾವೀನ್ಯಕಾರರು ಮತ್ತು ಯುವ ಉದ್ಯಮಿಗಳನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಸ್ಟಾರ್ಟ್ ಅಪ್ ಇಂಡಿಯಾದ ಹತ್ತು ವರ್ಷಗಳ ಪಯಣವನ್ನು "ಕೋಟ್ಯಂತರ ಕನಸುಗಳು ಮತ್ತು ಯುವ ಕಲ್ಪನೆಗಳಿಂದ ರೂಪಿತವಾದ ಕ್ರಾಂತಿ" ಎಂದು ಬಣ್ಣಿಸಿದರು. ಈ ಉಪಕ್ರಮವು ಕೇವಲ ಒಂದು ಸರ್ಕಾರಿ ಯೋಜನೆಯಾಗಿ ಉಳಿಯದೆ, ನವ ಭಾರತದ ಒಂದು ನಿರ್ಣಾಯಕ ಚಳುವಳಿಯಾಗಿ ಮಾರ್ಪಟ್ಟಿದೆ ಎಂದು ಅವರು ಅಭಿಪ್ರಾಯಪಟ್ಟರು.

ಕೇವಲ ಹತ್ತು ವರ್ಷಗಳಲ್ಲಿ ಭಾರತವು ವಿಶ್ವದ ಮೂರನೇ ಅತಿದೊಡ್ಡ ಸ್ಟಾರ್ಟ್ ಅಪ್ ಪರಿಸರ ವ್ಯವಸ್ಥೆಯಾಗಿ ಹೊರಹೊಮ್ಮಿದೆ ಎಂದು ಒತ್ತಿಹೇಳಿದ ಪ್ರಧಾನಮಂತ್ರಿಯವರು, 2014ರಲ್ಲಿ 500ಕ್ಕೂ ಕಡಿಮೆ ಇದ್ದ ಸ್ಟಾರ್ಟಪ್‌ ಗಳ ಸಂಖ್ಯೆ ಇಂದು ಎರಡು ಲಕ್ಷಕ್ಕೂ ಅಧಿಕವಾಗಿದೆ ಎಂದು ತಿಳಿಸಿದರು. ಇದೇ ವೇಳೆ ಯೂನಿಕಾರ್ನ್ ಗಳ ಸಂಖ್ಯೆ 4 ರಿಂದ ಸುಮಾರು 125ಕ್ಕೆ ಏರಿಕೆಯಾಗಿದ್ದು, ಭಾರತೀಯ ಸ್ಟಾರ್ಟ್ ಅಪ್ ಗಳು ಹೆಚ್ಚಿನ ಸಂಖ್ಯೆಯಲ್ಲಿ ಐಪಿಒಗಳನ್ನು (IPOs) ಪ್ರಾರಂಭಿಸುತ್ತಾ, ಉದ್ಯೋಗಗಳನ್ನು ಸೃಷ್ಟಿಸುವ ಮೂಲಕ ಜಾಗತಿಕ ಗಮನ ಸೆಳೆಯುತ್ತಿವೆ ಎಂದು ಅವರು ಉಲ್ಲೇಖಿಸಿದರು.

2025ರ ಒಂದೇ ವರ್ಷದಲ್ಲಿ ಸುಮಾರು 44,000 ಸ್ಟಾರ್ಟಪ್‌ ಗಳು ನೋಂದಣಿಯಾಗಿದ್ದು, ಇದು ಇದುವರೆಗಿನ ಯಾವುದೇ ಒಂದು ವರ್ಷದ ಗರಿಷ್ಠ ಸಂಖ್ಯೆಯಾಗಿದೆ ಎಂದು ಹೇಳಿದ ಪ್ರಧಾನಮಂತ್ರಿಯವರು, ಇದು ಸ್ಟಾರ್ಟ್ ಅಪ್ ಪರಿಸರ ವ್ಯವಸ್ಥೆಯ ವೇಗವರ್ಧಿತ ಚೈತನ್ಯವನ್ನು ಒತ್ತಿಹೇಳುತ್ತದೆ ಎಂದರು. ಕೃಷಿ, ಫಿನ್‌ಟೆಕ್, ಮೊಬಿಲಿಟಿ, ಆರೋಗ್ಯ ಮತ್ತು ಸುಸ್ಥಿರತೆಯಂತಹ ವಿವಿಧ ಕ್ಷೇತ್ರಗಳ ಯುವ ನಾವೀನ್ಯಕಾರರೊಂದಿಗಿನ ತಮ್ಮ ಸಂವಾದಗಳನ್ನು ಸ್ಮರಿಸಿದ ಅವರು, ಅವರ ಆಲೋಚನೆಗಳು, ಆತ್ಮವಿಶ್ವಾಸ ಮತ್ತು ಮಹತ್ವಾಕಾಂಕ್ಷೆಯು ನೈಜ ಪ್ರಪಂಚದ ಸಮಸ್ಯೆಗಳನ್ನು ಪರಿಹರಿಸುವತ್ತ ಗಮನ ಹರಿಸುತ್ತಿರುವ 'ನವ ಭಾರತ'ವನ್ನು ಪ್ರತಿಬಿಂಬಿಸುತ್ತವೆ ಎಂದು ತಿಳಿಸಿದರು. ಯುವಜನತೆಯನ್ನು ಭೇಟಿ ಮಾಡಿದ್ದಕ್ಕೆ ಸಂತಸ ವ್ಯಕ್ತಪಡಿಸಿದ ಪ್ರಧಾನಮಂತ್ರಿಯವರು, ದೊಡ್ಡದಾಗಿ ಕನಸು ಕಾಣುವ ಅವರ ಧೈರ್ಯವನ್ನು ಶ್ಲಾಘಿಸಿದರು. 'ಸ್ಟಾರ್ಟ್ ಅಪ್ ಇಂಡಿಯಾ' ಯುವಜನತೆಗೆ ನಾವೀನ್ಯತೆಗಾಗಿ ಮುಕ್ತ ಆಕಾಶವನ್ನೇ ಕಲ್ಪಿಸಿಕೊಟ್ಟಿದೆ ಎಂದ ಅವರು, ಇಂದು ಇಲ್ಲಿ ಉಪಸ್ಥಿತರಿರುವ ಅನೇಕ ಯುವ ಉದ್ಯಮಿಗಳು ಭವಿಷ್ಯದಲ್ಲಿ ಭಾರತದ ಸ್ಟಾರ್ಟ್ ಅಪ್ ಯಶಸ್ಸಿನ ಕಥೆಗಳ 'ಕೇಸ್ ಸ್ಟಡಿ'ಗಳಾಗಲಿದ್ದಾರೆ  ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಶ್ರೀ ಪಿಯೂಷ್ ಗೋಯಲ್ ಅವರು, ಸರಿಯಾಗಿ ಹತ್ತು ವರ್ಷಗಳ ಹಿಂದೆ ಭಾರತದ ಪ್ರಧಾನಮಂತ್ರಿಯವರು ದೇಶದ ಮುಂದೆ ಹೊಸ ಆಲೋಚನೆಯನ್ನು ಮಂಡಿಸಿದ್ದರು. ಯುವಜನರು ಕೇವಲ ಉದ್ಯೋಗಾಕಾಂಕ್ಷಿಗಳಾಗದೆ, ಉದ್ಯೋಗದಾತರಾಗಿ ಬದಲಾಗಬೇಕು ಎಂದು ಅವರು ಕರೆ ನೀಡಿದ್ದರು ಎಂದು ನೆನಪಿಸಿದರು. ಪ್ರಧಾನಮಂತ್ರಿಯವರ ನೇತೃತ್ವದಲ್ಲಿ ಈ ಪರಿವರ್ತನೆಯು ಇಂದು ಸಾಕಾರಗೊಳ್ಳುತ್ತಿರುವುದನ್ನು ಕಂಡು ದೇಶವು ಹೆಮ್ಮೆಪಡುತ್ತಿದೆ ಎಂದು ಅವರು ತಿಳಿಸಿದರು.

2016ರಲ್ಲಿ 'ಸ್ಟಾರ್ಟ್ ಅಪ್ ಇಂಡಿಯಾ' ಉಪಕ್ರಮಕ್ಕೆ ಚಾಲನೆ ನೀಡಿದಾಗ ದೇಶದಲ್ಲಿ ಕೇವಲ 400 ಸ್ಟಾರ್ಟ್ ಅಪ್ ‌ಗಳಿದ್ದವು ಎಂಬುದನ್ನು ಶ್ರೀ ಗೋಯಲ್ ಸ್ಮರಿಸಿದರು. ಇಂದು ಈ ಚಳುವಳಿಯು ಗಣನೀಯವಾಗಿ ವಿಸ್ತರಿಸಿದ್ದು, ಕೈಗಾರಿಕೆ ಮತ್ತು ಆಂತರಿಕ ವ್ಯಾಪಾರ ಉತ್ತೇಜನ ಇಲಾಖೆಯಲ್ಲಿ (DPIIT) ಎರಡು ಲಕ್ಷಕ್ಕೂ ಅಧಿಕ ಸ್ಟಾರ್ಟಪ್‌ಗಳು ನೋಂದಾಯಿಸಲ್ಪಟ್ಟಿವೆ. ಈ ಸ್ಟಾರ್ಟಪ್‌ಗಳು ದೇಶಾದ್ಯಂತ ಅಂದಾಜು 21 ಲಕ್ಷ ಉದ್ಯೋಗಗಳನ್ನು ಸೃಷ್ಟಿಸಿವೆ ಎಂದು ಅವರು ಮಾಹಿತಿ ನೀಡಿದರು.

ಸ್ಟಾರ್ಟ್ ಅಪ್ ಇಂಡಿಯಾದ ವ್ಯಾಪಕ ಪ್ರಭಾವವನ್ನು ಎತ್ತಿ ತೋರಿಸಿದ ಸಚಿವರು, ವಿಶ್ವವಿದ್ಯಾಲಯಗಳ ಪದವಿ ಪ್ರದಾನ ಸಮಾರಂಭಗಳಲ್ಲಿ ವಿದ್ಯಾರ್ಥಿಗಳು ಮತ್ತು ಬೋಧಕ ವರ್ಗದವರೊಂದಿಗೆ ನಡೆಸಿದ ಸಂವಾದದ ಸಮಯದಲ್ಲಿ ಯುವಜನರಲ್ಲಿ ಹೊಸ ರೀತಿಯ ಆತ್ಮವಿಶ್ವಾಸವನ್ನು ಕಂಡಿರುವುದಾಗಿ ಹೇಳಿದರು. ಹಲವಾರು ಕ್ಯಾಂಪಸ್ ಗಳು ಇಂದು "ಮಿನಿ ಶಾರ್ಕ್ ಟ್ಯಾಂಕ್‌ಗಳಾಗಿ" ರೂಪಾಂತರಗೊಂಡಿದ್ದು, ವಿದ್ಯಾರ್ಥಿಗಳು ತಮ್ಮ  ಆಲೋಚನೆಗಳನ್ನು ವಾಸ್ತವಕ್ಕೆ ತರಲು ಉತ್ಸುಕರಾಗಿದ್ದಾರೆ ಎಂದು ಅವರು ಹೇಳಿದರು. ಈ ಬದಲಾವಣೆಯು ಪ್ರಧಾನಮಂತ್ರಿಯವರ ದೂರದೃಷ್ಟಿಯ ನಾಯಕತ್ವ ಮತ್ತು ನಿರಂತರ ಪ್ರೋತ್ಸಾಹದಿಂದ ಸಾಧ್ಯವಾಗಿದೆ ಎಂದು ಅವರು ತಿಳಿಸಿದರು.

ಐಐಟಿ ಮದ್ರಾಸ್‌ನ 'ಸೆಂಟರ್ ಫಾರ್ ಇನ್ನೋವೇಶನ್' ನಲ್ಲಿ ಸ್ಟಾರ್ಟಪ್‌ ಗಳೊಂದಿಗೆ ಸಂವಹನ ನಡೆಸಿದ ತಮ್ಮ  ಅನುಭವವನ್ನು ಹಂಚಿಕೊಂಡ ಶ್ರೀ ಗೋಯಲ್ ಅವರು, ವಿದ್ಯಾರ್ಥಿಗಳ ಉತ್ಸಾಹ, ಸೃಜನಶೀಲತೆ ಮತ್ತು ಸಮಸ್ಯೆಗಳನ್ನು ಪರಿಹರಿಸುವ ಸಾಮರ್ಥ್ಯವು ತಮಗೆ ಅಪಾರ ಪ್ರಭಾವ ಬೀರಿದೆ ಎಂದು ಹೇಳಿದರು. ಅವರ ಪ್ರತಿಭೆ ಮತ್ತು ಕೌಶಲ್ಯಗಳು ಜಾಗತಿಕ ಸವಾಲುಗಳನ್ನು ಎದುರಿಸುವ ಮತ್ತು ವಿಶ್ವಮಟ್ಟದಲ್ಲಿ ನಾವೀನ್ಯತೆಯನ್ನು ಪ್ರದರ್ಶಿಸುವ ಭಾರತದ ಸಾಮರ್ಥ್ಯವನ್ನು ಪ್ರತಿಬಿಂಬಿಸುತ್ತವೆ ಎಂದು ಅವರು ಒತ್ತಿಹೇಳಿದರು.

ಭಾರತೀಯ ಸ್ಟಾರ್ಟಪ್‌ ಗಳು ಪ್ರಸ್ತುತ ಡೀಪ್ ಟೆಕ್, ಕೃತಕ ಬುದ್ಧಿಮತ್ತೆ, ಮೆಷಿನ್ ಲರ್ನಿಂಗ್, ಕ್ವಾಂಟಮ್ ಕಂಪ್ಯೂಟಿಂಗ್, ಅಗ್ರಿ-ಟೆಕ್, ಸ್ಪೇಸ್ ಟೆಕ್, ಡ್ರೋನ್ ತಂತ್ರಜ್ಞಾನ , ಏರೋಸ್ಪೇಸ್ ಮತ್ತು ರಾಕೆಟ್ ತಂತ್ರಜ್ಞಾನ ಸೇರಿದಂತೆ 50ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಸಕ್ರಿಯವಾಗಿವೆ ಎಂದು ಸಚಿವರು ತಿಳಿಸಿದರು. ಆರ್ಥಿಕತೆಯ ಎಲ್ಲಾ ಅಗತ್ಯ ಮತ್ತು ಹೆಚ್ಚಿನ ಪ್ರಭಾವ ಬೀರುವ ಕ್ಷೇತ್ರಗಳಲ್ಲಿ ಸ್ಟಾರ್ಟಪ್‌ಗಳು ಅಭಿವೃದ್ಧಿ ಹೊಂದುತ್ತಿವೆ ಎಂದು ಅವರು ಹೇಳಿದರು.

ಸ್ಟಾರ್ಟ್ ಅಪ್ ಪರಿಸರ ವ್ಯವಸ್ಥೆಯನ್ನು ಬಲಪಡಿಸಲು, ಆರಂಭಿಕ ಬಂಡವಾಳವನ್ನು ಒದಗಿಸಲು ಮತ್ತು ಸ್ಟಾರ್ಟ್ ಅಪ್ ‌ಗಳು ಲೆಕ್ಕಾಚಾರದ ಅಪಾಯಗಳನ್ನು ತೆಗೆದುಕೊಳ್ಳಲು ಅನುವು ಮಾಡಿಕೊಡಲು ಸರ್ಕಾರವು 2016 ರಲ್ಲಿ 10,000 ಕೋಟಿ ರೂಪಾಯಿಗಳ 'ಫಂಡ್ ಆಫ್ ಫಂಡ್ಸ್' ಅನ್ನು ರಚಿಸಿರುವುದನ್ನು ಶ್ರೀ ಗೋಯಲ್ ಸ್ಮರಿಸಿದರು. ಮೊದಲ ಕಂತಿನ ಯಶಸ್ವಿ ಬಳಕೆಯ ನಂತರ, ಕಳೆದ ಕೇಂದ್ರ ಬಜೆಟ್‌ನಲ್ಲಿ 10,000 ಕೋಟಿ ರೂಪಾಯಿಗಳ ಎರಡನೇ ಕಂತನ್ನು ಮಂಜೂರು ಮಾಡಲಾಗಿದೆ. ಯುವ ಉದ್ಯಮಶೀಲತೆಯನ್ನು ಇನ್ನಷ್ಟು ಉತ್ತೇಜಿಸಲು ಈ ನಿಧಿಯ ಗಣನೀಯ ಭಾಗವನ್ನು ಡೀಪ್ ಟೆಕ್ ಮತ್ತು ಹೈಟೆಕ್ ಕ್ಷೇತ್ರಗಳಲ್ಲಿ ನಿಯೋಜಿಸುವ ಗುರಿಯನ್ನು ಸರ್ಕಾರ ಹೊಂದಿದೆ ಎಂದು ಅವರು ತಿಳಿಸಿದರು.

ಸಂಶೋಧನೆ, ಅಭಿವೃದ್ಧಿ ಮತ್ತು ನಾವೀನ್ಯತೆಗಾಗಿ ಮೀಸಲಾದ 1 ಲಕ್ಷ ಕೋಟಿ ರೂಪಾಯಿಗಳ ನಿಧಿಯನ್ನು ಪ್ರಧಾನಮಂತ್ರಿಯವರು ಘೋಷಿಸಿದ್ದಾರೆ ಎಂದು ಸಚಿವರು ಮತ್ತಷ್ಟು ಒತ್ತಿ ಹೇಳಿದರು. ಇದು ಜಾಗತಿಕ ಗುಣಮಟ್ಟಕ್ಕೆ ಸಮಾನವಾಗಿ ಡೀಪ್ ಟೆಕ್‌ನಲ್ಲಿ ಸುಧಾರಿತ ಸಂಶೋಧನೆ ನಡೆಸಲು ಸಂಶೋಧಕರು, ವಿಜ್ಞಾನಿಗಳು ಮತ್ತು ಸ್ಟಾರ್ಟ್ ಅಪ್ ಗಳಿಗೆ ಬೆಂಬಲ ನೀಡಲಿದೆ ಎಂದು ಅವರು ತಿಳಿಸಿದರು.

ದೇಶದ ಪ್ರತಿ ಮೂಲೆಯಲ್ಲೂ ಈಗ ಸ್ಟಾರ್ಟಪ್‌ ಗಳಿದ್ದು, ಸುಮಾರು ಶೇಕಡಾ 50 ರಷ್ಟು ಸ್ಟಾರ್ಟ್ ಅಪ್ ‌ಗಳು ದ್ವಿತೀಯ ಮತ್ತು ತೃತೀಯ ಹಂತದ ನಗರಗಳಿಂದ ಬಂದಿವೆ ಎಂದು ಶ್ರೀ ಗೋಯಲ್ ಬೆಟ್ಟು ಮಾಡಿದರು. ಇದು ಸ್ಟಾರ್ಟ್ ಅಪ್ ಕ್ರಾಂತಿಯು ನಿಜವಾದ ಅರ್ಥದಲ್ಲಿ 'ಭಾರತೀಯ ಚಳುವಳಿ'ಯಾಗಿ ಮಾರ್ಪಟ್ಟಿರುವುದನ್ನು ಪ್ರದರ್ಶಿಸುತ್ತದೆ. ಈಶಾನ್ಯ ಭಾಗವನ್ನು ಪ್ರಮುಖ ಉದಾಹರಣೆಯಾಗಿ ಉಲ್ಲೇಖಿಸಿದ ಅವರು, ಸಿಕ್ಕಿಂನ ಸ್ಟಾರ್ಟಪ್‌ ಗಳ ಶ್ಲಾಘನೀಯ ಕೆಲಸ ಮತ್ತು ಆಧುನಿಕ ಕೃಷಿ ತಂತ್ರಗಳನ್ನು ಪರಿಚಯಿಸಲು ಅಸ್ಸಾಂನ ಚಹಾ ಬೆಳೆಗಾರರು ಹಾಗೂ ಯುವಜನತೆಯ ನಡುವಿನ ಸಹಯೋಗವನ್ನು ಸ್ಮರಿಸಿದರು. ದಕ್ಷಿಣ ಭಾರತದಲ್ಲಿ ಆಂಧ್ರಪ್ರದೇಶವು ದೇಶದ 'ಡ್ರೋನ್ ರಾಜಧಾನಿ'ಯಾಗಿ ಹೊರಹೊಮ್ಮುತ್ತಿದೆ ಎಂದು ಹೇಳಿದ ಅವರು, ಕರ್ನಾಟಕ ಮತ್ತು ತಮಿಳುನಾಡು 'ಡೀಪ್ ಟೆಕ್' ಮತ್ತು ಕೃತಕ ಬುದ್ಧಿಮತ್ತೆ (AI) ಸ್ಟಾರ್ಟಪ್‌ ಗಳ ಕೇಂದ್ರಗಳಾಗಿವೆ ಎಂದು ತಿಳಿಸಿದರು.

ವಿಶ್ವವು ಭಾರತವನ್ನು ಬಹಳ ಆಶಾವಾದದಿಂದ ನೋಡುತ್ತಿದೆ ಎಂದು ಹೇಳಿದ ಶ್ರೀ ಗೋಯಲ್ ಅವರು, ವಿದೇಶಿ ನಿಯೋಗಗಳ ಭೇಟಿ ಮತ್ತು ಮುಕ್ತ ವ್ಯಾಪಾರ ಒಪ್ಪಂದದ ಮಾತುಕತೆಗಳ ಸಮಯದಲ್ಲಿ ಹಲವಾರು ದೇಶಗಳು ಭಾರತದೊಂದಿಗೆ 'ಸ್ಟಾರ್ಟ್ ಅಪ್ ಸೇತುವೆಗಳನ್ನು' ಸ್ಥಾಪಿಸಲು ತೀವ್ರ ಆಸಕ್ತಿ ತೋರಿಸಿವೆ ಎಂದು ತಿಳಿಸಿದರು. ಸ್ಟಾರ್ಟ್ ಅಪ್ ಗಳ ನಡುವಿನ ಸಮನ್ವಯ ವೇದಿಕೆಗಳ ಮೂಲಕ ಸುಮಾರು 100 ದೇಶಗಳು ಭಾರತದ ಸ್ಟಾರ್ಟ್ ಅಪ್ ಪರಿಸರ ವ್ಯವಸ್ಥೆಯೊಂದಿಗೆ ಸಹಕರಿಸಲು ಬಯಸುತ್ತಿವೆ ಎಂದು ಅವರು ಅಂದಾಜಿಸಿದರು.

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಬಿತ್ತಲಾದ 'ಸ್ಟಾರ್ಟ್ ಅಪ್ ಇಂಡಿಯಾ' ಎಂಬ ಬೀಜವು ನಿರಂತರವಾಗಿ ವಿಕಸನಗೊಳ್ಳಲಿದೆ ಮತ್ತು 140 ಕೋಟಿ ಭಾರತೀಯರ ಕನಸಾದ 'ವಿಕಸಿತ ಭಾರತ'ದ ಸಂಕಲ್ಪವನ್ನು ಸಾಕಾರಗೊಳಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸುವ ಮೂಲಕ ಸಚಿವರು ತಮ್ಮ ಮಾತನ್ನು ಮುಕ್ತಾಯಗೊಳಿಸಿದರು.

ಭಾರತವು 'ಸ್ಟಾರ್ಟ್ ಅಪ್ ಇಂಡಿಯಾ' ಉಪಕ್ರಮದ ಒಂದು ಐತಿಹಾಸಿಕ ದಶಕವನ್ನು ಪೂರೈಸುತ್ತಿರುವ ಈ ಸಂದರ್ಭದಲ್ಲಿ, ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯದ ಕೈಗಾರಿಕೆ ಮತ್ತು ಆಂತರಿಕ ವ್ಯಾಪಾರ ಉತ್ತೇಜನ ಇಲಾಖೆಯು (DPIIT), ದೇಶದಲ್ಲಿ ಬಲಿಷ್ಠ, ಎಲ್ಲರನ್ನೂ ಒಳಗೊಳ್ಳುವ ಮತ್ತು ನಾವೀನ್ಯತೆ ಆಧಾರಿತ ಉದ್ಯಮಶೀಲತಾ ಪರಿಸರ ವ್ಯವಸ್ಥೆಯನ್ನು ನಿರ್ಮಿಸಲು ಕಳೆದ ಹತ್ತು ವರ್ಷಗಳಿಂದ ನಡೆಸಿದ ನಿರಂತರ ನೀತಿ-ಚಾಲಿತ ಪ್ರಯತ್ನಗಳ ಸ್ಮರಣಾರ್ಥವಾಗಿ ಈ ಕಾರ್ಯಕ್ರಮವನ್ನು ಆಯೋಜಿಸಿದೆ. ಇಂದು ಆಚರಿಸಲಾಗುತ್ತಿರುವ 'ರಾಷ್ಟ್ರೀಯ ಸ್ಟಾರ್ಟ್ ಅಪ್ ದಿನ'ದೊಂದಿಗೆ ಈ ಸಂಭ್ರಮಾಚರಣೆಯು ಮುಕ್ತಾಯಗೊಳ್ಳುತ್ತಿದ್ದು, ಇದರ ಅಂಗವಾಗಿ ರಾಜ್ಯಗಳ ಸ್ಟಾರ್ಟ್ ಅಪ್ ಶ್ರೇಯಾಂಕದ (States’ Startup Ranking Exercise) ಮತ್ತು ರಾಷ್ಟ್ರೀಯ ಸ್ಟಾರ್ಟ್ ಅಪ್ ಪ್ರಶಸ್ತಿಗಳ (National Startup Awards) 5ನೇ ಆವೃತ್ತಿಯ ಫಲಿತಾಂಶ ಪ್ರಕಟಣಾ ಸಮಾರಂಭವು ನಡೆಯುತ್ತಿದೆ. ಈ ಸಮಾರಂಭವು ಸ್ಟಾರ್ಟ್ ಅಪ್ ಪರಿಸರ ವ್ಯವಸ್ಥೆಯ ಎಲ್ಲಾ ಪ್ರಮುಖ ಪಾಲುದಾರರನ್ನು ಒಂದೇ ವೇದಿಕೆಗೆ ತಂದಿದೆ.

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2016ರ ಜನವರಿ 16ರಂದು ಚಾಲನೆ ನೀಡಿದ 'ಸ್ಟಾರ್ಟ್ ಅಪ್ ಇಂಡಿಯಾ' ಯೋಜನೆಯು, ನಾವೀನ್ಯತೆಯನ್ನು ಪೋಷಿಸುವ, ಉದ್ಯಮಶೀಲತೆಯನ್ನು ಉತ್ತೇಜಿಸುವ ಮತ್ತು ಹೂಡಿಕೆ-ಚಾಲಿತ ಬೆಳವಣಿಗೆಯನ್ನು ಸಕ್ರಿಯಗೊಳಿಸುವ ಉದ್ದೇಶದೊಂದಿಗೆ ಒಂದು ಪರಿವರ್ತನಾತ್ಮಕ ಉಪಕ್ರಮವಾಗಿ ರೂಪಿಸಲಾಯಿತು. ಭಾರತವು ಉದ್ಯೋಗಾಕಾಂಕ್ಷಿಗಳ ಬದಲಾಗಿ 'ಉದ್ಯೋಗದಾತರ'  ದೇಶವಾಗಲಿ ಎಂಬ ದೂರದೃಷ್ಟಿ ಇದರ ಹಿಂದಿತ್ತು. ಕಳೆದ ಹತ್ತು ವರ್ಷಗಳಲ್ಲಿ, ಈ ಉಪಕ್ರಮವು ಭಾರತದ ಆರ್ಥಿಕ ಮತ್ತು ನಾವೀನ್ಯತೆ ರಚನೆಯ ಮೂಲಾಧಾರವಾಗಿ ಹೊರಹೊಮ್ಮಿದೆ. ಇದು ಸಾಂಸ್ಥಿಕ ಕಾರ್ಯವಿಧಾನಗಳನ್ನು ಬಲಪಡಿಸುವುದು, ಬಂಡವಾಳ ಮತ್ತು ಮಾರ್ಗದರ್ಶನದ ಲಭ್ಯತೆಯನ್ನು ವಿಸ್ತರಿಸುವುದು ಹಾಗೂ ವಿವಿಧ ಕ್ಷೇತ್ರ ಮತ್ತು ಪ್ರದೇಶಗಳಲ್ಲಿ ಸ್ಟಾರ್ಟಪ್‌ ಗಳು ಬೆಳೆಯಲು ಪೂರಕವಾದ ಪರಿಸರವನ್ನು ನಿರ್ಮಿಸಿದೆ. ರಾಷ್ಟ್ರ ನಿರ್ಮಾಣ, ಸಾಮಾಜಿಕ-ಆರ್ಥಿಕ ಅಭಿವೃದ್ಧಿ ಮತ್ತು ಸ್ವಾವಲಂಬನೆಯಲ್ಲಿ ಸ್ಟಾರ್ಟ್ ಅಪ್ ‌ಗಳು ವಹಿಸುವ ಪ್ರಮುಖ ಪಾತ್ರವನ್ನು ಗುರುತಿಸಿ, ಪ್ರಧಾನಮಂತ್ರಿಯವರು 2022 ರಲ್ಲಿ ಜನವರಿ 16 ಅನ್ನು 'ರಾಷ್ಟ್ರೀಯ ಸ್ಟಾರ್ಟ್ ಅಪ್ ದಿನ' ಎಂದು ಘೋಷಿಸಿದರು.

ಕಳೆದ ದಶಕದಲ್ಲಿ, ಭಾರತೀಯ ಸ್ಟಾರ್ಟ್ ಅಪ್ ಪರಿಸರ ವ್ಯವಸ್ಥೆಯು ಅಭೂತಪೂರ್ವ ವಿಸ್ತರಣೆಯನ್ನು ದಾಖಲಿಸಿದೆ, ದೇಶಾದ್ಯಂತ 2,00,000 ಕ್ಕೂ ಹೆಚ್ಚು ಸ್ಟಾರ್ಟ್ ಅಪ್ ಗಳನ್ನು ಡಿಪಿಐಐಟಿ (DPIIT) ಗುರುತಿಸಿದೆ. ಈ ಉದ್ಯಮಗಳು ವಿವಿಧ ಕ್ಷೇತ್ರಗಳಲ್ಲಿ ಉದ್ಯೋಗ ಸೃಷ್ಟಿ, ನಾವೀನ್ಯತೆ ಆಧಾರಿತ ಆರ್ಥಿಕ ಬೆಳವಣಿಗೆ ಮತ್ತು ದೇಶೀಯ ಮೌಲ್ಯ ಸರಪಳಿಗಳನ್ನು ಬಲಪಡಿಸುವಲ್ಲಿ ಪ್ರಮುಖ ಚಾಲಕಶಕ್ತಿಯಾಗಿ ಹೊರಹೊಮ್ಮಿವೆ. ನಿರಂತರ ನೀತಿ ಬೆಂಬಲ, ಸಾಂಸ್ಥಿಕ ಸೌಲಭ್ಯಗಳು ಮತ್ತು ಪರಿಸರ ವ್ಯವಸ್ಥೆಯಾದ್ಯಂತದ ಸಹಯೋಗದ ಮೂಲಕ, ಸ್ಟಾರ್ಟ್ ಅಪ್ ಇಂಡಿಯಾ ಉಪಕ್ರಮವು ಉದ್ಯಮಶೀಲತೆಯನ್ನು ಅಂತರ್ಗತ ಬೆಳವಣಿಗೆ, ತಾಂತ್ರಿಕ ಪ್ರಗತಿ ಮತ್ತು ದೀರ್ಘಕಾಲೀನ ಆರ್ಥಿಕ ಸ್ಥಿರತೆಗೆ ವೇಗವರ್ಧಕವಾಗಿ ಪೋಷಿಸುವ ಮೂಲಕ 'ವಿಕಸಿತ ಭಾರತ @ 2047' ರ ರಾಷ್ಟ್ರೀಯ ದೃಷ್ಟಿಕೋನವನ್ನು ಮುನ್ನಡೆಸುತ್ತಿದೆ.

ರಾಷ್ಟ್ರೀಯ ಸ್ಟಾರ್ಟ್ ಅಪ್ ದಿನದ ಸಂಭ್ರಮಾಚರಣೆಯ ಭಾಗವಾಗಿ, ಡಿಪಿಐಐಟಿ (DPIIT) ರಾಷ್ಟ್ರೀಯ ಸ್ಟಾರ್ಟ್ ಅಪ್ ಪ್ರಶಸ್ತಿಗಳ (NSA 5.0) ಐದನೇ ಆವೃತ್ತಿ ಮತ್ತು ರಾಜ್ಯಗಳ ಸ್ಟಾರ್ಟ್ ಅಪ್ ಶ್ರೇಯಾಂಕದ (SRF 5.0) ಫಲಿತಾಂಶಗಳನ್ನು ಪ್ರಕಟಿಸಿದೆ. ಈ ಎರಡು ಪ್ರಮುಖ ಉಪಕ್ರಮಗಳು ಸ್ಟಾರ್ಟ್ ಅಪ್ ಪರಿಸರ ವ್ಯವಸ್ಥೆಯ ಕಾರ್ಯಕ್ಷಮತೆಯನ್ನು ಹೆಚ್ಚಿಸುವಲ್ಲಿ ಮತ್ತು ಶ್ರೇಷ್ಠತೆಯನ್ನು ಗುರುತಿಸುವಲ್ಲಿ ಪ್ರಮುಖ ರಾಷ್ಟ್ರೀಯ ವೇದಿಕೆಗಳಾಗಿ ಹೊರಹೊಮ್ಮಿವೆ.

ರಾಷ್ಟ್ರೀಯ ಸ್ಟಾರ್ಟ್ ಅಪ್ ಪ್ರಶಸ್ತಿಗಳನ್ನು ನಾವೀನ್ಯತೆ, ಅಭಿವೃದ್ಧಿಯ ಸಾಮರ್ಥ್ಯ ಮತ್ತು ಸಾಮಾಜಿಕ ಪ್ರಭಾವದಲ್ಲಿ ಶ್ರೇಷ್ಠತೆಯನ್ನು ಪ್ರದರ್ಶಿಸುವ ಸ್ಟಾರ್ಟಪ್‌ ಗಳನ್ನು ಗುರುತಿಸಲು ವಿನ್ಯಾಸಗೊಳಿಸಲಾಗಿದೆ. ಜೊತೆಗೆ, ಇದು ಹೆಚ್ಚಿನ ಪ್ರಭಾವ ಬೀರುವ ಉದ್ದಿಮೆಗಳನ್ನು ಪ್ರದರ್ಶಿಸಲು ಒಂದು ವ್ಯವಸ್ಥಿತ ರಾಷ್ಟ್ರೀಯ ವೇದಿಕೆಯನ್ನು ಒದಗಿಸುತ್ತದೆ. ಸ್ಟಾರ್ಟ್ ಅಪ್ ಇಂಡಿಯಾದ ಹತ್ತು ವರ್ಷಗಳ ಐತಿಹಾಸಿಕ ಮೈಲಿಗಲ್ಲಿನ ಸಂದರ್ಭದಲ್ಲೇ ನಡೆಯುತ್ತಿರುವ ಈ ಐದನೇ ಆವೃತ್ತಿಯ ಪ್ರಶಸ್ತಿಗಳು, ಹೊಸ ಮತ್ತು ಭವಿಷ್ಯದ ಆಲೋಚನೆಯ ಪ್ರಶಸ್ತಿ ವಿಭಾಗಗಳನ್ನು ಪರಿಚಯಿಸುವ ಮೂಲಕ ಪರಿಸರ ವ್ಯವಸ್ಥೆಯ ಬೆಳೆಯುತ್ತಿರುವ ಪರಿಪಕ್ವತೆಯನ್ನು ಪ್ರತಿಬಿಂಬಿಸುತ್ತವೆ. ಒಟ್ಟು 20 ಪ್ರಶಸ್ತಿ ವಿಭಾಗಗಳಲ್ಲಿ ಹರಡಿರುವ ಈ ಬಾರಿಯ ರಾಷ್ಟ್ರೀಯ ಸ್ಟಾರ್ಟ್ ಅಪ್ ಪ್ರಶಸ್ತಿಗಳು, ದ್ವಿತೀಯ ಮತ್ತು ತೃತೀಯ ಹಂತದ ನಗರಗಳ ಸ್ಟಾರ್ಟ್ ಅಪ್ ಗಳು, ಡೀಪ್-ಟೆಕ್ ನಾವೀನ್ಯತೆ ಮತ್ತು ರಾಷ್ಟ್ರೀಯ ಅಭಿವೃದ್ಧಿ ಆದ್ಯತೆಗಳಿಗೆ ಅನುಗುಣವಾಗಿರುವ ಉದಯೋನ್ಮುಖ ಕ್ಷೇತ್ರಗಳ ಸ್ಟಾರ್ಟ್ ಅಪ್ ‌ಗಳನ್ನು ಗುರುತಿಸಲಿವೆ.

ರಾಜ್ಯಗಳ ಸ್ಟಾರ್ಟ್ ಅಪ್ ಶ್ರೇಯಾಂಕದ ಚೌಕಟ್ಟು, ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ವಾಸ್ತವ ನೆಲೆಯಲ್ಲಿ ಸ್ಟಾರ್ಟ್ ಅಪ್ ಗಳ ಬೆಳವಣಿಗೆಯನ್ನು ಎಷ್ಟು ಪರಿಣಾಮಕಾರಿಯಾಗಿ ಸಕ್ರಿಯಗೊಳಿಸುತ್ತಿವೆ ಎಂದು ಮೌಲ್ಯಮಾಪನ ಮಾಡಲು ಒಂದು ಪ್ರಾಯೋಗಿಕ ನೀತಿ ಮತ್ತು ಆಡಳಿತಾತ್ಮಕ ಸಾಧನವಾಗಿ ಕಾರ್ಯನಿರ್ವಹಿಸುತ್ತದೆ. ರಾಜ್ಯ ಸರ್ಕಾರಗಳ ನಡುವೆ ಆರೋಗ್ಯಕರ ಸ್ಪರ್ಧೆ ಮತ್ತು ಸಹಯೋಗ ಎರಡನ್ನೂ ಉತ್ತೇಜಿಸುವ ಮೂಲಕ, ಈ ಚೌಕಟ್ಟು ದೇಶಾದ್ಯಂತ ಬಲಿಷ್ಠ ಮತ್ತು ಸುಸೂತ್ರವಾಗಿ ಕಾರ್ಯನಿರ್ವಹಿಸುವ ಸ್ಟಾರ್ಟ್ ಅಪ್ ಪರಿಸರ ವ್ಯವಸ್ಥೆಗಳ ಅಭಿವೃದ್ಧಿಗೆ ಬೆಂಬಲ ನೀಡುತ್ತದೆ.

ರಾಜ್ಯಗಳ ಸ್ಟಾರ್ಟ್ ಅಪ್ ಶ್ರೇಯಾಂಕದ ಚೌಕಟ್ಟಿನ ಐದನೇ ಆವೃತ್ತಿಯು ಹಿಂದಿನ ಆವೃತ್ತಿಗಳಿಂದ ಪಡೆದ ಪಾಠಗಳನ್ನು ಆಧರಿಸಿದೆ ಮತ್ತು ಅಳೆಯಬಹುದಾದ ಫಲಿತಾಂಶಗಳು, ದೀರ್ಘಕಾಲೀನ ಸುಸ್ಥಿರತೆ ಹಾಗೂ ಸ್ಟಾರ್ಟ್ ಅಪ್ ಪರಿಸರ ವ್ಯವಸ್ಥೆಗಳ ಸ್ಥಿತಿಸ್ಥಾಪಕತ್ವಕ್ಕೆ ಹೆಚ್ಚಿನ ಒತ್ತು ನೀಡುತ್ತದೆ. ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳನ್ನು ಆರು ಸುಧಾರಣಾ ಕ್ಷೇತ್ರಗಳು ಮತ್ತು ಹತ್ತೊಂಬತ್ತು ಸ್ಪಷ್ಟವಾಗಿ ವ್ಯಾಖ್ಯಾನಿಸಲಾದ ಕ್ರಿಯಾ ಅಂಶಗಳ ಅಡಿಯಲ್ಲಿ ಮೌಲ್ಯಮಾಪನ ಮಾಡಲಾಗುತ್ತದೆ. ನೀತಿ ಮತ್ತು ಸಾಂಸ್ಥಿಕ ಬೆಂಬಲ, ಭೌತಿಕ ಮತ್ತು ಡಿಜಿಟಲ್ ಮೂಲಸೌಕರ್ಯ. ಧನಸಹಾಯದ ಲಭ್ಯತೆ,  ಮಾರುಕಟ್ಟೆ ಪ್ರವೇಶ ಮತ್ತು ಸಂಪರ್ಕಗಳು, ಉದ್ಯಮಿಗಳು ಮತ್ತು ಪರಿಸರ ವ್ಯವಸ್ಥೆಯ ಪಾಲುದಾರರಿಗೆ ಸಾಮರ್ಥ್ಯ ವರ್ಧನೆ ಹಾಗು ನಾವೀನ್ಯತೆ-ನೇತೃತ್ವದ ಬೆಳವಣಿಗೆಯನ್ನು ಒಳಗೊಂಡಿದೆ. ಪ್ರಸ್ತುತ ಆವೃತ್ತಿಯಲ್ಲಿ 34 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಭಾಗವಹಿಸುವಿಕೆಯು, ಯೋಜನೆಯ ಅನುಷ್ಠಾನವನ್ನು ಸುಧಾರಿಸುವಲ್ಲಿ, ಪರಿಸರ ವ್ಯವಸ್ಥೆಯ ಪರಿಪಕ್ವತೆಯನ್ನು ಬಲಪಡಿಸುವಲ್ಲಿ ಮತ್ತು ಎಲ್ಲಾ ಪ್ರಾದೇಶಿಕ ಹಂತಗಳಲ್ಲಿ ಸ್ಟಾರ್ಟಪ್‌ ಗಳು ಬೆಳೆಯಲು ಹಾಗೂ ವಿಸ್ತರಿಸಲು ಅನುವು ಮಾಡಿಕೊಡುವಲ್ಲಿ ದೇಶದ ಹಂಚಿಕೆಯ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ.

ರಾಷ್ಟ್ರೀಯ ಸ್ಟಾರ್ಟ್ ಅಪ್ ಪ್ರಶಸ್ತಿಗಳು ಮತ್ತು ರಾಜ್ಯಗಳ ಸ್ಟಾರ್ಟ್ ಅಪ್ ಶ್ರೇಯಾಂಕದ ಪ್ರಕ್ರಿಯೆಯು ದೇಶದಾದ್ಯಂತ ಸ್ಟಾರ್ಟಪ್‌ ಗಳ ಯಶಸ್ಸನ್ನು ಹೇಗೆ ಗುರುತಿಸಬೇಕು ಮತ್ತು ಪರಿಸರ ವ್ಯವಸ್ಥೆಯ ಕಾರ್ಯಕ್ಷಮತೆಯನ್ನು ಹೇಗೆ ಅಳೆಯಬೇಕು ಎಂಬುದನ್ನು ನಿರ್ಣಾಯಕವಾಗಿ ರೂಪಿಸಿವೆ. ಉತ್ತಮ ಪ್ರದರ್ಶನ ನೀಡುವ ಸ್ಟಾರ್ಟ್ ಅಪ್ ಗಳಿಗೆ ಬಹುಮಾನ ನೀಡುವ ಮೂಲಕ ಮತ್ತು ರಾಜ್ಯ ಮಟ್ಟದಲ್ಲಿ ಸರ್ಕಾರದ ಕ್ರಮಗಳನ್ನು ಮೌಲ್ಯಮಾಪನ ಮಾಡುವ ಮೂಲಕ, ಈ ಉಪಕ್ರಮಗಳು ಹೊಣೆಗಾರಿಕೆಯನ್ನು ಪ್ರೇರೇಪಿಸಿವೆ, ಮಾನದಂಡಗಳನ್ನು ಹೆಚ್ಚಿಸಿವೆ ಮತ್ತು ದೇಶಾದ್ಯಂತ ಪರಿಸರ ವ್ಯವಸ್ಥೆಯ ಅಭಿವೃದ್ಧಿಯ ವೇಗವನ್ನು ಹೆಚ್ಚಿಸಿವೆ.

ಸ್ಟಾರ್ಟ್ ಅಪ್ ಇಂಡಿಯಾ ಹತ್ತು ವರ್ಷಗಳನ್ನು ಪೂರೈಸುತ್ತಿರುವ ಈ ಸಂದರ್ಭದಲ್ಲಿ, ಈ ದಶಕವು ಸ್ಪಷ್ಟವಾದ ನೀತಿ ಉದ್ದೇಶ, ನಿರಂತರ ಅನುಷ್ಠಾನ ಮತ್ತು ಬೆಳೆಯುತ್ತಿರುವ ಉದ್ಯಮಶೀಲತೆಯ ಆತ್ಮವಿಶ್ವಾಸಕ್ಕೆ ಸಾಕ್ಷಿಯಾಗಿದೆ. ಇಂದಿನ ಸ್ಟಾರ್ಟಪ್‌ಗಳು ಕೇವಲ ನಾವೀನ್ಯತೆ ಮತ್ತು ಉದ್ಯೋಗ ಸೃಷ್ಟಿಯ ಎಂಜಿನ್‌ಗಳು ಮಾತ್ರವಲ್ಲದೆ, ಆರ್ಥಿಕ ಶಕ್ತಿ ಮತ್ತು ಸ್ವಾವಲಂಬನೆಗೆ ನಿರ್ಣಾಯಕ ಕೊಡುಗೆ ನೀಡುವ ಮೂಲಕ, ಉದ್ಯಮಶೀಲತೆ ಮತ್ತು ನಾವೀನ್ಯತೆಗೆ ಭಾರತವನ್ನು ವಿಶ್ವದ ಪ್ರಮುಖ ತಾಣವನ್ನಾಗಿ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿವೆ.

ಅನುಬಂಧ–I: ರಾಷ್ಟ್ರೀಯ ಸ್ಟಾರ್ಟ್ ಅಪ್ ಪ್ರಶಸ್ತಿಗಳು (NSA 5.0) – ವಿಭಾಗವಾರು ವಿಜೇತರು

ಪ್ರಶಸ್ತಿ ವಿಭಾಗ

ಸ್ಟಾರ್ಟ್ ಅಪ್ ಹೆಸರು

ರಾಜ್ಯ / ಕೇಂದ್ರಾಡಳಿತ ಪ್ರದೇಶ

ಅಗ್ರಿ-ಇನ್ನೋವೇಶನ್ ಅವಾರ್ಡ್

ಎರೀಟೆ

ಮಹಾರಾಷ್ಟ್ರ

ಆಸ್ಪೈರ್ ಪ್ರಶಸ್ತಿ

ಫ್ಯೂಸ್‌ ಲೇಜ್ ಇನ್ನೋವೇಶನ್ಸ್ ಪ್ರೈವೇಟ್ ಲಿಮಿಟೆಡ್

ಕೇರಳ

ಅತ್ಯುತ್ತಮ ಡೀಪ್‌ಟೆಕ್ ಸ್ಟಾರ್ಟ್ ಅಪ್ ಪ್ರಶಸ್ತಿ

ಟ್ರಿನಾನೋ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್

ಮಹಾರಾಷ್ಟ್ರ

ಬೂಟ್‌ ಸ್ಟ್ರಾಪ್ಡ್ ಪ್ರಶಸ್ತಿ

ಪಂಪ್ ಅಕಾಡೆಮಿ ಪ್ರೈವೇಟ್ ಲಿಮಿಟೆಡ್

ಕರ್ನಾಟಕ

ಸರ್ಕ್ಯುಲರ್ ಎಕಾನಮಿ ಇನ್ನೋವೇಟರ್ ಪ್ರಶಸ್ತಿ

ಇಕೋ ಎಸ್‌ ಟಿಪಿ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್

ಕರ್ನಾಟಕ

ಕಮ್ಯುನಿಟಿ ಡೆವಲಪ್‌ಮೆಂಟ್ ಕೆಟಲಿಸ್ಟ್

ಕ್ರೆಡಿಟ್ ‌ಬಕೆಟ್ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್

ಬಿಹಾರ

ಕ್ರಿಯೇಟಿವ್ ಇಂಡಸ್ಟ್ರಿ ಡಿಸ್ರಪ್ಟಿವ್

ಮೀಮೆರಾಕಿ ರಿಟೇಲ್ ಅಂಡ್ ಟೆಕ್ ಪ್ರೈವೇಟ್ ಲಿಮಿಟೆಡ್

ಹರಿಯಾಣ

ಎಫ್ ಅಂಡ್ ಬಿ ಟ್ರೈಲ್‌ಬ್ಲೇಜರ್

ಪ್ರಾಕ್ಸಿ ಫಾರ್ಮಾ ಪ್ರೈವೇಟ್ ಲಿಮಿಟೆಡ್

ಮಹಾರಾಷ್ಟ್ರ

ಫಿನ್‌ ಟೆಕ್ ರೆವಲ್ಯೂಷನ್ ಕೆಟಲಿಸ್ಟ್ ಅವಾರ್ಡ್

ಟಿಂಬಲ್ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್

ದೆಹಲಿ

ಹೆಲ್ತ್-ಟೆಕ್ ಎಕ್ಸಲೆನ್ಸ್ ಅವಾರ್ಡ್

ಬ್ಲೂ ಫೀನಿಕ್ಸ್ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್

ಮಹಾರಾಷ್ಟ್ರ

ಹ್ಯುಮಾನಿಟೇರಿಯನ್ ಇಂಪ್ಯಾಕ್ಟ್

ಕುಬೇರ್‌ ಜೀ ಟೆಕ್ ಪ್ರೈವೇಟ್ ಲಿಮಿಟೆಡ್

ಗುಜರಾತ್

ಇನ್‌ ಕ್ಲೂಸಿವ್ ಡಿಸೈನ್ ಎಕ್ಸಲೆನ್ಸ್

ಗ್ಲೋವಾಟ್ರಿಕ್ಸ್ ಪ್ರೈವೇಟ್ ಲಿಮಿಟೆಡ್

ಮಹಾರಾಷ್ಟ್ರ

ಇನ್ನೋವೇಶನ್ ಟ್ರೈಲ್‌ಬ್ಲೇಜರ್ಸ್

ಸನ್‌ ಫಾಕ್ಸ್ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್

ಉತ್ತರಾಖಂಡ

ಮೇಕ್ ಇನ್ ಇಂಡಿಯಾ ಎಕ್ಸಲೆನ್ಸ್

ಗೋಟ್ ರೊಬೊಟಿಕ್ಸ್ ಪ್ರೈವೇಟ್ ಲಿಮಿಟೆಡ್

ತಮಿಳುನಾಡು

ನೆಕ್ಸ್ಟ್‌ಜೆನ್ ಇನ್ನೋವೇಟರ್

ಮೈನ್ ಎಲೆಕ್ಟ್ರಿಕ್ ಆಟೋಮೋಟಿವ್ಸ್ ಪ್ರೈವೇಟ್ ಲಿಮಿಟೆಡ್

ದೆಹಲಿ

ರೈಸಿಂಗ್ ಸ್ಟಾರ್ ಅವಾರ್ಡ್

ಏವಿಯೋಟ್ರಾನ್ ಏರೋಸ್ಪೇಸ್ ಪ್ರೈವೇಟ್ ಲಿಮಿಟೆಡ್

ರಾಜಸ್ಥಾನ

ಸಪ್ಲೈ ಚೈನ್ ಸ್ಟಾರ್ಟ್ ಅಪ್ ಆಫ್ ದಿ ಇಯರ್

ಉದ್ಯೋಗಯಂತ್ರ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್

ದೆಹಲಿ

ಅರ್ಬನ್ ಮೊಬಿಲಿಟಿ ಎಕ್ಸಲೆನ್ಸ್

ಎಂಟಪಲ್ ಇ-ಮೊಬಿಲಿಟಿ ಪ್ರೈವೇಟ್ ಲಿಮಿಟೆಡ್

ಕರ್ನಾಟಕ

ವಿಷನರಿ ಅವಾರ್ಡ್ ಫಾರ್ ಇನ್‌ಫ್ರಾಸ್ಟ್ರಕ್ಚರ್

ಹೈಫನ್ ಎಸ್‌ ಸಿಎಸ್ ಪ್ರೈವೇಟ್ ಲಿಮಿಟೆಡ್

ಉತ್ತರ ಪ್ರದೇಶ

ವಿಮೆನ್-ಲೆಡ್ ಇನ್ನೋವೇಟರ್

ಅರೈವೇಶನ್ ಫ್ಯಾಷನ್‌ ಟೆಕ್ ಪ್ರೈವೇಟ್ ಲಿಮಿಟೆಡ್

ಹರಿಯಾಣ

 

*****


(रिलीज़ आईडी: 2215468) आगंतुक पटल : 14
इस विज्ञप्ति को इन भाषाओं में पढ़ें: Khasi , English , Urdu , हिन्दी , Gujarati , Malayalam