ಪ್ರಧಾನ ಮಂತ್ರಿಯವರ ಕಛೇರಿ
ಜನವರಿ 17-18 ರಂದು ಪಶ್ಚಿಮ ಬಂಗಾಳಕ್ಕೆ ಪ್ರಧಾನಮಂತ್ರಿ ಭೇಟಿ
ಜನವರಿ 17 ರಂದು ಮಾಲ್ಡಾದಲ್ಲಿ ₹3,250 ಕೋಟಿಗೂ ಹೆಚ್ಚು ಮೌಲ್ಯದ ವಿವಿಧ ರೈಲು ಮತ್ತು ರಸ್ತೆ ಯೋಜನೆಗಳಿಗೆ ಪ್ರಧಾನಮಂತ್ರಿ ಅವರಿಂದ ಲೋಕಾರ್ಪಣೆ ಮತ್ತು ಶಂಕುಸ್ಥಾಪನೆ
ಹೌರಾ ಮತ್ತು ಗುವಾಹಟಿ (ಕಾಮಾಖ್ಯ) ನಡುವಿನ ಭಾರತದ ಮೊದಲ ವಂದೇ ಭಾರತ್ ಸ್ಲೀಪರ್ ರೈಲಿಗೆ ಪ್ರಧಾನಮಂತ್ರಿ ಹಸಿರು ನಿಶಾನೆ ತೋರಲಿದ್ದಾರೆ
ಆಧುನಿಕ, ಆರಾಮದಾಯಕ ಮತ್ತು ಕೈಗೆಟುಕುವ ದರದಲ್ಲಿ ದೂರದ ಪ್ರಯಾಣದ ಅನುಭವವನ್ನು ನೀಡಲಿದೆ ಸಂಪೂರ್ಣ ಹವಾನಿಯಂತ್ರಿತ ವಂದೇ ಭಾರತ್ ಸ್ಲೀಪರ್ ರೈಲು
ಹೂಗ್ಲಿಯ ಸಿಂಗೂರಿನಲ್ಲಿ ₹830 ಕೋಟಿಗೂ ಹೆಚ್ಚು ಮೌಲ್ಯದ ವಿವಿಧ ಅಭಿವೃದ್ಧಿ ಯೋಜನೆಗಳ ಉದ್ಘಾಟನೆ, ಶಿಲಾನ್ಯಾಸ ಮತ್ತು ಹಸಿರು ನಿಶಾನೆ ತೋರಿ ಲೋಕಾರ್ಪಣೆ ನೆರವೇರಿಸಲಿರುವ ಪ್ರಧಾನಮಂತ್ರಿ
ಒಳನಾಡಿನ ಜಲ ಸಾರಿಗೆ ಮತ್ತು ಪ್ರಾದೇಶಿಕ ಸಂಪರ್ಕವನ್ನು ಉತ್ತೇಜಿಸಲು ಬಾಲಗಢದಲ್ಲಿ ವಿಸ್ತೃತ ಬಂದರು ದ್ವಾರ ವ್ಯವಸ್ಥೆಯ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ ಪ್ರಧಾನಮಂತ್ರಿ
ಪಶ್ಚಿಮ ಬಂಗಾಳ ಮತ್ತು ಇತರ ರಾಜ್ಯಗಳೊಂದಿಗೆ ರೈಲು ಸಂಪರ್ಕವನ್ನು ಹೆಚ್ಚಿಸುವ 7 ಅಮೃತ್ ಭಾರತ್ ರೈಲುಗಳಿಗೆ ಪ್ರಧಾನಮಂತ್ರಿ ಹಸಿರು ನಿಶಾನೆ ತೋರಲಿದ್ದಾರೆ
प्रविष्टि तिथि:
16 JAN 2026 1:55PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ 2026ರ ಜನವರಿ 17-18, ರಂದು ಪಶ್ಚಿಮ ಬಂಗಾಳಕ್ಕೆ ಭೇಟಿ ನೀಡಲಿದ್ದಾರೆ.
ಜನವರಿ 17 ರಂದು ಮಧ್ಯಾಹ್ನ 12:45 ರ ಸುಮಾರಿಗೆ, ಪ್ರಧಾನಮಂತ್ರಿ ಅವರು ಮಾಲ್ಡಾಕ್ಕೆ ಭೇಟಿ ನೀಡಿ ಮಾಲ್ಡಾ ಪಟ್ಟಣ ರೈಲು ನಿಲ್ದಾಣದಲ್ಲಿ ಹೌರಾ ಮತ್ತು ಗುವಾಹಟಿ (ಕಾಮಾಖ್ಯ) ನಡುವಿನ ಭಾರತದ ಮೊದಲ ವಂದೇ ಭಾರತ್ ಸ್ಲೀಪರ್ ರೈಲಿಗೆ ಹಸಿರು ನಿಶಾನೆ ತೋರಲಿದ್ದಾರೆ. ನಂತರ, ಮಧ್ಯಾಹ್ನ 1:45 ರ ಸುಮಾರಿಗೆ, ಪ್ರಧಾನ ಮಂತ್ರಿ ಅವರು ಮಾಲ್ಡಾದಲ್ಲಿ ಸಾರ್ವಜನಿಕ ಸಮಾರಂಭದಲ್ಲಿ ₹3,250 ಕೋಟಿಗೂ ಹೆಚ್ಚು ಮೌಲ್ಯದ ಬಹು ರೈಲು ಮತ್ತು ರಸ್ತೆ ಮೂಲಸೌಕರ್ಯ ಯೋಜನೆಗಳನ್ನು ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ ಮತ್ತು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.
ಜನವರಿ 18 ರಂದು ಮಧ್ಯಾಹ್ನ 3 ಗಂಟೆಗೆ, ಪ್ರಧಾನ ಮಂತ್ರಿ ಅವರು ಹೂಗ್ಲಿ ಜಿಲ್ಲೆಯ ಸಿಂಗೂರಿನಲ್ಲಿ ಸುಮಾರು ₹830 ಕೋಟಿ ಮೌಲ್ಯದ ವಿವಿಧ ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಲಿದ್ದಾರೆ, ಶಿಲಾನ್ಯಾಸ ಮಾಡಲಿದ್ದಾರೆ ಮತ್ತು ಲೋಕಾರ್ಪಣೆ ಮಾಡಲಿದ್ದಾರೆ.
ಮಾಲ್ಡಾದಲ್ಲಿ ಪ್ರಧಾನಮಂತ್ರಿ
ಪ್ರಧಾನಮಂತ್ರಿ ಮಾಲ್ಡಾಗೆ ಭೇಟಿ ನೀಡಿ ಪಶ್ಚಿಮ ಬಂಗಾಳ ಮತ್ತು ಈಶಾನ್ಯ ಪ್ರದೇಶದಲ್ಲಿ ಸಂಪರ್ಕವನ್ನು ಬಲಪಡಿಸುವ ಮತ್ತು ಅಭಿವೃದ್ಧಿಯನ್ನು ವೇಗಗೊಳಿಸುವ ಗುರಿಯನ್ನು ಹೊಂದಿರುವ ₹3,250 ಕೋಟಿ ಮೌಲ್ಯದ ಬಹು ರೈಲು ಮತ್ತು ರಸ್ತೆ ಮೂಲಸೌಕರ್ಯ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ, ಹಾಗು ಅಭಿವೃದ್ಧಿ ಯೋಜನೆಗಳನ್ನು ದೇಶಕ್ಕೆ ಸಮರ್ಪಿಸಲಿದ್ದಾರೆ.
ಪ್ರಧಾನಮಂತ್ರಿ ಮಾಲ್ಡಾ ಟೌನ್ ರೈಲು ನಿಲ್ದಾಣಕ್ಕೆ ಭೇಟಿ ನೀಡಲಿದ್ದಾರೆ, ಅಲ್ಲಿ ಅವರು ಹೌರಾ ಮತ್ತು ಗುವಾಹಟಿ (ಕಾಮಾಖ್ಯ) ನಡುವಿನ ಭಾರತದ ಮೊದಲ ವಂದೇ ಭಾರತ್ ಸ್ಲೀಪರ್ ರೈಲಿಗೆ ಹಸಿರು ನಿಶಾನೆ ತೋರಲಿದ್ದಾರೆ. ಅವರು ಗುವಾಹಟಿ (ಕಾಮಾಖ್ಯ)–ಹೌರಾ ವಂದೇ ಭಾರತ್ ಸ್ಲೀಪರ್ ರೈಲಿಗೆ ವರ್ಚುವಲ್ ಮೂಲಕ ಹಸಿರು ನಿಶಾನೆ ತೋರಲಿದ್ದಾರೆ. ಆಧುನಿಕ ಭಾರತದ ಹೆಚ್ಚುತ್ತಿರುವ ಸಾರಿಗೆ ಅಗತ್ಯಗಳನ್ನು ಪೂರೈಸಲು ಅಭಿವೃದ್ಧಿಪಡಿಸಲಾದ ಸಂಪೂರ್ಣ ಹವಾನಿಯಂತ್ರಿತ ವಂದೇ ಭಾರತ್ ಸ್ಲೀಪರ್ ರೈಲು ಪ್ರಯಾಣಿಕರಿಗೆ ಕಡಿಮೆ ದರದಲ್ಲಿ ವಿಮಾನಯಾನದಂತಹ ಪ್ರಯಾಣದ ಅನುಭವವನ್ನು ನೀಡಲು ಸಜ್ಜಾಗಿದೆ. ಇದು ದೀರ್ಘ ದೂರದ ಪ್ರಯಾಣಗಳನ್ನು ವೇಗವಾಗಿಸುತ್ತದೆ, ಸುರಕ್ಷಿತವಾಗಿಸುತ್ತದೆ ಮತ್ತು ಹೆಚ್ಚು ಅನುಕೂಲಕರವಾಗಿಸುತ್ತದೆ. ಹೌರಾ-ಗುವಾಹಟಿ (ಕಾಮಾಖ್ಯ) ಮಾರ್ಗದಲ್ಲಿ ಪ್ರಯಾಣದ ಸಮಯವನ್ನು ಸುಮಾರು 2.5 ಗಂಟೆಗಳಷ್ಟು ಗಮನಾರ್ಹವಾಗಿ ಕಡಿಮೆ ಮಾಡುವ ಮೂಲಕ, ಈ ರೈಲು ಧಾರ್ಮಿಕ ಪ್ರಯಾಣ (ತೀರ್ಥ ಯಾತ್ರೆ) ಮತ್ತು ಪ್ರವಾಸೋದ್ಯಮಕ್ಕೆ ಪ್ರಮುಖ ಉತ್ತೇಜನ ನೀಡುತ್ತದೆ.
ಬಲೂರ್ಘಾಟ್ ಮತ್ತು ಹಿಲಿ ನಡುವಿನ ಹೊಸ ರೈಲು ಮಾರ್ಗ, ನ್ಯೂ ಜಲ್ಪೈಗುರಿಯಲ್ಲಿ ಮುಂದಿನ ಪೀಳಿಗೆಯ ಸರಕು ನಿರ್ವಹಣಾ ಸೌಲಭ್ಯಗಳು, ಸಿಲಿಗುರಿ ಲೋಕೋ ಶೆಡ್‌ನ ಮೇಲ್ದರ್ಜೆೀಕರಣ ಮತ್ತು ಜಲ್ಪೈಗುರಿ ಜಿಲ್ಲೆಯಲ್ಲಿ ವಂದೇ ಭಾರತ್ ರೈಲು ನಿರ್ವಹಣಾ ಸೌಲಭ್ಯಗಳ ಆಧುನೀಕರಣ ಸೇರಿದಂತೆ ಪಶ್ಚಿಮ ಬಂಗಾಳದಲ್ಲಿ ನಾಲ್ಕು ಪ್ರಮುಖ ರೈಲ್ವೆ ಯೋಜನೆಗಳಿಗೆ ಪ್ರಧಾನಮಂತ್ರಿ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಈ ಯೋಜನೆಗಳು ಪ್ರಯಾಣಿಕ ಮತ್ತು ಸರಕು ಸಾಗಣೆ ಕಾರ್ಯಾಚರಣೆಗಳನ್ನು ಬಲಪಡಿಸುತ್ತವೆ, ಉತ್ತರ ಬಂಗಾಳದಲ್ಲಿ ಲಾಜಿಸ್ಟಿಕ್ಸ್ ದಕ್ಷತೆಯನ್ನು ಸುಧಾರಿಸುತ್ತವೆ ಮತ್ತು ಈ ಪ್ರದೇಶದಲ್ಲಿ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತವೆ.
ಪ್ರಧಾನಮಂತ್ರಿಯವರು ನ್ಯೂ ಕೂಚ್‌ಬೆಹಾರ್-ಬಮನ್‌ಹ್ಯಾಟ್ ಮತ್ತು ನ್ಯೂ ಕೂಚ್‌ಬೆಹಾರ್-ಬಾಕ್ಸಿರ್‌ಹ್ಯಾಟ್ ನಡುವಿನ ರೈಲು ಮಾರ್ಗಗಳ ವಿದ್ಯುದ್ದೀಕರಣವನ್ನು ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ, ಇದು ವೇಗವಾದ, ಸ್ವಚ್ಛ ಮತ್ತು ಹೆಚ್ಚು ಇಂಧನ-ದಕ್ಷತೆಯ ರೈಲು ಕಾರ್ಯಾಚರಣೆಗಳನ್ನು ಸಕ್ರಿಯಗೊಳಿಸುತ್ತದೆ.
ಪ್ರಧಾನಮಂತ್ರಿಯವರು 4 ಹೊಸ ಅಮೃತ್ ಭಾರತ್ ಎಕ್ಸ್‌ಪ್ರೆಸ್ ರೈಲುಗಳಿಗೆ ವರ್ಚುವಲ್ ಆಗಿ ಹಸಿರು ನಿಶಾನೆ ತೋರಿಸಲಿದ್ದಾರೆ – ಅವುಗಳೆಂದರೆ ನ್ಯೂ ಜಲ್‌ಪೈಗುರಿ-ನಾಗರ್‌ಕೋಯಿಲ್ ಅಮೃತ್ ಭಾರತ್ ಎಕ್ಸ್‌ಪ್ರೆಸ್; ನ್ಯೂ ಜಲ್‌ಪೈಗುರಿ-ತಿರುಚಿರಾಪಳ್ಳಿ ಅಮೃತ್ ಭಾರತ್ ಎಕ್ಸ್‌ಪ್ರೆಸ್; ಅಲಿಪುರ್ದಾರ್ – ಎಸ್.ಎಂ.ವಿ.ಟಿ. ಬೆಂಗಳೂರು ಅಮೃತ್ ಭಾರತ್ ಎಕ್ಸ್‌ಪ್ರೆಸ್; ಅಲಿಪುರ್ದಾರ್ - ಮುಂಬೈ (ಪನ್ವೇಲ್) ಅಮೃತ್ ಭಾರತ್ ಎಕ್ಸ್‌ಪ್ರೆಸ್. ಇದು ಕೈಗೆಟುಕುವ ಮತ್ತು ವಿಶ್ವಾಸಾರ್ಹ ದೂರ ಪ್ರಯಾಣದ ರೈಲು ಸಂಪರ್ಕವನ್ನು ಹೆಚ್ಚಿಸುತ್ತದೆ. ಈ ಸೇವೆಗಳು ಸಾಮಾನ್ಯ ನಾಗರಿಕರು, ವಿದ್ಯಾರ್ಥಿಗಳು, ವಲಸೆ ಕಾರ್ಮಿಕರು ಮತ್ತು ವ್ಯಾಪಾರಿಗಳ ಚಲನಶೀಲತೆಯ ಅಗತ್ಯಗಳನ್ನು ಬೆಂಬಲಿಸುತ್ತವೆ, ಜೊತೆಗೆ ಅಂತರ-ರಾಜ್ಯ ಆರ್ಥಿಕ ಮತ್ತು ಸಾಮಾಜಿಕ ಸಂಪರ್ಕಗಳನ್ನು ಬಲಪಡಿಸುತ್ತವೆ.
ಎಲ್‌ಎಚ್‌ಬಿ ಕೋಚ್‌ಗಳನ್ನು ಹೊಂದಿದ ಎರಡು ಹೊಸ ರೈಲು ಸೇವೆಗಳಿಗೆ ಪ್ರಧಾನಮಂತ್ರಿಯವರು ಹಸಿರು ನಿಶಾನೆ ತೋರಿಸಲಿದ್ದಾರೆ. ಅವುಗಳೆಂದರೆ - ರಾಧಿಕಾಪುರ - ಎಸ್.ಎಂ.ವಿ.ಟಿ. ಬೆಂಗಳೂರು ಎಕ್ಸ್‌ಪ್ರೆಸ್; ಬಳೂರ್ಘಾಟ್ - ಎಸ್.ಎಂ.ವಿ.ಟಿ. ಬೆಂಗಳೂರು ಎಕ್ಸ್‌ಪ್ರೆಸ್. ಈ ರೈಲುಗಳು ಪ್ರದೇಶದ ಯುವಜನರು, ವಿದ್ಯಾರ್ಥಿಗಳು ಮತ್ತು ಐಟಿ ವೃತ್ತಿಪರರಿಗೆ ಬೆಂಗಳೂರಿನಂತಹ ಪ್ರಮುಖ ಐಟಿ ಮತ್ತು ಉದ್ಯೋಗ ಕೇಂದ್ರಗಳಿಗೆ ನೇರ, ಸುರಕ್ಷಿತ ಮತ್ತು ಆರಾಮದಾಯಕ ಪ್ರಯಾಣ ಸಂಪರ್ಕವನ್ನು ಒದಗಿಸುತ್ತವೆ.
ರಾಷ್ಟ್ರೀಯ ಹೆದ್ದಾರಿ-31ಡಿ ಯ ಧೂಪ್ಗುರಿ-ಫಲಕಟಾ ವಿಭಾಗದ ಪುನರ್ವಸತಿ ಮತ್ತು ಚತುಷ್ಪಥ ರಸ್ತೆ ನಿರ್ಮಾಣಕ್ಕೆ ಪ್ರಧಾನಮಂತ್ರಿ ಅವರು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಇದು ಉತ್ತರ ಬಂಗಾಳದಲ್ಲಿ ಪ್ರಾದೇಶಿಕ ರಸ್ತೆ ಸಂಪರ್ಕವನ್ನು ಸುಧಾರಿಸುವ ಮತ್ತು ಪ್ರಯಾಣಿಕರು ಹಾಗು ಸರಕುಗಳ ಸುಗಮ ಸಂಚಾರಕ್ಕೆ ಅನುಕೂಲವಾಗುವ ಪ್ರಮುಖ ರಸ್ತೆ ಯೋಜನೆಯಾಗಿದೆ.
ಈ ಯೋಜನೆಗಳು ಆಧುನಿಕ ಮೂಲಸೌಕರ್ಯ ಸೃಷ್ಟಿ ಮತ್ತು ಸುಧಾರಿತ ಸಂಪರ್ಕವನ್ನು ನಿರ್ಮಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ, ಪೂರ್ವ ಮತ್ತು ಈಶಾನ್ಯ ಪ್ರದೇಶಗಳನ್ನು ದೇಶದ ಪ್ರಮುಖ ಬೆಳವಣಿಗೆಯ ಎಂಜಿನ್‌ಗಳಾಗಿ ಬಲಪಡಿಸುತ್ತವೆ.
ಹೂಗ್ಲಿಯಲ್ಲಿ ಪ್ರಧಾನಮಂತ್ರಿ
ಹೂಗ್ಲಿಯ ಸಿಂಗೂರಿನಲ್ಲಿ ₹830 ಕೋಟಿಗೂ ಹೆಚ್ಚು ಮೌಲ್ಯದ ವಿವಿಧ ಅಭಿವೃದ್ಧಿ ಯೋಜನೆಗಳನ್ನು ಪ್ರಧಾನಮಂತ್ರಿ ಉದ್ಘಾಟಿಸಲಿದ್ದಾರೆ, ಶಿಲಾನ್ಯಾಸ ನೆರವೇರಿಸಲಿದ್ದಾರೆ ಮತ್ತು ಹಸಿರು ನಿಶಾನೆ ತೋರಿಸಲಿದ್ದಾರೆ.
ಒಳನಾಡಿನ ಜಲ ಸಾರಿಗೆ (ಐಡಬ್ಲ್ಯೂಟಿ) ಟರ್ಮಿನಲ್ ಮತ್ತು ರಸ್ತೆ ಓವರ್ ಬ್ರಿಡ್ಜ್ ಸೇರಿದಂತೆ ಬಾಲಗಢದಲ್ಲಿ ವಿಸ್ತೃತ ಬಂದರು ದ್ವಾರ ವ್ಯವಸ್ಥೆಯ ಶಿಲಾನ್ಯಾಸ ನೆರವೇರಿಸಲಿದ್ದಾರೆ.
ಸರಿಸುಮಾರು 900 ಎಕರೆ ವಿಸ್ತೀರ್ಣದಲ್ಲಿ, ಬಾಲಗಢವನ್ನು ವಾರ್ಷಿಕ ಸುಮಾರು 2.7 ಮಿಲಿಯನ್ ಟನ್ (ಎಂಟಿಪಿಎ) ಸಾಮರ್ಥ್ಯದೊಂದಿಗೆ ಆಧುನಿಕ ಸರಕು ನಿರ್ವಹಣಾ ಟರ್ಮಿನಲ್ ಆಗಿ ಅಭಿವೃದ್ಧಿಪಡಿಸಲಾಗುತ್ತಿದೆ. ಈ ಯೋಜನೆಯು ಎರಡು ಮೀಸಲಾದ ಸರಕು ನಿರ್ವಹಣಾ ಜೆಟ್ಟಿಗಳ ನಿರ್ಮಾಣವನ್ನು ಒಳಗೊಂಡಿದೆ, ಒಂದು ಕಂಟೇನರೈಸ್ಡ್ ಸರಕುಗಾಗಿ ಮತ್ತು ಒಂದು ಒಣ ಬೃಹತ್ ಸರಕುಗಳಿಗಾಗಿ.
ಬಾಲಾಗಢ ಯೋಜನೆಯು ಭಾರೀ ಸರಕು ಸಾಗಣೆಯನ್ನು ಜನದಟ್ಟಣೆಯ ನಗರ ಕಾರಿಡಾರ್‌ಗಳಿಂದ ಬೇರೆಡೆಗೆ ತಿರುಗಿಸುವ ಮೂಲಕ ಸರಕು ಸ್ಥಳಾಂತರದ ದಕ್ಷತೆಯನ್ನು ಗಮನಾರ್ಹವಾಗಿ ಸುಧಾರಿಸುವ ಗುರಿಯನ್ನು ಹೊಂದಿದೆ. ಇದು ರಸ್ತೆ ಸುರಕ್ಷತೆಯನ್ನು ಹೆಚ್ಚಿಸುತ್ತದೆ, ಕೋಲ್ಕತ್ತಾ ನಗರದಲ್ಲಿ ವಾಹನ ದಟ್ಟಣೆ ಮತ್ತು ಮಾಲಿನ್ಯವನ್ನು ಕಡಿಮೆ ಮಾಡುತ್ತದೆ ಮತ್ತು ನಿವಾಸಿಗಳ ಸುಧಾರಿತ ಜೀವನ ಗುಣಮಟ್ಟಕ್ಕೆ ಕೊಡುಗೆ ನೀಡುತ್ತದೆ. ಸುಧಾರಿತ ಮಲ್ಟಿಮೋಡಲ್ ಸಂಪರ್ಕ ಮತ್ತು ಲಾಜಿಸ್ಟಿಕ್ಸ್ ದಕ್ಷತೆಯು ಪ್ರಾದೇಶಿಕ ಕೈಗಾರಿಕೆಗಳು, ಎಂ.ಎಸ್.ಎಂ.ಇ. ಗಳು ಮತ್ತು ಕೃಷಿ ಉತ್ಪಾದಕರಿಗೆ ವೆಚ್ಚ-ಪರಿಣಾಮಕಾರಿ ಮಾರುಕಟ್ಟೆ ಪ್ರವೇಶವನ್ನು ಒದಗಿಸುತ್ತದೆ. ಈ ಯೋಜನೆಯು ಗಣನೀಯ ನೇರ ಮತ್ತು ಪರೋಕ್ಷ ಉದ್ಯೋಗವನ್ನು ಸೃಷ್ಟಿಸುವ ನಿರೀಕ್ಷೆಯಿದೆ, ಲಾಜಿಸ್ಟಿಕ್ಸ್, ಟರ್ಮಿನಲ್ ಕಾರ್ಯಾಚರಣೆಗಳು, ಸಾರಿಗೆ ಸೇವೆಗಳು, ನಿರ್ವಹಣೆ ಮತ್ತು ಸಂಬಂಧಿತ ಚಟುವಟಿಕೆಗಳಲ್ಲಿ ಉದ್ಯೋಗ ಸೃಷ್ಟಿಯ ಮೂಲಕ ಸ್ಥಳೀಯ ಸಮುದಾಯಗಳಿಗೆ ಪ್ರಯೋಜನವನ್ನು ನೀಡುತ್ತದೆ.
ಪ್ರಧಾನಮಂತ್ರಿಗಳು ಕೋಲ್ಕತ್ತಾದಲ್ಲಿ ಅತ್ಯಾಧುನಿಕ ಎಲೆಕ್ಟ್ರಿಕ್ ಕ್ಯಾಟಮರನ್ (ದೋಣಿಗಳು) ಸಹ ಪ್ರಾರಂಭಿಸಲಿದ್ದಾರೆ. ಕೊಚ್ಚಿನ್ ಶಿಪ್‌ಯಾರ್ಡ್ ಲಿಮಿಟೆಡ್ ಒಳನಾಡಿನ ಜಲ ಸಾರಿಗೆಗಾಗಿ ಸ್ಥಳೀಯವಾಗಿ ನಿರ್ಮಿಸಲಾದ 6 ಎಲೆಕ್ಟ್ರಿಕ್ ಕ್ಯಾಟಮರನ್‌ಗಳಲ್ಲಿ ಇದು ಒಂದಾಗಿದೆ. 50-ಪ್ರಯಾಣಿಕರ ಹೈಬ್ರಿಡ್ ಎಲೆಕ್ಟ್ರಿಕ್ ಅಲ್ಯೂಮಿನಿಯಂ ಕ್ಯಾಟಮರನ್, ಸುಧಾರಿತ ವಿದ್ಯುತ್ ಪ್ರೊಪಲ್ಷನ್ ವ್ಯವಸ್ಥೆಗಳು ಮತ್ತು ಲಿಥಿಯಂ-ಟೈಟನೇಟ್ ಬ್ಯಾಟರಿ ತಂತ್ರಜ್ಞಾನವನ್ನು ಹೊಂದಿದ್ದು, ಸಂಪೂರ್ಣ ಶೂನ್ಯ-ಹೊರಸೂಸುವಿಕೆ ವಿದ್ಯುತ್ ಮೋಡ್‌ನಲ್ಲಿ ಮತ್ತು ವಿಸ್ತೃತ ಸಹಿಷ್ಣುತೆಗಾಗಿ ಹೈಬ್ರಿಡ್ ಮೋಡ್‌ನಲ್ಲಿ ಕಾರ್ಯನಿರ್ವಹಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಹಡಗು ನಗರ ನದಿ ಚಲನಶೀಲತೆ, ಪರಿಸರ ಪ್ರವಾಸೋದ್ಯಮ ಮತ್ತು ಹೂಗ್ಲಿ ನದಿಯ ಉದ್ದಕ್ಕೂ ಕೊನೆಯ ಮೈಲಿವರೆಗೆ ಪ್ರಯಾಣಿಕರ ಸಂಪರ್ಕವನ್ನು ಬೆಂಬಲಿಸುತ್ತದೆ.
ಪ್ರಧಾನಮಂತ್ರಿಯವರು ಜಯರಾಂಬತಿ-ಬರೋಗೋಪಿನಾಥಪುರ-ಮಯ್ನಾಪುರ ಹೊಸ ರೈಲು ಮಾರ್ಗವನ್ನು ಉದ್ಘಾಟಿಸಲಿದ್ದಾರೆ. ಈ ಮಾರ್ಗವು ತಾರಕೇಶ್ವರ-ಬಿಷ್ಣುಪುರ ಹೊಸ ರೈಲು ಮಾರ್ಗ ಯೋಜನೆಯ ಪ್ರಮುಖ ಭಾಗವಾಗಿದೆ. ಹೊಸ ರೈಲು ಮಾರ್ಗದ ಜೊತೆಗೆ, ಮೇನಾಪುರ ಮತ್ತು ಜಯರಾಂಬತಿ ನಡುವಿನ ಬರೋಗೋಪಿನಾಥಪುರದಲ್ಲಿ ನಿಲುಗಡೆ ಹೊಂದಿರುವ ಹೊಸ ರೈಲು ಸೇವೆಗೆ ಸಹ ಚಾಲನೆ ನೀಡಲಾಗುವುದು. ಇದು ಬಂಕುರಾ ಜಿಲ್ಲೆಯ ನಿವಾಸಿಗಳಿಗೆ ನೇರ ರೈಲು ಸಂಪರ್ಕವನ್ನು ಒದಗಿಸುತ್ತದೆ, ಇದು ದೈನಂದಿನ ಪ್ರಯಾಣಿಕರು, ವಿದ್ಯಾರ್ಥಿಗಳು ಮತ್ತು ಯಾತ್ರಾರ್ಥಿಗಳಿಗೆ ಪ್ರಯಾಣವನ್ನು ಹೆಚ್ಚು ಕೈಗೆಟುಕುವಂತೆ ಮಾಡುತ್ತದೆ ಮತ್ತು ಅನುಕೂಲಕರವಾಗಿಸುತ್ತದೆ.
ಪ್ರಧಾನಮಂತ್ರಿಯವರು ಮೂರು ಅಮೃತ್ ಭಾರತ್ ಎಕ್ಸ್‌ಪ್ರೆಸ್ ರೈಲುಗಳಿಗೆ ಹಸಿರು ನಿಶಾನೆ ತೋರಲಿದ್ದಾರೆ: ಅವುಗಳೆಂದರೆ ಕೋಲ್ಕತ್ತಾ (ಹೌರಾ) - ಆನಂದ್ ವಿಹಾರ್ ಟರ್ಮಿನಲ್ ಅಮೃತ್ ಭಾರತ್ ಎಕ್ಸ್‌ಪ್ರೆಸ್; ಕೋಲ್ಕತ್ತಾ (ಸೀಲ್ಡಾ) - ಬನಾರಸ್ ಅಮೃತ್ ಭಾರತ್ ಎಕ್ಸ್‌ಪ್ರೆಸ್; ಕೋಲ್ಕತ್ತಾ (ಸಂತ್ರಗಚಿ) - ತಾಂಬರಂ ಅಮೃತ್ ಭಾರತ್ ಎಕ್ಸ್‌ಪ್ರೆಸ್.
*****
(रिलीज़ आईडी: 2215323)
आगंतुक पटल : 3
इस विज्ञप्ति को इन भाषाओं में पढ़ें:
Assamese
,
English
,
Urdu
,
हिन्दी
,
Manipuri
,
Bengali
,
Gujarati
,
Odia
,
Tamil
,
Telugu
,
Malayalam