ರಕ್ಷಣಾ ಸಚಿವಾಲಯ
azadi ka amrit mahotsav

10ನೇ ಸಶಸ್ತ್ರ ಪಡೆಗಳ ಮಾಜಿ ಸೈನಿಕರ ದಿನದಂದು ಮಾಜಿ ಸೈನಿಕರ ಶೌರ್ಯ, ತ್ಯಾಗ ಮತ್ತು ಸಮರ್ಪಿತ ಸೇವೆಗೆ ದೇಶದ ನಮನ


ಈ ದಿನದ ಅಂಗವಾಗಿ ಭಾರತದಾದ್ಯಂತ ಮಾಜಿ ಸೈನಿಕರ ರ್ಯಾಲಿಗಳು, ಪುಷ್ಪಗುಚ್ಛ ಅರ್ಪಿಸುವ ಸಮಾರಂಭಗಳು, ಕುಂದುಕೊರತೆ ನಿವಾರಣಾ ಕೌಂಟರ್‌ ಗಳು ಮತ್ತು ಸೌಲಭ್ಯ ನೆರವು ಕೇಂದ್ರಗಳ ಸ್ಥಾಪನೆ

ಮಾಜಿ ಸೈನಿಕರು ರಾಷ್ಟ್ರೀಯ ಪ್ರಜ್ಞೆಯ ಜೀವಂತ ಸ್ತಂಭಗಳು, ಸಾಮೂಹಿಕ ಧೈರ್ಯದ ಸಂಕೇತಗಳು ಮತ್ತು ಮುಂದಿನ ಪೀಳಿಗೆಗೆ ಸ್ಫೂರ್ತಿಯಾಗಿದ್ದಾರೆ: ರಕ್ಷಣಾ ಸಚಿವರು

"ಭಾರತವು ಬಲಿಷ್ಠ, ಸ್ವಾವಲಂಬಿ ಮತ್ತು ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಲು ಮಾಜಿ ಸೈನಿಕರ ಅನುಭವ, ನಾಯಕತ್ವ ಮತ್ತು ಮೌಲ್ಯಗಳು ಅಮೂಲ್ಯ ಆಸ್ತಿಗಳಾಗಿವೆ"

40 ವರ್ಷಗಳ ಹಿಂದೆ ಶ್ರೀಲಂಕಾದಲ್ಲಿ 'ಆಪರೇಷನ್ ಪವನ್' ಅವಧಿಯಲ್ಲಿ ಐಪಿಕೆಎಫ್ ನ ಭಾಗವಾಗಿದ್ದ ಕೆಚ್ಚೆದೆಯ ಮಾಜಿ ಸೈನಿಕರಿಗೆ ರಕ್ಷಣಾ ಸಚಿವರಿಂದ ಭಾವಪೂರ್ಣ ಗೌರವ ಸಲ್ಲಿಕೆ

"ಪ್ರಧಾನಮಂತ್ರಿ ಮೋದಿ ನೇತೃತ್ವದ ಸರ್ಕಾರವು ಮಾಜಿ ಸೈನಿಕರಿಗೆ ಅರ್ಹವಾದ ಗೌರವವನ್ನು ನೀಡುತ್ತಿದೆ"

प्रविष्टि तिथि: 14 JAN 2026 3:35PM by PIB Bengaluru

ಜನವರಿ 14, 2026 ರಂದು 10ನೇ ಸಶಸ್ತ್ರ ಪಡೆಗಳ ಮಾಜಿ ಸೈನಿಕರ ದಿನವನ್ನು ಆಚರಿಸಲು ದೇಶಾದ್ಯಂತ ಮಾಜಿ ಸೈನಿಕರ ರ್ಯಾಲಿಗಳು, ಪುಷ್ಪಗುಚ್ಛ ಅರ್ಪಿಸುವ ಸಮಾರಂಭಗಳು, ಕುಂದುಕೊರತೆ ನಿವಾರಣಾ ಕೌಂಟರ್‌ ಗಳು ಮತ್ತು ಸೌಲಭ್ಯ ನೆರವು ಕೇಂದ್ರಗಳು ಸೇರಿದಂತೆ ಸರಣಿ ಕಾರ್ಯಕ್ರಮಗಳನ್ನು ಆಯೋಜಿಸಲಾಯಿತು. ದೆಹಲಿ ಕಂಟೋನ್ಮೆಂಟ್‌ ನ ಮಾಣಿಕ್‌ ಶಾ ಕೇಂದ್ರದಲ್ಲಿ ನಡೆದ ಮುಖ್ಯ ಸಮಾರಂಭದಲ್ಲಿ ರಕ್ಷಣಾ ಸಚಿವರಾದ ಶ್ರೀ ರಾಜನಾಥ್ ಸಿಂಗ್ ಅವರು ಭಾಗವಹಿಸಿದ್ದರು, ಇದರಲ್ಲಿ ದೆಹಲಿ/ಎನ್‌ ಸಿ ಆರ್‌ ನ ಸುಮಾರು 2,500 ಮಾಜಿ ಸೈನಿಕರು ಪಾಲ್ಗೊಂಡಿದ್ದರು.

ತಮ್ಮ ಭಾಷಣದಲ್ಲಿ ರಕ್ಷಣಾ ಸಚಿವರು ಮಾಜಿ ಸೈನಿಕರ ಶೌರ್ಯ, ತ್ಯಾಗ ಮತ್ತು ಸಮರ್ಪಿತ ಸೇವೆಗೆ ಭಾವಪೂರ್ಣ ಗೌರವ ಸಲ್ಲಿಸಿದರು, ಅವರನ್ನು ರಾಷ್ಟ್ರೀಯ ಪ್ರಜ್ಞೆಯ ಜೀವಂತ ಸ್ತಂಭಗಳು, ಸಾಮೂಹಿಕ ಧೈರ್ಯದ ಸಂಕೇತಗಳು ಮತ್ತು ಮುಂದಿನ ಪೀಳಿಗೆಗೆ ಸ್ಫೂರ್ತಿ ಎಂದು ಬಣ್ಣಿಸಿದರು. ತಮ್ಮ ಅನುಭವಗಳ ಮೂಲಕ ಯುವಕರಿಗೆ ಮಾರ್ಗದರ್ಶನ ನೀಡುವಂತೆ; ಅಗ್ನಿವೀರರು ಮತ್ತು ಯುವ ಸೈನಿಕರಿಗೆ ಸರಿಯಾದ ದಿಕ್ಕು ತೋರಿಸುವಂತೆ; ತುರ್ತು ಸಂದರ್ಭಗಳಲ್ಲಿ ನಾಗರಿಕ ಆಡಳಿತದ ಜೊತೆಗೆ ನಿಲ್ಲುವಂತೆ; ಸಾಮಾಜಿಕ ಸಾಮರಸ್ಯವನ್ನು ಉತ್ತೇಜಿಸುವಂತೆ; ಮತ್ತು ತಳಮಟ್ಟದಲ್ಲಿ ದೇಶಪ್ರೇಮದ ಮನೋಭಾವವನ್ನು ಮತ್ತಷ್ಟು ಬಲಪಡಿಸುವಂತೆ ಅವರು ಮನವಿ ಮಾಡಿದರು, ಆ ಮೂಲಕ ಭವಿಷ್ಯದ ಬಲಿಷ್ಠ ಭಾರತಕ್ಕೆ ಅಡಿಪಾಯ ಹಾಕುವಂತೆ ಅವರು ಕರೆ ನೀಡಿದರು.

"ಇಂದು ಭಾರತವು ಬಲಿಷ್ಠ, ಸ್ವಾವಲಂಬಿ ಮತ್ತು ಅಭಿವೃದ್ಧಿ ಹೊಂದಿದ ರಾಷ್ಟ್ರವಾಗುವತ್ತ ವೇಗವಾಗಿ ಸಾಗುತ್ತಿದೆ. ಇಂತಹ ಸಮಯದಲ್ಲಿ, ಮಾಜಿ ಸೈನಿಕರ ಅನುಭವ, ನಾಯಕತ್ವ ಮತ್ತು ಮೌಲ್ಯಗಳು ದೇಶಕ್ಕೆ ಅಮೂಲ್ಯವಾದ ಆಸ್ತಿಗಳಾಗಿವೆ. ನಮ್ಮ ಸಮಾಜ, ವಿಶೇಷವಾಗಿ ಯುವಕರು ನಿಮ್ಮಿಂದ ಕಲಿಯಬೇಕಾದ ಅಗತ್ಯವಿದೆ. ಶಿಕ್ಷಣ, ಕೌಶಲ್ಯ ಅಭಿವೃದ್ಧಿ, ವಿಪತ್ತು ನಿರ್ವಹಣೆ, ಸಮುದಾಯ ನಾಯಕತ್ವ ಅಥವಾ ನಾವೀನ್ಯತೆಯ ಹಾದಿಯಿರಲಿ, ನಿಮ್ಮ ಭಾಗವಹಿಸುವಿಕೆಯು ಮುಂದಿನ ಪೀಳಿಗೆಯ ಮೇಲೆ ಧನಾತ್ಮಕ ಮತ್ತು ಶಾಶ್ವತವಾದ ಪ್ರಭಾವವನ್ನು ಬೀರಬಲ್ಲದು," ಎಂದು ಶ್ರೀ ರಾಜನಾಥ್ ಸಿಂಗ್ ಅವರು ನೆರೆದಿದ್ದ ಮಾಜಿ ಸೈನಿಕರಿಗೆ ತಿಳಿಸಿದರು.

ಸುಮಾರು 40 ವರ್ಷಗಳ ಹಿಂದೆ ಭಾರತೀಯ ಶಾಂತಿ ಪಾಲನಾ ಪಡೆಯ ಭಾಗವಾಗಿ ಶಾಂತಿ ಪಾಲನೆಯ ಉದ್ದೇಶಗಳಿಗಾಗಿ ಶ್ರೀಲಂಕಾದಲ್ಲಿ ಪ್ರಾರಂಭಿಸಲಾದ 'ಆಪರೇಷನ್ ಪವನ್' ನಲ್ಲಿ ಭಾಗವಹಿಸಿದ್ದ ಕೆಚ್ಚೆದೆಯ ಮಾಜಿ ಸೈನಿಕರನ್ನು ರಕ್ಷಣಾ ಸಚಿವರು ಸ್ಮರಿಸಿದರು. "ಕಾರ್ಯಾಚರಣೆಯ ಸಮಯದಲ್ಲಿ, ಭಾರತೀಯ ಪಡೆಗಳು ಅಸಾಧಾರಣ ಧೈರ್ಯವನ್ನು ಪ್ರದರ್ಶಿಸಿದವು. ಅನೇಕ ಸೈನಿಕರು ಪ್ರಾಣತ್ಯಾಗ ಮಾಡಿದರು. ಅವರ ಶೌರ್ಯ, ತ್ಯಾಗ ಮತ್ತು ಹೋರಾಟಗಳಿಗೆ ಅರ್ಹವಾದ ಗೌರವ ಸಿಗಲಿಲ್ಲ. ಇಂದು, ಪ್ರಧಾನಿ ಮೋದಿ ಅವರ ನಾಯಕತ್ವದಲ್ಲಿ, ನಮ್ಮ ಸರ್ಕಾರವು ಆಪರೇಷನ್ ಪವನ್‌ ನಲ್ಲಿ ಭಾಗವಹಿಸಿದ ಶಾಂತಿ ಪಾಲನಾ ಪಡೆಯ ಸೈನಿಕರ ಕೊಡುಗೆಗಳನ್ನು ಮುಕ್ತವಾಗಿ ಅಂಗೀಕರಿಸುವುದು ಮಾತ್ರವಲ್ಲದೆ, ಅವರ ಕೊಡುಗೆಗಳನ್ನು ಪ್ರತಿಯೊಂದು ಹಂತದಲ್ಲೂ ಗುರುತಿಸುವ ಪ್ರಕ್ರಿಯೆಯಲ್ಲಿದೆ. 2015 ರಲ್ಲಿ ಪ್ರಧಾನಿ ಮೋದಿ ಶ್ರೀಲಂಕಾಕ್ಕೆ ಭೇಟಿ ನೀಡಿದಾಗ, ಐಪಿಕೆಎಫ್ ಸ್ಮಾರಕದಲ್ಲಿ ಭಾರತೀಯ ಸೈನಿಕರಿಗೆ ಗೌರವ ಸಲ್ಲಿಸಿದ್ದರು. ಈಗ, ನಾವು ನವದೆಹಲಿಯ ರಾಷ್ಟ್ರೀಯ ಯುದ್ಧ ಸ್ಮಾರಕದಲ್ಲಿಯೂ ಐಪಿಕೆಎಫ್ ಸೈನಿಕರ ಕೊಡುಗೆಗಳನ್ನು ಗುರುತಿಸುತ್ತಿದ್ದೇವೆ ಮತ್ತು ಅವರಿಗೆ ಅರ್ಹವಾದ ಗೌರವವನ್ನು ನೀಡುತ್ತಿದ್ದೇವೆ" ಎಂದು ಅವರು ಹೇಳಿದರು.

ರಾಷ್ಟ್ರೀಯ ಭದ್ರತೆಗಾಗಿ ಮಾಜಿ ಸೈನಿಕರ ನಿಸ್ವಾರ್ಥ ಸೇವೆ, ಶಿಸ್ತು, ನಾಯಕತ್ವ ಮತ್ತು ಧೈರ್ಯದ ಗುಣಗಳೊಂದಿಗೆ ಸಮಾಜಕ್ಕೆ ಮಾರ್ಗದರ್ಶನ ನೀಡುವ ಮೂಲಕ ರಾಷ್ಟ್ರ ನಿರ್ಮಾಣಕ್ಕೆ ನೀಡಿದ ಕೊಡುಗೆ ಮತ್ತು ವಿವಿಧ ಕ್ಷೇತ್ರಗಳಲ್ಲಿ ಯುವ ಪೀಳಿಗೆಯನ್ನು ರೂಪಿಸುತ್ತಿರುವುದನ್ನು ಶ್ರೀ ರಾಜನಾಥ್ ಸಿಂಗ್ ಶ್ಲಾಘಿಸಿದರು. "ನಿಮ್ಮ ಜೀವನದ ಸುವರ್ಣ ವರ್ಷಗಳನ್ನು ನೀವು ಪರ್ವತ ಶಿಖರಗಳಲ್ಲಿ, ಸುಡುವ ಮರಳಿನಲ್ಲಿ ಮತ್ತು ಮಳೆಯ ಕಾಡುಗಳಲ್ಲಿ ಕಳೆಯುತ್ತೀರಿ. ನೀವು ಬೇರೆ ಯಾವುದೇ ಕ್ಷೇತ್ರವನ್ನು ಆರಿಸಿಕೊಳ್ಳಬಹುದಿತ್ತು; ಆಗ ಬಹುಶಃ ಇಷ್ಟೊಂದು ಸವಾಲುಗಳನ್ನು ಎದುರಿಸುತ್ತಿರಲಿಲ್ಲ; ಮತ್ತು ನಿಮ್ಮ ಕುಟುಂಬಗಳೊಂದಿಗೆ ಹೆಚ್ಚಿನ ಸಮಯವನ್ನು ಕಳೆಯಬಹುದಿತ್ತು. ಆದರೆ ಇವೆಲ್ಲದರ ನಡುವೆಯೂ, ನೀವು ದೇಶವನ್ನು ರಕ್ಷಿಸುವ ಕರ್ತವ್ಯವನ್ನು ಪೂರೈಸುತ್ತಾ ಪ್ರತಿಯೊಂದು ಪರಿಸ್ಥಿತಿಯಲ್ಲೂ ದೃಢವಾಗಿ ನಿಲ್ಲುತ್ತೀರಿ. ವಾಸ್ತವದಲ್ಲಿ, ಒಬ್ಬ ಸೈನಿಕ ಎಂದಿಗೂ ಮಾಜಿನಾಗುವುದಿಲ್ಲ. ಸಮವಸ್ತ್ರದ ಬಣ್ಣ ಬದಲಾಗಬಹುದು, ಕೆಲಸದ ಸ್ಥಳ ಬದಲಾಗಬಹುದು, ಸುತ್ತಮುತ್ತಲಿನ ಜನರು ಬದಲಾಗಬಹುದು, ಆದರೆ ದೇಶಪ್ರೇಮ ಮತ್ತು ಸೇವೆಯ ಮನೋಭಾವ ಮಾತ್ರ ಹಾಗೆಯೇ ಇರುತ್ತದೆ. ನಿಮ್ಮ ಕಲ್ಯಾಣ ಮತ್ತು ಯೋಗಕ್ಷೇಮ ನಮ್ಮ ನೈತಿಕ ಮತ್ತು ಭಾವನಾತ್ಮಕ ಜವಾಬ್ದಾರಿಯಾಗಿದೆ" ಎಂದು ಅವರು ಹೇಳಿದರು.

ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಮಾಜಿ ಸೈನಿಕರ ಕಲ್ಯಾಣದ ಸಂಕಲ್ಪವನ್ನು ರಕ್ಷಣಾ ಸಚಿವರು ಪುನರುಚ್ಚರಿಸಿದರು. ದೀರ್ಘಕಾಲದ ಬೇಡಿಕೆಯಾಗಿದ್ದ 'ಒನ್ ರ್ಯಾಂಕ್ ಒನ್ ಪೆನ್ಷನ್' (ಒ ಆರ್‌ ಒ ಪಿ) ಅನ್ನು ಈಡೇರಿಸಿರುವುದು ಮತ್ತು ಮಾಜಿ ಸೈನಿಕರ ಕೊಡುಗೆಯ ಆರೋಗ್ಯ ಯೋಜನೆ (ಇ ಸಿ ಎಚ್‌ ಎಸ್) ಅನ್ನು ಬಲಪಡಿಸುವುದು ಸೇರಿದಂತೆ ಈ ದಿಸೆಯಲ್ಲಿ ಕೈಗೊಂಡಿರುವ ದೃಢವಾದ ಕ್ರಮಗಳನ್ನು ಅವರು ಪಟ್ಟಿ ಮಾಡಿದರು.

"ಒ ಆರ್‌ ಒ ಪಿ ಅನುಷ್ಠಾನವು ಮಾಜಿ ಸೈನಿಕರ ಜೀವನದಲ್ಲಿ ಆರ್ಥಿಕ ಸ್ಥಿರತೆಯನ್ನು ತಂದಿರುವುದು ಮಾತ್ರವಲ್ಲದೆ, ದೇಶವು ಅವರನ್ನು ನ್ಯಾಯಯುತವಾಗಿ ನಡೆಸಿಕೊಳ್ಳುತ್ತದೆ ಎಂಬ ಅವರ ನಂಬಿಕೆಯನ್ನು ಬಲಪಡಿಸಿದೆ. ರಾಷ್ಟ್ರೀಯ ಹಿತಾಸಕ್ತಿಗಳನ್ನು ರಕ್ಷಿಸಲು ತಮ್ಮ ಜೀವನವನ್ನೇ ಮುಡಿಪಾಗಿಟ್ಟವರ ಆರೋಗ್ಯದ ವಿಷಯದಲ್ಲಿ ಯಾವುದೇ ರಾಜಿ ಇರಬಾರದು ಎಂಬ ನಮ್ಮ ನಿಲುವು ಸ್ಪಷ್ಟವಾಗಿದೆ. ಆರೋಗ್ಯ ಸೌಲಭ್ಯಗಳು ನಗರಗಳಿಗೆ ಮಾತ್ರ ಸೀಮಿತವಾಗದೆ ಹಳ್ಳಿಗಳು ಮತ್ತು ದೂರದ ಪ್ರದೇಶಗಳನ್ನು ತಲುಪುವಂತೆ ಮಾಡುವುದು ನಮ್ಮ ಪ್ರಯತ್ನವಾಗಿದೆ. ಟೆಲಿಮೆಡಿಸಿನ್ ಮೂಲಕ ದೂರದಿಂದಲೇ ವೈದ್ಯರನ್ನು ಸಂಪರ್ಕಿಸುವ ಸೌಲಭ್ಯವನ್ನು ವಿಸ್ತರಿಸಲಾಗುತ್ತಿದೆ, ಇದರಿಂದ ವಯಸ್ಸು ಅಥವಾ ದೂರವು ಅಗತ್ಯವಿರುವವರ ಚಿಕಿತ್ಸೆಗೆ ಅಡ್ಡಿಯಾಗುವುದಿಲ್ಲ" ಎಂದು ಶ್ರೀ ರಾಜನಾಥ್ ಸಿಂಗ್ ಹೇಳಿದರು.

ನಿವೃತ್ತಿಯ ನಂತರ ಪ್ರಾರಂಭವಾಗುವ ಸೈನಿಕರ ಜೀವನದ ಹೊಸ ಅಧ್ಯಾಯವು ಘನತೆ ಮತ್ತು ಸ್ವಾವಲಂಬನೆಯಿಂದ ಕೂಡಿರುವುದನ್ನು ಖಚಿತಪಡಿಸಿಕೊಳ್ಳುವುದು ಸರ್ಕಾರದ ಪ್ರಯತ್ನವಾಗಿದೆ ಎಂದು ರಕ್ಷಣಾ ಸಚಿವರು ತಿಳಿಸಿದರು. ಮಾಜಿ ಸೈನಿಕರ ಪುನರ್ವಸತಿ ಮತ್ತು ಉದ್ಯೋಗಕ್ಕೆ ನೀಡಲಾಗುತ್ತಿರುವ ವಿಶೇಷ ಗಮನವನ್ನು ಉಲ್ಲೇಖಿಸಿದ ಅವರು, ಮಾಜಿ ಸೈನಿಕರಿಗೆ ಹೊಸ ಕೌಶ್ಯಲ್ಯಗಳನ್ನು ಕಲಿಸಲಾಗುತ್ತಿದೆ ಮತ್ತು ಸಾರ್ವಜನಿಕ ಉದ್ದಿಮೆಗಳಲ್ಲಿ ಆದ್ಯತೆ ನೀಡಲಾಗುತ್ತಿದೆ. ಖಾಸಗಿ ವಲಯದಲ್ಲಿ ಅವರ ಶಿಸ್ತು, ನಾಯಕತ್ವ ಮತ್ತು ಸಮಗ್ರತೆಯನ್ನು ಗುರುತಿಸಲಾಗುತ್ತಿದೆ. ಸ್ವಂತ ಉದ್ಯಮವನ್ನು ಪ್ರಾರಂಭಿಸಲು ಬಯಸುವ ಮಾಜಿ ಸೈನಿಕರನ್ನು ನಾವು ಪ್ರೋತ್ಸಾಹಿಸುತ್ತಿದ್ದೇವೆ. ವಸತಿ ಯೋಜನೆಗಳು, ಸಾಲ ಸೌಲಭ್ಯಗಳು ಅಥವಾ ಇತರ ಕಲ್ಯಾಣ ಯೋಜನೆಗಳಿರಲಿ, ಇವೆಲ್ಲವನ್ನೂ ಮಾಜಿ ಸೈನಿಕರ ಅಗತ್ಯಗಳಿಗೆ ಅನುಗುಣವಾಗಿ ರೂಪಿಸಲಾಗುತ್ತಿದೆ ಎಂದು ಹೇಳಿದರು.

ದೇಶಕ್ಕಾಗಿ ಸರ್ವೋಚ್ಚ ತ್ಯಾಗ ಮಾಡಿದ ಸೈನಿಕರಿಗೆ ಸರ್ಕಾರವು ಸಲ್ಲಬೇಕಾದ ಗೌರವವನ್ನು ನೀಡುತ್ತದೆ ಎಂದು ಶ್ರೀ ರಾಜನಾಥ್ ಸಿಂಗ್ ಹೇಳಿದರು. ಮಾತೃಭೂಮಿಯ ಸೇವೆಯಲ್ಲಿ ಪ್ರಾಣ ಅರ್ಪಿಸಿದ ವೀರರನ್ನು ಪ್ರತಿಯೊಬ್ಬ ನಾಗರಿಕರಿಗೂ ನೆನಪಿಸಲು ರಾಷ್ಟ್ರೀಯ ಯುದ್ಧ ಸ್ಮಾರಕದಂತಹ ಅಪ್ರತಿಮ ಸ್ಮಾರಕಗಳನ್ನು ನಿರ್ಮಿಸಲಾಗಿದೆ ಎಂದು ಅವರು ಹೇಳಿದರು. "ದೇಶದ ವಿವಿಧ ಭಾಗಗಳಲ್ಲಿ ಅಂತಹ ಸ್ಮಾರಕಗಳನ್ನು ಸ್ಥಳೀಯ ಮಟ್ಟದಲ್ಲಿ ಉತ್ತೇಜಿಸಲಾಗುತ್ತಿದೆ, ಇದರಿಂದಾಗಿ ಮುಂದಿನ ಪೀಳಿಗೆಯ ಹೃದಯ ಮತ್ತು ಮನಸ್ಸಿನಲ್ಲಿ ಗೌರವ ಮತ್ತು ಕೃತಜ್ಞತೆಯ ಭಾವ ಉಳಿಯುತ್ತದೆ" ಎಂದು ಅವರು ಹೇಳಿದರು.

ಯಾವುದೇ ರಾಷ್ಟ್ರದ ನಿಜವಾದ ಶಕ್ತಿಯನ್ನು ಕೇವಲ ಯೋಜನೆಗಳಿಂದ ಅಳೆಯಲಾಗುವುದಿಲ್ಲ, ಆದರೆ ಅದು ತನ್ನ ಸೈನಿಕರನ್ನು ಮತ್ತು ಮಾಜಿ ಸೈನಿಕರನ್ನು ನೋಡುವ ಸಾಮಾಜಿಕ ಪ್ರಜ್ಞೆಯಲ್ಲಿ ಪ್ರತಿಫಲಿಸುತ್ತದೆ ಎಂದು ರಕ್ಷಣಾ ಸಚಿವರು ಒತ್ತಿ ಹೇಳಿದರು. "ನಮ್ಮ ಸಮಾಜವು ಮಾಜಿ ಸೈನಿಕರಿಗೆ ನೀಡುವ ಗೌರವವು ನಮಗೆ ದೊಡ್ಡ ಸಾಮಾಜಿಕ ಬಂಡವಾಳವಾಗಿದೆ, ಅದು ತಲೆಮಾರುಗಳನ್ನು ಸಂಪರ್ಕಿಸುತ್ತದೆ ಮತ್ತು ರಾಷ್ಟ್ರದ ಆತ್ಮವನ್ನು ಬಲಪಡಿಸುತ್ತದೆ. ಭಾರತದಲ್ಲಿ ಸೈನಿಕರ ಮೇಲಿನ ಗೌರವವು ಯಾವುದೇ ಆದೇಶದಿಂದ ಬರುವುದಿಲ್ಲ, ಬದಲಿಗೆ ಅದು ನಮ್ಮ ಮೌಲ್ಯಗಳ ಸಹಜ ವಿಸ್ತರಣೆಯಾಗಿದೆ ಎಂಬುದು ನಮಗೆ ಹೆಮ್ಮೆಯ ವಿಷಯವಾಗಿದೆ. ಸೈನಿಕರೊಂದಿಗಿನ ನಮ್ಮ ಸಂಬಂಧವು ಹೃದಯ, ನಂಬಿಕೆ, ಗೌರವ ಮತ್ತು ಹಂಚಿಕೆಯ ಭವಿಷ್ಯದ ಕನಸುಗಳದ್ದಾಗಿದೆ" ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಸೈನಿಕರ ಕಲ್ಯಾಣ ಇಲಾಖೆಯ ಕಾರ್ಯದರ್ಶಿ ಶ್ರೀಮತಿ ಸುಕೃತಿ ಲಿಖಿ ಅವರು, ಮಾಜಿ ಸೈನಿಕರು ಮತ್ತು ಅವರ ಕುಟುಂಬಗಳ ಅದಮ್ಯ ಚೇತನಕ್ಕೆ ನಮನ ಸಲ್ಲಿಸಿದರು ಮತ್ತು ಮಾಜಿ ಸೈನಿಕರ ದಿನವನ್ನು ಕೇವಲ ಔಪಚಾರಿಕ ಕಾರ್ಯಕ್ರಮವಲ್ಲದೆ, ರಾಷ್ಟ್ರದ ಸಾಮೂಹಿಕ ಪ್ರಜ್ಞೆಯನ್ನು ಮರುಜಾಗೃತಗೊಳಿಸುವ ದಿನ ಎಂದು ಬಣ್ಣಿಸಿದರು. "ಸೇವೆಯ ಮುಕ್ತಾಯದ ನಂತರವೂ, ರಾಷ್ಟ್ರ ಮತ್ತು ಅದರ ಸೈನಿಕರ ನಡುವೆ ಶಾಶ್ವತವಾಗಿ ಉಳಿಯುವ ಒಂದು ಬಂಧವಿದೆ ಎಂದು ಈ ದಿನ ನಮಗೆ ನೆನಪಿಸುತ್ತದೆ" ಎಂದು ಅವರು ಹೇಳಿದರು.

ಪ್ರತಿ ವರ್ಷ ಸುಮಾರು 60,000 ಸೈನಿಕರು ಮಾಜಿರಾಗುತ್ತಾರೆ, ಇದರ ಪರಿಣಾಮವಾಗಿ ಸುಮಾರು 3.5 ಮಿಲಿಯನ್ ಮಾಜಿ ಸೈನಿಕರಿದ್ದಾರೆ, ಇದು ಮಾಜಿ ಸೈನಿಕರ ಕಲ್ಯಾಣವು ರಾಷ್ಟ್ರವು ಪೂರೈಸಬೇಕಾದ ದೊಡ್ಡ ಜವಾಬ್ದಾರಿಯಾಗಿದೆ ಎಂದು ಕಾರ್ಯದರ್ಶಿ (ಮಾಜಿ ಸೈನಿಕರ ಕಲ್ಯಾಣ) ತಿಳಿಸಿದರು. ಮಾಜಿ ಸೈನಿಕರು ತಮ್ಮೊಂದಿಗೆ ಅಪಾರ ಅನುಭವ, ನಾಯಕತ್ವದ ಗುಣಗಳು ಮತ್ತು ಕರ್ತವ್ಯ ಪ್ರಜ್ಞೆಯನ್ನು ತರುತ್ತಾರೆ ಮತ್ತು ಮಾಜಿ ಸೈನಿಕರು ಘನತೆ ಮತ್ತು ಸ್ವಾಭಿಮಾನದಿಂದ ಬದುಕುವುದನ್ನು ಖಚಿತಪಡಿಸಿಕೊಳ್ಳುವುದು ರಾಷ್ಟ್ರದ ಸಾಮೂಹಿಕ ಜವಾಬ್ದಾರಿಯಾಗಿದೆ ಎಂದು ಅವರು ಒತ್ತಿ ಹೇಳಿದರು.

ಮಾಜಿ ಸೈನಿಕರಿಗೆ ಸಕಾಲಿಕ ಸೇವೆಗಳನ್ನು ಒದಗಿಸುವ ಬಗ್ಗೆ ಮಾಜಿ ಸೈನಿಕರ ಕಲ್ಯಾಣ ಇಲಾಖೆಯ ಬದ್ಧತೆಯನ್ನು ಶ್ರೀಮತಿ ಸುಕೃತಿ ಲಿಖಿ ವ್ಯಕ್ತಪಡಿಸಿದರು, ಅವರ ಸೇವೆ, ತ್ಯಾಗ ಮತ್ತು ಘನತೆಯೇ ನೀತಿಗಳ ಆಧಾರವಾಗಿದೆ ಎಂದು ಹೇಳಿದರು. "ಮಾಜಿ ಸೈನಿಕರು ಮತ್ತು ಅವರ ಅವಲಂಬಿತರನ್ನು ಬೆಂಬಲಿಸುವಲ್ಲಿ ನಮ್ಮ ಇಲಾಖೆಯು ಪ್ರಮುಖ ಪಾತ್ರ ವಹಿಸುತ್ತದೆ. ಕಳೆದ ಕೆಲವು ವರ್ಷಗಳಲ್ಲಿ, ಪಿಂಚಣಿಯ ಸಕಾಲಿಕ ವಿತರಣೆಯಲ್ಲಿ ಸುಧಾರಣೆಗಳು, ಕೇಂದ್ರೀಯ ಸೈನಿಕ ಮಂಡಳಿಯಿಂದ ಹೆಚ್ಚಿನ ಅನುದಾನ, ಡಿಜಿಆರ್ ನ ಪುನರ್ವಸತಿ ಮತ್ತು ತರಬೇತಿ ಕೋರ್ಸ್‌ ಗಳ ವಿಸ್ತರಣೆ ಸೇರಿದಂತೆ ಉತ್ತಮ ಸೌಲಭ್ಯಗಳನ್ನು ಒದಗಿಸಲು ಹಲವಾರು ದೃಢವಾದ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ, ಹಾಗೆಯೇ ಇ ಸಿ ಎಚ್‌ ಎಸ್ ಈಗ 64 ಲಕ್ಷ ಫಲಾನುಭವಿಗಳಿಗೆ ವೈದ್ಯಕೀಯ ಸೇವೆಗಳನ್ನು ಒದಗಿಸುತ್ತಿದೆ" ಎಂದು ಅವರು ಹೇಳಿದರು.

ರಕ್ಷಣಾ ಸಿಬ್ಬಂದಿ ಮುಖ್ಯಸ್ಥ ಜನರಲ್ ಅನಿಲ್ ಚೌಹಾಣ್, ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್ ದಿನೇಶ್ ಕೆ ತ್ರಿಪಾಠಿ, ವಾಯುಪಡೆಯ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ಎಪಿ ಸಿಂಗ್, ಸಮಗ್ರ ರಕ್ಷಣಾ ಸಿಬ್ಬಂದಿ ಮುಖ್ಯಸ್ಥ ಏರ್ ಮಾರ್ಷಲ್ ಅಶುತೋಷ್ ದೀಕ್ಷಿತ್, ಸೇನೆಯ ಉಪ ಮುಖ್ಯಸ್ಥ ಲೆಫ್ಟಿನೆಂಟ್ ಜನರಲ್ ಪುಷ್ಪೇಂದ್ರ ಸಿಂಗ್, ಮಾಜಿ ಮುಖ್ಯಸ್ಥರು ಮತ್ತು ಇತರ ಮಾಜಿ ಸೈನಿಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ಭಾರತೀಯ ಸೇನೆಯ ಮಾಜಿ ಸೈನಿಕರ ನಿರ್ದೇಶನಾಲಯವು ಪ್ರಕಟಿಸಿದ 'ಸಮ್ಮಾನ್', ನೌಕಾಪಡೆಯ ಮಾಜಿ ಸೈನಿಕರ ನಿರ್ದೇಶನಾಲಯದ 'ಸಾಗರ್ ಸಂವಾದ್' ಮತ್ತು ವಾಯುಪಡೆಯ ಮಾಜಿ ಸೈನಿಕರ ನಿರ್ದೇಶನಾಲಯದ 'ವಾಯು ಸಂವೇದನಾ' ವಾರ್ಷಿಕ ನಿಯತಕಾಲಿಕೆಗಳನ್ನು ಬಿಡುಗಡೆ ಮಾಡಲಾಯಿತು.

ಮಾಜಿ ಸೈನಿಕರ ನಿಸ್ವಾರ್ಥ ಕರ್ತವ್ಯ ನಿಷ್ಠೆ, ರಾಷ್ಟ್ರ ಸೇವೆ ಮತ್ತು ತ್ಯಾಗಕ್ಕೆ ಗೌರವ ಸಲ್ಲಿಸಲು ರಾಜೌರಿ, ಅಮೃತಸರ, ಲಕ್ನೋ, ರಾಂಚಿ, ಗುವಾಹಟಿ, ಪುಣೆ, ಗೋವಾ ಮತ್ತು ಕೊಚ್ಚಿ ಸೇರಿದಂತೆ ದೇಶದ ಹಲವಾರು ಸ್ಥಳಗಳಲ್ಲಿ ಮಾಜಿ ಸೈನಿಕರ ರ್ಯಾಲಿಗಳು ಮತ್ತು ಪುಷ್ಪಗುಚ್ಛ ಅರ್ಪಿಸುವ ಸಮಾರಂಭಗಳನ್ನು ಆಯೋಜಿಸಲಾಗಿತ್ತು. ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿನ ಮೂವತ್ತನಾಲ್ಕು ರಾಜ್ಯ ಸೈನಿಕ ಮಂಡಳಿಗಳು ಮತ್ತು 434 ಜಿಲ್ಲಾ ಸೈನಿಕ ಮಂಡಳಿಗಳು ಈ ದಿನದ ನೆನಪಿಗಾಗಿ ವಿವಿಧ ಕಾರ್ಯಕ್ರಮಗಳನ್ನು ನಡೆಸುತ್ತಿವೆ. ಸ್ಥಳದಲ್ಲೇ ಕುಂದುಕೊರತೆ ನಿವಾರಣೆ, ನೆರವು ಮತ್ತು ಜಾಗೃತಿಗಾಗಿ ದೇಶಾದ್ಯಂತದ ಎಲ್ಲಾ ಸ್ಥಳಗಳಲ್ಲಿ ಮೂರು ಸೇವೆಗಳು, ರಕ್ಷಣೆ ಮತ್ತು ಸರ್ಕಾರಿ ಕಲ್ಯಾಣ ಸಂಸ್ಥೆಗಳು, ಬ್ಯಾಂಕುಗಳು ಮತ್ತು ಉದ್ಯೋಗ ಏಜೆನ್ಸಿಗಳಿಂದ ನೆರವು ಕೇಂದ್ರಗಳು ಮತ್ತು ಮಳಿಗೆಗಳನ್ನು ಸ್ಥಾಪಿಸಲಾಗಿದೆ.

1953 ರ ಈ ದಿನದಂದು ನಿವೃತ್ತರಾದ ಭಾರತೀಯ ಸೇನೆಯ ಮೊದಲ ಕಮಾಂಡರ್-ಇನ್-ಚೀಫ್ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ, ಒಬಿಇ ಅವರ ಪರಂಪರೆ ಮತ್ತು ಸೇವೆಯನ್ನು ಗೌರವಿಸಲು ಪ್ರತಿ ವರ್ಷ ಜನವರಿ 14 ರಂದು ಈ ದಿನವನ್ನು ಆಚರಿಸಲಾಗುತ್ತದೆ.

 

*****

 


(रिलीज़ आईडी: 2214665) आगंतुक पटल : 7
इस विज्ञप्ति को इन भाषाओं में पढ़ें: English , Urdu , Marathi , हिन्दी , Tamil , Malayalam