ಪ್ರಧಾನ ಮಂತ್ರಿಯವರ ಕಛೇರಿ
ವಿಕಸಿತ ಭಾರತ ಯುವ ನಾಯಕರ ಸಂವಾದ-2026ರ ಸಮಾರೋಪ ಕಲಾಪ ಉದ್ದೇಶಿಸಿ ಪ್ರಧಾನಮಂತ್ರಿ ಭಾಷಣ
प्रविष्टि तिथि:
12 JAN 2026 10:03PM by PIB Bengaluru
ಕೇಂದ್ರ ಸಚಿವ ಸಂಪುಟದ ನನ್ನ ಸಹೋದ್ಯೋಗಿಗಳೆ, ಎಲ್ಲಾ ಸಂಸತ್ ಸದಸ್ಯರೆ, ವಿಕಸಿತ ಭಾರತ ಯುವ ನಾಯಕರ ಸ್ಪರ್ಧೆಯ ವಿಜೇತರೆ, ಇತರೆ ಗಣ್ಯರೆ ಮತ್ತು ವಿದೇಶದಿಂದ ಮತ್ತು ದೇಶದೆಲ್ಲೆಡೆಯಿಂದ ಇಲ್ಲಿಗೆ ಬಂದಿರುವ ನನ್ನ ಯುವ ಸ್ನೇಹಿತರೆ, ನೀವೆಲ್ಲರೂ ಇಲ್ಲಿ ಹೊಸ ಅನುಭವ ಪಡೆದಿರಬೇಕು. ನಿಮಗೆ ದಣಿವಾಗಿರಬೇಕು? ನೀವು 2 ದಿನಗಳ ಕಾರ್ಯಕ್ರಮದಲ್ಲಿ ತೊಡಗಿದ್ದೀರಿ, ಆದ್ದರಿಂದ ಮತ್ತೊಮ್ಮೆ ಕೇಳಲು ನಿಮಗೆ ಆಯಾಸವಾಗುತ್ತಿರಬಹುದು? ನಾನು ಮೊದಲು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದಾಗ, ನಿಮ್ಮಲ್ಲಿ ಹಲವರು ಜನಿಸಿರಲಿಲ್ಲ ಎಂದು ನಾನು ನಂಬುತ್ತೇನೆ. 2014ರಲ್ಲಿ ನಾನು ಪ್ರಧಾನಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದಾಗ, ನಿಮ್ಮಲ್ಲಿ ಹೆಚ್ಚಿನವರು ಇನ್ನೂ ಮಕ್ಕಳಾಗಿದ್ದಿರಿ. ಆದರೆ ನಾನು ಮುಖ್ಯಮಂತ್ರಿಯೇ ಆಗಿದ್ದಿರಲಿ ಅಥವಾ ಈಗ ಪ್ರಧಾನಮಂತ್ರಿಯೇ ಆಗಿರಲಿ, ನಾನು ಯಾವಾಗಲೂ ಯುವ ಪೀಳಿಗೆಯ ಮೇಲೆ ಅಪಾರ ನಂಬಿಕೆ ಹೊಂದಿದ್ದೇನೆ. ನಾನು ಯಾವಾಗಲೂ ನಿಮ್ಮ ಸಾಮರ್ಥ್ಯ ಮತ್ತು ನಿಮ್ಮ ಪ್ರತಿಭೆಯಿಂದ ಅದ್ಭುತ ಶಕ್ತಿ ಪಡೆದುಕೊಂಡಿದ್ದೇನೆ. ಇಂದು ನೀವು ಅಭಿವೃದ್ಧಿ ಹೊಂದಿದ ಭಾರತ ನಿರ್ಮಿಸುವ ಧ್ಯೇಯದ ಮೇಲೆ ನಿಯಂತ್ರಣ ಹೊಂದಿದ್ದೀರಿ ಎಂದು ನಾನು ನೋಡುತ್ತೇನೆ.
ಸ್ನೇಹಿತರೆ,
2047ರಲ್ಲಿ ಭಾರತವು ಸ್ವಾತಂತ್ರ್ಯ ಗಳಿಸಿ 100 ವರ್ಷಗಳನ್ನು ಪೂರೈಸಿದಾಗ, ಆ ಮೈಲಿಗಲ್ಲಿಗೆ ಕಾರಣವಾಗುವ ಪ್ರಯಾಣವು ರಾಷ್ಟ್ರಕ್ಕೆ ಅತ್ಯಂತ ಮುಖ್ಯವಾಗಿದೆ. ಅದೇ ಸಮಯದಲ್ಲಿ, ಈ ವರ್ಷಗಳು ನಿಮ್ಮ ಜೀವನದ ಅತ್ಯಂತ ನಿರ್ಣಾಯಕ ಕಾಲಘಟ್ಟವೂ ಹೌದು. ಇದು ನಿಮಗೆ ಒಂದು ಸುವರ್ಣಾವಕಾಶ. ನಿಮ್ಮ ಸಾಮರ್ಥ್ಯವು ಭಾರತದ ಸಾಮರ್ಥ್ಯವಾಗುತ್ತದೆ ಮತ್ತು ನಿಮ್ಮ ಯಶಸ್ಸು ಭಾರತದ ಯಶಸ್ಸನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುತ್ತದೆ. ವಿಕಸಿತ ಭಾರತ ಯುವ ನಾಯಕರ ಸಂವಾದದಲ್ಲಿ ಭಾಗವಹಿಸಿದ್ದಕ್ಕಾಗಿ ನಿಮ್ಮೆಲ್ಲರನ್ನು ನಾನು ಅಭಿನಂದಿಸುತ್ತೇನೆ. ನಾನು ಈ ವಿಷಯದ ಬಗ್ಗೆ ನಂತರ ಹೆಚ್ಚು ವಿವರವಾಗಿ ಮಾತನಾಡುತ್ತೇನೆ, ಆದರೆ ಮೊದಲು ಇಂದಿನ ಮಹತ್ವದ ಬಗ್ಗೆ ಚಿಂತಿಸೋಣ.
ಸ್ನೇಹಿತರೆ,
ಇಂದು ಸ್ವಾಮಿ ವಿವೇಕಾನಂದರ ಜನ್ಮ ದಿನಾಚರಣೆ. ಇಂದಿಗೂ ಅವರ ಆಲೋಚನೆಗಳು ಪ್ರತಿಯೊಬ್ಬ ಯುವಕರಿಗೂ ಸ್ಫೂರ್ತಿ ನೀಡುತ್ತಲೇ ಇವೆ. ನಮ್ಮ ಜೀವನದ ಗುರಿ ಏನು? ನಮ್ಮ ಉದ್ದೇಶವೇನು? "ರಾಷ್ಟ್ರ ಮೊದಲು" ಎಂಬ ಮನೋಭಾವದಿಂದ ನಾವು ಹೇಗೆ ಬದುಕಬೇಕು? ನಮ್ಮ ಪ್ರತಿಯೊಂದು ಕ್ರಿಯೆಯು ಸಮಾಜ ಮತ್ತು ರಾಷ್ಟ್ರ ಕಲ್ಯಾಣದ ಕೇಂದ್ರವಾಗಿರಬೇಕು. ಈ ನಿಟ್ಟಿನಲ್ಲಿ, ಸ್ವಾಮಿ ವಿವೇಕಾನಂದರ ಜೀವನವು ಸ್ಫೂರ್ತಿಯ ಉತ್ತಮ ಮಾರ್ಗದರ್ಶಿ ಮತ್ತು ಮೂಲವಾಗಿ ಕಾರ್ಯ ನಿರ್ವಹಿಸುತ್ತದೆ. ಅವರ ಸ್ಮರಣಾರ್ಥ ಪ್ರತಿ ವರ್ಷ ಜನವರಿ 12 ಅನ್ನು ರಾಷ್ಟ್ರೀಯ ಯುವ ದಿನವಾಗಿ ಆಚರಿಸಲಾಗುತ್ತದೆ. ಅವರಿಂದ ಪ್ರೇರಿತರಾಗಿ, ಈ ದಿನಾಂಕವನ್ನು ವಿಕಿಸತ ಭಾರತ ಯುವ ನಾಯಕರ ಸಂವಾದಕ್ಕೆ ಆಯ್ಕೆ ಮಾಡಲಾಗಿದೆ.
ಸ್ನೇಹಿತರೆ,
ಇಷ್ಟು ಕಡಿಮೆ ಸಮಯದಲ್ಲಿ, ವಿಕಸಿತ ಭಾರತ ಯುವ ನಾಯಕರ ಸಂವಾದವು ಒಂದು ಪ್ರಮುಖ ವೇದಿಕೆಯಾಗಿ ಮಾರ್ಪಟ್ಟಿದೆ, ಯುವಕರು ದೇಶದ ಅಭಿವೃದ್ಧಿಯ ದಿಕ್ಕು ರೂಪಿಸುವಲ್ಲಿ ನೇರವಾಗಿ ಭಾಗವಹಿಸುವ ವೇದಿಕೆಯಾಗಿದೆ ಎಂಬುದನ್ನು ನೋಡಿ ನನಗೆ ಸಂತೋಷವಾಗಿದೆ. 5 ದಶಲಕ್ಷಕ್ಕಿಂತ ಹೆಚ್ಚಿನ ಯುವಕರು ನೋಂದಾಯಿಸಿಕೊಂಡಿದ್ದಾರೆ, 3 ದಶಲಕ್ಷಕ್ಕಿಂತ ಹೆಚ್ಚಿನ ಜನರು ವಿಕಸಿತ್ ಭಾರತ್ ಚಾಲೆಂಜ್‌ನಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದಾರೆ. ಭಾರತದ ಭವಿಷ್ಯಕ್ಕಾಗಿ ತಮ್ಮ ಆಲೋಚನೆಗಳನ್ನು ಹಂಚಿಕೊಂಡಿದ್ದಾರೆ. ಇಷ್ಟು ದೊಡ್ಡ ಪ್ರಮಾಣದಲ್ಲಿ ಯುವ ಜನರ ಭಾಗವಹಿಸುವಿಕೆ ನಿಜಕ್ಕೂ ಅಭೂತಪೂರ್ವವಾಗಿದೆ. ವಿಶ್ವಾದ್ಯಂತ "ಚಿಂತಕರ ಚಾವಡಿ" ಎಂಬ ಪದವನ್ನು ಸಾಮಾನ್ಯವಾಗಿ ಬಳಸಲಾಗುತ್ತದೆ. ಚಿಂತಕರ ಚಾವಡಿಗಳು ಚರ್ಚೆಗಳನ್ನು ನಡೆಸುತ್ತವೆ ಮತ್ತು ಅಭಿಪ್ರಾಯ ರಚನೆಯ ಮೇಲೆ ಪ್ರಭಾವ ಬೀರುತ್ತವೆ. ಆದರೆ ಇಂದು ಪ್ರಸ್ತುತಿಗಳನ್ನು ಮತ್ತು ನೀವು ಸವಾಲಿನ ವಿಚಾರಗಳನ್ನು ಎತ್ತುವ ವಿಧಾನವನ್ನು ನೋಡಿದ ನಂತರ, ಈ ವೇದಿಕೆಯೇ ಒಂದು ಸಂಸ್ಥೆಯಾಗಿದೆ ಎಂದು ನಾನು ನಂಬುತ್ತೇನೆ. ಒಂದು ವಿಶಿಷ್ಟ ಜಾಗತಿಕ ಚಿಂತಕರ ಚಾವಡಿ ಇದಾಗಿದೆ. ಸ್ಪಷ್ಟ ಗುರಿಯೊಂದಿಗೆ ವ್ಯಾಖ್ಯಾನಿಸಲಾದ ವಿಷಯಗಳ ಮೇಲೆ ಲಕ್ಷಾಂತರ ಮನಸ್ಸುಗಳು ಒಟ್ಟಾಗಿ ಚಿಂತನಮಂಥನ ನಡೆಸಿದಾಗ, ಇನ್ನೇನು ದೊಡ್ಡ ಚಿಂತನಾ ವ್ಯಾಯಾಮ ಇರಲು ಸಾಧ್ಯ? ವಾಸ್ತವವಾಗಿ, "ಚಿಂತಕರ ಚಾವಡಿ" ಎಂಬ ಪದವು ಅಸಮರ್ಪಕವೆಂದು ತೋರುತ್ತದೆ. "ಚಾವಡಿ" ಚಿಕ್ಕದಾಗಿರಬಹುದು, ಆದರೆ ಈ ಉಪಕ್ರಮವು ಸಾಗರಕ್ಕಿಂತ ವಿಶಾಲವಾಗಿದೆ, ವಿಚಾರಗಳಲ್ಲಿ ಅದಕ್ಕಿಂತ ಆಳವಾಗಿದೆ. ನೀವು ಇಂದು ಚರ್ಚಿಸಿದ ವಿಷಯಗಳು - ವಿಶೇಷವಾಗಿ ಮಹಿಳಾ ನೇತೃತ್ವದ ಅಭಿವೃದ್ಧಿ ಮತ್ತು ಪ್ರಜಾಪ್ರಭುತ್ವದಲ್ಲಿ ಯುವ ಸಮುದಾಯದ ಭಾಗವಹಿಸುವಿಕೆಯು ಗಮನಾರ್ಹವಾಗಿ ಪ್ರಬುದ್ಧತೆಯಿಂದ ಕೂಡಿದೆ. ಅಭಿವೃದ್ಧಿ ಹೊಂದಿದ ಭಾರತ ನಿರ್ಮಿಸಲು ನಮ್ಮ ಅಮೃತ ಪೀಳಿಗೆ ಎಷ್ಟು ದೃಢನಿಶ್ಚಯ ಹೊಂದಿದೆ ಎಂಬುದನ್ನು ನಿಮ್ಮ ಪ್ರಸ್ತುತಿಗಳೇ ಪ್ರದರ್ಶಿಸುತ್ತಿವೆ. ಅವು ಭಾರತದ ಜನರೇಷನ್-ಝಡ್‌ನ ಮನೋಧರ್ಮವನ್ನು ಸಹ ಬಹಿರಂಗಪಡಿಸಿವೆ: ಅದು ಸೃಜನಶೀಲ, ಆತ್ಮವಿಶ್ವಾಸ ಮತ್ತು ಬದ್ಧತೆಯಾಗಿದೆ. ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದ್ದಕ್ಕಾಗಿ ನನ್ನ ಎಲ್ಲಾ ಯುವ ಸ್ನೇಹಿತರು ಮತ್ತು ಯುವ ಭಾರತ ಸಂಘಟನೆಯೊಂದಿಗೆ ಸಂಬಂಧವಿರುವ ಪ್ರತಿಯೊಬ್ಬರನ್ನು ನಾನು ಅಭಿನಂದಿಸುತ್ತೇನೆ.
ಸ್ನೇಹಿತರೆ,
ನಾನು ಈ ಹಿಂದೆ 2014ರ ವರ್ಷ ಉಲ್ಲೇಖಿಸಿದಾಗ, ಇಲ್ಲಿರುವ ನಿಮ್ಮಲ್ಲಿ ಹೆಚ್ಚಿನವರು ಕೇವಲ 8 ಅಥವಾ 10 ವರ್ಷ ವಯಸ್ಸಿನವರಾಗಿದ್ದರು. ಆ ಸಮಯದಲ್ಲಿ ನೀವು ಪತ್ರಿಕೆಗಳನ್ನು ಓದುವ ಅಭ್ಯಾಸ ಬೆಳೆಸಿಕೊಳ್ಳುತ್ತಿರಲಿಲ್ಲ. ಹಿಂದಿನ ಸರ್ಕಾರಗಳ ವಿಳಂಬದ ನಿರ್ಧಾರಗಳಿಗಾಗಿ ಜನರು ಟೀಕಿಸಿದಾಗ ಮತ್ತು ನಿರ್ಧಾರಗಳನ್ನು ತೆಗೆದುಕೊಂಡಾಗಲೂ ಅವುಗಳನ್ನು ಸರಿಯಾಗಿ ಕಾರ್ಯಗತಗೊಳಿಸದಿದ್ದ ನೀತಿ ದೋಷಗಳೇ ತುಂಬಿದ್ದ ಯುಗವನ್ನು ನೀವು ನೋಡಿರಲಿಲ್ಲ. ಯುವಕರು ಹೊಸದನ್ನು ಮಾಡುವುದನ್ನು ಊಹಿಸಲೂ ಸಾಧ್ಯವಾಗದಷ್ಟು ನಿಯಮಗಳು ಮತ್ತು ನಿಬಂಧನೆಗಳು ಇದ್ದವು. ಯುವಜನರು ಪ್ರತಿ ಹಂತದಲ್ಲೂ ನಿರ್ಬಂಧಗಳಿಂದ ಬಳಲುತ್ತಿದ್ದರು.
ಸ್ನೇಹಿತರೆ,
ಆ ಸಮಯದಲ್ಲಿ, ಪರೀಕ್ಷೆಗೆ ಅರ್ಜಿ ಸಲ್ಲಿಸುವಷ್ಟು ಸರಳವಾದದ್ದು ಅಥವಾ ಪ್ರಮಾಣಪತ್ರಗಳನ್ನು ದೃಢೀಕರಿಸಲು ಕಚೇರಿಯಿಂದ ಕಚೇರಿಗೆ ಓಡಬೇಕಾದ ಕೆಲಸ. ಶುಲ್ಕವನ್ನು ಪಾವತಿಸುವುದು ಎಂದರೆ ಬೇಡಿಕೆ ಡ್ರಾಫ್ಟ್‌ಗಳನ್ನು ಪಡೆಯಲು ಬ್ಯಾಂಕುಗಳು ಮತ್ತು ಅಂಚೆ ಕಚೇರಿಗಳಿಗೆ ಭೇಟಿ ನೀಡುವುದಾಗಿತ್ತು. ವ್ಯವಹಾರವನ್ನು ಪ್ರಾರಂಭಿಸಲು ಸಣ್ಣ ಸಾಲಕ್ಕೂ ಸಹ ಬಹು ಗ್ಯಾರಂಟಿಗಳು ಬೇಕಾಗಿದ್ದವು. ಇಂದು ಈ ವಿಷಯಗಳು ನಂಬಲಾಗದಂತೆ ತೋರುತ್ತದೆ, ಆದರೆ ಇದು ಕೇವಲ 1 ದಶಕದ ಹಿಂದೆ ವಾಸ್ತವವಾಗಿತ್ತು.
ಸ್ನೇಹಿತರೆ,
ನೀವು ಇಲ್ಲಿ ಸ್ಟಾರ್ಟ್ ಅಪ್‌ಗಳ ಬಗ್ಗೆ ಮಾತನಾಡಿದ್ದೀರಿ, ಆದ್ದರಿಂದ ನಾನು ಸ್ಟಾರ್ಟಪ್ ಪರಿಸರ ವ್ಯವಸ್ಥೆಯ ಪರಿವರ್ತನೆಯನ್ನು ವಿವರಿಸುತ್ತೇನೆ. ಜಾಗತಿಕವಾಗಿ ಸ್ಟಾರ್ಟಪ್ ಸಂಸ್ಕೃತಿ ದಶಕಗಳ ಹಿಂದೆಯೇ ಪ್ರಾರಂಭವಾದರೂ, ಇತ್ತೀಚಿನವರೆಗೂ ಭಾರತದಲ್ಲಿ ಅದರ ಬಗ್ಗೆ ಬಹಳ ಕಡಿಮೆಯೇ ಚರ್ಚೆ ನಡೆಯಿತು. 2014ರ ವರೆಗೆ, ದೇಶದಲ್ಲಿ 500ಕ್ಕಿಂತ ಕಡಿಮೆ ನೋಂದಾಯಿತ ಸ್ಟಾರ್ಟಪ್‌ಗಳು ಇದ್ದವು. ಅತಿಯಾದ ಸರ್ಕಾರಿ ನಿಯಂತ್ರಣವು ಪ್ರತಿಯೊಂದು ವಲಯದಲ್ಲೂ ಪ್ರಾಬಲ್ಯ ಸಾಧಿಸಿತು, ಯುವ ಪ್ರತಿಭೆಗಳಿಗೆ ನಾವೀನ್ಯತೆಯನ್ನು ಅನುಸರಿಸಲು ಕಡಿಮೆ ಅವಕಾಶ ನೀಡಿತು.
ಸ್ನೇಹಿತರೆ,
ನನಗೆ ನನ್ನ ದೇಶದ ಯುವಕರ ಮೇಲೆ ನಂಬಿಕೆ ಇದೆ, ನಿಮ್ಮ ಸಾಮರ್ಥ್ಯಗಳಲ್ಲಿ ವಿಶ್ವಾಸವಿದೆ. ಅದಕ್ಕಾಗಿಯೇ ನಾವು ಬೇರೆಯದೇ ಮಾರ್ಗ ಆರಿಸಿಕೊಂಡಿದ್ದೇವೆ. ಯುವಕರನ್ನು ಕೇಂದ್ರದಲ್ಲಿಟ್ಟುಕೊಂಡು, ನಾವು ಒಂದರ ನಂತರ ಒಂದರಂತೆ ಸುಧಾರಣೆಗಳನ್ನು ಪರಿಚಯಿಸಿದೆವು. ಇಲ್ಲಿಂದಲೇ ಭಾರತದಲ್ಲಿ ಸ್ಟಾರ್ಟಪ್ ಕ್ರಾಂತಿ ನಿಜವಾಗಿಯೂ ವೇಗ ಪಡೆಯಿತು. ವ್ಯಾಪಾರ ಮಾಡುವ ಸುಲಭ ಸುಧಾರಣೆಗಳು, ಸ್ಟಾರ್ಟಪ್ ಇಂಡಿಯಾ, ಡಿಜಿಟಲ್ ಇಂಡಿಯಾ, ತೆರಿಗೆ ಮತ್ತು ಅನುಸರಣೆ ಸರಳೀಕರಣ - ಅಂತಹ ಅನೇಕ ಉಪಕ್ರಮಗಳನ್ನು ಕೈಗೊಳ್ಳಲಾಯಿತು. ಹಿಂದೆ ಸರ್ಕಾರವು ಸಂಪೂರ್ಣವಾಗಿ ಪ್ರಾಬಲ್ಯ ಹೊಂದಿದ್ದ ವಲಯಗಳು ಯುವಕರ ನೇತೃತ್ವದ ನಾವೀನ್ಯತೆ ಮತ್ತು ಉದ್ಯಮಕ್ಕಾಗಿ ಮುಕ್ತವಾದವು. ಈ ಪ್ರಯತ್ನಗಳ ಪರಿಣಾಮವು ಗಮನಾರ್ಹ ಯಶಸ್ಸಿನ ಕಥೆಯಾಗಿದೆ.
ಸ್ನೇಹಿತರೆ,
ಬಾಹ್ಯಾಕಾಶ ವಲಯವನ್ನು ಉದಾಹರಣೆಯಾಗಿ ತೆಗೆದುಕೊಳ್ಳಿ. 5 ಅಥವಾ 6 ವರ್ಷಗಳ ಹಿಂದಿನವರೆಗೆ, ಬಾಹ್ಯಾಕಾಶ ವಲಯವನ್ನು ಮುನ್ನಡೆಸುವ ಜವಾಬ್ದಾರಿ ಇಸ್ರೋ ಮೇಲೆ ಮಾತ್ರ ಇತ್ತು. ನಾವು ಬಾಹ್ಯಾಕಾಶ ವಲಯವನ್ನು ಖಾಸಗಿ ಉದ್ಯಮಕ್ಕೆ ತೆರೆದಿಟ್ಟಿದ್ದೇವೆ, ಅಗತ್ಯ ಮಾರ್ಗಸೂಚಿಗಳನ್ನು ರೂಪಿಸಿದ್ದೇವೆ, ಪೋಷಕ ಸಂಸ್ಥೆಗಳನ್ನು ಸ್ಥಾಪಿಸಿದ್ದೇವೆ. ಇದರ ಪರಿಣಾಮವಾಗಿ, ಇಂದು ಭಾರತದ ಬಾಹ್ಯಾಕಾಶ ವಲಯದಲ್ಲಿ 300ಕ್ಕೂ ಹೆಚ್ಚು ಸ್ಟಾರ್ಟಪ್‌ಗಳು ಕಾರ್ಯ ನಿರ್ವಹಿಸುತ್ತಿವೆ. ಕಡಿಮೆ ಅವಧಿಯಲ್ಲಿ, ನಮ್ಮ ಸ್ಟಾರ್ಟಪ್ “ಸ್ಕೈರೂಟ್ ಏರೋಸ್ಪೇಸ್” ತನ್ನ ರಾಕೆಟ್, ವಿಕ್ರಮ್-ಎಸ್ ಅಭಿವೃದ್ಧಿಪಡಿಸಿದೆ. ಮತ್ತೊಂದು ಸ್ಟಾರ್ಟಪ್ “ಅಗ್ನಿಕುಲ್ ಕಾಸ್ಮೋಸ್” ವಿಶ್ವದ ಮೊದಲ 3ಡಿ-ಮುದ್ರಿತ ಎಂಜಿನ್ ತಯಾರಿಸಿ ಇಡೀ ಜಗತ್ತನ್ನೇ ಬೆರಗುಗೊಳಿಸಿದೆ. ಇದೆಲ್ಲವೂ ಸ್ಟಾರ್ಟಪ್‌ಗಳ ಶಕ್ತಿಯ ಪರಿಣಾಮವಾಗಿದೆ. ಭಾರತದ ಬಾಹ್ಯಾಕಾಶ ಸ್ಟಾರ್ಟಪ್‌ಗಳು ಈಗ ನಿರಂತರವಾಗಿ ತಮ್ಮ ಸಾಮರ್ಥ್ಯಗಳನ್ನು ಪ್ರದರ್ಶಿಸುತ್ತಿವೆ.
ಸ್ನೇಹಿತರೆ,
ಈಗ ನಾನು ನಿಮಗೆ ಒಂದು ಪ್ರಶ್ನೆ ಕೇಳುತ್ತೇನೆ. ಡ್ರೋನ್‌ಗಳನ್ನು ಹಾರಿಸಲು ಪ್ರತಿಯೊಂದು ರೀತಿಯ ನಿರ್ಬಂಧಗಳು ಇದ್ದಿದ್ದರೆ ಊಹಿಸಿ - ಏನಾಗುತ್ತಿತ್ತು? ಹಿಂದಿನ ಪರಿಸ್ಥಿತಿಯೂ ಹಾಗೆಯೇ ಇತ್ತು. ನಮ್ಮ ದೇಶದಲ್ಲಿ, ಡ್ರೋನ್‌ಗಳನ್ನು ಹಾರಿಸುವುದು ಮತ್ತು ತಯಾರಿಸುವುದು ಎರಡೂ ಕಾನೂನುಗಳ ಜಾಲದಲ್ಲಿ ಸಿಲುಕಿಕೊಂಡಿದ್ದವು. ಪರವಾನಗಿ ಪಡೆಯುವುದು ಪರ್ವತವನ್ನು ಹತ್ತುವಂತೆಯೇ ಇತ್ತು, ಇಡೀ ಸಮಸ್ಯೆಯನ್ನು ಭದ್ರತಾ ದೃಷ್ಟಿಕೋನದಿಂದ ಮಾತ್ರ ನೋಡಲಾಗುತ್ತಿತ್ತು. ನಾವು ಹೊಸ ನಿಯಮಗಳನ್ನು ಪರಿಚಯಿಸಿ, ಅವುಗಳನ್ನು ಸರಳೀಕರಿಸಿದ್ದೇವೆ. ಪರಿಣಾಮವಾಗಿ, ಇಂದು ಅನೇಕ ಯುವಕರು ಡ್ರೋನ್-ಸಂಬಂಧಿತ ವಲಯದಲ್ಲಿ ಮುಂದುವರಿಯಲು ಅವಕಾಶ ಪಡೆದಿದ್ದಾರೆ. ಯುದ್ಧಭೂಮಿಯಲ್ಲಿ ಮೇಡ್ ಇನ್ ಇಂಡಿಯಾ ಡ್ರೋನ್‌ಗಳು ರಾಷ್ಟ್ರದ ಶತ್ರುಗಳನ್ನು ಸೋಲಿಸುತ್ತಿವೆ, ಕೃಷಿ ವಲಯದಲ್ಲಿ ನಮ್ಮ ನಮೋ ಡ್ರೋನ್ ದೀದಿ ಸಹೋದರಿಯರು ಕೃಷಿಯಲ್ಲಿ ಡ್ರೋನ್ ತಂತ್ರಜ್ಞಾನ ಬಳಸುತ್ತಿದ್ದಾರೆ.
ಸ್ನೇಹಿತರೆ,
ರಕ್ಷಣಾ ವಲಯವು ಮೊದಲು ಸಂಪೂರ್ಣವಾಗಿ ಸರ್ಕಾರಿ ಕಂಪನಿಗಳ ಮೇಲೆ ಅವಲಂಬಿತವಾಗಿತ್ತು. ನಮ್ಮ ಸರ್ಕಾರವು ಇದನ್ನು ಸಹ ಬದಲಾಯಿಸಿತು. ಭಾರತದ ರಕ್ಷಣಾ ಪರಿಸರ ವ್ಯವಸ್ಥೆಯ ಬಾಗಿಲುಗಳನ್ನು ಸ್ಟಾರ್ಟಪ್‌ಗಳಿಗೆ ತೆರೆಯಿತು. ಇದು ನಮ್ಮ ಯುವಕರಿಗೆ ಗಮನಾರ್ಹ ಪ್ರಯೋಜನಗಳನ್ನು ತಂದಿದೆ. ಇಂದು ಭಾರತದಲ್ಲಿ 1,000ಕ್ಕೂ ಹೆಚ್ಚಿನ ರಕ್ಷಣಾ ನವೋದ್ಯಮಗಳು ಕಾರ್ಯ ನಿರ್ವಹಿಸುತ್ತಿವೆ. ಒಬ್ಬ ಯುವ ಉದ್ಯಮಿ ಡ್ರೋನ್‌ಗಳನ್ನು ನಿರ್ಮಿಸುತ್ತಿದ್ದಾರೆ, ಇನ್ನೊಬ್ಬರು ಡ್ರೋನ್ ಪ್ರತಿಬಂಧಕ ವ್ಯವಸ್ಥೆಗಳನ್ನು ಅಭಿವೃದ್ಧಿಪಡಿಸುತ್ತಿದ್ದಾರೆ, ಕೆಲವರು ಎಐ ಆಧಾರಿತ ಕ್ಯಾಮೆರಾಗಳನ್ನು ತಯಾರಿಸುತ್ತಿದ್ದಾರೆ, ಇತರರು ರೊಬೊಟಿಕ್ಸ್ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ.
ಸ್ನೇಹಿತರೆ,
ಡಿಜಿಟಲ್ ಇಂಡಿಯಾ ಭಾರತದಲ್ಲಿ ಹೊಸ ಸೃಷ್ಟಿಕರ್ತರ ಸಮುದಾಯವನ್ನು ಸೃಷ್ಟಿಸಿದೆ. ಇಂದು ಭಾರತವು ಕಿತ್ತಳೆ ಆರ್ಥಿಕತೆಯಲ್ಲಿ ಅಭೂತಪೂರ್ವ ಬೆಳವಣಿಗೆ ಕಾಣುತ್ತಿದೆ. ಅಂದರೆ ಸಂಸ್ಕೃತಿ, ವಿಷಯ ಮತ್ತು ಸೃಜನಶೀಲತೆ. ಮಾಧ್ಯಮ, ಚಲನಚಿತ್ರ, ಗೇಮಿಂಗ್, ಸಂಗೀತ, ಡಿಜಿಟಲ್ ವಿಷಯ ಮತ್ತು ವಿಆರ್–ಎಕ್ಸ್‌ಆರ್ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಭಾರತವು ಪ್ರಮುಖ ಜಾಗತಿಕ ಕೇಂದ್ರವಾಗಿ ಹೊರಹೊಮ್ಮುತ್ತಿದೆ. ಇಲ್ಲಿ ಇತ್ತೀಚೆಗೆ ನೀಡಲಾದ ಪ್ರಸ್ತುತಿಯು ನಮ್ಮ ಸಂಸ್ಕೃತಿಯನ್ನು ರಫ್ತು ಮಾಡುವ ಬಗ್ಗೆ ಮಾತನಾಡಿದೆ. ನಾನು ಪ್ರಸ್ತುತ ಯುವಕರನ್ನು ಒತ್ತಾಯಿಸುತ್ತೇನೆ: ನಮ್ಮಲ್ಲಿ ರಾಮಾಯಣ, ಮಹಾಭಾರತ ಮತ್ತು ಇನ್ನೂ ಹೆಚ್ಚಿನ ಕಥೆಗಳು ಮತ್ತು ದಂತಕಥೆಗಳ ಅಪಾರ ಭಂಡಾರವೇ ಇದೆ. ಇವುಗಳನ್ನು ನಾವು ಗೇಮಿಂಗ್ ಜಗತ್ತಿಗೆ ತೆರೆಯಬಹುದೇ? ಜಾಗತಿಕವಾಗಿ, ಗೇಮಿಂಗ್ ಒಂದು ಬೃಹತ್ ಮಾರುಕಟ್ಟೆ ಮತ್ತು ಪ್ರಮುಖ ಆರ್ಥಿಕತೆಯಾಗಿದೆ. ನಮ್ಮ ಪೌರಾಣಿಕ ನಿರೂಪಣೆಗಳ ಆಧಾರದ ಮೇಲೆ ನಾವು ನವೀನ ಆಟಗಳನ್ನು ರೂಪಿಸಬಹುದು. ನಮ್ಮ ಹನುಮಾನ್ ಜಿ ವಿಶ್ವಾದ್ಯಂತದ ಆಟಗಾರರ ಕಲ್ಪನೆಯನ್ನು ಸೆರೆ ಹಿಡಿಯಬಹುದು. ಈ ರೀತಿಯಾಗಿ, ತಂತ್ರಜ್ಞಾನವನ್ನು ಅದರ ಮಾಧ್ಯಮವಾಗಿ ಬಳಸಿಕೊಂಡು ನಮ್ಮ ಸಂಸ್ಕೃತಿಯನ್ನು ಆಧುನಿಕ ರೂಪದಲ್ಲಿ ರಫ್ತು ಮಾಡಲಾಗುತ್ತದೆ. ಇಂದಿಗೂ, ಗೇಮಿಂಗ್ ಮೂಲಕ ಭಾರತದ ಕಥೆಗಳನ್ನು ಸುಂದರವಾಗಿ ಪ್ರಸ್ತುತಪಡಿಸುತ್ತಿರುವ ಹಲವಾರು ಭಾರತೀಯ ಸ್ಟಾರ್ಟಪ್‌ಗಳನ್ನು ನಾನು ನೋಡುತ್ತೇನೆ, ಮಕ್ಕಳು ಆಟವಾಡುವಾಗ ಭಾರತವನ್ನು ಅರ್ಥ ಮಾಡಿಕೊಳ್ಳಲು ಸುಲಭವಾಗುತ್ತದೆ.
ಸ್ನೇಹಿತರೆ,
ವಿಶ್ವ ಆಡಿಯೋ-ವಿಶುವಲ್ ಮತ್ತು ಮನರಂಜನಾ ಶೃಂಗಸಭೆ(WAVES) ಯುವ ಸೃಷ್ಟಿಕರ್ತರಿಗೆ ಪ್ರಬಲ ವೇದಿಕೆಯಾಗಿ ಮಾರ್ಪಟ್ಟಿದೆ. ನೀವು ಯಾವುದೇ ವಲಯಕ್ಕೆ ಸೇರಿದವರಾಗಿದ್ದರೂ, ಇಂದು ಭಾರತವು ಅನಂತ ಸಾಧ್ಯತೆಗಳಿಗೆ ಬಾಗಿಲು ತೆರೆಯುತ್ತಿದೆ. ಆದ್ದರಿಂದ, ಈ ಘಟನೆಯೊಂದಿಗೆ ಸಂಬಂಧ ಹೊಂದಿರುವ ಎಲ್ಲಾ ಯುವಕರಿಗೆ ಮತ್ತು ದೇಶದ ಯುವಕರಿಗೆ ನನ್ನ ಕರೆ ಇದು: ನಿಮ್ಮ ಆಲೋಚನೆಗಳೊಂದಿಗೆ ಮುಂದುವರಿಯಿರಿ, ಅಪಾಯಗಳನ್ನು ತೆಗೆದುಕೊಳ್ಳಲು ಹಿಂಜರಿಯಬೇಡಿ. ಸರ್ಕಾರವು ನಿಮ್ಮೊಂದಿಗೆ ಹೆಗಲಿಗೆ ಹೆಗಲು ಕೊಟ್ಟು ನಡೆಯುತ್ತಿದೆ.
ಸ್ನೇಹಿತರೆ,
ಕಳೆದ ದಶಕದಲ್ಲಿ, ನಾವು ಪ್ರಾರಂಭಿಸಿದ ಬದಲಾವಣೆಗಳು ಮತ್ತು ಸುಧಾರಣೆಗಳ ಸರಣಿಯು ಈಗ ಸುಧಾರಣಾ ಎಕ್ಸ್‌ಪ್ರೆಸ್ ಆಗಿ ಮಾರ್ಪಟ್ಟಿದೆ. ಈ ಸುಧಾರಣೆಗಳ ಹೃದಯ ಭಾಗದಲ್ಲಿ ನೀವು - ನಮ್ಮ ಯುವ ಶಕ್ತಿ ಇದ್ದಾರೆ. ಜಿಎಸ್‌ಟಿಯಲ್ಲಿ ಮುಂದಿನ ಪೀಳಿಗೆಯ ಸುಧಾರಣೆಗಳು ಯುವಕರು ಮತ್ತು ಉದ್ಯಮಿಗಳಿಗೆ ಪ್ರಕ್ರಿಯೆಗಳನ್ನು ಇನ್ನಷ್ಟು ಸರಳಗೊಳಿಸಿವೆ. 12 ಲಕ್ಷ ರೂಪಾಯಿವರೆಗಿನ ಆದಾಯವು ಈಗ ತೆರಿಗೆ ಮುಕ್ತವಾಗಿದೆ, ಇದು ನೌಕರಿ ಪ್ರವೇಶಿಸುವವರಿಗೆ ಅಥವಾ ಹೊಸ ವ್ಯವಹಾರಗಳನ್ನು ಪ್ರಾರಂಭಿಸುವವರಿಗೆ ಉಳಿತಾಯದ ಸಾಮರ್ಥ್ಯವನ್ನು ಗಮನಾರ್ಹವಾಗಿ ಹೆಚ್ಚಿಸುತ್ತದೆ.
ಸ್ನೇಹಿತರೆ,
ಇಂದು ವಿದ್ಯುತ್ ಕೇವಲ ಬೆಳಕಿನ ಮೂಲವಲ್ಲ ಎಂದು ನಿಮಗೆಲ್ಲರಿಗೂ ತಿಳಿದಿದೆ. ಎಐ ಮತ್ತು ಡೇಟಾ ಸೆಂಟರ್‌ಗಳಿಂದ ಸೆಮಿಕಂಡಕ್ಟರ್‌ಗಳು ಮತ್ತು ಉತ್ಪಾದನೆಯವರೆಗೆ, ಪ್ರತಿಯೊಂದು ಆಧುನಿಕ ಪರಿಸರ ವ್ಯವಸ್ಥೆಗೆ ಹೇರಳವಾದ ಇಂಧನ ಅಗತ್ಯವಿದೆ. ಅದಕ್ಕಾಗಿಯೇ ಭಾರತವು ಸ್ವಚ್ಛ ಇಂಧನವನ್ನು ಖಚಿತಪಡಿಸುತ್ತಿದೆ. ನಾಗರಿಕ ಪರಮಾಣು ಶಕ್ತಿಗೆ ಸಂಬಂಧಿಸಿದ ಸುಧಾರಣೆಗಳು - ಶಾಂತಿ ಕಾಯ್ದೆಯನ್ನು ಈ ಉದ್ದೇಶದಿಂದಲೇ ಕೈಗೊಳ್ಳಲಾಗಿದೆ. ಇದು ಪರಮಾಣು ವಲಯದಲ್ಲಿ ಸಾವಿರಾರು ಹೊಸ ಉದ್ಯೋಗಗಳನ್ನು ಸೃಷ್ಟಿಸುತ್ತದೆ, ಇತರೆ ವಲಯಗಳಲ್ಲಿ ಬಲವಾದ ಬಹು-ಪರಿಣಾಮ ಉಂಟುಮಾಡುತ್ತದೆ.
ಸ್ನೇಹಿತರೆ,
ವಿಶ್ವಾದ್ಯಂತ ವಿವಿಧ ದೇಶಗಳು ವಿಭಿನ್ನ ಅಗತ್ಯಗಳು ಮತ್ತು ಬೇಡಿಕೆಗಳನ್ನು ಹೊಂದಿವೆ, ಅವರ ಕಾರ್ಯಪಡೆಯು ಸ್ಥಿರವಾಗಿ ಕುಗ್ಗುತ್ತಿದೆ. ಜಾಗತಿಕವಾಗಿ ಹೊರಹೊಮ್ಮುತ್ತಿರುವ ಅವಕಾಶಗಳಿಗೆ ಭಾರತದ ಯುವಕರು ಸಿದ್ಧರಾಗುವುದನ್ನು ಖಚಿತಪಡಿಸಿಕೊಳ್ಳುವುದು ನಮ್ಮ ಪ್ರಯತ್ನವಾಗಿದೆ. ಆದ್ದರಿಂದ, ಕೌಶಲ್ಯ ಅಭಿವೃದ್ಧಿ ಕ್ಷೇತ್ರಗಳಲ್ಲಿ ನಿರಂತರ ಸುಧಾರಣೆಗಳು ಅತ್ಯಗತ್ಯ, ನಾವು ಅವುಗಳನ್ನು ಸಕ್ರಿಯವಾಗಿ ಅನುಸರಿಸುತ್ತಿದ್ದೇವೆ. ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಪರಿಚಯಿಸಿದ ನಂತರ, ಉನ್ನತ ಶಿಕ್ಷಣಕ್ಕೆ ಸಂಬಂಧಿಸಿದ ನಿಯಮಗಳನ್ನು ಸಹ ಸುಧಾರಿಸಲಾಗುತ್ತಿದೆ. ವಿದೇಶಿ ವಿಶ್ವವಿದ್ಯಾಲಯಗಳು ಈಗ ಭಾರತದಲ್ಲಿ ತಮ್ಮ ಕ್ಯಾಂಪಸ್‌ಗಳನ್ನು ತೆರೆಯುತ್ತಿವೆ. ಇತ್ತೀಚೆಗೆ, ಸಾವಿರಾರು ಕೋಟಿ ರೂಪಾಯಿ ಹೂಡಿಕೆಯೊಂದಿಗೆ ಪಿಎಂ ಸೇತು ಕಾರ್ಯಕ್ರಮ ಪ್ರಾರಂಭಿಸಲಾಯಿತು. ಈ ಉಪಕ್ರಮವು ಸಾವಿರಾರು ಐಟಿಐಗಳನ್ನು ಮೇಲ್ದರ್ಜೆಗೇರಿಸುತ್ತದೆ, ಇದರಿಂದ ಯುವಕರಿಗೆ ಉದ್ಯಮದ ಪ್ರಸ್ತುತ ಮತ್ತು ಭವಿಷ್ಯದ ಅಗತ್ಯಗಳಿಗೆ ಅನುಗುಣವಾಗಿ ತರಬೇತಿ ನೀಡಬಹುದು. ಇತ್ತೀಚಿನ ವರ್ಷಗಳಲ್ಲಿ, ಭಾರತವು ಹಲವಾರು ದೇಶಗಳೊಂದಿಗೆ ವ್ಯಾಪಾರ ಒಪ್ಪಂದಗಳಿಗೆ ಸಹಿ ಹಾಕಿದೆ, ಇದು ಭಾರತೀಯ ಯುವಕರಿಗೆ ಹೊಸ ಅವಕಾಶಗಳನ್ನು ತರುತ್ತಿದೆ.
ಸ್ನೇಹಿತರೆ,
ಆತ್ಮವಿಶ್ವಾಸವಿಲ್ಲದೆ ಯಾವುದೇ ರಾಷ್ಟ್ರವು ಸ್ವಾವಲಂಬಿಯಾಗಲು ಅಥವಾ ಅಭಿವೃದ್ಧಿ ಹೊಂದಲು ಸಾಧ್ಯವಿಲ್ಲ. ನಮ್ಮ ಸಾಮರ್ಥ್ಯಗಳು, ನಮ್ಮ ಪರಂಪರೆ ಮತ್ತು ನಮ್ಮ ಸಾಧನಗಳಲ್ಲಿ ಹೆಮ್ಮೆಯ ಕೊರತೆಯು ನಮ್ಮನ್ನು ದುರ್ಬಲಗೊಳಿಸುತ್ತದೆ. ನಮಗೆ ಬದ್ಧತೆ ಮತ್ತು ಹೆಮ್ಮೆಯ ಪ್ರಜ್ಞೆ ಬೇಕು, ನಾವು ಶಕ್ತಿ ಮತ್ತು ಆತ್ಮವಿಶ್ವಾಸದಿಂದ ಮುಂದುವರಿಯಬೇಕು. ವಸಾಹತುಶಾಹಿ ಅವಧಿಯಲ್ಲಿ, ಮಾನಸಿಕವಾಗಿ ಗುಲಾಮರಾಗಿದ್ದ ಭಾರತೀಯರ ಪೀಳಿಗೆಗಾಗಿ ಶಿಕ್ಷಣ ವ್ಯವಸ್ಥೆ ಬದಲಿಸಲು ಕೆಲಸ ಮಾಡಿದ ಬ್ರಿಟಿಷ್ ರಾಜಕಾರಣಿ ಮೆಕಾಲೆ ಬಗ್ಗೆ ನೀವು ಓದಿರಬೇಕು. ಇದು ಸ್ಥಳೀಯ ಸಂಪ್ರದಾಯಗಳು, ಉತ್ಪನ್ನಗಳು ಮತ್ತು ಸಾಮರ್ಥ್ಯಗಳ ಬಗ್ಗೆ ಕೀಳರಿಮೆ ಬೆಳೆಸಿತು. ವಿದೇಶಿ ಅಥವಾ ಆಮದು ಮಾಡಿಕೊಳ್ಳುವುದನ್ನು ಶ್ರೇಷ್ಠತೆಯ ಖಾತರಿಯಾಗಿ ನೋಡಲಾಯಿತು. ಇಂದು ಆ ಮನಸ್ಥಿತಿ ಸ್ವೀಕಾರಾರ್ಹವೇ? ಒಟ್ಟಾಗಿ, ನಾವು ಈ ಗುಲಾಮಗಿರಿ ಮನಸ್ಥಿತಿ ಕೊನೆಗೊಳಿಸಬೇಕು. 10 ವರ್ಷಗಳ ನಂತರ, ಮೆಕಾಲೆಯ ಕ್ರಮಗಳಿಂದ 200 ವರ್ಷಗಳು ಕಳೆದಿರುತ್ತವೆ ಮತ್ತು ಆ 2 ಶತಮಾನಗಳ ಅನ್ಯಾಯವನ್ನು ತೊಳೆಯುವುದು ಈ ಪೀಳಿಗೆಯ ಜವಾಬ್ದಾರಿಯಾಗಿದೆ. ನಮಗೆ ಇನ್ನೂ 10 ವರ್ಷಗಳಿವೆ, ಈ ಯುವ ಪೀಳಿಗೆ ಈ ಕಾರ್ಯವನ್ನು ಸಾಧಿಸುತ್ತದೆ ಎಂದು ನನಗೆ ಸಂಪೂರ್ಣ ನಂಬಿಕೆಯಿದೆ. ಪ್ರತಿಯೊಬ್ಬ ಯುವ ನಾಗರಿಕನು ದೇಶವನ್ನು ಗುಲಾಮಗಿರಿ ಮನಸ್ಥಿತಿಯಿಂದ ಮುಕ್ತಗೊಳಿಸಲು ಸಂಕಲ್ಪ ಮಾಡಬೇಕು.
ಸ್ನೇಹಿತರೆ,
ನಮ್ಮ ಧರ್ಮಗ್ರಂಥಗಳು ಹೇಳುತ್ತವೆ, ಇದನ್ನು ಇಲ್ಲಿ ಸ್ಟಾರ್ಟಪ್ ಪ್ರಸ್ತುತಿಗಳಲ್ಲಿ ಒಂದರಲ್ಲಿ ಉಲ್ಲೇಖಿಸಲಾಗಿದೆ- "ಆ ನೋ ಭದ್ರಃ ಕ್ರತವೋ ಯಂತು ವಿಶ್ವತಃ", ಅಂದರೆ ಎಲ್ಲಾ ದಿಕ್ಕುಗಳಿಂದಲೂ ಉದಾತ್ತ, ಶುಭ ಮತ್ತು ಪ್ರಯೋಜನಕಾರಿ ಆಲೋಚನೆಗಳು ನಮಗೆ ಬರಲಿ. ಜಗತ್ತಿನ ಅತ್ಯುತ್ತಮ ಅಭ್ಯಾಸಗಳಿಂದ ನೀವು ಕಲಿಯಬೇಕು, ಆದರೆ ನಿಮ್ಮ ಸ್ವಂತ ಪರಂಪರೆ ಮತ್ತು ವಿಚಾರಗಳನ್ನು ಕಡಿಮೆ ಅಂದಾಜು ಮಾಡುವ ಪ್ರವೃತ್ತಿಯನ್ನು ಎಂದಿಗೂ ಪ್ರಾಬಲ್ಯ ಸಾಧಿಸಲು ಬಿಡಬೇಡಿ. ಸ್ವಾಮಿ ವಿವೇಕಾನಂದರ ಜೀವನವು ನಮಗೆ ಕಲಿಸುವುದು ಇದನ್ನೇ. ಅವರು ಪ್ರಪಂಚವನ್ನು ಸುತ್ತಿದರು, ಅದರ ಸಾಮರ್ಥ್ಯಗಳನ್ನು ಮೆಚ್ಚಿದರು, ಆದರೆ ಭಾರತದ ನಾಗರಿಕತೆಯ ಬಗ್ಗೆ ಹರಡಿರುವ ತಪ್ಪು ಕಲ್ಪನೆಗಳನ್ನು ನಿರಂತರವಾಗಿ ಪ್ರಶ್ನಿಸಿದರು. ಅವರು ಕೇವಲ ಜನಪ್ರಿಯವಾಗಿದ್ದ ಕಾರಣ ಕಲ್ಪನೆಗಳನ್ನು ಸ್ವೀಕರಿಸಲಿಲ್ಲ. ಬದಲಾಗಿ, ಅವರು ಸಾಮಾಜಿಕ ದುಷ್ಕೃತ್ಯಗಳನ್ನು ಎದುರಿಸಿದರು ಮತ್ತು ಉತ್ತಮ ಭಾರತವನ್ನು ನಿರ್ಮಿಸಲು ಪ್ರಯತ್ನಿಸಿದರು. ಅದೇ ಮನೋಭಾವದಿಂದ, ನಮ್ಮ ಯುವ ಶಕ್ತಿ ಈಗ ಮುಂದುವರಿಯಬೇಕು. ಅದೇ ಸಮಯದಲ್ಲಿ, ನಿಮ್ಮ ಫಿಟ್ನೆಸ್ ನೋಡಿಕೊಳ್ಳಿ - ಆಟವಾಡಿ, ನಗುತ್ತಾ ಇರಿ ಮತ್ತು ಸಂಪೂರ್ಣವಾಗಿ ಬದುಕಿ.
ರಾಷ್ಟ್ರೀಯ ಯುವ ದಿನದಂದು ನಿಮ್ಮೆಲ್ಲರ ಮೇಲೆ, ನಿಮ್ಮ ಸಾಮರ್ಥ್ಯಗಳಲ್ಲಿ ಮತ್ತು ನಿಮ್ಮ ಶಕ್ತಿಯಲ್ಲಿ ನನಗೆ ಅಚಲ ನಂಬಿಕೆ ಇದೆ. ಈ ಮಾತುಗಳೊಂದಿಗೆ, ನಾನು ಮತ್ತೊಮ್ಮೆ ನಿಮ್ಮೆಲ್ಲರಿಗೂ ನನ್ನ ಹೃತ್ಪೂರ್ವಕ ಶುಭಾಶಯಗಳನ್ನು ಸಲ್ಲಿಸುತ್ತೇನೆ. ಒಂದು ಕೊನೆಯ ಸಲಹೆಯನ್ನು ನಾನು ನಿಮಗೆ ನೀಡಲು ಬಯಸುತ್ತೇನೆ: ರಾಜ್ಯಗಳೊಳಗಿನ ಅಭಿವೃದ್ಧಿಯನ್ನು ಚರ್ಚಿಸಲು ಈ ಸಂವಾದ ಕಾರ್ಯಕ್ರಮವನ್ನು ರಾಜ್ಯ ಮಟ್ಟದಲ್ಲೂ ಆಯೋಜಿಸಬೇಕು. ಅದರ ನಂತರ, ನಾವು ಜಿಲ್ಲಾ ಮಟ್ಟದ ಸಂವಾದಗಳತ್ತ ಸಾಗಬೇಕು. ಈ ರೀತಿಯಾಗಿ, ನಾವು ಚಿಂತಕರ ಚಾವಡಿ ಎಂದು ಕರೆಯುವುದು ಚಿಂತಕರ ಜಾಲವಾಗಿ ವಿಕಸನಗೊಳ್ಳಬಹುದು. ಯಾವಾಗಲೂ ನನ್ನ ಶುಭಾಶಯಗಳು ನಿಮ್ಮೊಂದಿಗೆ ಇರುತ್ತವೆ.
ತುಂಬು ಧನ್ಯವಾದಗಳು, ಸ್ನೇಹಿತರೆ.
******
(रिलीज़ आईडी: 2214192)
आगंतुक पटल : 5