ಪ್ರಧಾನ ಮಂತ್ರಿಯವರ ಕಛೇರಿ
ಭಾರತ – ಜರ್ಮನಿ ಜಂಟಿ ಹೇಳಿಕೆ
प्रविष्टि तिथि:
12 JAN 2026 3:50PM by PIB Bengaluru
ಗೌರವಾನ್ವಿತ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಆಹ್ವಾನದ ಮೇರೆಗೆ, ಜರ್ಮನಿ ಒಕ್ಕೂಟ ಗಣರಾಜ್ಯದ ಫೆಡರಲ್ ಚಾನ್ಸಲರ್ ಘನತೆವೆತ್ತ ಶ್ರೀ ಫ್ರೆಡ್ರಿಕ್ ಮೆರ್ಜ್ ಅವರು 2026ರ ಜನವರಿ 12-13 ರವರೆಗೆ ಭಾರತಕ್ಕೆ ಅಧಿಕೃತ ಭೇಟಿ ನೀಡಿದರು. ಚಾನ್ಸಲರ್ ಅವರೊಂದಿಗೆ 23 ಪ್ರಮುಖ ಜರ್ಮನ್ ಸಿಇಒಗಳು ಮತ್ತು ಉದ್ಯಮ ರಂಗದ ನಾಯಕರನ್ನು ಒಳಗೊಂಡ ಉನ್ನತ ಮಟ್ಟದ ನಿಯೋಗವು ಆಗಮಿಸಿತ್ತು.
ಇದು ಚಾನ್ಸಲರ್ ಮೆರ್ಜ್ ಅವರ ಭಾರತದ ಮೊದಲ ಅಧಿಕೃತ ಭೇಟಿಯಾಗಿದೆ ಮತ್ತು ಫೆಡರಲ್ ಚಾನ್ಸಲರ್ ಆಗಿ ಅವರ ಮೊದಲ ಏಷ್ಯಾ ಪ್ರವಾಸವೂ ಹೌದು. ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಭಾರತವನ್ನು ಪ್ರಮುಖ ಕಾರ್ಯತಂತ್ರದ ಪಾಲುದಾರನನ್ನಾಗಿ ಜರ್ಮನಿ ಪರಿಗಣಿಸಿರುವುದನ್ನು ಮತ್ತು ಭಾರತಕ್ಕೆ ಜರ್ಮನಿ ನೀಡುತ್ತಿರುವ ಉನ್ನತ ಆದ್ಯತೆಯನ್ನು ಈ ಭೇಟಿಯು ಪ್ರತಿಬಿಂಬಿಸುತ್ತದೆ. ಅಕ್ಟೋಬರ್ 25, 2024 ರಂದು ನವದೆಹಲಿಯಲ್ಲಿ ನಡೆದ ಯಶಸ್ವಿ 7ನೇ ಭಾರತ-ಜರ್ಮನಿ ಅಂತರ್-ಸರ್ಕಾರಿ ಸಮಾಲೋಚನೆಗಳ (IGC) ಮುಂದುವರಿದ ಭಾಗವಾಗಿ ಈ ಭೇಟಿಯು ನಡೆದಿದೆ. ವಿಶೇಷವಾಗಿ, 2025 ರಲ್ಲಿ ಭಾರತ-ಜರ್ಮನಿ ಕಾರ್ಯತಂತ್ರದ ಪಾಲುದಾರಿಕೆಯು 25 ವರ್ಷಗಳನ್ನು ಪೂರೈಸಿದೆ ಮತ್ತು 2026 ರಲ್ಲಿ ಉಭಯ ದೇಶಗಳ ನಡುವಿನ ರಾಜತಾಂತ್ರಿಕ ಸಂಬಂಧಗಳ 75ನೇ ವರ್ಷದ ಸಂಭ್ರಮಾಚರಣೆ ನಡೆಯುತ್ತಿದೆ. ಈ ಐತಿಹಾಸಿಕ ಘಟ್ಟದಲ್ಲಿ ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ಬಾಂಧವ್ಯವು ಹೊಸ ಎತ್ತರಕ್ಕೆ ತಲುಪಿದೆ. ಸರ್ಕಾರ, ವ್ಯವಹಾರ, ನಾಗರಿಕ ಸಮಾಜ ಮತ್ತು ಶೈಕ್ಷಣಿಕ ಕ್ಷೇತ್ರಗಳ ದ್ವಿಪಕ್ಷೀಯ ತೊಡಗಿಸಿಕೊಳ್ಳುವಿಕೆಯಲ್ಲಿ ಕಂಡುಬಂದಿರುವ ಹೊಸ ವೇಗವನ್ನು ಉಭಯ ನಾಯಕರು ಮನಸಾರೆ ಶ್ಲಾಘಿಸಿದರು. ಈ ನಿರಂತರ ಸಂವಾದವು ಕಾರ್ಯತಂತ್ರದ ಪಾಲುದಾರಿಕೆಯನ್ನು ಮತ್ತಷ್ಟು ಬಲಪಡಿಸುವಲ್ಲಿ ಮತ್ತು ವಿಸ್ತರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂದು ಅವರು ಅಭಿಪ್ರಾಯಪಟ್ಟರು.
ಪ್ರಧಾನಮಂತ್ರಿ ಮೋದಿ ಅವರು ಅಹಮದಾಬಾದ್ ನಲ್ಲಿ ಚಾನ್ಸಲರ್ ಮೆರ್ಜ್ ಅವರನ್ನು ಸ್ವಾಗತಿಸಿದರು. ಉಭಯ ನಾಯಕರು ಸಬರಮತಿ ಆಶ್ರಮದಲ್ಲಿರುವ ಮಹಾತ್ಮ ಗಾಂಧೀಜಿಯವರ ಪ್ರತಿಮೆಗೆ ಪುಷ್ಪನಮನ ಸಲ್ಲಿಸಿದರು ಮತ್ತು ಪ್ರಸಿದ್ಧ ಗಾಳಿಪಟ ಉತ್ಸವದಲ್ಲಿ ಭಾಗವಹಿಸಿದರು. ಉಭಯ ನಾಯಕರು ಭಾರತ-ಜರ್ಮನಿ ಸಿಇಒಗಳ ವೇದಿಕೆಯನ್ನು ಉದ್ದೇಶಿಸಿ ಮಾತನಾಡಿದರು. ಚಾನ್ಸಲರ್ ಮೆರ್ಜ್ ಅವರು ಭಾರತ ಮತ್ತು ಜರ್ಮನಿ ನಡುವಿನ ವ್ಯವಹಾರ ಮತ್ತು ತಾಂತ್ರಿಕ ಸಹಯೋಗದ ಕುರಿತಾದ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಬೆಂಗಳೂರಿಗೂ ಭೇಟಿ ನೀಡಲಿದ್ದಾರೆ.
ಪ್ರಧಾನಮಂತ್ರಿ ಮೋದಿ ಮತ್ತು ಚಾನ್ಸಲರ್ ಮೆರ್ಜ್ ಅವರು 2026ರ ಜನವರಿ 12 ರಂದು ಅಹಮದಾಬಾದ್ನಲ್ಲಿ ಸೀಮಿತ ಮತ್ತು ನಿಯೋಗ ಮಟ್ಟದ ಮಾತುಕತೆಗಳನ್ನು ನಡೆಸಿದರು. ಈ ಸಂದರ್ಭದಲ್ಲಿ ಅವರು ಹಂಚಿಕೆಯ ಪ್ರಜಾಪ್ರಭುತ್ವ ಮೌಲ್ಯಗಳು, ನಿಯಮಾಧಾರಿತ ಅಂತರರಾಷ್ಟ್ರೀಯ ವ್ಯವಸ್ಥೆಗೆ ಇರುವ ಬದ್ಧತೆ ಮತ್ತು ಕಾರ್ಯತಂತ್ರದ ಪಾಲುದಾರಿಕೆಗೆ ಅಡಿಪಾಯವಾಗಿರುವ ಪರಸ್ಪರ ಗೌರವವನ್ನು ಪುನರುಚ್ಚರಿಸಿದರು. ಉಭಯ ನಾಯಕರು ದ್ವಿಪಕ್ಷೀಯ ಸಂಬಂಧಗಳನ್ನು ಪರಾಮರ್ಶಿಸಿದರು ಮತ್ತು ಪ್ರಾದೇಶಿಕ ಹಾಗೂ ಜಾಗತಿಕ ಬೆಳವಣಿಗೆಗಳ ಬಗ್ಗೆ ಚರ್ಚಿಸಿದರು.
ರಕ್ಷಣೆ ಮತ್ತು ಭದ್ರತೆ
ರಕ್ಷಣಾ ಮತ್ತು ಭದ್ರತಾ ಸಹಕಾರವನ್ನು ಬಲಪಡಿಸುವ ತಮ್ಮ ಬದ್ಧತೆಯನ್ನು ಉಭಯ ನಾಯಕರು ಪುನರುಚ್ಚರಿಸಿದರು. ಸಾಂಸ್ಥಿಕ ಸೇವಾ ಸಿಬ್ಬಂದಿ ಮಾತುಕತೆಗಳು ಮತ್ತು ಸೇನಾ ಮುಖ್ಯಸ್ಥರ ಭೇಟಿಗಳು ಸೇರಿದಂತೆ ದ್ವಿಪಕ್ಷೀಯ ರಕ್ಷಣಾ ಸಹಕಾರವನ್ನು ಮತ್ತಷ್ಟು ಹೆಚ್ಚಿಸಲು 2025ರ ನವೆಂಬರ್ ನಲ್ಲಿ ನವದೆಹಲಿಯಲ್ಲಿ ನಡೆದ ಉನ್ನತ ರಕ್ಷಣಾ ಸಮಿತಿ ಸಭೆಯ ಫಲಿತಾಂಶಗಳನ್ನು ಅವರು ಸ್ವಾಗತಿಸಿದರು. ಜಂಟಿ ಸಮರಾಭ್ಯಾಸಗಳು, ತರಬೇತಿ ಮತ್ತು ಹಿರಿಯ ಅಧಿಕಾರಿಗಳ ವಿನಿಮಯದ ಮೂಲಕ ಮಿಲಿಟರಿ-ಟು-ಮಿಲಿಟರಿ ಸಹಕಾರವನ್ನು ಗಾಢವಾಗಿಸಲು ಉಭಯ ದೇಶಗಳ ಬದ್ಧತೆಯನ್ನು ನಾಯಕರು ಅನುಮೋದಿಸಿದರು ಮತ್ತು ಎರಡೂ ದೇಶಗಳ ನೌಕಾ ಹಡಗುಗಳ ನಿಯಮಿತ ಪರಸ್ಪರ ಬಂದರು ಭೇಟಿಗಳ ಬಗ್ಗೆ ತೃಪ್ತಿ ವ್ಯಕ್ತಪಡಿಸಿದರು. ಉಭಯ ದೇಶಗಳ ನಡುವೆ ಹೊಸ 'ಟ್ರ್ಯಾಕ್ 1.5 ವಿದೇಶಾಂಗ ನೀತಿ ಮತ್ತು ಭದ್ರತಾ ಸಂವಾದ' ಸ್ಥಾಪನೆಯನ್ನು ನಾಯಕರು ಸ್ವಾಗತಿಸಿದರು.
ಫೆಬ್ರವರಿ 2026ರಲ್ಲಿ ನಡೆಯಲಿರುವ ಮಿಲನ್ (MILAN) ನೌಕಾ ಸಮರಾಭ್ಯಾಸ ಮತ್ತು 9ನೇ ಹಿಂದೂ ಮಹಾಸಾಗರ ನೌಕಾ ವಿಚಾರಗೋಷ್ಠಿಯ ನೌಕಾ ಮುಖ್ಯಸ್ಥರ ಸಮಾವೇಶದಲ್ಲಿ ಪಾಲ್ಗೊಳ್ಳುವ ಜರ್ಮನಿಯ ಆಸಕ್ತಿಯನ್ನು ಪ್ರಧಾನಮಂತ್ರಿ ಮೋದಿ ಸ್ವಾಗತಿಸಿದರು. ಇದರೊಂದಿಗೆ, ಸೆಪ್ಟೆಂಬರ್ 2026 ರಲ್ಲಿ ನಡೆಯಲಿರುವ 'ತರಂಗ್ ಶಕ್ತಿ' ವಾಯು ಸಮರಾಭ್ಯಾಸದಲ್ಲಿ ಭಾಗವಹಿಸುವ ಹಾಗೂ ಹಿಂದೂ ಮಹಾಸಾಗರ ಪ್ರದೇಶದ ಮಾಹಿತಿ ಸಮ್ಮಿಲನ ಕೇಂದ್ರಕ್ಕೆ ಸಂಪರ್ಕ ಅಧಿಕಾರಿಯನ್ನು ನಿಯೋಜಿಸುವ ಜರ್ಮನಿಯ ನಿರ್ಧಾರವನ್ನು ಅವರು ಶ್ಲಾಘಿಸಿದರು. ಯುರೋಡ್ರೋನ್ ಎಂ.ಎ.ಎಲ್.ಇ ಯು.ಎ.ವಿ ಕಾರ್ಯಕ್ರಮಕ್ಕಾಗಿ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ ಮತ್ತು ಜಂಟಿ ಶಸ್ತ್ರಾಸ್ತ್ರ ಸಹಕಾರ ಸಂಸ್ಥೆ ನಡುವೆ ನಡೆಯುತ್ತಿರುವ ಸಹಕಾರದ ಬಗ್ಗೆ ಉಭಯ ದೇಶಗಳು ತೃಪ್ತಿ ವ್ಯಕ್ತಪಡಿಸಿದವು. ಇದು ಭಾರತವು ಸುಧಾರಿತ ಮಿಲಿಟರಿ ತಂತ್ರಜ್ಞಾನವನ್ನು ಬಳಸಿಕೊಳ್ಳಲು ಮತ್ತು ಯುರೋಪ್ ನೊಂದಿಗೆ ತನ್ನ ಕಾರ್ಯತಂತ್ರದ ಹಾಗೂ ರಕ್ಷಣಾ ಬಾಂಧವ್ಯವನ್ನು ಮತ್ತಷ್ಟು ಗಟ್ಟಿಗೊಳಿಸಲು ಸಹಕಾರಿಯಾಗಲಿದೆ.
ದೀರ್ಘಕಾಲೀನ ಉದ್ಯಮ-ಮಟ್ಟದ ಸಹಯೋಗವನ್ನು ಉತ್ತೇಜಿಸಲು 'ರಕ್ಷಣಾ ಕೈಗಾರಿಕಾ ಸಹಕಾರ ಮಾರ್ಗಸೂಚಿ'ಯನ್ನು ಅಭಿವೃದ್ಧಿಪಡಿಸುವ 'ಜಂಟಿ ಉದ್ದೇಶದ ಘೋಷಣೆ'ಗೆ ಸಹಿ ಹಾಕಿರುವುದನ್ನು ಉಭಯ ನಾಯಕರು ಸ್ವಾಗತಿಸಿದರು. ಇದು ತಂತ್ರಜ್ಞಾನ ಪಾಲುದಾರಿಕೆಗಳು, ರಕ್ಷಣಾ ವೇದಿಕೆಗಳು ಮತ್ತು ಉಪಕರಣಗಳ ಸಹ-ಅಭಿವೃದ್ಧಿ ಹಾಗೂ ಸಹ-ಉತ್ಪಾದನೆಯನ್ನು ಒಳಗೊಂಡಿದೆ. ರಕ್ಷಣಾ ಉಪಕರಣಗಳ ಶೀಘ್ರ ರಫ್ತು ಅನುಮತಿಗಳನ್ನು ಸುಗಮಗೊಳಿಸಲು ಜರ್ಮನಿ ಕೈಗೊಂಡಿರುವ ಪ್ರಯತ್ನಗಳನ್ನು ಭಾರತ ಸ್ವಾಗತಿಸಿತು. ಬರ್ಲಿನ್ ಮತ್ತು ನವದೆಹಲಿಯಲ್ಲಿ ನಡೆದ ರಕ್ಷಣಾ ದುಂಡುಮೇಜಿನ ಸಭೆಗಳು ಹಾಗೂ ಸೆಮಿನಾರ್ ಗಳ ಮೂಲಕ ಭಾರತೀಯ ಮತ್ತು ಜರ್ಮನ್ ರಕ್ಷಣಾ ಉದ್ಯಮಗಳ ನಡುವೆ ಹೆಚ್ಚುತ್ತಿರುವ ಸಂವಾದವನ್ನು ನಾಯಕರು ಶ್ಲಾಘಿಸಿದರು ಮತ್ತು ಈ ಕ್ಷೇತ್ರದಲ್ಲಿನ ನಿಯಮಿತ ವಿನಿಮಯವನ್ನು ಸ್ವಾಗತಿಸಿದರು. ಜಲಂತರ್ಗಾಮಿ ನೌಕೆಗಳು, ಹೆಲಿಕಾಪ್ಟರ್ ಗಳಿಗಾಗಿ ಅಡೆತಡೆ ತಪ್ಪಿಸುವ ವ್ಯವಸ್ಥೆ ಮತ್ತು ಡ್ರೋನ್ ವಿರೋಧಿ ವ್ಯವಸ್ಥೆಗಳಲ್ಲಿ ಮುಂದುವರಿಯುತ್ತಿರುವ ಸಹಕಾರವನ್ನು ಉಭಯ ನಾಯಕರು ಪ್ರಶಂಸಿಸಿದರು. ಭಾರತದ ನುರಿತ ಕಾರ್ಯಪಡೆ ಮತ್ತು ಸ್ಪರ್ಧಾತ್ಮಕ ವೆಚ್ಚ ಹಾಗೂ ಜರ್ಮನಿಯ ಸುಧಾರಿತ ತಂತ್ರಜ್ಞಾನಗಳು ಮತ್ತು ಹೂಡಿಕೆ - ಹೀಗೆ ಉಭಯ ದೇಶಗಳ ಸಾಮರ್ಥ್ಯಗಳ ಪೂರಕತೆಯ ಆಧಾರದ ಮೇಲೆ, ಹಂಚಿಕೆಯ ಗುರಿಗಳೊಂದಿಗೆ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸುವ ಮೂಲಕ ರಕ್ಷಣಾ ಕೈಗಾರಿಕಾ ಸಹಯೋಗವನ್ನು ವಿಸ್ತರಿಸಲು ಉಭಯ ನಾಯಕರು ಆಶಿಸಿದರು.
ತರಬೇತಿ ಮತ್ತು ವಿನಿಮಯದ ಸಹಕಾರದ ಸಂದರ್ಭದಲ್ಲಿ, ಉಭಯ ನಾಯಕರು ಎರಡೂ ದೇಶಗಳ ಸಂಸ್ಥೆಗಳ ನಡುವೆ ಶಾಂತಿ ಪಾಲನಾ ತರಬೇತಿಯ ಕುರಿತಾದ ತಿಳುವಳಿಕಾ ಒಪ್ಪಂದ, ಸಶಸ್ತ್ರ ಪಡೆಗಳ ನಡುವೆ ಪರಸ್ಪರ ಲಾಜಿಸ್ಟಿಕ್ಸ್ ಬೆಂಬಲ ಒಪ್ಪಂದ ಮತ್ತು DRDO ಹಾಗೂ ಫೆಡರಲ್ ಆಫೀಸ್ ಆಫ್ ಬುಂಡೆಸ್ ವೆಹರ್ ಇಕ್ವಿಪ್ಮೆಂಟ್, ಮಾಹಿತಿ ತಂತ್ರಜ್ಞಾನ ಮತ್ತು ಸೇವಾ ಬೆಂಬಲ ನಡುವೆ ಹೊಸ ರಕ್ಷಣಾ ತಂತ್ರಜ್ಞಾನಗಳ ಕ್ಷೇತ್ರದಲ್ಲಿ ಜ್ಞಾನ ವಿನಿಮಯವನ್ನು ಅಂತಿಮಗೊಳಿಸುವ ನಿಟ್ಟಿನಲ್ಲಿ ಸಾಧಿಸಿದ ಪ್ರಗತಿಯನ್ನು ಸ್ವಾಗತಿಸಿದರು.
ಉಭಯ ನಾಯಕರು ಗಡಿಯಾಚೆಗಿನ ಭಯೋತ್ಪಾದನೆ ಸೇರಿದಂತೆ ಎಲ್ಲಾ ರೂಪದ ಭಯೋತ್ಪಾದನೆ ಮತ್ತು ಹಿಂಸಾತ್ಮಕ ಉಗ್ರವಾದವನ್ನು ಸ್ಪಷ್ಟವಾಗಿ ಮತ್ತು ಬಲವಾಗಿ ಖಂಡಿಸಿದರು. ವಿಶ್ವಸಂಸ್ಥೆಯ ಸನ್ನದು ಮತ್ತು ಅಂತರರಾಷ್ಟ್ರೀಯ ಕಾನೂನಿಗೆ ಅನುಗುಣವಾಗಿ, ಸಮಗ್ರ ಮತ್ತು ಸುಸ್ಥಿರ ರೀತಿಯಲ್ಲಿ ಭಯೋತ್ಪಾದನೆಯನ್ನು ಎದುರಿಸಲು ಸಂಘಟಿತ ಅಂತಾರಾಷ್ಟ್ರೀಯ ಪ್ರಯತ್ನಗಳಿಗೆ ಅವರು ಕರೆ ನೀಡಿದರು. 22 ಏಪ್ರಿಲ್ 2025 ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ನಲ್ಲಿ ನಡೆದ ಭಯೋತ್ಪಾದಕ ದಾಳಿ ಮತ್ತು 10 ನವೆಂಬರ್ 2025 ರಂದು ದೆಹಲಿಯಲ್ಲಿ ನಡೆದ ಭಯೋತ್ಪಾದಕ ಘಟನೆಯನ್ನು ಅವರು ಅತ್ಯಂತ ಕಠಿಣ ಪದಗಳಲ್ಲಿ ಖಂಡಿಸಿದರು. ವಿಶ್ವಸಂಸ್ಥೆಯ 1267 ನಿರ್ಬಂಧಗಳ ಸಮಿತಿಯ ಪಟ್ಟಿಯಲ್ಲಿರುವವರು ಸೇರಿದಂತೆ, ಭಯೋತ್ಪಾದಕರು ಮತ್ತು ಭಯೋತ್ಪಾದಕ ಸಂಘಟನೆಗಳ ವಿರುದ್ಧದ ಸಹಕಾರವನ್ನು ಬಲಪಡಿಸಲು ಅವರು ಬದ್ಧರಾದರು. ಅಂತಾರಾಷ್ಟ್ರೀಯ ಕಾನೂನಿಗೆ ಅನುಗುಣವಾಗಿ ಭಯೋತ್ಪಾದಕ ಸುರಕ್ಷಿತ ನೆಲೆಗಳು ಮತ್ತು ಮೂಲಸೌಕರ್ಯಗಳನ್ನು ನಿರ್ಮೂಲನೆ ಮಾಡಲು ಹಾಗೂ ಭಯೋತ್ಪಾದಕ ಜಾಲಗಳು ಮತ್ತು ಧನಸಹಾಯವನ್ನು ಹತ್ತಿಕ್ಕಲು ನಿರಂತರವಾಗಿ ಶ್ರಮಿಸುವಂತೆ ಉಭಯ ದೇಶಗಳು ಎಲ್ಲಾ ರಾಷ್ಟ್ರಗಳಿಗೆ ಕರೆ ನೀಡಿದವು. ನಾಯಕರು ಪರಸ್ಪರ ಕಾನೂನು ನೆರವು ಒಪ್ಪಂದದ ಅನುಮೋದನೆಯನ್ನು ಸ್ವಾಗತಿಸಿದರು ಮತ್ತು ಭಯೋತ್ಪಾದನೆ ನಿರೋಧಕ ಜಂಟಿ ಕಾರ್ಯಪಡೆಯ ಅಡಿಯಲ್ಲಿನ ಪ್ರಗತಿಯನ್ನು ಗಮನಿಸಿದರು.
ವ್ಯಾಪಾರ ಮತ್ತು ಆರ್ಥಿಕತೆ
ದ್ವಿಪಕ್ಷೀಯ ವ್ಯಾಪಾರ ಮತ್ತು ಹೂಡಿಕೆಯಲ್ಲಿನ ನಿರಂತರ ಬೆಳವಣಿಗೆಯನ್ನು ಉಭಯ ನಾಯಕರು ಸ್ವಾಗತಿಸಿದರು. 2024ರಲ್ಲಿ ದ್ವಿಪಕ್ಷೀಯ ವ್ಯಾಪಾರವು ದಾಖಲೆಯ ಮಟ್ಟವನ್ನು ತಲುಪಿದ್ದು, ಈ ಸಕಾರಾತ್ಮಕ ಪ್ರವೃತ್ತಿಯು 2025 ರವರೆಗೆ ಮುಂದುವರಿದಿದೆ ಎಂದು ಅವರು ಗಮನಿಸಿದರು. 2024ರಲ್ಲಿ ಭಾರತ-ಜರ್ಮನಿ ದ್ವಿಪಕ್ಷೀಯ ಸರಕು ಮತ್ತು ಸೇವೆಗಳ ವ್ಯಾಪಾರವು 50 ಬಿಲಿಯನ್ ಯುಎಸ್ ಡಾಲರ್ ಮೀರಿದೆ, ಇದು ಯುರೋಪಿಯನ್ ಯೂನಿಯನ್ ನೊಂದಿಗೆ ಭಾರತದ ಒಟ್ಟು ವ್ಯಾಪಾರದ ಶೇಕಡಾ 25 ಕ್ಕಿಂತ ಹೆಚ್ಚಾಗಿದೆ. ಭಾರತ ಮತ್ತು ಜರ್ಮನಿ ನಡುವಿನ ಬಲವಾದ ದ್ವಿಮುಖ ಹೂಡಿಕೆಗಳು ಮತ್ತು ಜಾಗತಿಕ ಪೂರೈಕೆ ಸರಪಳಿಗಳನ್ನು ವೈವಿಧ್ಯಗೊಳಿಸುವಲ್ಲಿ ಅಂತಹ ಹೂಡಿಕೆಗಳ ಸಕಾರಾತ್ಮಕ ಪರಿಣಾಮಗಳನ್ನು ನಾಯಕರು ಗಮನಿಸಿದರು. ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ದಿಮೆಗಳು, ಸ್ಟಾರ್ಟಪ್ ಗಳು, ಡಿಜಿಟಲೀಕರಣ, ಕೃತಕ ಬುದ್ಧಿಮತ್ತೆ ಮತ್ತು ನಾವೀನ್ಯತೆ ಆಧಾರಿತ ಉದ್ಯಮಗಳ ಮೂಲಕ ಇನ್ನೂ ಬಳಕೆಯಾಗದ ಆರ್ಥಿಕ ಸಾಮರ್ಥ್ಯವನ್ನು ಸಂಪೂರ್ಣವಾಗಿ ಅರಿತುಕೊಳ್ಳುವ ತಮ್ಮ ಬದ್ಧತೆಯನ್ನು ಅವರು ಪುನರುಚ್ಚರಿಸಿದರು. ಭಾರತದ ಬಲವಾದ ಆರ್ಥಿಕ ಬೆಳವಣಿಗೆ, ವ್ಯಾಪಾರ-ಸ್ನೇಹಿ ವಾತಾವರಣ, ಬೃಹತ್ ಪ್ರಮಾಣದ ನುರಿತ ಕಾರ್ಯಪಡೆ ಮತ್ತು ಕಾರ್ಯಚಟುವಟಿಕೆಗಳನ್ನು ವಿಸ್ತರಿಸಲು ಇರುವ ಅಪಾರ ಅವಕಾಶಗಳ ಪ್ರಯೋಜನ ಪಡೆಯಲು ಭಾರತದಲ್ಲಿ ಹೂಡಿಕೆ ಮಾಡಲು ಅಥವಾ ವ್ಯವಹಾರಗಳನ್ನು ವಿಸ್ತರಿಸಲು ಪ್ರಧಾನಮಂತ್ರಿ ಮೋದಿ ಅವರು ಜರ್ಮನ್ ಕಂಪನಿಗಳಿಗೆ ಆಹ್ವಾನ ನೀಡಿದರು. ಚಾನ್ಸಲರ್ ಮೆರ್ಜ್ ಅವರು ಭಾರತೀಯ ಕಂಪನಿಗಳ ಹೂಡಿಕೆಗೆ ಜರ್ಮನಿಯು ಒಂದು ಆಕರ್ಷಕ ತಾಣವಾಗಿದೆ ಎಂದು ಶಿಫಾರಸು ಮಾಡಿದರು.
ಮುಂಬರುವ ಇಯು-ಭಾರತ ಶೃಂಗಸಭೆಯ ಪ್ರಮುಖ ಫಲಿತಾಂಶವಾಗಿ ಭಾರತ-ಇಯು ಮುಕ್ತ ವ್ಯಾಪಾರ ಒಪ್ಪಂದವನ್ನು ಅಂತಿಮಗೊಳಿಸಲು ಪ್ರಧಾನಮಂತ್ರಿ ಮೋದಿ ಮತ್ತು ಚಾನ್ಸಲರ್ ಮೆರ್ಜ್ ತಮ್ಮ ಬೆಂಬಲವನ್ನು ಪುನರುಚ್ಚರಿಸಿದರು. ಇದು ವ್ಯಾಪಾರದ ಹರಿವನ್ನು ಸುಗಮಗೊಳಿಸುತ್ತದೆ ಮತ್ತು ಭಾರತ-ಜರ್ಮನ್ ಆರ್ಥಿಕ ಸಂಬಂಧಗಳಿಗೆ ಮತ್ತಷ್ಟು ವೇಗವನ್ನು ನೀಡುತ್ತದೆ.
ಭಾರತದಲ್ಲಿ ಜರ್ಮನ್ ವ್ಯವಹಾರಗಳ ಮತ್ತು ಜರ್ಮನಿಯಲ್ಲಿ ಭಾರತೀಯ ವ್ಯವಹಾರಗಳ ಸುದೀರ್ಘ ಉಪಸ್ಥಿತಿಯ ಬೆಂಬಲದೊಂದಿಗೆ, ವ್ಯವಹಾರ ಮತ್ತು ಉದ್ಯಮ ಸಹಯೋಗವನ್ನು ಮತ್ತಷ್ಟು ಉತ್ತೇಜಿಸುವ 'ಭಾರತ-ಜರ್ಮನಿ ಸಿಇಒ ಫೋರಮ್' ಮೂಲಕ ದ್ವಿಪಕ್ಷೀಯ ಆರ್ಥಿಕ ಸಹಕಾರವನ್ನು ಬಲಪಡಿಸುವ ಜಂಟಿ ಉದ್ದೇಶದ ಘೋಷಣೆಗೆ ಸಹಿ ಹಾಕುವುದನ್ನು ಉಭಯ ನಾಯಕರು ಸ್ವಾಗತಿಸಿದರು.
ಪ್ರಧಾನಮಂತ್ರಿ ಮೋದಿ ಮತ್ತು ಚಾನ್ಸಲರ್ ಮೆರ್ಜ್ ಅವರು ಸಿಇಒ ಫೋರಂ ಆಯೋಜನೆಯನ್ನು ಸ್ವಾಗತಿಸಿದರು. ತಂತ್ರಜ್ಞಾನ, ವಾಹನ ಉದ್ಯಮ, ರಕ್ಷಣೆ, ಹಡಗು ನಿರ್ಮಾಣ, ಸ್ಮಾರ್ಟ್ ಮೂಲಸೌಕರ್ಯ, ಔಷಧ, ರಾಸಾಯನಿಕಗಳು, ಜೈವಿಕ ತಂತ್ರಜ್ಞಾನ, ಕೈಗಾರಿಕಾ ಉಪಕರಣಗಳ ಎಂಜಿನಿಯರಿಂಗ್ ಮತ್ತು ಇಂಧನದಂತಹ ಕ್ಷೇತ್ರಗಳಲ್ಲಿ ಹೆಚ್ಚಿನ ವ್ಯವಹಾರ ಸಹಯೋಗ ಮತ್ತು ಹೂಡಿಕೆಯನ್ನು ಉತ್ತೇಜಿಸಲು ಎರಡೂ ದೇಶಗಳ ಪ್ರಮುಖ ಸಿಇಒಗಳು ಮತ್ತು ಉದ್ಯಮದ ನಾಯಕರೊಂದಿಗೆ ಸಂವಾದ ನಡೆಸಿದರು.
ತಂತ್ರಜ್ಞಾನ, ನಾವೀನ್ಯತೆ, ವಿಜ್ಞಾನ ಮತ್ತು ಸಂಶೋಧನೆ
ಸೆಮಿಕಂಡಕ್ಟರ್ ಗಳು, ನಿರ್ಣಾಯಕ ಖನಿಜಗಳು, ಡಿಜಿಟಲೀಕರಣ, ದೂರಸಂಪರ್ಕ, ಆರೋಗ್ಯ ಮತ್ತು ಜೈವಿಕ ಆರ್ಥಿಕತೆ ಸೇರಿದಂತೆ ನಿರ್ಣಾಯಕ ಹಾಗೂ ಉದಯೋನ್ಮುಖ ತಂತ್ರಜ್ಞಾನಗಳ ಸಹಕಾರದಲ್ಲಿನ ಪ್ರಗತಿಯನ್ನು ನಾಯಕರು ಸ್ವಾಗತಿಸಿದರು; ಇದು ನಾವೀನ್ಯತೆ ಮತ್ತು ತಂತ್ರಜ್ಞಾನ ಪಾಲುದಾರಿಕೆ ಮಾರ್ಗಸೂಚಿಯನ್ನು ಬಲಪಡಿಸುತ್ತದೆ.
'ಸೆಮಿಕಂಡಕ್ಟರ್ ಪರಿಸರ ವ್ಯವಸ್ಥೆ ಪಾಲುದಾರಿಕೆ'ಯ ಕುರಿತಾದ ಹೊಸ ಜಂಟಿ ಉದ್ದೇಶದ ಘೋಷಣೆಯ ಮೂಲಕ, ಸೆಮಿಕಂಡಕ್ಟರ್ ಮೌಲ್ಯ ಸರಪಳಿಯಾದ್ಯಂತ ಸಾಂಸ್ಥಿಕ ಸಂವಾದವನ್ನು ಸ್ಥಾಪಿಸಲು ಉಭಯ ಕಡೆಯವರು ತೋರಿರುವ ಬಲವಾದ ಇಚ್ಛಾಶಕ್ತಿಯನ್ನು ಅವರು ಸ್ವಾಗತಿಸಿದರು. ಭಾರತೀಯ ಮತ್ತು ಜರ್ಮನ್ ಸೆಮಿಕಂಡಕ್ಟರ್ ಪರಿಸರ ವ್ಯವಸ್ಥೆಗಳ ನಡುವಿನ ವರ್ಧಿತ ಸಾಂಸ್ಥಿಕ ಸಂಶೋಧನೆ ಮತ್ತು ಕೈಗಾರಿಕಾ ಸಹಯೋಗದ ಮಹತ್ವವನ್ನು ಅವರು ಒತ್ತಿಹೇಳಿದರು. ಕಳೆದ ವರ್ಷದ ಮಾರ್ಚ್ನಲ್ಲಿ ಜರ್ಮನ್ ತಂತ್ರಜ್ಞಾನ ಸಂಸ್ಥೆ 'ಇನ್ಫಿನಿಯನ್', ಗಿಫ್ಟ್ ಸಿಟಿಯಲ್ಲಿ ಗ್ಲೋಬಲ್ ಕ್ಯಾಪಬಿಲಿಟಿ ಸೆಂಟರ್ ಅನ್ನು ಪ್ರಾರಂಭಿಸಿರುವುದನ್ನು ಪ್ರಧಾನಮಂತ್ರಿ ಮೋದಿ ಸ್ವಾಗತಿಸಿದರು.
ಬಲವಾದ ಪೂರೈಕೆ ಸರಪಳಿಗಳ ಪ್ರಾಮುಖ್ಯತೆಯನ್ನು ಗುರುತಿಸಿ, ನಿರ್ಣಾಯಕ ಖನಿಜಗಳ ಸಹಕಾರದ ಕುರಿತಾದ ಜಂಟಿ ಉದ್ದೇಶದ ಘೋಷಣೆಯ ಮೂಲಕ ಈ ಕ್ಷೇತ್ರದಲ್ಲಿ ಸಹಯೋಗವನ್ನು ಉತ್ತೇಜಿಸುವ ಪ್ರಗತಿಯನ್ನು ನಾಯಕರು ಗಮನಿಸಿದರು. ಉಭಯ ದೇಶಗಳು ನಿರ್ಣಾಯಕ ಖನಿಜಗಳ ಪರಿಶೋಧನೆ, ಸಂಶೋಧನೆ ಮತ್ತು ಅಭಿವೃದ್ಧಿ, ಸಂಸ್ಕರಣೆ ಮತ್ತು ಮರುಬಳಕೆಯ ಮೂಲಕ ಮೌಲ್ಯವರ್ಧನೆ, ಹಾಗೂ ಎರಡೂ ದೇಶಗಳಲ್ಲಿ ಮತ್ತು ಮೂರನೇ ದೇಶಗಳಲ್ಲಿ ನಿರ್ಣಾಯಕ ಖನಿಜ ಸ್ವತ್ತುಗಳ ಸ್ವಾಧೀನ ಮತ್ತು ಅಭಿವೃದ್ಧಿಯ ಕ್ಷೇತ್ರಗಳಲ್ಲಿ ಅವಕಾಶಗಳನ್ನು ಅನ್ವೇಷಿಸುವ ಗುರಿಯನ್ನು ಹೊಂದಿವೆ.
ಭಾರತ-ಜರ್ಮನಿ ಡಿಜಿಟಲ್ ಸಂವಾದಕ್ಕೆ ಸಂಬಂಧಿಸಿದಂತೆ, ನಾಯಕರು 2026-27ರ ಕಾರ್ಯಯೋಜನೆಯನ್ನು ಅಂತಿಮಗೊಳಿಸಿರುವುದನ್ನು ಗಮನಿಸಿದರು ಮತ್ತು ಇಂಟರ್ನೆಟ್ ಹಾಗೂ ಡೇಟಾ ಆಡಳಿತ, ಎಐ, ಸೆಮಿಕಂಡಕ್ಟರ್ ಗಳು, ಇಂಡಸ್ಟ್ರಿ 4.0 ಮತ್ತು ಉದಯೋನ್ಮುಖ ತಂತ್ರಜ್ಞಾನಗಳ ಸಹಯೋಗದ ಮಹತ್ವವನ್ನು ಒತ್ತಿಹೇಳಿದರು. ದೂರಸಂಪರ್ಕ ಕ್ಷೇತ್ರದಲ್ಲಿನ ಸಹಕಾರಕ್ಕಾಗಿ JDoI ಸಹಿ ಹಾಕಿರುವುದನ್ನು ನಾಯಕರು ಅಂಗೀಕರಿಸಿದರು.
ಭಾರತ-ಜರ್ಮನಿ ವಿಜ್ಞಾನ ಮತ್ತು ತಂತ್ರಜ್ಞಾನ ಕೇಂದ್ರದ ಅವಧಿಯ ವಿಸ್ತರಣೆಯನ್ನು ನಾಯಕರು ಗಮನಿಸಿದರು. ಸುಧಾರಿತ ಉತ್ಪಾದನೆ, ವೈದ್ಯಕೀಯ ತಂತ್ರಜ್ಞಾನಗಳು, ಸುಸ್ಥಿರ ಉತ್ಪಾದನೆ, ಜೈವಿಕ ಆರ್ಥಿಕತೆ, ತ್ಯಾಜ್ಯದಿಂದ ಸಂಪತ್ತು ಉಪಕ್ರಮಗಳು ಮತ್ತು ಸುಸ್ಥಿರತೆಗಾಗಿ ಕೃತಕ ಬುದ್ಧಿಮತ್ತೆ ಕ್ಷೇತ್ರಗಳಲ್ಲಿ ದ್ವಿಪಕ್ಷೀಯ ಉದ್ಯಮ-ಶೈಕ್ಷಣಿಕ ಕಾರ್ಯತಂತ್ರದ ಸಂಶೋಧನೆಯನ್ನು ಉತ್ತೇಜಿಸುವಲ್ಲಿ IGSTC ವಹಿಸುತ್ತಿರುವ ಪ್ರಮುಖ ಪಾತ್ರದ ಬಗ್ಗೆ ಅವರು ತೃಪ್ತಿ ವ್ಯಕ್ತಪಡಿಸಿದರು. (2+2) ಉದ್ಯಮ-ಶೈಕ್ಷಣಿಕ ಯೋಜನೆಗಳು ಮತ್ತು ವಿಜ್ಞಾನ ಹಾಗೂ ಎಂಜಿನಿಯರಿಂಗ್ ಸಂಶೋಧನೆಯಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆ ನಂತಹ IGSTC ಅಡಿಯಲ್ಲಿನ ಕಾರ್ಯಕ್ರಮಗಳ ಕೊಡುಗೆಯನ್ನು ನಾಯಕರು ಅಂಗೀಕರಿಸಿದರು.
ಡಿಜಿಟಲ್ ಕನ್ವರ್ಜೆನ್ಸ್, ಬ್ಯಾಟರಿ ತಂತ್ರಜ್ಞಾನ, ಹಸಿರು ಸಾರಿಗೆ ಮತ್ತು ಕೈಗೆಟುಕುವ ದರದ ಆರೋಗ್ಯ ರಕ್ಷಣೆಯ ಮೇಲೆ ಕೇಂದ್ರೀಕರಿಸುವ 'ಭಾರತ-ಜರ್ಮನಿ ನಾವೀನ್ಯತೆ ಶ್ರೇಷ್ಠತಾ ಕೇಂದ್ರಗಳನ್ನು' ಸ್ಥಾಪಿಸುವ ನಿಟ್ಟಿನಲ್ಲಿ ಸಾಧಿಸಿರುವ ಪ್ರಗತಿಯನ್ನು ಉಭಯ ನಾಯಕರು ಸ್ವಾಗತಿಸಿದರು. ಜೀನೋಮಿಕ್ಸ್, 3ಡಿ ಬಯೋಪ್ರಿಂಟಿಂಗ್ ಮತ್ತು ಬಯೋಮ್ಯಾನುಫ್ಯಾಕ್ಚರಿಂಗ್ ಕ್ಷೇತ್ರಗಳಲ್ಲಿ ಪರಿವರ್ತಕ ಫಲಿತಾಂಶಗಳನ್ನು ನೀಡಲು ಜೈವಿಕ ಆರ್ಥಿಕತೆಯ ಕುರಿತಾದ ದ್ವಿಪಕ್ಷೀಯ ಸಹಕಾರದ ಆರಂಭಕ್ಕೆ ನಾಯಕರು ಮೆಚ್ಚುಗೆ ವ್ಯಕ್ತಪಡಿಸಿದರು. ಆಂಟಿಪ್ರೋಟಾನ್ ಮತ್ತು ಅಯಾನ್ ಸಂಶೋಧನಾ ಸೌಲಭ್ಯ ಮತ್ತು ಡಾಯ್ಚಸ್ ಎಲೆಕ್ಟ್ರಾನ್ ಸಿಂಕ್ರೋಟ್ರಾನ್ ನಂತಹ ಪ್ರಮುಖ ವಿಜ್ಞಾನ ಸೌಲಭ್ಯಗಳಲ್ಲಿ ಭಾರತದ ಪಾಲ್ಗೊಳ್ಳುವಿಕೆಯಲ್ಲಿ ಪ್ರತಿಫಲಿಸುವ ಉನ್ನತ ಮಟ್ಟದ ತೊಡಗಿಸಿಕೊಳ್ಳುವಿಕೆಯನ್ನು ನಾಯಕರು ಶ್ಲಾಘಿಸಿದರು. ಅಲ್ಲದೆ, ಪೆಟ್ರಾ-III (PETRA-III) ಮತ್ತು DESY ನಲ್ಲಿನ ಮುಕ್ತ-ಎಲೆಕ್ಟ್ರಾನ್ ಲೇಸರ್ ಸೌಲಭ್ಯಗಳಲ್ಲಿನ ನಿರಂತರ ಸಹಕಾರದ ಬಗ್ಗೆ ಅವರು ವಿಶ್ವಾಸ ವ್ಯಕ್ತಪಡಿಸಿದರು.
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಮತ್ತು ಜರ್ಮನ್ ಬಾಹ್ಯಾಕಾಶ ಸಂಸ್ಥೆ ನಡುವೆ ಬಾಹ್ಯಾಕಾಶ ಕ್ಷೇತ್ರದಲ್ಲಿ ಹೆಚ್ಚುತ್ತಿರುವ ಸಂವಾದವನ್ನು ನಾಯಕರು ಗಮನಿಸಿದರು ಮತ್ತು ಎರಡೂ ಸಂಸ್ಥೆಗಳ ನಡುವಿನ ಸಹಕಾರವನ್ನು ಮತ್ತಷ್ಟು ವಿಸ್ತರಿಸುವ ಸಾಧ್ಯತೆಯನ್ನು ಸ್ವಾಗತಿಸಿದರು. ಉಭಯ ದೇಶಗಳು ಬಾಹ್ಯಾಕಾಶ ಉದ್ಯಮ ಮಟ್ಟದ ತೊಡಗಿಸಿಕೊಳ್ಳುವಿಕೆಯನ್ನು ಹೆಚ್ಚಿಸಲು ಒಪ್ಪಿಕೊಂಡವು.
ಕೈಗೆಟುಕುವ ದರದ ಆರೋಗ್ಯ ರಕ್ಷಣೆಗಾಗಿ ಸಾಕ್ಷ್ಯಾಧಾರಿತ ಮತ್ತು ಜನಕೇಂದ್ರಿತ ಸಾಂಪ್ರದಾಯಿಕ ವೈದ್ಯಕೀಯ ಪದ್ಧತಿಗಳನ್ನು ಉತ್ತೇಜಿಸುವ ತಮ್ಮ ಬದ್ಧತೆಯನ್ನು ನಾಯಕರು ಪುನರುಚ್ಚರಿಸಿದರು. ಸಾಂಪ್ರದಾಯಿಕ ವೈದ್ಯಕೀಯ ಕ್ಷೇತ್ರದಲ್ಲಿ ವೈಜ್ಞಾನಿಕ ಸಹಕಾರವನ್ನು ಉತ್ತೇಜಿಸಲು ಅಖಿಲ ಭಾರತ ಆಯುರ್ವೇದ ಸಂಸ್ಥೆ ಮತ್ತು ಜರ್ಮನಿಯ ಚಾರಿಟೆ (Charité) ವಿಶ್ವವಿದ್ಯಾಲಯದ ನಡುವಿನ ತಿಳುವಳಿಕಾ ಒಪ್ಪಂದವನ್ನು (MoU) ಅವರು ಸ್ವಾಗತಿಸಿದರು.
ಹಸಿರು ಮತ್ತು ಸುಸ್ಥಿರ ಅಭಿವೃದ್ಧಿ ಪಾಲುದಾರಿಕೆ/ನವೀಕರಿಸಬಹುದಾದ ಇಂಧನ
2026ನೇ ವರ್ಷವು ಹಸಿರು ಮತ್ತು ಸುಸ್ಥಿರ ಅಭಿವೃದ್ಧಿ ಪಾಲುದಾರಿಕೆಯ ಬದ್ಧತೆಯ ಅವಧಿಯ ಅರ್ಧಾವಧಿಯನ್ನು ಎಂದು ನಾಯಕರು ಗಮನಿಸಿದರು. ಭಾರತ ಮತ್ತು ಜರ್ಮನಿ ನಡುವಿನ ಈ ಪ್ರಮುಖ ಉಪಕ್ರಮದ ಅನುಷ್ಠಾನದ ಬಗ್ಗೆ ಅವರು ತೃಪ್ತಿ ವ್ಯಕ್ತಪಡಿಸಿದರು. ಇದು ಸುಸ್ಥಿರ ಅಭಿವೃದ್ಧಿ ಮತ್ತು ಹವಾಮಾನ ಬದಲಾವಣೆ ಕ್ರಮಗಳ ಕುರಿತು ದ್ವಿಪಕ್ಷೀಯ ಸಹಕಾರವನ್ನು ತೀವ್ರಗೊಳಿಸಿದೆ ಮತ್ತು ಸುಸ್ಥಿರ ಅಭಿವೃದ್ಧಿ ಗುರಿಗಳು ಹಾಗೂ ಪ್ಯಾರಿಸ್ ಒಪ್ಪಂದದ ಅನುಷ್ಠಾನಕ್ಕೆ ಇರುವ ಬಲವಾದ ಬದ್ಧತೆಯನ್ನು ಮತ್ತಷ್ಟು ಗಟ್ಟಿಗೊಳಿಸಿದೆ. ಹೆಚ್ಚಾಗಿ ರಿಯಾಯಿತಿ ಸಾಲಗಳ ರೂಪದಲ್ಲಿ 2030ರ ವೇಳೆಗೆ ಜರ್ಮನ್ ಸರ್ಕಾರವು ನೀಡಲು ಒಪ್ಪಿಕೊಂಡಿರುವ ಒಟ್ಟು 10 ಬಿಲಿಯನ್ ಯೂರೋಗಳಲ್ಲಿ,ಸರಿಸುಮಾರು 5 ಬಿಲಿಯನ್ ಯೂರೋಗಳನ್ನು 2022 ರಿಂದ ಈಗಾಗಲೇ ಹವಾಮಾನ ಬದಲಾವಣೆ ತಗ್ಗಿಸುವಿಕೆ ಮತ್ತು ಹೊಂದಾಣಿಕೆ, ನವೀಕರಿಸಬಹುದಾದ ಇಂಧನ, ಸುಸ್ಥಿರ ನಗರಾಭಿವೃದ್ಧಿ, ಹಸಿರು ನಗರ ಸಂಚಾರ, ನೈಸರ್ಗಿಕ ಸಂಪನ್ಮೂಲ ನಿರ್ವಹಣೆ, ಅರಣ್ಯೀಕರಣ, ಜೀವವೈವಿಧ್ಯ, ಕೃಷಿ-ಪರಿಸರ ವಿಜ್ಞಾನ, ವೃತ್ತಾಕಾರದ ಆರ್ಥಿಕತೆ ಮತ್ತು ಕೌಶಲ್ಯಾಭಿವೃದ್ಧಿ ಯೋಜನೆಗಳಿಗಾಗಿ ಬಳಸಲಾಗಿದೆ ಅಥವಾ ಮೀಸಲಿಡಲಾಗಿದೆ. ಈ ರೀತಿಯಾಗಿ, GSDP ಅಡಿಯಲ್ಲಿನ ಭಾರತ-ಜರ್ಮನಿ ಸಹಯೋಗವು ಭಾರತ ಸರ್ಕಾರದ ಪ್ರಮುಖ ಕಾರ್ಯಕ್ರಮಗಳಾದ ಪಿಎಂ ಇ-ಬಸ್ ಸೇವೆ, ಸೋಲಾರ್ ರೂಫ್ ಟಾಪ್ ಪ್ರೋಗ್ರಾಂ, ರಾಷ್ಟ್ರೀಯ ಹಸಿರು ಹೈಡ್ರೋಜನ್ ಮಿಷನ್, ಅಹಮದಾಬಾದ್, ಸೂರತ್ ಮತ್ತು ಬೆಂಗಳೂರು ಮೆಟ್ರೋ ರೈಲು ಯೋಜನೆಗಳು, ವಾಟರ್ ವಿಷನ್ 2047, ತಮಿಳುನಾಡಿನಲ್ಲಿ ಹವಾಮಾನ-ಸ್ಥಿತಿಸ್ಥಾಪಕ ನಗರ ಮೂಲಸೌಕರ್ಯ, ಪಶ್ಚಿಮ ಬಂಗಾಳದಲ್ಲಿ ಬ್ಯಾಟರಿ ಸಂಗ್ರಹಣೆ ಯೋಜನೆ, ಆಗ್ರೋ-ಫೋಟೋವೋಲ್ಟಾಯಿಕ್ ಕ್ಷೇತ್ರದಲ್ಲಿನ ಹೊಸ ಭಾರತ-ಜರ್ಮನಿ ಸಹಯೋಗ ಮತ್ತು ನವೀಕರಿಸಬಹುದಾದ ಇಂಧನವನ್ನು ವಿಸ್ತರಿಸಲು ಸಾರ್ವಜನಿಕ ಹಣಕಾಸು ಸಂಸ್ಥೆಗಳಿಗೆ ಆರ್ಥಿಕ ನೆರವು ನೀಡುವಲ್ಲಿ ಮಹತ್ವದ ಕೊಡುಗೆ ನೀಡಿದೆ
ನವೀಕರಿಸಬಹುದಾದ ಇಂಧನಕ್ಕಾಗಿ ಹಣಕಾಸು ಮತ್ತು ಹೂಡಿಕೆಯನ್ನು ಕ್ರೋಢೀಕರಿಸುವ ಪ್ರಾಮುಖ್ಯತೆಯನ್ನು ಉಭಯ ನಾಯಕರು ಪುನರುಚ್ಚರಿಸಿದರು. ಅಕ್ಟೋಬರ್ 2025ರಲ್ಲಿ ಸೌರಶಕ್ತಿ ಉತ್ಪಾದನೆ ಮತ್ತು ಪವನ ಶಕ್ತಿಯ ಕುರಿತಾದ ಜಂಟಿ ಕಾರ್ಯಪಡೆಗಳ ಚಾಲನೆ, ಹಾಗೂ ಹೊಸದಾಗಿ ಸ್ಥಾಪಿಸಲಾದ 'ಬ್ಯಾಟರಿ ಎನರ್ಜಿ ಸ್ಟೋರೇಜ್ ಸಲ್ಯೂಷನ್ಸ್' ಕುರಿತಾದ ಜಂಟಿ ಕಾರ್ಯಪಡೆಯಂತಹ 'ಜಾಗತಿಕವಾಗಿ ನವೀಕರಿಸಬಹುದಾದ ಇಂಧನ ಹೂಡಿಕೆಗಳಿಗಾಗಿ ಭಾರತ-ಜರ್ಮನಿ ವೇದಿಕೆ'ಯ ಅಡಿಯಲ್ಲಿನ ಜಂಟಿ ಪ್ರಯತ್ನಗಳನ್ನು ಅವರು ಸ್ವಾಗತಿಸಿದರು. ಈ ಜಂಟಿ ಕಾರ್ಯಪಡೆಗಳು ನವೀಕರಿಸಬಹುದಾದ ಇಂಧನಕ್ಕಾಗಿ ತಂತ್ರಜ್ಞಾನ, ಮಾನದಂಡಗಳು, ನಿಯಂತ್ರಣ ಮತ್ತು ಪೂರೈಕೆ ಸರಪಳಿ ಸ್ಥಿತಿಸ್ಥಾಪಕತ್ವದಲ್ಲಿ ದ್ವಿಪಕ್ಷೀಯ ಸಹಯೋಗವನ್ನು ಗಾಢವಾಗಿಸಲಿವೆ ಮತ್ತು ಭಾರತ ಹಾಗೂ ಜರ್ಮನಿಯ ಕಂಪನಿಗಳ ನಡುವೆ ಪರಸ್ಪರ ವಿನಿಮಯ ಮತ್ತು ಹೂಡಿಕೆಗಳನ್ನು ಉತ್ತೇಜಿಸಲಿವೆ.
ಭಾರತ-ಜರ್ಮನಿ ಇಂಧನ ವೇದಿಕೆಯೊಳಗಿನ ಜಂಟಿ ಮಾರ್ಗಸೂಚಿಯ ಅಡಿಯಲ್ಲಿನ ಕೆಲಸಗಳು ಸೇರಿದಂತೆ ಹಸಿರು ಹೈಡ್ರೋಜನ್ ನಲ್ಲಿ ನಡೆಯುತ್ತಿರುವ ಸಹಕಾರದ ಬಗ್ಗೆ ಉಭಯ ನಾಯಕರು ತೃಪ್ತಿ ವ್ಯಕ್ತಪಡಿಸಿದರು. ಆಳವಾದ ತಾಂತ್ರಿಕ, ವಾಣಿಜ್ಯ ಮತ್ತು ನಿಯಂತ್ರಕ ಸಹಯೋಗ ಹಾಗೂ ಬಲವರ್ಧಿತ ವ್ಯವಹಾರಗಳ ನಡುವಿನ ಸಂಪರ್ಕದ ಮೂಲಕ ಭಾರತದ ರಾಷ್ಟ್ರೀಯ ಹಸಿರು ಹೈಡ್ರೋಜನ್ ಮಿಷನ್ ಮತ್ತು ಜರ್ಮನಿಯ ರಾಷ್ಟ್ರೀಯ ಹೈಡ್ರೋಜನ್ ಕಾರ್ಯತಂತ್ರವನ್ನು ಪರಸ್ಪರ ಹೊಂದಿಸುವ ಅಗತ್ಯವನ್ನು ಅವರು ಒತ್ತಿಹೇಳಿದರು. ಭಾರತದಲ್ಲಿ ಹೈಡ್ರೋಜನ್ ನಿಯಮಗಳು ಮತ್ತು ಮಾನದಂಡಗಳನ್ನು ಅಭಿವೃದ್ಧಿಪಡಿಸುವಲ್ಲಿ ಸಹಕಾರವನ್ನು ಮತ್ತಷ್ಟು ಮುನ್ನಡೆಸಲು, ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ನಿಯಂತ್ರಣ ಮಂಡಳಿ ಹಾಗೂ ಅನಿಲ ಮತ್ತು ಜಲ ಕೈಗಾರಿಕೆಗಳಿಗಾಗಿ ಜರ್ಮನ್ ತಾಂತ್ರಿಕ ಮತ್ತು ವೈಜ್ಞಾನಿಕ ಸಂಘದ ನಡುವಿನ ತಿಳುವಳಿಕಾ ಒಪ್ಪಂದಕ್ಕೆ (MoU) ಸಹಿ ಹಾಕಿರುವುದನ್ನು ನಾಯಕರು ಸ್ವಾಗತಿಸಿದರು. ಭಾರತದ ರಾಷ್ಟ್ರೀಯ ಹಸಿರು ಹೈಡ್ರೋಜನ್ ಮಿಷನ್ ಅಡಿಯಲ್ಲಿ, ಎಎಂ ಗ್ರೀನ್ ನಿಂದ ಯುನಿಪರ್ ಗ್ಲೋಬಲ್ ಕಮೋಡಿಟೀಸ್ ಗೆ ಹಸಿರು ಅಮೋನಿಯಾವನ್ನು ಪೂರೈಸಲು ಮಾಡಿಕೊಳ್ಳಲಾದ ಅತಿ ದೊಡ್ಡ ಆಫ್ಟೇಕ್ ಒಪ್ಪಂದಗಳಲ್ಲಿ ಒಂದಕ್ಕೆ ಸಹಿ ಹಾಕಿರುವುದನ್ನು ಅವರು ಸ್ವಾಗತಿಸಿದರು. ಖಾಸಗಿ ವಲಯದ ಬದ್ಧತೆಯುಳ್ಳ ಪಾಲುದಾರರು ಇಲ್ಲಿಯವರೆಗೆ ಸಾಧಿಸಿರುವ ಪ್ರಗತಿಯನ್ನು, ವಿಶೇಷವಾಗಿ ಭಾರತದಲ್ಲಿ ಉತ್ಪಾದಿಸಲಾದ ಹಸಿರು ಅಮೋನಿಯಾಕ್ಕಾಗಿ ಇತ್ತೀಚೆಗೆ ಸಹಿ ಮಾಡಲಾದ ಬೃಹತ್ ಪ್ರಮಾಣದ ಪೂರೈಕೆ ಒಪ್ಪಂದವನ್ನು ನಾಯಕರು ಶ್ಲಾಘಿಸಿದರು.
ಆಫ್ರಿಕಾ ಮತ್ತು ಲ್ಯಾಟಿನ್ ಅಮೆರಿಕಾದಲ್ಲಿನ ತ್ರಿಪಕ್ಷೀಯ ಅಭಿವೃದ್ಧಿ ಸಹಕಾರ ಯೋಜನೆಗಳ ಫಲಿತಾಂಶಗಳ ಬಗ್ಗೆ ನಾಯಕರು ತೃಪ್ತಿ ವ್ಯಕ್ತಪಡಿಸಿದರು ಮತ್ತು ಮೂರನೇ ದೇಶಗಳಲ್ಲಿ ಸುಸ್ಥಿರ ಹಾಗೂ ಅಂತರ್ಗತ ಅಭಿವೃದ್ಧಿಯನ್ನು ಬೆಂಬಲಿಸಲು ಉಭಯ ದೇಶಗಳ ಪೂರಕ ಸಾಮರ್ಥ್ಯಗಳನ್ನು ಒಗ್ಗೂಡಿಸುವ ಬದ್ಧತೆಯನ್ನು ಪುನರುಚ್ಚರಿಸಿದರು. ಘಾನಾ, ಕ್ಯಾಮರೂನ್ ಮತ್ತು ಮಲಾವಿಯಲ್ಲಿ TDC ಯೋಜನೆಗಳನ್ನು ವಿಸ್ತರಿಸುವ ನಿರ್ಧಾರವನ್ನು ಅವರು ಸ್ವಾಗತಿಸಿದರು.
ಇಂಡೋ-ಪೆಸಿಫಿಕ್, ಸಂಪರ್ಕ ಮತ್ತು ಜಾಗತಿಕ ಸಮಸ್ಯೆಗಳು
ಮುಕ್ತ, ಪಾರದರ್ಶಕ ಮತ್ತು ಸರ್ವಸಮ್ಮತ ಇಂಡೋ-ಪೆಸಿಫಿಕ್ ಪ್ರದೇಶದ ಕುರಿತಾದ ತಮ್ಮ ಬದ್ಧತೆಯನ್ನು ಮತ್ತು UNCLOS ಸೇರಿದಂತೆ ಅಂತಾರಾಷ್ಟ್ರೀಯ ಕಾನೂನಿನ ಮೇಲಿನ ಗೌರವವನ್ನು ಉಭಯ ನಾಯಕರು ಪುನರುಚ್ಚರಿಸಿದರು. ಅಲ್ಲದೆ, ಹೊಸ ದ್ವಿಪಕ್ಷೀಯ ಇಂಡೋ-ಪೆಸಿಫಿಕ್ ಸಮಾಲೋಚನಾ ಕಾರ್ಯವಿಧಾನವನ್ನು ಘೋಷಿಸಿದರು. ಭಾರತ ಮತ್ತು ಜರ್ಮನಿ ಜಂಟಿಯಾಗಿ ಮುನ್ನಡೆಸುತ್ತಿರುವ 'ಇಂಡೋ-ಪೆಸಿಫಿಕ್ ಸಾಗರಗಳ ಉಪಕ್ರಮ'ದ 'ಸಾಮರ್ಥ್ಯ ವೃದ್ಧಿ ಮತ್ತು ಸಂಪನ್ಮೂಲ ಹಂಚಿಕೆ'ಯ ಸ್ತಂಭದ ಅಡಿಯಲ್ಲಿನ ಚಟುವಟಿಕೆಗಳು ಸೇರಿದಂತೆ, ಈ ಪ್ರದೇಶದಲ್ಲಿ ಜರ್ಮನಿಯ ನಿರಂತರ ಮತ್ತು ಬೆಳೆಯುತ್ತಿರುವ ತೊಡಗಿಸಿಕೊಳ್ಳುವಿಕೆಯನ್ನು ಭಾರತ ಸ್ವಾಗತಿಸಿತು.
ಭಾರತ-ಮಧ್ಯಪ್ರಾಚ್ಯ-ಯುರೋಪ್ ಆರ್ಥಿಕ ಕಾರಿಡಾರ್ ಗೆ ತಮ್ಮ ಬಲವಾದ ಬೆಂಬಲವನ್ನು ಪುನರುಚ್ಚರಿಸಿದ ನಾಯಕರು, ಜಾಗತಿಕ ವಾಣಿಜ್ಯ, ಸಂಪರ್ಕ ಮತ್ತು ಸಮೃದ್ಧಿಯನ್ನು ಮರುರೂಪಿಸುವಲ್ಲಿ ಮತ್ತು ಉತ್ತೇಜಿಸುವಲ್ಲಿ ಈ ಕಾರಿಡಾರ್ ನ ಪರಿವರ್ತನಾ ಸಾಮರ್ಥ್ಯವನ್ನು ಒತ್ತಿಹೇಳಿದರು. ಈ ಹಿನ್ನೆಲೆಯಲ್ಲಿ, ಈ ಉಪಕ್ರಮವನ್ನು ಮುನ್ನಡೆಸಲು ನಿರ್ದಿಷ್ಟ ಕ್ರಮಗಳನ್ನು ಕೈಗೊಳ್ಳಲು ಮೊದಲ IMEC ಸಚಿವ ಮಟ್ಟದ ಸಭೆಯನ್ನು ಅವರು ಎದುರು ನೋಡುತ್ತಿದ್ದಾರೆ.
ಸಮಕಾಲೀನ ವಾಸ್ತವಗಳನ್ನು ಪ್ರತಿಬಿಂಬಿಸುವ ನಿಟ್ಟಿನಲ್ಲಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಕಾಯಂ ಮತ್ತು ಕಾಯಂ ಅಲ್ಲದ ಸದಸ್ಯತ್ವದ ವಿಭಾಗಗಳ ವಿಸ್ತರಣೆ ಸೇರಿದಂತೆ, ಮಂಡಳಿಯಲ್ಲಿ ಸಮಗ್ರ ಸುಧಾರಣೆಗಳನ್ನು ತರುವ ತುರ್ತು ಅಗತ್ಯವನ್ನು ಭಾರತ ಮತ್ತು ಜರ್ಮನಿ ಪುನರುಚ್ಚರಿಸಿದವು. ಈ ನಿಟ್ಟಿನಲ್ಲಿ, ಅಂತರ-ಸರ್ಕಾರಿ ಮಾತುಕತೆಗಳ ವೇದಿಕೆಯಲ್ಲಿ ಪಠ್ಯ-ಆಧಾರಿತ ಮಾತುಕತೆಗಳನ್ನು ಪ್ರಾರಂಭಿಸುವತ್ತ ಮುನ್ನಡೆಯಲು ಉಭಯ ದೇಶಗಳು ಕರೆ ನೀಡಿದವು.
ಉಕ್ರೇನ್ ನಲ್ಲಿ ಮುಂದುವರಿಯುತ್ತಿರುವ ಯುದ್ಧವು ಅಪಾರ ಮಾನವ ಸಂಕಷ್ಟಗಳಿಗೆ ಮತ್ತು ಜಾಗತಿಕವಾಗಿ ನಕಾರಾತ್ಮಕ ಪರಿಣಾಮಗಳಿಗೆ ಕಾರಣವಾಗುತ್ತಿರುವುದರ ಬಗ್ಗೆ ಉಭಯ ನಾಯಕರು ತಮ್ಮ ಕಳವಳವನ್ನು ವ್ಯಕ್ತಪಡಿಸಿದರು. ಅಂತಾರಾಷ್ಟ್ರೀಯ ಕಾನೂನು ಮತ್ತು ವಿಶ್ವಸಂಸ್ಥೆಯ ಚಾರ್ಟರ್ ತತ್ವಗಳಿಗೆ ಅನುಗುಣವಾಗಿ ಉಕ್ರೇನ್ ನಲ್ಲಿ ಸಮಗ್ರ, ನ್ಯಾಯಯುತ ಮತ್ತು ಸುಸ್ಥಿರ ಶಾಂತಿಯನ್ನು ಸ್ಥಾಪಿಸುವ ಪ್ರಯತ್ನಗಳಿಗೆ ಅವರು ತಮ್ಮ ಬೆಂಬಲವನ್ನು ಸೂಚಿಸಿದರು.
ಉಭಯ ನಾಯಕರು ಗಾಜಾ ಶಾಂತಿ ಯೋಜನೆಯನ್ನು ಸ್ವಾಗತಿಸಿದರು ಮತ್ತು ಗಾಜಾದಲ್ಲಿನ ಸಂಘರ್ಷವನ್ನು ಕೊನೆಗೊಳಿಸುವ ನಿಟ್ಟಿನಲ್ಲಿ 17 ನವೆಂಬರ್ 2025 ರ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ನಿರ್ಣಯ 2803 ಅನ್ನು ಅಂಗೀಕರಿಸಿರುವುದನ್ನು ಒಂದು ಪ್ರಮುಖ ಹೆಜ್ಜೆಯೆಂದು ಗಮನಿಸಿದರು. ಈ ನಿರ್ಣಯವನ್ನು ಅದರ ಪೂರ್ಣ ಪ್ರಮಾಣದಲ್ಲಿ ಅನುಷ್ಠಾನಗೊಳಿಸುವಂತೆ ಅವರು ಎಲ್ಲಾ ಪಕ್ಷಗಳಿಗೆ ಕರೆ ನೀಡಿದರು. ಗಾಜಾಕ್ಕೆ ಬೃಹತ್ ಪ್ರಮಾಣದಲ್ಲಿ ಮತ್ತು ಯಾವುದೇ ಅಡೆತಡೆಯಿಲ್ಲದೆ ಮಾನವೀಯ ನೆರವು ತಲುಪಿಸುವ ಅಗತ್ಯವನ್ನು ಹಾಗೂ ಮಾನವೀಯ ಸಂಸ್ಥೆಗಳಿಗೆ ಮುಕ್ತ ಪ್ರವೇಶ ಕಲ್ಪಿಸುವ ಬಗ್ಗೆ ಅವರು ಒತ್ತು ನೀಡಿದರು. ನ್ಯಾಯಯುತ ಮತ್ತು ಸುಸ್ಥಿರ ಶಾಂತಿಯ ನಿಟ್ಟಿನಲ್ಲಿ ನಡೆಯುವ ಪ್ರಯತ್ನಗಳನ್ನು ಬೆಂಬಲಿಸಲು ತಮ್ಮ ಸಿದ್ಧತೆಯನ್ನು ಪುನರುಚ್ಚರಿಸಿದ ನಾಯಕರು, ಮಧ್ಯಪ್ರಾಚ್ಯ ಸಂಘರ್ಷಕ್ಕೆ ಮಾತುಕತೆಯ ಮೂಲಕ 'ಎರಡು ರಾಷ್ಟ್ರಗಳ ಪರಿಹಾರ'ದ ರೂಪದಲ್ಲಿ ನ್ಯಾಯಯುತ, ಸುಸ್ಥಿರ ಮತ್ತು ಸಮಗ್ರ ಪರಿಹಾರವನ್ನು ಕಂಡುಕೊಳ್ಳುವ ತಮ್ಮ ಕರೆಯನ್ನು ಮತ್ತೊಮ್ಮೆ ದೃಢಪಡಿಸಿದರು.
ಹವಾಮಾನ ಬದಲಾವಣೆಯ ಕುರಿತಾದ ಜಾಗತಿಕ ಕ್ರಮಗಳನ್ನು ವೇಗಗೊಳಿಸುವ ತುರ್ತು ಅಗತ್ಯವನ್ನು ಉಭಯ ನಾಯಕರು ಒತ್ತಿಹೇಳಿದರು ಮತ್ತು UNFCCC ಪ್ರಕ್ರಿಯೆಯನ್ನು ಸ್ವಾಗತಿಸಿದರು. ಪ್ಯಾರಿಸ್ ಒಪ್ಪಂದದ ಮಹತ್ವವನ್ನು ಎತ್ತಿ ತೋರಿಸಿದ ಅವರು, ಬೆಲೆಮ್ ನಲ್ಲಿ ನಡೆದ COP 30 ನಿರ್ಧಾರಗಳನ್ನು ಮತ್ತು ಇತ್ತೀಚಿನ ವರ್ಷಗಳಲ್ಲಿ ಕೈಗೊಳ್ಳಲಾದ ನಿರ್ಣಯಗಳನ್ನು, ವಿಶೇಷವಾಗಿ 'ನ್ಯಾಯಯುತ ಪರಿವರ್ತನಾ ಕಾರ್ಯವಿಧಾನ' ಮತ್ತು 'ತಂತ್ರಜ್ಞಾನ ಅನುಷ್ಠಾನ ಕಾರ್ಯಕ್ರಮ'ವನ್ನು ರೂಪಿಸಿರುವುದನ್ನು ಪುನರುಚ್ಚರಿಸಿದರು. ಅಲ್ಲದೆ, ಅವರು 'ಜಾಗತಿಕ ಪರಾಮರ್ಶೆ'ಯನ್ನು ಎದುರು ನೋಡುತ್ತಿದ್ದಾರೆ. ಹಸಿರು ಮತ್ತು ಸುಸ್ಥಿರ ಇಂಧನ ವ್ಯವಸ್ಥೆಗಳು ಹಾಗೂ ಆರ್ಥಿಕತೆಗಳಿಗೆ ನ್ಯಾಯಯುತವಾಗಿ ಪರಿವರ್ತನೆಯಾಗಲು ಮತ್ತು ಹವಾಮಾನ ಬದಲಾವಣೆಯ ಹೆಚ್ಚುತ್ತಿರುವ ಪರಿಣಾಮಗಳಿಗೆ ಹೊಂದಿಕೊಳ್ಳಲು ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಬೆಂಬಲ ನೀಡುವ ನಿಟ್ಟಿನಲ್ಲಿ, ಹವಾಮಾನ ಕ್ರಮಗಳನ್ನು ಗಣನೀಯವಾಗಿ ಹೆಚ್ಚಿಸಲು ಹಾಗೂ ಹವಾಮಾನ ಹಣಕಾಸು ಮತ್ತು ತಂತ್ರಜ್ಞಾನ ವರ್ಗಾವಣೆಯ ಪ್ರಯತ್ನಗಳನ್ನು ತೀವ್ರಗೊಳಿಸಲು ಅವರು ಕರೆ ನೀಡಿದರು. ಆರ್ಥಿಕ ಅಭಿವೃದ್ಧಿ ಮತ್ತು ಬಡತನ ನಿರ್ಮೂಲನೆಗಾಗಿ ಸರಿಯಾಗಿ ರೂಪಿಸಲಾದ ಹವಾಮಾನ ಕ್ರಮಗಳ ಸಾಮರ್ಥ್ಯವನ್ನು ಮತ್ತು ರಾಷ್ಟ್ರೀಯ ಹಾಗೂ ಗಡಿಯಾಚೆಗಿನ ಮೌಲ್ಯ ಸರಪಳಿಗಳ ಉದ್ದಕ್ಕೂ ಈ ಪರಿವರ್ತನೆಯನ್ನು ವೇಗಗೊಳಿಸಲು ಎಲ್ಲಾ ಪಾಲುದಾರರಿಂದ ಹವಾಮಾನ ಹಣಕಾಸನ್ನು ವಿಸ್ತರಿಸುವ ಪ್ರಾಮುಖ್ಯತೆಯನ್ನು ಅವರು ಒತ್ತಿಹೇಳಿದರು. ನೈಸರ್ಗಿಕ ವಿಕೋಪಗಳು ಮತ್ತು ತೀವ್ರ ಹವಾಮಾನ ವೈಪರೀತ್ಯಗಳಿಂದ ಉಂಟಾಗುವ ಬೆದರಿಕೆಗಳನ್ನು ಹಾಗೂ ಹವಾಮಾನ ಬದಲಾವಣೆ, ಪರಿಸರ ನಾಶ ಮತ್ತು ಜೀವವೈವಿಧ್ಯದ ನಷ್ಟದಿಂದ ಭದ್ರತೆಯ ಮೇಲೆ ಉಂಟಾಗುವ ಪರಿಣಾಮಗಳನ್ನು ಅವರು ಗುರುತಿಸಿದರು.
ಸಾಂಕ್ರಾಮಿಕ ರೋಗಗಳ ಸಿದ್ಧತೆ ಮತ್ತು ಪ್ರತಿಕ್ರಿಯೆ, ಸೂಕ್ಷ್ಮಜೀವಿ ವಿರೋಧಿ ಪ್ರತಿರೋಧದ ವಿರುದ್ಧದ ಹೋರಾಟ ಹಾಗೂ ಕೈಗೆಟುಕುವ ದರದ ಆರೋಗ್ಯ ರಕ್ಷಣೆ ಮತ್ತು ಔಷಧಿಗಳಿಗೆ ಸಮಾನ ಪ್ರವೇಶವನ್ನು ಖಚಿತಪಡಿಸುವುದು ಸೇರಿದಂತೆ ಜಾಗತಿಕ ಆರೋಗ್ಯ ಸವಾಲುಗಳನ್ನು ಎದುರಿಸುವಲ್ಲಿ ಸಹಕಾರವನ್ನು ಬಲಪಡಿಸಲು ಅವರು ಒಪ್ಪಿಕೊಂಡರು.
ಶಿಕ್ಷಣ, ಕೌಶಲ್ಯ, ಚಲನಶೀಲತೆ ಮತ್ತು ಸಂಸ್ಕೃತಿ
ಜನರ ನಡುವಿನ ಬಲವಾದ ಬಾಂಧವ್ಯವು ಈ ಕಾರ್ಯತಂತ್ರದ ಪಾಲುದಾರಿಕೆಯ ಪ್ರಮುಖ ಸ್ತಂಭವಾಗಿದೆ ಎಂದು ಉಭಯ ನಾಯಕರು ಪುನರುಚ್ಚರಿಸಿದರು. ವಿದ್ಯಾರ್ಥಿಗಳು, ಸಂಶೋಧಕರು, ನುರಿತ ವೃತ್ತಿಪರರು, ಕಲಾವಿದರು ಮತ್ತು ಪ್ರವಾಸಿಗರ ಹೆಚ್ಚುತ್ತಿರುವ ವಿನಿಮಯವನ್ನು ಅವರು ಸ್ವಾಗತಿಸಿದರು. ಜರ್ಮನಿಯ ಆರ್ಥಿಕತೆ, ನಾವೀನ್ಯತೆ ಮತ್ತು ಸಾಂಸ್ಕೃತಿಕ ಜೀವನಕ್ಕೆ ಭಾರತೀಯ ಸಮುದಾಯ ನೀಡುತ್ತಿರುವ ಅಮೂಲ್ಯ ಕೊಡುಗೆಯನ್ನು ಗುರುತಿಸಿದ ನಾಯಕರು, ಪರಸ್ಪರ ತಿಳುವಳಿಕೆಯನ್ನು ಹೆಚ್ಚಿಸಲು ಶಿಕ್ಷಣ, ಸಂಶೋಧನೆ, ವೃತ್ತಿಪರ ತರಬೇತಿ, ಸಂಸ್ಕೃತಿ ಮತ್ತು ಯುವ ವಿನಿಮಯ ಕ್ಷೇತ್ರಗಳಲ್ಲಿ ಸಹಕಾರವನ್ನು ವಿಸ್ತರಿಸುವ ಪ್ರಾಮುಖ್ಯತೆಯನ್ನು ಒತ್ತಿಹೇಳಿದರು. ಜರ್ಮನಿಯ ಮೂಲಕ ಪ್ರಯಾಣಿಸುವ ಭಾರತೀಯ ಪಾಸ್ಪೋರ್ಟ್ ಹೊಂದಿರುವವರಿಗೆ 'ವೀಸಾ ಮುಕ್ತ ಟ್ರಾನ್ಸಿಟ್ ಸೌಲಭ್ಯ'ವನ್ನು ಘೋಷಿಸಿದ್ದಕ್ಕಾಗಿ ಪ್ರಧಾನಮಂತ್ರಿ ಮೋದಿ ಅವರು ಚಾನ್ಸಲರ್ ಮೆರ್ಜ್ ಅವರಿಗೆ ಧನ್ಯವಾದ ಅರ್ಪಿಸಿದರು. ಈ ಕ್ರಮವು ಭಾರತೀಯ ನಾಗರಿಕರ ಪ್ರಯಾಣವನ್ನು ಸುಗಮಗೊಳಿಸುವುದಲ್ಲದೆ, ಉಭಯ ದೇಶಗಳ ಜನರ ನಡುವಿನ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸಲಿದೆ. ವಲಸೆ ಮತ್ತು ಸಂಚಾರ ಪಾಲುದಾರಿಕೆ ಒಪ್ಪಂದದ ನಿಬಂಧನೆಗಳನ್ನು ಸಂಪೂರ್ಣವಾಗಿ ಜಾರಿಗೆ ತರುವ ಮೂಲಕ ಕಾನೂನುಬದ್ಧ ಸಂಚಾರವನ್ನು ಬಲಪಡಿಸಲು ಉಭಯ ಕಡೆಯವರು ಸಮ್ಮತಿಸಿದರು. ಅಲ್ಲದೆ, ದೇಶವನ್ನು ತೊರೆಯಬೇಕಾದ ವ್ಯಕ್ತಿಗಳ ವಾಪಸಾತಿ, ಅನಿಯಮಿತ ವಲಸೆ, ಮಾನವ ಕಳ್ಳಸಾಗಣೆ ಹಾಗೂ ದಾಖಲೆ ಮತ್ತು ವೀಸಾ ವಂಚನೆಯ ವಿರುದ್ಧದ ಹೋರಾಟದಲ್ಲಿ ಸಹಕಾರವನ್ನು ಹೆಚ್ಚಿಸಲು ಇಚ್ಛೆ ವ್ಯಕ್ತಪಡಿಸಿದರು.
ಜರ್ಮನಿಯಲ್ಲಿ ಭಾರತೀಯ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚುತ್ತಿರುವುದನ್ನು ಮತ್ತು ಉನ್ನತ ಶಿಕ್ಷಣದಲ್ಲಿ ಜಂಟಿ ಹಾಗೂ ದ್ವಿಪದವಿ ಕಾರ್ಯಕ್ರಮಗಳು, ಸಹಯೋಗದ ಸಂಶೋಧನೆ ಮತ್ತು ಸಾಂಸ್ಥಿಕ ಪಾಲುದಾರಿಕೆಗಳ ವಿಸ್ತರಣೆಯನ್ನು ಉಭಯ ನಾಯಕರು ಗಮನಿಸಿದರು. ಈ ಗಾಢವಾಗುತ್ತಿರುವ ವಿನಿಮಯವು ಭಾರತೀಯ ವಿದ್ಯಾರ್ಥಿಗಳು ಮತ್ತು ಪದವೀಧರರನ್ನು ಜರ್ಮನಿಯ ಉದ್ಯೋಗ ಮಾರುಕಟ್ಟೆಯೊಂದಿಗೆ ಸಂಯೋಜಿಸಲು ಬೆಂಬಲ ನೀಡುವ ಯೋಜನೆಗಳಲ್ಲಿಯೂ ಪ್ರತಿಫಲಿಸುತ್ತಿದೆ. ಭಾರತೀಯ ತಂತ್ರಜ್ಞಾನ ಸಂಸ್ಥೆಗಳು ಮತ್ತು ಜರ್ಮನಿಯ ತಾಂತ್ರಿಕ ವಿಶ್ವವಿದ್ಯಾಲಯಗಳ ನಡುವಿನ ಸಾಂಸ್ಥಿಕ ಸಂಪರ್ಕಗಳನ್ನು ಅವರು ಸ್ವಾಗತಿಸಿದರು. ಸಾಂಸ್ಥಿಕ ಬಾಂಧವ್ಯಗಳನ್ನು ಮತ್ತಷ್ಟು ಬಲಪಡಿಸಲು 'ಉನ್ನತ ಶಿಕ್ಷಣದ ಕುರಿತಾದ ಭಾರತ-ಜರ್ಮನಿ ಸಮಗ್ರ ಮಾರ್ಗಸೂಚಿ'ಯನ್ನು ರೂಪಿಸಿರುವುದನ್ನು ನಾಯಕರು ಸ್ವಾಗತಿಸಿದರು. ಹೊಸ ಶಿಕ್ಷಣ ನೀತಿಯ ಅಡಿಯಲ್ಲಿ ಭಾರತದಲ್ಲಿ ತಮ್ಮ ಕ್ಯಾಂಪಸ್ ಗಳನ್ನು ತೆರೆಯುವಂತೆ ಪ್ರಧಾನಮಂತ್ರಿ ಮೋದಿ ಅವರು ಜರ್ಮನಿಯ ಪ್ರಮುಖ ವಿಶ್ವವಿದ್ಯಾಲಯಗಳಿಗೆ ಆಹ್ವಾನ ನೀಡಿದರು.
ವಲಸೆ ಮತ್ತು ಸಂಚಾರ ಪಾಲುದಾರಿಕೆ ಒಪ್ಪಂದದ ಅಡಿಯಲ್ಲಿ ನುರಿತ ವಲಸೆ ಕ್ಷೇತ್ರದಲ್ಲಿ ನಡೆಯುತ್ತಿರುವ ಸಹಕಾರದ ಬಗ್ಗೆ ಉಭಯ ನಾಯಕರು ತೃಪ್ತಿ ವ್ಯಕ್ತಪಡಿಸಿದರು. ಈ ಬದ್ಧತೆ ಮತ್ತು ಜರ್ಮನಿಯ ನುರಿತ ಕಾರ್ಮಿಕ ಕಾರ್ಯತಂತ್ರಕ್ಕೆ ಅನುಗುಣವಾಗಿ, ಶೋಷಣೆಯ ವಿರುದ್ಧ ರಕ್ಷಣೆ ನೀಡುವುದು ಮತ್ತು ಅಂತಾರಾಷ್ಟ್ರೀಯ ಕಾರ್ಮಿಕ ಮಾನದಂಡಗಳ ಪಾಲನೆಯನ್ನು ಖಚಿತಪಡಿಸಿಕೊಳ್ಳುವ ಜೊತೆಗೆ, ಎಲ್ಲಾ ಪಕ್ಷಗಳಿಗೆ ಪ್ರಯೋಜನವಾಗುವ ರೀತಿಯಲ್ಲಿ ನುರಿತ ಕಾರ್ಮಿಕರ ಸಂಚಾರವನ್ನು ಸುಗಮಗೊಳಿಸುವ ಗುರಿಯನ್ನು ಎರಡೂ ದೇಶಗಳು ಹೊಂದಿವೆ. 'ಜಾಗತಿಕ ಕೌಶಲ್ಯ ಪಾಲುದಾರಿಕೆ'ಯ ಕುರಿತಾದ ಜಂಟಿ ಉದ್ದೇಶದ ಘೋಷಣೆಗೆ ಸಹಿ ಹಾಕಿರುವುದನ್ನು ನಾಯಕರು ಸ್ವಾಗತಿಸಿದರು. ಇದು ಕಾರ್ಮಿಕರ ಹಕ್ಕುಗಳು ಮತ್ತು ಕಲ್ಯಾಣವನ್ನು ರಕ್ಷಿಸುವ ಜೊತೆಗೆ, ವಿಶೇಷವಾಗಿ ಆರೋಗ್ಯ ರಕ್ಷಣಾ ವೃತ್ತಿಪರರಿಗಾಗಿ ಜರ್ಮನಿಯ ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸಲು ನುರಿತ ಸಂಚಾರಕ್ಕಾಗಿ ನೈತಿಕ ಮತ್ತು ಸುಸ್ಥಿರ ಚೌಕಟ್ಟನ್ನು ರಚಿಸುವುದರ ಮೇಲೆ ಕೇಂದ್ರೀಕರಿಸುತ್ತದೆ. ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ ಕೌಶಲ್ಯಾಭಿವೃದ್ಧಿಗಾಗಿ 'ಭಾರತ-ಜರ್ಮನಿ ಶ್ರೇಷ್ಠತಾ ಕೇಂದ್ರ'ವನ್ನು ಸ್ಥಾಪಿಸಲು ಸಹಿ ಮಾಡಲಾದ ಜಂಟಿ ಉದ್ದೇಶದ ಘೋಷಣೆಯನ್ನು ನಾಯಕರು ಸ್ವಾಗತಿಸಿದರು. ಇದು ಭಾರತೀಯ ಮತ್ತು ಜರ್ಮನ್ ಉದ್ಯೋಗ ಮಾರುಕಟ್ಟೆಗೆ ಪೂರಕವಾದ ಪಠ್ಯಕ್ರಮ ಅಭಿವೃದ್ಧಿ, ಜರ್ಮನ್ ಮತ್ತು ಭಾರತೀಯ ಉದ್ಯಮಗಳ ನಡುವಿನ ಸಹಕಾರ ಮತ್ತು ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ ತರಬೇತುದಾರರಿಗೆ ತರಬೇತಿ ನೀಡುವಲ್ಲಿ ಸಹಕಾರವನ್ನು ಬಲಪಡಿಸುತ್ತದೆ. ಈ ಹಿನ್ನೆಲೆಯಲ್ಲಿ, ಪ್ರೌಢಶಾಲೆಗಳು, ವಿಶ್ವವಿದ್ಯಾಲಯಗಳು ಮತ್ತು ವೃತ್ತಿಪರ ಶಿಕ್ಷಣ ಕೇಂದ್ರಗಳು ಸೇರಿದಂತೆ ಭಾರತದಲ್ಲಿ ಜರ್ಮನ್ ಭಾಷೆಯ ಬೋಧನೆಯನ್ನು ವಿಸ್ತರಿಸುವ ಗುರಿಗೆ ಎರಡೂ ಕಡೆಯವರು ಬದ್ಧರಾಗಿದ್ದಾರೆ.
ಭಾರತ ಮತ್ತು ಜರ್ಮನಿ ಬಲವಾದ ಐತಿಹಾಸಿಕ ಮತ್ತು ಸಾಂಸ್ಕೃತಿಕ ಸಂಬಂಧಗಳನ್ನು ಹಂಚಿಕೊಂಡಿವೆ. ಬ್ರೆಮರ್ಹೇವನ್ ನ 'ಜರ್ಮನ್ ಮ್ಯಾರಿಟೈಮ್ ಮ್ಯೂಸಿಯಂ - ಲೀಬ್ನಿಜ್ ಇನ್ಸ್ಟಿಟ್ಯೂಟ್ ಫಾರ್ ಮ್ಯಾರಿಟೈಮ್ ಹಿಸ್ಟರಿ' (DSM) ಮತ್ತು ಲೋಥಲ್ ನಲ್ಲಿರುವ 'ರಾಷ್ಟ್ರೀಯ ಸಮುದ್ರ ಪರಂಪರೆ ಸಂಕೀರ್ಣ'ದ ನಡುವಿನ ತಿಳುವಳಿಕಾ ಒಪ್ಪಂದವನ್ನು (MoU) ನಾಯಕರು ಸ್ವಾಗತಿಸಿದರು. ಇದು ಸಮುದ್ರ ಪರಂಪರೆಯ ಕುರಿತಾದ ಸಹಕಾರವನ್ನು ಗಾಢವಾಗಿಸುತ್ತದೆ ಮತ್ತು ಸಮುದ್ರ ಇತಿಹಾಸದ ಹಂಚಿಕೆಯ ಅಂಶಗಳನ್ನು ಪ್ರದರ್ಶಿಸುತ್ತದೆ. ಈ ಹಿನ್ನೆಲೆಯಲ್ಲಿ, ವಸ್ತುಸಂಗ್ರಹಾಲಯಗಳ ಸಹಯೋಗದಲ್ಲಿ ಹೊಸ ಆಸಕ್ತಿ ಮೂಡಿದೆ. ಕ್ರೀಡಾ ಕ್ಷೇತ್ರದಲ್ಲಿನ ಸಹಕಾರದ ಕುರಿತಾದ ಜಂಟಿ ಉದ್ದೇಶದ ಘೋಷಣೆಯನ್ನು (JDoI) ಅಂತಿಮಗೊಳಿಸಿರುವುದನ್ನು ನಾಯಕರು ಸ್ವಾಗತಿಸಿದರು. ಇದು ಕ್ರೀಡಾಪಟುಗಳ ತರಬೇತಿ, ಕ್ರೀಡಾ ಆಡಳಿತ, ಸಮಗ್ರತೆ ಮತ್ತು ಕ್ರೀಡಾಪಟುಗಳ ಹಕ್ಕುಗಳು ಹಾಗೂ ಕ್ರೀಡಾ ವಿಜ್ಞಾನದ ಸಂಶೋಧನೆಯಲ್ಲಿ ಸಹಯೋಗವನ್ನು ಬಲಪಡಿಸುತ್ತದೆ.
ತಮಗೆ ಮತ್ತು ತಮ್ಮ ನಿಯೋಗಕ್ಕೆ ನೀಡಿದ ಆತ್ಮೀಯ ಆತಿಥ್ಯಕ್ಕಾಗಿ ಚಾನ್ಸಲರ್ ಮೆರ್ಜ್ ಅವರು ಪ್ರಧಾನಮಂತ್ರಿ ಮೋದಿಯವರಿಗೆ ಧನ್ಯವಾದ ಅರ್ಪಿಸಿದರು. ಮುಂದಿನ 'ಭಾರತ-ಜರ್ಮನಿ ಅಂತರ್-ಸರ್ಕಾರಿ ಸಮಾಲೋಚನೆ'ಯನ್ನು 2026 ರ ಉತ್ತರಾರ್ಧದಲ್ಲಿ ಜರ್ಮನಿಯಲ್ಲಿ ನಡೆಸಲು ಉಭಯ ನಾಯಕರು ಒಪ್ಪಿಕೊಂಡರು ಮತ್ತು ಕಾರ್ಯತಂತ್ರದ ಪಾಲುದಾರಿಕೆಯನ್ನು ಮತ್ತಷ್ಟು ಆಳವಾಗಿಸುವ ತಮ್ಮ ಹಂಚಿಕೆಯ ಬದ್ಧತೆಯನ್ನು ಪುನರುಚ್ಚರಿಸಿದರು.
*****
(रिलीज़ आईडी: 2213828)
आगंतुक पटल : 9