ರೈಲ್ವೇ ಸಚಿವಾಲಯ
azadi ka amrit mahotsav

ಕೇಂದ್ರ ರೈಲ್ವೆ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್ ಅವರು 100 ರೈಲ್ವೆ ಅಧಿಕಾರಿಗಳಿಗೆ 70ನೇ ಅತಿ ವಿಶಿಷ್ಟ ರೈಲ್ ಸೇವಾ ಪುರಸ್ಕಾರ 2025 ಮತ್ತು ವಿವಿಧ ವರ್ಗಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ವಲಯಗಳಿಗೆ 26 ಪಾರಿತೋಷಕಗಳನ್ನು ಪ್ರದಾನ ಮಾಡಿದರು


2047ರ ವೇಳೆಗೆ ವಿಕಸಿತ ಭಾರತ, ವಿಕಸಿತ ರೈಲ್ವೆಯನ್ನು ಸಾಕಾರಗೊಳಿಸಲು ಭಾರತೀಯ ರೈಲ್ವೆಯು ಹೊಸ ಮಟ್ಟವನ್ನು ತಲುಪಲೇಬೇಕು: ಶ್ರೀ ಅಶ್ವಿನಿ ವೈಷ್ಣವ್

ಕೇಂದ್ರ ಸಚಿವರು ಆರು ಅಂಶಗಳ ನಿರ್ಣಯದ ಮಾರ್ಗಸೂಚಿಯನ್ನು ಅನಾವರಣಗೊಳಿಸಿದರು: ವ್ಯವಸ್ಥಿತ ಸುಧಾರಣೆಗಳು, ತಂತ್ರಜ್ಞಾನದ ಅಳವಡಿಕೆ, ಸುರಕ್ಷತೆಯ ಮೇಲೆ ಗಮನ, ಸುಧಾರಿತ ತರಬೇತಿ, ನಿರ್ವಹಣೆಯಲ್ಲಿ ಶ್ರೇಷ್ಠತೆ ಮತ್ತು ಮುಂದಿನ ಪೀಳಿಗೆಯ ರೈಲ್ವೆಯನ್ನು ಸಬಲೀಕರಣಗೊಳಿಸಲು ಮನಸ್ಥಿತಿಯ ಬದಲಾವಣೆ

ಸಮರ್ಪಿತ ಮನೋಭಾವದ ರೈಲ್ವೆ ಕಾರ್ಯಪಡೆಯು ಭಾರತದ ಸಾರಿಗೆ ರೂಪಾಂತರದ ಬೆನ್ನೆಲುಬಾಗಿದೆ: ಶ್ರೀ ವಿ. ಸೋಮಣ್ಣ

ಆಧುನೀಕರಣ, ಸುರಕ್ಷತೆ ಮತ್ತು ಪ್ರಯಾಣಿಕರ ಮೇಲಿನ ಗಮನವು ಹೊಸ ಭಾರತೀಯ ರೈಲ್ವೆಯನ್ನು ವ್ಯಾಖ್ಯಾನಿಸುತ್ತದೆ: ಶ್ರೀ ಸತೀಶ್ ಕುಮಾರ್

प्रविष्टि तिथि: 09 JAN 2026 8:30PM by PIB Bengaluru

 

ಕೇಂದ್ರ ರೈಲ್ವೆ, ವಾರ್ತಾ ಮತ್ತು ಪ್ರಸಾರ ಹಾಗೂ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್ ಅವರು ಇಂದು ನವದೆಹಲಿಯ ದ್ವಾರಕಾದಲ್ಲಿರುವ ಇಂಡಿಯಾ ಇಂಟರ್ನ್ಯಾಷನಲ್ ಕನ್ವೆನ್ಷನ್ & ಎಕ್ಸ್‌ಪೋ ಸೆಂಟರ್ (ಯಶೋಭೂಮಿ) ನಲ್ಲಿ 100 ರೈಲ್ವೆ ಅಧಿಕಾರಿಗಳಿಗೆ 70ನೇ ಅತಿ ವಿಶಿಷ್ಟ ರೈಲ್ ಸೇವಾ ಪುರಸ್ಕಾರ ಮತ್ತು ವಿವಿಧ ವರ್ಗಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ವಲಯಗಳಿಗೆ 26 ಪಾರಿತೋಷಕಗಳನ್ನು ಪ್ರದಾನ ಮಾಡಿದರು. ಈ ಸಮಾರಂಭದಲ್ಲಿ ರೈಲ್ವೆ ಮತ್ತು ಜಲಶಕ್ತಿ ರಾಜ್ಯ  ಖಾತೆ ಸಚಿವರಾದ ಶ್ರೀ ವಿ. ಸೋಮಣ್ಣ, ರೈಲ್ವೆ ಮಂಡಳಿಯ ಅಧ್ಯಕ್ಷ ಮತ್ತು ಸಿಇಒ ಶ್ರೀ ಸತೀಶ್ ಕುಮಾರ್, ರೈಲ್ವೆ ಮಂಡಳಿಯ ಸದಸ್ಯರು ಹಾಗೂ ವಿವಿಧ ರೈಲ್ವೆ ವಲಯಗಳು ಮತ್ತು ಉತ್ಪಾದನಾ ಘಟಕಗಳ ಜನರಲ್ ಮ್ಯಾನೇಜರ್‌ ಗಳು ಉಪಸ್ಥಿತರಿದ್ದರು.

ಅತಿ ವಿಶಿಷ್ಟ ರೈಲ್ ಸೇವಾ ಪುರಸ್ಕಾರ ಪ್ರದಾನ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಶ್ರೀ ಅಶ್ವಿನಿ ವೈಷ್ಣವ್ ಅವರು, "2047ರ ವೇಳೆಗೆ ವಿಕಸಿತ ಭಾರತ, ವಿಕಸಿತ ರೈಲ್ವೆ ದೃಷ್ಟಿಕೋನವನ್ನು ಸಾಕಾರಗೊಳಿಸಲು ಭಾರತೀಯ ರೈಲ್ವೆಯು ಸಂಪೂರ್ಣವಾಗಿ ಹೊಸ ಮಟ್ಟಕ್ಕೆ ಏರಬೇಕು" ಎಂದು ಹೇಳಿದರು. ರೈಲ್ವೆ ಉದ್ಯೋಗಿಗಳ ಸಮರ್ಪಣಾ ಮನೋಭಾವವನ್ನು ಅಭಿನಂದಿಸಿದ ಅವರು, "ನಿಮ್ಮ ಸಾಮೂಹಿಕ ಪ್ರಯತ್ನಗಳು ರೈಲ್ವೆಯ ದೀರ್ಘಕಾಲದ ಸವಾಲುಗಳನ್ನು ಜಯಿಸಲು, ಸಾಮರ್ಥ್ಯವನ್ನು ವಿಸ್ತರಿಸಲು, ದಕ್ಷತೆಯನ್ನು ಸುಧಾರಿಸಲು ಮತ್ತು ಪ್ರಮುಖ ಮೂಲಸೌಕರ್ಯ ಹಾಗೂ ಕಾರ್ಯಾಚರಣೆಯ ಮೈಲಿಗಲ್ಲುಗಳನ್ನು ತಲುಪಲು ಸಾಧ್ಯವಾಗಿಸಿವೆ" ಎಂದರು.

"ವ್ಯಾಪಕವಾದ ಹಳಿ ನಿರ್ಮಾಣ ಕಾರ್ಯವು ರೈಲ್ವೆಯ ಸಾಮರ್ಥ್ಯದಲ್ಲಿ ಗಣನೀಯ ಹೆಚ್ಚಳಕ್ಕೆ ಕಾರಣವಾಗಿದೆ" ಎಂದು ಶ್ರೀ ವೈಷ್ಣವ್ ಹೇಳಿದರು. ದೀಪಾವಳಿ-ಛತ್, ಕ್ರಿಸ್‌ಮಸ್ ಮತ್ತು ಬೇಸಿಗೆ ರಜೆಯಂತಹ ಎಲ್ಲಾ ಪ್ರಮುಖ ಜನದಟ್ಟಣೆಯ ಸಮಯದಲ್ಲಿ ವಿಶೇಷ ರೈಲುಗಳನ್ನು ಓಡಿಸಲಾಗಿದ್ದು, ಪ್ರಯಾಣಿಕರಿಗೆ ಸುಗಮ ಪ್ರಯಾಣವನ್ನು ಖಚಿತಪಡಿಸಲಾಗಿದೆ ಮತ್ತು ಕಳೆದ ವರ್ಷ ಹೊಸ ಮೈಲಿಗಲ್ಲನ್ನು ಸ್ಥಾಪಿಸಲಾಗಿದೆ ಎಂದು ಅವರು ತಿಳಿಸಿದರು.

ಭಾರತೀಯ ರೈಲ್ವೆಯು 2026ರ ಸಾಲಿಗಾಗಿ “52 ವಾರಗಳು, 52 ಸುಧಾರಣೆಗಳು” ಎಂಬ ಮಹತ್ವಾಕಾಂಕ್ಷೆಯ ಸುಧಾರಣಾ ಮಾರ್ಗಸೂಚಿಯನ್ನು ಹಮ್ಮಿಕೊಂಡಿದೆ ಎಂದು ಹೇಳಿದರು. ಇದರ ಅಡಿಯಲ್ಲಿ ಗ್ರಾಹಕ ಸೇವೆ, ನಿರ್ವಹಣೆ, ಉತ್ಪಾದನೆ, ಗುಣಮಟ್ಟ ನಿರ್ವಹಣೆ, ಆರೋಗ್ಯ ವ್ಯವಸ್ಥೆ ಮತ್ತು ಕಾರ್ಯಾಚರಣೆಗಳಂತಹ ಪ್ರಮುಖ ಕಾರ್ಯಕಾರಿ ಕ್ಷೇತ್ರಗಳಲ್ಲಿ ಪ್ರತಿ ವಾರ ಒಂದು ಪ್ರಮುಖ ಸುಧಾರಣೆಯನ್ನು ಜಾರಿಗೆ ತರಲಾಗುವುದು. ಮಾನದಂಡಗಳನ್ನು ಮರು ವ್ಯಾಖ್ಯಾನಿಸಲು, ಅಡೆತಡೆಗಳನ್ನು ಗುರುತಿಸಲು ಮತ್ತು ಸ್ಪಷ್ಟವಾದ ಸಮಯಬದ್ಧ ಕ್ರಿಯಾ ಯೋಜನೆಗಳನ್ನು ರೂಪಿಸಲು ವಿವಿಧ ಇಲಾಖೆಗಳ ಅಧಿಕಾರಿಗಳ ಸಕ್ರಿಯ ಭಾಗವಹಿಸುವಿಕೆಯೊಂದಿಗೆ ಸರಣಿ ಕಾರ್ಯಾಗಾರಗಳನ್ನು ನಡೆಸಲಾಗುತ್ತಿದೆ ಎಂದು ಕೇಂದ್ರ ಸಚಿವರು ಹೇಳಿದರು.

ಭಾರತೀಯ ರೈಲ್ವೆಯು ಮುಂಬರುವ ಹಂತದಲ್ಲಿ ಅನುಸರಿಸಲಿರುವ ಆರು ಪ್ರಮುಖ ಸಂಕಲ್ಪಗಳನ್ನು ಅವರು ರೂಪಿಸಿದ್ದಾರೆ.

ಮೊದಲನೆಯದಾಗಿ, ವ್ಯವಸ್ಥಿತ ಸುಧಾರಣೆಗಳಿಗೆ ನಿರ್ಣಾಯಕ ಉತ್ತೇಜನ ನೀಡುವುದು. ಗ್ರಾಹಕ ಸೇವೆ, ನಿರ್ವಹಣೆ, ಉತ್ಪಾದನೆ, ಗುಣಮಟ್ಟ ಮತ್ತು ಆರೋಗ್ಯ ವ್ಯವಸ್ಥೆಗಳಲ್ಲಿ ಕಾಲಮಿತಿಯ ಬದಲಾವಣೆಗಳನ್ನು ತರುವುದು ಹಾಗೂ ಹೊಣೆಗಾರಿಕೆ ಮತ್ತು ಕಾರ್ಯಗತಗೊಳಿಸುವಿಕೆಗೆ ಒತ್ತು ನೀಡುವುದು.

ಎರಡನೆಯದಾಗಿ, ತಂತ್ರಜ್ಞಾನ, ನಾವೀನ್ಯತೆ ಮತ್ತು ಕೃತಕ ಬುದ್ಧಿಮತ್ತೆಯ (ಎಐ) ಆಳವಾದ ಮತ್ತು ವ್ಯಾಪಕವಾದ ಅಳವಡಿಕೆ. ಇದರಲ್ಲಿ ಹೊಸ ಪೀಳಿಗೆಯ ರೋಲಿಂಗ್ ಸ್ಟಾಕ್, ಸುಧಾರಿತ ಹಳಿ ವ್ಯವಸ್ಥೆಗಳು, ಆಧುನಿಕ ಸಿಗ್ನಲಿಂಗ್ ಮತ್ತು ವಿಶ್ವಾಸಾರ್ಹತೆ ಹಾಗೂ ಉತ್ಪಾದಕತೆಯನ್ನು ಹೆಚ್ಚಿಸಲು ಚುರುಕಾದ ನಿರ್ವಹಣಾ ಪದ್ಧತಿಗಳನ್ನು ಒಳಗೊಂಡಿದೆ.

ಮೂರನೆಯದಾಗಿ, ನಿರ್ವಹಣಾ ಮಾನದಂಡಗಳ ಮೂಲಭೂತ ಉನ್ನತೀಕರಣ. ಹಳೆಯ ಪದ್ಧತಿಗಳಿಂದ ಹೊರಬರುವುದು ಅಲ್ಪಾವಧಿಯ ಅಸಮಾಧಾನಕ್ಕೆ ಕಾರಣವಾಗಬಹುದು, ಆದರೆ ದೀರ್ಘಾವಧಿಯ ಸುರಕ್ಷತೆ ಮತ್ತು ಕಾರ್ಯಕ್ಷಮತೆಗೆ ಇದು ಅತ್ಯಗತ್ಯ ಎಂಬುದನ್ನು ಒಪ್ಪಿಕೊಳ್ಳುವುದು.

ನಾಲ್ಕನೆಯದಾಗಿ, ಸುರಕ್ಷತೆಯ ಮೇಲೆ ತೀಕ್ಷ್ಣವಾದ ಮತ್ತು ರಾಜಿ ಇಲ್ಲದ ಗಮನ ಹರಿಸುವುದು. ಉತ್ತಮ ತರಬೇತಿ, ತಂತ್ರಜ್ಞಾನ ನಿಯೋಜನೆ, ಶಿಸ್ತುಬದ್ಧ ಕಾರ್ಯಾಚರಣೆಗಳು ಮತ್ತು ನಾಯಕತ್ವದ ಎಲ್ಲಾ ಹಂತಗಳಲ್ಲಿ ದೈನಂದಿನ ಮೇಲ್ವಿಚಾರಣೆಯ ಮೂಲಕ ಅಪಘಾತಗಳನ್ನು ತೀವ್ರವಾಗಿ ಕಡಿಮೆ ಮಾಡುವ ಗುರಿ ಹೊಂದುವುದು.

ಐದನೆಯದಾಗಿ, ತರಬೇತಿ ಮತ್ತು ಪ್ರತಿಭೆ ಅಭಿವೃದ್ಧಿಯನ್ನು ಪರಿವರ್ತಿಸುವುದು. ನಿರಂತರ ಕೌಶಲ್ಯ ಉನ್ನತೀಕರಣವನ್ನು ಕಡ್ಡಾಯಗೊಳಿಸುವುದು, ತರಬೇತಿಯನ್ನು ವೃತ್ತಿಜೀವನದ ಪ್ರಗತಿಗೆ ಜೋಡಿಸುವುದು ಮತ್ತು ಅತ್ಯಂತ ಸಮರ್ಥ ಕಾರ್ಯಪಡೆಯನ್ನು ನಿರ್ಮಿಸಲು ಸಿಮ್ಯುಲೇಟರ್‌ ಗಳು ಹಾಗೂ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳಂತಹ ಆಧುನಿಕ ಸಾಧನಗಳನ್ನು ಬಳಸುವುದು.

ಆರನೆಯದಾಗಿ, ವಸಾಹತುಶಾಹಿ ಮನಸ್ಥಿತಿಯ ಸಂಪೂರ್ಣ ನಿರ್ಮೂಲನೆ. ಹೊಸ ಆಲೋಚನೆಗಳನ್ನು ಮುಕ್ತವಾಗಿ ಸ್ವೀಕರಿಸಲು, ಕಿರಿಯ ಅಧಿಕಾರಿಗಳು ಮತ್ತು ಕ್ಷೇತ್ರ ಸಿಬ್ಬಂದಿಯನ್ನು ಸಬಲೀಕರಣಗೊಳಿಸಲು, ಭಾರತೀಯ ಪರಿಹಾರಗಳನ್ನು ಉತ್ತೇಜಿಸಲು ಮತ್ತು ಈಗ ಜಾಗತಿಕವಾಗಿ ಅಂಗೀಕರಿಸಲ್ಪಡುತ್ತಿರುವ 'ಮೇಡ್-ಇನ್-ಇಂಡಿಯಾ' ಸಾಧನೆಗಳ ಬಗ್ಗೆ ಹೆಮ್ಮೆ ಪಡಲು ಅಧಿಕಾರಿಗಳಿಗೆ ಒತ್ತಾಯಿಸುವುದು.

ನವೋದ್ಯಮಗಳು ಮತ್ತು ನಾವೀನ್ಯಕಾರರನ್ನು ತೊಡಗಿಸಿಕೊಳ್ಳುವ ಪ್ರಾಮುಖ್ಯತೆಯನ್ನು ಅವರು ಉಲ್ಲೇಖಿಸಿದರು. ಸುಧಾರಣಾ ಆಲೋಚನೆಗಳನ್ನು ಕೊಡುಗೆಯಾಗಿ ನೀಡಲು ರೈಲ್ವೆ ಉದ್ಯೋಗಿಗಳನ್ನು ಉತ್ತೇಜಿಸಿದರು ಮತ್ತು ಯಶಸ್ವಿ ಆವಿಷ್ಕಾರಗಳನ್ನು ಇಡೀ ರೈಲ್ವೆ ಜಾಲದಾದ್ಯಂತ ವಿಸ್ತರಿಸುವುದನ್ನು ಖಚಿತಪಡಿಸಿಕೊಳ್ಳಲು ತಿಳಿಸಿದರು. ಪ್ರಮುಖ ರಾಷ್ಟ್ರೀಯ ಸುಧಾರಣೆಗಳನ್ನು ಉದಾಹರಿಸಿದ ಅವರು, "ಭಾರತೀಯ ರೈಲ್ವೆಯು ಬದಲಾವಣೆಯ ವಿಷಯದಲ್ಲಿ ಅಷ್ಟೇ ಧೈರ್ಯ ಮತ್ತು ಆತ್ಮವಿಶ್ವಾಸವನ್ನು ತೋರಿಸಬೇಕು" ಎಂದರು. ಯುವ ಕಾರ್ಯಪಡೆ, ಪಾರದರ್ಶಕ ವ್ಯವಸ್ಥೆ ಮತ್ತು ಸುಧಾರಣಾ ಮನಸ್ಥಿತಿಯೊಂದಿಗೆ, ಭಾರತೀಯ ರೈಲ್ವೆಯು ಜಾಗತಿಕ ಮಟ್ಟದಲ್ಲಿ ಒಂದು ಮಾನದಂಡವಾಗಲು ಮತ್ತು 2047ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡುವ ಪ್ರಯಾಣದಲ್ಲಿ ಪ್ರಮುಖ ಸ್ತಂಭವಾಗಲು ಸಜ್ಜಾಗಿದೆ ಎಂದು ಅವರು ಹೇಳಿದರು.

ಸಭೆಯನ್ನುದ್ದೇಶಿಸಿ ಮಾತನಾಡಿದ ಶ್ರೀ ವಿ. ಸೋಮಣ್ಣ ಅವರು ರೈಲ್ವೆ ನೌಕರರು ಮತ್ತು ಅಧಿಕಾರಿಗಳನ್ನು ಅಭಿನಂದಿಸಿದರು. ಭಾರತೀಯ ರೈಲ್ವೆಯನ್ನು ವಿಶ್ವದ ಅತಿದೊಡ್ಡ ಸೇವಾ ಸಂಸ್ಥೆಗಳಲ್ಲಿ ಒಂದೆಂದು ಬಣ್ಣಿಸಿದ ಅವರು, ಪ್ರತಿದಿನ ಲಕ್ಷಾಂತರ ಜನರಿಗೆ ಸುರಕ್ಷಿತ ಮತ್ತು ಆರಾಮದಾಯಕ ಪ್ರಯಾಣವನ್ನು ಖಚಿತಪಡಿಸುತ್ತಿರುವ 'ರೈಲ್ವೆ ಪರಿವಾರ'ಕ್ಕೆ ಈ ಕೀರ್ತಿ ಸಲ್ಲುತ್ತದೆ ಎಂದರು.

ಜಮ್ಮು ಮತ್ತು ಕಾಶ್ಮೀರ ಹಾಗೂ ಈಶಾನ್ಯ ರಾಜ್ಯಗಳಂತಹ ಪ್ರದೇಶಗಳಿಗೆ ರೈಲು ಸಂಪರ್ಕವು ವಿಸ್ತರಿಸಿದೆ ಎಂದು ಅವರು ಹೇಳಿದರು. ರಾಷ್ಟ್ರೀಯ ಏಕತೆಯನ್ನು ಬಲಪಡಿಸಿರುವ ಪ್ರಮುಖ ಇಂಜಿನಿಯರಿಂಗ್ ಸಾಧನೆಗಳನ್ನು ಅವರು ಶ್ಲಾಘಿಸಿದರು. ಉತ್ತಮ ಸಂಪರ್ಕಕ್ಕಾಗಿ ಅಮೃತ ಭಾರತ್ ಮತ್ತು ನಮೋ ಭಾರತ್ ರೈಲುಗಳ ಬಗ್ಗೆ ಉಲ್ಲೇಖಿಸಿದ ಅವರು, ಶೀಘ್ರದಲ್ಲೇ ಬರಲಿರುವ ವಂದೇ ಭಾರತ್ ಸ್ಲೀಪರ್ ರೈಲುಗಳು ದೂರದ ಪ್ರಯಾಣದ ಅನುಭವವನ್ನು ಮತ್ತಷ್ಟು ಸುಧಾರಿಸಲಿವೆ ಎಂದು ಹೇಳಿದರು.

ರೈಲ್ವೆ ವಿದ್ಯುದೀಕರಣ ಮತ್ತು ಪರಿಸರ ಸುಸ್ಥಿರತೆಯಲ್ಲಿನ ಪ್ರಗತಿಯನ್ನು ಎತ್ತಿ ತೋರಿಸಿದ ಅವರು, ಭಾರತೀಯ ರೈಲ್ವೆಯು ಹಸಿರು ಕಾರ್ಯಾಚರಣೆಯತ್ತ ಸಾಗುತ್ತಿದೆ ಎಂದು ಹೇಳಿದರು. ತಮ್ಮ ಕ್ಷೇತ್ರ ಭೇಟಿಗಳ ಅನುಭವವನ್ನು ಹಂಚಿಕೊಂಡ ಅವರು, ಎಲ್ಲಾ ಹಂತದ ರೈಲ್ವೆ ಸಿಬ್ಬಂದಿಯ ಸಮರ್ಪಣೆ ಮತ್ತು ಬದ್ಧತೆಯನ್ನು ಶ್ಲಾಘಿಸಿದರು ಹಾಗೂ ಅವರನ್ನು ಸಂಸ್ಥೆಯ ಬೆನ್ನೆಲುಬು ಎಂದು ಕರೆದರು.

ಶ್ರೀ ಸತೀಶ್ ಕುಮಾರ್ ಅವರು ಮಾತನಾಡಿ, ಭಾರತೀಯ ರೈಲ್ವೆಯು ಕ್ಷಿಪ್ರ ರೂಪಾಂತರಕ್ಕೆ ಒಳಗಾಗಿದ್ದು, ಆಧುನಿಕ, ಸುರಕ್ಷಿತ ಮತ್ತು ಪ್ರಯಾಣಿಕ ಕೇಂದ್ರಿತ ಸಂಸ್ಥೆಯಾಗಿ ಹೊರಹೊಮ್ಮಿದೆ ಎಂದು ಹೇಳಿದರು. ಸುರಕ್ಷತೆಯೇ ಅತ್ಯಂತ ಆದ್ಯತೆಯ ವಿಷಯ ಎಂದು ಹೇಳಿದ ಅವರು, ಆಧುನಿಕ ಸಿಗ್ನಲಿಂಗ್ ವ್ಯವಸ್ಥೆಗಳು, ಎಲೆಕ್ಟ್ರಾನಿಕ್ ಇಂಟರ್ಲಾಕಿಂಗ್, ಮಾನವರಹಿತ ಲೆವೆಲ್ ಕ್ರಾಸಿಂಗ್‌ ಗಳ ನಿರ್ಮೂಲನೆ, ಸುಧಾರಿತ ಹಳಿ ಮೇಲ್ವಿಚಾರಣೆ ಮತ್ತು ಸಂಬಂಧಿತ ಸುರಕ್ಷತಾ ಕ್ರಮಗಳ ಮೂಲಕ ನಿರಂತರ ಸುಧಾರಣೆಗಳನ್ನು ಮಾಡಲಾಗುತ್ತಿದೆ ಎಂದು ತಿಳಿಸಿದರು. ಸರಕು ಸಾಗಣೆ ಕಾರ್ಯಾಚರಣೆಯ ಬಗ್ಗೆ ಮಾತನಾಡುತ್ತಾ, ಭಾರತೀಯ ರೈಲ್ವೆಯು ಮನೆಬಾಗಿಲಿಗೆ ಸೇವೆ ಮತ್ತು ಬಹುಮಾದರಿ ಲಾಜಿಸ್ಟಿಕ್ಸ್ ಮೂಲಕ ಹೊಸ ಮಾನದಂಡಗಳನ್ನು ಸ್ಥಾಪಿಸುತ್ತಿದೆ ಮತ್ತು ದೇಶದ ಆರ್ಥಿಕ ಪ್ರಗತಿಗೆ ಅರ್ಥಪೂರ್ಣ ಕೊಡುಗೆ ನೀಡುತ್ತಿದೆ ಎಂದರು.

ರೈಲ್ವೆ ವಿದ್ಯುದೀಕರಣದ ಶತಮಾನೋತ್ಸವದ ನೆನಪನ್ನು ಸ್ಮರಿಸಿದ ಅವರು, ಇದನ್ನು ಭಾರತೀಯ ರೈಲ್ವೆಯ ಪ್ರಯಾಣದಲ್ಲಿ ಒಂದು ಹೆಮ್ಮೆಯ ಮೈಲಿಗಲ್ಲು ಎಂದು ಬಣ್ಣಿಸಿದರು ಮತ್ತು ವಿಶೇಷ ಉಪಕ್ರಮಗಳ ಮೂಲಕ ಇದನ್ನು ಸ್ಮರಿಸಲಾಗುತ್ತಿದೆ ಎಂದು ತಿಳಿಸಿದರು. ರೈಲ್ವೆ ಉದ್ಯೋಗಿಗಳನ್ನು "ನಿಜವಾದ ಹೀರೋಗಳು" ಎಂದು ಶ್ಲಾಘಿಸಿದ ಅವರು, ಅವರ ಶಿಸ್ತು, ಸಮರ್ಪಣೆ ಮತ್ತು ಸೇವೆಯು ಈ ರೂಪಾಂತರದ ಬೆನ್ನೆಲುಬಾಗಿದೆ ಎಂದರು.

ಭಾರತೀಯ ರೈಲ್ವೆಯು ಪ್ರತಿ ವರ್ಷ ತನ್ನ ಉದ್ಯೋಗಿಗಳಿಗೆ ಅತಿ ವಿಶಿಷ್ಟ ರೈಲ್ ಸೇವಾ ಪುರಸ್ಕಾರವನ್ನು ನೀಡುತ್ತದೆ. ಈ ಪ್ರಶಸ್ತಿಗಳನ್ನು ಎರಡು ವಿಭಾಗಗಳಲ್ಲಿ ನೀಡಲಾಗುತ್ತದೆ: ವೈಯಕ್ತಿಕ ಪ್ರಶಸ್ತಿಗಳು ಮತ್ತು ಅತ್ಯುತ್ತಮ ಪ್ರದರ್ಶನ ನೀಡಿದ ರೈಲ್ವೆ ವಲಯಗಳಿಗೆ ನೀಡಲಾಗುವ ಪಾರಿತೋಷಕಗಳು. ಭಾರತೀಯ ರೈಲ್ವೆಯನ್ನು ಹೆಚ್ಚು ದಕ್ಷ, ಸುರಕ್ಷಿತ ಮತ್ತು ಪ್ರಯಾಣಿಕ ಸ್ನೇಹಿ ಸಂಸ್ಥೆಯನ್ನಾಗಿ ಮಾಡುವಲ್ಲಿ ರೈಲ್ವೆ ಸಿಬ್ಬಂದಿಯ ಸಮರ್ಪಣೆ, ಕಠಿಣ ಪರಿಶ್ರಮ ಮತ್ತು ಅಸಾಧಾರಣ ಕೊಡುಗೆಗಳನ್ನು ಗುರುತಿಸಲು ಮತ್ತು ಗೌರವಿಸಲು ವೈಯಕ್ತಿಕ ಪ್ರಶಸ್ತಿಗಳು ಒಂದು ವೇದಿಕೆಯಾಗಿ  ಕಾರ್ಯನಿರ್ವಹಿಸುತ್ತವೆ. ವಿವಿಧ ವಿಭಾಗಗಳಲ್ಲಿ ನೀಡಲಾಗುವ ಪಾರಿತೋಷಕ ಪ್ರಶಸ್ತಿಗಳು ಭಾರತೀಯ ರೈಲ್ವೆಯ ಒಟ್ಟಾರೆ ಕಾರ್ಯಕ್ಷಮತೆಗೆ ವಲಯಗಳು ನೀಡಿದ ಅತ್ಯುತ್ತಮ ಸಾಧನೆ ಮತ್ತು ಕೊಡುಗೆಗಳನ್ನು ಗುರುತಿಸುತ್ತವೆ.

70ನೇ ಅತಿ ವಿಶಿಷ್ಟ ರೈಲ್ ಸೇವಾ ಪುರಸ್ಕಾರ (AVRSP)-2025 ಕ್ಕೆ ಆಯ್ಕೆಯಾದ ಅಧಿಕಾರಿಗಳ ಪಟ್ಟಿ

ಪಾರಿತೋಷಕ ವಿಜೇತರ ಪಟ್ಟಿ

 

******


(रिलीज़ आईडी: 2213125) आगंतुक पटल : 17
इस विज्ञप्ति को इन भाषाओं में पढ़ें: Malayalam , English , Urdu , हिन्दी , Marathi , Gujarati , Odia , Telugu