ರಸಗೊಬ್ಬರ ಇಲಾಖೆ
ರೈತರ ಜೀವನವನ್ನು ಸುಲಭಗೊಳಿಸುವುದು ಸರ್ಕಾರದ ಮೊದಲ ಆದ್ಯತೆಯಾಗಿದೆ: ಕೇಂದ್ರ ಸಚಿವರಾದ ಶ್ರೀ ಜೆ.ಪಿ. ನಡ್ಡಾ
ರಸಗೊಬ್ಬರ ಇಲಾಖೆಯ 'ಚಿಂತನ ಶಿಬಿರ' ಸಮತೋಲಿತ ರಸಗೊಬ್ಬರ ಬಳಕೆ ಮತ್ತು ಸುಸ್ಥಿರ ಕೃಷಿಯ ಮೇಲೆ ಗಮನ ಕೇಂದ್ರೀಕರಿಸಿದೆ
ಸವಾಲುಗಳ ನಡುವೆಯೂ ರಸಗೊಬ್ಬರ ಇಲಾಖೆ ತಡೆರಹಿತ ಪೂರೈಕೆಯನ್ನು ಖಾತ್ರಿಪಡಿಸಿದೆ: ಶ್ರೀ ಜೆ.ಪಿ. ನಡ್ಡಾ
प्रविष्टि तिथि:
03 JAN 2026 6:19PM by PIB Bengaluru
ರೈತ ಕೇಂದ್ರಿತ ಭಾರತ ಸರ್ಕಾರದ ನೀತಿಗಳನ್ನು ಅನುಷ್ಠಾನಗೊಳಿಸುವ, ಸಕಾಲಿಕ ರಸಗೊಬ್ಬರಗಳ ಲಭ್ಯತೆಯನ್ನು ಖಾತರಿಪಡಿಸುವ ಮತ್ತು ಮಣ್ಣಿನ ಆರೋಗ್ಯವನ್ನು ಸುಧಾರಿಸುವ ಉದ್ದೇಶದಿಂದ, ರಸಗೊಬ್ಬರ ಇಲಾಖೆ ಇಂದು ಹೊಸದಿಲ್ಲಿಯಲ್ಲಿ ಒಂದು ದಿನದ ಚಿಂತನ ಶಿಬಿರವನ್ನು ಆಯೋಜಿಸಿತ್ತು.
ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವರಾದ ಶ್ರೀ ಜಗತ್ ಪ್ರಕಾಶ್ ನಡ್ಡಾ ಮತ್ತು ಸಹಾಯಕ ಸಚಿವರಾದ ಶ್ರೀಮತಿ ಅನುಪ್ರಿಯಾ ಪಟೇಲ್ ಅವರೊಂದಿಗೆ ರಸಗೊಬ್ಬರ ಇಲಾಖೆ ಮತ್ತು ರಾಜ್ಯ ಸರ್ಕಾರಗಳ ಹಿರಿಯ ಅಧಿಕಾರಿಗಳು, ವಿಜ್ಞಾನಿಗಳು ಮತ್ತು ಉದ್ಯಮದ ಪ್ರತಿನಿಧಿಗಳು ಈ ಅಧಿವೇಶನದಲ್ಲಿ ಭಾಗವಹಿಸಿ ಸಂವಾದ ನಡೆಸಿದರು.


ಸಭಿಕರನ್ನುದ್ದೇಶಿಸಿ ಮಾತನಾಡಿದ ಕೇಂದ್ರ ಸಚಿವ ಶ್ರೀ ಜೆ.ಪಿ. ನಡ್ಡಾ ಅವರು, ಗೌರವಾನ್ವಿತ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸದಾ ರೈತರನ್ನು ಆಡಳಿತದ ಕೇಂದ್ರಬಿಂದುವಾಗಿಟ್ಟಿದ್ದಾರೆ ಎಂದು ಒತ್ತಿ ಹೇಳಿದರು. ಆದ್ದರಿಂದ, ನಮ್ಮ ನೀತಿಗಳು ಮತ್ತು ನಿರ್ಧಾರಗಳು ರೈತರ ಜೀವನವನ್ನು ಸುಲಭ ಮತ್ತು ಉತ್ತಮಗೊಳಿಸುವ ಗುರಿಯನ್ನು ಹೊಂದಿರಬೇಕು. ವಿವಿಧ ಸವಾಲಿನ ಸಂದರ್ಭಗಳ ನಡುವೆಯೂ ಇಲಾಖೆಯು ರೈತರ ರಸಗೊಬ್ಬರ ಆವಶ್ಯಕತೆಗಳನ್ನು ಯಶಸ್ವಿಯಾಗಿ ಪೂರೈಸಿದೆ ಎಂದರು. ರಸಗೊಬ್ಬರ ಇಲಾಖೆ ಕೈಗೊಂಡ ರೈತ ಸ್ನೇಹಿ ಕ್ರಮಗಳಿಂದಾಗಿ, ದೇಶವು ಈ ವರ್ಷ ಅಗತ್ಯ ಆಮದಿನ ಜೊತೆಗೆ ದಾಖಲೆಯ ಉತ್ಪಾದನೆಯನ್ನು ಸಾಧಿಸಿದೆ ಎಂದು ಅವರು ಒತ್ತಿ ಹೇಳಿದರು.

ರಸಗೊಬ್ಬರಗಳ ಸಮತೋಲಿತ ಬಳಕೆ ಮತ್ತು ಕೃಷಿಯೇತರ ಉದ್ದೇಶಗಳಿಗಾಗಿ ರಸಗೊಬ್ಬರಗಳ ಬಳಕೆ ಅಥವಾ ದುರುಪಯೋಗದಂತಹ ಸಮಸ್ಯೆಗಳನ್ನು ನಿಭಾಯಿಸಲು ಭಾರತ ಸರ್ಕಾರದ ವಿವಿಧ ಇಲಾಖೆಗಳು ಸಮನ್ವಯದಿಂದ ಕೆಲಸ ಮಾಡುತ್ತವೆ ಎಂದು ಕೇಂದ್ರ ಸಚಿವರು ಹೇಳಿದರು.

ಭಾರತವು ಜಾಗತಿಕ ಆಹಾರ ಬುಟ್ಟಿಯ ಕೇಂದ್ರವಾಗುವ ಬಗ್ಗೆ ಪ್ರಧಾನಮಂತ್ರಿ ಅವರು ಕಲ್ಪಿಸಿಕೊಂಡಿದ್ದಾರೆ ಎಂದು ಸಹಾಯಕ ಸಚಿವೆ ಶ್ರೀಮತಿ ಅನುಪ್ರಿಯಾ ಪಟೇಲ್ ಹೇಳಿದರು. ಈ 'ಚಿಂತನ ಶಿಬಿರ' 2047 ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡಲು ಸಹಾಯ ಮಾಡುವ ಆಲೋಚನೆಗಳನ್ನು ಹುಟ್ಟುಹಾಕುತ್ತದೆ ಎಂದೂ ಅವರು ಹೇಳಿದರು.
ರಸಗೊಬ್ಬರ ಕಾರ್ಯದರ್ಶಿ ಶ್ರೀ ರಜತ್ ಕುಮಾರ್ ಮಿಶ್ರಾ ಮಾತನಾಡಿ, ಸರ್ಕಾರ, ಸಾರ್ವಜನಿಕ ಉದ್ದಿಮೆಗಳು ಮತ್ತು ಖಾಸಗಿ ವಲಯಗಳು ತಮ್ಮ ಚಿಂತನಶೀಲ ಚಿಂತನೆಯ ಈ ಅಧಿವೇಶನದ ಗಂಭೀರ ಚರ್ಚೆಯಲ್ಲಿ ರೈತರನ್ನು ಕೇಂದ್ರ ಭಾಗದಲ್ಲಿ ಇರಿಸಿಕೊಂಡಿವೆ. ಪ್ರತಿಯೊಂದು ವಿಚಾರವೂ ಚರ್ಚೆಗೆ ಯೋಗ್ಯವಾಗುವಷ್ಟು ಸಂವಾದಾತ್ಮಕವಾಗಿ ನಾವು ಈ ಶಿಬಿರವನ್ನು ಆಯೋಜಿಸಿದ್ದೇವೆ ಮತ್ತು ಸಾಮೂಹಿಕ ಜ್ಞಾನದಿಂದ ಉತ್ತಮ ಫಲಿತಾಂಶಗಳನ್ನು ನಾವು ನಿರೀಕ್ಷಿಸುತ್ತೇವೆ ಎಂದು ಅವರು ಹೇಳಿದರು.



ಹೊಸದಿಲ್ಲಿಯ ರಾಷ್ಟ್ರೀಯ ಕೃಷಿ ವಿಜ್ಞಾನ ಸಂಕೀರ್ಣದಲ್ಲಿ ನಡೆದ ಒಂದು ದಿನದ ಶಿಬಿರದಲ್ಲಿ, 15 ವಿಭಿನ್ನ ಗುಂಪುಗಳು ವ್ಯಾಪಕವಾದ ಚರ್ಚೆಗಳಲ್ಲಿ ತೊಡಗಿಕೊಂಡು ಸರ್ಕಾರಕ್ಕೆ ಪರಿಣಾಮಕಾರಿ ಸಲಹೆಗಳನ್ನು ನೀಡಿವೆ. ಕೇಂದ್ರ ಸಚಿವರು, ಸಹಾಯಕ ಸಚಿವರು ಮತ್ತು ರಸಗೊಬ್ಬರ ಕಾರ್ಯದರ್ಶಿಗಳು ಪ್ರತಿಯೊಂದು ಗುಂಪಿನೊಂದಿಗೆ ಪ್ರತ್ಯೇಕವಾಗಿ ಕುಳಿತು ಅವರ ಸಲಹೆಗಳನ್ನು ಆಲಿಸಿದರು.
ಈ ಗುಂಪುಗಳು ಹೊಸ ಯುಗದ ರಸಗೊಬ್ಬರಗಳು, ರಸಗೊಬ್ಬರ ಉತ್ಪಾದನೆಯಲ್ಲಿ ಸ್ವಾವಲಂಬನೆ, ಜನಸಂಪರ್ಕ ಮತ್ತು ರೈತರ ಜಾಗೃತಿ, ಡಿಜಿಟಲ್ ವಿಧಾನಗಳ ಮೂಲಕ ರಸಗೊಬ್ಬರ ಪರಿಸರ ವ್ಯವಸ್ಥೆಯನ್ನು ಸುಧಾರಿಸುವುದು ಮತ್ತು ಪೋಷಕಾಂಶ ಆಧಾರಿತ ಸಬ್ಸಿಡಿ ಸೇರಿದಂತೆ 15 ಪ್ರಮುಖ ವಿಷಯಗಳ ಬಗ್ಗೆ ಚರ್ಚಿಸಿದವು.
ರಸಗೊಬ್ಬರ ಇಲಾಖೆಯ ಸಾರ್ವಜನಿಕ ವಲಯದ ಉದ್ದಿಮೆಗಳ ಹಿರಿಯ ಅಧಿಕಾರಿಗಳು, ಸಹಕಾರ ಸಂಘಗಳು ಮತ್ತು ಖಾಸಗಿ ಕಂಪನಿಗಳ ಪ್ರತಿನಿಧಿಗಳು ಚಿಂತನ ಶಿಬಿರದಲ್ಲಿ ಭಾಗವಹಿಸಿದ್ದರು.
*****
(रिलीज़ आईडी: 2211206)
आगंतुक पटल : 18