ಹಣಕಾಸು ಸಚಿವಾಲಯ
azadi ka amrit mahotsav

ಎಚ್‌ ಎಸ್‌ ಎನ್‌ ಎಸ್ ಸೆಸ್ (ಉಪಕರ)‌ ಕಾಯ್ದೆ, 2026 ಮತ್ತು ಎಚ್‌ ಎಸ್‌ ಎನ್‌ ಎಸ್ ಸೆಸ್‌ (ಉಪಕರ) ನಿಯಮಗಳು, 2026 ಕುರಿತು ಪದೇ ಪದೇ ಕೇಳಲಾಗುವ ಪ್ರಶ್ನೆಗಳು

प्रविष्टि तिथि: 02 JAN 2026 5:03PM by PIB Bengaluru

ಪ್ರಶ್ನೆ 1: ಎಚ್ ಎಸ್ ಎನ್ ಎಸ್  ಸೆಸ್ (ಉಪಕರ )‌ ನಿಯಮಗಳ ಅಡಿಯಲ್ಲಿ ನೋಂದಣಿ ಮಾಡಿಕೊಳ್ಳಲು ಯಾರು ಅರ್ಹರು?

ಉತ್ತರ: ಆರೋಗ್ಯ ಭದ್ರತೆ ಮತ್ತು ರಾಷ್ಟ್ರೀಯ ಭದ್ರತೆ ಉಪಕರ ಕಾಯ್ದೆ, 2025 (ಇನ್ನು ಮುಂದೆ 'ಕಾಯ್ದೆ' ಎಂದು ಕರೆಯಲ್ಪಡುವ) ರ ಸೆಕ್ಷನ್ 3 ರ ಪ್ರಕಾರ ಪ್ರತಿಯೊಬ್ಬ ತೆರಿಗೆಗೆ ಒಳಪಡುವ ವ್ಯಕ್ತಿಯು ಕಡ್ಡಾಯವಾಗಿ ನೋಂದಾಯಿಸಿಕೊಳ್ಳಬೇಕು. ನೋಂದಣಿಗಾಗಿ ಅರ್ಜಿಯನ್ನು ACES ಪೋರ್ಟಲ್ ಮೂಲಕ FORM HSNS REG-01ರಲ್ಲಿ ಸಲ್ಲಿಸಬೇಕು. ಒಂದು ವೇಳೆ ಯಂತ್ರಗಳನ್ನು ಒಂದಕ್ಕಿಂತ ಹೆಚ್ಚು ಕಾರ್ಖಾನೆಗಳಲ್ಲಿ ಅಳವಡಿಸಿದ್ದರೆ, ಪ್ರತಿ ಕಾರ್ಖಾನೆಗೂ ಪ್ರತ್ಯೇಕ ನೋಂದಣಿ ಅಗತ್ಯವಿರುತ್ತದೆ.

ಪ್ರಶ್ನೆ 2: ನಾನು ಈಗಾಗಲೇ ಪಾನ್ ಮಸಾಲಾ ತಯಾರಕನಾಗಿದ್ದೇನೆ. ಹೊಸ ಎಚ್ ಎಸ್ ಎನ್ ಎಸ್  ಉಪಕರ ನಿಯಮಗಳ ಅಡಿಯಲ್ಲಿ ನಾನು ಯಾವ ದಿನಾಂಕದೊಳಗೆ ನೋಂದಣಿಗೆ ಅರ್ಜಿ ಸಲ್ಲಿಸಬೇಕು?

ಉತ್ತರ: ಈ ಕಾಯ್ದೆ ಮತ್ತು ಎಚ್ ಎಸ್ ಎನ್ ಎಸ್  ಉಪಕರ ನಿಯಮಗಳು ಜಾರಿಗೆ ಬಂದ ತಕ್ಷಣವೇ, ಅಂದರೆ 1 ಫೆಬ್ರವರಿ, 2026 ರಂದು ನೀವು ನೋಂದಣಿಗಾಗಿ ಅರ್ಜಿ ಸಲ್ಲಿಸಬೇಕು. ಈ ದಿನಾಂಕದಿಂದಲೇ ಉಪಕರವನ್ನು ಪಾವತಿಸುವ ಹೊಣೆಗಾರಿಕೆ ಪ್ರಾರಂಭವಾಗುವುದರಿಂದ, ನೀವು ಸಾಧ್ಯವಾದಷ್ಟು ಬೇಗ ಪೋರ್ಟಲ್‌ ನಲ್ಲಿ FORM HSNS REG-01 ಮೂಲಕ ನೋಂದಣಿ ಅರ್ಜಿಯನ್ನು ಸಲ್ಲಿಸಬೇಕು. ನಿಮ್ಮ ನೋಂದಣಿ ಪ್ರಮಾಣಪತ್ರವು ನೀವು ಹೊಣೆಗಾರರಾದ ದಿನಾಂಕದಿಂದಲೇ ಜಾರಿಗೆ ಬರುತ್ತದೆ, ಇದು ಈಗಿರುವ ತಯಾರಕರಿಗೆ ಇದು 1 ಫೆಬ್ರವರಿ, 2026 ರಿಂದಲೇ ಜಾರಿಗೆ ಬರುತ್ತದೆ.

ಪ್ರಶ್ನೆ 3: ನಾನು ನೋಂದಣಿಗಾಗಿ ಅರ್ಜಿ ಸಲ್ಲಿಸಿದ್ದೇನೆ, ಆದರೆ ಕಳೆದ 10 ದಿನಗಳಿಂದ ಅಧಿಕಾರಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ನಾನು ಉತ್ಪಾದನೆಯನ್ನು ಪ್ರಾರಂಭಿಸಬಹುದೇ?

ಉತ್ತರ: ಹೌದು. ಎಚ್ ಎಸ್ ಎನ್ ಎಸ್  ಉಪಕರ ನಿಯಮಗಳ ನಿಯಮ 5(3)ರ ಪ್ರಕಾರ, ಸಂಬಂಧಪಟ್ಟ ಅಧಿಕಾರಿಯು 7 ಕೆಲಸದ ದಿನಗಳೊಳಗೆ ಯಾವುದೇ ಕ್ರಮ ಕೈಗೊಳ್ಳದಿದ್ದರೆ, ಅರ್ಜಿಯನ್ನು ಅನುಮೋದಿಸಲಾಗಿದೆ ಎಂದು ಪರಿಗಣಿಸಲಾಗುತ್ತದೆ. FORM HSNS REG-02 ರಲ್ಲಿರುವ ನೋಂದಣಿ ಪ್ರಮಾಣಪತ್ರವು ಪೋರ್ಟಲ್‌ ನಲ್ಲಿ ಲಭ್ಯವಾಗುತ್ತದೆ.

ಪ್ರಶ್ನೆ 4: ನೋಂದಣಿ ಪ್ರಮಾಣಪತ್ರ ಪಡೆಯುವ ಮೊದಲೇ, ನೋಂದಣಿಗಾಗಿ ಅರ್ಜಿ ಸಲ್ಲಿಸಿದ ನಂತರ ನಾನು ನನ್ನ ಉಪಕರದ  ಹೊಣೆಗಾರಿಕೆಯನ್ನು (Cess Liability) ಪಾವತಿಸಬಹುದೇ?

ಉತ್ತರ: ಹೌದು, FORM HSNS REG-01 ಅನ್ನು ಯಶಸ್ವಿಯಾಗಿ ಸಲ್ಲಿಸಿದ ನಂತರ ದೊರೆಯುವ ತಾತ್ಕಾಲಿಕ ನೋಂದಣಿ ಸಂಖ್ಯೆಯನ್ನು ಬಳಸಿಕೊಂಡು ನೀವು ನಿಮ್ಮ ಉಪಕರದ ಮೊತ್ತವನ್ನು ಪಾವತಿಸಬಹುದು. ಕಾಯ್ದೆಯ ಪ್ರಕಾರ, ಪ್ರತಿಯೊಬ್ಬ ತೆರಿಗೆಗೆ ಒಳಪಡುವ ವ್ಯಕ್ತಿಯಿಂದ ಪ್ರತಿ ತಿಂಗಳ ಆರಂಭದಲ್ಲಿ, ಅಂದರೆ ಆ ತಿಂಗಳ 7ನೇ ದಿನಾಂಕದ ಒಳಗಾಗಿ ಉಪಕರವನ್ನು ಸಂಗ್ರಹಿಸಬೇಕಾಗುತ್ತದೆ. 1 ಫೆಬ್ರವರಿ, 2026ರ ಹೊತ್ತಿಗೆ ಈಗಾಗಲೇ ಯಂತ್ರಗಳನ್ನು ಹೊಂದಿರುವ ಅಥವಾ ನಿಯಂತ್ರಿಸುತ್ತಿರುವ ಹೊಸ ಅರ್ಜಿದಾರರು, ತಮ್ಮ ನೋಂದಣಿ ಪ್ರಮಾಣಪತ್ರವು (ಇದು 7 ಕೆಲಸದ ದಿನಗಳೊಳಗೆ ವಿತರಿಸಲ್ಪಡುತ್ತದೆ) ಇನ್ನು ಪ್ರಕ್ರಿಯೆಯಲ್ಲಿದ್ದರೂ ಸಹ, ಸದರಿ ತಾತ್ಕಾಲಿಕ ನೋಂದಣಿ ಸಂಖ್ಯೆಯನ್ನು ಬಳಸಿಕೊಂಡು ಪೋರ್ಟಲ್‌ ನಲ್ಲಿ ಉಪಕರವನ್ನು ಪಾವತಿಸಬಹುದು.

ಪ್ರಶ್ನೆ 5: ಒಮ್ಮೆ ನಾನು ನೋಂದಣಿ ಪಡೆದ ನಂತರ, ನನ್ನ ಯಂತ್ರಗಳ ಬಗ್ಗೆ ಘೋಷಣೆಯನ್ನು ಯಾವಾಗ ಸಲ್ಲಿಸಬೇಕು?

ಉತ್ತರ: ನಿಮ್ಮ ನೋಂದಣಿ ಮಂಜೂರಾದ 7 ದಿನಗಳೊಳಗೆ ಪೋರ್ಟಲ್‌ ನಲ್ಲಿ FORM HSNS DEC-01 ಮೂಲಕ ಘೋಷಣೆಯನ್ನು ಸಲ್ಲಿಸಬೇಕು. ಈ ಘೋಷಣೆಯಲ್ಲಿ ಉಪಕರದ ಲೆಕ್ಕಾಚಾರಕ್ಕೆ ಸಂಬಂಧಿಸಿದ ನಿಮ್ಮ ಯಂತ್ರಗಳ ನಿಯತಾಂಕಗಳನ್ನು (ಯಂತ್ರದ ಗರಿಷ್ಠ ವೇಗ, ನಿರ್ದಿಷ್ಟಪಡಿಸಿದ ಸರಕುಗಳ ತೂಕ, ಇತ್ಯಾದಿ) ಕಡ್ಡಾಯವಾಗಿ ನಮೂದಿಸಬೇಕು.

ಉದಾಹರಣೆ: 'ABC Ltd' ಸಂಸ್ಥೆಯು February 10, 2026 ರಂದು ತಮ್ಮ ನೋಂದಣಿ ಪ್ರಮಾಣಪತ್ರವನ್ನು ಪಡೆಯುತ್ತದೆ ಎಂದು ಭಾವಿಸೋಣ. ಅವರು February 17, 2026 ರೊಳಗೆ FORM HSNS DEC-01 ಅನ್ನು ಸಲ್ಲಿಸಬೇಕು.

ಪ್ರಶ್ನೆ 6: ನಾನು ಹೊಸ ಯಂತ್ರವನ್ನು ಸೇರಿಸಿದರೆ ಏನು ಮಾಡಬೇಕು? ನಾನು ಇಲಾಖೆಗೆ ಮಾಹಿತಿ ನೀಡಬೇಕೇ?

ಉತ್ತರ: ಹೌದು. ಉಪಕರದ ಲೆಕ್ಕಾಚಾರಕ್ಕೆ ಸಂಬಂಧಿಸಿದ ಯಾವುದೇ ಬದಲಾವಣೆಗಳಾದಲ್ಲಿ (ಹೊಸ ಯಂತ್ರದ ಅಳವಡಿಕೆ ಅಥವಾ ಸೇರ್ಪಡೆ ಸೇರಿದಂತೆ), ಅಂತಹ ಬದಲಾವಣೆ ನಡೆದ 15 ದಿನಗಳೊಳಗೆ ಕಾಯ್ದೆಯ ಸೆಕ್ಷನ್ 9(3) ಮತ್ತು ಎಚ್ ಎಸ್ ಎನ್ ಎಸ್  ಉಪಕರ ನಿಯಮಗಳ ನಿಯಮ 9(2)ರ ಅಡಿಯಲ್ಲಿ ನೀವು ಹೊಸ ಘೋಷಣೆಯನ್ನು ಸಲ್ಲಿಸಬೇಕು.

ಉದಾಹರಣೆ: 1 ಮಾರ್ಚ್, 2026 ರಂದು ನೀವು ಹೊಸ ಪ್ಯಾಕಿಂಗ್ ಯಂತ್ರವನ್ನು ಅಳವಡಿಸುತ್ತೀರಿ ಎಂದು ಭಾವಿಸೋಣ. ಈ ಬದಲಾವಣೆಯನ್ನು ಒಳಗೊಂಡ ಹೊಸ ಘೋಷಣೆಯನ್ನು ನೀವು FORM HSNS DEC-01 ಮೂಲಕ 16 ಮಾರ್ಚ್, 2026 ರೊಳಗೆ ಸಲ್ಲಿಸಬೇಕು.

ಪ್ರಶ್ನೆ 7: ಮೊದಲ ಘೋಷಣೆಯನ್ನು ಸಲ್ಲಿಸಿದ ತಕ್ಷಣವೇ ನಾನು ಮತ್ತೊಂದು ಹೊಸ ಘೋಷಣೆಯನ್ನು ಸಲ್ಲಿಸಬಹುದೇ?

ಉತ್ತರ: ಎಚ್ ಎಸ್ ಎನ್ ಎಸ್  ಉಪಕರ ನಿಯಮಗಳ ನಿಯಮ 9(2)ರ ಪ್ರಕಾರ, ನಿಮ್ಮ ಹಿಂದಿನ ಘೋಷಣೆಗೆ ಸಂಬಂಧಿಸಿದಂತೆ ಸಂಬಂಧಪಟ್ಟ ಅಧಿಕಾರಿಯು ನಿಯಮ 11ರ ಅಡಿಯಲ್ಲಿ ಆದೇಶವನ್ನು ಹೊರಡಿಸುವವರೆಗೆ, ನೀವು ಹೊಸ ಘೋಷಣೆಯನ್ನು ಸಲ್ಲಿಸಲು ಸಾಧ್ಯವಿಲ್ಲ.

ಪ್ರಶ್ನೆ 8: ಇಲಾಖೆಯು ನನ್ನ ಘೋಷಣೆಯನ್ನು ಹೇಗೆ ಪರಿಶೀಲಿಸುತ್ತದೆ?

ಉತ್ತರ: ಎಚ್ ಎಸ್ ಎನ್ ಎಸ್  ಉಪಕರ ನಿಯಮಗಳ (ಅಧ್ಯಾಯ III) ನಿಯಮ 10ರ ಪ್ರಕಾರ, ಸಂಬಂಧಪಟ್ಟ ಅಧಿಕಾರಿಯು ನಿಮ್ಮ ಘೋಷಣೆಯನ್ನು 90 ದಿನಗಳೊಳಗೆ ಪರಿಶೀಲಿಸುತ್ತಾರೆ.

ಪ್ರಶ್ನೆ 9: ನನ್ನ ಯಂತ್ರದ ಗರಿಷ್ಠ ವೇಗ ನಾನು ಘೋಷಿಸಿದ ವೇಗಕ್ಕಿಂತ ಹೆಚ್ಚಿದೆ ಎಂದು ಅಧಿಕಾರಿಗೆ ಕಂಡುಬಂದರೆ ಏನಾಗುತ್ತದೆ?

ಉತ್ತರ: ಉಪಕರದ ಲೆಕ್ಕಾಚಾರದ ಮೇಲೆ ಪರಿಣಾಮ ಬೀರುವಂತಹ ವ್ಯತ್ಯಾಸಗಳು ಕಂಡುಬಂದಲ್ಲಿ:

  1. ಅಧಿಕಾರಿಯು ಆ ವ್ಯತ್ಯಾಸದ ಬಗ್ಗೆ ನಿಮಗೆ ತಿಳಿಸುತ್ತಾರೆ.
  2. ನಿಮಗೆ ನಿಮ್ಮ ವಾದವನ್ನು ಮಂಡಿಸಲು ಅವಕಾಶ ನೀಡಿದ ನಂತರ, ಅಧಿಕಾರಿಯು ಪರಿಶೀಲನೆ ನಡೆಸಿದ 30 ದಿನಗಳೊಳಗೆ ಉಪಕರದ ಲೆಕ್ಕಾಚಾರವನ್ನು ದೃಢೀಕರಿಸಿ ಆದೇಶವನ್ನು ಹೊರಡಿಸುತ್ತಾರೆ.
  3. ನಿಯಮ 11(3) ರ ಪ್ರಕಾರ, ನಿರ್ಧರಿಸಲ್ಪಟ್ಟ ಉಪಕರದ ಮೊತ್ತವನ್ನು ನೀವು ಮುಂದಿನ ಅವಧಿಗೆ ಮತ್ತು ಹಿಂದಿನ ಅವಧಿಗೆ ಪಾವತಿಸಬೇಕಾಗುತ್ತದೆ. ಅಂದರೆ, ಯಂತ್ರ ಅಳವಡಿಸಿದ ದಿನಾಂಕದಿಂದ (ಆರಂಭಿಕ ಘೋಷಣೆಗಳಿಗೆ) ಅಥವಾ ನಿಯತಾಂಕಗಳು ಬದಲಾದ ದಿನಾಂಕದಿಂದ (ಹೊಸ ಘೋಷಣೆಗಳಿಗೆ) ನಿಜವಾದ ಪಾವತಿಯ ದಿನಾಂಕದವರೆಗೆ ಬಾಕಿ ಇರುವ ವ್ಯತ್ಯಾಸದ ಮೊತ್ತವನ್ನು ಬಡ್ಡಿಯೊಂದಿಗೆ ಪಾವತಿಸುವುದು ಕಡ್ಡಾಯವಾಗಿದೆ.

ಉದಾಹರಣೆ: 1 ಫೆಬ್ರವರಿ ರಂದು, ಒಬ್ಬ ತಯಾರಕರು ನಿಮಿಷಕ್ಕೆ 300 ಪಾಕೆಟ್‌ ಗಳ ವೇಗವಿರುವ ಯಂತ್ರವನ್ನು ಅಳವಡಿಸಿ ಅದರ ವಿವರಗಳನ್ನು ಇಲಾಖೆಗೆ ಘೋಷಿಸುತ್ತಾರೆ. 1 ಏಪ್ರಿಲ್ ರಂದು, ಅಧಿಕಾರಿಯು ಪರಿಶೀಲನೆಯ ನಂತರ ಯಂತ್ರದ ನಿಜವಾದ ಗರಿಷ್ಠ ವೇಗವು ನಿಮಿಷಕ್ಕೆ 700 ಪಾಕೆಟ್‌ ಗಳು ಎಂದು ತೀರ್ಮಾನಿಸುತ್ತಾರೆ. ಸಮಂಜಸವಾದ ಅವಕಾಶವನ್ನು ನೀಡಿದ ನಂತರ, ಅಧಿಕಾರಿಯು 30 ಏಪ್ರಿಲ್ ಒಳಗೆ ಉಪಕರದ ಲೆಕ್ಕಾಚಾರವನ್ನು ವಿವರಿಸುವ ಆದೇಶವನ್ನು ಹೊರಡಿಸುತ್ತಾರೆ. ತಯಾರಕರು ಫೆಬ್ರವರಿ, ಮಾರ್ಚ್ ಮತ್ತು ಏಪ್ರಿಲ್ ತಿಂಗಳ ವ್ಯತ್ಯಾಸದ ಉಪಕರದ ಮೊತ್ತವನ್ನು ಬಡ್ಡಿಯೊಂದಿಗೆ ಪಾವತಿಸಬೇಕು. ಏಕೆಂದರೆ ಈ ಹೊಣೆಗಾರಿಕೆಯು ಯಂತ್ರ ಅಳವಡಿಸಿದ ದಿನಾಂಕದಿಂದಲೇ (1 ಫೆಬ್ರವರಿ) ಅನ್ವಯವಾಗುತ್ತದೆ.

ಪ್ರಶ್ನೆ 10: ಅಧಿಕಾರಿ ನನ್ನ ಘೋಷಣೆಯನ್ನು ಒಪ್ಪಿಕೊಂಡರೆ, ನನಗೆ ದೃಢೀಕರಣ ಸಿಗುತ್ತದೆಯೇ?

ಉತ್ತರ: ಹೌದು. ಯಾವುದೇ ವ್ಯತ್ಯಾಸಗಳು ಕಂಡುಬರದಿದ್ದಲ್ಲಿ, ಸಂಬಂಧಪಟ್ಟ ಅಧಿಕಾರಿಯು ಪರಿಶೀಲನೆ ನಡೆಸಿದ ದಿನಾಂಕದಿಂದ 15 ದಿನಗಳೊಳಗೆ ನಿಮ್ಮ ಘೋಷಣೆಯನ್ನು ದೃಢೀಕರಿಸಿ ಆದೇಶವನ್ನು ಹೊರಡಿಸುತ್ತಾರೆ.

ಪ್ರಶ್ನೆ 11: ಎಚ್ ಎಸ್ ಎನ್ ಎಸ್  ಉಪಕರವನ್ನು ಹೇಗೆ ಲೆಕ್ಕ ಹಾಕಲಾಗುತ್ತದೆ? ಇದು ನಿಜವಾದ ಉತ್ಪಾದನೆಯ (Actual Production) ಮೇಲೆ ಆಧಾರಿತವಾಗಿದೆಯೇ?

ಉತ್ತರ: ಇಲ್ಲ. ಇದನ್ನು ಅಳವಡಿಸಲಾದ ಪ್ಯಾಕಿಂಗ್ ಯಂತ್ರಗಳ ಸಂಖ್ಯೆ ಮತ್ತು ಅವುಗಳ ಗರಿಷ್ಠ ಪ್ಯಾಕಿಂಗ್ ವೇಗದ ಆಧಾರದ ಮೇಲೆ ಮಾಸಿಕವಾಗಿ ಲೆಕ್ಕಹಾಕಲಾಗುತ್ತದೆ ಮತ್ತು ಪಾವತಿಸಲಾಗುತ್ತದೆ (ಕಾಯ್ದೆಯ ಅನುಸೂಚಿ IIರ ಟೇಬಲ್ 1ರ ಪ್ರಕಾರ). ಒಂದು ವೇಳೆ ಸಂಪೂರ್ಣ ಹಸ್ತಚಾಲಿತ ಪ್ರಕ್ರಿಯೆಯ ಘಟಕವಾಗಿದ್ದರೆ, ಪಾವತಿಸಬೇಕಾದ ಉಪಕರವು ಕಾಯ್ದೆಯ ಅನುಸೂಚಿ IIರ ಟೇಬಲ್ 2ರ ಪ್ರಕಾರ ಇರುತ್ತದೆ.

ಪ್ರಶ್ನೆ 12: ನಾನು ತಿಂಗಳ ಮಧ್ಯದಲ್ಲಿ ಹೊಸ ಯಂತ್ರವನ್ನು ಅಳವಡಿಸುತ್ತಿದ್ದೇನೆ. ನಾನು ಇಡೀ ತಿಂಗಳ ಉಪಕರವನ್ನು ಪಾವತಿಸಬೇಕೇ?

ಉತ್ತರ: ಹೌದು. ನೀವು ನೋಂದಾಯಿತ ವ್ಯಕ್ತಿಯಾಗಿದ್ದು, ತಿಂಗಳ ಮಧ್ಯದಲ್ಲಿ ಹೊಸ ಯಂತ್ರವನ್ನು ಸೇರಿಸಿದರೆ ಅಥವಾ ಅಳವಡಿಸಿದರೆ, ಆ ಹೊಸ ಯಂತ್ರಕ್ಕೆ ಸಂಬಂಧಿಸಿದ ಸಂಪೂರ್ಣ ತಿಂಗಳ ಉಪಕರವನ್ನು ಅಳವಡಿಕೆಯಾದ 5 ದಿನಗಳೊಳಗೆ ಪಾವತಿಸಬೇಕು.

ಉದಾಹರಣೆ: 'M/s ABC Ltd' (ಈಗಾಗಲೇ ನೋಂದಾಯಿತ ಸಂಸ್ಥೆ) 4 ಯಂತ್ರಗಳನ್ನು ನಿರ್ವಹಿಸುತ್ತಿದೆ. 20 ಆಗಸ್ಟ್, 2026 ರಂದು ಅವರು 5ನೇ ಯಂತ್ರವನ್ನು ಅಳವಡಿಸುತ್ತಾರೆ, ಅದರ ಮಾಸಿಕ ಉಪಕರದ ಹೊಣೆಗಾರಿಕೆ ₹1,01,00,000 ಆಗಿರುತ್ತದೆ. ಅವರು ಈ ₹1,01,00,000 ಮೊತ್ತವನ್ನು 25 ಆಗಸ್ಟ್, 2026 ರೊಳಗೆ ಪಾವತಿಸಬೇಕು. ಪಾವತಿಯಲ್ಲಿ ವಿಳಂಬವಾದರೆ, 26 ಆಗಸ್ಟ್, 2026 ರಿಂದ ಪಾವತಿಯ ದಿನಾಂಕದವರೆಗೆ ಬಡ್ಡಿಯನ್ನು ಪಾವತಿಸಬೇಕಾಗುತ್ತದೆ.

ಪ್ರಶ್ನೆ 13: ಪಾವತಿ ಮತ್ತು ರಿಟರ್ನ್ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕಗಳು ಯಾವುವು?

ಉತ್ತರ: ನೀವು ಪ್ರಸಕ್ತ ತಿಂಗಳ ಮಾಸಿಕ ಉಪಕರವನ್ನು ಆ ತಿಂಗಳ 7ನೇ ದಿನಾಂಕದೊಳಗೆ ಎಲೆಕ್ಟ್ರಾನಿಕ್ ವಿಧಾನದಲ್ಲಿ ಪಾವತಿಸಬೇಕು. ಮಾಸಿಕ ರಿಟರ್ನ್ ಅನ್ನು FORM HSNS RET-01 ಮೂಲಕ ಮುಂದಿನ ತಿಂಗಳ 20ನೇ ದಿನಾಂಕದೊಳಗೆ ಸಲ್ಲಿಸಬೇಕು.

ಪ್ರಶ್ನೆ 14: ನಾನು ರಿಟರ್ನ್ ಸಲ್ಲಿಸಲು ವಿಳಂಬ ಮಾಡಿದರೆ ಏನಾಗುತ್ತದೆ?

ಉತ್ತರ: ನಿಗದಿತ ದಿನಾಂಕದೊಳಗೆ ನೀವು ರಿಟರ್ನ್ ಸಲ್ಲಿಸಲು ವಿಫಲವಾದರೆ, ಸಂಬಂಧಪಟ್ಟ ಅಧಿಕಾರಿಯು ನಿಮಗೆ ನೋಟಿಸ್ ನೀಡುತ್ತಾರೆ. ನೋಟಿಸ್ ತಲುಪಿದ 15 ದಿನಗಳೊಳಗೆ ರಿಟರ್ನ್ ಸಲ್ಲಿಸುವುದು ಕಡ್ಡಾಯವಾಗಿರುತ್ತದೆ. ಇದಲ್ಲದೆ, ಕಾಯ್ದೆಯ ಸೆಕ್ಷನ್ 18(1)(ಸಿ)ರ ಪ್ರಕಾರ, ನಿಗದಿತ ದಿನಾಂಕದಂದು ರಿಟರ್ನ್ ಸಲ್ಲಿಸದಿದ್ದರೆ ಕನಿಷ್ಠ ₹10,000 ದಂಡ ವಿಧಿಸಲಾಗುತ್ತದೆ.

ಪ್ರಶ್ನೆ 15: ನನ್ನ ರಿಟರ್ನ್ನಲ್ಲಿ ತಪ್ಪುಗಳಾದರೆ ಅಥವಾ ತಪ್ಪು ಮಾಹಿತಿ ನೀಡಿದರೆ ಏನಾಗುತ್ತದೆ?

ಉತ್ತರ: ಮೂಲ ರಿಟರ್ನ್ ಸಲ್ಲಿಸಿದ ಅದೇ ಕ್ಯಾಲೆಂಡರ್ ತಿಂಗಳು ಮುಗಿಯುವ ಮೊದಲು, ನಿಮ್ಮ ರಿಟರ್ನ್‌ ನಲ್ಲಿರುವ ಯಾವುದೇ ಲೋಪದೋಷಗಳನ್ನು ಅಥವಾ ತಪ್ಪು ವಿವರಗಳನ್ನು ನೀವು ಸರಿಪಡಿಸಬಹುದು. ಆದಾಗ್ಯೂ, ಇಂತಹ ತಿದ್ದುಪಡಿಯಿಂದಾಗಿ ಮೂಲತಃ ಘೋಷಿಸಿದ್ದಕ್ಕಿಂತ ಹೆಚ್ಚಿನ ಉಪಕರದ ಹೊಣೆಗಾರಿಕೆ ಉಂಟಾದರೆ, ನೀವು ವ್ಯತ್ಯಾಸದ ಮೊತ್ತವನ್ನು ಬಡ್ಡಿಯೊಂದಿಗೆ ಪಾವತಿಸಬೇಕಾಗುತ್ತದೆ.

ಪ್ರಶ್ನೆ 16: ಎಚ್ಎಸ್ಎನ್ಎಸ್ ಉಪಕರ ನಿಯಮಗಳ ಅಡಿಯಲ್ಲಿ "ಅಬೇಟ್ಮೆಂಟ್" (Abatement) ಎಂದರೇನು?

ಉತ್ತರ: ಯಾವುದಾದರೂ ಯಂತ್ರ ಅಥವಾ ಹಸ್ತಚಾಲಿತ ಪ್ರಕ್ರಿಯೆಯ ಘಟಕವು ಸತತವಾಗಿ 15 ದಿನಗಳು ಅಥವಾ ಅದಕ್ಕಿಂತ ಹೆಚ್ಚು ಕಾಲ ಕಾರ್ಯನಿರ್ವಹಿಸದಿದ್ದರೆ, ಅಂತಹ ಸಂದರ್ಭದಲ್ಲಿ ನೋಂದಾಯಿತ ವ್ಯಕ್ತಿಯ ಉಪಕರದ ಹೊಣೆಗಾರಿಕೆಯಲ್ಲಿ ಮಾಡುವ ಒಂದು ರೀತಿಯ ಹೊಂದಾಣಿಕೆಯೇ "ಅಬೇಟ್‌ಮೆಂಟ್". ಉಪಕರವನ್ನು ಪ್ರತಿ ಯಂತ್ರಕ್ಕೆ ಮಾಸಿಕ ಆಧಾರದ ಮೇಲೆ ಲೆಕ್ಕಹಾಕುವುದರಿಂದ, ಯಂತ್ರವನ್ನು ಸೀಲ್ ಮಾಡಲಾಗಿದ್ದು ಬಳಕೆಯಲ್ಲಿ ಇಲ್ಲದ ಅವಧಿಗೆ ಸಂಬಂಧಿಸಿದಂತೆ ಈಗಾಗಲೇ ಪಾವತಿಸಿದ ಉಪಕರವನ್ನು ಹೊಂದಾಣಿಕೆ ಮಾಡಲು ಇದು ಸಹಾಯ ಮಾಡುತ್ತದೆ.

ಪ್ರಶ್ನೆ 17: ಅಬೇಟ್ಮೆಂಟ್ ಪಡೆಯಲು ಅಗತ್ಯವಿರುವ ಕನಿಷ್ಠ ಸ್ಥಗಿತದ ಅವಧಿ (Shutdown period) ಎಷ್ಟು?

ಉತ್ತರ: ಯಂತ್ರ ಅಥವಾ ಹಸ್ತಚಾಲಿತ ಘಟಕವು ಸತತವಾಗಿ 15 ದಿನಗಳು ಅಥವಾ ಅದಕ್ಕಿಂತ ಹೆಚ್ಚು ಕಾಲ ಸ್ಥಗಿತಗೊಂಡಿದ್ದರೆ ಮಾತ್ರ ನೀವು ಅಬೇಟ್‌ಮೆಂಟ್ ಅನ್ನು ಪಡೆಯಬಹುದು. ಉದಾಹರಣೆಗೆ, ಒಂದು ಯಂತ್ರವನ್ನು 10 ದಿನಗಳವರೆಗೆ ಸೀಲ್ ಮಾಡಿ, ನಂತರ ಎರಡು ದಿನಗಳವರೆಗೆ ಸೀಲ್ ತೆರೆದು, ಮತ್ತೆ 10 ದಿನಗಳವರೆಗೆ ಸೀಲ್ ಮಾಡಿದರೆ, ನೀವು ಅಬೇಟ್‌ಮೆಂಟ್ ಪಡೆಯಲು ಸಾಧ್ಯವಿಲ್ಲ. ಏಕೆಂದರೆ ಇಲ್ಲಿ ಸತತ ಸ್ಥಗಿತದ ಅವಧಿಯು 15 ದಿನಗಳಿಗಿಂತ ಕಡಿಮೆ ಇದೆ.

ಪ್ರಶ್ನೆ 18: ನಾನು ಯಂತ್ರವನ್ನು ಕೇವಲ ಸ್ವಿಚ್ ಆಫ್ ಮಾಡಿ ನಂತರ ಅಬೇಟ್ಮೆಂಟ್ ಪಡೆಯಬಹುದೇ?

ಉತ್ತರ: ಇಲ್ಲ. ಯಂತ್ರವನ್ನು ಸ್ಥಗಿತಗೊಳಿಸುವ ಕನಿಷ್ಠ 3 ಕೆಲಸದ ದಿನಗಳ ಮೊದಲು ನೀವು ಸಂಬಂಧಪಟ್ಟ ಅಧಿಕಾರಿಗೆ ಮಾಹಿತಿ ನೀಡಬೇಕು. ನಿಮ್ಮ ಮಾಹಿತಿಯು ತಲುಪಿದ ಮೂರು ದಿನಗಳೊಳಗೆ ಅಧಿಕಾರಿಯು ನಿಮ್ಮ ಕಾರ್ಖಾನೆಗೆ ಭೇಟಿ ನೀಡಿ, ಯಂತ್ರವನ್ನು ಚಲಾಯಿಸಲು ಸಾಧ್ಯವಾಗದಂತೆ ಅಧಿಕೃತವಾಗಿ ಸೀಲ್ ಮಾಡುತ್ತಾರೆ. ಯಂತ್ರವು ಸೀಲ್ ಆಗಿರುವ ಅವಧಿಯಲ್ಲಿ ಆ ಯಂತ್ರದಲ್ಲಿ ಯಾವುದೇ ಉತ್ಪಾದನೆ ನಡೆಯುತ್ತಿಲ್ಲ ಎಂಬುದನ್ನು ನೀವು ಖಚಿತಪಡಿಸಿಕೊಳ್ಳಬೇಕು.

ಪ್ರಶ್ನೆ 19: ನನ್ನ ಯಂತ್ರವು ಕೆಲಸ ಮಾಡದಿದ್ದರೆ ಅಥವಾ ಮಾರುಕಟ್ಟೆಯಲ್ಲಿ ಬೇಡಿಕೆ ಇಲ್ಲದಿದ್ದರೆ ನಾನು ಉಪಕರ ಪಾವತಿಸುವುದನ್ನು ನಿಲ್ಲಿಸಬಹುದೇ?

ಉತ್ತರ: ಯಂತ್ರವು ಸತತವಾಗಿ 15 ದಿನಗಳು ಅಥವಾ ಅದಕ್ಕಿಂತ ಹೆಚ್ಚು ಕಾಲ ಕಾರ್ಯನಿರ್ವಹಿಸದಿದ್ದರೆ ಮಾತ್ರ ನೀವು ಅಬೇಟ್‌ಮೆಂಟ್ (ಹೊಂದಾಣಿಕೆ) ಪಡೆಯಬಹುದು. ಇದಕ್ಕಾಗಿ ಎಚ್‌ ಎಸ್‌ ಎನ್‌ ಎಸ್ ಉಪಕರ ನಿಯಮಗಳ ಅಧ್ಯಾಯ V ಅಡಿಯಲ್ಲಿ ತಿಳಿಸಲಾದ ಅಬೇಟ್‌ಮೆಂಟ್ ಪಡೆಯುವ ಪ್ರಕ್ರಿಯೆಯನ್ನು ಅನುಸರಿಸಬೇಕು.‌

ಪ್ರಶ್ನೆ 20: ಅಬೇಟ್ಮೆಂಟ್ (ಹೊಂದಾಣಿಕೆ) ಮೊತ್ತವನ್ನು ಹೇಗೆ ಲೆಕ್ಕ ಹಾಕಲಾಗುತ್ತದೆ?

ಉತ್ತರ: ಅಬೇಟ್‌ಮೆಂಟ್ ಅನ್ನು ಕೆಳಗಿನ ಸೂತ್ರವನ್ನು ಬಳಸಿಕೊಂಡು ಪ್ರಮಾಣಾನುಗುಣವಾಗಿ (pro-rata basis) ಲೆಕ್ಕಹಾಕಲಾಗುತ್ತದೆ:

A=CN×D

ಇಲ್ಲಿ:

  • A: ಅಬೇಟ್‌ಮೆಂಟ್ ಮೊತ್ತ
  • C: ಆ ಯಂತ್ರಕ್ಕೆ ಸಂಬಂಧಿಸಿದ ಒಟ್ಟು ಮಾಸಿಕ ಉಪಕರದ ಹೊಣೆಗಾರಿಕೆ
  • N: ಆ ತಿಂಗಳ ಒಟ್ಟು ದಿನಗಳ ಸಂಖ್ಯೆ (ಉದಾಹರಣೆಗೆ 28, 29, 30 ಅಥವಾ 31)
  • D: ಆ ತಿಂಗಳಲ್ಲಿ ಯಂತ್ರವು ಸತತವಾಗಿ ಕಾರ್ಯನಿರ್ವಹಿಸದ ಒಟ್ಟು ದಿನಗಳ ಸಂಖ್ಯೆ.

ಉದಾಹರಣೆ 1:

‘ABC Ltd’ ಸಂಸ್ಥೆಯು ಹೆಚ್ಚಿನ ವೇಗದ ಪ್ಯಾಕಿಂಗ್ ಯಂತ್ರವನ್ನು (700 ppm) ಅಳವಡಿಸಿದೆ. ಅವರ ಮಾಸಿಕ ಹೊಣೆಗಾರಿಕೆ (C) ₹2,02,00,000 ಆಗಿದೆ. ಯಂತ್ರವನ್ನು 1 ಸೆಪ್ಟೆಂಬರ್ ರಿಂದ 19 ಸೆಪ್ಟೆಂಬರ್ ರವರೆಗೆ (19 ದಿನಗಳು) ಸೀಲ್ ಮಾಡಲಾಗಿದೆ. 20 ಸೆಪ್ಟೆಂಬರ್ ರಂದು ಸೀಲ್ ತೆರೆಯಲಾಗಿದೆ. ಸ್ಥಗಿತದ ಅವಧಿಯು (19 ದಿನಗಳು) 15 ದಿನಗಳಿಗಿಂತ ಹೆಚ್ಚಿರುವುದರಿಂದ, ಅವರು ಅಬೇಟ್‌ಮೆಂಟ್‌ ಗೆ ಅರ್ಹರಾಗಿರುತ್ತಾರೆ. ಲೆಕ್ಕಾಚಾರ ಹೀಗಿದೆ:

  • ತಿಂಗಳ ಒಟ್ಟು ದಿನಗಳು (N): 30
  • ಯಂತ್ರವು ಕಾರ್ಯನಿರ್ವಹಿಸದ ಸತತ ದಿನಗಳು (D): 19
  • ಅಬೇಟ್‌ಮೆಂಟ್ ಮೊತ್ತ (A):


A=2,02,00,00030×19=1,27,93,333

  • ಅವರು ₹1.28 ಕೋಟಿ ಅಬೇಟ್‌ಮೆಂಟ್ ಮೊತ್ತವನ್ನು ಪಡೆಯಲು 20 ಅಕ್ಟೋಬರ್ ರಂದು ಅಥವಾ ಅದಕ್ಕಿಂತ ಮೊದಲು ಸಂಬಂಧಪಟ್ಟ ಅಧಿಕಾರಿಗೆ ಅರ್ಜಿ ಸಲ್ಲಿಸಬಹುದು. ಉದಾಹರಣೆಗೆ, ಅವರು 25 ಸೆಪ್ಟೆಂಬರ್ ರಂದು ಕ್ಲೈಮ್ ಸಲ್ಲಿಸಿ, 7 ಅಕ್ಟೋಬರ್ ರಂದು ಅಬೇಟ್‌ಮೆಂಟ್ ಆದೇಶ ಹೊರಬಂದರೆ, ಅವರು ಈ ಮೊತ್ತವನ್ನು ನವೆಂಬರ್ ತಿಂಗಳ ತಮ್ಮ ಹೊಣೆಗಾರಿಕೆಯ ವಿರುದ್ಧ ಹೊಂದಾಣಿಕೆ (adjust) ಮಾಡಿಕೊಳ್ಳಬಹುದು.

ಉದಾಹರಣೆ 2:

‘ABC Ltd’ ಸಂಸ್ಥೆಯು ಹೆಚ್ಚಿನ ವೇಗದ ಪ್ಯಾಕಿಂಗ್ ಯಂತ್ರವನ್ನು (700 ppm) ಅಳವಡಿಸಿದೆ. ಅವರ ಮಾಸಿಕ ಹೊಣೆಗಾರಿಕೆ (C) ₹2,02,00,000 ಆಗಿದೆ. ಯಂತ್ರವನ್ನು 20 ಜುಲೈ ರಂದು ಸೀಲ್ ಮಾಡಲಾಗಿದೆ ಮತ್ತು 8 ಆಗಸ್ಟ್ ರಂದು ಸೀಲ್ ತೆರೆಯಲಾಗಿದೆ. ಸ್ಥಗಿತದ ಅವಧಿಯು (21 ದಿನಗಳು) 15 ದಿನಗಳಿಗಿಂತ ಹೆಚ್ಚಿರುವುದರಿಂದ, ಅವರು ಅಬೇಟ್‌ಮೆಂಟ್‌ ಗೆ ಅರ್ಹರಾಗಿರುತ್ತಾರೆ. ಇದನ್ನು ಪ್ರತಿ ತಿಂಗಳಿಗೆ ಪ್ರತ್ಯೇಕವಾಗಿ ಕೆಳಗಿನಂತೆ ಲೆಕ್ಕಹಾಕಲಾಗುತ್ತದೆ:

ಜುಲೈ ತಿಂಗಳಿಗೆ:

  • N: 31 ದಿನಗಳು
  • D: 12 ದಿನಗಳು (20 ಜುಲೈ ರಿಂದ 31 ಜುಲೈ)
  • ಅಬೇಟ್‌ಮೆಂಟ್ (A1):

A=2,02,00,00030×19=1,27,93,333
 

ಆಗಸ್ಟ್ ತಿಂಗಳಿಗೆ:

  • N: 31 ದಿನಗಳು
  • D: 9 ದಿನಗಳು (1 ಆಗಸ್ಟ್ ರಿಂದ 9 ಆಗಸ್ಟ್)
  • ಅಬೇಟ್‌ಮೆಂಟ್ (A2):


A2=2,02,00,00031×9=58,64,516

  • ಅವರು ಒಟ್ಟು ₹1,36,83,871 (A1 + A2) ಅಬೇಟ್‌ಮೆಂಟ್ ಮೊತ್ತವನ್ನು ಪಡೆಯಲು 20 ಸೆಪ್ಟೆಂಬರ್ ರಂದು ಅಥವಾ ಅದಕ್ಕಿಂತ ಮೊದಲು ಸಂಬಂಧಪಟ್ಟ ಅಧಿಕಾರಿಗೆ ಅರ್ಜಿ ಸಲ್ಲಿಸುವ ಮೂಲಕ ಕ್ಲೈಮ್ ಮಾಡಬಹುದು. ಉದಾಹರಣೆಗೆ, ಅವರು 25 ಆಗಸ್ಟ್ ರಂದು ಕ್ಲೈಮ್ ಸಲ್ಲಿಸಿ, 5 ಸೆಪ್ಟೆಂಬರ್ ರಂದು ಅಬೇಟ್‌ಮೆಂಟ್ ಆದೇಶ ಹೊರಬಂದರೆ, ಅವರು ಈ ಮೊತ್ತವನ್ನು ಅಕ್ಟೋಬರ್ ತಿಂಗಳ ತಮ್ಮ ಹೊಣೆಗಾರಿಕೆಯ ವಿರುದ್ಧ ಹೊಂದಾಣಿಕೆ ಮಾಡಿಕೊಳ್ಳಬಹುದು.

ಪ್ರಶ್ನೆ 21: ನನಗೆ ಹಣ ವಾಪಸ್ (Refund) ಯಾವಾಗ ಸಿಗುತ್ತದೆ?

ಉತ್ತರ: ಇದು ನಗದು ರೂಪದ ಮರುಪಾವತಿಯಲ್ಲ. ಅಬೇಟ್‌ಮೆಂಟ್‌ ಗೆ ಅರ್ಹರಾದ ಅವಧಿಯ ನಂತರದ ತಿಂಗಳ 20ನೇ ದಿನಾಂಕದೊಳಗೆ ಅಥವಾ ಅದಕ್ಕೂ ಮೊದಲು ನೀವು ಕ್ಲೈಮ್ ಸಲ್ಲಿಸಬೇಕು. ಕ್ಲೈಮ್ ಸ್ವೀಕರಿಸಿದ 15 ದಿನಗಳೊಳಗೆ ಸಂಬಂಧಪಟ್ಟ ಅಧಿಕಾರಿಯು ಆದೇಶವನ್ನು ಹೊರಡಿಸುತ್ತಾರೆ. ಈ ಅಬೇಟ್‌ಮೆಂಟ್ ಮೊತ್ತವನ್ನು, ಅಧಿಕಾರಿಯು ಆದೇಶ ಹೊರಡಿಸಿದ ತಿಂಗಳ ನಂತರದ ತಿಂಗಳ ನಿಮ್ಮ ಉಪಕರದ ಹೊಣೆಗಾರಿಕೆಯ ವಿರುದ್ಧ ಹೊಂದಾಣಿಕೆ ಮಾಡಲಾಗುತ್ತದೆ.

ಪ್ರಶ್ನೆ 22: ಸೀಲ್ ಮಾಡಲಾದ ಯಂತ್ರವನ್ನು ನಾನು ಮರುಪ್ರಾರಂಭಿಸುವುದು ಹೇಗೆ?

ಉತ್ತರ: ನೀವು ಉತ್ಪಾದನೆಯನ್ನು ಪುನರಾರಂಭಿಸಲು ಉದ್ದೇಶಿಸಿರುವ ಕನಿಷ್ಠ 3 ಕೆಲಸದ ದಿನಗಳ ಮೊದಲು ಸಂಬಂಧಪಟ್ಟ ಅಧಿಕಾರಿಗೆ ಮಾಹಿತಿ ನೀಡಬೇಕು. ಅಧಿಕಾರಿಯು ನಿಮ್ಮ ಕಾರ್ಖಾನೆಗೆ ಭೇಟಿ ನೀಡಿ ಯಂತ್ರದ ಸೀಲ್ ಅನ್ನು ತೆರೆಯುತ್ತಾರೆ.

ಪ್ರಶ್ನೆ 23: ನನ್ನ ಕಾರ್ಖಾನೆಗೆ ಯಾವುದೇ ಕಡ್ಡಾಯ ಕಣ್ಗಾವಲು ಅಗತ್ಯತೆಗಳಿವೆಯೇ?

ಉತ್ತರ: ಹೌದು. ನೀವು ಎಲ್ಲಾ ಪ್ಯಾಕಿಂಗ್ ಯಂತ್ರಗಳು ಮತ್ತು ಹಸ್ತಚಾಲಿತ ಪ್ರಕ್ರಿಯೆಯ ಘಟಕಗಳನ್ನು ಒಳಗೊಳ್ಳುವಂತೆ ಕಡ್ಡಾಯವಾಗಿ ಸಿಸಿಟಿವಿ ವ್ಯವಸ್ಥೆಯನ್ನು ಅಳವಡಿಸಬೇಕು. ಇದರ ದೃಶ್ಯಾವಳಿಗಳನ್ನು 24 ತಿಂಗಳುಗಳವರೆಗೆ ಸಂರಕ್ಷಿಸಿಡಬೇಕು ಮತ್ತು ಅಧಿಕಾರಿಗಳು ಕೇಳಿದಾಗ 48 ಗಂಟೆಗಳೊಳಗೆ ಅದನ್ನು ಒದಗಿಸಬೇಕು.

ಪ್ರಶ್ನೆ 24: ನಾನು ನನ್ನ ಕಾರ್ಖಾನೆಯಿಂದ ಹಳೆಯ ಯಂತ್ರವನ್ನು ತೆಗೆದುಹಾಕಬಹುದೇ?

ಉತ್ತರ: ಹೌದು. ಯಂತ್ರವನ್ನು ತೆಗೆದುಹಾಕುವ ಕನಿಷ್ಠ 3 ಕೆಲಸದ ದಿನಗಳ ಮೊದಲು ನೀವು ಸಂಬಂಧಪಟ್ಟ ಅಧಿಕಾರಿಗೆ ಮಾಹಿತಿ ನೀಡಬೇಕು. ಅಧಿಕಾರಿಯು ಯಂತ್ರವನ್ನು ಅನ್-ಇನ್‌ಸ್ಟಾಲ್ ಮಾಡುವ ಮತ್ತು ತೆಗೆದುಹಾಕುವ ಪ್ರಕ್ರಿಯೆಯನ್ನು ಮೇಲ್ವಿಚಾರಣೆ ಮಾಡುತ್ತಾರೆ. ಒಂದು ವೇಳೆ ಯಂತ್ರವನ್ನು ತೆಗೆದುಹಾಕಲು ಸಾಧ್ಯವಾಗದಿದ್ದರೆ, ಅದನ್ನು ಚಲಾಯಿಸಲು ಬಾರದಂತೆ ಸೀಲ್ ಮಾಡಲಾಗುತ್ತದೆ.

ಪ್ರಶ್ನೆ 25: ನನ್ನ ಯಂತ್ರದ ಗರಿಷ್ಠ ವೇಗ ನಿಮಿಷಕ್ಕೆ 700 ಪಾಕೆಟ್ಗಳಾಗಿದೆ, ಆದರೆ ನಾನು ಅದನ್ನು ಕೇವಲ 300 ಪಾಕೆಟ್ಗಳ ವೇಗದಲ್ಲಿ ಮಾತ್ರ ನಡೆಸುತ್ತಿದ್ದೇನೆ. ನನಗೆ ಅನುಸೂಚಿ II (Schedule II) ಯಾವ ಸ್ಲ್ಯಾಬ್ ಅನ್ವಯಿಸುತ್ತದೆ?

ಉತ್ತರ: ನೀವು ಯಂತ್ರದ ಗರಿಷ್ಠ ವೇಗದ ಆಧಾರದ ಮೇಲೆ ಉಪಕರವನ್ನು ಪಾವತಿಸಬೇಕೇ ಹೊರತು, ನಿಜವಾದ ಕಾರ್ಯಾಚರಣೆಯ ವೇಗದ ಮೇಲಲ್ಲ. ನಿಯಮ 12 ರ ಪ್ರಕಾರ, ಯಾವುದೇ ತೂಕದ ಸರಕುಗಳನ್ನು ತಯಾರಿಸಲು ಯಂತ್ರವನ್ನು ಬಳಸುವಾಗ, ಆ ಯಂತ್ರವು ತಲುಪಬಹುದಾದ ಅತ್ಯಧಿಕ ವೇಗವನ್ನೇ 'ಗರಿಷ್ಠ ವೇಗ' ಎಂದು ಪರಿಗಣಿಸಲಾಗುತ್ತದೆ.

ಪ್ರಶ್ನೆ 26: ಒಂದು ತಿಂಗಳಲ್ಲಿ ನಾನು ಯಾವುದೇ ನಿರ್ದಿಷ್ಟಪಡಿಸಿದ ಸರಕುಗಳನ್ನು ಉತ್ಪಾದಿಸದಿದ್ದರೂ, ಯಂತ್ರವನ್ನು ಸೀಲ್ ಮಾಡದಿದ್ದರೆ ನಾನು ಉಪಕರ ಪಾವತಿಸಬೇಕೇ?

ಉತ್ತರ: ಹೌದು. ಯಂತ್ರವು ಸೀಲ್ ಆಗದ ಹೊರತು, ಉತ್ಪಾದನೆ ನಡೆಯಲಿ ಅಥವಾ ಇಲ್ಲದಿರಲಿ, ನೀವು ಉಪಕರವನ್ನು ಪಾವತಿಸುವುದು ಕಡ್ಡಾಯವಾಗಿದೆ.

ಪ್ರಶ್ನೆ 27: ನನ್ನ ಯಂತ್ರವನ್ನು 1 ಸೆಪ್ಟೆಂಬರ್ ರಿಂದ 15 ಸೆಪ್ಟೆಂಬರ್ ವರೆಗೆ ಸೀಲ್ ಮಾಡಲಾಗಿತ್ತು. 15 ಸೆಪ್ಟೆಂಬರ್ ಸಾಯಂಕಾಲ ಸೀಲ್ ತೆರೆಯಲಾಯಿತು. ನಾನು ಅಬೇಟ್ಮೆಂಟ್ (ಹೊಂದಾಣಿಕೆ) ಪಡೆಯಲು ಅರ್ಹನೇ?

ಉತ್ತರ: ಇಲ್ಲ. ನಿಮ್ಮ ಯಂತ್ರವು ಸತತವಾಗಿ ಕೇವಲ 14 ದಿನಗಳ ಕಾಲ ಮಾತ್ರ ಕಾರ್ಯನಿರ್ವಹಿಸದೆ ಇದ್ದ ಕಾರಣ, ನೀವು ಅಬೇಟ್‌ಮೆಂಟ್ ಪಡೆಯಲು ಅರ್ಹರಾಗಿರುವುದಿಲ್ಲ (ನಿಯಮದ ಪ್ರಕಾರ ಕನಿಷ್ಠ 15 ಸತತ ದಿನಗಳು ಬೇಕು).

ಪ್ರಶ್ನೆ 28: ನನ್ನ ಬಳಿ 5 ಯಂತ್ರಗಳಿವೆ. ಅವುಗಳಲ್ಲಿ 4 ಯಂತ್ರಗಳನ್ನು 20 ದಿನಗಳವರೆಗೆ ಸೀಲ್ ಮಾಡಲಾಗಿತ್ತು, ಆದರೆ 1 ಯಂತ್ರವು ಕಾರ್ಯನಿರ್ವಹಿಸುತ್ತಿತ್ತು. ನಾನು 4 ಯಂತ್ರಗಳಿಗೆ ಅಬೇಟ್ಮೆಂಟ್ ಪಡೆಯಬಹುದೇ?

ಉತ್ತರ: ಹೌದು. ಅಬೇಟ್‌ಮೆಂಟ್ ಅನ್ನು ಪ್ರತಿ ಯಂತ್ರಕ್ಕೆ ಪ್ರತ್ಯೇಕವಾಗಿ ಕ್ಲೈಮ್ ಮಾಡಲಾಗುತ್ತದೆ. ಆದ್ದರಿಂದ ಆ 4 ಯಂತ್ರಗಳಿಗೆ ನೀವು ಅಬೇಟ್‌ಮೆಂಟ್ ಪಡೆಯಬಹುದು.

ಪ್ರಶ್ನೆ 29: ನಾನು ಹಳೆಯ ಯಂತ್ರವನ್ನು ಗುಜರಿಗೆ (Scrap) ಹಾಕಲು ಬಯಸುತ್ತೇನೆ. ನಾನು ಅದನ್ನು ನೇರವಾಗಿ ಬಿಡಿ ಬಿಡಿಯಾಗಿಸಬಹುದೇ?

ಉತ್ತರ: ಇಲ್ಲ. ನೀವು ನಿಯಮ 34 ರ ಪ್ರಕ್ರಿಯೆಯನ್ನು ಅನುಸರಿಸಬೇಕು. ಯಂತ್ರವನ್ನು ಅನ್-ಇನ್‌ಸ್ಟಾಲ್ ಮಾಡಲು ಉದ್ದೇಶಿಸಿರುವ ಕನಿಷ್ಠ 3 ಕೆಲಸದ ದಿನಗಳ ಮೊದಲು ನೀವು ಸಂಬಂಧಪಟ್ಟ ಅಧಿಕಾರಿಗೆ ಮಾಹಿತಿ ನೀಡಬೇಕು. ಅಧಿಕಾರಿಯು ಕಾರ್ಖಾನೆಯಿಂದ ಯಂತ್ರವನ್ನು ತೆಗೆದುಹಾಕುವ ಪ್ರಕ್ರಿಯೆಯನ್ನು ಮೇಲ್ವಿಚಾರಣೆ ಮಾಡುತ್ತಾರೆ. ಒಂದು ವೇಳೆ ಯಂತ್ರವನ್ನು ತೆಗೆದುಹಾಕಲು ಸಾಧ್ಯವಾಗದಿದ್ದರೆ, ಅಧಿಕಾರಿಯು ಅದನ್ನು ಚಲಾಯಿಸಲು ಸಾಧ್ಯವಾಗದಂತೆ ಸೀಲ್ ಮಾಡುತ್ತಾರೆ.

ಪ್ರಶ್ನೆ 30: ನನ್ನ ಕಾರ್ಖಾನೆಯಲ್ಲಿ ಯಂತ್ರ ಮತ್ತು ಹಸ್ತಚಾಲಿತ (Manual) ಪ್ರಕ್ರಿಯೆಗಳೆರಡೂ ಇದ್ದರೆ ಉಪಕರವನ್ನು ಹೇಗೆ ಲೆಕ್ಕ ಹಾಕಲಾಗುತ್ತದೆ?

ಉತ್ತರ: ಕಾಯ್ದೆಯ ಪ್ರಕಾರ, ಉತ್ಪಾದನಾ ಘಟಕದ ಸ್ವರೂಪದ ಆಧಾರದ ಮೇಲೆ ಉಪಕರವನ್ನು ಲೆಕ್ಕಹಾಕಲಾಗುತ್ತದೆ. ಒಂದು ವೇಳೆ ಉತ್ಪಾದನಾ ಪ್ರಕ್ರಿಯೆಯ ಯಾವುದೇ ಹಂತದಲ್ಲಿ ಯಂತ್ರದ ಬಳಕೆ ಇದ್ದರೆ, ಕಾಯ್ದೆಯ ಅನುಸೂಚಿ IIರ ಟೇಬಲ್ 1ರ ಪ್ರಕಾರ ಯಂತ್ರಾಧಾರಿತ ದರಗಳಲ್ಲಿ ಉಪಕರವನ್ನು ಲೆಕ್ಕಹಾಕಲಾಗುತ್ತದೆ. ಉತ್ಪಾದನೆಯ ಯಾವುದೇ ಹಂತದಲ್ಲಿ ಸಹಾಯ ಮಾಡುವ ಅಥವಾ ಪೂರ್ಣಗೊಳಿಸುವ ಯಾವುದೇ ಯಂತ್ರವು ಕಾರ್ಖಾನೆಯಲ್ಲಿ ಇಲ್ಲದಿದ್ದರೆ ಮಾತ್ರ ಅದನ್ನು "ಸಂಪೂರ್ಣ ಹಸ್ತಚಾಲಿತ" ಪ್ರಕ್ರಿಯೆ ಎಂದು ಪರಿಗಣಿಸಲಾಗುತ್ತದೆ. ಅಂತಹ ಸಂದರ್ಭದಲ್ಲಿ ಕಾಯ್ದೆಯ ಅನುಸೂಚಿ IIರ ಟೇಬಲ್ 2ರ ಪ್ರಕಾರ ಉಪಕರವನ್ನು (ತಿಂಗಳಿಗೆ ₹ 11 ಲಕ್ಷ) ಪಾವತಿಸಬೇಕಾಗುತ್ತದೆ.

ಪ್ರಶ್ನೆ 31: ನಾನು ಮಾರ್ಚ್ 2026 ರಲ್ಲಿ (ನಿಯಮಗಳು ಜಾರಿಗೆ ಬಂದ ನಂತರ) ಹೊಸ ಪಾನ್ ಮಸಾಲಾ ತಯಾರಿಕಾ ಘಟಕವನ್ನು ಪ್ರಾರಂಭಿಸಲು ಯೋಜಿಸುತ್ತಿದ್ದೇನೆ. ನಾನು ತಿಂಗಳ 10ನೇ ದಿನಾಂಕದಂದು ಯಂತ್ರಗಳನ್ನು ಅಳವಡಿಸಿ ಉತ್ಪಾದನೆಯನ್ನು ಪ್ರಾರಂಭಿಸಿದರೆ, ಇಡೀ ತಿಂಗಳ ಉಪಕರವನ್ನು ಪಾವತಿಸಬೇಕೇ?

ಉತ್ತರ: ಇಲ್ಲ. ಎಚ್‌ ಎಸ್‌ ಎನ್‌ ಎಸ್ ನಿಯಮಗಳ ನಿಯಮ 12ರ ನಿಬಂಧನೆಯ ಪ್ರಕಾರ, ಹೊಸದಾಗಿ ನೋಂದಾಯಿತ ವ್ಯಕ್ತಿಯು ತಿಂಗಳ ಮಧ್ಯದಲ್ಲಿ ಯಂತ್ರಗಳನ್ನು ಅಳವಡಿಸಿದರೆ, ಆ ನಿರ್ದಿಷ್ಟ ತಿಂಗಳ ಉಪಕರವನ್ನು ಪ್ರಮಾಣಾನುಗುಣವಾಗಿ (pro-rata basis) ಲೆಕ್ಕಹಾಕಲಾಗುತ್ತದೆ. ಯಂತ್ರವನ್ನು ಅಳವಡಿಸಿದ ದಿನಾಂಕದಿಂದ ಅಥವಾ ಹಸ್ತಚಾಲಿತ ಘಟಕ ಪ್ರಾರಂಭವಾದ ದಿನಾಂಕದಿಂದ ಆ ತಿಂಗಳ ಉಳಿದ ದಿನಗಳಿಗೆ ಮಾತ್ರ ನೀವು ಉಪಕರವನ್ನು ಪಾವತಿಸಬೇಕಾಗುತ್ತದೆ. ಅಲ್ಲದೆ, ಈ ಪ್ರಮಾಣಾನುಗುಣವಾದ ಉಪಕರದ ಮೊತ್ತವನ್ನು ಅಳವಡಿಕೆಯಾದ ಅಥವಾ ಪ್ರಾರಂಭವಾದ 5 ದಿನಗಳೊಳಗೆ ಪಾವತಿಸುವುದು ಕಡ್ಡಾಯವಾಗಿದೆ.

ಉದಾಹರಣೆ: ನೀವು ಹೊಸ ಘಟಕವನ್ನು ಪ್ರಾರಂಭಿಸಿ 16 ಸೆಪ್ಟೆಂಬರ್ ರಂದು ಯಂತ್ರಗಳನ್ನು ಅಳವಡಿಸಿದರೆ, ನೀವು ಸೆಪ್ಟೆಂಬರ್ ತಿಂಗಳ ಉಳಿದ 15 ದಿನಗಳಿಗೆ (16 ರಿಂದ 30 ಸೆಪ್ಟೆಂಬರ್) ಮಾತ್ರ ಪ್ರಮಾಣಾನುಗುಣವಾಗಿ ಉಪಕರವನ್ನು 21 ಸೆಪ್ಟೆಂಬರ್ ರೊಳಗೆ ಪಾವತಿಸಬೇಕಾಗುತ್ತದೆ.‌

ಪ್ರಶ್ನೆ 32: ಯಂತ್ರಗಳ ಪರಿಶೀಲನೆಯನ್ನು ಎಷ್ಟು ಬಾರಿ ಅಥವಾ ಯಾವಾಗ ನಡೆಸಲಾಗುತ್ತದೆ?

ಉತ್ತರ: FORM HSNS DEC-01 ರಲ್ಲಿ ನೀವು ಆರಂಭಿಕ ಘೋಷಣೆಯನ್ನು ಸಲ್ಲಿಸಿದ 90 ದಿನಗಳೊಳಗೆ ಸಂಬಂಧಪಟ್ಟ ಅಧಿಕಾರಿಯು ನಿಮ್ಮ ಕಾರ್ಖಾನೆ ಮತ್ತು ಯಂತ್ರಗಳ ಭೌತಿಕ ಪರಿಶೀಲನೆಯನ್ನು ನಡೆಸುತ್ತಾರೆ. ಉಪಕರದ ಲೆಕ್ಕಾಚಾರಕ್ಕೆ ಸಂಬಂಧಿಸಿದ ಯಾವುದೇ ನಿಯತಾಂಕಗಳಲ್ಲಿ (ಹೊಸ ಯಂತ್ರದ ಸೇರ್ಪಡೆ ಅಥವಾ ಅಳವಡಿಕೆ, ಯಂತ್ರದ ಗರಿಷ್ಠ ವೇಗ ಅಥವಾ ನಿರ್ದಿಷ್ಟಪಡಿಸಿದ ಸರಕುಗಳ ತೂಕ) ಬದಲಾವಣೆಯಾದಲ್ಲಿ, ಅಂತಹ ಬದಲಾವಣೆ ನಡೆದ 15 ದಿನಗಳೊಳಗೆ ಹೊಸ ಘೋಷಣೆಯನ್ನು ಸಲ್ಲಿಸುವುದು ಕಡ್ಡಾಯವಾಗಿದೆ. ಈ ರೀತಿ ಸಲ್ಲಿಸಲಾದ ಹೊಸ ಘೋಷಣೆಗಳನ್ನು ಸಹ ಅವುಗಳನ್ನು ಸಲ್ಲಿಸಿದ 90 ದಿನಗಳೊಳಗೆ ಪರಿಶೀಲಿಸಲಾಗುತ್ತದೆ.

 

CLICK HERE TO ACCESS THE NOTIFICATION

 

*****


(रिलीज़ आईडी: 2210851) आगंतुक पटल : 12
इस विज्ञप्ति को इन भाषाओं में पढ़ें: English , Gujarati , Urdu , Marathi , हिन्दी , Punjabi , Odia