ರೈಲ್ವೇ ಸಚಿವಾಲಯ
ಮುಂಬೈ-ಅಹಮದಾಬಾದ್ ಬುಲೆಟ್ ರೈಲು ಯೋಜನೆ: ಮಹಾರಾಷ್ಟ್ರದ ಪಾಲ್ಘರ್ ನಲ್ಲಿ ಮೊದಲ ಪರ್ವತ ಸುರಂಗ ಕೊರೆಯುವಿಕೆಯಲ್ಲಿ ಯಶಸ್ಸು ಸಾಧಿಸಲಾಗಿದೆ: ಶ್ರೀ ಅಶ್ವಿನಿ ವೈಷ್ಣವ್
ಬುಲೆಟ್ ರೈಲು ಮಧ್ಯಮ ವರ್ಗದವರಿಗೆ ಕೈಗೆಟುಕುವ ದರದ ಪ್ರಯಾಣವನ್ನು ಒದಗಿಸಲಿದೆ: ಶ್ರೀ ಅಶ್ವಿನಿ ವೈಷ್ಣವ್
ಮುಂಬೈ-ಅಹಮದಾಬಾದ್ ಹೈಸ್ಪೀಡ್ ರೈಲು ಯೋಜನೆಯು ಕಾರಿಡಾರ್ ಉದ್ದಕ್ಕೂ ಆರ್ಥಿಕ ಚಟುವಟಿಕೆಗಳಿಗೆ ಉತ್ತೇಜನ ನೀಡಲಿದೆ ಮತ್ತು ಉದ್ಯೋಗ ಸೃಷ್ಟಿ ಮಾಡಲಿದೆ
ಬುಲೆಟ್ ರೈಲಿನಲ್ಲಿ ಮುಂಬೈ-ಅಹಮದಾಬಾದ್ ಪ್ರಯಾಣವು ಕೇವಲ 1 ಗಂಟೆ 58 ನಿಮಿಷಗಳನ್ನು ತೆಗೆದುಕೊಳ್ಳುತ್ತದೆ
प्रविष्टि तिथि:
02 JAN 2026 3:24PM by PIB Bengaluru
ಮಹಾರಾಷ್ಟ್ರದ ಪಾಲ್ಘರ್ ನಲ್ಲಿ ಎರಡನೇ ಸುರಂಗದ ಕೊರೆಯುವಿಕೆಯ ಯಶಸ್ಸಿನೊಂದಿಗೆ ಬುಲೆಟ್ ರೈಲು ಯೋಜನೆಯಲ್ಲಿ ಮಹತ್ವದ ಮೈಲಿಗಲ್ಲು ದಾಖಲಾಗಿದೆ ಎಂದು ಕೇಂದ್ರ ರೈಲ್ವೆ, ವಾರ್ತಾ ಮತ್ತು ಪ್ರಸಾರ ಹಾಗೂ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್ ಘೋಷಿಸಿದ್ದಾರೆ. ಇದು ರಾಜ್ಯದ ಯೋಜನೆಯ ಮೊದಲ ಪರ್ವತ ಸುರಂಗವಾಗಿದೆ. ವಿರಾರ್ ಮತ್ತು ಬೋಯಿಸರ್ ಬುಲೆಟ್ ರೈಲು ನಿಲ್ದಾಣಗಳ ನಡುವೆ ಇರುವ, ಪಾಲ್ಘರ್ ಜಿಲ್ಲೆಯ ಅತ್ಯಂತ ಉದ್ದದ ಪರ್ವತ ಸುರಂಗಗಳಲ್ಲಿ ಒಂದಾದ ಸುಮಾರು 1.5 ಕಿ.ಮೀ ಉದ್ದದ ಸುರಂಗದಲ್ಲಿ (ಎಮ್ ಟಿ-5) ಈ ಯಶಸ್ಸು ಸಾಧಿಸಲಾಗಿದೆ.
ಎಮ್ ಟಿ-5 ಸುರಂಗವನ್ನು ಎರಡೂ ತುದಿಗಳಿಂದ ಕೊರೆಯಲಾಗಿದ್ದು, ಅತ್ಯಾಧುನಿಕ 'ಡ್ರಿಲ್ ಮತ್ತು ಬ್ಲಾಸ್ಟ್' (ಕೊರೆಯುವ ಮತ್ತು ಸ್ಫೋಟಿಸುವ) ವಿಧಾನವನ್ನು ಬಳಸಿಕೊಂಡು 18 ತಿಂಗಳೊಳಗೆ ಕಾಮಗಾರಿಯನ್ನು ಪೂರ್ಣಗೊಳಿಸಲಾಗಿದೆ. ಈ ವಿಧಾನವು ಸುರಂಗ ಕೊರೆಯುವ ಸಮಯದಲ್ಲಿ ಭೂಮಿಯ ವರ್ತನೆಯನ್ನು ನೈಜ ಸಮಯದಲ್ಲಿ ಮೇಲ್ವಿಚಾರಣೆ ಮಾಡಲು ಅನುವು ಮಾಡಿಕೊಡುತ್ತದೆ ಮತ್ತು ವಾಸ್ತವಿಕ ಪರಿಸ್ಥಿತಿಗೆ ಅನುಗುಣವಾಗಿ ಶಾಟ್ ಕ್ರೀಟ್, ರಾಕ್ ಬೋಲ್ಟ್ ಮತ್ತು ಲ್ಯಾಟಿಸ್ ಗಿರ್ಡರ್ ಗಳಂತಹ ಬೆಂಬಲ ವ್ಯವಸ್ಥೆಗಳನ್ನು ಅಳವಡಿಸಲು ಸಹಕರಿಸುತ್ತದೆ. ಸುರಂಗ ನಿರ್ಮಾಣದ ಉದ್ದಕ್ಕೂ ವಾತಾಯನ, ಅಗ್ನಿಶಾಮಕ ಕ್ರಮಗಳು ಮತ್ತು ಸರಿಯಾದ ಪ್ರವೇಶ ಹಾಗೂ ನಿರ್ಗಮನದ ವ್ಯವಸ್ಥೆಗಳು ಸೇರಿದಂತೆ ಎಲ್ಲಾ ಅಗತ್ಯ ಸುರಕ್ಷತಾ ಮುನ್ನೆಚ್ಚರಿಕೆಗಳನ್ನು ನಿಖರವಾಗಿ ಅನುಸರಿಸಲಾಗಿದೆ.


ಇದಕ್ಕೂ ಮೊದಲು, ಸೆಪ್ಟೆಂಬರ್ 2025 ರಲ್ಲಿ ಥಾಣೆ ಮತ್ತು ಬಿಕೆಸಿ ನಡುವಿನ ಸುಮಾರು 5 ಕಿ.ಮೀ ಉದ್ದದ ಮೊದಲ ಭೂಗತ ಸುರಂಗವನ್ನು ಪೂರ್ಣಗೊಳಿಸಲಾಗಿತ್ತು. ಮುಂಬೈ-ಅಹಮದಾಬಾದ್ ಹೈಸ್ಪೀಡ್ ರೈಲು (MAHSR) ಯೋಜನೆಯು ಒಟ್ಟು 508 ಕಿ.ಮೀ ಉದ್ದವನ್ನು ಹೊಂದಿದ್ದು, ಒಟ್ಟಾರೆ 27.4 ಕಿ.ಮೀ ಸುರಂಗ ಮಾರ್ಗವನ್ನು ಒಳಗೊಂಡಿದೆ. ಇದರಲ್ಲಿ 21 ಕಿ.ಮೀ ಭೂಗತ ಸುರಂಗಗಳು ಮತ್ತು 6.4 ಕಿ.ಮೀ ಮೇಲ್ಮೈ ಸುರಂಗಗಳಾಗಿವೆ. ಯೋಜನೆಯು ಒಟ್ಟು ಎಂಟು ಪರ್ವತ ಸುರಂಗಗಳನ್ನು ಒಳಗೊಂಡಿದ್ದು, ಮಹಾರಾಷ್ಟ್ರದಲ್ಲಿ ಸುಮಾರು 6.05 ಕಿ.ಮೀ ಒಟ್ಟು ಉದ್ದದ ಏಳು ಸುರಂಗಗಳು ಮತ್ತು ಗುಜರಾತಿನಲ್ಲಿ 350 ಮೀಟರ್ ಉದ್ದದ ಒಂದು ಸುರಂಗವಿದೆ.
ಬುಲೆಟ್ ರೈಲು ಯೋಜನೆಯು ಗಣನೀಯ ಪ್ರಮಾಣದ ಉದ್ಯೋಗವನ್ನು ಸೃಷ್ಟಿಸುತ್ತಿದೆ ಮತ್ತು ಕಾರ್ಯಾಚರಣೆಯ ಸಮಯದಲ್ಲಿ ಹೆಚ್ಚುವರಿ ಅವಕಾಶಗಳನ್ನು ಒದಗಿಸಲಿದೆ ಎಂದು ಕೇಂದ್ರ ಸಚಿವರು ತಿಳಿಸಿದರು. ಯೋಜನೆಯು ಪೂರ್ಣಗೊಂಡ ನಂತರ, ಮುಂಬೈ ಮತ್ತು ಅಹಮದಾಬಾದ್ ನಡುವಿನ ಪ್ರಯಾಣದ ಸಮಯವನ್ನು ಕೇವಲ 1 ಗಂಟೆ 58 ನಿಮಿಷಗಳಿಗೆ ಕಡಿತಗೊಳಿಸಲಿದೆ, ಇದು ಪ್ರಮುಖ ವಾಣಿಜ್ಯ ಕೇಂದ್ರಗಳ ಆರ್ಥಿಕತೆಯನ್ನು ಪರಸ್ಪರ ಜೋಡಿಸುತ್ತದೆ ಮತ್ತು ಸಂಯೋಜಿಸುತ್ತದೆ ಎಂದರು.

ಈ ಯೋಜನೆಯು ಕಾರಿಡಾರ್ ಉದ್ದಕ್ಕೂ ಆರ್ಥಿಕ ಚಟುವಟಿಕೆಗಳನ್ನು ಉತ್ತೇಜಿಸುವ, ಜ್ಞಾನ ವರ್ಗಾವಣೆಗೆ ಅನುವು ಮಾಡಿಕೊಡುವ ಮತ್ತು ಹೊಸ ಕೈಗಾರಿಕಾ ಹಾಗೂ ಐಟಿ ಹಬ್ ಗಳ ಅಭಿವೃದ್ಧಿಗೆ ಬೆಂಬಲ ನೀಡುವ ನಿರೀಕ್ಷೆಯಿದೆ. ಇದು ದೀರ್ಘಕಾಲದ ಆರ್ಥಿಕ ಲಾಭಗಳನ್ನು ತರುವುದಲ್ಲದೆ, ಆರಾಮದಾಯಕ ಮತ್ತು ಕೈಗೆಟುಕುವ ದರದ ಪ್ರಯಾಣವನ್ನು ಒದಗಿಸುವ ಮೂಲಕ ಮಧ್ಯಮ ವರ್ಗದವರ ಆಕಾಂಕ್ಷೆಗಳನ್ನು ಈಡೇರಿಸಲಿದೆ ಎಂದು ಕೇಂದ್ರ ಸಚಿವರು ಹೇಳಿದರು.
ಯೋಜನೆಯು ಪೂರ್ಣಗೊಂಡ ನಂತರ, ರಸ್ತೆ ಸಾರಿಗೆಗೆ ಹೋಲಿಸಿದರೆ ಇಂಗಾಲದ ಡೈಆಕ್ಸೈಡ್ (CO2) ಹೊರಸೂಸುವಿಕೆಯಲ್ಲಿ ಸುಮಾರು 95 ಪ್ರತಿಶತದಷ್ಟು ಕಡಿತಕ್ಕೆ ಕಾರಣವಾಗಲಿದೆ ಎಂದು ಕೇಂದ್ರ ಸಚಿವರು ಹೇಳಿದರು.
ಮಹಾರಾಷ್ಟ್ರದ ಏಳು ಪರ್ವತ ಸುರಂಗಗಳ (ಎಮ್ ಟಿ) ಕಾಮಗಾರಿ ಪ್ರಗತಿಯಲ್ಲಿದೆ. 820 ಮೀಟರ್ ಉದ್ದದ ಎಮ್ ಟಿ-1 ಸುರಂಗವು ಶೇಕಡಾ 15 ರಷ್ಟು ಭೌತಿಕ ಪ್ರಗತಿಯನ್ನು ಸಾಧಿಸಿದ್ದರೆ, 228 ಮೀಟರ್ ಉದ್ದದ ಎಮ್ ಟಿ-2 ಸುರಂಗದಲ್ಲಿ ಸದ್ಯ ಪೂರ್ವಸಿದ್ಧತಾ ಕಾರ್ಯಗಳು ನಡೆಯುತ್ತಿವೆ. 1,403 ಮೀಟರ್ ಉದ್ದದ ಎಮ್ ಟಿ-3 ಸುರಂಗವು ಶೇಕಡಾ 35.5 ರಷ್ಟು ಪೂರ್ಣಗೊಂಡಿದೆ ಮತ್ತು 1,260 ಮೀಟರ್ ಉದ್ದದ ಎಮ್ ಟಿ-4 ಸುರಂಗವು ಶೇಕಡಾ 31 ರಷ್ಟು ಪ್ರಗತಿಯನ್ನು ದಾಖಲಿಸಿದೆ. ಪರ್ವತ ಸುರಂಗಗಳಲ್ಲೇ ಅತ್ಯಂತ ಉದ್ದವಾದ 1,480 ಮೀಟರ್ (~1.5 ಕಿ.ಮೀ) ಉದ್ದದ ಎಮ್ ಟಿ-5 ಸುರಂಗವು ಶೇಕಡಾ 55 ರಷ್ಟು ಪೂರ್ಣಗೊಂಡಿದ್ದು, 2 ಜನವರಿ 2026 ರಂದು ಅದರ ಪ್ರಗತಿ ಸಾಧಿಸಲಾಗಿದೆ. 454 ಮೀಟರ್ ಉದ್ದದ ಎಮ್ ಟಿ-6 ಶೇಕಡಾ 35 ರಷ್ಟು ಪ್ರಗತಿ ಕಂಡಿದ್ದರೆ, 417 ಮೀಟರ್ ಉದ್ದದ ಎಮ್ ಟಿ-7 ಸುರಂಗವು ಶೇಕಡಾ 28 ರಷ್ಟು ಪ್ರಗತಿಯನ್ನು ಸಾಧಿಸಿದೆ. ಇದರೊಂದಿಗೆ ಮಹಾರಾಷ್ಟ್ರದ ಪರ್ವತ ಸುರಂಗಗಳ ಒಟ್ಟು ಉದ್ದ ಸುಮಾರು 6 ಕಿ.ಮೀ ತಲುಪಿದೆ.
ಮುಂಬೈ-ಅಹಮದಾಬಾದ್ ಹೈಸ್ಪೀಡ್ ರೈಲು (MAHSR) ಯೋಜನೆಯು ಸುಮಾರು 508 ಕಿಲೋಮೀಟರ್ ಗಳಷ್ಟು ವ್ಯಾಪಿಸಿದ್ದು, ಗುಜರಾತ್ ಹಾಗೂ ದಾದ್ರಾ ಮತ್ತು ನಗರ ಹವೇಲಿಯಲ್ಲಿ 352 ಕಿ.ಮೀ ಮತ್ತು ಮಹಾರಾಷ್ಟ್ರದಲ್ಲಿ 156 ಕಿ.ಮೀ ಪ್ರದೇಶವನ್ನು ಒಳಗೊಂಡಿದೆ. ಈ ಕಾರಿಡಾರ್ ಸಾಬರಮತಿ, ಅಹಮದಾಬಾದ್, ಆನಂದ್, ವಡೋದರಾ, ಭರೂಚ್, ಸೂರತ್, ಬಿಲಿಮೋರಾ, ವಾಪಿ, ಬೋಯಿಸರ್, ವಿರಾರ್, ಥಾಣೆ ಮತ್ತು ಮುಂಬೈ ಸೇರಿದಂತೆ ಪ್ರಮುಖ ನಗರಗಳನ್ನು ಸಂಪರ್ಕಿಸಲಿದ್ದು, ಭಾರತದ ಸಾರಿಗೆ ಮೂಲಸೌಕರ್ಯದಲ್ಲಿ ಇದೊಂದು ಪರಿವರ್ತಕ ಹೆಜ್ಜೆಯಾಗಿದೆ.
*****
(रिलीज़ आईडी: 2210811)
आगंतुक पटल : 29