ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಭಗವಾನ್ ಬುದ್ಧನಿಗೆ ಸಂಬಂಧಿಸಿದ ಪವಿತ್ರ ಪಿಪ್ರಹ್ವಾ ಅವಶೇಷಗಳ ಭವ್ಯ ಅಂತಾರಾಷ್ಟ್ರೀಯ ಪ್ರದರ್ಶನ ಜನವರಿ 3 ರಂದು ಪ್ರಧಾನಮಂತ್ರಿ ಅವರಿಂದ ಉದ್ಘಾಟನೆ


ಪಿಪ್ರಹ್ವಾ ಅವಶೇಷಗಳು ಭಗವಾನ್ ಬುದ್ಧನಿಗೆ ನೇರವಾಗಿ ಸಂಬಂಧಿಸಿದ ಅತ್ಯಂತ ಪ್ರಾಚೀನ ಮತ್ತು ಐತಿಹಾಸಿಕ ಮಹತ್ವದ ಅವಶೇಷ 

“ದಿ ಲೈಟ್ & ದಿ ಲೋಟಸ್: ರೆಲಿಕ್ಸ್ ಆಫ್ ದಿ ಅವೇಕನ್ಡ್ ಒನ್" (“ಬೆಳಕು ಮತ್ತು ಕಮಲ (ಆಧ್ಯಾತ್ಮಿಕ ಸಂಕೇತ) : ಆತ್ಮ ಸಾಕ್ಷಾತ್ಕಾರದ ವ್ಯಕ್ತಿಯ ಅವಶೇಷ”) ಎಂಬ ಶೀರ್ಷಿಕೆಯ ಪ್ರದರ್ಶನದಲ್ಲಿ ಭಗವಾನ್ ಬುದ್ಧನ ಜೀವದ ಗಹನ ವಿಚಾರಗಳ ಪ್ರದರ್ಶನ

ಭಾರತದ ಅಮರ ಬೌದ್ಧ ಪರಂಪರೆಯ ಪ್ರದರ್ಶನ

ತವರಿಗೆ ಮರಳಿ ತಂದಿರುವ ಶತಮಾನಕ್ಕೂ ಹೆಚ್ಚಿನ ಪುರಾತನ ಪಿಪ್ರಾಹ್ವಾ ಮತ್ತು ಸಂರಕ್ಷಿತ  ಪುರಾತತ್ವ ಅವಶೇಷಗಳ ಸಂಪತ್ತು ಸಂಯೋಜಿಸಿರುವ ಪ್ರದರ್ಶನ

प्रविष्टि तिथि: 01 JAN 2026 5:39PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2026ರ ಜನವರಿ 3 ರಂದು ಬೆಳಗ್ಗೆ 11 ಗಂಟೆಗೆ ನವದೆಹಲಿಯ ರಾಯ್ ಪಿಥೋರಾ ಸಾಂಸ್ಕೃತಿಕ ಸಂಕೀರ್ಣದಲ್ಲಿ ಆಧ್ಯಾತ್ಮಿಕ ಶುದ್ಧತೆ ಮತ್ತು ಪರಿಪೂರ್ಣತೆ ಸಾರುವ “ದಿ ಲೈಟ್ & ದಿ ಲೋಟಸ್: ರೆಲಿಕ್ಸ್ ಆಫ್ ದಿ ಅವೇಕನ್ಡ್ ಒನ್" (“ಬೆಳಕು ಮತ್ತು ಕಮಲ (ಆಧ್ಯಾತ್ಮಿಕ ಸಂಕೇತ): ಜ್ಞಾನೋದಯ ವ್ಯಕ್ತಿಯ ಅವಶೇಷ”) ಎಂಬ ಶೀರ್ಷಿಕೆಯಡಿಯಲ್ಲಿ ಭಗವಾನ್ ಬುದ್ಧನಿಗೆ ಸಂಬಂಧಿಸಿದ ಪವಿತ್ರ ಪಿಪ್ರಹ್ವಾ ಅವಶೇಷಗಳ ಭವ್ಯ ಅಂತಾರಾಷ್ಟ್ರೀಯ ಪ್ರದರ್ಶನವನ್ನು ಉದ್ಘಾಟಿಸಲಿದ್ದಾರೆ.

ನವದೆಹಲಿಯ ರಾಷ್ಟ್ರೀಯ ವಸ್ತುಸಂಗ್ರಹಾಲಯ ಮತ್ತು ಕೋಲ್ಕತ್ತಾದ ಭಾರತೀಯ ವಸ್ತುಸಂಗ್ರಹಾಲಯಗಳಲ್ಲಿ ಸಂರಕ್ಷಿಸಲಾಗಿರುವ ಒಂದು ಶತಮಾನಕ್ಕೂ ಹೆಚ್ಚು ಅವಧಿಯ ನಂತರ ಸ್ವದೇಶಕ್ಕೆ ಮರಳಿ ತರಲಾದ ಪಿಪ್ರಹ್ವಾದ ಅಧಿಕೃತ ಅವಶೇಷಗಳು ಮತ್ತು ಪುರಾತತ್ತ್ವ ಶಾಸ್ತ್ರದ ವಸ್ತುಗಳನ್ನು ಇದೇ ಮೊದಲ ಬಾರಿಗೆ ಇಲ್ಲಿ ಪ್ರದರ್ಶಿಸಲಾಗುವುದು.

ಆರಂಭಿಕ ಬೌದ್ಧಧರ್ಮದ ಪುರಾತತ್ತ್ವ ಶಾಸ್ತ್ರದ ಅಧ್ಯಯನದಲ್ಲಿ 1898 ರಲ್ಲಿ ಪತ್ತೆಯಾದ ಪಿಪ್ರಾಹ್ವಾ ಅವಶೇಷಗಳು ಪ್ರಮುಖ ಸ್ಥಾನವನ್ನು ಹೊಂದಿವೆ. ಇವು ಭಗವಾನ್ ಬುದ್ಧನಿಗೆ ನೇರವಾಗಿ ಸಂಬಂಧಿಸಿದ ಆರಂಭಿಕ ಮತ್ತು ಅತ್ಯಂತ ಐತಿಹಾಸಿಕ ಮಹತ್ವದ ಅವಶೇಷ ನಿಕ್ಷೇಪಗಳ ಪೈಕಿ ಸೇರಿವೆ. ಭಗವಾನ್ ಬುದ್ಧನು ಅರಮನೆ ತ್ಯಜಿಸುವ ಮೊದಲು ತನ್ನ ಆರಂಭಿಕ ಜೀವನವನ್ನು ಕಳೆದ ಸ್ಥಳ ಎಂದು ವ್ಯಾಪಕವಾಗಿ ಗುರುತಿಸಲಾದ ಕಪಿಲವಸ್ತುವಿನೊಂದಿಗೆ ಪ್ರಾಚೀನ ಪಿಪ್ರಾಹ್ವಾಗಳನ್ನು ಪುರಾತತ್ತ್ವ ಶಾಸ್ತ್ರದ ಪುರಾವೆಗಳು ಸಂಯೋಜಿಸುತ್ತವೆ.

ಈ ಪ್ರದರ್ಶನವು ಭಗವಾನ್ ಬುದ್ಧನ ಬೋಧನೆಗಳೊಂದಿಗೆ ಭಾರತದ ಆಳವಾದ ಮತ್ತು ಮುಂದುವರಿದ ನಾಗರಿಕತೆಯ ಸಂಬಂಧವನ್ನು ಸಾರಲಿದೆ ಹಾಗೂ ಭಾರತದ ಶ್ರೀಮಂತ ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಸಂರಕ್ಷಿಸುವ ಪ್ರಧಾನಮಂತ್ರಿಯವರ ಬದ್ಧತೆಯ ಪ್ರತಿಬಿಂಬವಾಗಿದೆ. ಸರ್ಕಾರದ ನಿರಂತರ ಪ್ರಯತ್ನ, ಸಾಂಸ್ಥಿಕ ಸಹಕಾರ ಮತ್ತು ನವೀನ ಸಾರ್ವಜನಿಕ-ಖಾಸಗಿ ಸಹಭಾಗಿತ್ವದ ಮೂಲಕ ಇತ್ತೀಚೆಗೆ ಈ ಅವಶೇಷಗಳನ್ನು ತವರಿಗೆ ಮರಳಿ ತರಲು ಸಾಧ್ಯವಾಗಿದೆ.

ಈ ಪ್ರದರ್ಶನವನ್ನು ವಿಷಯಾಧಾರಿತವಾಗಿ ಆಯೋಜಿಸಲಾಗಿದೆ. ಸಾಂಚಿ ಸ್ತೂಪದಿಂದ ಪ್ರೇರಣೆ ಪಡೆದು ಪುನರ್ ನಿರ್ಮಿಸಲಾದ ಹಾಗೂ ರಾಷ್ಟ್ರೀಯ ಸಂಗ್ರಹಗಳಿಂದ ಅಧಿಕೃತ ಅವಶೇಷಗಳು ಮತ್ತು ಸ್ವದೇಶಕ್ಕೆ ಮರಳಿ ತಂದ ರತ್ನಗಳನ್ನು ಒಟ್ಟುಗೂಡಿಸಿದ ನಿರೂಪಣಾ ಮಾದರಿಯನ್ನು ಪ್ರದರ್ಶನದ ಮಧ್ಯಭಾಗದಲ್ಲಿ  ನೋಡಬಹುದು. ಪಿಪ್ರಾಹ್ವಾ ರಿವಿಸಿಟೆಡ್ (ಮರಳಿ ತಂದ ಅವಶೇಷ), ವಿಗ್ನೆಟ್ಸ್ ಆಫ್ ದಿ ಲೈಫ್ ಆಫ್ ಬುದ್ಧ (ಬುದ್ಧನ ಜೀವನ ಪಯಣ), ಇಂಟ್ಯಾಂಜಿಬಲ್ ಇನ್ ದಿ ಟಾಂಜಿಬಲ್: ದಿ ಏಸ್ಥೆಟಿಕ್ ಲ್ಯಾಂಗ್ವೇಜ್ ಆಫ್ ಬುದ್ದಿಸ್ಟ್ ಟೀಚಿಂಗ್ಸ್ (ಅಮೂರ್ತದಲ್ಲಿ ವಾಸ್ತವ: ಬುದ್ಧನ ಬೋಧನೆಗಳ ಸೌಂದರ್ಯ), ಎಕ್ಸ್‌ಪ್ಯಾನ್ಶನ್ ಆಫ್ ಬುದ್ಧಿಸ್ಟ್ ಆರ್ಟ್ ಅಂಡ್ ಐಡಿಯಲ್ಸ್ ಬಿಯಾಂಡ್ ಬಾರ್ಡರ್ಸ್ (ಎಲ್ಲೆ ಮೀರಿ ಬೌದ್ಧ ಕಲೆ ಮತ್ತು ಆದರ್ಶಗಳ ವಿಸ್ತರಣೆ) ಹಾಗೂ ರಿಪ್ಯಾಟ್ರಿಯೇಶನ್ ಆಫ್ ಕಲ್ಚರಲ್ ಆರ್ಟೆಫ್ಯಾಕ್ಟ್ಸ್: ದಿ ಕಂಟಿನ್ಯೂಯಿಂಗ್ ಎಂಡೀವರ್ (ಸಾಂಸ್ಕೃತಿಕ ಕರಕುಶಲತಾ ವಸ್ತುಗಳು ತವರಿಗೆ ವಾಪಸ್ – ಮುಂದುವರಿದ ಪ್ರಯತ್ನ) ಇತರ ವಿಭಾಗಗಳಾಗಿವೆ.

ಸಾರ್ವಜನಿಕ ಅರ್ಥೈಸುವಿಕೆಯನ್ನು ಹೆಚ್ಚಿಸಲು, ಈ ಪ್ರದರ್ಶನದಲ್ಲಿ ಸಮಗ್ರ ಶ್ರವ್ಯ-ದೃಶ್ಯ ವಿವರಣೆಯೂ ಇದೆ. ಜೊತೆಗೆ ತಲ್ಲೀನಗೊಳಿಸುವ ಚಲನಚಿತ್ರಗಳು, ಡಿಜಿಟಲ್ ಪುನರ್ ನಿರ್ಮಾಣಗಳು, ವ್ಯಾಖ್ಯಾನಾತ್ಮಕ ಪ್ರಸ್ತುತಿಗಳು ಮತ್ತು ಮಲ್ಟಿಮೀಡಿಯಾ ಪ್ರಸ್ತುತಿಗಳು ಸೇರಿವೆ. ಇವು ಭಗವಾನ್ ಬುದ್ಧನ ಜೀವನ, ಪಿಪ್ರಾಹ್ವಾ ಅವಶೇಷಗಳ ಆವಿಷ್ಕಾರ, ವಿವಿಧ ಪ್ರದೇಶಗಳಲ್ಲಿ ಅವುಗಳ ಚಲನೆ ಮತ್ತು ಅವುಗಳಿಗೆ ಸಂಬಂಧಿಸಿದ ಕಲಾತ್ಮಕ ಸಂಪ್ರದಾಯಗಳ ಬಗ್ಗೆ ಆಳವಾದ ಮಾಹಿತಿಯನ್ನು ಒದಗಿಸುತ್ತವೆ.

 

*****


(रिलीज़ आईडी: 2210638) आगंतुक पटल : 4
इस विज्ञप्ति को इन भाषाओं में पढ़ें: English , Urdu , Marathi , हिन्दी , Gujarati , Tamil , Telugu , Malayalam