ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ
ವರ್ಷಾಂತ್ಯದ ಪರಾಮರ್ಶೆ 2025: ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ
ಉಜ್ವಲ ಯೋಜನೆಯ ವಿಸ್ತರಣೆ ಮುಂದುವರಿಕೆ: ದೇಶಾದ್ಯಂತ ಶುದ್ಧ ಅಡುಗೆ ಇಂಧನದ ಲಭ್ಯತೆಯನ್ನು ಖಚಿತಪಡಿಸಲಾಗುತ್ತಿದೆ
ಗ್ರಾಹಕ ಸುರಕ್ಷತೆ ರಾಷ್ಟ್ರವ್ಯಾಪಿ ಹಮ್ಮಿಕೊಂಡ 'ಮೂಲಭೂತ ಸುರಕ್ಷತಾ ತಪಾಸಣೆ' ಅಭಿಯಾನದ ಮೂಲಕ ಗ್ರಾಹಕರ ಸುರಕ್ಷತೆಯನ್ನು ಮತ್ತಷ್ಟು ಬಲಪಡಿಸಲಾಗಿದೆ
ಇಂಧನ ಚಿಲ್ಲರೆ ಮಾರಾಟ ಮೂಲಸೌಕರ್ಯ: ಡಿಜಿಟಲ್ ಪಾವತಿಗಳು, ಇವಿ ಚಾರ್ಜಿಂಗ್ ಮತ್ತು ವಿವಿಧ ರೀತಿಯ ಇಂಧನ ದೊರೆಯುವ ಇಂಧನ ಕೇಂದ್ರಗಳ ಸ್ಥಾಪನೆಯೊಂದಿಗೆ ವ್ಯವಸ್ಥೆಯನ್ನು ಬಲಪಡಿಸಲಾಗಿದೆ
ಅಪ್ನಾ ಘರ್ ಉಪಕ್ರಮವು ಲಾರಿ ಚಾಲಕರಿಗಾಗಿ ರಸ್ತೆಬದಿಯ ಸೌಲಭ್ಯಗಳನ್ನು ಉತ್ತಮಪಡಿಸುವುದು ಮತ್ತು ರಸ್ತೆ ಸುರಕ್ಷತೆಯನ್ನು ಹೆಚ್ಚಿಸುವ ಯೋಜನೆ
ಅನಿಲ ಪೈಪ್‌ಲೈನ್ ಜಾಲವು 25,400 ಕಿ.ಮೀ ಗಿಂತಲೂ ಹೆಚ್ಚಿನ ಉದ್ದದ ಅನಿಲ ಪೈಪ್‌ಲೈನ್ ಜಾಲವು 'ಒಂದು ರಾಷ್ಟ್ರ–ಒಂದು ಅನಿಲ ಗ್ರಿಡ್' ಗುರಿಯತ್ತ ಮುನ್ನಡೆಸುತ್ತಿದೆ
ತೈಲ ಉತ್ಪಾದನಾ ವಲಯದಲ್ಲಿ ಸುಧಾರಣೆ: 'ತೈಲಕ್ಷೇತ್ರಗಳ ತಿದ್ದುಪಡಿ ಕಾಯ್ದೆ' ಮತ್ತು 'ಪೆಟ್ರೋಲಿಯಂ ಹಾಗೂ ನೈಸರ್ಗಿಕ ಅನಿಲ ನಿಯಮಗಳ' ಮೂಲಕ ಅಪ್‌ಸ್ಟ್ರೀಮ್ (ತೈಲ ಪರಿಶೋಧನೆ ಮತ್ತು ಉತ್ಪಾದನೆ) ವಲಯದಲ್ಲಿ ಕ್ರಾಂತಿಕಾರಿ ಬದಲಾವಣೆಗಳನ್ನು ತರಲಾಗಿದೆ
प्रविष्टि तिथि:
26 DEC 2025 11:07AM by PIB Bengaluru
ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯವು ತೈಲ ಮತ್ತು ನೈಸರ್ಗಿಕ ಅನಿಲದ ಪರಿಶೋಧನೆ ಮತ್ತು ಉತ್ಪಾದನೆ, ಸಂಸ್ಕರಣೆ, ಪೆಟ್ರೋಲಿಯಂ ಉತ್ಪನ್ನಗಳ ವಿತರಣೆ ಮತ್ತು ಮಾರಾಟ, ಹಾಗೆಯೇ ಅವುಗಳ ಆಮದು, ರಫ್ತು ಮತ್ತು ಸಂರಕ್ಷಣೆಯ ಜವಾಬ್ದಾರಿಯನ್ನು ಹೊಂದಿದೆ. ಭಾರತದ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಗೆ ತೈಲ ಮತ್ತು ಅನಿಲವು ಇಂದಿಗೂ ನಿರ್ಣಾಯಕ ಅವಶ್ಯಕತೆಗಳಾಗಿವೆ. 2025 ರ ವರ್ಷದಲ್ಲಿ, ಕೈಗೆಟುಕುವ ದರದಲ್ಲಿ ಇಂಧನ ಲಭ್ಯತೆಯನ್ನು ಖಚಿತಪಡಿಸಲು, ದೇಶೀಯ ಉತ್ಪಾದನೆಯನ್ನು ಹೆಚ್ಚಿಸಲು, ಮೂಲಸೌಕರ್ಯವನ್ನು ಬಲಪಡಿಸಲು, ಸ್ವಚ್ಛ ಇಂಧನಗಳನ್ನು ಉತ್ತೇಜಿಸಲು ಮತ್ತು ರಾಷ್ಟ್ರೀಯ ಇಂಧನ ಭದ್ರತೆಯನ್ನು ಬಲಪಡಿಸಲು ಸಚಿವಾಲಯವು ಸಮಗ್ರ ಮತ್ತು ಬಹುಮುಖಿ ವಿಧಾನವನ್ನು ಅನುಸರಿಸಿದೆ. ಈ ಉಪಕ್ರಮಗಳು ಇಂಧನ ಲಭ್ಯತೆ, ಇಂಧನ ದಕ್ಷತೆ, ಇಂಧನ ಸುಸ್ಥಿರತೆ ಮತ್ತು ಇಂಧನ ಭದ್ರತೆ ಎಂಬ ರಾಷ್ಟ್ರೀಯ ಆದ್ಯತೆಗಳಿಗೆ ಅನುಗುಣವಾಗಿವೆ.
ಶುದ್ಧ ಅಡುಗೆ ಇಂಧನದ ಸಾರ್ವತ್ರಿಕ ಲಭ್ಯತೆಯನ್ನು ಖಚಿತಪಡಿಸಿಕೊಳ್ಳುವುದು ಸರ್ಕಾರದ ಪ್ರಮುಖ ಆದ್ಯತೆಯಾಗಿ ಮುಂದುವರಿದಿದೆ. ಪ್ರಧಾನ ಮಂತ್ರಿ ಉಜ್ವಲ ಯೋಜನೆಯಡಿ, ಫಲಾನುಭವಿಗಳ ಸಂಖ್ಯೆಯು 1 ಡಿಸೆಂಬರ್ 2025 ರ ವೇಳೆಗೆ ಸುಮಾರು 10.35 ಕೋಟಿ ತಲುಪಿದೆ. ಬಾಕಿ ಇರುವ ಅರ್ಜಿಗಳನ್ನು ಇತ್ಯರ್ಥಪಡಿಸಲು ಮತ್ತು ಎಲ್ ಪಿ ಜಿ ಲಭ್ಯತೆಯಲ್ಲಿ ಸಂಪೂರ್ಣತೆಯನ್ನು ಸಾಧಿಸಲು, ಸರ್ಕಾರವು 2025-26 ರ ಆರ್ಥಿಕ ವರ್ಷದಲ್ಲಿ ಹೆಚ್ಚುವರಿ 25 ಲಕ್ಷ ಎಲ್ ಪಿ ಜಿ ಸಂಪರ್ಕಗಳನ್ನು ಬಿಡುಗಡೆ ಮಾಡಲು ಅನುಮೋದನೆ ನೀಡಿದೆ. ಅರ್ಹತಾ ಪ್ರಕ್ರಿಯೆಯನ್ನು ಸರಳಗೊಳಿಸುವ ಉದ್ದೇಶದಿಂದ, ಈ ಹಿಂದಿನ ಬಹು-ಹಂತದ ಸ್ವಯಂ-ಘೋಷಣಾ ವ್ಯವಸ್ಥೆಯ ಬದಲಿಗೆ ಏಕೈಕ 'ವಂಚಿತರ ಘೋಷಣೆ' (Deprivation Declaration) ಪದ್ಧತಿಯನ್ನು ಪರಿಚಯಿಸಲಾಗಿದೆ, ಇದರಿಂದ ಇಂಧನ ಲಭ್ಯತೆಯು ಹೆಚ್ಚು ವೇಗವಾಗಿ ಮತ್ತು ಎಲ್ಲರನ್ನೂ ಒಳಗೊಳ್ಳುವಂತಾಗಿದೆ.

ಪ್ರಧಾನ ಮಂತ್ರಿ ಉಜ್ವಲ ಯೋಜನೆ (ಪಿಎಂಯುವೈ) ಫಲಾನುಭವಿಗಳಿಗೆ ವಾರ್ಷಿಕವಾಗಿ ಒಂಬತ್ತು ರೀಫಿಲ್ ಗಳವರೆಗೆ, ಪ್ರತಿ 14.2 ಕೆಜಿ ಸಿಲಿಂಡರ್ ಗೆ ₹300 ಗಳ ನಿರ್ದಿಷ್ಟ ಸಬ್ಸಿಡಿ ನೀಡುವ ಮೂಲಕ ಎಲ್ ಪಿ ಜಿ ದರವನ್ನು ಜನಸಾಮಾನ್ಯರಿಗೆ ಕೈಗೆಟುಕುವಂತೆ ಮಾಡಲಾಯಿತು. ಈ ಕ್ರಮವು ಎಲ್ ಪಿ ಜಿ ಬಳಕೆಯಲ್ಲಿ ಸ್ಥಿರವಾದ ಏರಿಕೆಗೆ ಕಾರಣವಾಯಿತು. ಸರಾಸರಿ ತಲಾ ಬಳಕೆಯು 2019-20ರಲ್ಲಿ ಸುಮಾರು 3 ರೀಫಿಲ್ ಗಳಷ್ಟಿದ್ದುದು, 2024-25ರ ಹಣಕಾಸು ವರ್ಷದಲ್ಲಿ 4.47 ರೀಫಿಲ್ ಗಳಿಗೆ ಏರಿಕೆಯಾಗಿದೆ. ಇದಲ್ಲದೆ, 2025-26ರ ಹಣಕಾಸು ವರ್ಷದಲ್ಲಿ ಇದು ವಾರ್ಷಿಕ ಅಂದಾಜು 4.85 ರೀಫಿಲ್ ಗಳ ಮಟ್ಟಕ್ಕೆ ತಲುಪಿದ್ದು, ಇದು ಶುದ್ಧ ಅಡುಗೆ ಇಂಧನದ ಬಳಕೆ ನಿರಂತರವಾಗಿ ಹೆಚ್ಚುತ್ತಿರುವುದನ್ನು ತೋರಿಸುತ್ತದೆ.
ಸಬ್ಸಿಡಿ ಗುರಿ ಮತ್ತು ಪಾರದರ್ಶಕತೆಯನ್ನು ಸುಧಾರಿಸಲು, ಬಯೋಮೆಟ್ರಿಕ್ ಆಧಾರ್ ದೃಢೀಕರಣ ಪ್ರಕ್ರಿಯೆಯನ್ನು ವೇಗಗೊಳಿಸಲಾಯಿತು. 2025 ರ ಡಿಸೆಂಬರ್ 1 ರ ವೇಳೆಗೆ, ಬಯೋಮೆಟ್ರಿಕ್ ದೃಢೀಕರಣವು ಶೇ. 71 ರಷ್ಟು ಪ್ರಧಾನ ಮಂತ್ರಿ ಉಜ್ವಲ ಯೋಜನೆ ಗ್ರಾಹಕರನ್ನು ಮತ್ತು ಶೇ. 62 ರಷ್ಟು ಉಜ್ವಲ ಯೋಜನೆಗೆ ಒಳಪಡದ ಗ್ರಾಹಕರನ್ನು ಒಳಗೊಂಡಿದೆ. ಗ್ರಾಹಕರು ಸರಳೀಕೃತ ಮೊಬೈಲ್ ಆಧಾರಿತ ಪ್ರಕ್ರಿಯೆಗಳ ಮೂಲಕ ಉಚಿತವಾಗಿ ದೃಢೀಕರಣವನ್ನು ಪೂರ್ಣಗೊಳಿಸಲು ಅನುಕೂಲವಾಗುವಂತೆ 2025 ರ ನವೆಂಬರ್ ನಲ್ಲಿ ದೇಶಾದ್ಯಂತ ವಿಶೇಷ ಅಭಿಯಾನವನ್ನು ಪ್ರಾರಂಭಿಸಲಾಯಿತು.
ರಾಷ್ಟ್ರವ್ಯಾಪಿ 'ಮೂಲಭೂತ ಸುರಕ್ಷತಾ ತಪಾಸಣೆ' ಅಭಿಯಾನದ ಮೂಲಕ ಗ್ರಾಹಕರ ಸುರಕ್ಷತೆಯನ್ನು ಬಲಪಡಿಸಲಾಯಿತು. ಗ್ರಾಹಕರ ಮನೆಗಳಲ್ಲಿ 12.12 ಕೋಟಿಗೂ ಹೆಚ್ಚು ಉಚಿತ ಸುರಕ್ಷತಾ ತಪಾಸಣೆಗಳನ್ನು ನಡೆಸಲಾಯಿತು ಮತ್ತು 4.65 ಕೋಟಿಗೂ ಹೆಚ್ಚು ಎಲ್ ಪಿ ಜಿ ಮೆದುಗೊಳವೆ (LPG Hoses) ಗಳನ್ನು ರಿಯಾಯಿತಿ ದರದಲ್ಲಿ ಬದಲಾಯಿಸಲಾಯಿತು. ಇದು ದೇಶೀಯ ಎಲ್ ಪಿ ಜಿ ಬಳಕೆಯಲ್ಲಿ ಜಾಗೃತಿ ಮತ್ತು ಸುರಕ್ಷತಾ ಮಾನದಂಡಗಳನ್ನು ಗಣನೀಯವಾಗಿ ಹೆಚ್ಚಿಸಿದೆ.

ಪೆಟ್ರೋಲಿಯಂ ಮಾರುಕಟ್ಟೆ ಮೂಲಸೌಕರ್ಯವನ್ನು ಬಲಪಡಿಸುವತ್ತಲೂ ಸಚಿವಾಲಯವು ಗಮನಹರಿಸಿದೆ. 90,000ಕ್ಕೂ ಹೆಚ್ಚು ಚಿಲ್ಲರೆ ಮಾರಾಟ ಮಳಿಗೆಗಳಲ್ಲಿ ಡಿಜಿಟಲ್ ಪಾವತಿ ಸೌಲಭ್ಯಗಳನ್ನು ಅಳವಡಿಸಲಾಗಿದ್ದು, ಇದಕ್ಕೆ ಪೂರಕವಾಗಿ 2.71 ಲಕ್ಷಕ್ಕೂ ಹೆಚ್ಚು ಪಿಒಎಸ್ ಟರ್ಮಿನಲ್ ಗಳ ಬೆಂಬಲವಿದೆ. 3,200ಕ್ಕೂ ಹೆಚ್ಚು ಬೌಸರ್ ಗಳ ನಿಯೋಜನೆಯ ಮೂಲಕ ಮನೆ ಬಾಗಿಲಿಗೆ ವಿತರಣಾ ಸೇವೆಯನ್ನು ವಿಸ್ತರಿಸಲಾಗಿದ್ದು, ಇದು ದೂರದ ಪ್ರದೇಶಗಳಲ್ಲಿ ಲಭ್ಯತೆಯನ್ನು ಸುಧಾರಿಸಿದೆ. ಸ್ವಚ್ಛ ಭಾರತ ಅಭಿಯಾನದ ಅಡಿಯಲ್ಲಿ, ಬಹುತೇಕ ಎಲ್ಲಾ ಮಾರಾಟ ಮಳಿಗೆಗಳಲ್ಲಿ ಶೌಚಾಲಯ ಸೌಲಭ್ಯಗಳನ್ನು ಖಚಿತಪಡಿಸಲಾಗಿದ್ದು, ಹೆಚ್ಚಿನ ಸಂಖ್ಯೆಯ ಮಳಿಗೆಗಳಲ್ಲಿ ಪುರುಷರು ಮತ್ತು ಮಹಿಳೆಯರಿಗೆ ಪ್ರತ್ಯೇಕ ಸೌಲಭ್ಯಗಳನ್ನು ಒದಗಿಸಲಾಗಿದೆ.
ಈ ವರ್ಷದಲ್ಲಿ ಎಲೆಕ್ಟ್ರಿಕ್ ವಾಹನ ಮೂಲಸೌಕರ್ಯವು ವೇಗವಾಗಿ ವಿಸ್ತರಿಸಿದೆ. ಫೇಮ್-II ಯೋಜನೆಯಡಿ, ಚಿಲ್ಲರೆ ಮಾರಾಟ ಮಳಿಗೆಗಳಲ್ಲಿ 8,932 ಇವಿ ಚಾರ್ಜಿಂಗ್ ಕೇಂದ್ರಗಳನ್ನು ಸ್ಥಾಪಿಸಲಾಗಿದೆ, ಇದರ ಜೊತೆಗೆ ತೈಲ ಮಾರುಕಟ್ಟೆ ಕಂಪನಿಗಳು ತಮ್ಮ ಸ್ವಂತ ಸಂಪನ್ಮೂಲಗಳಿಂದ 18,500ಕ್ಕೂ ಹೆಚ್ಚು ಚಾರ್ಜಿಂಗ್ ಕೇಂದ್ರಗಳನ್ನು ಸ್ಥಾಪಿಸಿವೆ. 'ಅಪ್ನಾ ಘರ್' ಉಪಕ್ರಮವು ಪ್ರಗತಿಯಲ್ಲಿದ್ದು, 500ಕ್ಕೂ ಹೆಚ್ಚು ಟ್ರಕ್ ಚಾಲಕರ ವಿಶ್ರಾಂತಿ ಸೌಲಭ್ಯಗಳನ್ನು ಸ್ಥಾಪಿಸಲಾಗಿದೆ. ಇದು ರಸ್ತೆ ಸುರಕ್ಷತೆಯನ್ನು ಸುಧಾರಿಸುವುದಲ್ಲದೆ ಗ್ರಾಮೀಣ ಉದ್ಯೋಗಾವಕಾಶಗಳಿಗೂ ಬೆಂಬಲ ನೀಡಿದೆ.
ಸಾರ್ವಜನಿಕ ವಲಯದ ತೈಲ ಮಾರುಕಟ್ಟೆ ಕಂಪನಿಗಳು 2024-25 ರಿಂದ 2028-29 ರ ಅವಧಿಯಲ್ಲಿ ಪ್ರಮುಖ ಹೆದ್ದಾರಿ ಕಾರಿಡಾರ್ ಗಳು ಮತ್ತು ಇತರ ಕಾರ್ಯಸಾಧ್ಯವಾದ ಸ್ಥಳಗಳಲ್ಲಿ 4,000 ಇಂಧನ ಕೇಂದ್ರಗಳನ್ನು ಸ್ಥಾಪಿಸುತ್ತಿವೆ. ಈ ಕೇಂದ್ರಗಳನ್ನು ಸಮಗ್ರ ಮೊಬಿಲಿಟಿ ಹಬ್ ಗಳಾಗಿ ಅಭಿವೃದ್ಧಿಪಡಿಸಲಾಗುತ್ತಿದ್ದು, ಇವು ಪೆಟ್ರೋಲ್ ಮತ್ತು ಡೀಸೆಲ್ ನಂತಹ ಸಾಂಪ್ರದಾಯಿಕ ಇಂಧನಗಳ ಜೊತೆಗೆ ಜೈವಿಕ ಇಂಧನಗಳು, ಸಿ ಎನ್ ಜಿ, ಎಲ್ ಎನ್ ಜಿ ಮತ್ತು ಎಲೆಕ್ಟ್ರಿಕ್ ವಾಹನ ಚಾರ್ಜಿಂಗ್ ಸೌಲಭ್ಯಗಳನ್ನು ಒದಗಿಸುತ್ತವೆ. 2025 ರ ನವೆಂಬರ್ 1 ರ ವೇಳೆಗೆ, ದೇಶಾದ್ಯಂತ 1,064 ಇಂಧನ ಕೇಂದ್ರಗಳನ್ನು ಸ್ಥಾಪಿಸಲಾಗಿದೆ.

ಅನಿಲ ಆಧಾರಿತ ಆರ್ಥಿಕತೆಯನ್ನು ವಿಸ್ತರಿಸುವಲ್ಲಿ ಗಣನೀಯ ಪ್ರಗತಿ ಸಾಧಿಸಲಾಗಿದೆ. ದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವ ನೈಸರ್ಗಿಕ ಅನಿಲ ಪೈಪ್‌ಲೈನ್ ಗಳ ಉದ್ದವು 2014 ರಲ್ಲಿ 15,340 ಕಿಮೀ ಇತ್ತು, ಅದು 2025 ರ ಜೂನ್ ವೇಳೆಗೆ 25,429 ಕಿಮೀ ಗೆ ಏರಿಕೆಯಾಗಿದೆ. ಇದರ ಜೊತೆಗೆ ಇನ್ನೂ 10,459 ಕಿಮೀ ಉದ್ದದ ಪೈಪ್‌ಲೈನ್ ಕಾಮಗಾರಿ ಪ್ರಗತಿಯಲ್ಲಿದೆ. ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ನಿಯಂತ್ರಣ ಮಂಡಳಿ ಮತ್ತು ಭಾರತ ಸರ್ಕಾರವು ಅನುಮೋದಿಸಿದ ಈ ಪೈಪ್‌ಲೈನ್ ಗಳ ಪೂರ್ಣಗೊಳಿಸುವಿಕೆಯು ಸಂಪೂರ್ಣವಾಗಿ ಸಂಪರ್ಕ ಹೊಂದಿದ 'ರಾಷ್ಟ್ರೀಯ ಅನಿಲ ಗ್ರಿಡ್' ನಿರ್ಮಾಣಕ್ಕೆ ಕಾರಣವಾಗಲಿದೆ. ಇದು ಎಲ್ಲಾ ಪ್ರದೇಶಗಳಲ್ಲಿ ನೈಸರ್ಗಿಕ ಅನಿಲದ ವ್ಯಾಪಕ ಲಭ್ಯತೆಯನ್ನು ಖಚಿತಪಡಿಸುವುದಲ್ಲದೆ, ಸಮತೋಲಿತ ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿಗೆ ಬೆಂಬಲ ನೀಡಲಿದೆ.
ಅನಿಲ ಸಾಗಣೆ ವೆಚ್ಚದಲ್ಲಿನ ಪ್ರಾದೇಶಿಕ ಅಸಮಾನತೆಗಳನ್ನು ನಿವಾರಿಸಲು, ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ನಿಯಂತ್ರಣ ಮಂಡಳಿಯು “ಒಂದು ರಾಷ್ಟ್ರ, ಒಂದು ಗ್ರಿಡ್, ಒಂದು ಸುಂಕ” ಎಂಬ ಅಭಿಯಾನದ ಅಡಿಯಲ್ಲಿ 'ಏಕೀಕೃತ ಪೈಪ್‌ಲೈನ್ ಸುಂಕ' ವ್ಯವಸ್ಥೆಯನ್ನು ಜಾರಿಗೆ ತಂದಿದೆ. 2023 ರ ಏಪ್ರಿಲ್ 1 ರಿಂದ ಜಾರಿಗೆ ಬಂದ ಈ ವ್ಯವಸ್ಥೆಯು ರಾಷ್ಟ್ರೀಯ ಅನಿಲ ಗ್ರಿಡ್ ನಾದ್ಯಂತ ಸಾಗಣೆ ವೆಚ್ಚಗಳನ್ನು ಏಕರೂಪಗೊಳಿಸಿದೆ ಮತ್ತು ಈ ಹಿಂದಿನ ದೂರ-ಆಧಾರಿತ ಸುಂಕದ ರಚನೆಯನ್ನು ಬದಲಿಸಿದೆ. ಪ್ರಸ್ತುತ, ಕಾರ್ಯನಿರ್ವಹಿಸುತ್ತಿರುವ ಸುಮಾರು ಶೇ. 90 ರಷ್ಟು ಪೈಪ್‌ಲೈನ್ ಗಳನ್ನು ಈ ಏಕೀಕೃತ ಸುಂಕದ ವ್ಯಾಪ್ತಿಗೆ ತರಲಾಗಿದ್ದು, ಇದು ನೈಸರ್ಗಿಕ ಅನಿಲದ ಕೈಗೆಟುಕುವ ದರ ಮತ್ತು ಸ್ಪರ್ಧಾತ್ಮಕತೆಯನ್ನು ಸುಧಾರಿಸಿದೆ.
ನಗರ ಅನಿಲ ವಿತರಣಾ ಜಾಲವು ಈಗ 307 ಭೌಗೋಳಿಕ ಪ್ರದೇಶಗಳಿಗೆ ವಿಸ್ತರಿಸಿದೆ. 2025ರ ಸೆಪ್ಟೆಂಬರ್ ವೇಳೆಗೆ, ಪಿ ಎನ್ ಜಿ ಮನೆಬಳಕೆಯ ಸಂಪರ್ಕಗಳ ಸಂಖ್ಯೆ ಸುಮಾರು 1.57 ಕೋಟಿಗೆ ತಲುಪಿದೆ ಮತ್ತು ಸಿ ಎನ್ ಜಿ ಕೇಂದ್ರಗಳ ಸಂಖ್ಯೆ 8,400ಕ್ಕೂ ಅಧಿಕವಾಗಿದೆ. ಪರಿಷ್ಕೃತ ದೇಶೀಯ ಅನಿಲ ಹಂಚಿಕೆ ಮಾರ್ಗಸೂಚಿಗಳು ನೈಜ ಬಳಕೆಯ ಮಾದರಿಗಳೊಂದಿಗೆ ಉತ್ತಮ ಹೊಂದಾಣಿಕೆಯನ್ನು ಸಾಧಿಸಿವೆ ಮತ್ತು ಬೆಲೆ ಏರಿಳಿತದ ಹೊರೆಯಿಂದ ಗ್ರಾಹಕರನ್ನು ರಕ್ಷಿಸಿವೆ.
ಸತತ್ (SATAT) ಉಪಕ್ರಮದ ಅಡಿಯಲ್ಲಿ, 2025ರ ನವೆಂಬರ್ 1ರ ವೇಳೆಗೆ 130ಕ್ಕೂ ಹೆಚ್ಚು ಕಂಪ್ರೆಸ್ಡ್ ಜೈವಿಕ ಅನಿಲ ಘಟಕಗಳನ್ನು ಕಾರ್ಯಾರಂಭ ಮಾಡಲಾಗಿದ್ದು, ಇನ್ನೂ ಹಲವು ಘಟಕಗಳು ನಿರ್ಮಾಣ ಹಂತದಲ್ಲಿವೆ. ಸಿ ಎನ್ ಜಿ ಮತ್ತು ಪಿ ಎನ್ ಜಿ ವಿಭಾಗಗಳಲ್ಲಿ ಕಂಪ್ರೆಸ್ಡ್ ಜೈವಿಕ ಅನಿಲದ ಕಡ್ಡಾಯ ಮಿಶ್ರಣದ ನಿಯಮವು 2025-26ನೇ ಹಣಕಾಸು ವರ್ಷದಿಂದ ಪ್ರಾರಂಭವಾಗಿದೆ. ಇದಕ್ಕೆ ಪೂರಕವಾಗಿ ಪೈಪ್‌ಲೈನ್ ಸಂಪರ್ಕ ಮತ್ತು ಜೈವಿಕ ತ್ಯಾಜ್ಯ ಸಂಗ್ರಹಣೆಗಾಗಿ ಆರ್ಥಿಕ ನೆರವನ್ನು ನೀಡಲಾಗುತ್ತಿದೆ.
ಜೈವಿಕ ಇಂಧನಗಳ ಕ್ಷೇತ್ರದಲ್ಲಿ ಈ ವರ್ಷ ಪ್ರಮುಖ ಸಾಧನೆಗಳಾಗಿವೆ. ಪೆಟ್ರೋಲ್ ನಲ್ಲಿ ಎಥೆನಾಲ್ ಮಿಶ್ರಣವು 2024-25ರ ಅವಧಿಯಲ್ಲಿ ಸರಾಸರಿ ಶೇ. 19.24ಕ್ಕೆ ತಲುಪಿದೆ. ಇದರಿಂದಾಗಿ ಈವರೆಗೆ ₹1.55 ಲಕ್ಷ ಕೋಟಿಗೂ ಅಧಿಕ ವಿದೇಶಿ ವಿನಿಮಯ ಉಳಿತಾಯವಾಗಿದ್ದು, ಇಂಗಾಲದ ಹೊರಸೂಸುವಿಕೆಯಲ್ಲಿ ಗಣನೀಯ ಕಡಿತವಾಗಿದೆ. ಪ್ರಧಾನ ಮಂತ್ರಿ ಜೀ-ವನ್ (JI-VAN) ಯೋಜನೆಯಡಿ ಸುಧಾರಿತ ಜೈವಿಕ ಇಂಧನಗಳನ್ನು ಉತ್ತೇಜಿಸಲಾಗುತ್ತಿದ್ದು, ಪಾಣಿಪತ್ ಮತ್ತು ನುಮಾಲಿಗಢದಲ್ಲಿ ಕಾರ್ಯನಿರ್ವಹಿಸುತ್ತಿರುವ ಎರಡನೇ ತಲೆಮಾರಿನ (2ಜಿ) ಎಥೆನಾಲ್ ಘಟಕಗಳು ಪ್ರಮುಖ ಮೈಲಿಗಲ್ಲುಗಳಾಗಿವೆ.
ಈ ವರ್ಷದಲ್ಲಿ ಸುಸ್ಥಿರ ವಿಮಾನಯಾನ ಇಂಧನ ಉಪಕ್ರಮಗಳು ಗಣನೀಯ ಪ್ರಗತಿ ಕಂಡಿವೆ. ಸರ್ಕಾರವು 2027, 2028 ಮತ್ತು 2030 ರಿಂದ ಅಂತರರಾಷ್ಟ್ರೀಯ ವಿಮಾನಯಾನಗಳಿಗೆ ಬಳಸುವ ಇಂಧನದಲ್ಲಿ ಕ್ರಮವಾಗಿ ಶೇ. 1, ಶೇ. 2 ಮತ್ತು ಶೇ. 5 ರಷ್ಟು ಸುಸ್ಥಿರ ಇಂಧನವನ್ನು ಮಿಶ್ರಣ ಮಾಡುವ ಗುರಿಯನ್ನು ನಿಗದಿಪಡಿಸಿದೆ. ಈ ಮಾರ್ಗಸೂಚಿಗೆ ಅನುಗುಣವಾಗಿ, ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ ತನ್ನ ಪಾಣಿಪತ್ ರಿಫೈನರಿಯಲ್ಲಿ ಸುಸ್ಥಿರ ವಿಮಾನಯಾನ ಇಂಧನ ಉತ್ಪಾದನೆಗಾಗಿ ISCC CORSIA ಪ್ರಮಾಣೀಕರಣವನ್ನು ಪಡೆದ ಮೊದಲ ಭಾರತೀಯ ಕಂಪನಿಯಾಗಿದೆ. ಇದರ ಬೆನ್ನಲ್ಲೇ, ಸುಸ್ಥಿರ ಇಂಧನ ಪೂರೈಕೆಗಾಗಿ ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ ಮತ್ತು ಏರ್ ಇಂಡಿಯಾ ನಡುವೆ ತಿಳುವಳಿಕಾ ಒಪ್ಪಂದಕ್ಕೆ ಸಹಿ ಹಾಕಲಾಗಿದೆ. ಸ್ವಚ್ಛ ಸಾರಿಗೆ ಇಂಧನಗಳತ್ತ ಬದಲಾವಣೆಯನ್ನು ಬಲಪಡಿಸಲು, ಹೆಚ್ಚಿದ ಖರೀದಿ ಪ್ರಮಾಣ ಮತ್ತು ವೈವಿಧ್ಯಮಯ ಕಚ್ಚಾ ವಸ್ತುಗಳ ಬಳಕೆಯ ಬೆಂಬಲದೊಂದಿಗೆ ಈ ವರ್ಷದಲ್ಲಿ ಬಯೋಡೀಸೆಲ್ ಮಿಶ್ರಣವನ್ನೂ ವಿಸ್ತರಿಸಲಾಯಿತು.
ತೈಲ ಮತ್ತು ನೈಸರ್ಗಿಕ ಅನಿಲ ಉತ್ಪಾದನಾ ವಲಯವು 'ತೈಲಕ್ಷೇತ್ರಗಳ (ನಿಯಂತ್ರಣ ಮತ್ತು ಅಭಿವೃದ್ಧಿ) ತಿದ್ದುಪಡಿ ಕಾಯ್ದೆ 2025' ಮತ್ತು 'ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ನಿಯಮಗಳು 2025' ರ ಅಧಿಸೂಚನೆಯೊಂದಿಗೆ ಮಹತ್ವದ ಸುಧಾರಣೆಗಳಿಗೆ ಒಳಗಾಗಿದೆ. ಹೈಡ್ರೋಕಾರ್ಬನ್ ಅನ್ವೇಷಣೆ ಮತ್ತು ಪರವಾನಗಿ ನೀತಿಯ ಅಡಿಯಲ್ಲಿ, 3.78 ಲಕ್ಷ ಚದರ ಕಿಲೋಮೀಟರ್ ಗಿಂತಲೂ ಹೆಚ್ಚಿನ ವಿಸ್ತೀರ್ಣದ 172 ಬ್ಲಾಕ್ ಗಳನ್ನು ಹಂಚಿಕೆ ಮಾಡಲಾಗಿದ್ದು, ಇದರಿಂದ ಸುಮಾರು 4.36 ಬಿಲಿಯನ್ ಯುಎಸ್ ಡಾಲರ್ ಹೂಡಿಕೆ ಹರಿದುಬರಲಿದೆ. ಭೂಕಂಪನ ಸಮೀಕ್ಷೆಗಳು, ಕೊರೆಯುವ ಕಾರ್ಯಕ್ರಮಗಳು ಮತ್ತು ಸರ್ಕಾರದ ಧನಸಹಾಯದ 'ಮಿಷನ್ ಅನ್ವೇಷಣ್' ನಂತಹ ಉಪಕ್ರಮಗಳ ಮೂಲಕ ಅನ್ವೇಷಣಾ ಚಟುವಟಿಕೆಗಳು ತೀವ್ರಗೊಂಡಿವೆ.
ಅಂತರರಾಷ್ಟ್ರೀಯ ಪಾಲುದಾರಿಕೆಗಳ ನವೀಕರಣ ಮತ್ತು ಎರಡನೇ ಹಂತದ ಸೌಲಭ್ಯಗಳ ಪ್ರಗತಿಯ ಮೂಲಕ ಕಾರ್ಯತಂತ್ರದ ಪೆಟ್ರೋಲಿಯಂ ಮೀಸಲು ವ್ಯವಸ್ಥೆಯನ್ನು ಬಲಪಡಿಸಲಾಯಿತು. ಇದು ಪೂರೈಕೆ ವ್ಯತ್ಯಯಗಳ ವಿರುದ್ಧ ಸನ್ನದ್ಧತೆಯನ್ನು ಹೆಚ್ಚಿಸಿದೆ. ಭಾರತದ ತೈಲ ಮತ್ತು ಅನಿಲ ಸಾರ್ವಜನಿಕ ವಲಯದ ಉದ್ದಿಮೆಗಳು ವಿದೇಶಗಳಲ್ಲಿ ಮಾಡಿರುವ ಹೂಡಿಕೆಗಳು, ಪೂರೈಕೆ ಮೂಲಗಳ ವೈವಿಧ್ಯೀಕರಣದ ಮೂಲಕ ದೇಶದ ಇಂಧನ ಭದ್ರತೆಯನ್ನು ಬೆಂಬಲಿಸುವುದನ್ನು ಮುಂದುವರಿಸಿವೆ.
ನಿರಂತರ ನೀತಿ ಸುಧಾರಣೆಗಳು, ಮೂಲಸೌಕರ್ಯ ವಿಸ್ತರಣೆ ಮತ್ತು ಸ್ವಚ್ಛ ಇಂಧನ ಉಪಕ್ರಮಗಳ ಮೂಲಕ, ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯವು 2025ರ ಅವಧಿಯಲ್ಲಿ ಇಂಧನದ ಲಭ್ಯತೆ, ಕೈಗೆಟುಕುವ ದರ, ಸುಸ್ಥಿರತೆ ಮತ್ತು ಭದ್ರತೆಯನ್ನು ಬಲಪಡಿಸುವಲ್ಲಿ ಗಮನಾರ್ಹ ಪ್ರಗತಿಯನ್ನು ಸಾಧಿಸಿದೆ. ಇದು ಭಾರತದ ಚೇತೋಹಾರಿ ಮತ್ತು ಒಳಗೊಳ್ಳುವಿಕೆಯ ಇಂಧನ ಭವಿಷ್ಯದತ್ತ ಸಾಗುವ ಪಯಣಕ್ಕೆ ಭದ್ರವಾದ ಬೆಂಬಲ ನೀಡಿದೆ.
*****
(रिलीज़ आईडी: 2208805)
आगंतुक पटल : 11