ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯ
ಯು.ಪಿ.ಎಸ್.ಸಿ ನಾಗರಿಕ ಸೇವೆಗಳ ಪರೀಕ್ಷಾ ಫಲಿತಾಂಶಗಳ ಕುರಿತು ದಾರಿತಪ್ಪಿಸುವ ಜಾಹೀರಾತು ನೀಡಿದ್ದಕ್ಕಾಗಿ ಕೋಚಿಂಗ್ ಕೇಂದ್ರದ ಮೇಲೆ 11 ಲಕ್ಷ ರೂ. ದಂಡ ವಿಧಿಸಿದ ಸಿಸಿಪಿಎ
ಪ್ರಕಟಣಾ ದಿನಾಂಕ:
25 DEC 2025 3:04PM by PIB Bengaluru
ಗ್ರಾಹಕ ರಕ್ಷಣಾ ಕಾಯ್ದೆ 2019 ಉಲ್ಲಂಘಿಸಿ ಯು.ಪಿ.ಎಸ್.ಸಿ ನಾಗರಿಕ ಸೇವಾ ಪರೀಕ್ಷೆ (ಸಿ.ಎಸ್.ಇ) 2022 ಮತ್ತು 2023ರ ಫಲಿತಾಂಶಗಳಿಗೆ ಸಂಬಂಧಿಸಿದಂತೆ ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ದಾರಿತಪ್ಪಿಸುವ ಜಾಹೀರಾತುಗಳನ್ನು ಪ್ರಕಟಿಸಿದ್ದಕ್ಕಾಗಿ ಕೇಂದ್ರ ಗ್ರಾಹಕ ರಕ್ಷಣಾ ಪ್ರಾಧಿಕಾರ (ಸಿಸಿಪಿಎ) ವಿಷನ್ ಐಎಎಸ್ (ಅಜಯ್ವಿಷನ್ ಎಜುಕೇಷನ್ ಪ್ರೈವೇಟ್ ಲಿಮಿಟೆಡ್)ಗೆ 11 ಲಕ್ಷ ರೂಪಾಯಿ ದಂಡ ವಿಧಿಸಿದೆ.
“ಸಿ.ಎಸ್.ಇ 2023ರಲ್ಲಿ ಟಾಪ್ 100 ಆಯ್ಕೆಗಳಲ್ಲಿ 7 ಮತ್ತು 79 ಮತ್ತು ಸಿ.ಎಸ್.ಇ 2022ರಲ್ಲಿ ಟಾಪ್ 50 ಆಯ್ಕೆಗಳಲ್ಲಿ 39’’ ಮುಂತಾದ ಹಕ್ಕುಗಳನ್ನು ಸಂಸ್ಥೆಯು ಜಾಹೀರಾತಿನಲ್ಲಿ ಪ್ರಕಟಿಸಿತ್ತು, ಇದು ಯಶಸ್ವಿ ಅಭ್ಯರ್ಥಿಗಳ ಹೆಸರುಗಳು, ಛಾಯಾಚಿತ್ರಗಳು ಮತ್ತು ಶ್ರೇಣಿ(ranks)ಗಳನ್ನು ಪ್ರಮುಖವಾಗಿ ಒಳಗೊಂಡಿತ್ತು.
ಪರೀಕ್ಷೆಯ ನಂತರ ಸಿಸಿಪಿಎ ಸಂಸ್ಥೆಯು ಶ್ರೀ ಶುಭಂ ಕುಮಾರ್ (ಎಐಆರ್ 1, ಯು.ಪಿ.ಎಸ್.ಸಿ ಸಿ.ಎಸ್.ಇ 2020) ಅವರು ಆಯ್ಕೆ ಮಾಡಿಕೊಂಡ ನಿರ್ದಿಷ್ಟ ಕೋರ್ಸ್, ಅಂದರೆ ಜಿಎಸ್ ಫೌಂಡೇಷನ್ ಬ್ಯಾಚ್ (ಕ್ಲಾಸ್‌ರೂಮ್ ಸ್ಟೂಡೆಂಟ್) ಅನ್ನು ಬಹಿರಂಗಪಡಿಸಿದ್ದರೂ, ಅದೇ ವೆಬ್‌ಪುಟದಲ್ಲಿ ಅವರ ಜೊತೆಗೆ ಹೆಸರುಗಳು ಮತ್ತು ಛಾಯಾಚಿತ್ರಗಳನ್ನು ಪ್ರದರ್ಶಿಸಲಾದ ಇತರ ಯಶಸ್ವಿ ಅಭ್ಯರ್ಥಿಗಳು ಆಯ್ಕೆ ಮಾಡಿದ ಕೋರ್ಸ್‌ಗಳ ಬಗ್ಗೆ ಮಾಹಿತಿಯನ್ನು ಉದ್ದೇಶಪೂರ್ವಕವಾಗಿ ಮರೆಮಾಚಲಾಗಿದೆ ಎಂಬುದನ್ನು ಕಂಡುಹಿಡಿಯಲಾಗಿದೆ. ಎಂದು ಕಂಡುಹಿಡಿದಿದೆ.
ಈ ರೀತಿ ಮಾಹಿತಿಯನ್ನು ಮರೆಮಾಚಿರುವುದರಿಂದ ಉಳಿದ ಎಲ್ಲಾ ಅಭ್ಯರ್ಥಿಗಳು ಜಿಎಸ್ ಫೌಂಡೇಷನ್ ಬ್ಯಾಚ್ ಕ್ಲಾಸ್‌ರೂಮ್ ಕೋರ್ಸ್‌ಗೆ ದಾಖಲಾಗಿದ್ದಾರೆ ಎಂಬ ತಪ್ಪು ಕಲ್ಪನೆಯನ್ನು ಸೃಷ್ಟಿಸಿತ್ತು, ಆದರೆ ವಾಸ್ತವದಲ್ಲಿ ಅದು ಆ ರೀತಿಯಲ್ಲ. ಹೆಚ್ಚುವರಿಯಾಗಿ ಅದೇ ಜಾಹೀರಾತಿನಲ್ಲಿ ಸಂಸ್ಥೆಯು ತನ್ನ ”ಫೌಂಡೇಷನ್ ಕೋರ್ಸ್’ ಅನ್ನು ಪ್ರಮುಖವಾಗಿ ಪ್ರಚಾರ ಮಾಡಿತು, ಇದು ಲಕ್ಷಾಂತರ ರೂಪಾಯಿಗಳ ಶುಲ್ಕವನ್ನು ಒಳಗೊಂಡಿರುತ್ತದೆ. ಅಂತಹ ನಡವಳಿಕೆಯು ಸುಳ್ಳು, ಕೃತಕವಾಗಿ ಸೃಷ್ಟಿಸಿರುವ ಮತ್ತು ಪರಿಶೀಲಿಸದ ಹಕ್ಕುಗಳ ಆಧಾರದ ಮೇಲೆ ವಿದ್ಯಾರ್ಥಿಗಳನ್ನು ಸಂಸ್ಥೆಯ ಕೋರ್ಸ್ ಗಳಿಗೆ ದಾಖಲಾಗುವಂತೆ ಉತ್ತೇಜಿಸುವ ಪರಿಣಾಮವನ್ನು ಬೀರಿತು.
ಸಮಗ್ರ ತನಿಖೆಯ ನಂತರ, ಯು.ಪಿ.ಎಸ್.ಸಿ ಸಿ.ಎಸ್. ಇ 2022 ಮತ್ತು 2023ರಲ್ಲಿ 119+ ಯಶಸ್ವಿ ಅಭ್ಯರ್ಥಿಗಳನ್ನು ಸಂಸ್ಥೆಯು ಹೊಂದಿರುವುದಾಗಿ ಹಕ್ಕು ಮಂಡಿಸಿರುವುದು ಸಿಸಿಪಿಎಗೆ ಕಂಡುಹಿಡಿದಿದೆ. ಆದರೂ ಕೇವಲ ಮೂವರು ಅಭ್ಯರ್ಥಿಗಳು ಫೌಂಡೇಷನ್ ಕೋರ್ಸ್‌ಗಳಿಗೆ ದಾಖಲಾಗಿದ್ದರೆ, ಉಳಿದ 116 ಅಭ್ಯರ್ಥಿಗಳು ಪ್ರಾಥಮಿಕ ಮತ್ತು ಮುಖ್ಯ ಪರೀಕ್ಷೆಗಳಿಗೆ ಪರೀಕ್ಷಾ ಸರಣಿ, ಅಭ್ಯಾಸ ಪರೀಕ್ಷೆಗಳು (ಒಂದು ಬಾರಿ ಪರೀಕ್ಷೆಗಳು) ಮತ್ತು ಅಣಕು ಸಂದರ್ಶನ ಕಾರ್ಯಕ್ರಮಗಳಂತಹ ಸೇವೆಗಳನ್ನು ಆರಿಸಿಕೊಂಡಿದ್ದರು. ಉದ್ದೇಶಪೂರ್ವಕವಾಗಿ ವಸ್ತು ಮಾಹಿತಿಯನ್ನು ಮರೆಮಾಚುವುದು ಆಕಾಂಕ್ಷಿಗಳು ಮತ್ತು ಪೋಷಕರನ್ನು ಯುಪಿಎಸ್‌ಸಿ ನಾಗರಿಕ ಸೇವೆಗಳ ಪರೀಕ್ಷೆಯ ಎಲ್ಲಾ ಹಂತಗಳಲ್ಲಿ ಅಭ್ಯರ್ಥಿಗಳ ಯಶಸ್ಸಿಗೆ ವಿಷನ್ ಐಎಎಸ್ ಕಾರಣ ಎಂದು ನಂಬುವಂತೆ ಮಾಡಿತ್ತು, ಇದರಿಂದಾಗಿ ಗ್ರಾಹಕ ಸಂರಕ್ಷಣಾ ಕಾಯ್ದೆ 2019ರ ಸೆಕ್ಷನ್ 2(28) ರ ಅಡಿಯಲ್ಲಿ ದಾರಿತಪ್ಪಿಸುವ ಜಾಹೀರಾತೆಂಬುದು ದೃಢಪಟ್ಟಿದೆ.
ಸಂಸ್ಥೆಯ ಅಧಿಕೃತ ವೆಬ್‌ಸೈಟ್‌ನಲ್ಲಿ ಯಶಸ್ವಿ ಅಭ್ಯರ್ಥಿಗಳ ಹೆಸರುಗಳು ಮತ್ತು ಛಾಯಾಚಿತ್ರಗಳನ್ನು ಒಳಗೊಂಡ ಜಾಹೀರಾತುಗಳು ದಾರಿತಪ್ಪಿಸುತ್ತಿವೆ ಎಂದು ಪ್ರಾಧಿಕಾರವು ಗಮನಿಸಿದೆ. ವಿದ್ಯಾರ್ಥಿಗಳಿಂದ ಸರಿಯಾದ ಅನುಮತಿ ಅಥವಾ ಒಪ್ಪಿಗೆಯಿಲ್ಲದೆ ಅಂತಹ ಹಕ್ಕುಗಳನ್ನು ನೀಡುವ ಮೂಲಕ ಸಂಸ್ಥೆಯು ಸಂಭಾವ್ಯ ಆಕಾಂಕ್ಷಿಗಳನ್ನು ದಾರಿತಪ್ಪಿಸಿದೆ. ಮುದ್ರಣ ಮಾಧ್ಯಮಕ್ಕಿಂತ ಭಿನ್ನವಾಗಿ ವೆಬ್‌ಸೈಟ್ ಜಾಗತಿಕವಾಗಿ ಪ್ರವೇಶಿಸಬಹುದಾಗಿದೆ ಮತ್ತು ವಿಸ್ತೃತ ಅವಧಿಗೆ ಲಭ್ಯವಿರುತ್ತದೆ. ಡಿಜಿಟಲ್ ಯುಗದಲ್ಲಿ ಸಂಶೋಧನಾ ತರಬೇತಿ ಸಂಸ್ಥೆಗಳು ತಮ್ಮ ಹಕ್ಕುಗಳನ್ನು ಮೌಲ್ಯಮಾಪನ ಮಾಡಲು ಮತ್ತು ತಿಳಿವಳಿಕೆಯುಳ್ಳ ಆಯ್ಕೆಗಳನ್ನು ಮಾಡಲು ಇದು ಪ್ರಾಥಮಿಕ ವೇದಿಕೆಯಾಗಿದೆ.
ತಪ್ಪುದಾರಿಗೆಳೆಯುವ ಜಾಹೀರಾತುಗಳನ್ನು ಪ್ರಕಟಿಸಿದ್ದಕ್ಕಾಗಿ ವಿಷನ್ ಐಎಎಸ್ ವಿರುದ್ಧ ಈ ಹಿಂದೆಯೂ ಕ್ರಮ ಕೈಗೊಳ್ಳಲಾಗಿತ್ತು ಎಂಬುದನ್ನು ಸಿಸಿಪಿಎ ಗಮನಿಸಿದೆ. ಅಗ್ಗಾಗ್ಗೆ ನಿರಂತರ ಹಸ್ತಕ್ಷೇಪ ಮತ್ತು ಎಚ್ಚರಿಕೆಯ ಹೊರತಾಗಿಯೂ ಸಂಸ್ಥೆಯು ತನ್ನ ನಂತರದ ಜಾಹೀರಾತುಗಳಲ್ಲಿ ಇದೇ ರೀತಿಯ ಹಕ್ಕುಗಳನ್ನು ಮಾಡುತ್ತಲೇ ಇದ್ದು, ಇದು ಸರಿಯಾದ ಶ್ರದ್ಧೆ ಮತ್ತು ನಿಯಂತ್ರಣ ಅನುಸರಣೆಯ ಕೊರತೆಯನ್ನು ಪ್ರದರ್ಶಿಸಿತು. ಉಲ್ಲಂಘನೆಯ ಪುನರಾವರ್ತಿತ ಸ್ವರೂಪವನ್ನು ಗಮನದಲ್ಲಿಟ್ಟುಕೊಂಡು, ಸದ್ಯ ಪ್ರಕರಣವನ್ನು ನಂತರದ ಉಲ್ಲಂಘನೆ ಎಂದು ಪರಿಗಣಿಸಲಾಗಿದೆ, ಗ್ರಾಹಕರನ್ನು ರಕ್ಷಿಸುವ ಹಿತಾಸಕ್ತಿಯಲ್ಲಿ ಹೆಚ್ಚಿನ ದಂಡವನ್ನು ವಿಧಿಸಲು ಇದು ಸಮರ್ಥ ಕಾರಣವಾಗಿದೆ.
ಯುಪಿಎಸ್‌ಸಿ ನಾಗರಿಕ ಸೇವೆಗಳ ಪರೀಕ್ಷೆಯಂತಹ ಹೆಚ್ಚಿನ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಲಕ್ಷಾಂತರ ಆಕಾಂಕ್ಷಿಗಳು ಗಣನೀಯ ಸಮಯ, ಶ್ರಮ ಮತ್ತು ಆರ್ಥಿಕ ಸಂಪನ್ಮೂಲಗಳನ್ನು ಹೂಡಿಕೆ ಮಾಡುತ್ತಾರೆ. ಅಂತಹ ಅಪೂರ್ಣ ಮತ್ತು ಆಯ್ದ ಮಾಹಿತಿಗಳನ್ನು ಬಹಿರಂಗಪಡಿಸುವುದು ಫಲಿತಾಂಶಗಳು ಮತ್ತು ತರಬೇತಿ ಸೇವೆಗಳ ಪರಿಣಾಮಕಾರಿತ್ವದ ಬಗ್ಗೆ ಸುಳ್ಳು ನಿರೀಕ್ಷೆಗಳನ್ನು ಸೃಷ್ಟಿಸುವ ಮೂಲಕ ವಿದ್ಯಾರ್ಥಿಗಳು ಮತ್ತು ಪೋಷಕರನ್ನು ದಾರಿ ತಪ್ಪಿಸುತ್ತವೆ ಎಂಬುದನ್ನು ಪ್ರಾಧಿಕಾರವು ಗಮನಿಸಿದೆ.
ಈವರೆಗೆ ತಪ್ಪುದಾರಿಗೆಳೆಯುವ ಜಾಹೀರಾತುಗಳು ಮತ್ತು ಅನ್ಯಾಯದ ವ್ಯಾಪಾರ ಪದ್ಧತಿಗಳಿಗಾಗಿ ಸಿಸಿಪಿಎ ವಿವಿಧ ತರಬೇತಿ ಸಂಸ್ಥೆಗಳಿಗೆ 57 ನೋಟಿಸ್‌ಗಳನ್ನು ನೀಡಿದೆ. 1,09,60,000 ರೂಪಾಯಿ ಮೊತ್ತದ ದಂಡವನ್ನು 28 ತರಬೇತಿ ಸಂಸ್ಥೆಗಳಿಗೆ ವಿಧಿಸಲಾಗಿದೆ, ಜೊತೆಗೆ ಅಂತಹ ತಪ್ಪುದಾರಿಗೆಳೆಯುವ ಕ್ಲೇಮ್ ಮಾಡುವುದನ್ನು ನಿಲ್ಲಿಸಲು ನಿರ್ದೇಶನಗಳನ್ನು ನೀಡಲಾಗಿದೆ.
ಎಲ್ಲಾ ಕೋಚಿಂಗ್ ಸಂಸ್ಥೆಗಳು ತಮ್ಮ ಜಾಹೀರಾತುಗಳಲ್ಲಿ ಮಾಹಿತಿಯನ್ನು ಸತ್ಯ ಮತ್ತು ಪಾರದರ್ಶಕವಾಗಿ ಬಹಿರಂಗಪಡಿಸುವುದನ್ನು ಕಟ್ಟುನಿಟ್ಟಾಗಿ ಖಾತ್ರಿಪಡಿಸಿಕೊಳ್ಳಬೇಕು ಎಂದು ಪ್ರಾಧಿಕಾರವು ಬಲವಾಗಿ ಪ್ರತಿಪಾದಿಸಿದೆ, ಇದರಿಂದ ವಿದ್ಯಾರ್ಥಿಗಳು ನ್ಯಾಯಯುತ ಮತ್ತು ಸರಿಯಾದ ಮಾಹಿತಿಯೊಂದಿಗೆ ಉತ್ತಮ ಶೈಕ್ಷಣಿಕ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಾಧ್ಯವಾಗುತ್ತದೆ.
(ಕೇಂದ್ರ ಗ್ರಾಹಕರ ರಕ್ಷಣಾ ಪ್ರಾಧಿಕಾರದ ವೆಬ್ ಸೈಟ್ ನಲ್ಲಿ ಅಂತಿಮ ಆದೇಶದ ಪ್ರತಿ ಲಭ್ಯವಿದೆ: https://doca.gov.in/ccpa/orders-advisories.php?page_no=1)
*****
(ಪ್ರಕಟಣೆ ಐ.ಡಿ.: 2208512)
ವಿಸಿಟರ್ ಕೌಂಟರ್ : 50