ಪ್ರಧಾನ ಮಂತ್ರಿಯವರ ಕಛೇರಿ
ಮಾಜಿ ಪ್ರಧಾನಮಂತ್ರಿ ಅಟಲ್ ಬಿಹಾರಿ ವಾಜಪೇಯಿ ಅವರ 101ನೇ ಜನ್ಮ ವಾರ್ಷಿಕೋತ್ಸವದ ಪ್ರಯುಕ್ತ ಡಿಸೆಂಬರ್ 25 ರಂದು ಉತ್ತರ ಪ್ರದೇಶಕ್ಕೆ ಭೇಟಿ ನೀಡಲಿರುವ ಪ್ರಧಾನಮಂತ್ರಿ
ಮಾಜಿ ಪ್ರಧಾನಮಂತ್ರಿ ಅಟಲ್ ಬಿಹಾರಿ ವಾಜಪೇಯಿ ಅವರ ಜೀವನ ಮತ್ತು ಆದರ್ಶಗಳ ಗೌರವಾರ್ಥವಾಗಿ ಲಕ್ನೋದಲ್ಲಿ ʻರಾಷ್ಟ್ರ ಪ್ರೇರಣಾ ಸ್ಥಳʼವನ್ನು ಉದ್ಘಾಟಿಸಲಿರುವ ಪ್ರಧಾನಮಂತ್ರಿ
ʻರಾಷ್ಟ್ರ ಪ್ರೇರಣಾ ಸ್ಥಳʼದಲ್ಲಿ ಡಾ. ಶ್ಯಾಮ್ ಪ್ರಸಾದ್ ಮುಖರ್ಜಿ, ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಮತ್ತು ಮಾಜಿ ಪ್ರಧಾನಮಂತ್ರಿ ಅಟಲ್ ಬಿಹಾರಿ ವಾಜಪೇಯಿ ಅವರ 65 ಅಡಿ ಎತ್ತರದ ಕಂಚಿನ ಪ್ರತಿಮೆಗಳಿವೆ
ʻರಾಷ್ಟ್ರ ಪ್ರೇರಣಾ ಸ್ಥಳʼವು ಭಾರತದ ರಾಷ್ಟ್ರೀಯ ಪಯಣ ಮತ್ತು ನಾಯಕತ್ವದ ಪರಂಪರೆಯನ್ನು ಪ್ರದರ್ಶಿಸುವ ಕಮಲದ ಆಕಾರದ ಅತ್ಯಾಧುನಿಕ ವಸ್ತುಸಂಗ್ರಹಾಲಯವನ್ನು ಸಹ ಹೊಂದಿದೆ
प्रविष्टि तिथि:
24 DEC 2025 11:05AM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಜಿ ಪ್ರಧಾನಮಂತ್ರಿ ಭಾರತ ರತ್ನ ಶ್ರೀ ಅಟಲ್ ಬಿಹಾರಿ ವಾಜಪೇಯಿ ಅವರ 101ನೇ ಜನ್ಮ ದಿನಾಚರಣೆಯ ಪ್ರಯುಕ್ತ 2025ರ ಡಿಸೆಂಬರ್ 25 ರಂದು ಉತ್ತರ ಪ್ರದೇಶದ ಲಕ್ನೋಗೆ ಭೇಟಿ ನೀಡಲಿದ್ದಾರೆ. ಮಧ್ಯಾಹ್ನ 2.30ರ ಸುಮಾರಿಗೆ ಪ್ರಧಾನಮಂತ್ರಿ ಅವರು ʻರಾಷ್ಟ್ರ ಪ್ರೇರಣಾ ಸ್ಥಳʼವನ್ನು ಉದ್ಘಾಟಿಸಲಿದ್ದಾರೆ ಮತ್ತು ಈ ಸಂದರ್ಭದಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಲಿದ್ದಾರೆ.
ʻರಾಷ್ಟ್ರ ಪ್ರೇರಣಾ ಸ್ಥಳʼವು ಸ್ವತಂತ್ರ ಭಾರತದ ದಿಗ್ಗಜ ನಾಯಕರ ಪರಂಪರೆಯನ್ನು ಗೌರವಿಸುವ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ದೂರದೃಷ್ಟಿಯಿಂದ ಪ್ರೇರಿತವಾಗಿದೆ. ಇದು ತಮ್ಮ ನಾಯಕತ್ವದ ಮೂಲಕ ರಾಷ್ಟ್ರದ ಪ್ರಜಾಸತ್ತಾತ್ಮಕ, ರಾಜಕೀಯ ಮತ್ತು ಅಭಿವೃದ್ಧಿಯ ಪ್ರಯಾಣದ ಮೇಲೆ ಆಳವಾದ ಪ್ರಭಾವ ಬೀರಿದ ಭಾರತದ ಅತ್ಯಂತ ಗೌರವಾನ್ವಿತ ರಾಜಕಾರಣಿಗಳ ಜೀವನ, ಆದರ್ಶಗಳು ಮತ್ತು ಅನಂತ ಪರಂಪರೆಗೆ ಗೌರವ ಸಲ್ಲಿಸುತ್ತದೆ.
ಹೆಗ್ಗುರುತಿನ ರಾಷ್ಟ್ರೀಯ ಸ್ಮಾರಕವಾಗಿ ʻರಾಷ್ಟ್ರ ಪ್ರೇರಣಾ ಸ್ಥಳʼವನ್ನು ಅಭಿವೃದ್ಧಿಪಡಿಸಲಾಗಿದ್ದು, ಇದು ಶಾಶ್ವತವಾದ ರಾಷ್ಟ್ರೀಯ ಪ್ರಾಮುಖ್ಯತೆಯ ಸ್ಫೂರ್ತಿ ಸಂಕೀರ್ಣವೂ ಹೌದು. ಅಂದಾಜು 230 ಕೋಟಿ ರೂ.ಗಳ ವೆಚ್ಚದಲ್ಲಿ ನಿರ್ಮಿಸಲಾದ ಮತ್ತು 65 ಎಕರೆ ವಿಸ್ತಾರ ಪ್ರದೇಶದಲ್ಲಿ ವ್ಯಾಪಿಸಿರುವ ಈ ಸಂಕೀರ್ಣವನ್ನು ನಾಯಕತ್ವದ ಮೌಲ್ಯಗಳು, ರಾಷ್ಟ್ರೀಯ ಸೇವೆ, ಸಾಂಸ್ಕೃತಿಕ ಪ್ರಜ್ಞೆ ಮತ್ತು ಸಾರ್ವಜನಿಕ ಸ್ಫೂರ್ತಿಯನ್ನು ಬೆಳೆಸಲು ಮೀಸಲಾದ ಶಾಶ್ವತ ರಾಷ್ಟ್ರೀಯ ಆಸ್ತಿಯಾಗಿ ರೂಪಿಸಲಾಗಿದೆ.
ಈ ಸಂಕೀರ್ಣವು ಡಾ. ಶ್ಯಾಮ್ ಪ್ರಸಾದ್ ಮುಖರ್ಜಿ, ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಮತ್ತು ಮಾಜಿ ಪ್ರಧಾನಮಂತ್ರಿ ಶ್ರೀ ಅಟಲ್ ಬಿಹಾರಿ ವಾಜಪೇಯಿ ಅವರ 65 ಅಡಿ ಎತ್ತರದ ಕಂಚಿನ ಪ್ರತಿಮೆಗಳನ್ನು ಹೊಂದಿದೆ. ಇದು ಭಾರತದ ರಾಜಕೀಯ ಚಿಂತನೆ, ರಾಷ್ಟ್ರ ನಿರ್ಮಾಣ ಮತ್ತು ಸಾರ್ವಜನಿಕ ಜೀವನಕ್ಕೆ ಈ ನಾಯಕರ ಪ್ರಮುಖ ಕೊಡುಗೆಗಳನ್ನು ಸಂಕೇತಿಸುತ್ತದೆ. ಸುಮಾರು 98,000 ಚದರ ಅಡಿ ವಿಸ್ತೀರ್ಣದಲ್ಲಿ ಕಮಲದ ಆಕಾರದಲ್ಲಿ ವಿನ್ಯಾಸಗೊಳಿಸಲಾದ ಅತ್ಯಾಧುನಿಕ ವಸ್ತುಸಂಗ್ರಹಾಲಯವನ್ನು ಸಹ ಇದು ಹೊಂದಿದೆ. ಈ ವಸ್ತುಸಂಗ್ರಹಾಲಯವು ಭಾರತದ ರಾಷ್ಟ್ರೀಯ ಪ್ರಯಾಣ ಹಾಗೂ ಸುಧಾರಿತ ಡಿಜಿಟಲ್ ಮತ್ತು ತಲ್ಲೀನಗೊಳಿಸುವ ತಂತ್ರಜ್ಞಾನಗಳ ಮೂಲಕ ಈ ದೂರದೃಷ್ಟಿಯ ನಾಯಕರ ಕೊಡುಗೆಗಳನ್ನು ಪ್ರದರ್ಶಿಸುತ್ತದೆ. ಸಂದರ್ಶಕರಿಗೆ ಆಕರ್ಷಕ ಮತ್ತು ಶೈಕ್ಷಣಿಕ ಅನುಭವವನ್ನು ನೀಡುತ್ತದೆ.
ʻರಾಷ್ಟ್ರ ಪ್ರೇರಣಾ ಸ್ಥಳʼದ ಉದ್ಘಾಟನೆಯು ನಿಸ್ವಾರ್ಥ ನಾಯಕತ್ವ ಮತ್ತು ಉತ್ತಮ ಆಡಳಿತದ ಆದರ್ಶಗಳನ್ನು ಸಂರಕ್ಷಿಸುವ ಮತ್ತು ಉತ್ತೇಜಿಸುವಲ್ಲಿ ಒಂದು ಪ್ರಮುಖ ಹೆಜ್ಜೆಯಾಗಿದೆ. ಜೊತೆಗೆ, ಇದು ಪ್ರಸ್ತುತ ಮತ್ತು ಭವಿಷ್ಯದ ಪೀಳಿಗೆಗೆ ಸ್ಫೂರ್ತಿಯ ಮೂಲವಾಗಿ ಕಾರ್ಯನಿರ್ವಹಿಸುವ ನಿರೀಕ್ಷೆಯಿದೆ.
*****
(रिलीज़ आईडी: 2208301)
आगंतुक पटल : 12
इस विज्ञप्ति को इन भाषाओं में पढ़ें:
English
,
Urdu
,
हिन्दी
,
Marathi
,
Bengali
,
Assamese
,
Punjabi
,
Gujarati
,
Odia
,
Tamil
,
Telugu
,
Malayalam