ಗ್ರಾಮೀಣಾಭಿವೃದ್ಧಿ ಸಚಿವಾಲಯ
azadi ka amrit mahotsav

"‘ವಿಕಸಿತ ಭಾರತ: ಜಿ ರಾಮ್ ಜಿ’ ಯೋಜನೆಯು ನರೇಗಾ (MGNREGA) ಯೋಜನೆಗಿಂತ ಒಂದು ಹೆಜ್ಜೆ ಮುಂದಿನ ಆಲೋಚನೆಯಾಗಿದೆ." — ಶ್ರೀ ಶಿವರಾಜ್ ಸಿಂಗ್ ಚೌಹಾಣ್, ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವರು


"ನನ್ನ ಕಾರ್ಮಿಕ ಸಹೋದರರೇ, ಈಗ ಕೇವಲ 100 ದಿನಗಳ ಕೆಲಸವಲ್ಲ, ಬದಲಿಗೆ 125 ದಿನಗಳ ಕೆಲಸದ ಕಾನೂನುಬದ್ಧ ಖಾತರಿ ಇರುತ್ತದೆ." — ಶ್ರೀ ಶಿವರಾಜ್ ಸಿಂಗ್ ಚೌಹಾಣ್

“ಮತ್ತೊಮ್ಮೆ, MGNREGA ಹೆಸರಿನಲ್ಲಿ ದೇಶವನ್ನು ದಾರಿತಪ್ಪಿಸುವ ಪಿತೂರಿ ನಡೆಯುತ್ತಿದೆ” ಎಂದು ಶ್ರೀ ಚೌಹಾಣ್ ಹೇಳಿದರು

प्रविष्टि तिथि: 21 DEC 2025 8:26PM by PIB Bengaluru

ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಇಂದು ‘ವಿಕಸಿತ ಭಾರತ: ಜಿ ರಾಮ್ ಜಿ’ (Viksit Bharat: G Ram G) ವಿಧೇಯಕಕ್ಕೆ ಅಂಕಿತ ಹಾಕಿದ್ದಾರೆ. ಈ ಮೂಲಕ, ಸದರಿ ವಿಧೇಯಕವು ಈಗ ಅಧಿಕೃತವಾಗಿ ಕಾನೂನಾಗಿ ಮಾರ್ಪಟ್ಟಿದೆ. ರಾಷ್ಟ್ರಪತಿಯವರ ಅನುಮೋದನೆಯ ಬೆನ್ನಲ್ಲೇ, ಕೇಂದ್ರ ಗ್ರಾಮೀಣಾಭಿವೃದ್ಧಿ ಹಾಗೂ ಕೃಷಿ ಮತ್ತು ರೈತ ಕಲ್ಯಾಣ ಸಚಿವರಾದ ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಅವರು ‘ವಿಕಸಿತ ಭಾರತ: ಜಿ ರಾಮ್ ಜಿ ಕಾಯ್ದೆ’ಯ ವಿವರಗಳನ್ನು ನೀಡಲು ಮತ್ತು ಇದರ ಬಗ್ಗೆ ಹರಡಲಾಗುತ್ತಿರುವ ತಪ್ಪು ಕಲ್ಪನೆಗಳನ್ನು ಹೋಗಲಾಡಿಸಲು ಅಧಿಕೃತ ಹೇಳಿಕೆಯೊಂದನ್ನು ಬಿಡುಗಡೆ ಮಾಡಿದ್ದಾರೆ.

MGNREGA ಹೆಸರಿನಲ್ಲಿ ದೇಶವನ್ನು ಮತ್ತೊಮ್ಮೆ ದಾರಿ ತಪ್ಪಿಸಲು ಉದ್ದೇಶಪೂರ್ವಕ ಪ್ರಯತ್ನ ನಡೆಯುತ್ತಿದೆ ಎಂದು ಕೇಂದ್ರ ಸಚಿವರು ತಿಳಿಸಿದರು. “ಈ ಬಗ್ಗೆ ವದಂತಿಗಳನ್ನು ಹರಡಲಾಗುತ್ತಿದೆ. ಆದರೆ ವಾಸ್ತವವೆಂದರೆ, ‘ವಿಕಸಿತ ಭಾರತ: ಜಿ ರಾಮ್ ಜಿ ಯೋಜನೆ’ಯು ನರೇಗಾ ಯೋಜನೆಗಿಂತ ಒಂದು ಪ್ರಗತಿಪರ ಮತ್ತು ಸುಧಾರಿತ ಹೆಜ್ಜೆಯಾಗಿದೆ” ಎಂದು ಅವರು ಪ್ರತಿಪಾದಿಸಿದರು.

ಶ್ರೀ ಚೌಹಾಣ್ ಅವರು ನೀಡಿದ ಮಾಹಿತಿಯ ಪ್ರಕಾರ, ಈ ಹೊಸ ಕಾರ್ಯಕ್ರಮವು ಈ ಹಿಂದಿನ 100 ದಿನಗಳ ಬದಲಾಗಿ ಈಗ 125 ದಿನಗಳ ಉದ್ಯೋಗದ ಕಾನೂನುಬದ್ಧ ಖಾತರಿಯನ್ನು ಖಚಿತಪಡಿಸುತ್ತದೆ. ಕೆಲಸ ಲಭ್ಯವಿಲ್ಲದ ಸಂದರ್ಭದಲ್ಲಿ ನೀಡಲಾಗುವ ನಿರುದ್ಯೋಗ ಭತ್ಯೆಯ ನಿಬಂಧನೆಯನ್ನು ಸಹ ಈಗ ಮತ್ತಷ್ಟು ಬಲಪಡಿಸಲಾಗಿದೆ. ಇದರ ಜೊತೆಗೆ, ಕೂಲಿ ಪಾವತಿಯಲ್ಲಿ ವಿಳಂಬವಾದರೆ ಈಗ ಹೆಚ್ಚುವರಿ ಪರಿಹಾರ ನೀಡುವ ನಿಯಮವನ್ನೂ ಸಹ ರೂಪಿಸಲಾಗಿದೆ.

ಸರ್ಕಾರದ ಬದ್ಧತೆಯನ್ನು ತಿಳಿಸುತ್ತಾ ಮಾತನಾಡಿದ ಕೇಂದ್ರ ಸಚಿವರು, ಈ ಯೋಜನೆಯಡಿ ಪ್ರಸಕ್ತ ಸಾಲಿನಲ್ಲಿ ₹1,51,282 ಕೋಟಿಗೂ ಅಧಿಕ ಬೃಹತ್ ಮೊತ್ತವನ್ನು ಹಂಚಿಕೆ ಮಾಡಲು ಉದ್ದೇಶಿಸಲಾಗಿದೆ ಎಂದು ತಿಳಿಸಿದರು. ಇದು ಉದ್ಯೋಗ ಒದಗಿಸಲು ಮತ್ತು ಸಮಗ್ರ ಗ್ರಾಮೀಣಾಭಿವೃದ್ಧಿಯನ್ನು ಉತ್ತೇಜಿಸಲು ಸಮರ್ಪಕ ಹಣಕಾಸಿನ ಲಭ್ಯತೆಯನ್ನು ಖಚಿತಪಡಿಸುತ್ತದೆ. ಅಭಿವೃದ್ಧಿ ಹೊಂದಿದ, ಸ್ವಾವಲಂಬಿ ಮತ್ತು ಹೇರಳ ಉದ್ಯೋಗಾವಕಾಶಗಳಿಂದ ಕೂಡಿದ ಬಡತನಮುಕ್ತ ಗ್ರಾಮಗಳನ್ನು ನಿರ್ಮಿಸುವುದು ಇದರ ಪ್ರಮುಖ ಉದ್ದೇಶವಾಗಿದೆ.

‘ವಿಕಸಿತ ಗ್ರಾಮಗಳ ಮೂಲಕ ವಿಕಸಿತ ಭಾರತ’ ಎಂಬ ಈ ದೂರದೃಷ್ಟಿಯ ಅಡಿಯಲ್ಲಿ ಜಲ ಸಂರಕ್ಷಣೆ, ಗ್ರಾಮೀಣ ಮೂಲಸೌಕರ್ಯ, ಜೀವನೋಪಾಯ ಚಟುವಟಿಕೆಗಳು ಮತ್ತು ವಿಪತ್ತು ನಿರ್ವಹಣೆಗೆ ಸಂಬಂಧಿಸಿದ ಕಾಮಗಾರಿಗಳಿಗೆ ಆದ್ಯತೆ ನೀಡಲಾಗುವುದು. ಈ ಕಾಮಗಾರಿಗಳು ಗ್ರಾಮೀಣ ಭಾಗದ ಚೇತೋಹಾರಿ ಶಕ್ತಿ ಮತ್ತು ಉತ್ಪಾದಕತೆಯನ್ನು ಬಲಪಡಿಸುವ ಜೊತೆಗೆ ಸುಸ್ಥಿರ ಆದಾಯದ ಮೂಲಗಳನ್ನು ಸೃಷ್ಟಿಸಲಿವೆ.

ಶ್ರೀ ಚೌಹಾಣ್ ಅವರು "125 ದಿನಗಳ ಉದ್ಯೋಗ ಖಾತರಿಯೊಂದಿಗೆ, ಸಣ್ಣ ಮತ್ತು ಅತಿಸಣ್ಣ ರೈತರು ಕೃಷಿ ಹಂಗಾಮಿನ ಸಮಯದಲ್ಲಿ ಯಾವುದೇ ತೊಂದರೆಗಳನ್ನು ಎದುರಿಸದಂತೆ ವಿಶೇಷ ನಿಬಂಧನೆಗಳನ್ನು ಮಾಡಲಾಗಿದೆ. ಈ ಕಾನೂನು ಬಡವರ ಪರವಾಗಿ, ಪ್ರಗತಿಯ ಬೆಂಬಲವಾಗಿ ಮತ್ತು ಕಾರ್ಮಿಕರ ಉದ್ಯೋಗದ ಸಂಪೂರ್ಣ ಖಾತರಿಯ ಪರವಾಗಿ ದೃಢವಾಗಿ ನಿಂತಿದೆ. ವಿಕಸಿತ ಭಾರತದ ಅಡಿಪಾಯವಾಗಿ ವಿಕಸಿತ ಗ್ರಾಮಗಳನ್ನು ನಿರ್ಮಿಸುವ ಪ್ರತಿಜ್ಞೆಯನ್ನು ಇದು ಮುಂದುವರಿಸುತ್ತದೆ " ಎಂದು ಹೇಳಿದರು.

ಹೆಚ್ಚುವರಿ ಕ್ರಮಗಳ ಬಗ್ಗೆ ವಿವರಿಸುತ್ತಾ ಮಾತನಾಡಿದ ಕೇಂದ್ರ ಸಚಿವರು, ಈ ಕಾಯ್ದೆಯಡಿ ಮತ್ತೊಂದು ಮಹತ್ವದ ಅವಕಾಶವೆಂದರೆ ಆಡಳಿತಾತ್ಮಕ ವೆಚ್ಚದ ಮಿತಿಯನ್ನು ಶೇ. 6 ರಿಂದ ಶೇ. 9 ಕ್ಕೆ ಹೆಚ್ಚಿಸಿರುವುದು ಎಂದು ಹೇಳಿದರು. ಪ್ರಸ್ತಾವಿತ ₹1,51,282 ಕೋಟಿ ಹಂಚಿಕೆಯಲ್ಲಿ ಶೇ. 9 ರಷ್ಟು ಎಂದರೆ ಸುಮಾರು ₹13,000 ಕೋಟಿಗಳಾಗುತ್ತವೆ. ಈ ಹೆಚ್ಚಳಗೊಂಡ ಆಡಳಿತಾತ್ಮಕ ವೆಚ್ಚವು ಯೋಜನೆಯ ಅನುಷ್ಠಾನಕ್ಕೆ ಶ್ರಮಿಸುವ ಪಂಚಾಯತ್ ಕಾರ್ಯದರ್ಶಿಗಳು, ಉದ್ಯೋಗ ಸಹಾಯಕರು ಮತ್ತು ತಾಂತ್ರಿಕ ಸಿಬ್ಬಂದಿ ವರ್ಗದವರಿಗೆ ಸಕಾಲದಲ್ಲಿ ಮತ್ತು ಸಮರ್ಪಕ ಸಂಭಾವನೆ ದೊರೆಯುವುದನ್ನು ಖಚಿತಪಡಿಸುತ್ತದೆ. ಖಚಿತವಾದ ಆರ್ಥಿಕ ಬೆಂಬಲದೊಂದಿಗೆ, ಈ ಮುಂಚೂಣಿ ತಂಡಗಳು ಯೋಜನೆಗಳನ್ನು ಸಮರ್ಥವಾಗಿ ನಿರ್ವಹಿಸಲು ಮತ್ತು ತಳಮಟ್ಟದಲ್ಲಿ ಉತ್ತಮ ಗುಣಮಟ್ಟದ ಕೆಲಸವನ್ನು ಖಚಿತಪಡಿಸಿಕೊಳ್ಳಲು ಉತ್ತಮವಾಗಿ ಸಜ್ಜುಗೊಳ್ಳಲಿವೆ.

ಕೇಂದ್ರ ಸಚಿವರ ಪ್ರಕಾರ, ‘ವಿಕಸಿತ ಭಾರತ: ಜಿ ರಾಮ್ ಜಿ ಕಾಯ್ದೆ’ (Viksit Bharat: G Ram G Act) ಯು ಒಳಗೊಳ್ಳುವ ಪ್ರಗತಿ, ಗ್ರಾಮೀಣ ಪುನರುಜ್ಜೀವನ ಮತ್ತು ಕಾರ್ಮಿಕರ ಸಬಲೀಕರಣಕ್ಕೆ ಸರ್ಕಾರದ ಆಳವಾದ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ. ಇದು ಖಾತರಿಪಡಿಸಿದ ಉದ್ಯೋಗ, ನ್ಯಾಯಯುತ ವೇತನ ಮತ್ತು ಸಮುದಾಯದ ಸಹಭಾಗಿತ್ವದ ಆಸ್ತಿಗಳ ಮೂಲಕ ಪ್ರತಿಯೊಂದು ಹಳ್ಳಿಯನ್ನು ಉತ್ಪಾದಕತೆ, ಘನತೆ ಮತ್ತು ಸುಸ್ಥಿರತೆಯ ಕೇಂದ್ರವಾಗಿ ಪರಿವರ್ತಿಸುವ ಗುರಿಯನ್ನು ಹೊಂದಿದೆ.

"ಈ ಕಾನೂನು ಬಡವರ ಹಕ್ಕುಗಳಿಗಾಗಿ ಮತ್ತು ರಾಷ್ಟ್ರದ ಸಮೃದ್ಧಿಗಾಗಿ ರೂಪಿತವಾಗಿದೆ," ಎಂದು ಶ್ರೀ ಚೌಹಾಣ್ ದೃಢವಾಗಿ ಹೇಳಿದರು. "ಇದು ನಮ್ಮ ಕಾರ್ಮಿಕರಿಗೆ ಉದ್ಯೋಗದ ಖಾತರಿ ನೀಡುತ್ತದೆ ಮತ್ತು ಸಬಲ ಹಾಗೂ ಸಮೃದ್ಧ ಗ್ರಾಮಗಳ ಮೂಲಕ ವಿಕಸಿತ ಭಾರತಕ್ಕೆ ಭದ್ರ ಬುನಾದಿಯನ್ನು ನಿರ್ಮಿಸುತ್ತದೆ "ಎಂದು ಅವರು ಹೇಳಿದರು.

ತಮ್ಮ ಮಾತುಗಳನ್ನು ಮುಕ್ತಾಯಗೊಳಿಸುತ್ತಾ, ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಅವರು ಈ ಕಾಯ್ದೆಯ ಬಗ್ಗೆ ಸತ್ಯವನ್ನು ಜನರ ನಡುವೆ ಹರಡಲು ಸಹಾಯ ಮಾಡುವಂತೆ ನಾಗರಿಕರಿಗೆ ಮತ್ತು ಎಲ್ಲಾ ಪಾಲುದಾರರಿಗೆ ಮನವಿ ಮಾಡಿದರು: "ನಿಖರವಾದ ಮಾಹಿತಿಯು ಪ್ರತಿ ಮನೆಮನೆಗೂ ತಲುಪುವಂತೆ ನಾವು ಖಚಿತಪಡಿಸಿಕೊಳ್ಳೋಣ ಮತ್ತು ಯಾರೂ ಸಹ ತಪ್ಪು ಮಾಹಿತಿಗೆ ಬಲಿಯಾಗದಂತೆ ನೋಡಿಕೊಳ್ಳೋಣ. ‘ವಿಕಸಿತ ಭಾರತ: ಜಿ ರಾಮ್ ಜಿ’ ಎಂಬುದು ಕೇವಲ ಬದಲಿಯಲ್ಲ, ಬದಲಿಗೆ ಇದು MGNREGA ಅಡಿಯಲ್ಲಿ ರೂಪಿಸಲಾದ ದೃಷ್ಟಿಕೋನದ ಹೆಚ್ಚು ಬಲಿಷ್ಠ ಮತ್ತು ಭವಿಷ್ಯದ ದೃಷ್ಟಿಯುಳ್ಳ ಮುಂದುವರಿದ ಭಾಗವಾಗಿದೆ. ಈ ದೃಷ್ಟಿಕೋನವು ಈಗ ನಿಜವಾದ ವಿಕಸಿತ ಭಾರತದ ಕನಸನ್ನು ನನಸು ಮಾಡಲು ಮತ್ತಷ್ಟು ವಿಸ್ತರಿಸಲ್ಪಟ್ಟಿದೆ " ಎಂದು ಅವರು ಹೇಳಿದರು.

****


(रिलीज़ आईडी: 2207275) आगंतुक पटल : 25
इस विज्ञप्ति को इन भाषाओं में पढ़ें: Telugu , Urdu , Bengali , English , Malayalam , Marathi , हिन्दी , Gujarati