ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ
azadi ka amrit mahotsav

ಪುದುಚೇರಿಯಲ್ಲಿ 'ಫಿಟ್ ಇಂಡಿಯಾ ಸಂಡೇಸ್ ಆನ್ ಸೈಕಲ್' ಅಭಿಯಾನದ ಮೊದಲ ವರ್ಷದ ಸಂಭ್ರಮಾಚರಣೆಯ ನೇತೃತ್ವ ವಹಿಸಿದ ಡಾ. ಮನ್ಸುಖ್ ಮಾಂಡವಿಯ


ರಾಕ್ ಬೀಚ್‌ನಲ್ಲಿ 1,500ಕ್ಕೂ ಹೆಚ್ಚು ಸೈಕಲ್ ಸವಾರರ ಭಾಗಿ

ಸೈಕ್ಲಿಂಗ್ ಪ್ರೇಮಿಗಳ ಉತ್ತೇಜನಕ್ಕಾಗಿ 'ಫಿಟ್ ಇಂಡಿಯಾ ಮೊಬೈಲ್ ಆ್ಯಪ್ ಕಾರ್ಬನ್ ಕ್ರೆಡಿಟ್ ಇನ್ಸೆಂಟಿವೈಸೇಶನ್'ಗೆ ಚಾಲನೆ ನೀಡಿದ ಕೇಂದ್ರ ಕ್ರೀಡಾ ಸಚಿವರು

ಖೇಲ್ ರತ್ನ ಪ್ರಶಸ್ತಿ ಪುರಸ್ಕೃತರಾದ ಶರತ್ ಕಮಲ್ ಮತ್ತು ಪಿಆರ್ ಶ್ರೀಜೇಶ್ ಅವರೊಂದಿಗೆ ಪುದುಚೇರಿ ಲೆಫ್ಟಿನೆಂಟ್ ಗವರ್ನರ್ ಕೆ. ಕೈಲಾಶ್ನಾಥನ್, ಮುಖ್ಯಮಂತ್ರಿ ಎನ್. ರಂಗಸಾಮಿ ಈ ಮಹತ್ವದ  ಕಾರ್ಯಕ್ರಮದಲ್ಲಿ ಪಾಲ್ಗೊಂಡರು 

प्रविष्टि तिथि: 21 DEC 2025 2:33PM by PIB Bengaluru

ಕೇಂದ್ರ ಯುವಜನ ವ್ಯವಹಾರ ಮತ್ತು ಕ್ರೀಡಾ ಸಚಿವರಾದ ಡಾ. ಮನ್ಸುಖ್ ಮಾಂಡವಿಯ ಅವರು ಕಳೆದ ಒಂದು ವರ್ಷದ ಸಂಪೂರ್ಣ ಅನುಭವವನ್ನು ಸಂಕ್ಷಿಪ್ತವಾಗಿ ಹೀಗೆ ಹಂಚಿಕೊಂಡಿದ್ದಾರೆ: "2 ಲಕ್ಷಕ್ಕೂ ಅಧಿಕ ಸ್ಥಳಗಳು, 20 ಲಕ್ಷಕ್ಕೂ ಹೆಚ್ಚು ಜನರು. ಒಂದೇ ಗುರಿ - ಫಿಟ್ ಇಂಡಿಯಾ. #SundaysOnCycle ಅಭಿಯಾನದ 1 ವರ್ಷದ ಸಂಭ್ರಮಾಚರಣೆ," ಎಂದು ಅವರು ಇಂದು ಭಾನುವಾರ ಬೆಳಿಗ್ಗೆ 'X' (ಟ್ವಿಟರ್) ನಲ್ಲಿ ಬರೆದುಕೊಂಡಿದ್ದಾರೆ.

ಶಾಲಾ ವಿದ್ಯಾರ್ಥಿಗಳು, ನಮೋ ಸೈಕ್ಲಿಂಗ್ ಕ್ಲಬ್‌ ಗಳು, ಪುದುಚೇರಿ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಸೇರಿದಂತೆ ಸಮಾಜದ ವಿವಿಧ ಸ್ತರಗಳ 1,500ಕ್ಕೂ ಹೆಚ್ಚು ಸೈಕ್ಲಿಂಗ್ ಪಟುಗಳು ಪುದುಚೇರಿಯ ರಮಣೀಯ 'ರಾಕ್ ಬೀಚ್' ಅನ್ನು ಫಿಟ್‌ ನೆಸ್‌ ನ ರೋಮಾಂಚಕ ಹಬ್ಬವನ್ನಾಗಿ ಪರಿವರ್ತಿಸಿದರು. ಇದು ದೇಶದಲ್ಲಿ ಈ ಚಳುವಳಿಯ ಬೆಳೆಯುತ್ತಿರುವ ಪ್ರಾಮುಖ್ಯತೆ ಮತ್ತು ಸೈಕ್ಲಿಂಗ್‌ನ ಜನಪ್ರಿಯತೆಯನ್ನು ಪ್ರತಿಬಿಂಬಿಸಿತು.

ಪದ್ಮಭೂಷಣ ಮತ್ತು ಖೇಲ್ ರತ್ನ ಪ್ರಶಸ್ತಿ ವಿಜೇತರಾದ ಪಿ.ಆರ್. ಶ್ರೀಜೇಶ್ ಮತ್ತು ಶರತ್ ಕಮಲ್ ಅವರು ಯುವಕರೊಂದಿಗೆ ಸೈಕಲ್ ತುಳಿಯುವ ಮೂಲಕ, ಕ್ರೀಡೆ ಮತ್ತು ಫಿಟ್‌ನೆಸ್ ಅನ್ನು ಜೀವನದಲ್ಲಿ ಅಳವಡಿಸಿಕೊಳ್ಳಲು ಪಾಲ್ಗೊಂಡಿದ್ದವರಲ್ಲಿ ಮತ್ತಷ್ಟು ಸ್ಫೂರ್ತಿ ತುಂಬಿದರು.

ಪುದುಚೇರಿಯಲ್ಲಿ ನಡೆದ 'ಫಿಟ್ ಇಂಡಿಯಾ ಸಂಡೇಸ್ ಆನ್ ಸೈಕಲ್' ಅಭಿಯಾನದ ಐತಿಹಾಸಿಕ ಮೊದಲ ವಾರ್ಷಿಕೋತ್ಸವವು ಪ್ರತಿ ಹಂತದಲ್ಲೂ ಒಂದು ಪೂರ್ಣ ಪ್ರಮಾಣದ 'ಫಿಟ್‌ನೆಸ್ ಕಾರ್ನಿವಲ್' ಆಗಿ ಮಾರ್ಪಟ್ಟಿತು. ಇಲ್ಲಿ ಜುಂಬಾ, ಕ್ಯಾರಮ್, ಚೆಸ್, ಮಲ್ಲಕಂಬ, ಸಿಲಂಬಂ, ಯೋಗ ಮತ್ತು ಸ್ಕಿಪ್ಪಿಂಗ್‌ ನಂತಹ ವಿವಿಧ ಮೋಜಿನ ಕ್ರೀಡೆಗಳು ಹಾಗೂ ಚಟುವಟಿಕೆಗಳು ಜನರ ಗಮನ ಸೆಳೆದವು. ಕಾಕತಾಳೀಯವಾಗಿ, ಇಂದು ಅಂದರೆ ಡಿಸೆಂಬರ್ 21 ರಂದು 'ವಿಶ್ವ ಧ್ಯಾನ ದಿನ'ವೂ ಆಗಿರುವುದರಿಂದ, "ಫಿಟ್‌ನೆಸ್ ಎನ್ನುವುದು ವಾಸ್ತವವಾಗಿ ಚಲನೆಯಲ್ಲಿರುವ ಧ್ಯಾನ" (Fitness is Meditation in Motion) ಎಂಬ ಮಹತ್ವದ ಸಂದೇಶವನ್ನು ಈ ಕಾರ್ಯಕ್ರಮದ ಮೂಲಕ ಸಾಮೂಹಿಕವಾಗಿ ಸಾರಲಾಯಿತು.

ಇಂದು ಪುದುಚೇರಿಯಲ್ಲಿ ನಡೆದ ಭಾನುವಾರ ಬೆಳಗಿನ ಈ ಸಮಾವೇಶದಲ್ಲಿ ಗೌರವಾನ್ವಿತ ಕೇಂದ್ರ ಕ್ರೀಡಾ ಸಚಿವ ಡಾ. ಮನ್ಸುಖ್ ಮಾಂಡವಿಯ ಅವರೊಂದಿಗೆ ಲೆಫ್ಟಿನೆಂಟ್ ಗವರ್ನರ್ ಕೆ. ಕೈಲಾಶನಾಥನ್, ಮುಖ್ಯಮಂತ್ರಿ ಎನ್. ರಂಗಸ್ವಾಮಿ, ವಿಧಾನಸಭಾ ಸ್ಪೀಕರ್ ಆರ್. ಸೆಲ್ವಂ, ಪುದುಚೇರಿ ಗೃಹ ಸಚಿವ ಎ. ನಮಶಿವಾಯಂ ಮತ್ತು ಇತರ ಗಣ್ಯ ಸರ್ಕಾರಿ ಅಧಿಕಾರಿಗಳು ಉಪಸ್ಥಿತರಿದ್ದರು. ಡಾ. ಮಾಂಡವಿಯ ಅವರು ಸರಿಯಾಗಿ ಒಂದು ವರ್ಷದ ಹಿಂದೆ ನವದೆಹಲಿಯಲ್ಲಿ ಈ ಅಭಿಯಾನದ ಚೊಚ್ಚಲ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದರು ಎಂಬುದು ಗಮನಾರ್ಹ.

ಸಭೆಯನ್ನುದ್ದೇಶಿಸಿ ಮಾತನಾಡಿದ ಡಾ. ಮಾಂಡವಿಯ ಅವರು, 'ಫಿಟ್ ಇಂಡಿಯಾ ಸಂಡೇಸ್ ಆನ್ ಸೈಕಲ್' ಅಭಿಯಾನವು ಅತ್ಯಂತ ಸರಳವಾಗಿ ಆರಂಭಗೊಂಡು, ಇಂದು ರಾಷ್ಟ್ರಮಟ್ಟದ ಬೃಹತ್ ಜನಚಳುವಳಿಯಾಗಿ ಹೇಗೆ ರೂಪಾಂತರಗೊಂಡಿದೆ ಎಂಬುದನ್ನು ವಿವರಿಸಿದರು.

"ಒಂದು ವರ್ಷದ ಹಿಂದೆ ನಾವು ಈ ಅಭಿಯಾನವನ್ನು ಪ್ರಾರಂಭಿಸಿದಾಗ, ಇದು ಕೇವಲ ಐದು ಸ್ಥಳಗಳಲ್ಲಿ ಸುಮಾರು 500 ಭಾಗಿಗಳೊಂದಿಗೆ ಆಯೋಜಿಸಲ್ಪಟ್ಟಿತ್ತು. ಆದರೆ ಇಂದು, ದೇಶಾದ್ಯಂತ 10,000ಕ್ಕೂ ಹೆಚ್ಚು ಸ್ಥಳಗಳಲ್ಲಿ ಪ್ರತಿ ಭಾನುವಾರ ಈ ಅಭಿಯಾನ ನಡೆಯುತ್ತಿದ್ದು, 10 ಲಕ್ಷಕ್ಕೂ ಅಧಿಕ ನಾಗರಿಕರು ನಿಯಮಿತವಾಗಿ ಇದರಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಇದು ಈಗ ಜನರ ಉತ್ಸಾಹ, ಒಂದು ಸಂಸ್ಕೃತಿ ಹಾಗೂ ಮಾಲಿನ್ಯಕ್ಕೆ ಪ್ರಬಲ ಪರಿಹಾರವಾಗಿ ಮಾರ್ಪಟ್ಟಿದೆ. ಗೌರವಾನ್ವಿತ ಪ್ರಧಾನಿ ನರೇಂದ್ರ ಮೋದಿ ಅವರು ಈ ಚಳುವಳಿಯನ್ನು ಬೊಜ್ಜಿನ (Obesity) ವಿರುದ್ಧದ ರಾಷ್ಟ್ರವ್ಯಾಪಿ ಹೋರಾಟವನ್ನಾಗಿ ಪರಿವರ್ತಿಸಲು ನೆರವಾಗಿದ್ದಾರೆ" ಎಂದು ಡಾ. ಮಾಂಡವಿಯ ತಿಳಿಸಿದರು.

ಪುದುಚೇರಿಯ ಲೆಫ್ಟಿನೆಂಟ್ ಗವರ್ನರ್ ಕೆ. ಕೈಲಾಶನಾಥನ್ ಅವರು ಈ ಅಭಿಯಾನವನ್ನು ಸಮಾಜಕ್ಕೆ ನೀಡಲಾದ ಸಕಾಲಿಕ ಸಂದೇಶ ಎಂದು ಬಣ್ಣಿಸಿದರು.

"ಗುಜರಾತ್‌ ನ ಭಾವನಗರದಲ್ಲಿರುವ ಡಾ. ಮಾಂಡವಿಯ ಅವರ ಸ್ವಂತ ಹಳ್ಳಿಯಲ್ಲಿ ಕೇವಲ 4,000 ಜನರಿದ್ದಾರೆ. ಅಲ್ಲಿ ಪ್ರತಿಯೊಬ್ಬರೂ ಸೈಕಲ್ ಮೂಲಕವೇ ಸಂಚರಿಸುತ್ತಾರೆ; ಅಲ್ಲಿ ಯಾವುದೇ ದ್ವಿಚಕ್ರ ಅಥವಾ ನಾಲ್ಕು ಚಕ್ರದ ವಾಹನಗಳಿಲ್ಲ. ನಾಗರಿಕರಾದ ನಾವು ನಮ್ಮ ಜೀವನಶೈಲಿಯಲ್ಲಿ ಮಾಡಿಕೊಳ್ಳುವ ಸಣ್ಣ ಬದಲಾವಣೆಗಳು ಪರಿಸರದ ಮೇಲೆ, ವಿಶೇಷವಾಗಿ ಇಂಗಾಲದ ಹೊರಸೂಸುವಿಕೆಯನ್ನು (Carbon footprint) ಕಡಿಮೆ ಮಾಡುವಲ್ಲಿ ಹೇಗೆ ಸಾಮೂಹಿಕವಾಗಿ ದೊಡ್ಡ ಬದಲಾವಣೆಯನ್ನು ತರಬಲ್ಲವು ಎಂಬುದನ್ನು ನಾವು ಅರಿತುಕೊಳ್ಳಬೇಕಿದೆ" ಎಂದು ಹೇಳಿದರು.

ಪುದುಚೇರಿ ಮುಖ್ಯಮಂತ್ರಿ ಎನ್. ರಂಗಸಾಮಿ ಅವರು ಫಿಟ್ನೆಸ್ ಅನ್ನು ಉತ್ತೇಜಿಸುವ ಫಿಟ್ ಇಂಡಿಯಾ ಆಂದೋಲನವನ್ನು ಶ್ಲಾಘಿಸಿದರು. "ಆರೋಗ್ಯವಾಗಿರಲು ಸೈಕ್ಲಿಂಗ್ ಅತ್ಯಂತ ಸುಲಭ ಮತ್ತು ಪರಿಣಾಮಕಾರಿ ಮಾರ್ಗಗಳಲ್ಲಿ ಒಂದಾಗಿದೆ. ನಮ್ಮ ದೇಹ ಸದೃಢವಾಗಿದ್ದಾಗ ಮಾತ್ರ ಜೀವನದಲ್ಲಿ ನಾವು ಅಂದುಕೊಂಡ ಗುರಿಗಳನ್ನು ತಲುಪಲು ಸಾಧ್ಯ. ಈ ಸಂಪೂರ್ಣ ಚಳುವಳಿಯ ಹಿಂದಿರುವ ಪ್ರಧಾನಮಂತ್ರಿಯವರ ದೂರದೃಷ್ಟಿಯನ್ನು ನಾನು ನಿಜವಾಗಿಯೂ ಪ್ರಶಂಸಿಸುತ್ತೇನೆ" ಎಂದು ಅವರು ಹೇಳಿದರು.

ಇಂದು ದೇಶಾದ್ಯಂತ 10,000ಕ್ಕೂ ಹೆಚ್ಚು ಸ್ಥಳಗಳಲ್ಲಿ ಈ ಅಭಿಯಾನವು ಏಕಕಾಲದಲ್ಲಿ ನಡೆಯಿತು. ಹಜಾರಿಬಾಗ್, ಕಾರ್ಗಿಲ್, ಪಟಿಯಾಲ, ಲಕ್ನೋ, ಗೋಲಾಘಾಟ್, ಛತ್ತೀಸ್‌ ಗಢದ ರಾಜನಂದಗಾಂವ್, ಹಿಸಾರ್, ತಿನ್ಸುಕಿಯಾ, ವಿಶಾಖಪಟ್ಟಣಂ, ಉತ್ತರಾಖಂಡದ ಕಾಶಿಪುರ ಹಾಗೂ ಕಟಕ್ ಸೇರಿದಂತೆ ದೇಶಾದ್ಯಂತದ ಭಾರತೀಯ ಕ್ರೀಡಾ ಪ್ರಾಧಿಕಾರ (SAI) ಮತ್ತು ಖೇಲೋ ಇಂಡಿಯಾ ಕೇಂದ್ರಗಳಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಈ ಬೃಹತ್ ಅಭಿಯಾನಕ್ಕೆ ದೇಶದ ವಿವಿಧ ಬ್ಯಾಂಕ್‌ ಗಳು ವಿಶೇಷ ಪಾಲುದಾರರಾಗಿ ಕೈಜೋಡಿಸಿದ್ದವು.

ಸೋನಿಪತ್ SAI ಕೇಂದ್ರದ ಅರ್ಜುನ ಪ್ರಶಸ್ತಿ ವಿಜೇತ ಬಿಲ್ಲುಗಾರರಾದ ಜ್ಯೋತಿ ಸುರೇಖಾ ಮತ್ತು ಅಭಿಷೇಕ್ ವರ್ಮಾ ಅವರು ಈ ಸಮಾವೇಶದ ಕಳೆ ಹೆಚ್ಚಿಸಿದ್ದರು. ಈ ಅಭಿಯಾನದ ಬೆನ್ನೆಲುಬಾಗಿರುವ 'ನಮೋ ಫಿಟ್ ಇಂಡಿಯಾ ಸೈಕ್ಲಿಂಗ್ ಕ್ಲಬ್‌ ಗಳು' ಮತ್ತು 'ಮೈ ಭಾರತ್' (My Bharat) ಸ್ವಯಂಸೇವಕರು ಈ 'ಸಂಡೇಸ್ ಆನ್ ಸೈಕಲ್' ಕಾರ್ಯಕ್ರಮಕ್ಕೆ ಹೊಸ ಚೈತನ್ಯ ತುಂಬಿದ್ದಾರೆ.

ಪುದುಚೇರಿಯಲ್ಲಿ ನಡೆದ ಈ ಸಮಾರಂಭದಲ್ಲಿ ಸೈಕ್ಲಿಂಗ್ ಪ್ರೇಮಿಗಳು ಬಹುಕಾಲದಿಂದ ಕಾಯುತ್ತಿದ್ದ 'ಫಿಟ್ ಇಂಡಿಯಾ ಮೊಬೈಲ್ ಆ್ಯಪ್ ಕಾರ್ಬನ್ ಕ್ರೆಡಿಟ್ ಇನ್ಸೆಂಟಿವೈಸೇಶನ್' (ಕಾರ್ಬನ್ ಕ್ರೆಡಿಟ್ ಪ್ರೋತ್ಸಾಹಕ ಸೌಲಭ್ಯ) ಸೌಲಭ್ಯಕ್ಕೆ ಚಾಲನೆ ನೀಡಲಾಯಿತು. ಅತಿ ಹೆಚ್ಚು ಕಾರ್ಬನ್ ಕ್ರೆಡಿಟ್ ಗಳಿಸಿದ ಮೂವರು ಸೈಕ್ಲಿಂಗ್ ಪಟುಗಳಾದ ಭರತ್‌ ಭಾಯ್ ಪರ್ಮಾರ್, ಶಶಿಕಾಂತ್ ವೀರ್ಕರ್ ಮತ್ತು ಗೋವಿಂದ್ ಸಿಂಗ್ ಅವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

ನಾಗರಿಕರು ಸೈಕಲ್ ತುಳಿಯುವ ಮೂಲಕ ಕಾರ್ಬನ್ ಕ್ರೆಡಿಟ್‌ ಗಳನ್ನು ಗಳಿಸಬಹುದು ಮತ್ತು ನಂತರ ಅವುಗಳನ್ನು ನಗದೀಕರಿಸಿಕೊಳ್ಳಬಹುದು (Redeem). "ಇಂದಿನಿಂದ ಪ್ರತಿ ತಿಂಗಳು ಫಿಟ್ ಇಂಡಿಯಾ ಆ್ಯಪ್ ಮೂಲಕ ಪ್ರತಿಯೊಂದು ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶದ ಸೈಕ್ಲಿಂಗ್ ಪಟುಗಳ ಸಾಧನೆಯನ್ನು ವಿಶ್ಲೇಷಿಸಲಾಗುತ್ತದೆ ಮತ್ತು ಅಗ್ರ ಮೂವರು ಸಾಧಕರಿಗೆ ಪ್ರೋತ್ಸಾಹಧನ ನೀಡಲಾಗುತ್ತದೆ. ಸೈಕ್ಲಿಂಗ್ ಅನ್ನು ದೈನಂದಿನ ಹವ್ಯಾಸವನ್ನಾಗಿ ರೂಢಿಸಿಕೊಳ್ಳುವ ನಾಗರಿಕರನ್ನು ಪ್ರೋತ್ಸಾಹಿಸುವುದು ಮತ್ತು ಗೌರವಿಸುವುದು ಇದರ ಉದ್ದೇಶವಾಗಿದೆ" ಎಂದು ಡಾ. ಮಾಂಡವಿಯ ವಿವರಿಸಿದರು.

'ಸಂಡೇಸ್ ಆನ್ ಸೈಕಲ್' ಅಭಿಯಾನದ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸಿದ ಹಾಗೂ ಈ ಆಶಯವನ್ನು ಜನಪ್ರಿಯಗೊಳಿಸಿದ ಫಿಟ್ ಇಂಡಿಯಾ ರಾಯಭಾರಿಗಳು ಮತ್ತು ಪ್ರಭಾವಿಗಳನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಇದರಲ್ಲಿ ನಿಧಿ ನಿಗಮ್, ಐಶ್ವರ್ಯ ರಾಜ್ (ಚಾಂಪಿಯನ್), ರಾಯಭಾರಿಗಳಾದ ಡಾ. ಶಿಖಾ ಗುಪ್ತಾ, ಯುಕ್ತಿ ಆರ್ಯ, ಪರ್ವತಾರೋಹಿ ದಿವ್ಯಾ ಅರುಳ್ ಹಾಗೂ ತಮಿಳುನಾಡು ರಾಜ್ಯ ಸೈಕ್ಲಿಂಗ್ ಚಾಂಪಿಯನ್ ಶಿವ ಸೆಂಥಿಲ್ ಸೇರಿದ್ದಾರೆ.

ಈ ಸೈಕ್ಲಿಂಗ್ ಚಳುವಳಿಯ ಇಡೀ ಪ್ರಯಾಣದ ಸಾರಾಂಶವನ್ನು ಭಾರತೀಯ ಹಾಕಿಯ 'ಗೋಡೆ' ಎಂದೇ ಖ್ಯಾತರಾದ ಪಿ.ಆರ್. ಶ್ರೀಜೇಶ್ ಅವರು ಬಹಳ ಅರ್ಥಪೂರ್ಣವಾಗಿ ವಿವರಿಸಿದರು.

"ಫಿಟ್ ಆಗಿರುವುದು ಎಂದರೆ ಕೇವಲ ಪದಕಗಳಿಗಾಗಿ ತರಬೇತಿ ಪಡೆಯುವುದು ಮಾತ್ರವಲ್ಲ; ಇದು ದೈನಂದಿನ ಜೀವನದಲ್ಲಿ ಶಿಸ್ತು ಮತ್ತು ಸಮತೋಲನವನ್ನು ಬೆಳೆಸಿಕೊಳ್ಳುವುದಾಗಿದೆ. ಸೈಕ್ಲಿಂಗ್ ಒಂದು ಸರಳ ಹವ್ಯಾಸ, ಆದರೆ ಇದನ್ನು ನಾವೆಲ್ಲರೂ ಸಾಮೂಹಿಕವಾಗಿ ಅಳವಡಿಸಿಕೊಂಡಾಗ, ಇದು ಆರೋಗ್ಯವಂತ ಸಮಾಜ ಮತ್ತು ಬಲಿಷ್ಠ ರಾಷ್ಟ್ರವನ್ನು ನಿರ್ಮಿಸುತ್ತದೆ. ಕೇಂದ್ರ ಕ್ರೀಡಾ ಸಚಿವರ 'ಫಿಟ್ ಇಂಡಿಯಾ ಸಂಡೇಸ್ ಆನ್ ಸೈಕಲ್' ಉಪಕ್ರಮವು ಫಿಟ್‌ನೆಸ್ ಅನ್ನು ಒಂದು ಜನಚಳುವಳಿಯನ್ನಾಗಿ ಪರಿವರ್ತಿಸಿರುವುದಕ್ಕೆ ನನಗೆ ಸಂತೋಷವಿದೆ. ಇಲ್ಲಿ ಕುಟುಂಬಗಳು, ಯುವಕರು ಮತ್ತು ವೃತ್ತಿಪರರು ಸಮಾನ ಉತ್ಸಾಹದಿಂದ ಪಾಲ್ಗೊಳ್ಳುತ್ತಿದ್ದಾರೆ," ಎಂದು ಪದ್ಮಭೂಷಣ ಪ್ರಶಸ್ತಿ ಪುರಸ್ಕೃತ ಶ್ರೀಜೇಶ್ ತಿಳಿಸಿದರು.

ಪುದುಚೇರಿಯ ರಮಣೀಯ ಕರಾವಳಿಯ ಉದ್ದಕ್ಕೂ ಸೈಕಲ್ ಸವಾರರಿಗೆ ಹಸಿರು ನಿಶಾನೆ ತೋರುತ್ತಿದ್ದಂತೆ, ಈ ವಾರ್ಷಿಕೋತ್ಸವದ ಆವೃತ್ತಿಯು ಒಂದು ಸ್ಪಷ್ಟ ಸಂದೇಶವನ್ನು ಸಾರಿತು: ಅದೇನೆಂದರೆ, 'ಸಂಡೇಸ್ ಆನ್ ಸೈಕಲ್' ಕೇವಲ ಒಂದು ಕಾರ್ಯಕ್ರಮವಾಗಿ ಉಳಿಯದೆ, ಭಾರತದಾದ್ಯಂತ ಆರೋಗ್ಯ, ಸುಸ್ಥಿರತೆ ಮತ್ತು ಸಾಮೂಹಿಕ ಭಾಗವಹಿಸುವಿಕೆಯನ್ನು ಪ್ರೇರೇಪಿಸುವ ಒಂದು ರಾಷ್ಟ್ರವ್ಯಾಪಿ ಸಂಸ್ಕೃತಿಯಾಗಿ ರೂಪಾಂತರಗೊಂಡಿದೆ.

 

*****


(रिलीज़ आईडी: 2207193) आगंतुक पटल : 8
इस विज्ञप्ति को इन भाषाओं में पढ़ें: English , Urdu , हिन्दी , Marathi , Gujarati , Tamil