ಗೃಹ ವ್ಯವಹಾರಗಳ ಸಚಿವಾಲಯ
azadi ka amrit mahotsav

ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ನವದೆಹಲಿಯಲ್ಲಿ ನಡೆದ ಕ್ರೆಡೈನ (CREDAI) ರಾಷ್ಟ್ರೀಯ ಸಮ್ಮೇಳನ "ವಿಕಸಿತ ಭಾರತ @ 2047" ಅನ್ನು ಉದ್ದೇಶಿಸಿ ಮಾತನಾಡಿದರು


ಮೋದಿ ಸರ್ಕಾರದ ಮುಂದಿನ ಪೀಳಿಗೆಯ ಮೂಲಸೌಕರ್ಯ ಉಪಕ್ರಮಗಳು ನಗರಾಭಿವೃದ್ಧಿ ಮತ್ತು ಮೂಲಸೌಕರ್ಯಗಳನ್ನು ಬಲಪಡಿಸಿವೆ, ಇದು ಭಾರತದಲ್ಲಿ ವಿಶ್ವದರ್ಜೆಯ ಮೂಲಸೌಕರ್ಯ ನಿರ್ಮಿಸಲು ಮಾರ್ಗಸೂಚಿಯನ್ನು ಸಿದ್ಧಪಡಿಸಿದೆ

ಕ್ರೆಡೈ ಸಂಸ್ಥೆಯು ಡೆವಲಪರ್ ಸಮುದಾಯದ ವ್ಯವಹಾರಕ್ಕೆ ವಿಶ್ವಾಸಾರ್ಹತೆ ಮತ್ತು ನಂಬಿಕೆಯನ್ನು ನೀಡುತ್ತಿದೆ

ರಿಯಲ್ ಎಸ್ಟೇಟ್ ವಲಯವು ಹಸಿರು ಕಟ್ಟಡ ನಿಯಮಗಳು, ಮಳೆನೀರು ಕೊಯ್ಲು ಮತ್ತು ವೈಜ್ಞಾನಿಕ ತ್ಯಾಜ್ಯ ನಿರ್ವಹಣೆಯನ್ನು ತನ್ನ ದೈನಂದಿನ ಹೊಸ ನಿಯಮಗಳನ್ನಾಗಿ ಮಾಡಿಕೊಳ್ಳಬೇಕು

ವಸತಿ ನಿರ್ಮಾಣ ಸಾಮಗ್ರಿಗಳ ಮೇಲಿನ ಜಿ ಎಸ್‌ ಟಿ ಕಡಿತಗೊಳಿಸುವ ಮೂಲಕ, ಮೋದಿ ಸರ್ಕಾರವು ಕೈಗೆಟುಕುವ ದರದ ವಸತಿ ನಿರ್ಮಾಣಕ್ಕೆ ಹೊಸ ವೇಗ ನೀಡಿದೆ

ನಗರದ ಪ್ರತಿಯೊಂದು ವರ್ಗದ ಅಗತ್ಯಗಳಿಗೆ ಅನುಗುಣವಾಗಿ ಕೈಗೆಟುಕುವ ಮತ್ತು ಪರಿಸರ ಸ್ನೇಹಿ ವಸತಿ ಯೋಜನೆಗಳನ್ನು ಕ್ರೆಡೈ ರೂಪಿಸಬೇಕು

ಜಿ ಎಸ್‌ ಟಿಯಿಂದ ಹಿಡಿದು ರೇರಾವರೆಗೆ, ಮೋದಿ ಸರ್ಕಾರ ಜಾರಿಗೆ ತಂದ ಸುಧಾರಣೆಗಳನ್ನು ಇಂದು ಇಡೀ ಜಗತ್ತು ಗುರುತಿಸುತ್ತಿದೆ

ದೊಡ್ಡ ಡೆವಲಪರ್‌ ಗಳು ಕೂಡ ಕಡಿಮೆ ವೆಚ್ಚದ ವಸತಿ ನಿರ್ಮಾಣದತ್ತ ಗಮನ ಹರಿಸಬೇಕು ಮತ್ತು 'ನೆಟ್-ಝೀರೋ' ಗುರಿ ಸಾಧಿಸಲು ಕ್ರಮಗಳನ್ನು ತೆಗೆದುಕೊಳ್ಳಬೇಕು

ಮೋದಿ ಸರ್ಕಾರವು ಒಂದೇ ಕಡೆ ಅನುಮೋದನೆ, ಪಾರದರ್ಶಕತೆ ಮತ್ತು ತಂತ್ರಜ್ಞಾನದ ಮೂಲಕ ವಿಶ್ವಾಸಾರ್ಹ ವಸತಿ ಅಭಿವೃದ್ಧಿ ವ್ಯವಸ್ಥೆಯನ್ನು ರೂಪಿಸಿದೆ

ಎಲ್ಲಾ ಡೆವಲಪರ್‌ ಗಳು ತಮ್ಮ ಯೋಜನೆಗಳನ್ನು ವಿನ್ಯಾಸಗೊಳಿಸುವಾಗ ಹಸಿರು ಪ್ರದೇಶವನ್ನು ಹೆಚ್ಚಿಸಬೇಕು, ಇದು ಜನರಿಗೆ ಉತ್ತಮ ಪರಿಸರವನ್ನು ನೀಡುವುದಲ್ಲದೆ ಅರಣ್ಯೀಕರಣವನ್ನು ಉತ್ತೇಜಿಸುತ್ತದೆ

प्रविष्टि तिथि: 19 DEC 2025 8:49PM by PIB Bengaluru

ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ಇಂದು ನವದೆಹಲಿಯಲ್ಲಿ ನಡೆದ ಕ್ರೆಡೈನ (CREDAI) ರಾಷ್ಟ್ರೀಯ ಸಮ್ಮೇಳನ "ವಿಕಸಿತ ಭಾರತ @ 2047" ಅನ್ನು ಉದ್ದೇಶಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಕೇಂದ್ರ ಸಚಿವರಾದ ಶ್ರೀ ಭೂಪೇಂದರ್ ಯಾದವ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

ತಮ್ಮ ಭಾಷಣದಲ್ಲಿ ಶ್ರೀ ಅಮಿತ್ ಶಾ ಅವರು, 2047ರ ವೇಳೆಗೆ ಭಾರತವನ್ನು ಪ್ರತಿಯೊಂದು ವಲಯದಲ್ಲೂ ವಿಶ್ವದ ಪ್ರಮುಖ ರಾಷ್ಟ್ರವನ್ನಾಗಿ ರೂಪಿಸುವ ಮತ್ತು 5 ಟ್ರಿಲಿಯನ್ ಆರ್ಥಿಕತೆಯ ಮೈಲಿಗಲ್ಲನ್ನು ತಲುಪುವ ಮೂಲಕ ದೊಡ್ಡ ಜಿಗಿತವನ್ನು ಕಾಣುವ ಗುರಿಯನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನಮ್ಮ ಮುಂದೆ ಇಟ್ಟಿದ್ದಾರೆ ಎಂದು ಹೇಳಿದರು. ಕಳೆದ 11 ವರ್ಷಗಳಲ್ಲಿ ಮೋದಿ ಸರ್ಕಾರವು ಮುಂದಿನ ಪೀಳಿಗೆಯ ಮೂಲಸೌಕರ್ಯಗಳ ಮೇಲೆ ವ್ಯಾಪಕವಾದ ಕೆಲಸ ಮಾಡಿದೆ ಮತ್ತು ಈ ಪ್ರಯತ್ನಗಳು ಅತ್ಯಂತ ಸಕಾರಾತ್ಮಕ ಫಲಿತಾಂಶಗಳನ್ನು ನೀಡಿವೆ ಎಂದು ಅವರು ತಿಳಿಸಿದರು. ಸರ್ಕಾರವು 'ರಾಷ್ಟ್ರೀಯ ಮೂಲಸೌಕರ್ಯ ಪೈಪ್‌ಲೈನ್' (National Infrastructure Pipeline) ಪರಿಕಲ್ಪನೆಯನ್ನು ಪರಿಚಯಿಸಿತು. ಹಲವಾರು ಹೊಸ ಉಪಕ್ರಮಗಳ ಮೂಲಕ ಕೇವಲ ಸುಸಜ್ಜಿತ ನಗರಾಭಿವೃದ್ಧಿ ಮತ್ತು ಮೂಲಸೌಕರ್ಯಗಳನ್ನು ಮಾತ್ರ ರೂಪಿಸದೆ, ಭಾರತವನ್ನು ವಿಶ್ವದ ಅತ್ಯುತ್ತಮ ಮೂಲಸೌಕರ್ಯ ಹೊಂದಿರುವ ರಾಷ್ಟ್ರಗಳ ಸಾಲಿಗೆ ತರಲು ಒಂದು ಸ್ಪಷ್ಟ ಮಾರ್ಗಸೂಚಿಯನ್ನು ಸಿದ್ಧಪಡಿಸಲಾಗಿದೆ ಎಂದು ಅವರು ಹೇಳಿದರು. ಮೋದಿ ಸರ್ಕಾರದ 11 ವರ್ಷಗಳ ಅವಧಿಯಲ್ಲಿ ಮೂಲಸೌಕರ್ಯ ಮತ್ತು ನಗರಾಭಿವೃದ್ಧಿಯಲ್ಲಿ ಹಲವಾರು ಉಪಕ್ರಮಗಳನ್ನು ಕೈಗೊಳ್ಳಲಾಗಿದ್ದು, ಎಲ್ಲಾ ವಲಯಗಳಲ್ಲಿನ ಅಡೆತಡೆಗಳನ್ನು ನಿವಾರಿಸಲು ಪ್ರಯತ್ನಿಸಲಾಗಿದೆ ಎಂದು ಶ್ರೀ ಶಾ ತಿಳಿಸಿದರು.

CR3_5057.JPG

ಶ್ರೀ ಅಮಿತ್ ಶಾ ಅವರು, ಕ್ರೆಡೈ (CREDAI) ಸಂಸ್ಥೆಯು 25 ಹಳ್ಳಿಗಳಲ್ಲಿ 20 ಲಕ್ಷ ಸಸಿಗಳನ್ನು ನೆಟ್ಟಿದೆ ಮತ್ತು 9,000 ಎಕರೆ ಬಂಜರು ಭೂಮಿಯನ್ನು ಪುನಶ್ಚೇತನಗೊಳಿಸಲು ಶ್ರಮಿಸಿದೆ ಎಂದು ತಿಳಿಸಿದರು. ಪ್ರತಿಯೊಬ್ಬ ಡೆವಲಪರ್‌ ಗಳು ತಮ್ಮ ಯೋಜನೆಗಳನ್ನು ವಿನ್ಯಾಸಗೊಳಿಸುವಾಗ ಒಂದಿಷ್ಟು ಹಸಿರು ಪ್ರದೇಶವನ್ನು ಮನಸ್ಸಿನಲ್ಲಿಟ್ಟುಕೊಳ್ಳಬೇಕು ಎಂದು ಅವರು ಹೇಳಿದರು. ದೇಶದ ಪ್ರತಿಯೊಬ್ಬ ಡೆವಲಪರ್ ತಾವು ನಿರ್ಮಿಸುವ ಪ್ರತಿ ಕಟ್ಟಡದ ನಿರ್ಮಾಣದ ಸಮಯದಲ್ಲಿ 10 ಮರಗಳನ್ನು ನೆಡಲು ಪ್ರಯತ್ನಿಸಿದರೆ, ಅದು ಅತ್ಯಂತ ಶ್ಲಾಘನೀಯ ಉಪಕ್ರಮವಾಗಲಿದೆ ಎಂದು ಅವರು ತಿಳಿಸಿದರು.

ಕೇಂದ್ರ ಗೃಹ ಸಚಿವರು ಮಾತನಾಡಿ, 1999 ರಿಂದ ಇಂದಿನವರೆಗೆ ಕ್ರೆಡೈ ವಸತಿ ಮತ್ತು ಆವಾಸಸ್ಥಾನ ಅಭಿವೃದ್ಧಿಯನ್ನು ಉತ್ತೇಜಿಸುವ ತನ್ನ ಉದ್ದೇಶವನ್ನು ನಿರಂತರವಾಗಿ ಸಾಧಿಸುತ್ತಾ ಬಂದಿದೆ ಎಂದರು. ಕ್ರೆಡೈ ಯಾವಾಗಲೂ ನೀತಿಸಂಹಿತೆ ಮತ್ತು ನೈತಿಕ ಪದ್ಧತಿಗಳಿಗೆ ಹೆಚ್ಚಿನ ಆದ್ಯತೆ ನೀಡಿದೆ; ಕ್ರೆಡೈನಿಂದಾಗಿಯೇ ಇಂದು ಡೆವಲಪರ್‌ ಗಳ ಕೆಲಸಕ್ಕೆ ಅರ್ಹ ಗೌರವ ಸಿಗುತ್ತಿದೆ ಎಂದು ಅವರು ಹೇಳಿದರು. ನಮ್ಮ ಬ್ಯಾಲೆನ್ಸ್ ಶೀಟ್‌ಗಳು (ಆರ್ಥಿಕ ವರದಿಗಳು) ಸದೃಢವಾಗಿದ್ದರೆ ಮಾತ್ರ ಸಾಲದು, ಸಮಾಜದಲ್ಲಿ ನಮ್ಮ ಕೆಲಸಕ್ಕೆ ಉತ್ತಮ ಕೀರ್ತಿ ಬರುವುದು ಅಷ್ಟೇ ಮುಖ್ಯ ಎಂದು ಅವರು ತಿಳಿಸಿದರು. ಭಾರತದ ಖಾಸಗಿ ರಿಯಲ್ ಎಸ್ಟೇಟ್ ಡೆವಲಪರ್‌ ಗಳ ಉನ್ನತ ಸಂಸ್ಥೆಯಾಗಿ, ಈ ವಲಯವನ್ನು ಸಂಘಟಿಸುವಲ್ಲಿ ಮತ್ತು ಇದನ್ನು ಒಂದು ಮಾನ್ಯತೆ ಪಡೆದ ಉದ್ಯಮವಾಗಿ ಸ್ಥಾಪಿಸುವಲ್ಲಿ ಕ್ರೆಡೈ ಪ್ರಮುಖ ಪಾತ್ರ ವಹಿಸಿದೆ ಎಂದು ಶ್ರೀ ಶಾ ಹೇಳಿದರು.

ಇಂದು ಕ್ರೆಡೈ (CREDAI) ಸಂಸ್ಥೆಯು 21 ರಾಜ್ಯಗಳ 230 ನಗರಗಳಲ್ಲಿ ತನ್ನ ವ್ಯಾಪ್ತಿಯನ್ನು ಹೊಂದಿದ್ದು, ಸುಮಾರು 13,000 ಡೆವಲಪರ್‌ ಗಳನ್ನು ಪ್ರತಿನಿಧಿಸುವ ಒಂದು ಬೃಹತ್ ಆಲದ ಮರದಂತೆ ನಿಂತಿದೆ ಎಂದು ಶ್ರೀ ಅಮಿತ್ ಶಾ ಹೇಳಿದರು. 25 ವರ್ಷಗಳನ್ನು ಪೂರೈಸುವ ಮೂಲಕ, ಕ್ರೆಡೈ ಈ ಕ್ಷೇತ್ರದಲ್ಲಿ ತನ್ನ ಪ್ರಸ್ತುತತೆ ಮತ್ತು ಅಗತ್ಯತೆಯನ್ನು ಸಾಬೀತುಪಡಿಸಿದೆ ಎಂದು ಅವರು ತಿಳಿಸಿದರು. ಅನೇಕ ಕ್ಷೇತ್ರಗಳಲ್ಲಿ ಕ್ರೆಡೈ ತನ್ನ ಮಾನವೀಯ ಮುಖವನ್ನು ಪ್ರದರ್ಶಿಸಿದೆ ಮತ್ತು 3 ಲಕ್ಷಕ್ಕೂ ಹೆಚ್ಚು ಕಾರ್ಮಿಕರಿಗೆ ತರಬೇತಿ ನೀಡಿದೆ ಎಂದು ಅವರು ಹೇಳಿದರು. ಕಾರ್ಮಿಕರಿಗೆ ಕೌಶಲ್ಯಾಭಿವೃದ್ಧಿಯ ಅಗತ್ಯವಿರುವ ನಿರ್ದಿಷ್ಟ ಕ್ಷೇತ್ರಗಳನ್ನು ಗುರುತಿಸುವತ್ತ ನಾವು ಹೆಚ್ಚಿನ ಗಮನ ಹರಿಸಬೇಕು ಎಂದು ಶ್ರೀ ಶಾ ತಿಳಿಸಿದರು.

ಭಾರತದಲ್ಲಿ ನಗರೀಕರಣವು 2035ರ ವೇಳೆಗೆ ಸುಮಾರು ಶೇಕಡಾ 40ಕ್ಕೆ ಏರಲಿದ್ದು, 2047ರ ವೇಳೆಗೆ ದೇಶದ ಜನಸಂಖ್ಯೆಯ ಶೇಕಡಾ 50ರಷ್ಟು ಜನರು ನಗರಗಳಲ್ಲಿ ವಾಸಿಸಲಿದ್ದಾರೆ ಎಂದು ಕೇಂದ್ರ ಗೃಹ ಮತ್ತು ಸಹಕಾರ ಸಚಿವರು ಹೇಳಿದರು. ಸುಮಾರು ಅರ್ಧದಷ್ಟು ಜನಸಂಖ್ಯೆಯು ನಗರ ಪ್ರದೇಶಗಳಲ್ಲಿ ವಾಸಿಸುವಾಗ, ವಸತಿ ಸೌಕರ್ಯ ಒದಗಿಸುವ ಜವಾಬ್ದಾರಿಯು ಹೆಚ್ಚಾಗಿ ಡೆವಲಪರ್‌ ಗಳ ಮೇಲಿರುತ್ತದೆ. ಈ ಜವಾಬ್ದಾರಿಗಾಗಿ ನಮ್ಮನ್ನು ನಾವು ಸಿದ್ಧಪಡಿಸಿಕೊಳ್ಳುವುದು ಬಹಳ ಮುಖ್ಯ ಎಂದು ಅವರು ಒತ್ತಿ ಹೇಳಿದರು. ಹೆಚ್ಚುತ್ತಿರುವ ನಗರೀಕರಣವನ್ನು ಎದುರಿಸಲು ನಗರ ಮೂಲಸೌಕರ್ಯ ಮತ್ತು ವಸತಿ ಸೌಕರ್ಯಗಳೆರಡೂ ವಿಸ್ತರಣೆಯಾಗಲಿವೆ ಎಂದು ಶ್ರೀ ಶಾ ಹೇಳಿದರು. ನಗರ ವಸತಿ ಕ್ಷೇತ್ರದಲ್ಲಿ ಪೂರ್ಣ ಪ್ರಮಾಣದ ಗುರಿಯನ್ನು (Saturation) ತಲುಪಲು, ಕ್ರೆಡೈ ಒಂದು ತಂಡವನ್ನು ರಚಿಸಿ, ಉತ್ತಮ ಜೀವನಮಟ್ಟದೊಂದಿಗೆ ಕೈಗೆಟುಕುವ ದರದ ಹಾಗೂ ಪರಿಸರ ಸ್ನೇಹಿ ವಸತಿಗಳನ್ನು ಉತ್ತೇಜಿಸುವ ಬಗ್ಗೆ ಚರ್ಚಿಸಬೇಕು ಎಂದು ಅವರು ಕರೆ ನೀಡಿದರು. ಒಂದೇ ಕಡೆ ಅನುಮೋದನೆ, ಕಾಲಮಿತಿಯ ಅನುಮತಿಗಳು, ಆನ್‌ ಲೈನ್ ಟ್ರ್ಯಾಕಿಂಗ್ ಮತ್ತು ಡಿಜಿಟಲೀಕೃತ ದಾಖಲೆಗಳು ಈ ವಲಯದ ಮೇಲೆ ವಿಶ್ವಾಸವನ್ನು ಮೂಡಿಸಿವೆ; ಈ ಸುಧಾರಣೆಗಳನ್ನು ಇನ್ನಷ್ಟು ವೇಗವಾಗಿ ಮುಂದುವರಿಸಲಾಗುವುದು ಎಂದು ಅವರು ಭರವಸೆ ನೀಡಿದರು.

ಈ ವಲಯವನ್ನು ಸುಧಾರಿಸುವಲ್ಲಿ ರೇರಾ (RERA) ಒಂದು ರಚನಾತ್ಮಕ ಮೈಲಿಗಲ್ಲಾಗಿದ್ದು, ಇದನ್ನು ಇಂದು ಜಗತ್ತಿನಾದ್ಯಂತ ಗುರುತಿಸಲಾಗುತ್ತಿದೆ ಎಂದು ಕೇಂದ್ರ ಗೃಹ ಸಚಿವರು ಹೇಳಿದರು. ಮನೆ ಖರೀದಿದಾರರ ಹಿತಾಸಕ್ತಿ ರಕ್ಷಿಸುವುದು, ನ್ಯಾಯಸಮ್ಮತ ವಹಿವಾಟುಗಳನ್ನು ಖಚಿತಪಡಿಸುವುದು ಮತ್ತು ಗುಣಮಟ್ಟದ ನಿರ್ಮಾಣದ ಭರವಸೆ ನೀಡುವಲ್ಲಿ ರೇರಾ ಭಾರತದಲ್ಲಿ ಶ್ಲಾಘನೀಯ ಕೆಲಸ ಮಾಡಿದೆ ಮತ್ತು ಇದನ್ನು 35 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳು ಅಳವಡಿಸಿಕೊಂಡಿವೆ ಎಂದು ಅವರು ತಿಳಿಸಿದರು. 29 ರಾಜ್ಯಗಳಲ್ಲಿ ಮೇಲ್ಮನವಿ ಪ್ರಾಧಿಕಾರಗಳನ್ನು ರಚಿಸಲಾಗಿದೆ ಮತ್ತು 29 ರೇರಾ ಪ್ರಾಧಿಕಾರಗಳು ತಮ್ಮ ಅಧಿಕೃತ ವೆಬ್‌ ಸೈಟ್‌ ಗಳನ್ನು ಕೂಡ ಪ್ರಾರಂಭಿಸಿವೆ ಎಂದು ಅವರು ಹೇಳಿದರು. ರೇರಾ ಅಡಿಯಲ್ಲಿ 1.55 ಲಕ್ಷ ರಿಯಲ್ ಎಸ್ಟೇಟ್ ಯೋಜನೆಗಳು ನೋಂದಾಯಿಸಲ್ಪಟ್ಟಿವೆ ಮತ್ತು ಸುಮಾರು 1.10 ಲಕ್ಷ ಡೆವಲಪರ್‌ ಗಳು ಈ ಚೌಕಟ್ಟಿನಡಿಯಲ್ಲಿ ನೋಂದಾಯಿಸಿಕೊಂಡಿದ್ದಾರೆ ಎಂದು ಅವರು ಮಾಹಿತಿ ನೀಡಿದರು.

ಶ್ರೀ ಅಮಿತ್ ಶಾ ಅವರು, ಜಿ ಎಸ್‌ ಟಿ (GST) ವ್ಯವಸ್ಥೆಯಿಂದ ಯಾವುದಾದರೂ ವಲಯಕ್ಕೆ ಅತಿ ಹೆಚ್ಚು ಲಾಭವಾಗಿದ್ದರೆ ಅದು ರಿಯಲ್ ಎಸ್ಟೇಟ್ ಕ್ಷೇತ್ರಕ್ಕೆ ಎಂದು ಹೇಳಿದರು. ಕೈಗೆಟುಕುವ ದರದ ವಸತಿಗಳ ಮೇಲಿನ ಜಿ ಎಸ್‌ ಟಿ ಯನ್ನು ಶೇಕಡಾ 8 ರಿಂದ 1 ಕ್ಕೆ, ವಸತಿ ಯೋಜನೆಗಳ ಮೇಲೆ ಶೇಕಡಾ 12 ರಿಂದ 5 ಕ್ಕೆ, ಸಿಮೆಂಟ್ ಮೇಲೆ ಶೇಕಡಾ 28 ರಿಂದ 18 ಕ್ಕೆ ಮತ್ತು ಮಾರ್ಬಲ್, ಗ್ರಾನೈಟ್, ಮರಳು, ಸುಣ್ಣ ಹಾಗೂ ಇಟ್ಟಿಗೆಗಳ ಮೇಲಿನ ಜಿ ಎಸ್‌ ಟಿಯನ್ನು ಶೇಕಡಾ 12 ರಿಂದ 5 ಕ್ಕೆ ಇಳಿಸಲಾಗಿದೆ ಎಂದು ಅವರು ತಿಳಿಸಿದರು. ಬಿದಿರಿನ ಫ್ಲೋರಿಂಗ್ (Bamboo flooring) ಮೇಲಿನ ಜಿ ಎಸ್‌ ಟಿಯನ್ನು ಕೂಡ ಶೇಕಡಾ 12 ರಿಂದ 5 ಕ್ಕೆ ಇಳಿಸಲಾಗಿದೆ. ಒಟ್ಟಾರೆಯಾಗಿ, ಈ ಹೊಸ ಸುಧಾರಣೆಗಳು ಒಂದು ಕಟ್ಟಡದ ನಿರ್ಮಾಣ ವೆಚ್ಚದಲ್ಲಿ ಶೇಕಡಾ 5 ರಿಂದ 7 ರಷ್ಟು ಕಡಿತವಾಗುವ ಸಾಧ್ಯತೆಯನ್ನು ಸೃಷ್ಟಿಸಿವೆ ಎಂದು ಅವರು ಹೇಳಿದರು. ಈ ವಲಯದ ಅಭಿವೃದ್ಧಿಯನ್ನು ಉತ್ತೇಜಿಸಲು, ಸರ್ಕಾರವು ನಿರ್ಮಾಣ ಯೋಜನೆಗಳಲ್ಲಿ 'ಆಟೋಮ್ಯಾಟಿಕ್ ರೂಟ್' ಮೂಲಕ ಶೇಕಡಾ 100 ರಷ್ಟು ಎಫ್‌ ಡಿ ಐ (ನೇರ ವಿದೇಶಿ ಹೂಡಿಕೆ) ಗೆ ಅನುಮತಿ ನೀಡಿದೆ ಮತ್ತು ₹60,000 ಕೋಟಿ ಮೌಲ್ಯದ 'ರಾಷ್ಟ್ರೀಯ ನಗರ ವಸತಿ ನಿಧಿ'ಯನ್ನು ಬಿಡುಗಡೆ ಮಾಡಿದೆ ಎಂದು ಅವರು ತಿಳಿಸಿದರು. ಸರ್ಕಾರವು ಈ ವಲಯದ ಪ್ರಾಮುಖ್ಯತೆಯನ್ನು ಅರ್ಥಮಾಡಿಕೊಂಡಿದೆ ಮತ್ತು ಕ್ರೆಡೈ ಮೂಲಕ ಪ್ರತಿಯೊಬ್ಬರಿಗೂ ಮನೆ ನೀಡುವ ಪ್ರಧಾನಮಂತ್ರಿ ಮೋದಿ ಅವರ ಭರವಸೆಯನ್ನು ಈಡೇರಿಸಬಹುದು ಎಂದು ಶ್ರೀ ಶಾ ಹೇಳಿದರು. ದೊಡ್ಡ ಡೆವಲಪರ್‌ ಗಳು ಬೃಹತ್ ಯೋಜನೆಗಳನ್ನು ರೂಪಿಸುವಾಗ, ಅವುಗಳ ಜೊತೆಜೊತೆಗೆ ಕಡಿಮೆ ವೆಚ್ಚದ ವಸತಿಗಳನ್ನು (Low-cost housing) ಅಭಿವೃದ್ಧಿಪಡಿಸಲು ಸಾಧ್ಯವೇ ಎಂದು ಯೋಚಿಸಬೇಕು ಎಂದು ಅವರು ಮನವಿ ಮಾಡಿದರು. ಇದನ್ನು ಈ ಕ್ಷೇತ್ರದ ಮೂಲಭೂತ ಅಗತ್ಯವಾಗಿ ಅಳವಡಿಸಿಕೊಂಡರೆ, ಮುಂದಿನ ದಿನಗಳಲ್ಲಿ ಒಂದು ಪರಿವರ್ತನಾಕಾರಿ ಬದಲಾವಣೆಯನ್ನು ಕಾಣಬಹುದು ಎಂದು ಅವರು ಹೇಳಿದರು.

CR3_4993 (2).JPG

ಕೇಂದ್ರ ಗೃಹ ಮತ್ತು ಸಹಕಾರ ಸಚಿವರು, ಮೋದಿ ಸರ್ಕಾರವು 'ರಾಷ್ಟ್ರೀಯ ಕಟ್ಟಡ ಸಂಹಿತೆ, 2016' (National Building Code, 2016) ಸೇರಿದಂತೆ ಈ ವಲಯದಲ್ಲಿ ಹಲವು ಸುಧಾರಣೆಗಳನ್ನು ತಂದಿದೆ ಎಂದು ಹೇಳಿದರು. 'ನೆಟ್-ಝೀರೋ' (Net-zero) ಗುರಿಯನ್ನು ಸಾಧಿಸಲು, ಕ್ರೆಡೈ (CREDAI) ಸಂಸ್ಥೆಯು ಬಲವಾದ ಜವಾಬ್ದಾರಿಯೊಂದಿಗೆ ಮುನ್ನಡೆಯಬೇಕು ಎಂದು ಅವರು ತಿಳಿಸಿದರು. ಹಸಿರು ಕಟ್ಟಡ ನಿಯಮಗಳು, ಇಂಧನ ದಕ್ಷತೆಯ ವಿನ್ಯಾಸಗಳು, ನೀರಿನ ಮರುಬಳಕೆ, ಮಳೆನೀರು ಕೊಯ್ಲು ವ್ಯವಸ್ಥೆಗಳು ಮತ್ತು ವೈಜ್ಞಾನಿಕ ತ್ಯಾಜ್ಯ ನಿರ್ವಹಣೆಯನ್ನು ವಸತಿ ಯೋಜನೆಯಲ್ಲಿ ಸಾಮಾನ್ಯ ನಿಯಮಗಳನ್ನಾಗಿ ಮಾಡಬೇಕು ಎಂದು ಅವರು ಪ್ರತಿಪಾದಿಸಿದರು. ವಿನ್ಯಾಸ ಎಂಬುದು ಕೇವಲ ಕಟ್ಟಡದ ಹೊರರಚನೆಗೆ ಮಾತ್ರ ಸೀಮಿತವಲ್ಲ; ಬದಲಿಗೆ, ನಿವಾಸಿಗಳಿಗೆ ಉತ್ತಮ ಜೀವನಮಟ್ಟವನ್ನು ಖಚಿತಪಡಿಸಲು ಈ ಎಲ್ಲಾ ಅಂಶಗಳನ್ನು ವಿನ್ಯಾಸದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಅವರು ಒತ್ತಿ ಹೇಳಿದರು.

CR5_3203 (1).JPG

ಶ್ರೀ ಅಮಿತ್ ಶಾ ಅವರು, ಮುಂದಿನ ದಿನಗಳಲ್ಲಿ ಭೂ ಮಾರುಕಟ್ಟೆಯನ್ನು (Land Market) ಇನ್ನಷ್ಟು ಪಾರದರ್ಶಕಗೊಳಿಸಬೇಕು ಮತ್ತು ನಗರಗಳು ಭೂಮಿಯನ್ನು ಕೂಡಿಡುವ (Land Banking) ಹಾಗೂ ಸಟ್ಟಾ ವ್ಯಾಪಾರದ ಉದ್ದೇಶಕ್ಕಾಗಿ ಹಿಡಿದಿಟ್ಟುಕೊಳ್ಳುವ (Speculative Holding) ಪ್ರವೃತ್ತಿಯಿಂದ ದೂರ ಸರಿಯಬೇಕು ಎಂದು ಹೇಳಿದರು. ಮೆಟ್ರೋ ಜಾಲಗಳ ವಿಸ್ತರಣೆ ಮತ್ತು ಫ್ಲೈಓವರ್‌ ಗಳಿಂದ ಹಿಡಿದು ರಸ್ತೆಗಳ ನಿರ್ಮಾಣ ಮತ್ತು ಪರಿಸರ ಸ್ನೇಹಿ ವಿದ್ಯುತ್ ಉತ್ಪಾದನೆಯನ್ನು ಉತ್ತೇಜಿಸುವವರೆಗೆ ನಗರಾಭಿವೃದ್ಧಿಗಾಗಿ ಸರ್ಕಾರವು ಹಲವಾರು ಉಪಕ್ರಮಗಳನ್ನು ಕೈಗೊಂಡಿದೆ; ನಗರಗಳನ್ನು ವಾಸಯೋಗ್ಯವಾಗಿಸಲು ಇವೆಲ್ಲವೂ ಅತ್ಯಗತ್ಯ ಎಂದು ಅವರು ತಿಳಿಸಿದರು. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಭಾರತ ಸರ್ಕಾರವು ನಗರಾಭಿವೃದ್ಧಿಗಾಗಿ ಅತ್ಯಂತ ಮಹತ್ವಾಕಾಂಕ್ಷೆಯ ದೂರದೃಷ್ಟಿಯೊಂದಿಗೆ ಮುನ್ನಡೆಯುತ್ತಿದೆ ಮತ್ತು ಒಬ್ಬ ಜವಾಬ್ದಾರಿಯುತ ಡೆವಲಪರ್ ಈ ದೂರದೃಷ್ಟಿಯ ಪ್ರಮುಖ ಭಾಗವಾಗಿದ್ದಾರೆ ಎಂದು ಅವರು ಹೇಳಿದರು.

 

*****


(रिलीज़ आईडी: 2206912) आगंतुक पटल : 10
इस विज्ञप्ति को इन भाषाओं में पढ़ें: English , Marathi , हिन्दी , Gujarati , Telugu