ಪ್ರಧಾನ ಮಂತ್ರಿಯವರ ಕಛೇರಿ
ಭಾರತ-ಓಮನ್ ವ್ಯಾಪಾರ ವೇದಿಕೆ ಉದ್ದೇಶಿಸಿ ಪ್ರಧಾನಮಂತ್ರಿ ಭಾಷಣ
प्रविष्टि तिथि:
18 DEC 2025 4:08PM by PIB Bengaluru
ಓಮನ್‌ನ ಗೌರವಾನ್ವಿತ ವಾಣಿಜ್ಯ, ಕೈಗಾರಿಕೆ ಮತ್ತು ಹೂಡಿಕೆ ಉತ್ತೇಜನ ಸಚಿವರಾದ ಖೈಸ್ ಅಲ್ ಯೂಸೆಫ್ ಅವರೆ,
ಇಲ್ಲಿ ಸೇರಿರುವ ಎರಡೂ ದೇಶಗಳ ಪ್ರತಿನಿಧಿಗಳೆ,
ಉದ್ಯಮ ವ್ಯವಹಾರ ವಲಯದ ದಿಗ್ಗಜರೆ,
ಮಹಿಳೆಯರೆ ಮತ್ತು ಮಹನೀಯರೆ,
ನಮಸ್ಕಾರ,
7 ವರ್ಷಗಳ ನಂತರ ಓಮನ್‌ಗೆ ಭೇಟಿ ನೀಡುತ್ತಿರುವುದು ಮತ್ತು ಇಂದು ನಿಮ್ಮೆಲ್ಲರೊಂದಿಗೆ ತೊಡಗಿಸಿಕೊಳ್ಳಲು ಅವಕಾಶ ಸಿಕ್ಕಿರುವುದು ನನ್ನ ಪಾಲಿನ ಸೌಭಾಗ್ಯ.
ಈ ವ್ಯಾಪಾರ ಶೃಂಗಸಭೆಗೆ ನಿಮ್ಮೆಲ್ಲರ ಆತ್ಮೀಯ ಸ್ವಾಗತ ನನ್ನ ಉತ್ಸಾಹವನ್ನು ಮತ್ತಷ್ಟು ಬಲಪಡಿಸಿದೆ. ಇಂದಿನ ಶೃಂಗಸಭೆಯು ಭಾರತ-ಓಮನ್ ಪಾಲುದಾರಿಕೆಗೆ ಹೊಸ ನಿರ್ದೇಶನ ಮತ್ತು ಆವೇಗವನ್ನು ನೀಡುತ್ತದೆ, ಅದನ್ನು ಹೊಸ ಎತ್ತರಕ್ಕೆ ಏರಿಸಲು ಸಹಾಯ ಮಾಡುತ್ತದೆ. ಈ ಪ್ರಯತ್ನದಲ್ಲಿ ನಿಮ್ಮಲ್ಲಿ ಪ್ರತಿಯೊಬ್ಬರೂ ಪ್ರಮುಖ ಪಾತ್ರ ವಹಿಸಬೇಕು.
ಸ್ನೇಹಿತರೆ,
ನೀವು ಭಾರತ ಮತ್ತು ಓಮನ್‌ನ ವ್ಯವಹಾರಗಳನ್ನು ಮತ್ತು ನಮ್ಮ ದ್ವಿಪಕ್ಷೀಯ ವ್ಯಾಪಾರವನ್ನು ಪ್ರತಿನಿಧಿಸುತ್ತೀರಿ. ಶತಮಾನಗಳಿಂದಲೂ ವ್ಯಾಪಿಸಿರುವ ಶ್ರೀಮಂತ ಪರಂಪರೆಯ ಉತ್ತರಾಧಿಕಾರಿಗಳು ನೀವಾಗಿದ್ದೀರಿ. ನಾಗರಿಕತೆಯ ಆರಂಭದಿಂದಲೂ, ನಮ್ಮ ಪೂರ್ವಜರು ಪರಸ್ಪರ ಸಮುದ್ರ ವ್ಯಾಪಾರದಲ್ಲಿ ತೊಡಗಿಸಿಕೊಂಡಿದ್ದಾರೆ.
ಸಮುದ್ರದ ಎರಡು ತೀರಗಳು ಬಹಳ ದೂರದಲ್ಲಿವೆ ಎಂದು ಆಗಾಗ್ಗೆ ಹೇಳಲಾಗುತ್ತದೆ, ಆದರೆ ಮಾಂಡ್ವಿ ಮತ್ತು ಮಸ್ಕತ್ ನಡುವೆ, ಅರೇಬಿಯನ್ ಸಮುದ್ರವು ಬಲವಾದ ಸೇತುವೆಯಾಗಿ ಕಾರ್ಯ ನಿರ್ವಹಿಸಿದೆ. ನಮ್ಮ ಸಂಬಂಧಗಳನ್ನು ಬಲಪಡಿಸಿದ ಮತ್ತು ನಮ್ಮ ಸಂಸ್ಕೃತಿ ಮತ್ತು ಆರ್ಥಿಕತೆಯನ್ನು ಬಲಪಡಿಸಿದ ಸೇತುವೆ ಅದಾಗಿದೆ. ಇಂದು, ಸಮುದ್ರದ ಅಲೆಗಳು ಬದಲಾಗಬಹುದು ಮತ್ತು ಋತುಗಳು ತಿರುಗಬಹುದು, ಭಾರತ ಮತ್ತು ಓಮನ್ ನಡುವಿನ ಸ್ನೇಹವು ಪ್ರತಿ ಋತುವಿನಲ್ಲಿ ಬಲಗೊಳ್ಳುತ್ತದೆ ಮತ್ತು ಪ್ರತಿ ಅಲೆಯೊಂದಿಗೆ ಹೊಸ ಎತ್ತರ ತಲುಪುತ್ತದೆ ಎಂದು ನಾವು ವಿಶ್ವಾಸದಿಂದ ಹೇಳಬಹುದು.
ಸ್ನೇಹಿತರೆ,
ನಮ್ಮ ಸಂಬಂಧವು ನಂಬಿಕೆಯ ಭದ್ರವಾದ ಅಡಿಪಾಯದ ಮೇಲೆ ನಿರ್ಮಿಸಲ್ಪಟ್ಟಿದೆ, ಸ್ನೇಹದ ಶಕ್ತಿಯಿಂದ ಬಲಗೊಂಡಿದೆ ಮತ್ತು ಕಾಲ ಕಳೆದಂತೆ ಆಳವಾಗಿ ಬೇರೂರಿದೆ.
ಇಂದು ನಮ್ಮ ರಾಜತಾಂತ್ರಿಕ ಸಂಬಂಧಗಳು 20 ವರ್ಷಗಳನ್ನು ಪೂರೈಸಿವೆ. ಇದು ಕೇವಲ 7 ದಶಕಗಳ ಆಚರಣೆಯಲ್ಲ. ಇದು ನಮ್ಮ ಶತಮಾನಗಳಷ್ಟು ಹಳೆಯದಾದ ಪರಂಪರೆಯನ್ನು ಸಮೃದ್ಧ ಭವಿಷ್ಯದತ್ತ ಕೊಂಡೊಯ್ಯಬೇಕಾದ ಒಂದು ಮೈಲಿಗಲ್ಲಾಗಿದೆ.
ಸ್ನೇಹಿತರೆ,
ಇಂದು ನಾವು ಒಂದು ಐತಿಹಾಸಿಕ ನಿರ್ಧಾರ ತೆಗೆದುಕೊಳ್ಳುತ್ತಿದ್ದೇವೆ, ಇದರ ಪ್ರತಿಧ್ವನಿಯು ಮುಂಬರುವ ದಶಕಗಳವರೆಗೆ ಮೇಳೈಸುತ್ತದೆ. ಸಮಗ್ರ ಆರ್ಥಿಕ ಪಾಲುದಾರಿಕೆ ಒಪ್ಪಂದ ಅಥವಾ ಸಿಇಪಿಎ, 21ನೇ ಶತಮಾನದಲ್ಲಿ ನಮ್ಮ ಪಾಲುದಾರಿಕೆಯನ್ನು ನವೀಕೃತ ನಂಬಿಕೆ ಮತ್ತು ತಾಜಾ ಶಕ್ತಿಯಿಂದ ತುಂಬುತ್ತದೆ. ಇದು ನಮ್ಮ ಹಂಚಿಕೆಯ ಭವಿಷ್ಯಕ್ಕೆ ಒಂದು ನೀಲಿನಕ್ಷೆಯಾಗಿದೆ. ಇದು ವ್ಯಾಪಾರಕ್ಕೆ ಹೊಸ ಆವೇಗ ನೀಡುತ್ತದೆ, ಹೂಡಿಕೆಯಲ್ಲಿ ಹೆಚ್ಚಿನ ವಿಶ್ವಾಸವನ್ನು ಪ್ರೇರೇಪಿಸುತ್ತದೆ, ಪ್ರತಿಯೊಂದು ವಲಯದಲ್ಲಿ ಅವಕಾಶದ ಹೊಸ ಮಾರ್ಗಗಳನ್ನು ತೆರೆಯುತ್ತದೆ.
ಸಿಇಪಿಎ ನಮ್ಮ ಯುವಕರಿಗೆ ಬೆಳವಣಿಗೆ, ನಾವೀನ್ಯತೆ ಮತ್ತು ಉದ್ಯೋಗಕ್ಕಾಗಿ ಹಲವಾರು ಹೊಸ ಅವಕಾಶಗಳನ್ನು ಸೃಷ್ಟಿಸುತ್ತದೆ. ಈ ಒಪ್ಪಂದವು ಕಾಗದವನ್ನು ಮೀರಿದ ನಿಜವಾದ ಕಾರ್ಯಕ್ಷಮತೆಯಾಗಿ ರೂಪಾಂತರಗೊಳ್ಳಲು, ನಿಮ್ಮಲ್ಲಿ ಪ್ರತಿಯೊಬ್ಬರ ಪಾತ್ರವು ನಿರ್ಣಾಯಕವಾಗಿದೆ. ಏಕೆಂದರೆ ನೀತಿ ಮತ್ತು ಉದ್ಯಮವು ಒಟ್ಟಾಗಿ ಮುಂದುವರಿದಾಗ ಮಾತ್ರ ಪಾಲುದಾರಿಕೆ ಹೊಸ ಇತಿಹಾಸ ಸೃಷ್ಟಿಸುತ್ತದೆ.
ಸ್ನೇಹಿತರೆ,
ಭಾರತದ ಪ್ರಗತಿ ಯಾವಾಗಲೂ ಹಂಚಿಕೆಯ ಪ್ರಗತಿಯ ಯಶೋಗಾಥೆಯಾಗಿದೆ. ಭಾರತ ಬೆಳೆದಾಗ, ಅದು ತನ್ನ ಸ್ನೇಹಿತರನ್ನು ಆ ಬೆಳವಣಿಗೆಯಲ್ಲಿ ಪಾಲುದಾರರನ್ನಾಗಿ ಮಾಡುತ್ತದೆ. ಇಂದು ನಾವು ಮಾಡುತ್ತಿರುವುದು ಅದನ್ನೇ.
ಇಂದು ಭಾರತವು ವಿಶ್ವದ 3ನೇ ಅತಿದೊಡ್ಡ ಆರ್ಥಿಕತೆಯಾಗುವತ್ತ ವೇಗವಾಗಿ ಮುನ್ನಡೆಯುತ್ತಿದೆ. ಇದು ಇಡೀ ಜಗತ್ತಿಗೆ ಅವಕಾಶಗಳನ್ನು ಒದಗಿಸುತ್ತದೆ, ಆದರೆ ಒಮಾನ್ ಗೆ, ಇನ್ನೂ ಹೆಚ್ಚಿನ ಅನುಕೂಲ ಕಲ್ಪಿಸುತ್ತದೆ.
ನಾವು ವಿಶ್ವಾಸಾರ್ಹ ಸ್ನೇಹಿತರು ಮಾತ್ರವಲ್ಲದೆ, ಕಡಲ ನೆರೆಹೊರೆಯವರೂ ಆಗಿರುವುದರಿಂದ, ನಮ್ಮ ಜನರು ಪರಸ್ಪರ ಚೆನ್ನಾಗಿ ತಿಳಿದಿದ್ದಾರೆ, ನಮ್ಮ ವ್ಯಾಪಾರ ಸಮುದಾಯಗಳಲ್ಲಿ ಪೀಳಿಗೆಯಿಂದ ಪೀಳಿಗೆಗೆ ನಂಬಿಕೆ ಇದೆ, ನಾವು ಪರಸ್ಪರರ ಮಾರುಕಟ್ಟೆಗಳನ್ನು ಆಳವಾಗಿ ಅರ್ಥ ಮಾಡಿಕೊಳ್ಳುತ್ತೇವೆ. ಅಂತಹ ಸಂದರ್ಭದಲ್ಲಿ, ಭಾರತದ ಬೆಳವಣಿಗೆಯ ಪ್ರಯಾಣವು ಓಮನ್‌ಗೆ ಹೇರಳವಾದ ಅವಕಾಶಗಳನ್ನು ನೀಡುತ್ತದೆ.
ಸ್ನೇಹಿತರೆ,
ಇಂದಿನ ವ್ಯಾಪಾರ ಜಗತ್ತಿನಲ್ಲಿ, ಭಾರತದ ಆರ್ಥಿಕತೆಯ ಹಠಾತ್ ಚೇತರಿಕೆಯನ್ನು ವ್ಯಾಪಕವಾಗಿ ಚರ್ಚಿಸಲಾಗಿದೆ. ಜಾಗತಿಕ ಅನಿಶ್ಚಯ ಮತ್ತು ವಿಶ್ವ ಆರ್ಥಿಕತೆ ಎದುರಿಸುತ್ತಿರುವ ಸವಾಲುಗಳ ನಡುವೆ, ಭಾರತವು 8 ಪ್ರತಿಶತಕ್ಕಿಂತ ಹೆಚ್ಚಿನ ಬೆಳವಣಿಗೆ ಸಾಧಿಸಲು ಹೇಗೆ ಸಾಧ್ಯವಾಯಿತು ಎಂದು ಜನರು ಆಗಾಗ್ಗೆ ಕೇಳುತ್ತಾರೆ. ಇದರ ಹಿಂದಿನ ಪ್ರಮುಖ ಕಾರಣವನ್ನು ನಾನು ನಿಮ್ಮೊಂದಿಗೆ ಹಂಚಿಕೊಳ್ಳುತ್ತೇನೆ.
ವಾಸ್ತವವಾಗಿ, ಕಳೆದ 11 ವರ್ಷಗಳಲ್ಲಿ, ಭಾರತವು ತನ್ನ ನೀತಿಗಳನ್ನು ಮಾತ್ರ ಬದಲಾಯಿಸದೆ, ಅದು ತನ್ನ ಆರ್ಥಿಕ ಡಿಎನ್‌ಎ(ವ್ಯವಸ್ಥೆ)ಯನ್ನೇ ಪರಿವರ್ತಿಸಿದೆ.
ಕೆಲವು ಉದಾಹರಣೆಗಳನ್ನು ನಾನಿಲ್ಲ ಹಂಚಿಕೊಳ್ಳುತ್ತೇನೆ. ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಭಾರತವನ್ನು ಸಮಗ್ರ ಮತ್ತು ಏಕೀಕೃತ ಮಾರುಕಟ್ಟೆಯಾಗಿ ಪರಿವರ್ತಿಸಿದೆ. ಋಣಬಾಧೆ ಮತ್ತು ದಿವಾಳಿತನ ಸಂಹಿತೆಯು ಹೆಚ್ಚಿನ ಆರ್ಥಿಕ ಶಿಸ್ತು, ಹೆಚ್ಚಿನ ಪಾರದರ್ಶಕತೆ ಮತ್ತು ಹೂಡಿಕೆದಾರರ ವಿಶ್ವಾಸವನ್ನು ಬಲಪಡಿಸಿದೆ. ಅದೇ ರೀತಿ, ನಾವು ಕಾರ್ಪೊರೇಟ್ ತೆರಿಗೆ ಸುಧಾರಣೆಗಳನ್ನು ಕೈಗೊಂಡಿದ್ದೇವೆ, ಇದು ಭಾರತವನ್ನು ವಿಶ್ವದ ಅತ್ಯಂತ ಸ್ಪರ್ಧಾತ್ಮಕ ಹೂಡಿಕೆ ತಾಣಗಳಲ್ಲಿ ಒಂದನ್ನಾಗಿ ಮಾಡಿದೆ.
ಸ್ನೇಹಿತರೆ,
ನಾವು ಕೈಗೊಂಡಿರುವ ಕಾರ್ಮಿಕ ಸುಧಾರಣೆಗಳ ಬಗ್ಗೆ ನಿಮಗೆ ತಿಳಿದಿರಬಹುದು. ನಾವು ಡಜನ್ ಗಟ್ಟಲೆ ಕಾರ್ಮಿಕ ಕಾನೂನುಗಳನ್ನು ಕೇವಲ 4 ಸಂಹಿತೆಗಳಾಗಿ ಕ್ರೋಢೀಕರಿಸಿದ್ದೇವೆ. ಇವು ಭಾರತದ ಇತಿಹಾಸದಲ್ಲಿ ಅತ್ಯಂತ ಮಹತ್ವದ ಕಾರ್ಮಿಕ ಸುಧಾರಣೆಗಳಲ್ಲಿ ಒಂದಾಗಿವೆ.
ಸ್ನೇಹಿತರೆ,
ನೀತಿ ಸ್ಪಷ್ಟತೆ ಇದ್ದಾಗ, ಉತ್ಪಾದನೆಯು ಹೊಸ ವಿಶ್ವಾಸ ಪಡೆಯುತ್ತದೆ. ಒಂದೆಡೆ, ನಾವು ನೀತಿ ಮತ್ತು ಪ್ರಕ್ರಿಯೆ ಸುಧಾರಣೆಗಳನ್ನು ಜಾರಿಗೆ ತರುತ್ತಿದ್ದೇವೆ. ಮತ್ತೊಂದೆಡೆ, ಭಾರತದಲ್ಲಿ ಉತ್ಪಾದನೆ ಉತ್ತೇಜಿಸಲು ನಾವು ಉತ್ಪಾದನೆ-ಸಂಪರ್ಕಿತ ಉತ್ತೇಜನಾ ಅಥವಾ ಪ್ರೋತ್ಸಾಹಕ ಯೋಜನೆಗಳನ್ನು ಒದಗಿಸುತ್ತಿದ್ದೇವೆ. ಅಂತಹ ಪ್ರಯತ್ನಗಳ ಮೂಲಕವೇ 'ಮೇಕ್ ಇನ್ ಇಂಡಿಯಾ' ಉಪಕ್ರಮವು ಇಂದು ಗಮನಾರ್ಹವಾಗಿ ಜಾಗತಿಕ ಉತ್ಸಾಹವನ್ನು ಸೃಷ್ಟಿಸಿದೆ.
ಸ್ನೇಹಿತರೆ,
ಭಾರತದ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯವು ಈ ಸುಧಾರಣೆಗಳನ್ನು ಮತ್ತಷ್ಟು ಬಲಪಡಿಸಿದೆ. ಆಡಳಿತ ಕಾಗದಮುಕ್ತವಾಗಿದೆ, ಆರ್ಥಿಕತೆ ಹೆಚ್ಚು ನಗದುಮುಕ್ತವಾಗಿದೆ, ಇಡೀ ಆರ್ಥಿಕ ವ್ಯವಸ್ಥೆಯು ಗಮನಾರ್ಹವಾಗಿ ಹೆಚ್ಚು ಪರಿಣಾಮಕಾರಿ, ಪಾರದರ್ಶಕ ಮತ್ತು ಊಹಿಸಬಹುದಾದ ಸ್ಥಿತಿಯಲ್ಲಿದೆ.
ಡಿಜಿಟಲ್ ಇಂಡಿಯಾ ಕೇವಲ ಒಂದು ಯೋಜನೆಯಲ್ಲ, ಇದು ವಿಶ್ವದ ಅತಿದೊಡ್ಡ 'ಹಣಕಾಸು ಸೇರ್ಪಡೆಯ ಕ್ರಾಂತಿ'ಯಾಗಿದೆ. ಇದು ಜೀವನ ಸುಲಭತೆಯನ್ನು ಹೆಚ್ಚಿಸಿದೆ ಮತ್ತು ವ್ಯಾಪಾರ ಮಾಡುವ ಸುಲಭತೆಯನ್ನು ಹೊಸ ಮಟ್ಟಕ್ಕೆ ಕೊಂಡೊಯ್ದಿದೆ. ಭಾರತದಲ್ಲಿ ಅಭಿವೃದ್ಧಿಪಡಿಸಲಾಗುತ್ತಿರುವ ಆಧುನಿಕ ಭೌತಿಕ ಮೂಲಸೌಕರ್ಯವು ಇದಕ್ಕೆ ಮತ್ತಷ್ಟು ಪೂರಕವಾಗಿದೆ. ಸಂಪರ್ಕವನ್ನು ಸುಧಾರಿಸುವುದರೊಂದಿಗೆ, ಭಾರತದಲ್ಲಿ ಸರಕು ಸಾಗಣೆ ವೆಚ್ಚವು ಸ್ಥಿರವಾಗಿ ಕಡಿಮೆಯಾಗುತ್ತಿದೆ.
ಸ್ನೇಹಿತರೆ,
ಜಗತ್ತು ಭಾರತವನ್ನು ಹೂಡಿಕೆಗೆ ಆಕರ್ಷಕ ತಾಣವೆಂದು ಗುರುತಿಸುತ್ತದೆ. ಅದೇ ಸಮಯದಲ್ಲಿ, ಭಾರತವು ವಿಶ್ವಾಸಾರ್ಹ, ಭವಿಷ್ಯಕ್ಕೆ ಸಿದ್ಧವಾಗಿರುವ ಪಾಲುದಾರನಾಗಿದೆ. ಈ ಸತ್ಯವನ್ನು ಓಮನ್ ಚೆನ್ನಾಗಿ ಅರ್ಥ ಮಾಡಿಕೊಳ್ಳುತ್ತದೆ ಮತ್ತು ಆಳವಾಗಿ ಮೆಚ್ಚುತ್ತದೆ.
ನಮ್ಮ ಜಂಟಿ ಹೂಡಿಕೆ ನಿಧಿಯು ಹಲವು ವರ್ಷಗಳಿಂದ ನಮ್ಮ ಎರಡೂ ದೇಶಗಳ ನಡುವೆ ಹೂಡಿಕೆಯನ್ನು ಉತ್ತೇಜಿಸುತ್ತಿದೆ. ಅದು ಇಂಧನ, ತೈಲ ಮತ್ತು ಅನಿಲ, ರಸಗೊಬ್ಬರಗಳು, ಆರೋಗ್ಯ, ಪೆಟ್ರೋಕೆಮಿಕಲ್ಸ್ ಅಥವಾ ಹಸಿರು ಇಂಧನ ಸೇರಿದಂತೆ ಪ್ರತಿಯೊಂದು ವಲಯದಲ್ಲೂ ಹೊಸ ಅವಕಾಶಗಳು ಹೊರಹೊಮ್ಮುತ್ತಿವೆ.
ಆದರೆ ಸ್ನೇಹಿತರೆ,
ಭಾರತ ಮತ್ತು ಓಮನ್ ಇಷ್ಟಕ್ಕೆ ಮಾತ್ರ ತೃಪ್ತವಾಗಿಲ್ಲ. ನಾವು ನಮ್ಮ ಸಂತೃಪ್ತ ವಲಯದಲ್ಲಿ ಉಳಿಯದೆ, ನಾವು ಭಾರತ-ಓಮನ್ ಪಾಲುದಾರಿಕೆಯನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಬೇಕು. ಇದಕ್ಕಾಗಿ, ಎರಡೂ ದೇಶಗಳ ವ್ಯಾಪಾರ ಸಮುದಾಯಗಳು ತಮಗಾಗಿ ಮಹತ್ವಾಕಾಂಕ್ಷೆಯ ಗುರಿಗಳನ್ನು ಹೊಂದಿಸಿಕೊಳ್ಳಬೇಕು.
ಕೆಲವು ಸವಾಲುಗಳನ್ನು ವಿವರಿಸುವ ಮೂಲಕ ನಾನು ನಿಮ್ಮ ಕೆಲಸವನ್ನು ಸ್ವಲ್ಪ ಸುಲಭಗೊಳಿಸುತ್ತೇನೆ. ಹಸಿರು ಶಕ್ತಿಯಲ್ಲಿ ಅರ್ಥಪೂರ್ಣವಾದದ್ದನ್ನು ಸಾಧಿಸಲು ನಾವು ಒಟ್ಟಾಗಿ ಕೆಲಸ ಮಾಡಬಹುದೇ? ಮುಂದಿನ 5 ವರ್ಷಗಳಲ್ಲಿ ನಾವು 5 ಪ್ರಮುಖ ಹಸಿರು ಯೋಜನೆಗಳನ್ನು ಪ್ರಾರಂಭಿಸಬಹುದೇ? ಹಸಿರು ಹೈಡ್ರೋಜನ್, ಹಸಿರು ಅಮೋನಿಯಾ, ಸೌರ ಉದ್ಯಾನವನಗಳು, ಇಂಧನ ಸಂಗ್ರಹಣೆ ಮತ್ತು ಸ್ಮಾರ್ಟ್ ಗ್ರಿಡ್‌ಗಳಲ್ಲಿ ಹೊಸ ಮಾನದಂಡಗಳನ್ನು ಹೊಂದಿಸೋಣ.
ಸ್ನೇಹಿತರೆ,
ಇಂಧನ ಭದ್ರತೆ ಮುಖ್ಯ, ಜತೆಗೆ ಆಹಾರ ಭದ್ರತೆಯೂ ಅಷ್ಟೇ ಮುಖ್ಯ. ಮುಂಬರುವ ವರ್ಷಗಳಲ್ಲಿ ಇದು ಒಂದು ಪ್ರಮುಖ ಜಾಗತಿಕ ಸವಾಲಾಗಿ ಪರಿಣಮಿಸುತ್ತದೆ. ಭಾರತ-ಓಮನ್ ಕೃಷಿ ನಾವೀನ್ಯತೆ ಕೇಂದ್ರ ಸ್ಥಾಪಿಸಲು ನಾವು ಒಟ್ಟಾಗಿ ಕೆಲಸ ಮಾಡಬಹುದೇ? ಈ ಉಪಕ್ರಮವು ಓಮನ್‌ನ ಆಹಾರ ಭದ್ರತೆಯನ್ನು ಬಲಪಡಿಸುತ್ತದೆ, ಭಾರತದ ಕೃಷಿ-ತಂತ್ರಜ್ಞಾನ ಪರಿಹಾರಗಳು ಜಾಗತಿಕ ಮಾರುಕಟ್ಟೆಗಳನ್ನು ತಲುಪಲು ಸಹಾಯ ಮಾಡುತ್ತದೆ.
ಸ್ನೇಹಿತರೆ,
ಕೃಷಿ ಒಂದು ಪ್ರಮುಖ ಕ್ಷೇತ್ರವಾಗಿದೆ. ಅದೇ ರೀತಿ, ಎಲ್ಲಾ ವಲಯಗಳಲ್ಲಿ ನಾವೀನ್ಯತೆ ಪ್ರೋತ್ಸಾಹಿಸಬೇಕು. ಹಾಗಾದರೆ, ನಾವು "ಓಮನ್-ಭಾರತ ನಾವೀನ್ಯತಾ ಸೇತು" ನಿರ್ಮಿಸಬಹುದೇ? ಮುಂದಿನ 2 ವರ್ಷಗಳಲ್ಲಿ ಭಾರತ ಮತ್ತು ಓಮನ್‌ನಿಂದ 200 ಸ್ಟಾರ್ಟಪ್‌ಗಳನ್ನು ಸಂಪರ್ಕಿಸುವುದು ನಮ್ಮ ಗುರಿಯಾಗಿರಬೇಕು.
ನಾವು ಜಂಟಿ ಇನ್ ಕ್ಯುಬೇಟರ್‌ಗಳು, ಹಣಕಾಸು ತಂತ್ರಜ್ಞಾನದ ಪ್ರತ್ಯೇಕ ವ್ಯವಸ್ಥೆ(ಸ್ಯಾಂಡ್‌ಬಾಕ್ಸ್), ಎಐ ಮತ್ತು ಸೈಬರ್ ಭದ್ರತೆಯ ಪ್ರಯೋಗಾಲಯಗಳನ್ನು ನಿರ್ಮಿಸಬೇಕು ಮತ್ತು ಗಡಿಯಾಚೆಗಿನ ಸಾಹಸೋದ್ಯಮ ನಿಧಿಯನ್ನು ಉತ್ತೇಜಿಸಬೇಕಾಗಿದೆ.
ಸ್ನೇಹಿತರೆ,
ಇವು ಕೇವಲ ವಿಚಾರಗಳಲ್ಲ, ಆಹ್ವಾನಗಳಾಗಿವೆ:
ಆಹ್ವಾನ—ಹೂಡಿಕೆ ಮಾಡಲು.
ಆಹ್ವಾನ—ನವೀಕರಿಸಲು.
ಆಹ್ವಾನ—ಭವಿಷ್ಯವನ್ನು ಒಟ್ಟಾಗಿ ನಿರ್ಮಿಸಲು.
ಹೊಸ ತಂತ್ರಜ್ಞಾನ, ಹೊಸ ಶಕ್ತಿ ಮತ್ತು ಹೊಸ ಕನಸುಗಳ ಶಕ್ತಿಯೊಂದಿಗೆ ಈ ದೀರ್ಘಕಾಲದ ಸ್ನೇಹವನ್ನು ಮುಂದಕ್ಕೆ ಕೊಂಡೊಯ್ಯೋಣ.
ಶುಕ್ರನ್ ಜಜೀಲನ್!
ತುಂಬು ಧನ್ಯವಾದಗಳು!
ಹಕ್ಕು ನಿರಾಕರಣೆ: ಪ್ರಧಾನಮಂತ್ರಿ ಅವರ ಅಂದಾಜು ಕನ್ನಡ ರೂಪಾಂತರ ಇದಾಗಿದೆ. ಮೂಲತಃ ಹಿಂದಿ ಭಾಷೆಯಲ್ಲಿ ಭಾಷಣ ಮಾಡಿದ್ದಾರೆ.
*****
(रिलीज़ आईडी: 2206452)
आगंतुक पटल : 4