ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಒಮಾನ್ ನಲ್ಲಿ ಭಾರತೀಯ ಸಮುದಾಯವನ್ನುದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

प्रविष्टि तिथि: 18 DEC 2025 1:32PM by PIB Bengaluru

ಪ್ರಧಾನಮಂತ್ರಿ ಅವರು ಇಂದು ಮಸ್ಕತ್‌ನಲ್ಲಿ ಭಾರತೀಯ ಸಮುದಾಯದ ಬೃಹತ್ ಸಭೆಯನ್ನುದ್ದೇಶಿಸಿ ಮಾತನಾಡಿದರು. ಈ ಸಭೆಯಲ್ಲಿ ವಿವಿಧ ಭಾರತೀಯ ಶಾಲೆಗಳ 700ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಓಮನ್ ನಲ್ಲಿ ಭಾರತೀಯ ಶಾಲೆಗಳು ಸ್ಥಾಪನೆಯಾಗಿ 50 ವರ್ಷಗಳನ್ನು ಪೂರೈಸುತ್ತಿರುವ ಹಿನ್ನೆಲೆಯಲ್ಲಿ, ಈ ವರ್ಷವು ಅಲ್ಲಿನ ಶಿಕ್ಷಣ ಸಂಸ್ಥೆಗಳಿಗೆ ವಿಶೇಷವಾಗಿದೆ. 

ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿ ಅವರು, ಭಾರತದಲ್ಲಿರುವ ಕುಟುಂಬದವರು ಮತ್ತು ಸ್ನೇಹಿತರ ಪರವಾಗಿ ಅನಿವಾಸಿ ಭಾರತೀಯರಿಗೆ ಶುಭಾಶಯಗಳನ್ನು ತಿಳಿಸಿದರು. ತಮಗೆ ನೀಡಿದ ಅತ್ಯಂತ ಆತ್ಮೀಯ ಮತ್ತು ವರ್ಣರಂಜಿತ ಸ್ವಾಗತಕ್ಕಾಗಿ ಅವರು ಧನ್ಯವಾದಗಳನ್ನು ಅರ್ಪಿಸಿದರು. ಓಮನ್ ನಲ್ಲಿ ನೆಲೆಸಿರುವ ಭಾರತದ ವಿವಿಧ ಭಾಗಗಳ ಜನರನ್ನು ಭೇಟಿಯಾಗುತ್ತಿರುವುದು ತಮಗೆ ಅಪಾರ ಸಂತೋಷ ತಂದಿದೆ ಎಂದು ಹೇಳಿದ ಅವರು, ವೈವಿಧ್ಯತೆಯೇ ಭಾರತೀಯ ಸಂಸ್ಕೃತಿಯ ಬುನಾದಿಯಾಗಿದೆ ಎಂದು ಉಲ್ಲೇಖಿಸಿದರು. ಈ ಮೌಲ್ಯವು ಭಾರತೀಯರು ತಾವು ವಾಸಿಸುವ ಯಾವುದೇ ಸಮಾಜದೊಂದಿಗೆ ಸುಲಭವಾಗಿ ಬೆರೆಯಲು ಮತ್ತು ಒಂದಾಗಲು ಸಹಾಯ ಮಾಡುತ್ತದೆ ಎಂದು ಅವರು ಅಭಿಪ್ರಾಯಪಟ್ಟರು. ಓಮನ್ ನಲ್ಲಿ ಭಾರತೀಯ ಸಮುದಾಯವನ್ನು ಅತ್ಯಂತ ಗೌರವದಿಂದ ಕಾಣಲಾಗುತ್ತಿದೆ ಎಂದು ಸ್ಮರಿಸಿದ ಪ್ರಧಾನಮಂತ್ರಿಯವರು, ಸಹಬಾಳ್ವೆ ಮತ್ತು ಸಹಕಾರವು ಭಾರತೀಯ ಅನಿವಾಸಿ ಸಮುದಾಯದ ಪ್ರಮುಖ ವೈಶಿಷ್ಟ್ಯಗಳಾಗಿವೆ ಎಂದರು.

ಪ್ರಧಾನಮಂತ್ರಿ ಅವರು ತಮ್ಮ ಭಾಷಣದಲ್ಲಿ ಭಾರತ ಮತ್ತು ಓಮನ್ ನಡುವೆ 'ಮಾಂಡವಿಯಿಂದ ಮಸ್ಕತ್'ವರೆಗೆ ಹರಡಿರುವ ಶತಮಾನಗಳಷ್ಟು ಹಳೆಯದಾದ ಬಾಂಧವ್ಯವನ್ನು ಸ್ಮರಿಸಿದರು. ಇಂದು ಈ ಐತಿಹಾಸಿಕ ಸಂಬಂಧವನ್ನು ಅನಿವಾಸಿ ಭಾರತೀಯರು ತಮ್ಮ ಕಠಿಣ ಪರಿಶ್ರಮ ಮತ್ತು ಒಗ್ಗಟ್ಟಿನ ಮೂಲಕ ಹೆಮ್ಮೆಯಿಂದ ಪೋಷಿಸುತ್ತಿದ್ದಾರೆ ಎಂದು ಅವರು ಶ್ಲಾಘಿಸಿದರು. 'ಭಾರತ್ ಕೊ ಜಾನಿಯೇ' ರಸಪ್ರಶ್ನೆ ಸ್ಪರ್ಧೆಯಲ್ಲಿ ಅನಿವಾಸಿ ಭಾರತೀಯ ಸಮುದಾಯವು ಅತ್ಯಂತ ಉತ್ಸಾಹದಿಂದ ಮತ್ತು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿರುವುದಕ್ಕೆ ಪ್ರಧಾನಿಯವರು ಮೆಚ್ಚುಗೆ ವ್ಯಕ್ತಪಡಿಸಿದರು. ಜ್ಞಾನ ಮತ್ತು ಶಿಕ್ಷಣವು ಭಾರತ-ಓಮನ್ ಸಂಬಂಧಗಳ ಕೇಂದ್ರಬಿಂದುವಾಗಿದೆ ಎಂದು ಒತ್ತಿ ಹೇಳಿದ ಅವರು, ಓಮನ್ ನಲ್ಲಿ ಭಾರತೀಯ ಶಾಲೆಗಳು 50 ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿರುವ ಈ ಸಂಭ್ರಮದ ಸಂದರ್ಭಕ್ಕೆ ಎಲ್ಲರಿಗೂ ಅಭಿನಂದನೆಗಳನ್ನು ಸಲ್ಲಿಸಿದರು. ಇದೇ ಸಂದರ್ಭದಲ್ಲಿ, ಓಮನ್ನಲ್ಲಿರುವ ಭಾರತೀಯ ಸಮುದಾಯದ ಕ್ಷೇಮಾಭಿವೃದ್ಧಿಗೆ ಮತ್ತು ಅವರ ಹಿತರಕ್ಷಣೆಗೆ ನಿರಂತರ ಬೆಂಬಲ ನೀಡುತ್ತಿರುವ ಓಮನ್ ದೊರೆ, ಹಿಸ್ ಮೆಜೆಸ್ಟಿ ಸುಲ್ತಾನ್ ಹೈತಮ್ ಬಿನ್ ತಾರಿಕ್ ಅವರಿಗೆ ಪ್ರಧಾನಮಂತ್ರಿಯವರು ವಿಶೇಷವಾಗಿ ಕೃತಜ್ಞತೆಗಳನ್ನು ಅರ್ಪಿಸಿದರು.

ಪ್ರಧಾನಮಂತ್ರಿ ಅವರು ಭಾರತದ ಪರಿವರ್ತನಾತ್ಮಕ ಬೆಳವಣಿಗೆ ಮತ್ತು ಅಭಿವೃದ್ಧಿ, ಬದಲಾವಣೆಯ ವೇಗ ಮತ್ತು ವ್ಯಾಪ್ತಿ ಹಾಗೂ ಕಳೆದ ತ್ರೈಮಾಸಿಕದಲ್ಲಿ ಶೇಕಡಾ 8ಕ್ಕಿಂತ ಹೆಚ್ಚು ಬೆಳವಣಿಗೆಯಿಂದ ಪ್ರತಿಫಲಿಸುವ ಆರ್ಥಿಕತೆಯ ಸದೃಢತೆಯ ಬಗ್ಗೆ ಮಾತನಾಡಿದರು. ಕಳೆದ 11 ವರ್ಷಗಳಲ್ಲಿ ಸರ್ಕಾರದ ಸಾಧನೆಗಳನ್ನು ಸ್ಮರಿಸುತ್ತಾ, ಮೂಲಸೌಕರ್ಯ ಅಭಿವೃದ್ಧಿ, ಉತ್ಪಾದನೆ, ಆರೋಗ್ಯ ರಕ್ಷಣೆ, ಹಸಿರು ಬೆಳವಣಿಗೆ ಮತ್ತು ಮಹಿಳಾ ಸಬಲೀಕರಣದ ಕ್ಷೇತ್ರಗಳಲ್ಲಿ ದೇಶವು ಆಮೂಲಾಗ್ರ ಬದಲಾವಣೆಗಳನ್ನು ಕಂಡಿದೆ ಎಂದು ಅವರು ಗಮನಿಸಿದರು. ವಿಶ್ವದರ್ಜೆಯ ನಾವೀನ್ಯತೆ, ಸ್ಟಾರ್ಟ್ಅಪ್ ಮತ್ತು ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುವ ಮೂಲಕ ಭಾರತವು 21ನೇ ಶತಮಾನಕ್ಕೆ ತನ್ನನ್ನು ಸಿದ್ಧಪಡಿಸಿಕೊಳ್ಳುತ್ತಿದೆ ಎಂದು ಅವರು ತಿಳಿಸಿದರು. ಜಾಗತಿಕವಾಗಿ ನಡೆಯುವ ಎಲ್ಲಾ ಡಿಜಿಟಲ್ ಪಾವತಿಗಳಲ್ಲಿ ಸುಮಾರು ಶೇಕಡಾ 50 ರಷ್ಟು ಪಾಲು ಹೊಂದಿರುವ ಭಾರತದ ಯುಪಿಐ ವ್ಯವಸ್ಥೆಯು ಹೆಮ್ಮೆ ಮತ್ತು ಸಾಧನೆಯ ವಿಷಯವಾಗಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಚಂದ್ರನ ಮೇಲೆ ಇಳಿಯುವುದರಿಂದ ಹಿಡಿದು ಯೋಜಿತ 'ಗಗನಯಾನ' ಮಾನವ ಬಾಹ್ಯಾಕಾಶ ಮಿಷನ್ ವರೆಗೆ ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಇತ್ತೀಚಿನ ಅದ್ಭುತ ಸಾಧನೆಗಳನ್ನು ಅವರು ಉಲ್ಲೇಖಿಸಿದರು. ಬಾಹ್ಯಾಕಾಶವು ಭಾರತ ಮತ್ತು ಓಮನ್ ನಡುವಿನ ಸಹಯೋಗದ ಪ್ರಮುಖ ಭಾಗವಾಗಿದೆ ಎಂದು ತಿಳಿಸಿದ ಅವರು, ಯುವಜನರಿಗಾಗಿ ಇಸ್ರೋ ಹಮ್ಮಿಕೊಂಡಿರುವ 'ಯುವಿಕಾ' (YUVIKA) ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ವಿದ್ಯಾರ್ಥಿಗಳಿಗೆ ಆಹ್ವಾನ ನೀಡಿದರು. ಭಾರತವು ಕೇವಲ ಒಂದು ಮಾರುಕಟ್ಟೆಯಲ್ಲ, ಬದಲಿಗೆ ಸರಕು ಮತ್ತು ಸೇವೆಗಳಿಂದ ಡಿಜಿಟಲ್ ಪರಿಹಾರಗಳವರೆಗೆ ಇಡೀ ವಿಶ್ವಕ್ಕೇ ಒಂದು ಮಾದರಿಯಾಗಿದೆ ಎಂದು ಪ್ರಧಾನಮಂತ್ರಿ ಅವರು ಹೇಳಿದರು.

ಅನಿವಾಸಿ ಭಾರತೀಯರ ಕ್ಷೇಮಾಭಿವೃದ್ಧಿಯ ಬಗ್ಗೆ ಭಾರತಕ್ಕಿರುವ ಆಳವಾದ ಬದ್ಧತೆಯನ್ನು ಪ್ರಧಾನಮಂತ್ರಿ ಅವರು ವ್ಯಕ್ತಪಡಿಸಿದರು. ನಮ್ಮ ಜನರು ಯಾವಾಗ ಮತ್ತು ಎಲ್ಲಿಯೇ ಸಂಕಷ್ಟದಲ್ಲಿದ್ದರೂ ಅಥವಾ ಅವರಿಗೆ ಸಹಾಯದ ಅಗತ್ಯವಿದ್ದರೂ, ಸರ್ಕಾರವು ಅವರ ಬೆಂಬಲಕ್ಕೆ ಸದಾ ಇರುತ್ತದೆ ಮತ್ತು ಅವರ ಕೈಹಿಡಿಯುತ್ತದೆ ಎಂದು ಅವರು ಭರವಸೆ ನೀಡಿದರು.

ಕೃತಕ ಬುದ್ಧಿಮತ್ತೆ ಸಹಯೋಗ, ಡಿಜಿಟಲ್ ಕಲಿಕೆ, ನಾವೀನ್ಯತೆ ಪಾಲುದಾರಿಕೆ ಮತ್ತು ಉದ್ಯಮಶೀಲತೆಯ ವಿನಿಮಯದ ಮೂಲಕ ಭಾರತ-ಓಮನ್ ಪಾಲುದಾರಿಕೆಯು ಭವಿಷ್ಯಕ್ಕೆ ಸಜ್ಜಾಗುತ್ತಿದೆ ಎಂದು ಪ್ರಧಾನಮಂತ್ರಿಯವರು ಈ ಸಂದರ್ಭದಲ್ಲಿ ಪುನರುಚ್ಚರಿಸಿದರು. ಯುವಜನರು ದೊಡ್ಡದಾಗಿ ಕನಸು ಕಾಣಬೇಕು, ವಿಷಯಗಳನ್ನು ಆಳವಾಗಿ ಕಲಿಯಬೇಕು ಮತ್ತು ಧೈರ್ಯದಿಂದ ನಾವೀನ್ಯತೆಗಳನ್ನು ಕೈಗೊಳ್ಳಬೇಕು, ಆ ಮೂಲಕ ಮಾನವಕುಲಕ್ಕೆ ಅರ್ಥಪೂರ್ಣ ಕೊಡುಗೆ ನೀಡಬೇಕು ಎಂದು ಅವರು ಕರೆ ನೀಡಿದರು.

 

*****


(रिलीज़ आईडी: 2205878) आगंतुक पटल : 8
इस विज्ञप्ति को इन भाषाओं में पढ़ें: English , Urdu , Marathi , हिन्दी , Assamese , Bengali , Bengali-TR , Punjabi , Gujarati , Odia , Tamil , Telugu , Malayalam