ಪ್ರಧಾನ ಮಂತ್ರಿಯವರ ಕಛೇರಿ
ಜೋರ್ಡಾನ್ ದೊರೆ ಎರಡನೇ ಅಬ್ದುಲ್ಲಾ ಅವರನ್ನು ಭೇಟಿ ಮಾಡಿದ ಪ್ರಧಾನಮಂತ್ರಿ
प्रविष्टि तिथि:
15 DEC 2025 10:58PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಜೋರ್ಡಾನ್ ನ ದೊರೆ ಎರಡನೇ ಅಬ್ದುಲ್ಲಾ ಅವರನ್ನು ಭೇಟಿ ಮಾಡಿದರು. ಅಲ್ ಹುಸೇನಿಯಾ ಅರಮನೆಗೆ ಆಗಮಿಸಿದ ಕೂಡಲೇ ಪ್ರಧಾನಮಂತ್ರಿ ಅವರನ್ನು ದೊರೆ ಎರಡನೇ ಅಬ್ದುಲ್ಲಾ ಅವರು ಆತ್ಮೀಯವಾಗಿ ಬರಮಾಡಿಕೊಂಡರು ಮತ್ತು ಸಾಂಪ್ರದಾಯಿಕ ಸ್ವಾಗತವನ್ನು ನೀಡಿದರು.
ಉಭಯ ನಾಯಕರು ಸೀಮಿತ ಮತ್ತು ನಿಯೋಗ ಮಟ್ಟದ ವಿಧಾನಗಳಲ್ಲಿ ಭೇಟಿಯಾದರು. ಅವರು ತಮ್ಮ ಹಿಂದಿನ ಸಭೆಗಳು ಮತ್ತು ಸಂಭಾಷಣೆಗಳನ್ನು ಆತ್ಮೀಯವಾಗಿ ಸ್ಮರಿಸಿಕೊಂಡರು ಮತ್ತು ಎರಡೂ ದೇಶಗಳು ಹಂಚಿಕೊಂಡಿರುವ ಆತ್ಮೀಯ ಮತ್ತು ಐತಿಹಾಸಿಕ ಸಂಬಂಧಗಳನ್ನು ಬಲವಾಗಿ ಪ್ರತಿಪಾದಿಸಿದರು. ಎರಡೂ ದೇಶಗಳು ತಮ್ಮ ರಾಜತಾಂತ್ರಿಕ ಸಂಬಂಧಗಳ ಸ್ಥಾಪನೆಯ 75 ವರ್ಷಗಳನ್ನು ಆಚರಿಸುತ್ತಿರುವ ಸಮಯದಲ್ಲಿ ಈ ಭೇಟಿ ಐತಿಹಾಸಿಕವಾಗಿದೆ ಎಂದು ಅವರು ಉಲ್ಲೇಖಿಸಿದರು. ಭಾರತ-ಜೋರ್ಡಾನ್ ಸಂಬಂಧಗಳನ್ನು ಬಲಪಡಿಸುವ ಬದ್ಧತೆಗಾಗಿ ಪ್ರಧಾನಮಂತ್ರಿ ಅವರು ದೊರೆಯ ಕಾರ್ಯವನ್ನು ಶ್ಲಾಘಿಸಿದರು. ಭಯೋತ್ಪಾದನೆಯ ವಿರುದ್ಧ ಭಾರತದ ಹೋರಾಟಕ್ಕೆ ಅವರು ದೃಢವಾದ ಬೆಂಬಲವನ್ನು ವ್ಯಕ್ತಪಡಿಸಿದರು ಮತ್ತು ಭಯೋತ್ಪಾದನೆಯನ್ನು ಅದರ ಎಲ್ಲಾ ರೂಪಗಳು ಮತ್ತು ಅಭಿವ್ಯಕ್ತಿಗಳನ್ನು ಖಂಡಿಸಿದರು. ಭಯೋತ್ಪಾದನೆ, ಉಗ್ರವಾದ ಮತ್ತು ಮೂಲಭೂತವಾದವನ್ನು ಎದುರಿಸಲು ಮತ್ತು ಈ ದುಷ್ಟಶಕ್ತಿಗಳ ವಿರುದ್ಧ ಜಾಗತಿಕ ಹೋರಾಟಕ್ಕೆ ಕೊಡುಗೆ ನೀಡುವಲ್ಲಿ ದೊರೆಯ ನಾಯಕತ್ವವನ್ನು ಪ್ರಧಾನಮಂತ್ರಿ ಶ್ಲಾಘಿಸಿದರು. ವ್ಯಾಪಾರ ಮತ್ತು ಹೂಡಿಕೆ; ರಕ್ಷಣೆ ಮತ್ತು ಭದ್ರತೆ; ನವೀಕರಿಸಬಹುದಾದ ಇಂಧನ; ರಸಗೊಬ್ಬರ ಮತ್ತು ಕೃಷಿ; ನಾವೀನ್ಯತೆ, ಐಟಿ ಮತ್ತು ಡಿಜಿಟಲ್ ತಂತ್ರಜ್ಞಾನಗಳು; ನಿರ್ಣಾಯಕ ಖನಿಜಗಳು, ಮೂಲಸೌಕರ್ಯ; ಆರೋಗ್ಯ ಮತ್ತು ಔಷಧ; ಶಿಕ್ಷಣ ಮತ್ತು ಸಾಮರ್ಥ್ಯ;ಪ್ರವಾಸೋದ್ಯಮ ಮತ್ತು ಪರಂಪರೆ; ಮತ್ತು ಸಂಸ್ಕೃತಿ ಮತ್ತು ಜನರಿಂದ ಜನರ ನಡುವಿನ ಸಂಬಂಧಗಳು ಸೇರಿದಂತೆ ಹಲವು ವಲಯಗಳಲ್ಲಿ ಎರಡೂ ದೇಶಗಳ ನಡುವಿನ ಸಂಬಂಧವನ್ನು ಮತ್ತಷ್ಟು ಬಲವರ್ಧನೆಗೊಳಿಸುವ ಮಾರ್ಗಗಳ ಕುರಿತು ಉಭಯ ನಾಯಕರು ಚರ್ಚಿಸಿದರು. ಭಾರತವು ಜೋರ್ಡಾನ್‌ನ 3ನೇ ಅತಿದೊಡ್ಡ ವ್ಯಾಪಾರ ಪಾಲುದಾರ ರಾಷ್ಟ್ರ ಎಂದು ಹೇಳಿದ ಪ್ರಧಾನಮಂತ್ರಿ, ಮುಂದಿನ 5 ವರ್ಷಗಳಲ್ಲಿ ಎರಡೂ ದೇಶಗಳು ದ್ವಿಪಕ್ಷೀಯ ವ್ಯಾಪಾರವನ್ನು 5 ಶತಕೋಟಿ ಅಮೆರಿಕನ್ ಡಾಲರ್‌ಗಳಿಗೆ ಹೆಚ್ಚಿಸುವ ಗುರಿಯನ್ನು ಹೊಂದಬೇಕೆಂದರು. ಜೋರ್ಡಾನ್‌ನ ಡಿಜಿಟಲ್ ಪಾವತಿ ವ್ಯವಸ್ಥೆ ಮತ್ತು ಭಾರತದ ಯುನೈಟೆಡ್ ಪೇಮೆಂಟ್ಸ್ ಇಂಟರ್‌ಫೇಸ್ (ಯುಪಿಐ) ನಡುವಿನ ಸಹಯೋಗಕ್ಕೂ ಅವರು ಕರೆ ನೀಡಿದರು. ಜೋರ್ಡಾನ್ ಭಾರತಕ್ಕೆ ಪ್ರಮುಖ ರಸಗೊಬ್ಬರದ ಪೂರೈಕೆ ರಾಷ್ಟ್ರವಾಗಿದೆ ಮತ್ತು ಭಾರತದಲ್ಲಿ ಫಾಸ್ಫೇಟ್ ರಸಗೊಬ್ಬರಕ್ಕೆ ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸಲು ಜೋರ್ಡಾನ್‌ನಲ್ಲಿ ಮತ್ತಷ್ಟು ಗಣನೀಯ ಹೂಡಿಕೆಗಾಗಿ ಎರಡೂ ದೇಶಗಳ ಕಂಪನಿಗಳು ಚರ್ಚೆಯಲ್ಲಿ ತೊಡಗಿವೆ ಎಂದು ಹೇಳಿದರು.
ಪ್ರಾದೇಶಿಕ ಬೆಳವಣಿಗೆಗಳು ಮತ್ತು ಇತರ ಜಾಗತಿಕ ಸಮಸ್ಯೆಗಳ ಕುರಿತು ಉಭಯ ನಾಯಕರು ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಹಂಚಿಕೊಂಡರು. ಈ ಪ್ರದೇಶದಲ್ಲಿ ಶಾಂತಿ ಮತ್ತು ಸ್ಥಿರತೆಯನ್ನು ಪುನಃಸ್ಥಾಪಿಸುವ ಮಹತ್ವವನ್ನು ಅವರು ಪುನರುಚ್ಚರಿಸಿದರು. ಈ ಪ್ರದೇಶದಲ್ಲಿ ಕಾಯಂ ಶಾಂತಿ ನಡೆಸುವಂತೆ ಮಾಡಲಾಗುತ್ತಿರುವ ಪ್ರಯತ್ನಗಳಿಗೆ ಭಾರತದ ಬೆಂಬಲವನ್ನು ಪ್ರಧಾನಿ ಪುನರುಚ್ಚರಿಸಿದರು.
ಪ್ರಧಾನಮಂತ್ರಿ ಅವರ ಭೇಟಿಯ ಸಂದರ್ಭದಲ್ಲಿ ಸಂಸ್ಕೃತಿ, ನವೀಕರಿಸಬಹುದಾದ ಇಂಧನ, ಜಲ ನಿರ್ವಹಣೆ, ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ ಮತ್ತು ಪೆಟ್ರಾ ಮತ್ತು ಎಲ್ಲೋರಾ ನಡುವಿನ ಅವಳಿ ಒಪ್ಪಂದ ಸೇರಿ ಹಲವು ಕ್ಷೇತ್ರಗಳಲ್ಲಿ ಎರಡೂ ಕಡೆಯವರು ಒಪ್ಪಂದಗಳನ್ನು ಅಂತಿಮಗೊಳಿಸಿದರು. ಈ ಒಪ್ಪಂದಗಳು ಭಾರತ-ಜೋರ್ಡಾನ್ ದ್ವಿಪಕ್ಷೀಯ ಸಂಬಂಧ ಮತ್ತು ಸ್ನೇಹಕ್ಕೆ ಪ್ರಮುಖ ಉತ್ತೇಜನ ನೀಡಲಿವೆ. ಮಾತುಕತೆಯ ನಂತರ ಪ್ರಧಾನಮಂತ್ರಿಯವರ ಗೌರವಾರ್ಥವಾಗಿ ಘನತೆವೆತ್ತ ದೊರೆ ಎರಡನೇ ಅಬ್ದುಲ್ಲಾ ಅವರು ಔತಣಕೂಟವನ್ನು ಆಯೋಜಿಸಿದ್ದರು. ಪ್ರಧಾನಮಂತ್ರಿಯವರು ಘನತೆವೆತ್ತರನ್ನು ಭಾರತಕ್ಕೆ ಭೇಟಿ ನೀಡುವಂತೆ ಆಹ್ವಾನಿಸಿದರು, ಅದಕ್ಕೆ ಅವರು ಸಮ್ಮತಿ ಸೂಚಿಸಿದರು. ಅದನ್ನು ಅವರು ಸ್ವೀಕರಿಸಿದರು.
*****
(रिलीज़ आईडी: 2204698)
आगंतुक पटल : 5
इस विज्ञप्ति को इन भाषाओं में पढ़ें:
English
,
Urdu
,
Marathi
,
हिन्दी
,
Bengali
,
Assamese
,
Manipuri
,
Punjabi
,
Gujarati
,
Odia
,
Telugu
,
Malayalam