ಅಣುಶಕ್ತಿ ಇಲಾಖೆ
ಪರಮಾಣು ಶಕ್ತಿ ಇಲಾಖೆಯ ವರ್ಷಾಂತ್ಯದ ಹಿನ್ನೋಟ-2025
2024-25ರ ಹಣಕಾಸು ವರ್ಷದಲ್ಲಿ ʻಎನ್‌ಪಿಸಿಐಎಲ್ʼನ ವಿದ್ಯುಚ್ಛಕ್ತಿ ಉತ್ಪಾದನೆ 56,681 ದಶಲಕ್ಷ ಯೂನಿಟ್ ದಾಟುವುದರೊಂದಿಗೆ ಭಾರತದ ಅಣು ವಿದ್ಯುತ್ ಉತ್ಪಾದನೆ ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ತಲುಪಿದೆ
ರಾಜಸ್ಥಾನದಲ್ಲಿ 4 ಘಟಕಗಳ ʻಮಾಹಿ ಬನ್ಸ್‌ವಾರಾ ಅಣು ವಿದ್ಯುತ್ ಯೋಜನೆʼಗೆ ಪ್ರಧಾನಮಂತ್ರಿ ಅವರಿಂದ ಶಂಕುಸ್ಥಾಪನೆ
ಮುಜಾಫರ್‌ಪುರದಲ್ಲಿ 150 ಹಾಸಿಗೆಗಳ ಹೋಮಿ ಭಾಭಾ ಕ್ಯಾನ್ಸರ್ ಆಸ್ಪತ್ರೆ ಉದ್ಘಾಟಿಸಿದ ಪ್ರಧಾನಮಂತ್ರಿಗಳು
ವಿರಳ ಭೂ ಪದಾರ್ಥಗಳಿಗೆ ಮೊಟ್ಟಮೊದಲ ʻಪ್ರಮಾಣೀಕೃತ ಪರಾಮರ್ಶೆ ಪದಾರ್ಥʼ (ಸರ್ಟಿಫೈಡ್ ರೆಫರೆನ್ಸ್ ಮೆಟಿರಿಯಲ್) ಬಿಡುಗಡೆ ಮಾಡಿದ ಭಾರತ
ʻರಾಜಭಾಷಾ ಕೀರ್ತಿ ಪುರಸ್ಕಾರʼಕ್ಕೆ ಭಾಜನವಾದ ಪರಮಾಣು ಶಕ್ತಿ ಇಲಾಖೆ; ಸಾಂಸ್ಥಿಕ ಉತ್ಕೃಷ್ಟತೆಗಾಗಿ ʻಸ್ಕೋಪ್ ಎಮಿನೆನ್ಸ್ ಪ್ರಶಸ್ತಿʼ ಪಡೆದ ʻಇಸಿಐಎಲ್ʼ
प्रविष्टि तिथि:
10 DEC 2025 11:45AM by PIB Bengaluru
ಪರಮಾಣು ಶಕ್ತಿ ಇಲಾಖೆಯು(ಡಿಎಇ) ಆರೋಗ್ಯ ರಕ್ಷಣೆ, ಆಹಾರ ಭದ್ರತೆ, ನೀರು ಮತ್ತು ತ್ಯಾಜ್ಯ ನಿರ್ವಹಣೆ ಕ್ಷೇತ್ರಗಳಲ್ಲಿನ ಸಾಮಾಜಿಕ ಸಮಸ್ಯೆಗಳನ್ನು ಪರಿಹರಿಸಲು ವಿಕಿರಣ ತಂತ್ರಜ್ಞಾನದ ಪರಿಹಾರಗಳನ್ನು ಅನ್ವಯಿಕೆಯನ್ನು ಮುಂದುವರಿಸಿದೆ. ಅಣು ವಿದ್ಯುತ್ ಉತ್ಪಾದನೆ, ಅಣು ವಿದ್ಯುತ್ ಸಾಮರ್ಥ್ಯವೃದ್ಧಿ, ರೇಡಿಯೋ-ಐಸೋಟೋಪ್ ಮತ್ತು ರೇಡಿಯೋ-ಫಾರ್ಮಾಸ್ಯುಟಿಕಲ್ ಉತ್ಪಾದನೆಗಾಗಿ ಸಂಶೋಧನಾ ರಿಯಾಕ್ಟರ್‌ಗಳು ಮತ್ತು ಕಣ ವೇಗವರ್ಧಕಗಳ ರಚನೆ ಹಾಗೂ ಕಾರ್ಯಾಚರಣೆಯ ಮೂಲಕ ಇಲಾಖೆ ಈ ನಿಟ್ಟಿನಲ್ಲಿ ಪ್ರಯತ್ನಗಳನ್ನು ಮುಂದುವರಿಸಿದೆ. ಜೊತೆಗೆ, ಇಲಾಖೆಯು ರಾಷ್ಟ್ರೀಯ ಭದ್ರತೆಗೂ ಕೊಡುಗೆ ನೀಡುತ್ತದೆ.

- ಗೌರವಾನ್ವಿತ ಪ್ರಧಾನ ಮಂತ್ರಿಯವರು 2025ರ ಸೆಪ್ಟೆಂಬರ್ 25ರಂದು ರಾಜಸ್ಥಾನದಲ್ಲಿ 4 ಘಟಕಗಳ ʻಮಾಹಿ ಬನ್ಸ್‌ವಾರಾ ಅಣು ವಿದ್ಯುತ್ ಸ್ಥಾವರʼಕ್ಕೆ ಶಂಕುಸ್ಥಾಪನೆ ನೆರವೇರಿಸಿದರು; ʻರಾಷ್ಟ್ರೀಯ ಪರಮಾಣು ವಿದ್ಯುತ್ʼ(ಎನ್‌ಪಿಸಿಐಎಲ್) ಮತ್ತು ರಾಷ್ಟ್ರೀಯ ಉಷ್ಣ ವಿದ್ಯುತ್ ಕಾರ್ಪೊರೇಷನ್(ಎನ್‌ಟಿಪಿಸಿ) ಜಂಟಿಯಾಗಿ ʻಅಶ್ವಿನಿʼ ಹೆಸರಿನಲ್ಲಿ ಇದನ್ನು ಅಭಿವೃದ್ಧಿಪಡಿಸಲಿವೆ.
- ರಾಜಸ್ಥಾನದ ಘಟಕ 7 (ಆರ್‌ಎಪಿಪಿ -7), ʻಉತ್ತರದ ಗ್ರಿಡ್ʼಗೆ ಸಂಪರ್ಕ ಹೊಂದಿದೆ ಮತ್ತು ವಾಣಿಜ್ಯ ಕಾರ್ಯಾಚರಣೆಯನ್ನು ಪ್ರಾರಂಭಿಸಿದೆ.
- ʻಎನ್‌ಪಿಸಿಐಎಲ್ʼ ತನ್ನ ಸಂಪೂರ್ಣ ಕಾರ್ಯಾಚರಣೆಯ ಇತಿಹಾಸದಲ್ಲಿ ಮೊದಲ ಬಾರಿಗೆ ಒಂದು ಹಣಕಾಸು ವರ್ಷದಲ್ಲಿ 50 ಶತಕೋಟಿ ಯೂನಿಟ್ (ಬಿಯು) ಉತ್ಪಾದನೆಯ ಮೈಲುಗಲ್ಲನ್ನು ದಾಟಿದೆ.
- ʻಪರಮಾಣು ಶಕ್ತಿ ಆಯೋಗʼವು(ಎಇಸಿ) 700 ಮೆಗಾವ್ಯಾಟ್ ಸಾಮರ್ಥ್ಯದ ʻಒತ್ತಡೀಕೃತ ಭಾರಿ ಜಲ ರಿಯಾಕ್ಟರ್ʼಗಳ (MWe PHWRs) ಹೆಚ್ಚುವರಿ 10 ಘಟಕಗಳ ಸ್ಥಾಪನೆ ಸಂಬಂಧ ಯೋಜನಾ ಪೂರ್ವ ಚಟುವಟಿಕೆಗಳಿಗೆ ಅನುಮೋದನೆ ನೀಡಿದೆ. ಇದು 2032ರ ವೇಳೆಗೆ ಯೋಜಿಸಲಾದ 22.5 ಗಿಗಾವ್ಯಾಟ್ ಸಾಮರ್ಥ್ಯಕ್ಕಿಂತ ಹೆಚ್ಚಾಗಿದೆ.
- ಬಿಹಾರದ ಮುಜಾಫರ್‌ಪುರದಲ್ಲಿ 150 ಹಾಸಿಗೆಗಳ ʻಹೋಮಿ ಭಾಭಾ ಕ್ಯಾನ್ಸರ್ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರʼವನ್ನು ಭಾರತದ ಗೌರವಾನ್ವಿತ ಪ್ರಧಾನ ಮಂತ್ರಿಯವರು ಉದ್ಘಾಟಿಸಿದರು.
- ʻಟಾಟಾ ಮೆಮೋರಿಯಲ್ ಆಸ್ಪತ್ರೆʼಯನ್ನು "ರೇಸ್ ಆಫ್ ಹೋಪ್" ಆಂಕರ್ ಸೆಂಟರ್ ಎಂದು ʻಅಂತಾರಾಷ್ಟ್ರೀಯ ಪರಮಾಣು ಶಕ್ತಿ ಸಂಸ್ಥೆʼಯು(ಐಎಇಎ) ಗುರುತಿಸಿದೆ.
- ʻಕೃಷಿ ವಿಕಿರಣ ಸಂಸ್ಕರಣಾ ಘಟಕʼವು (ಎಆರ್‌ಪಿಎಫ್) ಎಲೆಕ್ಟ್ರಾನ್ ಕಿರಣ ಕ್ರಿಮಿನಾಶಕಕ್ಕಾಗಿ ದೇಶೀಯವಾಗಿ ಅಭಿವೃದ್ಧಿಪಡಿಸಿದ 10 ಎಂಇವಿ, 6 ಕಿಲೋವ್ಯಾಟ್ ಲಿನಾಕ್ ಅನ್ನು ಬಳಸಿಕೊಂಡು ಒಂದು ಕೋಟಿ (10 ದಶಲಕ್ಷ) ವೈದ್ಯಕೀಯ ಸಾಧನಗಳ ಕ್ರಿಮಿನಾಶಕದ ಹೆಗ್ಗುರುತನ್ನು ದಾಟಿದೆ.
- ದೇಶೀಯವಾಗಿ ಅಭಿವೃದ್ಧಿಪಡಿಸಿದ 'ಫೆರೋಕಾರ್ಬೊನಾಟೈಟ್ (ಎಫ್‌ಸಿ)- (ಬಿಎಆರ್‌ಸಿಬಿ 1401) ಎಂಬ ಹೆಸರಿನ ʻಪ್ರಮಾಣೀಕೃತ ಪರಾಮರ್ಶೆ ಪದಾರ್ಥʼವನ್ನು (ಸಿಆರ್‌ಎಂ) ಔಪಚಾರಿಕವಾಗಿ ಬಿಡುಗಡೆ ಮಾಡಲಾಗಿದೆ, ಇದು ಭಾರತದಲ್ಲಿ ಮೊದಲ ಮತ್ತು ವಿಶ್ವದಲ್ಲಿ ನಾಲ್ಕನೆಯದು; ವಿರಳ ಭೂ ಪದಾರ್ಥಗಳ ಅದಿರು ಗಣಿಗಾರಿಕೆಗೆ ಇದು ಅತ್ಯಂತ ಮಹತ್ವದ್ದಾಗಿದೆ.
- ಪರಮಾಣು ಶಕ್ತಿಇಲಾಖೆಯು ತನ್ನ ಮೊದಲ ಎಲೆಕ್ಟ್ರಾನಿಕ್ಸ್-ದರ್ಜೆಯ (99.8% ಶುದ್ಧತೆ) ʻಬೋರಾನ್ -11ʼ ಪುಷ್ಟೀಕರಣ ಘಟಕವನ್ನು ತಾಲ್‌ಚೇರ್‌ನಲ್ಲಿ ಸ್ಥಾಪಿಸಿದೆ, ಇದು ಅರೆವಾಹಕ ಅನ್ವಯಿಕೆಗಳಿಗೆ ಸೂಕ್ತವಾಗಿದೆ.
- ಪರಮಾಣು ಶಕ್ತಿ ಇಲಾಖೆಯು 2025ರ ಆಗಸ್ಟ್‌ನಲ್ಲಿ ʻಖಗೋಳವಿಜ್ಞಾನ ಮತ್ತು ಖಗೋಳ ಭೌತಶಾಸ್ತ್ರದ 18ನೇ ಅಂತರರಾಷ್ಟ್ರೀಯ ಒಲಿಂಪಿಯಾಡ್ʼ(ಐಒಎಎ-2025) ಅನ್ನು ಆಯೋಜಿಸಿತ್ತು, ಇದರಲ್ಲಿ 64 ದೇಶಗಳ 300ಕ್ಕೂ ಹೆಚ್ಚು ವಿದ್ಯಾರ್ಥಿಗಳು ಮತ್ತು 140 ಸದಸ್ಯರು ಭಾಗವಹಿಸಿದ್ದರು.
ಈ ವರ್ಷ ಪರಮಾಣು ಶಕ್ತಿ ಇಲಾಖೆಯ ಸಾಧನೆಗಳು ಹಲವಾರು ಇದ್ದು, ಅವು ವೈವಿಧ್ಯಮಯವೂ ಆಗಿವೆ. ಅಂತಹ ಗಮನಾರ್ಹ ಸಾಧನೆಗಳ ಆಯ್ಕೆಯನ್ನು ಕೆಳಗೆ ನೀಡಲಾಗಿದೆ:
ಭಾರತೀಯ ಪರಮಾಣು ವಿದ್ಯುತ್ ಕಾರ್ಯಕ್ರಮದ ಸಾಧನೆಗಳು:
- ಗೌರವಾನ್ವಿತ ಪ್ರಧಾನಮಂತ್ರಿಯವರು 2025ರ ಸೆಪ್ಟೆಂಬರ್ 25 ರಂದು ರಾಜಸ್ಥಾನದಲ್ಲಿ 4-ಘಟಕಗಳ ʻಮಾಹಿ ಬನ್ಸ್‌ವಾರಾ ಅಣು ವಿದ್ಯುತ್ ಸ್ಥಾವರʼಕ್ಕೆ ಶಂಕುಸ್ಥಾಪನೆ ನೆರವೇರಿಸಿದ್ದಾರೆ. ಈ ಯೋಜನೆಯು 700 ಮೆಗಾವ್ಯಾಟ್ ಸಾಮರ್ಥ್ಯದ ನಾಲ್ಕು ಘಟಕಗಳನ್ನು ಹೊಂದಿರುತ್ತದೆ ಮತ್ತು ʻಅಶ್ವಿನಿʼ ಹೆಸರಿನಲ್ಲಿ ʻಎನ್‌ಪಿಸಿಐಎಲ್-ಎನ್‌ಟಿಪಿಸಿʼ ಸಂಸ್ಥೆಯಿಂದ ಜಂಟಿಯಾಗಿ ಇದನ್ನು ಅಭಿವೃದ್ಧಿಪಡಿಸಲಿವೆ.
- ಗುಜರಾತ್‌ನ ಕಾಕ್ರಾಪರ್‌ನಲ್ಲಿರುವ ದೇಶೀಯವಾಗಿ ಅಭಿವೃದ್ಧಿಪಡಿಸಲಾದ 700 ಮೆ.ವ್ಯಾ. ʻಒತ್ತಡೀಕೃತ ಭಾರಿ ಜಲ ರಿಯಾಕ್ಟರ್ʼಗಳ (MWe PHWRs) ಮೊದಲ ಎರಡು ಘಟಕಗಳು (ಕೆಎಪಿಎಸ್ - 3 ಮತ್ತು 4) ನಿಯಮಿತ ಕಾರ್ಯಾಚರಣೆಗಾಗಿ ʻಎಇಆರ್‌ಬಿʼ ಪರವಾನಗಿಯನ್ನು ಪಡೆದಿವೆ. ʻರಾವತ್‌ಭಾಟಾ ಪರಮಾಣು ವಿದ್ಯುತ್ ಯೋಜನೆʼ (ಆರ್‌ಎಪಿಪಿ) ಘಟಕ 7 ಏಪ್ರಿಲ್ 15, 2025 ರಂದು ವಾಣಿಜ್ಯ ಕಾರ್ಯಾಚರಣೆಯನ್ನು ಪ್ರಾರಂಭಿಸಿದೆ. ಇದು ಮಂಜೂರಾದ 16 ರಿಯಾಕ್ಟರ್‌ಗಳ ಸರಣಿಯಲ್ಲಿ 3ನೇ ದೇಶೀಯ 700 ಮೆಗಾವ್ಯಾಟ್ ʻಒತ್ತಡೀಕೃತ ಭಾರಿ ಜಲ ರಿಯಾಕ್ಟರ್ʼ ಆಗಿದೆ.
- ʻಎನ್‌ಪಿಸಿಐಎಲ್ʼ ತನ್ನ ಸಂಪೂರ್ಣ ಕಾರ್ಯಾಚರಣಾ ಇತಿಹಾಸದಲ್ಲಿ ಅತ್ಯಧಿಕ ಉತ್ಪಾದನೆಯನ್ನು ಸಾಧಿಸಿದೆ. 2024-25ರ ಹಣಕಾಸು ವರ್ಷದಲ್ಲಿ 56,681 ದಶಲಕ್ಷ ಯೂನಿಟ್ ವಿದ್ಯುತ್ ಉತ್ಪಾದನೆ ಮೂಲಕ ಸುಮಾರು 49 ದಶಲಕ್ಷ ಟನ್ ಇಂಗಾಲದ ಡೈಆಕ್ಸೈಡ್ ಹೊರಸೂಸುವಿಕೆಯನ್ನು ತಪ್ಪಿಸಿದೆ. ಒಂದು ವರ್ಷಕ್ಕೂ ಹೆಚ್ಚು ಕಾಲ ನಿರಂತರ ಕಾರ್ಯಾಚರಣೆಯನ್ನು ಇಲ್ಲಿಯವರೆಗೆ 53 ಬಾರಿ ಸಾಧಿಸಲಾಗಿದೆ. ʻಟಿಎಪಿಎಸ್-3ʼ ಘಟಕವು 521 ದಿನಗಳ ತನ್ನ ಹಿಂದಿನ ದಾಖಲೆಯನ್ನು ಮೀರಿದೆ ಮತ್ತು ʻಕೆಕೆಎನ್‌ಪಿಪಿ-2ʼ ಒಂದು ವರ್ಷಕ್ಕೂ ಹೆಚ್ಚು ಕಾಲದಿಂದ ಕಾರ್ಯನಿರ್ವಹಿಸುತ್ತಿದೆ.
ಆರೋಗ್ಯ ರಕ್ಷಣಾ ಕ್ಷೇತ್ರದಲ್ಲಿನ ಸಾಧನೆಗಳು:
- ಪರಮಾಣು ಶಕ್ತಿ ಇಲಾಖೆಯು, ಕ್ಯಾನ್ಸರ್ ಆರೈಕೆಗೆ ಸಂಬಂಧಿಸಿದ ಚಿಕಿತ್ಸೆ/ ರೋಗನಿರ್ಣಯದ ʻರೇಡಿಯೋಫಾರ್ಮಾಸ್ಯುಟಿಕಲ್ಸ್ʼ ಅನ್ನು ಸ್ಥಳೀಯವಾಗಿ ಅಭಿವೃದ್ಧಿಪಡಿಸಲು, ವಾಣಿಜ್ಯೀಕರಣಗೊಳಿಸಲು ಮತ್ತು ಪೂರೈಕೆ ಮಾಡಲು ತನ್ನ ಕೊಡುಗೆಯನ್ನು ಮುಂದುವರಿಸಿದೆ.
- ಬಿಹಾರದ ಮುಜಾಫರ್‌ಪುರದಲ್ಲಿ 150 ಹಾಸಿಗೆಗಳ ʻಹೋಮಿ ಭಾಭಾ ಕ್ಯಾನ್ಸರ್ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರʼವನ್ನು ಭಾರತದ ಗೌರವಾನ್ವಿತ ಪ್ರಧಾನ ಮಂತ್ರಿಯವರು 22.08.2025ರಂದು ಉದ್ಘಾಟಿಸಿದರು.
- 2024-25ರ ಹಣಕಾಸು ವರ್ಷದಲ್ಲಿ ʻಟಾಟಾ ಮೆಮೊರಿಯಲ್ ಸೆಂಟರ್ʼ(ಟಿಎಂಸಿ) ಒಟ್ಟು 1.3 ಲಕ್ಷ ರೋಗಿಗಳ ನೋಂದಣಿಯನ್ನು ಕಂಡಿದೆ. ವಾರಣಾಸಿ, ಸಂಗ್ರೂರ್, ಮುಲ್ಲನ್ಪುರ ಮತ್ತು ಗುವಾಹಟಿಯಲ್ಲಿ ಸುಮಾರು 5 ಲಕ್ಷ ಮಹಿಳೆಯರನ್ನು ಬಾಯಿ, ಸ್ತನ ಮತ್ತು ಗರ್ಭಕಂಠದ ಕ್ಯಾನ್ಸರ್ಗಾಗಿ ತಪಾಸಣೆ ಮಾಡಲಾಗಿದೆ.
- ಕೋಲ್ಕತ್ತಾದ 30 ʻಎಂಇವಿ ಮೆಡಿಕಲ್ ಸೈಕ್ಲೋಟ್ರಾನ್ʼ ಘಟಕವು ʻಎಫ್‌ಡಿಜಿʼ ಮತ್ತು ಇತರ ರೇಡಿಯೋಫಾರ್ಮಾಸ್ಯುಟಿಕಲ್ಗಳ ವಾಣಿಜ್ಯ ಉತ್ಪಾದನೆಯನ್ನು ಮುಂದುವರಿಸಿದೆ. ಇದೇವೇಳೆ, ಕ್ಯಾನ್ಸರ್ ರೋಗನಿರ್ಣಯಕ್ಕಾಗಿ ಆಸ್ಪತ್ರೆಗಳಿಗೆ 371 ‘ಸಿಐ’ಗೆ(Ci) ಸಮಾನ ಪ್ರಮಾಣದ ʻರೇಡಿಯೋಫಾರ್ಮಾಸ್ಯುಟಿಕಲ್ʼಗಳನ್ನು ತಲುಪಿಸಿದೆ.
- ನವೀನ ಚಿಕಿತ್ಸಕ ಪದ್ಧತಿಯಾದ ʻ177Lu-DOTA-FAPI-2286 ಥೆರಪಿʼ ಮತ್ತು ವರ್ಧಿತ ನಿಖರತೆಯೊಂದಿಗೆ ಐದು ಹೊಸ ರೋಗನಿರ್ಣಯ ಮಧ್ಯಸ್ಥಿಕೆಗಳನ್ನು ಪರಿಚಯಿಸಲಾಗಿದೆ. ಇದನ್ನು ದಿನನಿತ್ಯದ ಕ್ಲಿನಿಕಲ್ ಅಭ್ಯಾಸದಲ್ಲಿ ಒದಗಿಸಲಾಗುತ್ತಿದೆ. ಆ ಮೂಲಕ ರೋಗಿಗಳ ಆರೈಕೆಯ ವ್ಯಾಪ್ತಿಯನ್ನು ಹೆಚ್ಚಿಸಲಾಗಿದೆ. 176 ʻಎಲ್‌ಯುʼನ ಐಸೋಟೋಪಿಕ್ ಬೇರ್ಪಡಿಸುವಿಕೆ ಮತ್ತು ಪುಷ್ಟೀಕರಣದ ತಂತ್ರಜ್ಞಾನವನ್ನು ಸ್ಥಳೀಯ ವಿದ್ಯುತ್ಕಾಂತೀಯ ಐಸೋಟೋಪ್ ಬೇರ್ಪಡಿಸುವಿಕೆ ಘಟಕದಲ್ಲಿ ಯಶಸ್ವಿಯಾಗಿ ಪ್ರದರ್ಶಿಸಲಾಗಿದೆ.
- ಮಧ್ಯಪ್ರದೇಶದ ಇಂದೋರ್‌ನಲ್ಲಿರುವ ಎಲೆಕ್ಟ್ರಾನ್ ಕಿರಣ ಆಧಾರಿತ ಕ್ರಿಮಿನಾಶಕ ಸೌಲಭ್ಯವು ʻಐಎಸ್ಒʼ ಮಾನದಂಡಗಳಿಗೆ ಅನುಸಾರವಾಗಿ ವೈದ್ಯಕೀಯ ಸಾಧನ ತಯಾರಕರಿಗೆ ʻಇ-ಬೀಮ್ʼ ಕ್ರಿಮಿನಾಶಕ ಸೇವೆಗಳನ್ನು ನಿರಂತರವಾಗಿ ಒದಗಿಸುತ್ತಿದೆ. ಸೆಪ್ಟೆಂಬರ್, 2025ರಲ್ಲಿ ಈ ಘಟಕವು ಒಟ್ಟು 1.53 ಕೋಟಿ ವೈದ್ಯಕೀಯ ಸಾಧನಗಳಿಗೆ ಕ್ರಿಮಿನಾಶ ಪ್ರಕ್ರಿಯೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ. ಇಲ್ಲಿಂದ ಕ್ರಿಮಿನಾಶಕ ವೈದ್ಯಕೀಯ ಸಾಧನಗಳನ್ನು ಜರ್ಮನಿ, ಬ್ರಿಟನ್, ಸ್ಪೇನ್, ಫ್ರಾನ್ಸ್, ಬೆಲ್ಜಿಯಂ, ಇಟಲಿ, ನೆದರ್ಲ್ಯಾಂಡ್ಸ್, ಸ್ವಿಟ್ಜರ್ಲೆಂಡ್, ಆಸ್ಟ್ರಿಯಾ, ದಕ್ಷಿಣ ಆಫ್ರಿಕಾ, ಇಂಡೋನೇಷ್ಯಾ, ಪೋರ್ಚುಗಲ್, ಜೆಕ್ ಮತ್ತು ರಷ್ಯಾ ಒಕ್ಕೂಟ ಸೇರಿದಂತೆ 35ಕ್ಕೂ ಹೆಚ್ಚು ದೇಶಗಳಿಗೆ ರಫ್ತು ಮಾಡಲಾಗುತ್ತಿದೆ.
- ಆರೋಗ್ಯ ಉತ್ಪನ್ನಗಳ ಅಪಾಯಕಾರಿ ಕ್ರಿಮಿನಾಶಕಕ್ಕಾಗಿ ಆರೋಗ್ಯ ಉದ್ಯಮಕ್ಕೆ ಸೇವೆ ಸಲ್ಲಿಸಲು ʻಐಎಸ್ಒಇಎಂಡಿ-2ʼ ಎಂಬ ʻಅಧಿಕ ತೀವ್ರತೆಯ ಗಾಮಾ ಇರೇಡಿಯೇಟರ್ʼ ಅನ್ನು ʻವರ್ಗ-IIʼ ಮಾದರಿಯ ವಿನ್ಯಾಸದೊಂದಿಗೆ ಮೇ 2025ರಲ್ಲಿ ಪೂರ್ಣಗೊಳಿಸಲಾಯಿತು. ʻಐಎಸ್ಒಇಡಿ 2.0ʼ - ಇಂದು ವಿಶ್ವದ ಏಕೈಕ ಅಧಿಕ ತೀವ್ರತೆಯ ಭೂಮಿ ಆಧಾರಿತ ಸ್ಥಿರ ಗಾಮಾ ವಿಕಿರಣವಾಗಿದೆ.
ಉನ್ನತ ತಂತ್ರಜ್ಞಾನ ಕ್ಷೇತ್ರಗಳಲ್ಲಿನ ಸಾಧನೆಗಳು (ಪಾರ್ಟಿಕಲ್ ಆಕ್ಸಿಲರೇಟರ್ಗಳು, ಲೇಸರ್, ಪ್ಲಾಸ್ಮಾ, ಕ್ರಯೋಜೆನಿಕ್, ಕ್ವಾಂಟಮ್, ಬಾಹ್ಯಾಕಾಶ ಅನ್ವಯಿಕೆಗಳು, ಅಣು ಸಮ್ಮಿಳನ, ಆಂತರಿಕ ಮತ್ತು ಸೈಬರ್ ಭದ್ರತೆ)
- 'ಫೆರೋಕಾರ್ಬೊನೇಟೈಟ್ʼ(ಎಫ್‌ಸಿ)-(ಬಿಎಆರ್‌ಸಿ ಬಿ 1401) ಎಂಬ ಹೆಸರಿನ ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ ಪ್ರಮಾಣೀಕೃತ ಪರಾಮರ್ಶೆ ಪದಾರ್ಥ (ಸಿಆರ್‌ಎಂ) ಅನ್ನು ಔಪಚಾರಿಕವಾಗಿ ಬಿಡುಗಡೆ ಮಾಡಲಾಯಿತು. ಈ ʻಸಿಆರ್‌ಎಂʼ ವಿರಳ ಭೂಮಿಯ ಪದಾರ್ಥಗಳ (ಆರ್‌ಇಇ) ಅದಿರು ಗಣಿಗಾರಿಕೆ ಮತ್ತು ಸಂಬಂಧಿತ ಉತ್ಪಾದನಾ ಉದ್ಯಮಗಳಿಗೆ ಪರಿಶೋಧನೆ, ಹೊರತೆಗೆಯುವಿಕೆ ಮತ್ತು ಪ್ರಕ್ರಿಯೆ ನಿಯಂತ್ರಣದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಅಭಿವೃದ್ಧಿಪಡಿಸಿದ ʻಎಫ್ಸಿ-ಸಿಆರ್‌ಎಂʼ ಹದಿಮೂರು (13) ಅಪರೂಪದ ಭೂ ಪದಾರ್ಥಗಳನ್ನು (ಸಿಇ, ಡಿವೈ, ಇಆರ್, ಇಯು, ಜಿಡಿ, ಎಲ್ಎ, ಎನ್‌ಡಿ, ಪಿಆರ್, ಎಸ್‌ಸಿ, ಎಸ್ಎಂ, ಟಿಬಿ, ವೈ ಮತ್ತು ವೈಬಿ) ಹಾಗೂ ಆರು (06) ಪ್ರಮುಖ ಪದಾರ್ಥಗಳನ್ನು (ಎಎಲ್, ಸಿಎ, ಎಫ್ಇ, ಎಂಜಿ, ಎಂಎನ್ ಮತ್ತು ಪಿ) ಪ್ರಮಾಣೀಕರಿಸುತ್ತದೆ. ಈ ಹೆಗ್ಗುರುತಿನ ಸಾಧನೆಯು ಭಾರತದಲ್ಲಿ ಇಂತಹ ಮೊದಲ ಮತ್ತು ವಿಶ್ವದ ನಾಲ್ಕನೇ ʻಸಿಆರ್‌ಎಂʼ ಅನ್ನು ಪ್ರತಿನಿಧಿಸುತ್ತದೆ.
- ಹೆಚ್ಚಿನ ಶೇಷ ಪ್ರತಿರೋಧಕ ಅನುಪಾತ ಹೊಂದಿರುವ ʻನಿಯೋಬಿಯಂʼ ಗಟ್ಟಿಗಳು ಮತ್ತು ಹಾಳೆಗಳ ಉತ್ಪಾದನೆಯ ತಂತ್ರಜ್ಞಾನವನ್ನು ʻಎನ್ಎಫ್‌ಸಿʼ ಯಶಸ್ವಿಯಾಗಿ ಅಭಿವೃದ್ಧಿಪಡಿಸಿದೆ. ಇದು ಹಲವು ಶ್ರೇಣಿಯ ಸುಧಾರಿತ ವೇಗವರ್ಧಕ ಯೋಜನೆಗಳಿಗೆ ಅಗತ್ಯವಾದ ನಿರ್ಣಾಯಕ ಪದಾರ್ಥವಾಗಿದೆ. ಜೊತೆಗೆ, ಮಹತ್ವದ ಅನ್ವಯಿಕೆಗಳಿಗಾಗಿ ಅಪರೂಪದ ಪದಾರ್ಥಗಳ ಸಂಶೋಧನೆಯಲ್ಲಿ ಭಾರತದ ಸಾಮರ್ಥ್ಯಗಳನ್ನು ಬಲಪಡಿಸುವ ಗುರಿಯನ್ನು ಇದರ ಮುಖೇನ ಹೊಂದಲಾಗಿದೆ.
- ಆಂತರಿಕ ಭದ್ರತೆಗೆ ಸಂಬಂಧಿಸಿದಂತೆ ಹೇಳುವುದಾದರೆ, ಪ್ರಮುಖ ಸ್ಥಾವರಗಳಿಗೆ ಬಾಹ್ಯ ಬೆದರಿಕೆಗಳಿಂದ ರಕ್ಷಣೆಗಾಗಿ ರಾಸಾಯನಿಕ, ಜೈವಿಕ, ವಿಕಿರಣ ಮತ್ತು ಪರಮಾಣು (ಸಿಬಿಆರ್‌ಎನ್) ವ್ಯವಸ್ಥೆಯನ್ನು ʻಇಸಿಐಎಲ್ʼ ಯಶಸ್ವಿಯಾಗಿ ಅಭಿವೃದ್ಧಿಪಡಿಸಿದೆ, ಸಂಯೋಜಿಸಿದೆ ಮತ್ತು ಸ್ಥಾಪಿಸಿದೆ. ಅಲ್ಲದೆ, ʻಆಕಾಶ್-ಪ್ರೈಮ್ʼ ವ್ಯವಸ್ಥೆಯ ಮೊದಲ ಉತ್ಪಾದನಾ ಮಾಡ್ಯೂಲ್, ಶತ್ರುಪಡೆ ವಿಮಾನಗಳು/ ಡ್ರೋನ್‌ಳಿಂದ 360º ಬಹು ದಿಕ್ಕಿನ ದಾಳಿಗಳನ್ನು ನಡೆಸುವ ಸಾಮರ್ಥ್ಯವನ್ನು ಇದು ಹೊಂದಿದೆ.
- ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ಮತ್ತೊಂದು ಸಾಧನೆಯಾಗಿ, ʻಅಗ್ನಿʼ ಕ್ಷಿಪಣಿ ಉಡ್ಡಯನ ವ್ಯವಸ್ಥೆಗಾಗಿ ಏಕೀಕೃತ ವಿದ್ಯುತ್ ಮತ್ತು ಪೈರೋ ರಿಲೇ ಯುನಿಟ್‌ಗಳು (ಐಪಿಪಿಆರ್‌ಯು) ಮತ್ತು ಲಾಂಚರ್ ಇಂಟರ್ಫೇಸ್ ಯುನಿಟ್ (ಎಲ್ಐಯು) ಅನ್ನು ʻಇಸಿಐಎಲ್ʼ ಯಶಸ್ವಿಯಾಗಿ ಅಭಿವೃದ್ಧಿಪಡಿಸಿದೆ ಮತ್ತು ತಯಾರಿಸಿದೆ. ಅಲ್ಲದೆ, ʻಅಸ್ತ್ರʼ ಕ್ಷಿಪಣಿಯ (ವಿಎಲ್-ಎಸ್ಆರ್‌ಎಸ್ಎಎಂ) ಶಸ್ತ್ರಾಸ್ತ್ರ ನಿಯಂತ್ರಣ ವ್ಯವಸ್ಥೆಯನ್ನು (ಡಬ್ಲ್ಯುಸಿಎಸ್) ಯಶಸ್ವಿಯಾಗಿ ಪರೀಕ್ಷಿಸಲಾಗಿದೆ ಮತ್ತು ಭಾರತೀಯ ನೌಕಾಪಡೆಯ ಹಡಗಿನಲ್ಲಿ ಇತರ ಆಂತರಿಕ ವ್ಯವಸ್ಥೆಗಳೊಂದಿಗೆ ಸಂಯೋಜಿಸಲಾಗಿದೆ.
- ʻತೀರ ಆಧರಿತ ಹಡಗು ಪ್ರತಿರೋಧಕ ಕ್ಷಿಪಣಿ ವ್ಯವಸ್ಥೆʼಗಾಗಿ(ಎಸ್‌ಬಿಎಎಸ್ಎಂಎಸ್) ʻಸಿ4ಐʼ (ಕಮಾಂಡ್, ಕಂಟ್ರೋಲ್, ಕಮ್ಯುನಿಕೇಷನ್, ಕಂಪ್ಯೂಟರ್ಸ್ ಮತ್ತು ಇಂಟೆಲಿಜೆನ್ಸ್) ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲಾಗಿದ್ದು, ಇದನ್ನು ಮಿತ್ರ ದೇಶಗಳಿಗೆ ರಫ್ತು ಮಾಡಲು ʻಮೆಸರ್ಸ್ ಬ್ರಹ್ಮೋಸ್ ಏರೋಸ್ಪೇಸ್ ಪ್ರೈವೇಟ್ ಲಿಮಿಟೆಡ್ʼಗೆ ಸರಬರಾಜು ಮಾಡಲಾಗಿದೆ. ಮೊದಲ ಬಾರಿಗೆ ʻರಡಾರ್ ಅಳವಡಿಸಿದ ವಾಹನʼ ಪ್ರಯೋಗ ನಡೆಸಲಾಗಿದೆ.
- ಬಾಹ್ಯಾಕಾಶ ಯೋಜನೆಗಳಿಗೆ ʻನಿಯೋಬಿಯಂʼ ಅಗತ್ಯವನ್ನು ಪೂರೈಸುವ ನಿಟ್ಟಿನಲ್ಲಿ ಬಾಹ್ಯಾಕಾಶ ಇಲಾಖೆಯ ʻವಿಕ್ರಮ್ ಸಾರಾಭಾಯ್ ಬಾಹ್ಯಾಕಾಶ ಕೇಂದ್ರʼದ (ವಿ.ಎಸ್.ಎಸ್.ಸಿ.) ಜೊತೆಗಿನ ಒಪ್ಪಂದದ ಅಡಿಯಲ್ಲಿ ʻಎನ್ಎಫ್‌ಸಿʼ ಸ್ಥಾಪಿಸಿದ ʻನಿಯೋಬಿಯಂ ಥರ್ಮಿಟ್ ಉತ್ಪಾದನಾ ಘಟಕʼವನ್ನು (ಎನ್‌ಟಿಪಿಎಫ್) ಕಾರ್ಯಾರಂಭ ಮಾಡಲಾಗಿದೆ. ಘಟಕದಿಂದ ಮೊದಲ ಬ್ಯಾಚ್ ʻನಿಯೋಬಿಯಂ ಆಕ್ಸೈಡ್ʼ ಅನ್ನು ಯಶಸ್ವಿಯಾಗಿ ಉತ್ಪಾದಿಸಲಾಗಿದೆ ಮತ್ತು ಬಾಹ್ಯಾಕಾಶ ಇಲಾಖೆಯ ಕಾರ್ಯದರ್ಶಿ ಮತ್ತು ಬಾಹ್ಯಾಕಾಶ ಆಯೋಗದ ಅಧ್ಯಕ್ಷರಿಗೆ ಹಸ್ತಾಂತರಿಸಲಾಗಿದೆ.
ಮೂಲ ಮತ್ತು ಆಳ ಸಂಶೋಧನೆಯಲ್ಲಿನ ಸಾಧನೆಗಳು:
- ಭಾರತ ಸರ್ಕಾರದ ಘಟಕವಾದ ʻಭಾರಜಲ ಮಂಡಳಿಯುʼ ತಲ್ಚರ್‌ನಲ್ಲಿರುವ ʻಬೋರಾನ್ ಎಕ್ಸ್‌ಚೇಂಜ್ ಡಿಸ್ಟಿಲೇಶನ್ ಘಟಕʼದಲ್ಲಿ ಶೇ.99.8ಕ್ಕಿಂತ ಹೆಚ್ಚು ಶುದ್ಧತೆಯ (ಸೆಮಿಕಂಡಕ್ಟರ್ ಗ್ರೇಡ್) ʻಬೋರಾನ್-11ʼ ಅನ್ನು ಪುಷ್ಟೀಕರಿಸುವಲ್ಲಿ(ಎನ್ರಿಚ್‌ಮೆಂಟ್) ಮಹತ್ವದ ಮೈಲುಗಲ್ಲನ್ನು ಸಾಧಿಸಿದೆ. ಪುಷ್ಟೀಕರಿಸಿದ ಉತ್ಪನ್ನವನ್ನು ʻಪುಷ್ಟೀಕರಿಸಿದ ಬೋರಿಕ್ ಆಮ್ಲʼವಾಗಿ ಯಶಸ್ವಿಯಾಗಿ ಪರಿವರ್ತಿಸಲಾಗಿದ್ದು, ಮುಂದಿನ ಹಂತದಲ್ಲಿ ಪುಷ್ಟೀಕರಿಸಿದ ʻಬಿಎಫ್3ʼ ಅನಿಲವಾಗಿ ರೂಪಾಂತರಗೊಳಿಸಲಾಗಿದೆ.
- ನವಜಾತ ಶಿಶುವಿನ ತೂಕವನ್ನು ಊಹಿಸಲು ʻಗೊಂಪರ್ಟ್ಜ್ʼ(Gompertz) ಸೂತ್ರವನ್ನು ಬಳಸಿಕೊಂಡು ʻಭಾರತೀಯ ಗಣಿತಶಾಸ್ತ್ರ ಸಂಸ್ಥೆʼಯ(ಐಎಂಎಸ್‌ಸಿ) ಸಂಶೋಧಕರು ಸರಳ, ಅರ್ಥಗರ್ಭಿತ ಮತ್ತು ಹೆಚ್ಚು ನಿಖರವಾದ ಬೆಳವಣಿಗೆಯ ಮಾದರಿಯನ್ನು ಅಭಿವೃದ್ಧಿಪಡಿಸಿದ್ದಾರೆ. ಈ ಮಾದರಿಗೆ ಕನಿಷ್ಠ ಮೂರು ಸಾಮಾನ್ಯ ಅಲ್ಟ್ರಾಸೌಂಡ್ ಸ್ಕ್ಯಾನ್‌ಗಳಿಂದ ಕೇವಲ ನಾಲ್ಕು ಪ್ರಮಾಣಿತ ಭ್ರೂಣದ ಮಾಪನಗಳು ಬೇಕಾಗುತ್ತವೆ. ಈ ಪ್ರಗತಿಯು ನವಜಾತ ಶಿಶುವಿನ ತೊಡಕುಗಳು ಮತ್ತು ಹೆರಿಗೆಯ ಅಪಾಯಗಳಿಗೆ ಸಂಬಂಧಿಸಿದ ಭ್ರೂಣದ ತೂಕದ ವಿಚಲನಗಳನ್ನು ಮೊದಲೇ ಪತ್ತೆಹಚ್ಚಲು ಅನುವು ಮಾಡಿಕೊಡುತ್ತದೆ. ಆ ಮೂಲಕ ಸಮಯೋಚಿತ ವೈದ್ಯಕೀಯ ಮಧ್ಯಸ್ಥಿಕೆಗಳನ್ನು ಸಾಧ್ಯವಾಗಿಸುತ್ತದೆ.
- ʻಡಾರ್ಕ್ ಮ್ಯಾಟರ್ʼನಲ್ಲಿರುವ ಕಡಿಮೆ ದ್ರವ್ಯರಾಶಿಯ ಪ್ರದೇಶವನ್ನು ಅನ್ವೇಷಿಸಲು ʻಜಡುಗುಡ ಭೂಗತ ವಿಜ್ಞಾನ ಪ್ರಯೋಗಾಲಯʼದಲ್ಲಿ ʻಡಾರ್ಕ್ ಮ್ಯಾಟರ್ ನೇರ ಹುಡುಕಾಟ ಪ್ರಯೋಗದ ಮೊದಲ ಭಾಗವಾಗಿ ʼಇಂಡಿಯನ್ ಡಾರ್ಕ್ ಮ್ಯಾಟರ್ ಸರ್ಚ್ ಎಕ್ಸ್‌ಪರಿಮೆಂಟ್ʼ (InDEx) ಅನ್ನು ʻಸಾಹ ಪರಮಾಣು ಭೌತಶಾಸ್ತ್ರ ಸಂಸ್ಥೆಯು(ಎಸ್ಐಎನ್‌ಪಿ) ಪ್ರಾರಂಭಿಸಿದೆ.
ಕೃಷಿ ಮತ್ತು ಆಹಾರ ಸಂರಕ್ಷಣೆಗಾಗಿ ವಿಕಿರಣ ಆಧಾರಿತ ತಂತ್ರಜ್ಞಾನಗಳ ಅನ್ವಯಿಕೆಗಳಲ್ಲಿನ ಸಾಧನೆಗಳು; ಸಾಮಾಜಿಕ ಪ್ರಯೋಜನದ ಉದ್ದೇಶಕ್ಕಾಗಿ ಪರಮಾಣು ಶಕ್ತಿಯ ವಿದ್ಯುತ್-ರಹಿತ ಅನ್ವಯಿಕೆಗಳಿಂದ ತಂತ್ರಜ್ಞಾನ ವರ್ಗಾವಣೆ.
- ಬೇಗನೆ ಪಕ್ವವಾಗುವ ರೂಪಾಂತರಿತ ಬಾಳೆಹಣ್ಣಿನ ತಳಿ - ʻಟಿಬಿಎಂ-9ʼ ಅನ್ನು ತಿರುಚ್ಚಿಯ ʻರಾಷ್ಟ್ರೀಯ ಬಾಳೆಹಣ್ಣು ಸಂಶೋಧನಾ ಕೇಂದ್ರʼ(ಎನ್ಆರ್‌ಸಿಬಿ) ಸಹಯೋಗದೊಂದಿಗೆ ಅಭಿವೃದ್ಧಿಪಡಿಸಲಾಗಿದೆ. ಬೇಗನೆ ಪಕ್ವವಾಗುವ ಹಾಗೂ ಶೇ.15-20 ರಷ್ಟು ಹೆಚ್ಚಿನ ಇಳುವರಿ ಹೊಂದಿರುವ ಜೋಳದ ರೂಪಾಂತರಿತ ತಳಿ ʻಆರ್‌ಟಿಎಸ್-43ʼ ಕುರಿತು ಗೆಜೆಟ್ ಅಧಿಸೂಚನೆ ಹೊರಡಿಸಲಾಗಿದೆ. ಇದರೊಂದಿಗೆ ʻಬಿಎಆರ್‌ಸಿʼ ಬಿಡುಗಡೆ ಮಾಡಿದ ಪ್ರಭೇದಗಳ ಸಂಖ್ಯೆಯನ್ನು 72ಕ್ಕೆ ಏರಿಕೆಯಾಗಿದೆ. ಇದಲ್ಲದೆ, ಈ ಹಿಂದೆ ಬಿಡುಗಡೆಯಾದ 6 ʻಬಿಎಆರ್‌ಸಿʼ ಎಣ್ಣೆಕಾಳು ಪ್ರಭೇದಗಳನ್ನು ಕೃಷಿ ಮಾಡಲು ಈಗ ಮತ್ತಷ್ಟು ರಾಜ್ಯಗಳಿಗೆ ವಿಸ್ತರಿಸಲಾಗಿದೆ.
- ಖಾಸಗಿ ಮತ್ತು ರಾಜ್ಯ ಸರ್ಕಾರಿ ವಲಯಗಳಲ್ಲಿ ʻಗಾಮಾʼ ವಿಕಿರಣ ಸಂಸ್ಕರಣಾ ಘಟಕಗಳನ್ನು ಸ್ಥಾಪಿಸಲು 17 ಒಪ್ಪಂದಗಳಿಗೆ ಸಹಿ ಹಾಕಲಾಗಿದೆ ಮತ್ತು ಈ ಅವಧಿಯಲ್ಲಿ ಅಂತಹ 6 ಘಟಕಗಳನ್ನು ಕಾರ್ಯಾರಂಭ ಮಾಡಲಾಗಿದೆ. ಇದರೊಂದಿಗೆ ದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವ ಒಟ್ಟು ಘಟಕಗಳ ಸಂಖ್ಯೆ 40ಕ್ಕೆ ತಲುಪಿದೆ. ʻಸಿಒ-60ʼ ಮೂಲಗಳನ್ನು ಪೂರೈಸುವ ಮೂಲಕ ಮತ್ತು ಸ್ಥಾವರದ ಕಾರ್ಯಾಚರಣೆಯ ಮಾನದಂಡಗಳನ್ನು ನಿಗದಿಪಡಿಸುವ ಮೂಲಕ ʻಬಿಆರ್‌ಐಟಿʼ ಈ ಘಟಕಗಳನ್ನು ಬೆಂಬಲಿಸುತ್ತಿದೆ.
ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಾನ್ಯತೆಗಳು:
- ʻಟಿಐಎಫ್ಆರ್ʼನಿಂದ ಮಾರ್ಗದರ್ಶನ ಪಡೆದ ಭಾರತೀಯ ವಿದ್ಯಾರ್ಥಿಗಳು ಜೀವಶಾಸ್ತ್ರ, ಗಣಿತ, ಭೌತಶಾಸ್ತ್ರ, ರಸಾಯನಶಾಸ್ತ್ರ ಮತ್ತು ಖಗೋಳ ವಿಜ್ಞಾನ ಹಾಗೂ ಖಗೋಳ ಭೌತಶಾಸ್ತ್ರದಲ್ಲಿ 5 ಅಂತಾರಾಷ್ಟ್ರೀಯ ಒಲಿಂಪಿಯಾಡ್‌ಗಳಲ್ಲಿ ಅದ್ಭುತ ಪ್ರದರ್ಶನ ನೀಡಿದ್ದಾರೆ. ಅರಬ್ ಸಂಯುಕ್ತ ಸಂಸ್ಥಾನದ ದುಬೈನಲ್ಲಿ ನಡೆದ 57ನೇ ʻಅಂತಾರಾಷ್ಟ್ರೀಯ ರಸಾಯನಶಾಸ್ತ್ರ ಒಲಿಂಪಿಯಾಡ್ʼನಲ್ಲಿ(ಐಸಿಎಚ್ಒ) 2 ಚಿನ್ನ ಮತ್ತು 2 ಬೆಳ್ಳಿ ಪದಕಗಳನ್ನು ಗೆದ್ದಿದ್ದಾರೆ. ಫ್ರಾನ್ಸ್‌ನ ಪ್ಯಾರಿಸ್‌ನಲ್ಲಿ ನಡೆದ 55ನೇ ʻಅಂತರರಾಷ್ಟ್ರೀಯ ಭೌತಶಾಸ್ತ್ರ ಒಲಿಂಪಿಯಾಡ್ʼನಲ್ಲಿ (ಐಪಿಎಚ್‌ಒ) 3 ಚಿನ್ನ ಮತ್ತು 2 ಬೆಳ್ಳಿ ಪದಕಗಳು; ಫಿಲಿಪೈನ್ಸ್‌ನ ಕ್ವೆಝೋನ್‌ನಲ್ಲಿ ನಡೆದ 36ನೇ ʻಅಂತರರಾಷ್ಟ್ರೀಯ ಜೀವಶಾಸ್ತ್ರ ಒಲಿಂಪಿಯಾಡ್ʼನಲ್ಲಿ(ಐಬಿಒ) 2 ಚಿನ್ನ ಮತ್ತು 2 ಬೆಳ್ಳಿ ಪದಕಗಳು; ಆಸ್ಟ್ರೇಲಿಯಾದ ʻಸಮ್‌ಶೈನ್ ಕೋಸ್ಟ್ʼನಲ್ಲಿ ಆಯೋಜಿಸಲಾದ 66ನೇ ʻಅಂತಾರಾಷ್ಟ್ರೀಯ ಗಣಿತ ಒಲಿಂಪಿಯಾಡ್ʼನಲ್ಲಿ (ಐಎಂಒ) 3 ಚಿನ್ನ, 2 ಬೆಳ್ಳಿ ಮತ್ತು 1 ಕಂಚಿನ ಪದಕ; ಭಾರತದಲ್ಲಿ ನಡೆದ ʻಖಗೋಳವಿಜ್ಞಾನ ಮತ್ತು ಖಗೋಳ ಭೌತಶಾಸ್ತ್ರದ 18ನೇ ಅಂತರರಾಷ್ಟ್ರೀಯ ಒಲಿಂಪಿಯಾಡ್ʼನಲ್ಲಿ 4 ಚಿನ್ನ ಮತ್ತು 1 ಬೆಳ್ಳಿ ಪದಕಗಳು ಇದರಲ್ಲಿ ಸೇರಿವೆ.
- ʻಐಆರ್‌ಇಎಲ್ʼ ಮತ್ತು ʻಇಸಿಐಎಲ್ʼ ಕ್ರಮವಾಗಿ "ಸಾಂಸ್ಥಿಕ ಉತ್ಕೃಷ್ಟತೆ" ಮತ್ತು "ಇತರ ಲಾಭ ಗಳಿಸುವ / ಹೆಚ್ಚುವರಿ ಉತ್ಪಾದಿಸುವ ಪಿಎಸ್‌ಯು" ವಿಭಾಗದ ಅಡಿಯಲ್ಲಿ ಪ್ರತಿಷ್ಠಿತ 'ಸ್ಕೋಪ್ ಎಮಿನೆನ್ಸ್ ಪ್ರಶಸ್ತಿ 2022-23ʼ ಅನ್ನು ಪಡೆದಿವೆ. ಭಾರತದ ಗೌರವಾನ್ವಿತ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರು 2025ರ ಆಗಸ್ಟ್ 29ರಂದು ನವದೆಹಲಿಯ ʻವಿಜ್ಞಾನ ಭವನʼದಲ್ಲಿ ಪ್ರಶಸ್ತಿಯನ್ನು ಪ್ರದಾನ ಮಾಡಿದರು.
- ಸೆಪ್ಟೆಂಬರ್ 14ರಂದು ʻಹಿಂದಿ ದಿವಸ್ʼ ಪ್ರಯುಕ್ತ ಪರಮಾಣು ಶಕ್ತಿ ಇಲಾಖೆಗೆ ಸತತ ಎರಡನೇ ವರ್ಷ ʻರಾಜಭಾಷಾ ಕೀರ್ತಿ ಪುರಸ್ಕಾರʼ ನೀಡಲಾಗಿದೆ.
- ಮುಂಬೈನ ಅಟೋಮಿಕ್ ಎನರ್ಜಿ ಸೆಂಟ್ರಲ್ ಸ್ಕೂಲ್-2’(ಎಇಸಿಎಸ್-2) ಮುಖ್ಯೋಪಾಧ್ಯಾಯರಾದ ಶ್ರೀಮತಿ ಸೋನಿಯಾ ಕಪೂರ್ ಅವರಿಗೆ ಭಾರತದ ಗೌರವಾನ್ವಿತ ರಾಷ್ಟ್ರಪತಿಗಳು 2025ನೇ ಸಾಲಿನ ʻರಾಷ್ಟ್ರೀಯ ಶಿಕ್ಷಕರ ಪ್ರಶಸ್ತಿʼಯನ್ನು ಪ್ರದಾನ ಮಾಡಿದರು, ಇದು ನಮ್ಮ ಅಧ್ಯಾಪಕರ ಶ್ರೇಷ್ಠತೆಗೆ ಸಾಕ್ಷಿಯಾಗಿದೆ.
- 2025ನೇ ಸಾಲಿನ ʻರಾಷ್ಟ್ರೀಯ ಶಿಕ್ಷಣ ಸಂಸ್ಥೆಗಳ ಶ್ರೇಯಾಂಕ ಪಟ್ಟಿಯಲ್ಲಿʼ (ಎನ್ಐಆಎರ್‌ಎಫ್ ಶ್ರೇಯಾಂಕ-2025) ಸಂಶೋಧನಾ ಸಂಸ್ಥೆ ವಿಭಾಗದಲ್ಲಿ ʻಹೋಮಿ ಭಾಭಾ ರಾಷ್ಟ್ರೀಯ ಸಂಸ್ಥೆʼಯು(ಎಚ್‌ಬಿಎನ್ಐ) 7ನೇ ಸ್ಥಾನ ಪಡೆದಿದೆ. ವಿಶ್ವವಿದ್ಯಾಲಯ ವಿಭಾಗದಲ್ಲಿ 12ನೇ ಸ್ಥಾನದಲ್ಲಿ ಮತ್ತು ಒಟ್ಟಾರೆ ವಿಭಾಗದಲ್ಲಿ 20ನೇ ಸ್ಥಾನದಲ್ಲಿದೆ. ʻನೇಚರ್ ಇಂಡೆಕ್ಸ್ 2024-25ʼ ವರದಿಯಲ್ಲಿ ಭೌತ ವಿಜ್ಞಾನದ ಪ್ರಕಟಣೆಗಳಿಗೆ ಸಂಬಂಧಿಸಿದಂತೆ ʻಎಚ್‌ಬಿಎನ್ಐʼ ಮೊದಲ ಸ್ಥಾನದಲ್ಲಿದೆ. ಒಟ್ಟಾರೆ ಪ್ರಕಟಣೆಗಳ ವಿಭಾಗದಲ್ಲಿ ಭಾರತದ ಎಲ್ಲಾ ಸಂಸ್ಥೆಗಳ ಪೈಕಿ ಮೂರನೇ ಸ್ಥಾನವನ್ನು ಪಡೆದಿದೆ.


ಗೌರವಾನ್ವಿತ ಪ್ರಧಾನಮಂತ್ರಿ ಅವರು 2025ರ ಸೆಪ್ಟೆಂಬರ್ 25ರಂದು ರಾಜಸ್ಥಾನದಲ್ಲಿ 4 ಘಟಕಗಳ ʻಮಾಹಿ ಬನ್ಸ್‌ವಾರಾ ಅಣು ವಿದ್ಯುತ್ ಸ್ಥಾವರʼಕ್ಕೆ ಶಂಕುಸ್ಥಾಪನೆ ನೆರವೇರಿಸಿದರು.

ಬಿಹಾರದ ಮುಜಾಫರ್‌ಪುರದಲ್ಲಿರುವ ʻಹೋಮಿ ಭಾಭಾ ಕ್ಯಾನ್ಸರ್ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರʼವನ್ನು ಭಾರತದ ಗೌರವಾನ್ವಿತ ಪ್ರಧಾನ ಮಂತ್ರಿಗಳು 22.08.2025 ರಂದು ಉದ್ಘಾಟಿಸಿದರು.

ʻಇಸಿಐಎಲ್ʼ, 2022-23ನೇ ಸಾಲಿನಲ್ಲಿ "ಸಾಂಸ್ಥಿಕ ಉತ್ಕೃಷ್ಟತೆ" ವಿಭಾಗದಲ್ಲಿ ಪ್ರತಿಷ್ಠಿತ 'ಸ್ಕೋಪ್ ಎಮಿನೆನ್ಸ್ ಪ್ರಶಸ್ತಿʼಯನ್ನು ಪಡೆದಿದೆ.

ಪರಮಾಣು ಶಕ್ತಿ ಇಲಾಖೆʼಗೆ ಸತತ ಎರಡನೇ ವರ್ಷ ʻರಾಜಭಾಷಾ ಕೀರ್ತಿ ಪುರಸ್ಕಾರʼ ನೀಡಲಾಗಿದೆ.
ಮುಂಬೈನ ʻಎಇಸಿಎಸ್-2ʼ ಮುಖ್ಯೋಪಾಧ್ಯಾಯರಾದ ಶ್ರೀಮತಿ ಸೋನಿಯಾ ಕಪೂರ್ ಅವರಿಗೆ ಭಾರತದ ಗೌರವಾನ್ವಿತ ರಾಷ್ಟ್ರಪತಿ ಅವರು 2025ನೇ ಸಾಲಿನ ʻರಾಷ್ಟ್ರೀಯ ಶಿಕ್ಷಕರ ಪ್ರಶಸ್ತಿʼಯನ್ನು ಪ್ರದಾನ ಮಾಡಿದರು.
*****
(रिलीज़ आईडी: 2201479)
आगंतुक पटल : 8