ಪ್ರವಾಸೋದ್ಯಮ ಸಚಿವಾಲಯ
ವಿದೇಶಿ ಪ್ರವಾಸಿಗರ ಸುರಕ್ಷತೆ
प्रविष्टि तिथि:
08 DEC 2025 2:46PM by PIB Bengaluru
ಪ್ರವಾಸಿಗರ ಸುರಕ್ಷತೆ ಮತ್ತು ಭದ್ರತೆ ಮೂಲಭೂತವಾಗಿ ರಾಜ್ಯದ ವಿಷಯವಾಗಿದೆ. ಆದರೂ ಪ್ರವಾಸೋದ್ಯಮ ಸಚಿವಾಲಯವು ಪ್ರವಾಸಿಗರಿಗೆ ಸ್ಥಳೀಯ ಸುರಕ್ಷತಾ ವ್ಯವಸ್ಥೆಯನ್ನು ಬಲವರ್ಧನೆಗೊಳಿಸಲು ನಿರ್ದಿಷ್ಟ ಪ್ರವಾಸಿ ಪೊಲೀಸರನ್ನು ಹೊಂದಲು ಎಲ್ಲಾ ರಾಜ್ಯ ಸರ್ಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ (ಯುಟಿ) ಆಡಳಿತಗಳೊಂದಿಗೆ ನಿರಂತರವಾಗಿ ಈ ವಿಷಯದ ಬಗ್ಗೆ ಸಮಾಲೋಚನೆಗಳನ್ನು ಕೈಗೊಂಡಿದೆ. ಪ್ರವಾಸೋದ್ಯಮ ಸಚಿವಾಲಯದ ಪ್ರಯತ್ನಗಳೊಂದಿಗೆ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು ಅಂದರೆ ತೆಲಂಗಾಣ, ಆಂಧ್ರಪ್ರದೇಶ, ದೆಹಲಿ, ಗೋವಾ, ಕರ್ನಾಟಕ, ಕೇರಳ, ಮಹಾರಾಷ್ಟ್ರ, ಹಿಮಾಚಲ ಪ್ರದೇಶ, ಜಮ್ಮು ಮತ್ತು ಕಾಶ್ಮೀರ, ಮಧ್ಯಪ್ರದೇಶ, ಒಡಿಶಾ, ಪಂಜಾಬ್, ರಾಜಸ್ಥಾನ, ಸಿಕ್ಕಿಂ ಮತ್ತು ಉತ್ತರ ಪ್ರದೇಶಗಳು ಪ್ರವಾಸಿ ಪೊಲೀಸರನ್ನು ನಿಯೋಜಿಸಿವೆ.
ಕೇಂದ್ರೀಕೃತ ಸಾರ್ವಜನಿಕ ಕುಂದುಕೊರತೆ ಪರಿಹಾರ ಮತ್ತು ಮೇಲ್ವಿಚಾರಣಾ ವ್ಯವಸ್ಥೆ (ಸಿಪಿಜಿಆರ್ ಎಎಂಎಸ್) ಪೋರ್ಟಲ್ ಮೂಲಕ ಪ್ರವಾಸೋದ್ಯಮ ಸಚಿವಾಲಯವು ಸೇವಾ ವಿತರಣಾ ಕೊರತೆ, ವಂಚನೆ ಇತ್ಯಾದಿಗಳಿಗೆ ಸಂಬಂಧಿಸಿದ ದೂರುಗಳು/ಕುಂದುಕೊರತೆಗಳು/ಸಲಹೆಗಳನ್ನು ಸ್ವೀಕರಿಸುತ್ತದೆ. ಪ್ರವಾಸೋದ್ಯಮಕ್ಕೆ ಸಂಬಂಧಿಸಿದ ತಮ್ಮ ಕುಂದುಕೊರತೆಗಳನ್ನು ಸಲ್ಲಿಸಲು ಸಿಪಿಜಿಆರ್ ಎಎಂಎಸ್ ಪೋರ್ಟಲ್ ನಾಗರಿಕರಿಗೆ 24x7 ಲಭ್ಯವಿದೆ. ವಿದೇಶಿ ಪ್ರವಾಸಿಗರು ಭಾರತೀಯ ನೋಂದಾಯಿತ ಮೊಬೈಲ್ ಸಂಖ್ಯೆಯ ಮೂಲಕವೂ ಪೋರ್ಟಲ್‌ನಲ್ಲಿ ತಮ್ಮ ದೂರುಗಳು/ಕುಂದುಕೊರತೆಗಳನ್ನು ನೋಂದಾಯಿಸಬಹುದು. ಪ್ರವಾಸಿಗರ ಪ್ರಯಾಣವನ್ನು ಸುರಕ್ಷಿತ ಮತ್ತು ಸುಭದ್ರಗೊಳಿಸುವ ನಿರಂತರ ಪ್ರಯತ್ನಗಳ ಭಾಗವಾಗಿ, ಪ್ರವಾಸೋದ್ಯಮ ಸಚಿವಾಲಯವು ದೇಶೀಯ ಮತ್ತು ವಿದೇಶಿ ಪ್ರವಾಸಿಗರಿಗೆ ಭಾರತದಲ್ಲಿ ಪ್ರಯಾಣಕ್ಕೆ ಸಂಬಂಧಿಸಿದ ಮಾಹಿತಿಯ ವಿಷಯದಲ್ಲಿ ಬೆಂಬಲ ಸೇವೆ ಒದಗಿಸಲು ಮತ್ತು ಭಾರತದೊಳಗೆ ಪ್ರಯಾಣಿಸುವಾಗ ಸಂಕಷ್ಟದಲ್ಲಿರುವ ಪ್ರವಾಸಿಗರಿಗೆ ಸೂಕ್ತ ಮಾರ್ಗದರ್ಶನ ನೀಡಲು 10 ಅಂತಾರಾಷ್ಟ್ರೀಯ ಭಾಷೆಗಳು (ಜರ್ಮನ್, ಫ್ರೆಂಚ್, ಸ್ಪ್ಯಾನಿಷ್, ಇಟಾಲಿಯನ್, ಪೋರ್ಚುಗೀಸ್, ರಷ್ಯನ್, ಚೈನೀಸ್, ಜಪಾನೀಸ್, ಕೊರಿಯನ್, ಅರೇಬಿಕ್), ಹಿಂದಿ ಮತ್ತು ಇಂಗ್ಲಿಷ್ ಸೇರಿದಂತೆ 12 ಭಾಷೆಗಳಲ್ಲಿ 24x7 ಬಹುಭಾಷಾ ಪ್ರವಾಸಿ ಸಹಾಯವಾಣಿಯನ್ನು ಟೋಲ್ ಫ್ರೀ ಸಂಖ್ಯೆ 1800111363 ಅಥವಾ ಕಿರು ಕೋಡ್ 1363 ನಲ್ಲಿ ಸ್ಥಾಪಿಸಿದೆ.
ಅಲ್ಲದೆ, ಸರ್ಕಾರವು ನಿರ್ಭಯ ನಿಧಿ ಎಂಬ ಲ್ಯಾಪ್ಸ್ ಆಗದ ಆವರ್ತ ನಿಧಿಯನ್ನು ಸ್ಥಾಪಿಸಿದೆ ಎಂದು ಹೇಳಲಾಗಿದೆ, ಅದನ್ನು ಹಣಕಾಸು ಸಚಿವಾಲಯದ ಆರ್ಥಿಕ ವ್ಯವಹಾರಗಳ ಇಲಾಖೆ ನಿರ್ವಹಿಸುತ್ತದೆ ಮತ್ತು ಆ ಹಣವನ್ನು ಮಹಿಳೆಯರ ಸುರಕ್ಷತೆ ಮತ್ತು ಭದ್ರತೆ ಸುಧಾರಿಸಲು ನಿರ್ದಿಷ್ಟವಾಗಿ ರೂಪಿಸಿರುವ ಯೋಜನೆಗಳಿಗೆ ಬಳಸಿಕೊಳ್ಳಬಹುದು.
ನಿರ್ಭಯ ನಿಧಿಯ ಅಡಿಯಲ್ಲಿ 'ಮಹಿಳೆಯರಿಗೆ ಸುರಕ್ಷಿತ ಪ್ರವಾಸೋದ್ಯಮ ತಾಣಗಳು' ಪ್ರಯೋಜನಗಳನ್ನು ಪಡೆಯಲು ಪ್ರವಾಸೋದ್ಯಮ ಸಚಿವಾಲಯವು ಅಗ್ಗಾಗ್ಗೆ ಎಲ್ಲಾ ರಾಜ್ಯ ಸರ್ಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಮನವಿ ಮಾಡುತ್ತಿದೆ, ಅದನ್ನು ಮಹಿಳಾ ಪ್ರವಾಸಿಗರ ಸುರಕ್ಷತೆ ಮತ್ತು ಭದ್ರತೆ ಸುಧಾರಿಸಲು ನಿರ್ದಿಷ್ಟವಾಗಿ ರೂಪಿಸಿರುವ ಯೋಜನೆಗಳಿಗೆ ಬಳಸಿಕೊಳ್ಳಬಹುದು.
ಈ ಮಾಹಿತಿಯನ್ನು ಕೇಂದ್ರ ಪ್ರವಾಸೋದ್ಯಮ ಮತ್ತು ಸಂಸ್ಕೃತಿ ಸಚಿವರಾದ ಶ್ರೀ ಗಜೇಂದ್ರ ಸಿಂಗ್ ಶೇಖಾವತ್ ಅವರು ಲೋಕಸಭೆಗೆ ಇಂದು ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.
*****
(रिलीज़ आईडी: 2200423)
आगंतुक पटल : 2