ರೈಲ್ವೇ ಸಚಿವಾಲಯ
ವಿಮಾನಗಳ ಹಾರಾಟ ರದ್ದತಿಯಿಂದ ಉಂಟಾದ ಪ್ರಯಾಣದ ಅಡಚಣೆ ನಿವಾರಿಸಲು 37 ರೈಲುಗಳಿಗೆ 116 ಹೆಚ್ಚುವರಿ ಬೋಗಿಗಳನ್ನು ನಿಯೋಜಿಸಿದ ಭಾರತೀಯ ರೈಲ್ವೆ
प्रविष्टि तिथि:
05 DEC 2025 9:09PM by PIB Bengaluru
ವ್ಯಾಪಕವಾಗಿ ವಿಮಾನಗಳ ಹಾರಾಟ ರದ್ದುಗೊಂಡಿರುವುದರಿಂದ ಪ್ರಯಾಣಿಕರ ಬೇಡಿಕೆ ಹೆಚ್ಚಾಗಿದೆ. ಇದನ್ನು ಗಮನದಲ್ಲಿಟ್ಟುಕೊಂಡು, ಸುಗಮ ಪ್ರಯಾಣ ಮತ್ತು ಸಾಕಷ್ಟು ಆಸನಗಳ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು ಭಾರತೀಯ ರೈಲ್ವೆ ವ್ಯಾಪಕ ಕ್ರಮಗಳನ್ನು ಕೈಗೊಂಡಿದೆ. ದೇಶಾದ್ಯಂತ ಒಟ್ಟು 37 ರೈಲುಗಳಿಗೆ 116 ಹೆಚ್ಚುವರಿ ಬೋಗಿಗಳನ್ನು ಜೋಡಿಸಲಾಗಿದ್ದು, ಇವು 114ಕ್ಕೂ ಹೆಚ್ಚು ವಿಸ್ತೃತ ಸಂಚಾರಗಳನ್ನು ನಡೆಸಲಿವೆ.
ದಕ್ಷಿಣ ರೈಲ್ವೆಯು ಅತಿ ಹೆಚ್ಚು ರೈಲುಗಳ ಸಾಮರ್ಥ್ಯವನ್ನು ಹೆಚ್ಚಿಸಿದ್ದು, 18 ರೈಲುಗಳಿಗೆ ಹೆಚ್ಚುವರಿ ಬೋಗಿಗಳನ್ನು ಅಳವಡಿಸಿದೆ. ಹೆಚ್ಚಿನ ಬೇಡಿಕೆ ಇರುವ ಮಾರ್ಗಗಳಲ್ಲಿ ಹೆಚ್ಚುವರಿ ಚೇರ್ ಕಾರ್ ಮತ್ತು ಸ್ಲೀಪರ್ ಕ್ಲಾಸ್ ಬೋಗಿಗಳನ್ನು ನಿಯೋಜಿಸಲಾಗಿದೆ. 2025ರ ಡಿಸೆಂಬರ್ 6 ರಿಂದ ಜಾರಿಗೆ ಬಂದಿರುವ ಈ ಕ್ರಮಗಳು ದಕ್ಷಿಣ ವಲಯದಲ್ಲಿ ಪ್ರಯಾಣಿಕರ ಸಾಮರ್ಥ್ಯವನ್ನು ಗಣನೀಯವಾಗಿ ಹೆಚ್ಚಿಸಿವೆ.
ಉತ್ತರ ರೈಲ್ವೆ (NR) ಎಂಟು ರೈಲುಗಳಲ್ಲಿ ಹೆಚ್ಚುವರಿ ಬೋಗಿಗಳನ್ನು ಅಳವಡಿಸಿದ್ದು, ಇದರಲ್ಲಿ 3ಎಸಿ ಮತ್ತು ಚೇರ್ ಕಾರ್ ಬೋಗಿಗಳು ಸೇರಿವೆ. ಇಂದಿನಿಂದ ಜಾರಿಗೆ ಬರುವ ಈ ಕ್ರಮಗಳು ಉತ್ತರ ಭಾರತದ ಅತಿ ಹೆಚ್ಚು ಸಂಚಾರವಿರುವ ಮಾರ್ಗಗಳಲ್ಲಿ ಆಸನಗಳ ಲಭ್ಯತೆಯನ್ನು ಹೆಚ್ಚಿಸುತ್ತವೆ.
ಪಶ್ಚಿಮ ರೈಲ್ವೆ (WR) ಅತಿ ಹೆಚ್ಚು ಬೇಡಿಕೆಯಿರುವ ನಾಲ್ಕು ರೈಲುಗಳಿಗೆ 3ಎಸಿ ಮತ್ತು 2ಎಸಿ ಬೋಗಿಗಳನ್ನು ಅಳವಡಿಸುವ ಮೂಲಕ ಸಾಮರ್ಥ್ಯವನ್ನು ಹೆಚ್ಚಿಸಿದೆ. 2025ರ ಡಿಸೆಂಬರ್ 6 ರಿಂದ ಜಾರಿಗೆ ಬರುವ ಈ ಹೆಚ್ಚುವರಿ ವ್ಯವಸ್ಥೆಯು, ಪಶ್ಚಿಮ ವಲಯಗಳಿಂದ ರಾಷ್ಟ್ರ ರಾಜಧಾನಿಗೆ (ದೆಹಲಿ) ತೆರಳುವ ಪ್ರಯಾಣಿಕರ ದಟ್ಟಣೆಯನ್ನು ನಿರ್ವಹಿಸಲು ಸಹಕಾರಿಯಾಗಲಿದೆ.
ಪೂರ್ವ ಮಧ್ಯ ರೈಲ್ವೆ (ECR) ರಾಜೇಂದ್ರ ನಗರ–ನವದೆಹಲಿ (12309) ಸೇವೆಯನ್ನು ಬಲಪಡಿಸಿದ್ದು, 2025ರ ಡಿಸೆಂಬರ್ 6 ರಿಂದ 10 ರವರೆಗೆ 5 ಟ್ರಿಪ್‌ಗಳಲ್ಲಿ ಹೆಚ್ಚುವರಿ 2ಎಸಿ ಬೋಗಿಗಳನ್ನು ಅಳವಡಿಸಿದೆ. ಇದು ಬಿಹಾರ–ದೆಹಲಿ ನಡುವಿನ ಈ ಪ್ರಮುಖ ಮಾರ್ಗದಲ್ಲಿ ಹೆಚ್ಚಿನ ಸಾಮರ್ಥ್ಯವನ್ನು ಒದಗಿಸಲಿದೆ.
ಪೂರ್ವ ಕರಾವಳಿ ರೈಲ್ವೆ (ECOR) ಭುವನೇಶ್ವರ–ನವದೆಹಲಿ ಸೇವೆಗಳಿಗೆ (ರೈಲು ಸಂಖ್ಯೆಗಳು 20817/20811/20823) 5 ಟ್ರಿಪ್ ಗಳಲ್ಲಿ 2ಎಸಿ ಬೋಗಿಗಳನ್ನು ಸೇರಿಸುವ ಮೂಲಕ ಒಡಿಶಾ ಮತ್ತು ರಾಜಧಾನಿಯ ನಡುವಿನ ಸಂಪರ್ಕವನ್ನು ಸುಧಾರಿಸಿದೆ.
ಪೂರ್ವ ರೈಲ್ವೆ (ER) ಮೂರು ಪ್ರಮುಖ ರೈಲುಗಳಲ್ಲಿ ಸಾಮರ್ಥ್ಯವನ್ನು ಹೆಚ್ಚಿಸಿದ್ದು, 2025ರ ಡಿಸೆಂಬರ್ 7 ಮತ್ತು 8 ರಂದು ಆರು ಟ್ರಿಪ್ ಗಳಲ್ಲಿ ಹೆಚ್ಚುವರಿ ಸ್ಲೀಪರ್ ಕ್ಲಾಸ್ ಬೋಗಿಗಳನ್ನು ಅಳವಡಿಸಿದೆ. ಇದು ಪೂರ್ವ ಭಾಗದಲ್ಲಿ ಹೆಚ್ಚಿದ ಪ್ರಾದೇಶಿಕ ಮತ್ತು ಅಂತಾರಾಜ್ಯ ಪ್ರಯಾಣದ ಬೇಡಿಕೆಯನ್ನು ಪೂರೈಸಲಿದೆ.
ಈಶಾನ್ಯ ಗಡಿ ರೈಲ್ವೆ (NFR) ಎರಡು ಪ್ರಮುಖ ರೈಲುಗಳಿಗೆ 3ಎಸಿ ಮತ್ತು ಸ್ಲೀಪರ್ ಬೋಗಿಗಳನ್ನು ಅಳವಡಿಸಿದೆ. 2025ರ ಡಿಸೆಂಬರ್ 6 ರಿಂದ 13 ರವರೆಗೆ ತಲಾ ಎಂಟು ಟ್ರಿಪ್ ಗಳಲ್ಲಿ ಇವು ಸಂಚರಿಸಲಿದ್ದು, ಈಶಾನ್ಯ ಭಾಗದ ಪ್ರಯಾಣಿಕರಿಗೆ ಅಡೆತಡೆಯಿಲ್ಲದ ಆಸನ ವ್ಯವಸ್ಥೆಯನ್ನು ಖಚಿತಪಡಿಸುತ್ತದೆ.
ಈ ಹೆಚ್ಚುವರಿ ವ್ಯವಸ್ಥೆಗಳ ಜೊತೆಗೆ, ಪ್ರಯಾಣಿಕರಿಗೆ ಇನ್ನಷ್ಟು ಅನುಕೂಲ ಕಲ್ಪಿಸಲು ಭಾರತೀಯ ರೈಲ್ವೆ ನಾಲ್ಕು ವಿಶೇಷ ರೈಲು ಸೇವೆಗಳನ್ನು ಕೂಡ ನಡೆಸುತ್ತಿದೆ. ಗೋರಖ್ ಪುರ – ಆನಂದ್ ವಿಹಾರ್ ಟರ್ಮಿನಲ್ – ಗೋರಖ್‌ಪುರ ವಿಶೇಷ ರೈಲು (05591/05592) 2025ರ ಡಿಸೆಂಬರ್ 07 ಮತ್ತು 09 ರ ನಡುವೆ ನಾಲ್ಕು ಟ್ರಿಪ್ ಗಳನ್ನು ನಡೆಸಲಿದೆ. ನವದೆಹಲಿ – ಹುತಾತ್ಮ ಕ್ಯಾಪ್ಟನ್ ತುಷಾರ್ ಮಹಾಜನ್ – ನವದೆಹಲಿ ಮೀಸಲು ವಂದೇ ಭಾರತ್ ವಿಶೇಷ ರೈಲು (02439/02440) 2025ರ ಡಿಸೆಂಬರ್ 06 ರಂದು ಸಂಚರಿಸಲಿದ್ದು, ಜಮ್ಮು ವಲಯಕ್ಕೆ ವೇಗದ ಮತ್ತು ಆರಾಮದಾಯಕ ಸಂಪರ್ಕವನ್ನು ಒದಗಿಸಲಿದೆ.
ಪಶ್ಚಿಮ ವಲಯದ ಕಡೆಗೆ ಇರುವ ಹೆಚ್ಚಿನ ಬೇಡಿಕೆಯನ್ನು ಪೂರೈಸಲು, ನವದೆಹಲಿ – ಮುಂಬೈ ಸೆಂಟ್ರಲ್ – ನವದೆಹಲಿ ರಿಸರ್ವ್ಡ್ ಸೂಪರ್ ಫಾಸ್ಟ್ ವಿಶೇಷ ರೈಲು (04002/04001) 2025ರ ಡಿಸೆಂಬರ್ 06 ಮತ್ತು 07 ರಂದು ಸಂಚರಿಸಲಿದೆ. ಇದಲ್ಲದೆ, ಹಜರತ್ ನಿಜಾಮುದ್ದೀನ್ – ತಿರುವನಂತಪುರಂ ಸೆಂಟ್ರಲ್ ರಿಸರ್ವ್ಡ್ ಸೂಪರ್ ಫಾಸ್ಟ್ ವಿಶೇಷ ರೈಲು (04080) 2025ರ ಡಿಸೆಂಬರ್ 06 ರಂದು ಏಕಮುಖವಾಗಿ ಸಂಚರಿಸಲಿದ್ದು, ದಕ್ಷಿಣ ಭಾಗಕ್ಕೆ ದೀರ್ಘದೂರ ಸಂಪರ್ಕವನ್ನು ಒದಗಿಸಲಿದೆ.
ವಿವಿಧ ವಲಯಗಳಲ್ಲಿ ಸಾಮರ್ಥ್ಯ ಹೆಚ್ಚಳ ಮತ್ತು ವಿಶೇಷ ರೈಲುಗಳ ಕಾರ್ಯಾಚರಣೆಯನ್ನು ಒಳಗೊಂಡಿರುವ ಈ ಕ್ರಮಗಳು, ಪ್ರಯಾಣಿಕರ ಸಂಚಾರವನ್ನು ಸುಗಮಗೊಳಿಸಲು, ಸಾಕಷ್ಟು ಆಸನ ವ್ಯವಸ್ಥೆಯನ್ನು ಖಚಿತಪಡಿಸಲು ಮತ್ತು ಹೆಚ್ಚಿದ ಬೇಡಿಕೆಯ ಈ ಸಮಯದಲ್ಲಿ ಸಕಾಲಿಕ ಸಾರಿಗೆ ಆಯ್ಕೆಗಳನ್ನು ಒದಗಿಸಲು ಭಾರತೀಯ ರೈಲ್ವೆ ಹೊಂದಿರುವ ಬದ್ಧತೆಯನ್ನು ಪ್ರತಿಬಿಂಬಿಸುತ್ತವೆ.
****
(रिलीज़ आईडी: 2199689)
आगंतुक पटल : 13