ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ
azadi ka amrit mahotsav

ನಾಗರಿಕರ ಅನುಕೂಲ ಮತ್ತು ಸುರಕ್ಷತೆಗಾಗಿ ಡಿಜಿಲಾಕರ್ ನಲ್ಲಿ ಈಗ 'ಪಾಸ್ ಪೋರ್ಟ್ ಪರಿಶೀಲನಾ ದಾಖಲೆ' ಲಭ್ಯ

प्रविष्टि तिथि: 04 DEC 2025 4:19PM by PIB Bengaluru

ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಅಡಿಯಲ್ಲಿರುವ 'ರಾಷ್ಟ್ರೀಯ ಇ-ಆಡಳಿತ ವಿಭಾಗ'ವು, ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಸಹಯೋಗದೊಂದಿಗೆ ಡಿಜಿಲಾಕರ್ ಪ್ಲಾಟ್ ಫಾರ್ಮ್ ನಲ್ಲಿ 'ಪಾಸ್ ಪೋರ್ಟ್ ಪರಿಶೀಲನಾ ದಾಖಲೆ' (PVR) ಸೌಲಭ್ಯವನ್ನು ಒದಗಿಸುವ ಮೂಲಕ ನಾಗರಿಕ ಸೇವೆಗಳಲ್ಲಿ ಮಹತ್ವದ ಸುಧಾರಣೆಯನ್ನು ಘೋಷಿಸಿದೆ. ಡಿಜಿಲಾಕರ್ ಎನ್ನುವುದು ಡಿಜಿಟಲ್ ಇಂಡಿಯಾ ಕಾರ್ಯಕ್ರಮದಡಿಯಲ್ಲಿರುವ ಒಂದು ಸುರಕ್ಷಿತ ಹಾಗೂ ಕ್ಲೌಡ್ ಆಧಾರಿತ ವೇದಿಕೆಯಾಗಿದೆ. ಇದು ಡಿಜಿಟಲ್ ದಾಖಲೆಗಳು ಮತ್ತು ಪ್ರಮಾಣಪತ್ರಗಳ ವಿತರಣೆ, ಸಂಗ್ರಹಣೆ, ಹಂಚಿಕೆ ಮತ್ತು ಪರಿಶೀಲನೆಗೆ ಅನುವು ಮಾಡಿಕೊಡುತ್ತದೆ.

ನಾಗರಿಕರ ದಾಖಲೆಗಳ ನಿರ್ವಹಣೆಯನ್ನು ಸರಳಗೊಳಿಸುವ ಮೂಲಕ ಮತ್ತು ಫಿಸಿಕಲ್ ದಾಖಲೆಗಳ ಮೇಲಿನ ಅವಲಂಬನೆಯನ್ನು ತಗ್ಗಿಸುವ ಮೂಲಕ, ಡಿಜಿಟಲ್ ಇಂಡಿಯಾದ ಕನಸನ್ನು ಸಾಕಾರಗೊಳಿಸುವಲ್ಲಿ ಈ ಉಪಕ್ರಮವು ಒಂದು ಮಹತ್ವದ ಹೆಜ್ಜೆಯಾಗಿದೆ. ಈ ಹೊಸ ವ್ಯವಸ್ಥೆಯ ಸಂಯೋಜನೆಯಿಂದಾಗಿ, ಪಾಸ್ಪೋರ್ಟ್ ಪರಿಶೀಲನಾ ದಾಖಲೆಗಳನ್ನು ಈಗ ಡಿಜಿಲಾಕರ್ ನಲ್ಲಿ ಸುರಕ್ಷಿತವಾಗಿ ಪಡೆಯಬಹುದು, ಸಂಗ್ರಹಿಸಬಹುದು, ಹಂಚಿಕೊಳ್ಳಬಹುದು ಮತ್ತು ಡಿಜಿಟಲ್ ಆಗಿ ಪರಿಶೀಲಿಸಬಹುದು. ಇದು ಕಾಗದರಹಿತ, ಸಂಪರ್ಕರಹಿತ ಮತ್ತು ನಾಗರಿಕ ಸ್ನೇಹಿ ಸೇವೆಯನ್ನು ಉತ್ತೇಜಿಸುತ್ತದೆ.

ಯಶಸ್ವಿ ಪರಿಶೀಲನೆಯ ನಂತರ, ನಾಗರಿಕರು ತಮ್ಮ ಡಿಜಿಲಾಕರ್ ಖಾತೆಯ “ವಿತರಿಸಲಾದ ದಾಖಲೆಗಳು” (Issued Documents) ವಿಭಾಗದಲ್ಲಿ ತಮ್ಮ 'ಪಾಸ್ ಪೋರ್ಟ್ ಪರಿಶೀಲನಾ ದಾಖಲೆ'ಗಳನ್ನು ಪಡೆಯಬಹುದಾಗಿದೆ. ಈ ಸಂಯೋಜನೆಯು ನಾಗರಿಕರಿಗೆ ಅಧಿಕೃತ ಪರಿಶೀಲನಾ ದಾಖಲೆಗಳ ಲಭ್ಯತೆ ಮತ್ತು ಅನುಕೂಲವನ್ನು ಹೆಚ್ಚಿಸುತ್ತದೆ. ಅದೇ ಸಮಯದಲ್ಲಿ, ಡಿಜಿಲಾಕರ್ ವ್ಯವಸ್ಥೆಯೊಳಗೆ ಅವರ ದಾಖಲೆಗಳು ಸುರಕ್ಷಿತವಾಗಿ, ವಿಶ್ವಾಸಾರ್ಹವಾಗಿ ಮತ್ತು ಡಿಜಿಟಲ್ ರೂಪದಲ್ಲಿ ಪರಿಶೀಲಿಸಲು ಸಾಧ್ಯವಾಗುವಂತೆ ಇರುವುದನ್ನು ಇದು ಖಚಿತಪಡಿಸುತ್ತದೆ.

ಡಿಜಿಲಾಕರ್ ನಲ್ಲಿ PVR ಲಭ್ಯತೆಯು ನಾಗರಿಕರಿಗೆ ಈ ಕೆಳಗಿನ ನೇರ ಪ್ರಯೋಜನಗಳನ್ನು ನೀಡುತ್ತದೆ:

•    ಅನುಕೂಲ ಮತ್ತು ಯಾವಾಗ ಬೇಕಾದರೂ ಲಭ್ಯ: ಯಶಸ್ವಿ ಪರಿಶೀಲನೆಯ ನಂತರ, ನಾಗರಿಕರು ವೆಬ್ ಪೋರ್ಟಲ್ ಮತ್ತು ಮೊಬೈಲ್ ಅಪ್ಲಿಕೇಶನ್ ಮೂಲಕ ತಮ್ಮ ಡಿಜಿಲಾಕರ್ ಖಾತೆಯ “Issued Documents” ವಿಭಾಗದಿಂದ ತಮ್ಮ ಪಾಸ್ ಪೋರ್ಟ್ ಪರಿಶೀಲನಾ ದಾಖಲೆಗಳನ್ನು ಸುಲಭವಾಗಿ ಪಡೆಯಬಹುದು. ಇದರಿಂದ ಭೌತಿಕ ಪ್ರತಿಗಳನ್ನು ಸದಾ ಜೊತೆಯಲ್ಲಿಟ್ಟುಕೊಳ್ಳುವ ಅಥವಾ ಕಾಯ್ದಿಟ್ಟುಕೊಳ್ಳುವ ಅಗತ್ಯವಿರುವುದಿಲ್ಲ.

•    ತ್ವರಿತ ಪ್ರಕ್ರಿಯೆ ಮತ್ತು ಕಾಗದದ ಕೆಲಸದಲ್ಲಿ ಇಳಿಕೆ: PVRಗೆ ಡಿಜಿಟಲ್ ಪ್ರವೇಶ ಸಿಗುವುದರಿಂದ ಪ್ರಯಾಣ, ಉದ್ಯೋಗ ಮತ್ತು ಇನ್ನಿತರ ಅನುಸರಣೆಗಳಿಗೆ ಸಂಬಂಧಿಸಿದ ಪ್ರಕ್ರಿಯೆಗಳು ಸರಳವಾಗಲಿವೆ. ಇದರಿಂದ ಮ್ಯಾನುಯಲ್ ಆಗಿ ಮಾಡುವ ಕಾಗದ ಪತ್ರಗಳ ಕೆಲಸ ಕಡಿಮೆಯಾಗಿ, ನಾಗರಿಕರು ಮತ್ತು ಈ ದಾಖಲೆಗಳನ್ನು ಪರಿಶೀಲಿಸುವ ಸಂಸ್ಥೆಗಳೆರಡರ ಸಮಯವೂ ಉಳಿತಾಯವಾಗುತ್ತದೆ.

•    ಸುರಕ್ಷಿತ ಮತ್ತು ಅಧಿಕೃತ ದಾಖಲೆಗಳು : ಡಿಜಿಲಾಕರ್ ಮೂಲಕ ಲಭ್ಯವಿರುವ PVRಗಳನ್ನು ಸಂಬಂಧಿತ ಸರ್ಕಾರಿ ವ್ಯವಸ್ಥೆಗಳಿಂದ ನೇರವಾಗಿ ಡಿಜಿಟಲ್ ರೂಪದಲ್ಲಿ ನೀಡಲಾಗುತ್ತದೆ. ಇದು ಡಿಜಿಲಾಕರ್ ನ ಸುರಕ್ಷಿತ ವ್ಯವಸ್ಥೆಗೆ ಅನುಗುಣವಾಗಿ ಅಧಿಕೃತತೆ, ವಿಶ್ವಾಸಾರ್ಹತೆಯನ್ನು ಖಾತ್ರಿಪಡಿಸುತ್ತದೆ ಮತ್ತು ಇದನ್ನು ಯಾರೂ ತಿದ್ದಲು ಅಥವಾ ಬದಲಾಯಿಸಲು ಸಾಧ್ಯವಿರುವುದಿಲ್ಲ.

•    ಸುಲಭ ಡಿಜಿಟಲ್ ಹಂಚಿಕೆ ಮತ್ತು ಪರಿಶೀಲನೆ: ನಾಗರಿಕರು ತಮ್ಮ PVR ಅನ್ನು ಅಧಿಕೃತ ಸಂಸ್ಥೆಗಳೊಂದಿಗೆ ಡಿಜಿಲಾಕರ್ ಮೂಲಕವೇ ಡಿಜಿಟಲ್ ಆಗಿ ಹಂಚಿಕೊಳ್ಳಬಹುದು. ಇದು ತ್ವರಿತ ಮತ್ತು ಒಪ್ಪಿಗೆ ಆಧಾರಿತ ಪರಿಶೀಲನೆಗೆ ಅವಕಾಶ ನೀಡುತ್ತದೆ. ಇದರಿಂದ ದೃಢೀಕರಿಸಿದ ಜೆರಾಕ್ಸ್ ಪ್ರತಿಗಳನ್ನು ಅಥವಾ ಪದೇ ಪದೇ ಭೌತಿಕ ಪ್ರತಿಗಳನ್ನು ಸಲ್ಲಿಸುವ ಅಗತ್ಯವಿರುವುದಿಲ್ಲ.

•    ಕಾಗದರಹಿತ ಮತ್ತು ಪರಿಸರ ಸ್ನೇಹಿ ಆಡಳಿತಕ್ಕೆ ಬೆಂಬಲ: ಪಾಸ್ ಪೋರ್ಟ್ ಸಂಬಂಧಿತ ಪರಿಶೀಲನಾ ದಾಖಲೆಗಳನ್ನು ಸಂಪೂರ್ಣವಾಗಿ ಡಿಜಿಟಲ್ ಮಾಡುವ ಮೂಲಕ, ಈ ಉಪಕ್ರಮವು ಕಾಗದರಹಿತ ಆಡಳಿತ, ಸಂಪನ್ಮೂಲಗಳ ಉಳಿತಾಯ ಮತ್ತು ಪರಿಸರ ಸ್ನೇಹಿ ಆಡಳಿತ ನಡೆಸುವ ಸರ್ಕಾರದ ಪ್ರಯತ್ನಗಳಿಗೆ ಮತ್ತಷ್ಟು ಉತ್ತೇಜನ ನೀಡುತ್ತದೆ.

ಡಿಜಿಲಾಕರ್ ನೊಂದಿಗೆ PVR ಸಂಯೋಜನೆಯು ನಾಗರಿಕ ಸೇವೆಗಳನ್ನು ಆಧುನೀಕರಿಸುವಲ್ಲಿ ಮತ್ತು ಭಾರತದ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯವನ್ನು ಬಲಪಡಿಸುವಲ್ಲಿ ಒಂದು ನಿರ್ಣಾಯಕ ಮೈಲಿಗಲ್ಲಾಗಿದೆ. ಸುರಕ್ಷಿತ ಡಿಜಿಟಲ್ ದಾಖಲೆಗಳನ್ನು ಬಳಕೆದಾರ ಸ್ನೇಹಿ ಪ್ರವೇಶದೊಂದಿಗೆ ಸಂಯೋಜಿಸುವ ಮೂಲಕ, ಇದು 'ನಾಗರಿಕರಿಗೆ ಮೊದಲ ಆದ್ಯತೆ' ಎಂಬ ವಿಧಾನವನ್ನು ಬಲಪಡಿಸುತ್ತದೆ. ಆ ಮೂಲಕ ಸರ್ಕಾರಿ ಪ್ರಕ್ರಿಯೆಗಳಲ್ಲಿ ಪಾರದರ್ಶಕತೆ ಮತ್ತು ನಂಬಿಕೆಯನ್ನು ಹೆಚ್ಚಿಸುತ್ತದೆ.

ವಿದೇಶಾಂಗ ವ್ಯವಹಾರಗಳ ಸಚಿವಾಲಯ ಮತ್ತು ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವಾಲಯದ ಅಡಿಯಲ್ಲಿರುವ NeGD ನಡುವಿನ ಈ ಸಹಯೋಗವು, ಸುರಕ್ಷಿತ ಮತ್ತು ಪರಿಣಾಮಕಾರಿ ಸೇವೆಗಳನ್ನು ಒದಗಿಸಲು ಡಿಜಿಟಲ್ ವೇದಿಕೆಗಳನ್ನು ಬಳಸಿಕೊಳ್ಳುವ ಸರ್ಕಾರದ ಸಮಗ್ರ ವಿಧಾನವನ್ನು ಉಲ್ಲೇಖಿಸುತ್ತದೆ. ಪರಿಶೀಲನಾ ಪ್ರಕ್ರಿಯೆಯನ್ನು ಸರಳಗೊಳಿಸುವ ಮೂಲಕ, ಸೇವೆ ಒದಗಿಸುವ ಸಮಯವನ್ನು ಸುಧಾರಿಸುವ ಮೂಲಕ ಮತ್ತು ಸಾರ್ವಜನಿಕ ಹಾಗೂ ಖಾಸಗಿ ವಲಯಗಳಲ್ಲಿ ಸುರಕ್ಷಿತ ಡಿಜಿಟಲ್ ದಾಖಲೆಗಳ ಬಳಕೆಯನ್ನು ಹೆಚ್ಚಿಸುವ ಮೂಲಕ, ಈ ಕ್ರಮವು ಲಕ್ಷಾಂತರ ಪಾಸ್ ಪೋರ್ಟ್ ಅರ್ಜಿದಾರರಿಗೆ ಮತ್ತು ಪಾಸ್ ಪೋರ್ಟ್ ಹೊಂದಿರುವವರಿಗೆ ಪ್ರಯೋಜನವನ್ನು ನೀಡುವ ನಿರೀಕ್ಷೆಯಿದೆ.

 

*****


(रिलीज़ आईडी: 2198876) आगंतुक पटल : 7
इस विज्ञप्ति को इन भाषाओं में पढ़ें: English , Urdu , हिन्दी , Gujarati