56ನೇ ಐಎಫ್‌ಎಫ್‌ಐ: 'ಸಿನಿಮಾ ಎಐ ಹ್ಯಾಕಥಾನ್ 2025'ರಲ್ಲಿ ಕೃತಕ ಬುದ್ಧಿಮತ್ತೆ ಆಧಾರಿತ ಸಿನಿಮಾ ನಿರ್ಮಾಣದ ಶ್ರೇಷ್ಠತೆಗೆ ಗೌರವ
'ಸಿನಿಮಾ ಎಐ ಹ್ಯಾಕಥಾನ್ 2025': ಅತ್ಯುತ್ತಮ ಎಐ ಚಿತ್ರವಾಗಿ ಹೊರಹೊಮ್ಮಿದ 'ಮೈ ರೆಡ್ ಕ್ರಯಾನ್'
ಜಾಗತಿಕ ಪ್ರತಿಭೆಗಳನ್ನು ಸೆಳೆದ 'ಸಿನಿಮಾ ಎಐ ಹ್ಯಾಕಥಾನ್ 2025'; 48 ಗಂಟೆಗಳ ಸವಾಲಿನಲ್ಲಿ 14 ತಂಡಗಳ ಸೆಣಸಾಟ
ವೇವ್ಸ್ ಫಿಲ್ಮ್ ಬಜಾರ್ ಅಡಿಯಲ್ಲಿ ಆಯೋಜಿಸಲಾದ ‘ಸಿನಿಮಾ ಎಐ ಹ್ಯಾಕಥಾನ್ 2025’, ಚಲನಚಿತ್ರ ನಿರ್ಮಾಣ ರಂಗದಲ್ಲಿ ಕಲೆ, ತಂತ್ರಜ್ಞಾನ ಮತ್ತು ನೈತಿಕ ಮೌಲ್ಯಗಳ ಒಂದು ಅಪೂರ್ವ ಹಾಗೂ ಕ್ರಿಯಾಶೀಲ ಸಮಾಗಮವನ್ನು ಬಿಂಬಿಸುತ್ತದೆ. ಈ ವೇದಿಕೆಯು ಜಗತ್ತಿನಾದ್ಯಂತದ ಸೃಜನಶೀಲ ಪ್ರತಿಭೆಗಳಿಗೆ, ಚಿತ್ರಕಥೆ ರಚನೆ, ವಿಡಿಯೋ ಜನರೇಷನ್, ಸಂಕಲನ ಮತ್ತು ನಿರ್ಮಾಣ ಕಾರ್ಯಗಳಲ್ಲಿ 'ಕೃತಕ ಬುದ್ಧಿಮತ್ತೆ' ಆಧಾರಿತ ಪರಿಕರಗಳನ್ನು ಬಳಸಿಕೊಂಡು, ಕಥಾಹಂದರದ ಎಲ್ಲೆಗಳನ್ನು ವಿಸ್ತರಿಸಲು ಕರೆ ನೀಡುತ್ತದೆ. ತಂತ್ರಜ್ಞಾನದ ಬಳಕೆಯ ಜೊತೆಜೊತೆಗೆ, ಅಂತಿಮ ಸೃಜನಶೀಲ ಕೃತಿಯಲ್ಲಿ ಜವಾಬ್ದಾರಿ, ಪಾರದರ್ಶಕತೆ ಮತ್ತು ನೈಜತೆಯನ್ನು ಕಾಯ್ದುಕೊಳ್ಳುವುದಕ್ಕೂ ಈ ಹ್ಯಾಕಥಾನ್ ವಿಶೇಷ ಒತ್ತು ನೀಡಿದೆ.
ಸೃಜನಶೀಲ ಮತ್ತು ತಾಂತ್ರಿಕ ಆಯಾಮಗಳಲ್ಲಿನ ಶ್ರೇಷ್ಠತೆಯನ್ನು ಗುರುತಿಸಲು ಸ್ಥಾಪಿಸಲಾದ ಐದು ಪ್ರಮುಖ ವಿಭಾಗಗಳ ಪ್ರಶಸ್ತಿ ವಿಜೇತರ ವಿವರಗಳು ಈ ಕೆಳಗಿನಂತಿವೆ:
- ಅತ್ಯುತ್ತಮ ಎಐ ಚಲನಚಿತ್ರ ಪ್ರಶಸ್ತಿಯನ್ನು ಆಯುಷ್ ರಾಜ್ ನಿರ್ದೇಶನದ, ಟೀಮ್ ಕಲ್ಪಂಕ್ ಅವರ ಹಿಂದಿ ಭಾಷೆಯ ಚಿತ್ರ ‘ಮೈ ರೆಡ್ ಕ್ರಯಾನ್’ಗೆ ನೀಡಲಾಯಿತು.
- ಎಐನ ಅತ್ಯಂತ ನವೀನ ಬಳಕೆ ಪ್ರಶಸ್ತಿಯನ್ನು ಕೇಯುರ್ ಕಾಜವಾಡರ ನಿರ್ದೇಶನದ, ಟೀಮ್ ಆಟೋಮಿಸ್ಟ್ ಅವರ ಇಂಗ್ಲಿಷ್ ಭಾಷೆಯ ಚಿತ್ರ ‘ರೆಮೋರಿ’ಗೆ ನೀಡಲಾಯಿತು.
- ಅತ್ಯುತ್ತಮ ಕಥನ ಕಲೆ ಪ್ರಶಸ್ತಿಯನ್ನು ಸಮ್ರೇಶ್ ಶ್ರೀವಾಸ್ತವ್ ನಿರ್ದೇಶನದ, ಸಮ್ರೇಶ್ ಶ್ರೀವಾಸ್ತವ್ ಮತ್ತು ಯಗ್ಯಾ ಪ್ರಿಯಾ ಗೌತಮ್ ಅವರ ಹಿಂದಿ ಭಾಷೆಯ ಚಿತ್ರ ‘ಲಾಸ್ಟ್ ಆಂಡ್ ಫೌಂಡ್’ಗೆ ನೀಡಲಾಯಿತು.
- ಅತ್ಯುತ್ತಮ ದೃಶ್ಯ ಪ್ರಶಸ್ತಿಯನ್ನು ಸುಮೆಶ್ ಲಾಲ್ ನಿರ್ದೇಶನದ, ಟೀಮ್ ಇಂಡಿವುಡ್ ಮತ್ತು ವಂಡರ್ ವಾಲ್ ಮೀಡಿಯಾ ನೆಟ್ ವರ್ಕ್ ನ ಇಂಗ್ಲಿಷ್ ಭಾಷೆಯ ಚಿತ್ರ ‘ಬೀಯಿಂಗ್’ಗೆ ನೀಡಲಾಯಿತು.
- ಅತ್ಯುತ್ತಮ ಶಬ್ದ/ಸಂಗೀತ ವಿನ್ಯಾಸ ಪ್ರಶಸ್ತಿಯನ್ನು ರಾಜೇಶ್ ಭೋಸ್ಲೆ ಅವರ ಇಂಗ್ಲಿಷ್ ಭಾಷೆಯ ಚಿತ್ರ ‘ಮಾನ್ಸೂನ್ ಎಕೋ’ಗೆ ನೀಡಲಾಯಿತು.
ಈ ಹ್ಯಾಕಥಾನ್ ಅನ್ನು ಸಂಪೂರ್ಣವಾಗಿ ಆನ್ ಲೈನ್ ಮಾದರಿಯಲ್ಲಿ, ಎರಡು ಹಂತಗಳಲ್ಲಿ ಆಯೋಜಿಸಲಾಗಿತ್ತು. ಮೊದಲ ಹಂತದಲ್ಲಿ, ವೈಯಕ್ತಿಕವಾಗಿ ಅಥವಾ ತಂಡಗಳಾಗಿ (ಗರಿಷ್ಠ ಐದು ಸದಸ್ಯರು) ಸ್ಪರ್ಧಿಸಲು ಅವಕಾಶವಿತ್ತು. ಸ್ಪರ್ಧಿಗಳು ತಾವು ಈ ಹಿಂದೆ ಸಿದ್ಧಪಡಿಸಿದ, 2 ರಿಂದ 10 ನಿಮಿಷಗಳ ಅವಧಿಯ ‘ಎಐ ಆಧಾರಿತ ಚಲನಚಿತ್ರ ಕೃತಿಗಳನ್ನು’ ಸಲ್ಲಿಸಲು ಆಹ್ವಾನ ನೀಡಲಾಗಿತ್ತು.
ನವೆಂಬರ್ 1 ರಿಂದ ನವೆಂಬರ್ 12, 2025 ರವರೆಗೆ ಕೃತಿಗಳ ಸಲ್ಲಿಕೆಗೆ ಅವಕಾಶ ಕಲ್ಪಿಸಲಾಗಿತ್ತು. ಈ ಕರೆಗೆ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಒಟ್ಟು 180ಕ್ಕೂ ಹೆಚ್ಚು ಅರ್ಜಿಗಳು ಹರಿದುಬಂದವು. ಆಯ್ಕೆ ಸಮಿತಿ ನಡೆಸಿದ ಸಮಗ್ರ ಮೌಲ್ಯಮಾಪನದ ನಂತರ, ಅಂತಿಮ ಸುತ್ತಿನ ‘48 ಗಂಟೆಗಳ ಸವಾಲಿ’ಗಾಗಿ 14 ತಂಡಗಳನ್ನು ಅಂತಿಮ ಪಟ್ಟಿಗೆ ಆಯ್ಕೆ ಮಾಡಲಾಯಿತು.
ಎರಡನೇ ಹಂತದಲ್ಲಿ ಸ್ಪರ್ಧಿಗಳಿಗೆ ‘ನೆನಪುಗಳ ಮರುಕಲ್ಪನೆ’ ಎಂಬ ಥೀಮ್ ನೀಡಲಾಯಿತು. ಅತ್ಯಂತ ಆಪ್ತವಾದ ವೈಯಕ್ತಿಕ ನೆನಪೊಂದನ್ನು ಎಐ ತಂತ್ರಜ್ಞಾನದ ಮೂಲಕ ಮರುವ್ಯಾಖ್ಯಾನಿಸುವುದು ಇದರ ಪ್ರಮುಖ ಉದ್ದೇಶವಾಗಿತ್ತು. ನೈಜತೆ ಮತ್ತು ಕಲ್ಪನೆಯನ್ನು ಬೆರೆಸಿ, 60 ರಿಂದ 120 ಸೆಕೆಂಡುಗಳ ಅವಧಿಯಲ್ಲಿ ಒಂದು ಭಾವನಾತ್ಮಕ ಮತ್ತು ಸಿನಿಮೀಯ ಕಥೆಯನ್ನು ಕಟ್ಟಿಕೊಡುವುದು ಸ್ಪರ್ಧಿಗಳ ಮುಂದಿದ್ದ ಸವಾಲಾಗಿತ್ತು.
ಈ 48 ಗಂಟೆಗಳ ಅಂತಿಮ ಹಂತದ ಸ್ಪರ್ಧೆಯು, 2025ರ ನವೆಂಬರ್ 20 ರಂದು ಮಧ್ಯಾಹ್ನ 4:00 ಗಂಟೆಗೆ (IST) ಆರಂಭವಾಗಿ, ನವೆಂಬರ್ 22 ರಂದು ಮಧ್ಯಾಹ್ನ 4:00 ಗಂಟೆಗೆ ಮುಕ್ತಾಯವಾಯಿತು.
ತೀರ್ಪುಗಾರರ ಮಂಡಳಿ – ಸಿನಿಮಾ ಎಐ ಹ್ಯಾಕಥಾನ್ 2025
ಈ ಪ್ರತಿಷ್ಠಿತ ಹ್ಯಾಕಥಾನ್ ನ ತೀರ್ಪುಗಾರರ ಮಂಡಳಿಯು ಈ ಕೆಳಗಿನ ಗಣ್ಯರನ್ನು ಒಳಗೊಂಡಿತ್ತು:
ತೀರ್ಪುಗಾರರ ಮಂಡಳಿಯು ಶ್ರೀ ಶೇಖರ್ ಕಪೂರ್ — ಐಎಫ್‌ಎಫ್‌ಐ ಉತ್ಸವ ನಿರ್ದೇಶಕರು, ನಿರ್ದೇಶಕರು ಮತ್ತು ನಿರ್ಮಾಪಕರು; ಶ್ರೀ ರಾಮದಾಸ್ ನಾಯ್ಡು — ನಿರ್ಮಾಪಕರು, ನಿರ್ದೇಶಕರು; ಶ್ರೀ ಅಶ್ವಿನ್ ಕುಮಾರ್ — ನಿರ್ದೇಶಕರು, ಆನಿಮೇಟರ್; ಶ್ರೀಮತಿ ಆಶಾ ಬಾತ್ರಾ — ಚಲನಚಿತ್ರ ಇತಿಹಾಸಕಾರರು, ಇಂಡಿಯನ್ ಸಿನಿಮಾ ಹೆರಿಟೇಜ್ ಫೌಂಡೇಶನ್; ಡಾ. ಸುಜಯ್ ಸೇನ್ — ಕಾರ್ಯನಿರ್ವಾಹಕ ಉಪಾಧ್ಯಕ್ಷರು ಮತ್ತು ಜಾಗತಿಕ ಮುಖ್ಯಸ್ಥರು – ಇಂಟರಾಕ್ಟಿವ್ ಸರ್ವಿಸಸ್, LTIMindtree; ಶ್ರೀಮತಿ ನಯನಾ ರಾವತ್ — ಹಿರಿಯ ನಿರ್ದೇಶಕರು – ಡಿಸೈನ್ ಸ್ಟ್ರಾಟಜಿ ಮತ್ತು ಕ್ರಾಫ್ಟ್‌ಸ್ಟುಡಿಯೋ, ಇಂಟರಾಕ್ಟಿವ್ ಸರ್ವಿಸಸ್, LTIMindtree; ಶ್ರೀ ದಿವ್ಯೇಂದು ಹಲ್ದರ್ — ಕಾರ್ಯನಿರ್ವಾಹಕ ಉಪಾಧ್ಯಕ್ಷರು ಮತ್ತು ಮುಖ್ಯ ವ್ಯವಹಾರ ಅಧಿಕಾರಿ – ಕಮ್ಯುನಿಕೇಷನ್ಸ್, ಮೀಡಿಯಾ ಮತ್ತು ಎಂಟರ್‌ಟೈನ್‌ಮೆಂಟ್, LTIMindtree; ಮತ್ತು ಶ್ರೀಮತಿ ನೇಹಾ ಕಥೂರಿಯಾ — ಮುಖ್ಯ ಮಾರುಕಟ್ಟೆ ಅಧಿಕಾರಿ, LTIMindtree ಇವರನ್ನು ಒಳಗೊಂಡಿದೆ.
ಅತ್ಯಂತ ಕಡಿಮೆ ಅವಧಿಯಲ್ಲಿ ನಿರ್ಮಾಣವಾದರೂ, ಈ ಚಲನಚಿತ್ರಗಳಲ್ಲಿದ್ದ ಅಸಾಧಾರಣ ಗುಣಮಟ್ಟ ಮತ್ತು ಸೃಜನಶೀಲತೆಯನ್ನು ತೀರ್ಪುಗಾರರು ಮುಕ್ತಕಂಠದಿಂದ ಶ್ಲಾಘಿಸಿದರು. ಸ್ಪರ್ಧಿಗಳು ಪ್ರದರ್ಶಿಸಿದ ಮೂಲತನ, ತಾಂತ್ರಿಕ ಕೌಶಲ್ಯ ಮತ್ತು ಕಥೆಯಲ್ಲಿದ್ದ ಭಾವನಾತ್ಮಕ ಆಳವನ್ನು ಅವರು ವಿಶೇಷವಾಗಿ ಮೆಚ್ಚಿಕೊಂಡರು.
ಒಟ್ಟಾರೆಯಾಗಿ, ‘ಸಿನಿಮಾ ಎಐ ಹ್ಯಾಕಥಾನ್ 2025’ ಒಂದು ಮೈಲಿಗಲ್ಲಿನ ಉಪಕ್ರಮವಾಗಿ ಹೊರಹೊಮ್ಮಿದೆ. ಇದು ಚಲನಚಿತ್ರ ನಿರ್ಮಾಣದಲ್ಲಿ ಎಐ ತಂತ್ರಜ್ಞಾನಕ್ಕಿರುವ ಪರಿವರ್ತನಾಶೀಲ ಸಾಮರ್ಥ್ಯವನ್ನು ಜಗತ್ತಿಗೆ ತೋರಿಸಿಕೊಟ್ಟಿದ್ದಲ್ಲದೆ, ಮುಂದಿನ ತಲೆಮಾರಿನ ಕಥೆಗಾರರಿಗೆ ಹೊಸ ದಿಗಂತಗಳನ್ನು ತೆರೆದಿಟ್ಟಿದೆ.
ಐಎಫ್‌ಎಫ್‌ಐ ಬಗ್ಗೆ
1952ರಲ್ಲಿ ಆರಂಭಗೊಂಡ ಭಾರತದ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ (ಐಎಫ್‌ಎಫ್‌ಐ), ದಕ್ಷಿಣ ಏಷ್ಯಾದ ಅತ್ಯಂತ ಹಳೆಯ ಮತ್ತು ಅತಿದೊಡ್ಡ ಸಿನಿಮಾ ಹಬ್ಬವಾಗಿ ಹೊರಹೊಮ್ಮಿದೆ. ಭಾರತ ಸರ್ಕಾರದ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಅಡಿಯಲ್ಲಿರುವ ರಾಷ್ಟ್ರೀಯ ಚಲನಚಿತ್ರ ಅಭಿವೃದ್ಧಿ ನಿಗಮ ಮತ್ತು ಗೋವಾ ಸರ್ಕಾರದ ಎಂಟರ್ ಟೈನ್ ಮೆಂಟ್ ಸೊಸೈಟಿ ಆಫ್ ಗೋವಾ ಜಂಟಿಯಾಗಿ ಇದನ್ನು ಆಯೋಜಿಸುತ್ತವೆ. ಇಂದು ಐಎಫ್‌ಎಫ್‌ಐ ಜಾಗತಿಕ ಸಿನಿಮಾದ ಶಕ್ತಿ ಕೇಂದ್ರವಾಗಿ ಬೆಳೆದಿದೆ. ಇದು ಕೇವಲ ಉತ್ಸವವಲ್ಲ; ಮರುಜೀವ ಪಡೆದ ಅಂದಿನ ಶ್ರೇಷ್ಠ 'ಕ್ಲಾಸಿಕ್' ಚಿತ್ರಗಳು ಇಂದಿನ ದಿಟ್ಟ ಪ್ರಯೋಗಗಳೊಂದಿಗೆ ಮುಖಾಮುಖಿಯಾಗುವ ತಾಣ. ಸಿನಿಮಾದ ಮೇರು ದಿಗ್ಗಜರು ಮತ್ತು ನಿರ್ಭೀತಿಯಿಂದ ಹೊಸ ಕನಸು ಕಾಣುವ ನವ ಪ್ರತಿಭೆಗಳು ಒಂದೇ ವೇದಿಕೆಯನ್ನು ಹಂಚಿಕೊಳ್ಳುವ ಅಪರೂಪದ ಸಂಗಮವಿದು. ಅಂತಾರಾಷ್ಟ್ರೀಯ ಮಟ್ಟದ ಸ್ಪರ್ಧೆಗಳು, ಸಾಂಸ್ಕೃತಿಕ ಪ್ರದರ್ಶನಗಳು, ಸಿನಿಮಾ ಪಾಠ ಹೇಳುವ 'ಮಾಸ್ಟರ್ ಕ್ಲಾಸ್'ಗಳು, ದಿಗ್ಗಜರಿಗೆ ಸಲ್ಲುವ ಗೌರವಗಳು ಮತ್ತು ಹೊಸ ಆಲೋಚನೆಗಳು, ಒಪ್ಪಂದಗಳು ಹಾಗೂ ಸಹಯೋಗಗಳು ಗರಿಗೆದರುವಂತಹ ಶಕ್ತಿಯುತವಾದ 'ವೇವ್ಸ್ ಫಿಲ್ಮ್ ಬಜಾರ್' - ಇವೆಲ್ಲದರ ರೋಚಕ ಮಿಶ್ರಣವೇ ಐಎಫ್‌ಎಫ್‌ಐಯ ನಿಜವಾದ ಆಕರ್ಷಣೆಯಾಗಿದೆ. ಗೋವಾದ ಮನಮೋಹಕ ಕಡಲ ತೀರದ ಹಿನ್ನೆಲೆಯಲ್ಲಿ ನವೆಂಬರ್ 20 ರಿಂದ 28 ರವರೆಗೆ ನಡೆಯುತ್ತಿರುವ ಈ 56ನೇ ಆವೃತ್ತಿಯು ವಿವಿಧ ಭಾಷೆಗಳು, ಪ್ರಕಾರಗಳು, ಆವಿಷ್ಕಾರಗಳು ಮತ್ತು ಹೊಸ ದನಿಗಳ ಅದ್ಭುತ ಲೋಕವನ್ನೇ ತೆರೆದಿಡಲಿದೆ. ಇದು ವಿಶ್ವ ವೇದಿಕೆಯಲ್ಲಿ ಭಾರತದ ಸೃಜನಶೀಲತೆಯ ವೈಭವವನ್ನು ಸಾರುವ ಒಂದು ಮಹಾನ್ ಸಂಭ್ರಮವಾಗಿದೆ.
ಹೆಚ್ಚಿನ ಮಾಹಿತಿಗಾಗಿ, ಇಲ್ಲಿ ಕ್ಲಿಕ್ ಮಾಡಿ:
IFFI Website: https://www.iffigoa.org/
PIB’s IFFI Microsite: https://www.pib.gov.in/iffi/56/
PIB IFFIWood Broadcast Channel: https://whatsapp.com/channel/0029VaEiBaML2AU6gnzWOm3F
X Handles: @IFFIGoa, @PIB_India, @PIB_Panaji
*****
रिलीज़ आईडी:
2195205
| Visitor Counter:
25