ಐಎಫ್‌ಎಫ್‌ಐ 2025: ಎಸ್‌ಆರ್‌ಎಫ್‌ಟಿಐ ಕೋಲ್ಕತ್ತಾ, ಎಫ್‌ಟಿಐಐ ಪುಣೆ ಮತ್ತು ಎಫ್‌ಟಿಐಐ ಇಟಾನಗರ ವಿದ್ಯಾರ್ಥಿಗಳಿಗಾಗಿ 'ಮಾಸ್ಟರ್ ಕ್ಲಾಸ್ ಸರಣಿ'ಗೆ ಚಾಲನೆ
2025ರ ಐಎಫ್‌ಎಫ್‌ಐ ನಲ್ಲಿ ಪ್ರಸಿದ್ಧ ಕಾಸ್ಟಿಂಗ್ ನಿರ್ದೇಶಕ ಮುಖೇಶ್ ಛಾಬ್ರಾ ಅವರ ಅಧಿವೇಶನದೊಂದಿಗೆ ವಿಶೇಷ ಮಾಸ್ಟರ್‌ಕ್ಲಾಸ್ ಸರಣಿಯು ಪ್ರಾರಂಭವಾಯಿತು. ಕೋಲ್ಕತ್ತಾದ ಸತ್ಯಜಿತ್ ರೇ ಫಿಲ್ಮ್ & ಟೆಲಿವಿಷನ್ ಇನ್‌ಸ್ಟಿಟ್ಯೂಟ್ (ಎಸ್‌ಆರ್‌ಎಫ್‌ಟಿಐ), ಪುಣೆಯ ಫಿಲ್ಮ್ & ಟೆಲಿವಿಷನ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ (ಎಫ್‌ಟಿಐಐ) ಮತ್ತು ಇಟಾನಗರದ ಎಫ್‌ಟಿಐಐ ವಿದ್ಯಾರ್ಥಿಗಳಿಗಾಗಿ ಈ ಸರಣಿಯನ್ನು ವಿಶೇಷವಾಗಿ ರೂಪಿಸಲಾಗಿದೆ. ಈ ಮೂರು ಪ್ರತಿಷ್ಠಿತ ರಾಷ್ಟ್ರೀಯ ಚಲನಚಿತ್ರ ಸಂಸ್ಥೆಗಳ ಉದಯೋನ್ಮುಖ ವೃತ್ತಿಪರರನ್ನು ಒಂದೇ ವೇದಿಕೆಗೆ ತಂದು, ಸಹಭಾಗಿತ್ವದ ಕಲಿಕೆಯ ಅನುಭವವನ್ನು ನೀಡುವುದು ಇದರ ಮುಖ್ಯ ಉದ್ದೇಶವಾಗಿದೆ.
ಗೋವಾದ ಕಲಾ ಅಕಾಡೆಮಿಯ ಬ್ಲಾಕ್ ಬಾಕ್ಸ್ ಥಿಯೇಟರ್ ನಲ್ಲಿ "ದಿ ಪ್ರೋಸೆಸ್ ಆಫ್ ಕ್ಯಾಸ್ಟಿಂಗ್" (ಪಾತ್ರವರ್ಗ ಆಯ್ಕೆಯ ಪ್ರಕ್ರಿಯೆ) ಕುರಿತಾದ ವಿಸ್ತೃತ ಅಧಿವೇಶನದೊಂದಿಗೆ ಈ ಸರಣಿ ಪ್ರಾರಂಭವಾಯಿತು. 'ದಂಗಲ್', 'ಚಿಚ್ಚೋರೆ', 'ಗ್ಯಾಂಗ್ಸ್ ಆಫ್ ವಾಸೇಪುರ್' ಮತ್ತು 'ಬಜರಂಗಿ ಭಾಯಿಜಾನ್' ನಂತಹ ಯಶಸ್ವಿ ಚಿತ್ರಗಳ ಮೂಲಕ ಜನಪ್ರಿಯರಾಗಿರುವ ಮುಖೇಶ್ ಛಾಬ್ರಾ ಅವರು, ಕ್ಯಾಸ್ಟಿಂಗ್ ಎಂಬ ಕಲೆ ಮತ್ತು ಕೌಶಲದ ಬಗ್ಗೆ ಸಮಗ್ರ ಮಾಹಿತಿಯನ್ನು ಹಂಚಿಕೊಂಡರು. ಕ್ಯಾಸ್ಟಿಂಗ್ ಪ್ರಕ್ರಿಯೆಯು ಕೇವಲ ನಟರನ್ನು ಆಯ್ಕೆ ಮಾಡುವುದಕ್ಕಷ್ಟೇ ಸೀಮಿತವಾಗಿಲ್ಲ ಎಂದು ಅವರು ವಿವರಿಸಿದರು. ಇದು ಪಾತ್ರಗಳನ್ನು ಆಳವಾಗಿ ಅರ್ಥಮಾಡಿಕೊಳ್ಳುವುದು, ನೈಜ ಪ್ರತಿಭೆಯನ್ನು ಗುರುತಿಸುವುದು ಮತ್ತು ಚಿತ್ರದ ಭಾವನಾತ್ಮಕ ತಿರುಳನ್ನು ಬಲಪಡಿಸುವಂತಹ ಅಭಿನಯವನ್ನು ರೂಪಿಸುವುದನ್ನು ಒಳಗೊಂಡಿರುತ್ತದೆ ಎಂದು ತಿಳಿಸಿದರು.
ನಿರ್ದೇಶಕರ ದೃಷ್ಟಿಕೋನ ಮತ್ತು ನಟರ ಅಭಿವ್ಯಕ್ತಿಯ ನಡುವೆ ಸೇತುವೆಯಾಗಿ ಕ್ಯಾಸ್ಟಿಂಗ್ ಪ್ರಕ್ರಿಯೆ ಹೇಗೆ ಕೆಲಸ ಮಾಡುತ್ತದೆ ಎಂಬುದನ್ನು ಅವರು ಒತ್ತಿ ಹೇಳಿದರು. ಇದೇ ವೇಳೆ, ಕಲಾವಿದರನ್ನು ಅನ್ವೇಷಿಸುವಲ್ಲಿ ಅಂತಃಪ್ರಜ್ಞೆ , ಸೂಕ್ಷ್ಮ ಅವಲೋಕನ ಮತ್ತು ಸಂವೇದನೆಯ ಮಹತ್ವವನ್ನು ಅವರು ಎತ್ತಿ ತೋರಿಸಿದರು.

ವಿದ್ಯಾರ್ಥಿಗಳು ಈ ಅಧಿವೇಶನದಲ್ಲಿ ಅತ್ಯಂತ ಸಕ್ರಿಯವಾಗಿ ಪಾಲ್ಗೊಂಡರು. ಅವರು ಚಿತ್ರರಂಗದ ಪದ್ಧತಿಗಳು, ಪಾತ್ರಗಳ ವಿಶ್ಲೇಷಣೆ ಮತ್ತು ಆಡಿಷನ್ ಪ್ರಕ್ರಿಯೆಗಳ ಕುರಿತು ಮಾರ್ಗದರ್ಶನವನ್ನು ಕೋರಿದರು. ಸಿನಿಮಾವನ್ನು ಪ್ರಾಮಾಣಿಕತೆ, ಶಿಸ್ತು ಮತ್ತು ಕುತೂಹಲದಿಂದ ಕಾಣುವಂತೆ ಛಾಬ್ರಾ ವಿದ್ಯಾರ್ಥಿಗಳನ್ನು ಹುರಿದುಂಬಿಸಿದರು. ಪಾತ್ರವು ಚಿಕ್ಕದಾಗಿರಲಿ ಅಥವಾ ದೊಡ್ಡದಾಗಿರಲಿ, ಪ್ರತಿಯೊಂದು ಪಾತ್ರವೂ ಚಿತ್ರದ ಒಟ್ಟಾರೆ ಕಥಾಹಂದರಕ್ಕೆ ಮಹತ್ವದ ಕೊಡುಗೆ ನೀಡುತ್ತದೆ ಎಂದು ಅವರು ನೆನಪಿಸಿದರು. ಇದೇ ವೇಳೆ, ಉದಯೋನ್ಮುಖ ನಟರು ಮತ್ತು ಚಲನಚಿತ್ರ ನಿರ್ಮಾತೃಗಳಿಗೆ ವೃತ್ತಿ ಮಾರ್ಗದರ್ಶನ ಹಾಗೂ ಪ್ರಾಯೋಗಿಕ ಸಲಹೆಗಳನ್ನು ನೀಡುವುದರ ಜೊತೆಗೆ, ಕ್ಯಾಸ್ಟಿಂಗ್ ಪ್ರಕ್ರಿಯೆಯ ಬಗೆಗಿನ ತಮ್ಮ ಆಳವಾದ ಒಳನೋಟಗಳನ್ನು ಅವರು ಹಂಚಿಕೊಂಡರು.

ಈ ಅಧಿವೇಶನವು ಮಾಸ್ಟರ್ ಕ್ಲಾಸ್ ಸರಣಿಗೆ ರಚನಾತ್ಮಕ ಮತ್ತು ಸ್ಫೂರ್ತಿದಾಯಕ ಅಡಿಪಾಯವನ್ನು ಹಾಕಿಕೊಟ್ಟಿತು. ಈ ಸರಣಿಯು 2025ರ ನವೆಂಬರ್ 27ರವರೆಗೆ ಮುಂದುವರಿಯಲಿದೆ. ಮುಂದಿನ ಕೆಲವು ದಿನಗಳಲ್ಲಿ, ನಿರ್ದೇಶನ, ಚಿತ್ರಕಥೆ ರಚನೆ, ಛಾಯಾಗ್ರಹಣ, ಶಬ್ದ ವಿನ್ಯಾಸ (Sound Design) ಮತ್ತು ನಿರ್ಮಾಣ ಸೇರಿದಂತೆ ವಿವಿಧ ಕ್ಷೇತ್ರಗಳ ಪರಿಣತರು ಸಂವಾದಾತ್ಮಕ ಗೋಷ್ಠಿಗಳನ್ನು ನಡೆಸಿಕೊಡಲಿದ್ದಾರೆ. ವಿದ್ಯಾರ್ಥಿಗಳಲ್ಲಿ ವೃತ್ತಿಪರ ಕೌಶಲಗಳು ಮತ್ತು ಸೃಜನಶೀಲ ಆತ್ಮವಿಶ್ವಾಸವನ್ನು ಹೆಚ್ಚಿಸುವುದು ಈ ಗೋಷ್ಠಿಗಳ ಮುಖ್ಯ ಉದ್ದೇಶವಾಗಿದೆ. ಉದಯೋನ್ಮುಖ ಪ್ರತಿಭೆಗಳನ್ನು ಪೋಷಿಸುವ ಹಾಗೂ ಮುಂದಿನ ತಲೆಮಾರಿನ ಚಲನಚಿತ್ರ ನಿರ್ಮಾತೃಗಳಿಗೆ ಸಹಭಾಗಿತ್ವದ ಕಲಿಕಾ ವೇದಿಕೆಗಳನ್ನು ಒದಗಿಸುವ ಐಎಫ್‌ಎಫ್‌ಐಯ ನಿರಂತರ ಬದ್ಧತೆಯನ್ನು ಈ ಉಪಕ್ರಮವು ಪ್ರತಿಬಿಂಬಿಸುತ್ತದೆ.
ಐಎಫ್‌ಎಫ್‌ಐ ಬಗ್ಗೆ
1952ರಲ್ಲಿ ಆರಂಭಗೊಂಡ ಭಾರತದ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ (ಐಎಫ್‌ಎಫ್‌ಐ), ದಕ್ಷಿಣ ಏಷ್ಯಾದ ಅತ್ಯಂತ ಹಳೆಯ ಮತ್ತು ಅತಿದೊಡ್ಡ ಸಿನಿಮಾ ಹಬ್ಬವಾಗಿ ಹೊರಹೊಮ್ಮಿದೆ. ಭಾರತ ಸರ್ಕಾರದ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಅಡಿಯಲ್ಲಿರುವ ರಾಷ್ಟ್ರೀಯ ಚಲನಚಿತ್ರ ಅಭಿವೃದ್ಧಿ ನಿಗಮ ಮತ್ತು ಗೋವಾ ಸರ್ಕಾರದ ಎಂಟರ್ ಟೈನ್ ಮೆಂಟ್ ಸೊಸೈಟಿ ಆಫ್ ಗೋವಾ (ESG) ಜಂಟಿಯಾಗಿ ಇದನ್ನು ಆಯೋಜಿಸುತ್ತವೆ. ಇಂದು ಐಎಫ್‌ಎಫ್‌ಐ ಜಾಗತಿಕ ಸಿನಿಮಾದ ಶಕ್ತಿ ಕೇಂದ್ರವಾಗಿ ಬೆಳೆದಿದೆ. ಇಲ್ಲಿ ಮರುಜೀವ ಪಡೆದ ಕ್ಲಾಸಿಕ್ ಚಿತ್ರಗಳು ದಿಟ್ಟ ಪ್ರಯೋಗಗಳೊಂದಿಗೆ ಮುಖಾಮುಖಿಯಾಗುತ್ತವೆ; ಅಂತಾರಾಷ್ಟ್ರೀಯ ಸ್ಪರ್ಧೆಗಳು, ಸಾಂಸ್ಕೃತಿಕ ಪ್ರದರ್ಶನಗಳು, ಮಾಸ್ಟರ್ ಕ್ಲಾಸ್ ಗಳು, ಗೌರವಾರ್ಪಣೆಗಳು ಮತ್ತು ಹೊಸ ಆಲೋಚನೆಗಳು, ಒಪ್ಪಂದಗಳು ಹಾಗೂ ಸಹಯೋಗಗಳು ಗರಿಗೆದರುವಂತಹ ಶಕ್ತಿಯುತವಾದ 'ವೇವ್ಸ್ ಫಿಲ್ಮ್ ಬಜಾರ್' - ಇವೆಲ್ಲದರ ರೋಚಕ ಮಿಶ್ರಣವೇ ಐಎಫ್‌ಎಫ್‌ಐಯ ನಿಜವಾದ ಮೆರುಗು. ಗೋವಾದ ಸುಂದರ ಕಡಲತೀರದ ಹಿನ್ನೆಲೆಯಲ್ಲಿ, ನವೆಂಬರ್ 20 ರಿಂದ 28 ರವರೆಗೆ ನಡೆಯುತ್ತಿರುವ ಈ 56ನೇ ಆವೃತ್ತಿಯು, ವಿವಿಧ ಭಾಷೆಗಳು, ಪ್ರಕಾರಗಳು ಮತ್ತು ಆವಿಷ್ಕಾರಗಳ ಅದ್ಭುತ ಲೋಕವನ್ನು ತೆರೆದಿಡಲಿದೆ. ಇದು ವಿಶ್ವ ವೇದಿಕೆಯಲ್ಲಿ ಭಾರತದ ಸೃಜನಶೀಲ ಪ್ರತಿಭೆಯ ಅದ್ದೂರಿ ಆಚರಣೆಯಾಗಿದೆ.
ಹೆಚ್ಚಿನ ಮಾಹಿತಿಗಾಗಿ, ಇಲ್ಲಿ ಕ್ಲಿಕ್ ಮಾಡಿ:
https://www.pib.gov.in/PressReleasePage.aspx?PRID=2191742
https://www.pib.gov.in/PressReleasePage.aspx?PRID=2190381
IFFI Website: https://www.iffigoa.org/
PIB’s IFFI Microsite: https://www.pib.gov.in/iffi/56new/
PIB IFFIWood Broadcast Channel:
https://whatsapp.com/channel/0029VaEiBaML2AU6gnzWOm3F
X Handles: @IFFIGoa, @PIB_India, @PIB_Panaji
*****
Release ID:
2193418
| Visitor Counter:
4