ಸಿನಿಮಾ ಹಚ್ಚ ಹಸಿರಿನ ಬಗ್ಗೆ ಯೋಚಿಸಿದಾಗ: ನಾಲ್ಕು ರಾಷ್ಟ್ರಗಳು ಕರಕುಶಲತೆ, ಸಂಸ್ಕೃತಿ ಮತ್ತು ಹವಾಮಾನದ ಬಗ್ಗೆ ಪ್ರತಿಬಿಂಬಿಸುತ್ತವೆ
ಕಥೆಗಳು, ಸೆಟ್‌ಗಳು ಮತ್ತು ಸೃಜನಶೀಲ ಆಯ್ಕೆಗಳನ್ನು ಸುಸ್ಥಿರತೆಯು ಹೇಗೆ ರೂಪಿಸುತ್ತದೆ ಎಂಬುದನ್ನು ಚಲನಚಿತ್ರ ನಿರ್ಮಾಪಕರು ಅನ್ವೇಷಿಸುತ್ತಾರೆ
ಪ್ಯಾನಲ್ ಚರ್ಚೆಯು ಸಂಸ್ಕೃತಿ, ಆತ್ಮಸಾಕ್ಷಿ ಮತ್ತು ಜವಾಬ್ದಾರಿಯುತ ಚಲನಚಿತ್ರ ನಿರ್ಮಾಣದ ಭವಿಷ್ಯದ ಬಗ್ಗೆ ಪರಿಶೀಲಿಸುತ್ತದೆ
ಭಾರತದ 56ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ನಡೆದ "ಹಸಿರು ಚಿತ್ರಗಳು (ರೀಲ್ ಗ್ರೀನ್): ನಾಲ್ಕು ಸಿನಿಮಾಗಳಲ್ಲಿ ಸುಸ್ಥಿರತೆ ಮತ್ತು ಕಥೆ ಹೇಳುವಿಕೆ" ಎಂಬ ಗುಂಪು ಚರ್ಚೆಯು ಸುಸ್ಥಿರ ಸಿನಿಮಾದ ಕುರಿತು ಜಾಗತಿಕ ದೃಷ್ಟಿಕೋನಗಳ ಅಪರೂಪದ ಸಂಗಮಕ್ಕಾಗಿ ಭಾರತ, ಜಪಾನ್, ಸ್ಪೇನ್ ಮತ್ತು ಆಸ್ಟ್ರೇಲಿಯಾದ ಚಲನಚಿತ್ರ ನಿರ್ಮಾಪಕರು ಮತ್ತು ನಿರ್ಮಾಪಕರನ್ನು ಒಟ್ಟುಗೂಡಿಸಿತು. ಅಂತರರಾಷ್ಟ್ರೀಯವಾಗಿ ಮೆಚ್ಚುಗೆ ಪಡೆದ ಪತ್ರಕರ್ತ ಮತ್ತು ಚಲನಚಿತ್ರ ವಿಮರ್ಶಕ ನಮನ್ ರಾಮಚಂದ್ರನ್ ಅವರು ನಿರ್ವಹಿಸಿದ ಈ ಅಧಿವೇಶನವು ಪರಿಸರ ಜವಾಬ್ದಾರಿಯು ನಿರ್ಮಾಣ ಅಭ್ಯಾಸಗಳನ್ನು ಮಾತ್ರವಲ್ಲದೆ ನಿರೂಪಣೆಗಳನ್ನು ಸಹ ಹೇಗೆ ರೂಪಿಸುತ್ತದೆ, ಕರಕುಶಲತೆ, ಸಂಸ್ಕೃತಿ ಮತ್ತು ಆತ್ಮಸಾಕ್ಷಿಯನ್ನು ಸೇತುಬಂಧ ಮಾಡುತ್ತದೆ ಎಂಬುದನ್ನು ಅನ್ವೇಷಿಸಿತು.
ಭಾರತೀಯ ಚಲನಚಿತ್ರ ನಿರ್ಮಾಪಕಿ ಮತ್ತು ನಿರ್ದೇಶಕಿ ನೀಲಾ ಮಾಧಬ್ ಪಾಂಡಾ, ಸಿನಿಮಾದ ಪರಿಸರ ಹೆಜ್ಜೆಗುರುತನ್ನು ಸ್ಪಷ್ಟವಾಗಿ ಪ್ರತಿಬಿಂಬಿಸುವ ಮೂಲಕ ಚರ್ಚೆಯ ಹಾದಿಯನ್ನು ತೋರಿಸಿದರು. ಚಲನಚಿತ್ರ ನಿರ್ಮಾಣದಲ್ಲಿ ಇಂಗಾಲದ ಪ್ರಭಾವ ಗಣನೀಯವಾಗಿದೆ ಮತ್ತು ಸಣ್ಣ ಚಲನಚಿತ್ರಗಳು ಸಾಮಾನ್ಯವಾಗಿ ಹಸಿರು ಅಭ್ಯಾಸಗಳನ್ನು ಕಾರ್ಯಗತಗೊಳಿಸಲು ಅವಕಾಶ ಒದಗಿಸುವ ಸ್ಥಿತಿಸ್ಥಾಪಕತ್ವ/ನಮ್ಯತೆಯನ್ನು ಹೊಂದಿರುತ್ತವೆ ಎಂದು ಅವರು ಪ್ರೇಕ್ಷಕರಿಗೆ ನೆನಪಿಸಿದರು. "ಸಿನೆಮಾ ಒಂದು ಸಾಮೂಹಿಕ ಮಾಧ್ಯಮ. ನಮಗೆ ಒಂದೇ ಗ್ರಹವಿದೆ. ನಮ್ಮ ಇಂಧನ ಸಂಪನ್ಮೂಲಗಳಲ್ಲಿ ಅರ್ಧದಷ್ಟು ಈಗಾಗಲೇ ಬಳಕೆಯಾಗಿದೆ," ಎಂದು ಅವರು ಹೇಳಿದರು, ಸಾಧ್ಯವಾದಲ್ಲೆಲ್ಲಾ ಸುಸ್ಥಿರ ಕ್ರಮಗಳನ್ನು ಅಳವಡಿಸಿಕೊಳ್ಳಲು ಉದ್ಯಮವನ್ನು ಆಗ್ರಹಿಸಿದರು.

ನಿಲಾ ಮಾಧಬ್ ಪಾಂಡಾ ಹೇಳಿದ್ದಕ್ಕೆ ವಿರುದ್ಧವಾಗಿ, ಜಪಾನ್‌ನ ಚಲನಚಿತ್ರ ನಿರ್ಮಾಪಕಿ ಮಿನಾ ಮೋಟೆಕಿ, ಕಡಿಮೆ-ಬಜೆಟ್ ನಿರ್ಮಾಣಗಳಲ್ಲಿ ಹಸಿರು ಅಭ್ಯಾಸಗಳನ್ನು ಅನುಷ್ಠಾನಗೊಳಿಸುವ ಸವಾಲುಗಳನ್ನು ಎತ್ತಿ ತೋರಿಸಿದರು, ದೊಡ್ಡ ಪ್ರಮಾಣದ ಯೋಜನೆಗಳು ನಾವೀನ್ಯತೆಗೆ ಅವಕಾಶ ನೀಡುತ್ತಿದ್ದರೂ, ಸಣ್ಣ ಯೋಜನೆಗಳು ಹೆಚ್ಚಾಗಿ ಶಕ್ತಿಯ/ಇಂಧನ ಬಳಕೆ, ಸೆಟ್ ನಿರ್ವಹಣೆ ಮತ್ತು ಲಾಜಿಸ್ಟಿಕ್ಸ್‌ನೊಂದಿಗೆ ಹೋರಾಡಬೇಕಾಗುತ್ತದೆ ಎಂಬುದರತ್ತ ಗಮನ ಸೆಳೆದರು. "ನಾವು ಸಾಧ್ಯವಾದಲ್ಲೆಲ್ಲಾ ಶಕ್ತಿಯನ್ನು/ಇಂಧನವನ್ನು ಉಳಿಸಲು ಪ್ರಯತ್ನಿಸುತ್ತಿದ್ದೇವೆ" ಎಂದು ಅವರು ಹೇಳಿದರು, ಜಪಾನಿನ ಚಲನಚಿತ್ರ ನಿರ್ಮಾಣ ಸಂಸ್ಕೃತಿಯಲ್ಲಿ ಕ್ರಮೇಣ ಆಗುತ್ತಿರುವ ಬದಲಾವಣೆಯತ್ತ ಅವರು ಬೆಟ್ಟು ಮಾಡಿದರು.
ಸ್ಪ್ಯಾನಿಷ್ ಚಲನಚಿತ್ರ ನಿರ್ಮಾಪಕಿ ಅನ್ನಾ ಸೌರಾ ಈ ಕಳವಳಗಳನ್ನು ಪ್ರತಿಧ್ವನಿಸಿದರು, ಸುಸ್ಥಿರತೆಯು ಸೃಜನಶೀಲ ಜವಾಬ್ದಾರಿಯಾಗಿದೆ ಎಂದು ಅಭಿಪ್ರಾಯಪಟ್ಟರು. ಸಿನೆಮಾ ವಿತರಣೆಯಿಂದ ಹಿಡಿದು ಸೆಟ್ ನಿರ್ವಹಣೆಯವರೆಗೆ ಪ್ರಜ್ಞಾಪೂರ್ವಕ ಆಯ್ಕೆಗಳು ಕಥೆ ಹೇಳುವ ಗುಣಮಟ್ಟವನ್ನು ರಾಜಿ ಮಾಡಿಕೊಳ್ಳದೆಯೂ ಪರಿಸರದ ಪರಿಣಾಮವನ್ನು ಕಡಿಮೆ ಮಾಡಲು ಸಾಧ್ಯವಿದೆ ಎಂದು ಅವರು ಒತ್ತಿ ಹೇಳಿದರು. "ನಾವು ತೆಗೆದುಕೊಳ್ಳುವ ಪ್ರತಿಯೊಂದು ಹೆಜ್ಜೆಯೂ ಮುಖ್ಯವಾಗಿದೆ" ಎಂದು ಅವರು ಹೇಳಿದರು, "ಮತ್ತು ಸಣ್ಣ, ಚಿಂತನಶೀಲ ಕ್ರಮಗಳು ಸಹ ಹಸಿರು ಭವಿಷ್ಯಕ್ಕೆ ಕೊಡುಗೆ ನೀಡುತ್ತವೆ." ಎಂದರು.
ಆಸ್ಟ್ರೇಲಿಯಾದ ಚಲನಚಿತ್ರ ನಿರ್ಮಾಪಕ ಗಾರ್ತ್ ಡೇವಿಸ್, ಕಥೆಗಳು ತಾವೇ ಹೇಗೆ ಪರಿಸರ ಜಾಗೃತಿಯನ್ನು ಪ್ರಭಾವಿಸುತ್ತವೆ ಎಂಬುದರ ಕುರಿತು ಪ್ರತಿಬಿಂಬಿಸುತ್ತಾ, ಸಂಭಾಷಣೆಗೆ ನಿರೂಪಣಾ ಆಯಾಮವನ್ನು ಸೇರಿಸಿದರು. "ಚಲನಚಿತ್ರಗಳು ಜನರನ್ನು ಪ್ರಕೃತಿಗೆ ಮತ್ತೆ ಜೋಡಿಸುತ್ತವೆ" ಎಂದು ಅವರು ಹೇಳಿದರು. "ಯುವ ಪೀಳಿಗೆ ಬದಲಾವಣೆಯನ್ನು ಬಯಸುತ್ತದೆ ಮತ್ತು ಕಥೆ ಹೇಳುವಿಕೆಯು ನಡವಳಿಕೆ ಮತ್ತು ಮೌಲ್ಯಗಳನ್ನು ರೂಪಿಸುವ ಶಕ್ತಿಯನ್ನು ಹೊಂದಿದೆ." ಎಂದರು.

ಚರ್ಚೆಯು ಜಾಗತಿಕ ಅಭ್ಯಾಸಗಳು ಮತ್ತು ಸ್ಥಳೀಯ ಸಂದರ್ಭಗಳಲ್ಲಿ ಅವುಗಳ ಸಂಭಾವ್ಯ ರೂಪಾಂತರವನ್ನು ಅನ್ವೇಷಿಸಿತು. ಆಸ್ಟ್ರೇಲಿಯಾದ ನಿರ್ಮಾಣಗಳು ಜನರು, ಸಂಸ್ಕೃತಿ ಮತ್ತು ಪರಿಸರವನ್ನು ಗೌರವಿಸುವುದರ ಮೇಲೆ ಕೇಂದ್ರೀಕರಿಸುತ್ತವೆ, ಚಿತ್ರೀಕರಣ ಮುಗಿದ ನಂತರ ಚಿತ್ರೀಕರಣದ ಸ್ಥಳಗಳನ್ನು ಅವುಗಳು ಇದ್ದ ಹಾಗೆಯೇ ಅಥವಾ ಇನ್ನೂ ಉತ್ತಮವಾಗಿರುವಂತೆ ಮಾಡಿ ಬಿಡುತ್ತವೆ ಎಂದು ಗಾರ್ತ್ ವಿವರಿಸಿದರು. ಸಾರ್ವಜನಿಕ ಸಾರಿಗೆ ಮತ್ತು ಸ್ಥಳೀಯ ನೇಮಕಾತಿಯಿಂದ ಹಿಡಿದು ಎಚ್ಚರಿಕೆಯ ಸಂಪನ್ಮೂಲ ನಿರ್ವಹಣೆಯವರೆಗೆ ಜಪಾನ್‌ನ ಸಾಂಪ್ರದಾಯಿಕ ಮತ್ತು ಆಧುನಿಕ ಅಭ್ಯಾಸಗಳ ಮಿಶ್ರಣದ ಬಗ್ಗೆ ಮಿನಾ ಮಾತನಾಡಿದರು. ಅನ್ನಾ ಸೌರಾ ಸ್ಪೇನ್‌ನ ಗ್ರೀನ್ ಫಿಲ್ಮ್ ಸರ್ಟಿಫಿಕೇಶನ್ ವ್ಯವಸ್ಥೆಯನ್ನು ಎತ್ತಿ ತೋರಿಸಿದರು, ಇದು ಚಲನಚಿತ್ರ ನಿರ್ಮಾಣಗಳ ಸುಸ್ಥಿರತೆಯನ್ನು ಮೌಲ್ಯಮಾಪನ ಮಾಡುತ್ತದೆ ಮತ್ತು ಪ್ರಮಾಣೀಕರಿಸುತ್ತದೆ, ಅಡುಗೆ, ಉಪಕರಣಗಳು ಮತ್ತು ಲಾಜಿಸ್ಟಿಕ್ಸ್‌ನಲ್ಲಿ ಪರಿಸರ ಸ್ನೇಹಿ ಅಭ್ಯಾಸಗಳನ್ನು ಅಳವಡಿಸಿಕೊಳ್ಳಲು ತಂಡಗಳಿಗೆ ಮಾರ್ಗದರ್ಶನ ನೀಡುತ್ತದೆ ಎಂದರು.
ಅಧಿವೇಶನದ ಉದ್ದಕ್ಕೂ, ಪ್ಯಾನೆಲಿಸ್ಟ್‌ಗಳು ಯುವ ಪೀಳಿಗೆಯ ನಿರ್ಣಾಯಕ ಪಾತ್ರವನ್ನು ಒತ್ತಿ ಹೇಳಿದರು. ಪರಿಸರ ಪ್ರಜ್ಞೆಯ ಸೆಟ್‌ಗಳನ್ನು ರಚಿಸುವುದರಿಂದ ಹಿಡಿದು ಕಥೆಗಳಲ್ಲಿ ಸುಸ್ಥಿರತೆಯನ್ನು ಪ್ರತಿಪಾದಿಸುವವರೆಗೆ, ಯುವಜನರನ್ನು ಬದಲಾವಣೆಯ ಪ್ರಮುಖ ಚಾಲಕರು ಎಂದು ಗುರುತಿಸಲಾಯಿತು. ಗಡಿಗಳನ್ನು ಮೀರಿ ಮತ್ತು ತಲೆಮಾರುಗಳನ್ನು ವ್ಯಾಪಿಸಿರುವ ಸುಸ್ಥಿರತೆಯ ಸಂಸ್ಕೃತಿಯನ್ನು ಪೋಷಿಸಲು ಮಾರ್ಗದರ್ಶನ, ಶಿಕ್ಷಣ ಮತ್ತು ಅಭ್ಯಾಸದ ಪದ್ಧತಿಗಳ ಪ್ರಾಮುಖ್ಯತೆಯನ್ನು ಪ್ಯಾನೆಲಿಸ್ಟ್‌ಗಳು ಒತ್ತಿ ಹೇಳಿದರು.
ತ್ಯಾಜ್ಯವನ್ನು ಕಡಿಮೆ ಮಾಡುವುದು, ವೇಷಭೂಷಣಗಳನ್ನು ಮರುಬಳಕೆ ಮಾಡುವುದು ಮತ್ತು ನಿರ್ಮಿಸಿದ ಸೆಟ್‌ಗಳಿಗಿಂತ ನೈಜ ಸ್ಥಳಗಳಿಗೆ ಆದ್ಯತೆ ನೀಡುವುದು ಸೇರಿದಂತೆ ಪ್ರಾಯೋಗಿಕ ತಂತ್ರಗಳನ್ನು ಚರ್ಚಿಸಲಾಯಿತು. ಪ್ಯಾನೆಲಿಸ್ಟ್‌ಗಳು ಸರ್ಕಾರಿ ಮತ್ತು ಸಾಂಸ್ಥಿಕ ಬೆಂಬಲದ ಅಗತ್ಯವನ್ನು ಸಹ ಒತ್ತಿ ಹೇಳಿದರು. ನಿಲಾ ಮಾಧಬ್ ಪಾಂಡಾ ಸುಸ್ಥಿರ ಪ್ರಯತ್ನಗಳನ್ನು ಅಂಗೀಕರಿಸಲು ಪ್ರಮಾಣೀಕರಣ ವ್ಯವಸ್ಥೆಗಳನ್ನು ಸೂಚಿಸಿದರೆ, ಗಾರ್ತ್ ಡೇವಿಸ್ ಉತ್ಪಾದನಾ ಪ್ರೋತ್ಸಾಹವನ್ನು ಪರಿಸರ ಹೊಣೆಗಾರಿಕೆಗೆ ಜೋಡಿಸುವ ನೀತಿಗಳನ್ನು ಪ್ರಸ್ತಾಪಿಸಿದರು.

ಜಾಗತಿಕ ಸಮುದಾಯಕ್ಕೆ ಪ್ರೋತ್ಸಾಹದಾಯಕ ಟಿಪ್ಪಣಿಯಲ್ಲಿ, ಪ್ಯಾನೆಲಿಸ್ಟ್‌ಗಳು ಇತರ ದೇಶಗಳೊಂದಿಗೆ ಹೆಚ್ಚಿನ ಸಹಯೋಗದ ಅಧಿವೇಶನಗಳು, ಉತ್ತಮ ಅಭ್ಯಾಸಗಳನ್ನು/ಪದ್ದತಿಗಳನ್ನು ಹಂಚಿಕೊಳ್ಳುವುದು ಮತ್ತು ಪರಿಸರದ ಪರಿಣಾಮವನ್ನು ಕಡಿಮೆ ಮಾಡಲು ಪರಿಣಾಮಕಾರಿ ತಂತ್ರಗಳನ್ನು ಅಳವಡಿಸಿಕೊಳ್ಳುವುದನ್ನು ಪ್ರತಿಪಾದಿಸಿದರು. ಅಂತರರಾಷ್ಟ್ರೀಯ ಸಂವಾದಗಳು ಮತ್ತು ಜ್ಞಾನ ವಿನಿಮಯವು ವಿಶ್ವಾದ್ಯಂತ ಚಲನಚಿತ್ರ ನಿರ್ಮಾಪಕರಿಗೆ ಸೃಜನಶೀಲತೆ ಅಥವಾ ಕಥೆ ಹೇಳುವಿಕೆಯನ್ನು ರಾಜಿ ಮಾಡಿಕೊಳ್ಳದೆ ಸುಸ್ಥಿರತೆಯನ್ನು ಸ್ವೀಕರಿಸಲು ಸಹಾಯ ಮಾಡುತ್ತದೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
ಪ್ಯಾನೆಲ್ ಚರ್ಚೆಯ ಅಂತ್ಯದ ವೇಳೆಗೆ, ಸುಸ್ಥಿರತೆಯು ಕೇವಲ ತಾಂತ್ರಿಕ ಮಾರ್ಗಸೂಚಿಯಲ್ಲ, ಅದು ಒಂದು ಮನಸ್ಥಿತಿಯಾಗಿದೆ ಎಂಬುದು ಸ್ಪಷ್ಟವಾಯಿತು. ಭಾರತ, ಜಪಾನ್, ಸ್ಪೇನ್ ಮತ್ತು ಆಸ್ಟ್ರೇಲಿಯಾದಾದ್ಯಂತ, ಪರಿಸರ ಪ್ರಜ್ಞೆಯು ಕಥೆ ಹೇಳುವಿಕೆ, ಕರಕುಶಲತೆ ಮತ್ತು ಸಾಂಸ್ಕೃತಿಕ ಜವಾಬ್ದಾರಿಯೊಂದಿಗೆ ಸಂಧಿಸುತ್ತದೆ ಎಂಬುದನ್ನು ಸಂಭಾಷಣೆ ಬಲಪಡಿಸಿತು. ಸಿನೆಮಾ ಪ್ರಭಾವಶಾಲಿ ಮತ್ತು ಜವಾಬ್ದಾರಿಯುತವಾಗಿರಬಹುದು, ಪ್ರೇಕ್ಷಕರು ಮತ್ತು ಸೃಷ್ಟಿಕರ್ತರನ್ನು ಸಮಾನವಾಗಿ ಪ್ರೇರೇಪಿಸಬಲ್ಲುದು ಮತ್ತು ಮುಂದಿನ ಪೀಳಿಗೆಯ ಚಲನಚಿತ್ರ ನಿರ್ಮಾಪಕರು ಹಸಿರು, ಹೆಚ್ಚು ಆತ್ಮಸಾಕ್ಷಿಯ ಜಗತ್ತನ್ನು ಕಲ್ಪಿಸಿಕೊಳ್ಳಲು ಪ್ರೋತ್ಸಾಹಿಸುತ್ತದೆ ಎಂದು ಪ್ಯಾನೆಲ್ ದೃಢಪಡಿಸಿತು.
ಐ.ಎಫ್.ಎಫ್.ಐ. ಬಗ್ಗೆ
1952ರಲ್ಲಿ ಜನಿಸಿದ ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ (ಐ.ಎಫ್.ಎಫ್.ಐ.) ದಕ್ಷಿಣ ಏಷ್ಯಾದ ಅತ್ಯಂತ ಹಳೆಯ ಮತ್ತು ಅತಿದೊಡ್ಡ ಸಿನಿಮಾ ಸಂಭ್ರಮಾಚರಣೆಯಾಗಿ ಎತ್ತರವಾಗಿ ಬೆಳೆದು ನಿಂತಿದೆ. ರಾಷ್ಟ್ರೀಯ ಚಲನಚಿತ್ರ ಅಭಿವೃದ್ಧಿ ನಿಗಮ (ಎನ್.ಎಫ್.ಡಿ.ಸಿ), ಮಾಹಿತಿ ಮತ್ತು ಪ್ರಸಾರ ಸಚಿವಾಲಯ, ಭಾರತ ಸರ್ಕಾರ ಮತ್ತು ಗೋವಾ ರಾಜ್ಯ ಸರ್ಕಾರ, ಗೋವಾ ಮನರಂಜನಾ ಸೊಸೈಟಿ (ಇ.ಎಸ್.ಜಿ.) ಜಂಟಿಯಾಗಿ ಆಯೋಜಿಸಿರುವ ಈ ಉತ್ಸವವು ಜಾಗತಿಕ ಸಿನಿಮೀಯ ಶಕ್ತಿ ಕೇಂದ್ರವಾಗಿ ಬೆಳೆದಿದೆ - ಅಲ್ಲಿ ಪುನಃಸ್ಥಾಪಿಸಲಾದ ಕ್ಲಾಸಿಕ್‌ಗಳು ದಿಟ್ಟ ಪ್ರಯೋಗಗಳನ್ನು ಪೂರೈಸುತ್ತವೆ ಮತ್ತು ದಂತಕಥೆಯಂತಿರುವ ಕಲಾವಿದರು ನಿರ್ಭೀತಿಯಿಂದ ಮೊದಲ ಬಾರಿಗೆ ಬರುವವರೊಂದಿಗೆ ಜಾಗವನ್ನು ಹಂಚಿಕೊಳ್ಳುತ್ತಾರೆ. ಐ.ಎಫ್.ಎಫ್.ಐ. ನಿಜವಾಗಿಯೂ ಮಿಂಚುವಂತೆ ಮಾಡುವುದು ಅದರ ವಿದ್ಯುತ್ ಮಿಶ್ರಣದಂತಿರುವ - ಅಂತಾರಾಷ್ಟ್ರೀಯ ಸ್ಪರ್ಧೆಗಳು, ಸಾಂಸ್ಕೃತಿಕ ಪ್ರದರ್ಶನಗಳು, ಮಾಸ್ಟರ್‌ಕ್ಲಾಸ್‌ಗಳು, ಗೌರವಗಳು ಮತ್ತು ಹೆಚ್ಚಿನ ಶಕ್ತಿಯ ವೇವ್ಸ್ ಫಿಲ್ಮ್ ಬಜಾರ್. ಅಲ್ಲಿ ಕಲ್ಪನೆಗಳು, ಒಪ್ಪಂದಗಳು ಮತ್ತು ಸಹಯೋಗಗಳು ಗರಿಗೆದರುತ್ತವೆ. ನವೆಂಬರ್ 20–28ರ ಅವಧಿ ಗೋವಾದ ಬೆರಗುಗೊಳಿಸುವ ಕರಾವಳಿ ಹಿನ್ನೆಲೆಯಲ್ಲಿ ಪ್ರದರ್ಶಿಸಲಾಗುತ್ತಿರುವ 56ನೇ ಆವೃತ್ತಿಯು ಭಾಷೆಗಳು, ಪ್ರಕಾರಗಳು, ನಾವೀನ್ಯತೆಗಳು ಮತ್ತು ಧ್ವನಿಗಳು ಬೆರಗುಗೊಳಿಸುವ ಕಾಮನಬಿಲ್ಲನ್ನು ಸಾಕಾರಗೊಳಿಸುತ್ತವೆ – ಇದು ವಿಶ್ವ ವೇದಿಕೆಯಲ್ಲಿ ಭಾರತದ ಸೃಜನಶೀಲ ಪ್ರತಿಭೆಯ ಬೆರಗಿನ ಸಂಭ್ರಮಾಚರಣೆ.
ಹೆಚ್ಚಿನ ಮಾಹಿತಿಗಾಗಿ, ಕ್ಲಿಕ್ ಮಾಡಿ:
IFFI Website: https://www.iffigoa.org/
PIB’s IFFI Microsite: https://www.pib.gov.in/iffi/56new/
PIB IFFIWood Broadcast Channel: https://whatsapp.com/channel/0029VaEiBaML2AU6gnzWOm3F
X Handles: @IFFIGoa, @PIB_India, @PIB_Panaji
*****
Release ID:
2192780
| Visitor Counter:
3