ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ವಿಪತ್ತು ನಿರೋಧಕ ಮೂಲಸೌಕರ್ಯ ಕುರಿತ ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ವಿಡಿಯೋ ಸಂದೇಶದ ಮೂಲಕ ಪ್ರಧಾನಮಂತ್ರಿ ಅವರ ಭಾಷಣ

Posted On: 04 APR 2023 10:31AM by PIB Bengaluru

ನಮಸ್ಕಾರ!

ಗೌರವಾನ್ವಿತರೇ, ರಾಷ್ಟ್ರದ ಮುಖ್ಯಸ್ಥರೇ, ಶಿಕ್ಷಣ ತಜ್ಞರೇ, ಉದ್ಯಮಿಗಳೇ, ನೀತಿ ನಿರೂಪಕರೆ ಮತ್ತು ಪ್ರಪಂಚದಾದ್ಯಂತ ನೆರೆದಿರುವ ನನ್ನ ಆತ್ಮೀಯ ಸ್ನೇಹಿತರೇ!

ಎಲ್ಲರಿಗೂ ನನ್ನ ಶುಭಾಶಯಗಳು. ಭಾರತಕ್ಕೆ ಸ್ವಾಗತ! ಮೊದಲಿಗೆ, ನಾನು ವಿಪತ್ತು ನಿರೋಧಕ ಮೂಲಸೌಕರ್ಯ ಒಕ್ಕೂಟಕ್ಕೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ವಿಪತ್ತು ನಿರೋಧಕ ಮೂಲಸೌಕರ್ಯ ಕುರಿತ 5ನೇ ಅಂತಾರಾಷ್ಟ್ರೀಯ ಸಮ್ಮೇಳನವಾದ ಐಸಿಡಿಆರ್‌ಐ-2023 ರ ಈ ಸಂದರ್ಭವು ನಿಜಕ್ಕೂ ವಿಶೇಷವಾಗಿದೆ.

ಸ್ನೇಹಿತರೇ,

ಸಿಡಿಆರ್‌ಐ ಒಂದು ಜಾಗತಿಕ ದೃಷ್ಟಿಕೋನದಿಂದ ಉದಯಿಸಿದೆ. ನಿಕಟವಾಗಿ ಸಂಪರ್ಕ ಹೊಂದಿದ ಜಗತ್ತಿನಲ್ಲಿ, ವಿಪತ್ತುಗಳ ಪರಿಣಾಮವು ಕೇವಲ ಸ್ಥಳೀಯವಾಗಿರುವುದಿಲ್ಲ. ಒಂದು ಪ್ರದೇಶದಲ್ಲಿ ಸಂಭವಿಸುವ ವಿಪತ್ತುಗಳು ಸಂಪೂರ್ಣವಾಗಿ ವಿಭಿನ್ನ ಪ್ರದೇಶದ ಮೇಲೆ ದೊಡ್ಡ ಪರಿಣಾಮ ಬೀರಬಹುದು. ಆದ್ದರಿಂದ, ನಮ್ಮ ಪ್ರತಿಕ್ರಿಯೆ ಪ್ರತ್ಯೇಕವಾಗಿರದೆ, ಸಮಗ್ರವಾಗಿರಬೇಕು.

ಸ್ನೇಹಿತರೇ,

ಕೇವಲ ಕೆಲವೇ ವರ್ಷಗಳಲ್ಲಿ, 40ಕ್ಕೂ ಹೆಚ್ಚು ದೇಶಗಳು ಸಿಡಿಆರ್‌ಐ ಯ ಭಾಗವಾಗಿವೆ. ಈ ಸಮ್ಮೇಳನವು ಒಂದು ಪ್ರಮುಖ ವೇದಿಕೆಯಾಗುತ್ತಿದೆ. ಮುಂದುವರಿದ ಮತ್ತು ಅಭಿವೃದ್ಧಿಶೀಲ ಆರ್ಥಿಕತೆಗಳು, ದೊಡ್ಡ ಮತ್ತು ಸಣ್ಣ ದೇಶಗಳು, ಜಾಗತಿಕ ಉತ್ತರ ಮತ್ತು ಜಾಗತಿಕ ದಕ್ಷಿಣದ ದೇಶಗಳು ಈ ವೇದಿಕೆಯಲ್ಲಿ ಒಗ್ಗೂಡುತ್ತಿವೆ. ಕೇವಲ ಸರ್ಕಾರಗಳು ಮಾತ್ರವಲ್ಲದೆ, ಜಾಗತಿಕ ಸಂಸ್ಥೆಗಳು, ಡೊಮೇನ್ ತಜ್ಞರು ಮತ್ತು ಖಾಸಗಿ ವಲಯವೂ ಇದರಲ್ಲಿ ಪಾತ್ರವಹಿಸುತ್ತಿರುವುದು ಉತ್ತೇಜನಕಾರಿಯಾಗಿದೆ.

ಸ್ನೇಹಿತರೇ,

ನಾವು ಮೂಲಸೌಕರ್ಯದ ಬಗ್ಗೆ ಚರ್ಚಿಸುವಾಗ, ಕೆಲವು ಆದ್ಯತೆಗಳನ್ನು ನೆನಪಿನಲ್ಲಿಡಬೇಕು. ಈ ವರ್ಷದ ಸಮ್ಮೇಳನಕ್ಕಾಗಿ ಸಿಡಿಆರ್‌ಐ ಯ ವಿಷಯವು "ಸ್ಥಿತಿಸ್ಥಾಪಕ ಮತ್ತು ಅಂತರ್ಗತ ಮೂಲಸೌಕರ್ಯವನ್ನು ತಲುಪಿಸುವುದು" ಆಗಿದೆ. ಮೂಲಸೌಕರ್ಯವು ಕೇವಲ ಆದಾಯದ ಬಗ್ಗೆ ಇರದೆ, ತಲುಪುವಿಕೆ (reach) ಮತ್ತು ಸ್ಥಿತಿಸ್ಥಾಪಕತ್ವದ ಬಗ್ಗೆಯೂ ಇರಬೇಕು. ಮೂಲಸೌಕರ್ಯವು ಯಾರನ್ನೂ ಹಿಂದೆ ಬಿಡದೆ, ಬಿಕ್ಕಟ್ಟಿನ ಸಮಯದಲ್ಲೂ ಜನರಿಗೆ ಸೇವೆ ಸಲ್ಲಿಸಬೇಕು. ಇದಲ್ಲದೆ, ಮೂಲಸೌಕರ್ಯದ ಬಗ್ಗೆ ಸಮಗ್ರ ದೃಷ್ಟಿಕೋನ ಅಗತ್ಯವಿದೆ. ಸಾರಿಗೆ ಮೂಲಸೌಕರ್ಯದಷ್ಟೇ ಸಾಮಾಜಿಕ ಮತ್ತು ಡಿಜಿಟಲ್ ಮೂಲಸೌಕರ್ಯವೂ ಮುಖ್ಯವಾಗಿದೆ.

ಸ್ನೇಹಿತರೇ,

ವಿಪತ್ತುಗಳ ಸಮಯದಲ್ಲಿ, ಸಂಕಷ್ಟದಲ್ಲಿರುವವರ ಕಡೆಗೆ ನಮ್ಮ ಮನಸ್ಸು ಹೋಗುವುದು ಸಹಜ. ಪರಿಹಾರ ಮತ್ತು ರಕ್ಷಣೆಗೆ ಮೊದಲ ಆದ್ಯತೆ ಸಿಗುತ್ತದೆ, ಅದು ಸರಿಯೂ ಆಗಿದೆ. ಸ್ಥಿತಿಸ್ಥಾಪಕತ್ವ ಎಂದರೆ ವ್ಯವಸ್ಥೆಗಳು ಸಾಮಾನ್ಯ ಜೀವನವನ್ನು ಎಷ್ಟು ಬೇಗ ಪುನಃಸ್ಥಾಪಿಸಬಹುದು ಎಂಬುದಾಗಿದೆ. ಒಂದು ವಿಪತ್ತು ಮತ್ತು ಇನ್ನೊಂದು ವಿಪತ್ತಿನ ನಡುವಿನ ಸಮಯದಲ್ಲಿ ಸ್ಥಿತಿಸ್ಥಾಪಕತ್ವವನ್ನು ನಿರ್ಮಿಸಲಾಗುತ್ತದೆ. ಹಿಂದಿನ ವಿಪತ್ತುಗಳನ್ನು ಅಧ್ಯಯನ ಮಾಡುವುದು ಮತ್ತು ಅವುಗಳಿಂದ ಪಾಠಗಳನ್ನು ಕಲಿಯುವುದು ಇದಕ್ಕೆ ದಾರಿ. ಇಲ್ಲಿ ಸಿಡಿಆರ್‌ಐ ಮತ್ತು ಈ ಸಮ್ಮೇಳನವು ಪ್ರಮುಖ ಪಾತ್ರ ವಹಿಸುತ್ತವೆ.

ಸ್ನೇಹಿತರೇ,

ಪ್ರತಿ ರಾಷ್ಟ್ರ ಮತ್ತು ಪ್ರದೇಶವು ವಿಭಿನ್ನ ರೀತಿಯ ವಿಪತ್ತುಗಳನ್ನು ಎದುರಿಸುತ್ತದೆ. ವಿಪತ್ತುಗಳನ್ನು ತಡೆದುಕೊಳ್ಳಬಲ್ಲ ಮೂಲಸೌಕರ್ಯಕ್ಕೆ ಸಂಬಂಧಿಸಿದ ಸ್ಥಳೀಯ ಜ್ಞಾನವನ್ನು ಸಮಾಜಗಳು ಬೆಳೆಸುತ್ತವೆ. ಮೂಲಸೌಕರ್ಯವನ್ನು ಆಧುನೀಕರಿಸುವಾಗ, ಅಂತಹ ಜ್ಞಾನವನ್ನು ಬುದ್ಧಿವಂತಿಕೆಯಿಂದ ಬಳಸಬೇಕಾಗಿದೆ. ಸ್ಥಳೀಯ ಒಳನೋಟಗಳೊಂದಿಗೆ ಆಧುನಿಕ ತಂತ್ರಜ್ಞಾನವು ಸ್ಥಿತಿಸ್ಥಾಪಕತ್ವಕ್ಕೆ ಉತ್ತಮ ಕೊಡುಗೆ ನೀಡಬಲ್ಲದು. ಇದಲ್ಲದೆ, ಸ್ಥಳೀಯ ಜ್ಞಾನವನ್ನು ಉತ್ತಮವಾಗಿ ದಾಖಲಿಸಿದರೆ, ಅದು ಜಾಗತಿಕ ಉತ್ತಮ ಅಭ್ಯಾಸ ಆಗಬಹುದು!

ಸ್ನೇಹಿತರೇ,

ಸಿಡಿಆರ್‌ಐ ಯ ಕೆಲವು ಉಪಕ್ರಮಗಳು ಈಗಾಗಲೇ ಅದರ ಅಂತರ್ಗತ ಉದ್ದೇಶವನ್ನು ತೋರಿಸುತ್ತಿವೆ. 'ಸ್ಥಿತಿಸ್ಥಾಪಕ ದ್ವೀಪ ರಾಷ್ಟ್ರಗಳಿಗಾಗಿ ಮೂಲಸೌಕರ್ಯ ಉಪಕ್ರಮ' ಅನೇಕ ದ್ವೀಪ ರಾಷ್ಟ್ರಗಳಿಗೆ ಪ್ರಯೋಜನವನ್ನು ನೀಡುತ್ತದೆ. ಈ ದ್ವೀಪಗಳು ಚಿಕ್ಕದಿರಬಹುದು, ಆದರೆ ಅಲ್ಲಿ ವಾಸಿಸುವ ಪ್ರತಿಯೊಬ್ಬ ಮನುಷ್ಯನೂ ನಮಗೆ ಮುಖ್ಯ. ಕಳೆದ ವರ್ಷವೇ, 'ಮೂಲಸೌಕರ್ಯ ಸ್ಥಿತಿಸ್ಥಾಪಕ ವೇಗವರ್ಧಕ ನಿಧಿ' ನ್ನು ಘೋಷಿಸಲಾಯಿತು. ಈ 50 ಮಿಲಿಯನ್ ಡಾಲರ್ ನಿಧಿಯು ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಅಪಾರ ಆಸಕ್ತಿಯನ್ನು ಹುಟ್ಟುಹಾಕಿದೆ. ಉಪಕ್ರಮಗಳ ಯಶಸ್ಸಿಗೆ ಹಣಕಾಸಿನ ಸಂಪನ್ಮೂಲಗಳ ಬದ್ಧತೆ ಮುಖ್ಯವಾಗಿದೆ.

ಸ್ನೇಹಿತರೇ,

ನಮ್ಮ ಮುಂದಿರುವ ಸವಾಲುಗಳ ಪ್ರಮಾಣವನ್ನು ಇತ್ತೀಚಿನ ವಿಪತ್ತುಗಳು ನಮಗೆ ನೆನಪಿಸಿವೆ. ನಿಮಗೆ ಕೆಲವು ಉದಾಹರಣೆಗಳನ್ನು ನೀಡುತ್ತೇನೆ. ಭಾರತ ಮತ್ತು ಯುರೋಪಿನಾದ್ಯಂತ ಉಷ್ಣ ಅಲೆಗಳು ಸಂಭವಿಸಿದವು. ಅನೇಕ ದ್ವೀಪ ರಾಷ್ಟ್ರಗಳು ಭೂಕಂಪಗಳು, ಚಂಡಮಾರುತಗಳು ಮತ್ತು ಜ್ವಾಲಾಮುಖಿಗಳಿಂದ ಹಾನಿಗೊಳಗಾದವು. ಟರ್ಕಿಯೆ ಮತ್ತು ಸಿರಿಯಾದಲ್ಲಿನ ಭೂಕಂಪಗಳು ಜೀವ ಮತ್ತು ಆಸ್ತಿಗೆ ದೊಡ್ಡ ನಷ್ಟವನ್ನುಂಟುಮಾಡಿದವು. ನಿಮ್ಮ ಕೆಲಸವು ಹೆಚ್ಚು ಪ್ರಸ್ತುತವಾಗುತ್ತಿದೆ. ಸಿಡಿಆರ್‌ಐ ಯಿಂದ ಹೆಚ್ಚಿನ ನಿರೀಕ್ಷೆಗಳಿವೆ.

ಸ್ನೇಹಿತರೇ,

ಈ ವರ್ಷ, ಭಾರತವು ತನ್ನ ಜಿ20 ಅಧ್ಯಕ್ಷತೆಯ ಮೂಲಕವೂ ಜಗತ್ತನ್ನು ಒಗ್ಗೂಡಿಸುತ್ತಿದೆ. ಜಿ20 ಅಧ್ಯಕ್ಷರಾಗಿ, ನಾವು ಈಗಾಗಲೇ ಸಿಡಿಆರ್‌ಐಯನ್ನು ಅನೇಕ ಕಾರ್ಯ ಗುಂಪುಗಳಲ್ಲಿ ಸೇರಿಸಿದ್ದೇವೆ. ನೀವು ಇಲ್ಲಿ ಕಂಡುಕೊಳ್ಳುವ ಪರಿಹಾರಗಳು ಜಾಗತಿಕ ನೀತಿ ನಿರೂಪಣೆಯ ಅತ್ಯುನ್ನತ ಮಟ್ಟದಲ್ಲಿ ಗಮನ ಸೆಳೆಯಲಿವೆ. ಹವಾಮಾನ ಅಪಾಯಗಳು ಮತ್ತು ವಿಪತ್ತುಗಳ ವಿರುದ್ಧ ಮೂಲಸೌಕರ್ಯ ಸ್ಥಿತಿಸ್ಥಾಪಕತ್ವಕ್ಕೆ ಕೊಡುಗೆ ನೀಡಲು ಸಿಡಿಆರ್‌ಐಗೆ ಇದು ಒಂದು ಅವಕಾಶವಾಗಿದೆ. ಐಸಿಡಿಆರ್‌ಐ 2023ರಲ್ಲಿನ ಚರ್ಚೆಗಳು ಹೆಚ್ಚು ಸ್ಥಿತಿಸ್ಥಾಪಕ ಜಗತ್ತಿನ ಹಂಚಿಕೆಯ ದೃಷ್ಟಿಕೋನವನ್ನು ಸಾಧಿಸಲು ಒಂದು ಮಾರ್ಗವನ್ನು ಒದಗಿಸುತ್ತವೆ ಎಂದು ನನಗೆ ವಿಶ್ವಾಸವಿದೆ.

 

*****

 

 


(Release ID: 2188235) Visitor Counter : 11