ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

"ಕಾನೂನು ನೆರವು ವಿತರಣಾ ಕಾರ್ಯವಿಧಾನಗಳನ್ನು ಬಲಪಡಿಸುವುದು" ಕುರಿತ ರಾಷ್ಟ್ರೀಯ ಸಮ್ಮೇಳನವನ್ನು ಉದ್ದೇಶಿಸಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಭಾಷಣ


'ಸಮುದಾಯ ಮಧ್ಯಸ್ಥಿಕೆ ತರಬೇತಿ ಘಟಕ'ಕ್ಕೆ ಪ್ರಧಾನಮಂತ್ರಿ ಚಾಲನೆ

ಯಾವಾಗ ನ್ಯಾಯವು ಎಲ್ಲರಿಗೂ ಲಭ್ಯವಾಗುತ್ತದೆಯೋ, ಸಮಯಕ್ಕೆ ಸರಿಯಾಗಿ ತಲುಪುತ್ತದೆಯೋ ಮತ್ತು ಪ್ರತಿಯೊಬ್ಬ ವ್ಯಕ್ತಿಯ ಸಾಮಾಜಿಕ ಅಥವಾ ಆರ್ಥಿಕ ಹಿನ್ನೆಲೆಯನ್ನು ಲೆಕ್ಕಿಸದೆ ತಲುಪುತ್ತದೆಯೋ—ಆಗ ಅದು ನಿಜವಾಗಿಯೂ ಸಾಮಾಜಿಕ ನ್ಯಾಯದ ಅಡಿಪಾಯವಾಗುತ್ತದೆ: ಪ್ರಧಾನಮಂತ್ರಿ

'ನ್ಯಾಯದ ಸುಲಭ ಲಭ್ಯತೆ'ಯನ್ನು ಖಚಿತಪಡಿಸಿಕೊಂಡಾಗ ಮಾತ್ರ 'ವ್ಯಾಪಾರ ಸುಲಭಗೊಳಿಸುವಿಕೆ' ಮತ್ತು 'ಜೀವನ ಸುಲಭಗೊಳಿಸುವಿಕೆ' ನಿಜವಾಗಿಯೂ ಸಾಧ್ಯ; ಇತ್ತೀಚಿನ ವರ್ಷಗಳಲ್ಲಿ, ನ್ಯಾಯದ ಸುಲಭ ಲಭ್ಯತೆಯನ್ನು ಹೆಚ್ಚಿಸಲು ಹಲವಾರು ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಮತ್ತು ಮುಂದಿನ ದಿನಗಳಲ್ಲಿ, ನಾವು ಈ ದಿಕ್ಕಿನಲ್ಲಿ ಪ್ರಯತ್ನಗಳನ್ನು ಚುರುಕುಗೊಳಿಸುತ್ತೇವೆ: ಪ್ರಧಾನಮಂತ್ರಿ

ಮಧ್ಯಸ್ಥಿಕೆಯು ಯಾವಾಗಲೂ ನಮ್ಮ ನಾಗರಿಕತೆಯ ಅವಿಭಾಜ್ಯ ಅಂಗವಾಗಿದೆ; ಹೊಸ 'ಮಧ್ಯಸ್ಥಿಕೆ ಕಾಯ್ದೆ'ಯು ಈ ಸಂಪ್ರದಾಯವನ್ನು ಮುಂದುವರಿಸಿಕೊಂಡು ಹೋಗುತ್ತಿದ್ದು, ಅದಕ್ಕೆ ಆಧುನಿಕ ರೂಪವನ್ನು ನೀಡುತ್ತಿದೆ: ಪ್ರಧಾನಮಂತ್ರಿ

ತಂತ್ರಜ್ಞಾನವು ಇಂದು ಸಮಗ್ರ ಮತ್ತು ಸಬಲೀಕರಣದ ಪ್ರಬಲ ಮಾಧ್ಯಮವಾಗಿ ಹೊರಹೊಮ್ಮುತ್ತಿದೆ; ನ್ಯಾಯ ವಿತರಣೆಯಲ್ಲಿ 'ಇ-ಕೋರ್ಟ್ಸ್' ಯೋಜನೆಯು ಈ ಪರಿವರ್ತನೆಗೆ ಒಂದು ಗಮನಾರ್ಹ ಉದಾಹರಣೆಯಾಗಿ ನಿಂತಿದೆ: ಪ್ರಧಾನಮಂತ್ರಿ

ಜನರು ತಮ್ಮ ಸ್ವಂತ ಭಾಷೆಯಲ್ಲಿ ಕಾನೂನನ್ನು ಅರ್ಥಮಾಡಿಕೊಂಡಾಗ, ಅದು ಉತ್ತಮ ಅನುಸರಣೆಗೆ ಕಾರಣವಾಗುತ್ತದೆ ಮತ್ತು ವ್ಯಾಜ್ಯಗಳನ್ನು ಕಡಿಮೆ ಮಾಡುತ್ತದೆ; ತೀರ್ಪುಗಳು ಮತ್ತು ಕಾನೂನು ದಾಖಲೆಗಳು ಸ್ಥಳೀಯ ಭಾಷೆಗಳಲ್ಲಿ ಲಭ್ಯವಾಗುವಂತೆ ಮಾಡುವುದು ಅಷ್ಟೇ ಅವಶ್ಯಕವಾಗಿದೆ: ಪ್ರಧಾನಮಂತ್ರಿ

Posted On: 08 NOV 2025 6:36PM by PIB Bengaluru

ಭಾರತದ ಸುಪ್ರೀಂ ಕೋರ್ಟ್‌ನಲ್ಲಿ ಇಂದು ನಡೆದ "ಕಾನೂನು ನೆರವು ವಿತರಣಾ ಕಾರ್ಯವಿಧಾನಗಳನ್ನು ಬಲಪಡಿಸುವುದು" ಕುರಿತ ರಾಷ್ಟ್ರೀಯ ಸಮ್ಮೇಳನವನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಶ್ರೀ ಮೋದಿ ಅವರು, ಈ ಮಹತ್ವದ ಸಂದರ್ಭದಲ್ಲಿ ನೆರೆದಿರುವ ನಿಮ್ಮೆಲ್ಲರ ನಡುವೆ ಇರುವುದು ನಿಜವಾಗಿಯೂ ವಿಶೇಷವಾದದ್ದು ಎಂದು ಹೇಳಿದರು. ಕಾನೂನು ನೆರವು ವಿತರಣಾ ವ್ಯವಸ್ಥೆಯನ್ನು ಬಲಪಡಿಸುವುದು ಮತ್ತು ಕಾನೂನು ಸೇವಾ ದಿನಕ್ಕೆ ಸಂಬಂಧಿಸಿದ ಕಾರ್ಯಕ್ರಮವು ಭಾರತದ ನ್ಯಾಯಾಂಗ ವ್ಯವಸ್ಥೆಗೆ ಹೊಸ ಶಕ್ತಿಯನ್ನು ನೀಡುತ್ತದೆ ಎಂದು ಅವರು ಅಭಿಪ್ರಾಯಪಟ್ಟರು. 20ನೇ ರಾಷ್ಟ್ರೀಯ ಸಮ್ಮೇಳನಕ್ಕೆ ಪ್ರಧಾನಮಂತ್ರಿ ಅವರು ಎಲ್ಲರಿಗೂ ಶುಭ ಹಾರೈಸಿದರು. ಅಲ್ಲದೆ, ಉಪಸ್ಥಿತರಿದ್ದ ಗಣ್ಯರು, ನ್ಯಾಯಾಂಗದ ಸದಸ್ಯರು ಹಾಗೂ ಕಾನೂನು ಸೇವಾ ಪ್ರಾಧಿಕಾರಗಳ ಪ್ರತಿನಿಧಿಗಳಿಗೆ ಅವರು ಶುಭಾಶಯ ಕೋರಿದರು.

"ಯಾವಾಗ ನ್ಯಾಯವು ಎಲ್ಲರಿಗೂ ಲಭ್ಯವಾಗುತ್ತದೆಯೋ, ಸಮಯಕ್ಕೆ ಸರಿಯಾಗಿ ತಲುಪುತ್ತದೆಯೋ ಮತ್ತು ಪ್ರತಿಯೊಬ್ಬ ವ್ಯಕ್ತಿಯ ಸಾಮಾಜಿಕ ಅಥವಾ ಆರ್ಥಿಕ ಹಿನ್ನೆಲೆಯನ್ನು ಲೆಕ್ಕಿಸದೆ ತಲುಪುತ್ತದೆಯೋ—ಆಗ ಅದು ನಿಜವಾಗಿಯೂ ಸಾಮಾಜಿಕ ನ್ಯಾಯದ ಅಡಿಪಾಯವಾಗುತ್ತದೆ" ಎಂದು ಪ್ರಧಾನಮಂತ್ರಿ ಅವರು ಹೇಳಿದರು. ಇಂತಹ ಲಭ್ಯತೆಯನ್ನು ಖಚಿತಪಡಿಸಿಕೊಳ್ಳುವಲ್ಲಿ ಕಾನೂನು ನೆರವು ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ ಎಂದು ಅವರು ಒತ್ತಿ ಹೇಳಿದರು. ರಾಷ್ಟ್ರಮಟ್ಟದಿಂದ ತಾಲ್ಲೂಕು ಮಟ್ಟದವರೆಗೆ, ಕಾನೂನು ಸೇವಾ ಪ್ರಾಧಿಕಾರಗಳು ನ್ಯಾಯಾಂಗ ಮತ್ತು ಸಾಮಾನ್ಯ ನಾಗರಿಕರ ನಡುವೆ ಸೇತುವೆಯಾಗಿ ಕಾರ್ಯನಿರ್ವಹಿಸುತ್ತವೆ ಎಂದು ಅವರು ಹೇಳಿದರು. ಲೋಕ ಅದಾಲತ್‌ ಗಳು ಮತ್ತು ಪೂರ್ವ-ವಿವಾದ ಇತ್ಯರ್ಥಗಳ ಮೂಲಕ ಲಕ್ಷಾಂತರ ವ್ಯಾಜ್ಯಗಳು ತ್ವರಿತವಾಗಿ, ಸೌಹಾರ್ದಯುತವಾಗಿ ಮತ್ತು ಕಡಿಮೆ ವೆಚ್ಚದಲ್ಲಿ ಪರಿಹಾರವಾಗುತ್ತಿರುವುದಕ್ಕೆ ಶ್ರೀ ಮೋದಿ ಅವರು ಸಂತೃಪ್ತಿ ವ್ಯಕ್ತಪಡಿಸಿದರು. ಭಾರತ ಸರ್ಕಾರವು ಪ್ರಾರಂಭಿಸಿದ 'ಕಾನೂನು ನೆರವು ರಕ್ಷಣಾ ಸಲಹಾ ವ್ಯವಸ್ಥೆ' (Legal Aid Defence Counsel System) ಅಡಿಯಲ್ಲಿ, ಕೇವಲ ಮೂರು ವರ್ಷಗಳಲ್ಲಿ ಸುಮಾರು 8 ಲಕ್ಷ ಕ್ರಿಮಿನಲ್ ಪ್ರಕರಣಗಳನ್ನು ಪರಿಹರಿಸಲಾಗಿದೆ ಎಂದು ಅವರು ಉಲ್ಲೇಖಿಸಿದರು. ಈ ಪ್ರಯತ್ನಗಳು ದೇಶಾದ್ಯಂತ ಇರುವ ಬಡವರು, ದಮನಿತರು, ವಂಚಿತರು ಮತ್ತು ಅಂಚಿನಲ್ಲಿರುವ ಜನರಿಗೆ ಸುಲಭವಾಗಿ ನ್ಯಾಯ ಸಿಗುವುದನ್ನು ಖಚಿತಪಡಿಸಿವೆ ಎಂದು ಅವರು ಹೇಳಿದರು.

ಕಳೆದ 11 ವರ್ಷಗಳಲ್ಲಿ, ಸರ್ಕಾರವು 'ವ್ಯಾಪಾರ ಸುಲಭಗೊಳಿಸುವಿಕೆ' (Ease of Doing Business) ಮತ್ತು 'ಜೀವನ ಸುಲಭಗೊಳಿಸುವಿಕೆ' (Ease of Living) ಹೆಚ್ಚಿಸುವುದರ ಮೇಲೆ ನಿರಂತರವಾಗಿ ಗಮನಹರಿಸಿದೆ ಎಂದು ಒತ್ತಿ ಹೇಳಿದ ಶ್ರೀ ಮೋದಿ ಅವರು, ವ್ಯವಹಾರಗಳಿಗೆ ಅಡ್ಡಿಯಾಗಿದ್ದ 40,000 ಕ್ಕೂ ಹೆಚ್ಚು ಅನಗತ್ಯ ಅನುಸರಣೆಗಳನ್ನು ತೆಗೆದುಹಾಕಲಾಗಿದೆ ಎಂದು ಹೇಳಿದರು. 'ಜನ ವಿಶ್ವಾಸ್ ಕಾಯ್ದೆ'ಯ ಮೂಲಕ, 3,400ಕ್ಕೂ ಹೆಚ್ಚು ಕಾನೂನು ನಿಬಂಧನೆಗಳನ್ನು ಅಪರಾಧಮುಕ್ತಗೊಳಿಸಲಾಗಿದೆ ಮತ್ತು 1,500ಕ್ಕೂ ಹೆಚ್ಚು ಬಳಕೆಯಲ್ಲಿಲ್ಲದ ಹಳೆಯ ಕಾನೂನುಗಳನ್ನು ರದ್ದುಪಡಿಸಲಾಗಿದೆ. ದೀರ್ಘಕಾಲದಿಂದ ಇದ್ದ ಕಾನೂನುಗಳನ್ನು ಈಗ 'ಭಾರತೀಯ ನ್ಯಾಯ ಸಂಹಿತಾ'ದೊಂದಿಗೆ ಬದಲಾಯಿಸಲಾಗಿದೆ ಎಂದು ಅವರು ಹೇಳಿದರು.

"ವ್ಯಾಪಾರ ಸುಲಭಗೊಳಿಸುವಿಕೆ ಮತ್ತು ಜೀವನ ಸುಲಭಗೊಳಿಸುವಿಕೆಗಳು ನಿಜವಾಗಿಯೂ ಸಾಧ್ಯವಾಗುವುದು 'ನ್ಯಾಯದ ಸುಲಭ ಲಭ್ಯತೆ'ಯನ್ನು ಖಚಿತಪಡಿಸಿಕೊಂಡಾಗ ಮಾತ್ರ. ಇತ್ತೀಚಿನ ವರ್ಷಗಳಲ್ಲಿ, ನ್ಯಾಯದ ಸುಲಭ ಲಭ್ಯತೆಯನ್ನು ಹೆಚ್ಚಿಸಲು ಹಲವಾರು ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಮತ್ತು ಮುಂದಿನ ದಿನಗಳಲ್ಲಿ, ನಾವು ಈ ದಿಕ್ಕಿನಲ್ಲಿ ಪ್ರಯತ್ನಗಳನ್ನು ಮತ್ತಷ್ಟು ಚುರುಕುಗೊಳಿಸುತ್ತೇವೆ" ಎಂದು ಪ್ರಧಾನಮಂತ್ರಿ ಅವರು ಪುನರುಚ್ಚರಿಸಿದರು.

ಈ ವರ್ಷ ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ (National Legal Services Authority - NALSA) ಸ್ಥಾಪನೆಯಾಗಿ 30 ವರ್ಷಗಳನ್ನು ಪೂರೈಸುತ್ತದೆ ಎಂದು ಉಲ್ಲೇಖಿಸಿದ ಪ್ರಧಾನಮಂತ್ರಿ ಅವರು, ಕಳೆದ ಮೂರು ದಶಕಗಳಲ್ಲಿ, NALSA ದೇಶದ ಹಿಂದುಳಿದ ನಾಗರಿಕರನ್ನು ನ್ಯಾಯಾಂಗದೊಂದಿಗೆ ಸಂಪರ್ಕಿಸಲು ಕೆಲಸ ಮಾಡಿದೆ ಎಂದರು. ಕಾನೂನು ಸೇವಾ ಪ್ರಾಧಿಕಾರಗಳನ್ನು ಸಂಪರ್ಕಿಸುವವರು ಅನೇಕ ವೇಳೆ ಸಂಪನ್ಮೂಲಗಳು, ಪ್ರಾತಿನಿಧ್ಯ ಮತ್ತು ಕೆಲವೊಮ್ಮೆ ಭರವಸೆಯನ್ನೂ ಸಹ ಹೊಂದಿರುವುದಿಲ್ಲ ಎಂದು ಅವರು ಗಮನಿಸಿದರು. ಅವರಿಗೆ ಭರವಸೆ ಮತ್ತು ಸಹಾಯವನ್ನು ಒದಗಿಸುವುದೇ NALSAದ ಹೆಸರಿನಲ್ಲಿರುವ "ಸೇವೆ" ಎಂಬ ಪದದ ನಿಜವಾದ ಅರ್ಥವಾಗಿದೆ ಎಂದು ಅವರು ಹೇಳಿದರು. NALSAದ ಪ್ರತಿಯೊಬ್ಬ ಸದಸ್ಯರು ತಾಳ್ಮೆ ಮತ್ತು ವೃತ್ತಿಪರತೆಯೊಂದಿಗೆ ಸೇವೆ ಸಲ್ಲಿಸುವುದನ್ನು ಮುಂದುವರಿಸುತ್ತಾರೆ ಎಂಬ ವಿಶ್ವಾಸವನ್ನು ಶ್ರೀ ಮೋದಿ ವ್ಯಕ್ತಪಡಿಸಿದರು.

NALSA ದ 'ಸಮುದಾಯ ಮಧ್ಯಸ್ಥಿಕೆ ತರಬೇತಿ ಘಟಕ' (Community Mediation Training Module)ಕ್ಕೆ ಚಾಲನೆ ನೀಡಿ ಮಾತನಾಡಿದ ಶ್ರೀ ಮೋದಿ ಅವರು, ಇದು ಸಂವಾದ ಮತ್ತು ಒಮ್ಮತದ ಮೂಲಕ ವಿವಾದಗಳನ್ನು ಬಗೆಹರಿಸುವ ಪ್ರಾಚೀನ ಭಾರತೀಯ ಸಂಪ್ರದಾಯವನ್ನು ಪುನರುಜ್ಜೀವನಗೊಳಿಸುತ್ತದೆ ಎಂದು ಹೇಳಿದರು. ಗ್ರಾಮ ಪಂಚಾಯಿತಿಗಳಿಂದ ಹಿಡಿದು ಗ್ರಾಮದ ಹಿರಿಯರವರೆಗೆ, ಮಧ್ಯಸ್ಥಿಕೆಯು ಯಾವಾಗಲೂ ಭಾರತೀಯ ನಾಗರಿಕತೆಯ ಒಂದು ಭಾಗವಾಗಿತ್ತು ಎಂದು ಅವರು ನುಡಿದರು. ಹೊಸ 'ಮಧ್ಯಸ್ಥಿಕೆ ಕಾಯ್ದೆ'ಯು (Mediation Act) ಈ ಸಂಪ್ರದಾಯವನ್ನು ಆಧುನಿಕ ಸ್ವರೂಪದಲ್ಲಿ ಮುಂದುವರಿಸಿಕೊಂಡು ಹೋಗುತ್ತಿದೆ ಎಂದು ಅವರು ಅಭಿಪ್ರಾಯಪಟ್ಟರು. ಈ ತರಬೇತಿ ಘಟಕವು ಸಮುದಾಯ ಮಧ್ಯಸ್ಥಿಕೆಗಳಿಗಾಗಿ ಸಂಪನ್ಮೂಲ ವ್ಯಕ್ತಿಗಳನ್ನು ಸಿದ್ಧಪಡಿಸಲು ನೆರವಾಗಲಿದ್ದು, ಇದು ವಿವಾದಗಳನ್ನು ಪರಿಹರಿಸಲು, ಸೌಹಾರ್ದತೆ ಕಾಪಾಡಲು ಮತ್ತು ವ್ಯಾಜ್ಯಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ಪ್ರಧಾನಮಂತ್ರಿ ಅವರು ವಿಶ್ವಾಸ ವ್ಯಕ್ತಪಡಿಸಿದರು.

ತಂತ್ರಜ್ಞಾನವು ನಿಸ್ಸಂದೇಹವಾಗಿ ಒಂದು ಬಹು ದೊಡ್ಡ ಬದಲಾವಣೆಯನ್ನು ತರುವ ಶಕ್ತಿಯಾಗಿದೆ, ಆದರೆ ಅದು ಜನಸ್ನೇಹಿ ದೃಷ್ಟಿಕೋನವನ್ನು ಹೊಂದಿದಾಗ, ಅದು ಪ್ರಜಾಸತ್ತಾತ್ಮಕಗೊಳಿಸುವಿಕೆಯ ಪ್ರಬಲ ಸಾಧನವಾಗುತ್ತದೆ ಎಂದು ಶ್ರೀ ಮೋದಿ ಅವರು ಒತ್ತಿ ಹೇಳಿದರು. ಯು.ಪಿ.ಐ (UPI) ಡಿಜಿಟಲ್ ಪಾವತಿ ವ್ಯವಸ್ಥೆಯಲ್ಲಿ ಹೇಗೆ ಕ್ರಾಂತಿಯನ್ನುಂಟುಮಾಡಿದೆ ಎಂಬುದನ್ನು ಅವರು ಉಲ್ಲೇಖಿಸಿ, ಅತ್ಯಂತ ಸಣ್ಣ ವ್ಯಾಪಾರಿಗಳೂ ಸಹ ಡಿಜಿಟಲ್ ಆರ್ಥಿಕತೆಯ ಭಾಗವಾಗಲು ಇದು ಹೇಗೆ ಅನುವು ಮಾಡಿಕೊಟ್ಟಿದೆ ಎಂದು ಬಣ್ಣಿಸಿದರು. ಗ್ರಾಮಗಳನ್ನು ಲಕ್ಷಾಂತರ ಕಿಲೋಮೀಟರ್ ಆಪ್ಟಿಕಲ್ ಫೈಬರ್ ಮೂಲಕ ಸಂಪರ್ಕಿಸಲಾಗಿದೆ ಮತ್ತು ಕೆಲವೇ ವಾರಗಳ ಹಿಂದೆ ಗ್ರಾಮೀಣ ಪ್ರದೇಶಗಳಲ್ಲಿ ಏಕಕಾಲದಲ್ಲಿ ಸುಮಾರು ಒಂದು ಲಕ್ಷ ಮೊಬೈಲ್ ಟವರ್‌ ಗಳನ್ನು ಉದ್ಘಾಟಿಸಲಾಗಿದೆ ಎಂದು ಅವರು ಗಮನಸೆಳೆದರು. ತಂತ್ರಜ್ಞಾನವು ಈಗ ಎಲ್ಲರನ್ನೂ ಒಳಗೊಳ್ಳುವ ಮತ್ತು ಸಬಲೀಕರಣದ ಮಾಧ್ಯಮವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಅವರು ಅಭಿಪ್ರಾಯಪಟ್ಟರು. ತಂತ್ರಜ್ಞಾನವು ನ್ಯಾಯಾಂಗ ಪ್ರಕ್ರಿಯೆಗಳನ್ನು ಹೇಗೆ ಆಧುನೀಕರಿಸುತ್ತದೆ ಮತ್ತು ಹೆಚ್ಚು ಜನಸ್ನೇಹಿಯಾಗಿಸುತ್ತದೆ (humanise) ಎಂಬುದಕ್ಕೆ 'ಇ-ಕೋರ್ಟ್ಸ್'  ಯೋಜನೆಯು ಒಂದು ಗಮನಾರ್ಹ ಉದಾಹರಣೆಯಾಗಿದೆ ಎಂದು ಪ್ರಧಾನಮಂತ್ರಿ ಅವರು ಉದಾಹರಿಸಿದರು. ಇ-ಫೈಲಿಂಗ್‌ನಿಂದ ಹಿಡಿದು ಎಲೆಕ್ಟ್ರಾನಿಕ್ ಸಮನ್ಸ್ ಸೇವೆಗಳವರೆಗೆ, ವರ್ಚುವಲ್ ವಿಚಾರಣೆಗಳಿಂದ ಹಿಡಿದು ವಿಡಿಯೋ ಕಾನ್ಫರೆನ್ಸಿಂಗ್‌ವರೆಗೆ, ತಂತ್ರಜ್ಞಾನವು ಎಲ್ಲವನ್ನೂ ಸರಳಗೊಳಿಸಿದೆ ಮತ್ತು ನ್ಯಾಯದ ಲಭ್ಯತೆಯನ್ನು ಸುಲಭಗೊಳಿಸಿದೆ ಎಂದು ಅವರು ಹೇಳಿದರು. ಇ-ಕೋರ್ಟ್ಸ್ ಯೋಜನೆಯ ಮೂರನೇ ಹಂತದ ಬಜೆಟ್‌ ಅನ್ನು ₹7,000 ಕೋಟಿಗೂ ಹೆಚ್ಚಿಗೆ ಏರಿಸಲಾಗಿದ್ದು, ಇದು ಈ ಉಪಕ್ರಮಕ್ಕೆ ಸರ್ಕಾರದ ಬಲವಾದ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ ಎಂದು ಅವರು ಮಾಹಿತಿ ನೀಡಿದರು.

ಕಾನೂನು ಅರಿವಿನ ಮಹತ್ವವನ್ನು ಒತ್ತಿ ಹೇಳಿದ ಪ್ರಧಾನಮಂತ್ರಿ ಅವರು, ಒಬ್ಬ ಬಡ ವ್ಯಕ್ತಿಗೆ ತನ್ನ ಹಕ್ಕುಗಳ ಬಗ್ಗೆ ಅರಿವಾಗುವವರೆಗೆ, ಕಾನೂನನ್ನು ಅರ್ಥಮಾಡಿಕೊಳ್ಳುವವರೆಗೆ ಮತ್ತು ವ್ಯವಸ್ಥೆಯ ಸಂಕೀರ್ಣತೆಯ ಬಗೆಗಿನ ಭಯವನ್ನು ನಿವಾರಿಸಿಕೊಳ್ಳುವವರೆಗೆ ಆತನು ನ್ಯಾಯವನ್ನು ಪಡೆಯಲು ಸಾಧ್ಯವಿಲ್ಲ ಎಂದು ಹೇಳಿದರು. ದುರ್ಬಲ ಗುಂಪುಗಳು, ಮಹಿಳೆಯರು ಮತ್ತು ಹಿರಿಯರಲ್ಲಿ ಕಾನೂನು ಅರಿವನ್ನು ಹೆಚ್ಚಿಸುವುದು ಒಂದು ಆದ್ಯತೆಯಾಗಿದೆ ಎಂದು ಅವರು ದೃಢಪಡಿಸಿದರು. ಈ ನಿಟ್ಟಿನಲ್ಲಿ ಕಾನೂನು ಸಂಸ್ಥೆಗಳು ಮತ್ತು ನ್ಯಾಯಾಂಗವು ಮಾಡುತ್ತಿರುವ ನಿರಂತರ ಪ್ರಯತ್ನಗಳನ್ನು ಪ್ರಧಾನಮಂತ್ರಿಯವರು ಶ್ಲಾಘಿಸಿದರು. ಇದರಲ್ಲಿ ಯುವಕರು, ವಿಶೇಷವಾಗಿ ಕಾನೂನು ವಿದ್ಯಾರ್ಥಿಗಳು ಪರಿವರ್ತನಾಶೀಲ ಪಾತ್ರವನ್ನು ವಹಿಸಬಲ್ಲರು ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು. ಕಾನೂನು ವಿದ್ಯಾರ್ಥಿಗಳು ಬಡವರು ಮತ್ತು ಗ್ರಾಮೀಣ ಸಮುದಾಯಗಳೊಂದಿಗೆ ಬೆರೆತು, ಅವರಿಗೆ ತಮ್ಮ ಕಾನೂನಾತ್ಮಕ ಹಕ್ಕುಗಳು ಮತ್ತು ಪ್ರಕ್ರಿಯೆಗಳನ್ನು ವಿವರಿಸಲು ಪ್ರೋತ್ಸಾಹಿಸಿದರೆ, ಅವರು ಸಮಾಜದ ನಾಡಿಮಿಡಿತವನ್ನು ನೇರವಾಗಿ ಅರಿಯಲು ಸಾಧ್ಯವಾಗುತ್ತದೆ ಎಂದು ಶ್ರೀ ಮೋದಿ ಸಲಹೆ ನೀಡಿದರು. ಸ್ವಸಹಾಯ ಗುಂಪುಗಳು, ಸಹಕಾರಿ ಸಂಘಗಳು, ಪಂಚಾಯತ್ ರಾಜ್ ಸಂಸ್ಥೆಗಳು ಮತ್ತು ಇತರ ಬಲಿಷ್ಠ ತಳಮಟ್ಟದ ಜಾಲಗಳೊಂದಿಗೆ ಕೆಲಸ ಮಾಡುವ ಮೂಲಕ, ಕಾನೂನು ಜ್ಞಾನವನ್ನು ಪ್ರತಿಯೊಬ್ಬರ ಮನೆ ಬಾಗಿಲಿಗೆ ತಲುಪಿಸಬಹುದು ಎಂದು ಅವರು ಹೇಳಿದರು. 

ತಮ್ಮ ಭಾಷಣದಲ್ಲಿ, ಕಾನೂನು ನೆರವಿನ ಮತ್ತೊಂದು ಮಹತ್ವದ ಅಂಶವನ್ನು ಪ್ರಧಾನಮಂತ್ರಿ ಅವರು ಪ್ರಮುಖವಾಗಿ ಪ್ರಸ್ತಾಪಿಸಿದರು, ಅದನ್ನು ಅವರು ಯಾವಾಗಲೂ ಒತ್ತಿ ಹೇಳುತ್ತಾರೆ: ನ್ಯಾಯವು, ಅದನ್ನು ಸ್ವೀಕರಿಸುವವರಿಗೆ ಅರ್ಥವಾಗುವ ಭಾಷೆಯಲ್ಲಿಯೇ ದೊರೆಯಬೇಕು. ಕಾನೂನುಗಳನ್ನು ರೂಪಿಸುವ ಹಂತದಲ್ಲಿಯೇ ಈ ತತ್ವವನ್ನು ಪರಿಗಣಿಸಬೇಕು ಎಂದು ಅವರು ಪ್ರತಿಪಾದಿಸಿದರು. "ಜನರು ತಮ್ಮದೇ ಭಾಷೆಯಲ್ಲಿ ಕಾನೂನನ್ನು ಅರಿತಾಗ, ಅವರು ಅದನ್ನು ಉತ್ತಮವಾಗಿ ಪಾಲಿಸುತ್ತಾರೆ ಮತ್ತು ವ್ಯಾಜ್ಯಗಳ ಸಂಖ್ಯೆಯೂ ಕಡಿಮೆಯಾಗುತ್ತದೆ," ಎಂದು ಅವರು ಹೇಳಿದರು. ತೀರ್ಪುಗಳು ಮತ್ತು ಕಾನೂನು ದಾಖಲೆಗಳು ಸ್ಥಳೀಯ ಭಾಷೆಗಳಲ್ಲಿ ಲಭ್ಯವಾಗಬೇಕು ಎಂಬುದನ್ನು ಅವರು ಗಟ್ಟಿಯಾಗಿ ಹೇಳಿದರು. 80,000 ಕ್ಕೂ ಹೆಚ್ಚು ತೀರ್ಪುಗಳನ್ನು 18 ಭಾರತೀಯ ಭಾಷೆಗಳಿಗೆ ಭಾಷಾಂತರಿಸುವ ಸುಪ್ರೀಂ ಕೋರ್ಟ್‌ನ ಉಪಕ್ರಮವನ್ನು ಶ್ರೀ ಮೋದಿ ಶ್ಲಾಘಿಸಿದರು. ಈ ಪ್ರಯತ್ನವು ಹೈಕೋರ್ಟ್‌ಗಳು ಮತ್ತು ಜಿಲ್ಲಾ ನ್ಯಾಯಾಲಯಗಳ ಮಟ್ಟದಲ್ಲಿಯೂ ಮುಂದುವರಿಯಲಿದೆ ಎಂಬ ದೃಢ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದರು.

ತಮ್ಮ ಭಾಷಣವನ್ನು ಮುಕ್ತಾಯಗೊಳಿಸುತ್ತಾ, "ರಾಷ್ಟ್ರವು 'ಅಭಿವೃದ್ಧಿ ಹೊಂದಿದ ದೇಶ' ಎಂದು ರೂಪುಗೊಂಡಾಗ, ಭಾರತದ ನ್ಯಾಯ ವಿತರಣಾ ವ್ಯವಸ್ಥೆಯ ಭವಿಷ್ಯ ಹೇಗಿರಬೇಕು ಎಂಬುದನ್ನು," ಕಾನೂನು ವೃತ್ತಿ, ನ್ಯಾಯಾಂಗ ಸೇವೆಗಳು ಮತ್ತು ನ್ಯಾಯ ವಿತರಣಾ ವ್ಯವಸ್ಥೆಯಲ್ಲಿರುವ ಎಲ್ಲಾ ಪಾಲುದಾರರು ಕಲ್ಪಿಸಿಕೊಳ್ಳಬೇಕೆಂದು ಪ್ರಧಾನಮಂತ್ರಿ ಅವರು ಕರೆ ನೀಡಿದರು. ಆ ದಿಕ್ಕಿನಲ್ಲಿ ಎಲ್ಲರೂ ಒಟ್ಟಾಗಿ ಸಾಗಬೇಕಾದ ಅಗತ್ಯವನ್ನು ಅವರು ಬಲವಾಗಿ ಪ್ರತಿಪಾದಿಸಿದರು. ಪ್ರಧಾನಮಂತ್ರಿ ಅವರು NALSA, ಇಡೀ ಕಾನೂನು ಸಮುದಾಯ ಮತ್ತು ನ್ಯಾಯ ವಿತರಣೆಗೆ ಸಂಬಂಧಿಸಿದ ಎಲ್ಲರನ್ನೂ ಅಭಿನಂದಿಸಿದರು ಮತ್ತು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ಭಾರತದ ಮುಖ್ಯ ನ್ಯಾಯಮೂರ್ತಿಗಳು, ನ್ಯಾಯಮೂರ್ತಿ ಶ್ರೀ ಬಿ.ಆರ್. ಗವಾಯಿ, ಕೇಂದ್ರ ಸಚಿವ ಶ್ರೀ ಅರ್ಜುನ್ ರಾಮ್ ಮೇಘವಾಲ್ ಮತ್ತು ಇತರ ಗಣ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಹಿನ್ನೆಲೆ

"ಕಾನೂನು ನೆರವು ವಿತರಣಾ ಕಾರ್ಯವಿಧಾನಗಳನ್ನು ಬಲಪಡಿಸುವುದು" ಕುರಿತ ರಾಷ್ಟ್ರೀಯ ಸಮ್ಮೇಳನವು NALSA ದಿಂದ ಆಯೋಜಿಸಲ್ಪಟ್ಟ ಎರಡು ದಿನಗಳ ಸಮ್ಮೇಳನವಾಗಿದೆ. ಇದು ಕಾನೂನು ನೆರವು ರಕ್ಷಣಾ ಸಲಹಾ ವ್ಯವಸ್ಥೆ (Legal Aid Defense Counsel System), ಪ್ಯಾನೆಲ್ ವಕೀಲರು, ಅರೆ-ಕಾನೂನು ಸ್ವಯಂಸೇವಕರು, ಖಾಯಂ ಲೋಕ ಅದಾಲತ್‌ ಗಳು ಮತ್ತು ಕಾನೂನು ಸೇವಾ ಸಂಸ್ಥೆಗಳ ಆರ್ಥಿಕ ನಿರ್ವಹಣೆಯಂತಹ ಕಾನೂನು ಸೇವೆಗಳ ಚೌಕಟ್ಟಿನ ಪ್ರಮುಖ ಅಂಶಗಳ ಕುರಿತು ಚರ್ಚಿಸಲು ಆಯೋಜಿಸಲಾಗಿದೆ.

 

 

*****


(Release ID: 2187904) Visitor Counter : 4