ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ರಾಷ್ಟ್ರೀಯ ರೋಜ್‌ಗಾರ್ ಮೇಳವನ್ನುದ್ದೇಶಿಸಿ ಪ್ರಧಾನಮಂತ್ರಿ ಭಾಷಣ


ವಿವಿಧ ಸರ್ಕಾರಿ ಇಲಾಖೆಗಳು ಮತ್ತು ಸಂಸ್ಥೆಗಳಿಗೆ ಹೊಸದಾಗಿ ಸೇರ್ಪಡೆಯಾದ ಸುಮಾರು 71,000 ಅಭ್ಯರ್ಥಿಗಳಿಗೆ ನೇಮಕಾತಿ ಪತ್ರಗಳನ್ನು ವಿತರಿಸಲಾಯಿತು

"ಇಂದು ಭಾರತವು ಅತಿ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯಾಗಿದೆ"

"ಇಂದಿನ ಹೊಸ ಭಾರತವು ಹೊಸ ಸಾಧ್ಯತೆಗಳಿಗೆ ಬಾಗಿಲು ತೆರೆದಿರುವ ನೀತಿಗಳು ಮತ್ತು ಕಾರ್ಯತಂತ್ರಗಳೊಂದಿಗೆ ಮುನ್ನಡೆಯುತ್ತಿದೆ"

"2014ರ ನಂತರ, ಹಿಂದಿನ ಸಮಯದ ಪ್ರತಿಕ್ರಿಯಾತ್ಮಕ ನಿಲುವಿಗೆ ವಿರುದ್ಧವಾಗಿ ಭಾರತವು ಸಕ್ರಿಯ ವಿಧಾನವನ್ನು ಅಳವಡಿಸಿಕೊಂಡಿದೆ"

"21ನೇ ಶತಮಾನದ ಮೂರನೇ ದಶಕವು ಹಿಂದೆ ಊಹಿಸಲೂ ಸಾಧ್ಯವಾಗದ ಉದ್ಯೋಗ ಮತ್ತು ಸ್ವಯಂ ಉದ್ಯೋಗದ ಅವಕಾಶಗಳಿಗೆ ಸಾಕ್ಷಿಯಾಗಿದೆ"

"ಆತ್ಮನಿರ್ಭರ ಭಾರತ ಅಭಿಯಾನದ ಚಿಂತನೆ ಮತ್ತು ವಿಧಾನವು ಸ್ವದೇಶಿ ಮತ್ತು 'ಸ್ಥಳೀಯ ಉತ್ಪನ್ನಗಳಿಗೆ ದನಿ' ಅಳವಡಿಸಿಕೊಳ್ಳುವುದಕ್ಕಿಂತ ಹೆಚ್ಚಿನದಾಗಿದೆ. ಆತ್ಮನಿರ್ಭರ ಭಾರತ ಅಭಿಯಾನವು ಹಳ್ಳಿಗಳಿಂದ ನಗರಗಳವರೆಗೆ ಕೋಟ್ಯಂತರ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಒಂದು 'ಅಭಿಯಾನ'ವಾಗಿದೆ"

"ರಸ್ತೆಗಳು ಹಳ್ಳಿಗಳನ್ನು ತಲುಪಿದಾಗ, ಅದು ಇಡೀ ಪರಿಸರ ವ್ಯವಸ್ಥೆಯಲ್ಲಿ ವೇಗವಾಗಿ ಉದ್ಯೋಗ ಸೃಷ್ಟಿಗೆ ಕಾರಣವಾಗುತ್ತದೆ"

"ಸರ್ಕಾರಿ ಸೇವಕರಾಗಿ, ನೀವು ಸಾಮಾನ್ಯ ನಾಗರಿಕರಾಗಿ ನೀವು ಅನುಭವಿಸುತ್ತಿದ್ದ ವಿಷಯಗಳನ್ನು ಯಾವಾಗಲೂ ನೆನಪಿಟ್ಟುಕೊಳ್ಳಬೇಕು"

Posted On: 13 APR 2023 12:03PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ದೃಶ್ಯ ಸಂವಾದದ (ವಿಡಿಯೋ ಕಾನ್ಫರೆನ್ಸಿಂಗ್) ಮೂಲಕ ರಾಷ್ಟ್ರೀಯ ಉದ್ಯೋಗ ಮೇಳವನ್ನು ಉದ್ದೇಶಿಸಿ ಮಾತನಾಡಿದರು. ವಿವಿಧ ಸರ್ಕಾರಿ ಇಲಾಖೆಗಳು ಮತ್ತು ಸಂಸ್ಥೆಗಳಲ್ಲಿ ಹೊಸದಾಗಿ ನೇಮಕಗೊಂಡ ಸುಮಾರು 71,000 ಅಭ್ಯರ್ಥಿಗಳಿಗೆ ನೇಮಕಾತಿ ಪತ್ರಗಳನ್ನು ವಿತರಿಸಿದರು.

ದೇಶಾದ್ಯಂತ ಆಯ್ಕೆಯಾದ ಹೊಸ ನೇಮಕಾತಿದಾರರು ರೈಲು ವ್ಯವಸ್ಥಾಪಕ, ನಿಲ್ದಾಣದ ಮುಖ್ಯಸ್ಥ, ಹಿರಿಯ ವಾಣಿಜ್ಯ ಮತ್ತು ಟಿಕೆಟ್ ಗುಮಾಸ್ತ, ಪರಿವೀಕ್ಷಕ, ಉಪ ಪರಿವೀಕ್ಷಕ, ಪೋಲೀಸ್ ಸಿಬ್ಬಂದಿ, ಶೀಘ್ರಲಿಪಿಗಾರ, ಕಿರಿಯ ಲೆಕ್ಕಿಗ, ಅಂಚೆ ಸಹಾಯಕ, ಆದಾಯ ತೆರಿಗೆ ಪರಿವೀಕ್ಷಕ, ತೆರಿಗೆ ಸಹಾಯಕ, ಹಿರಿಯ ನಕ್ಷಾಕಾರ, ಕಿರಿಯ ತಂತ್ರಜ್ಞ/ಮೇಲ್ವಿಚಾರಕ, ಸಹಾಯಕ ಪ್ರಾಧ್ಯಾಪಕ, ಶಿಕ್ಷಕ, ಗ್ರಂಥಪಾಲಕ, ದಾದಿ, ಪ್ರೊಬೇಷನರಿ ಅಧಿಕಾರಿಗಳು (ಪರೀಕ್ಷಾರ್ಥ ಅಧಿಕಾರಿ), ವೈಯಕ್ತಿಕ ಸಹಾಯಕ, ವಿವಿಧ ಸೇವೆಗಳ ನೌಕರರು, ಸೇರಿದಂತೆ ಭಾರತ ಸರ್ಕಾರದ ವಿವಿಧ ಸ್ಥಾನ/ ಹುದ್ದೆಗಳಿಗೆ ಸೇರಲಿದ್ದಾರೆ.

ಹೊಸದಾಗಿ ನೇಮಕಗೊಂಡವರು ವಿವಿಧ ಸರ್ಕಾರಿ ಇಲಾಖೆಗಳ ಎಲ್ಲ ಹೊಸ ನೇಮಕಾತಿದಾರರಿಗಾಗಿ ಇರುವ ಕರ್ಮಯೋಗಿ ಪ್ರಾರಂಭ ಎಂಬ ಆನ್‌ಲೈನ್ ಆಧಾರಿತ ಕೋರ್ಸ್ ಮೂಲಕ ತರಬೇತಿ ಪಡೆಯಲು ಸಾಧ್ಯವಾಗುತ್ತದೆ. ಪ್ರಧಾನಮಂತ್ರಿಗಳ ಭಾಷಣದ ಸಂದರ್ಭದಲ್ಲಿ 45 ಸ್ಥಳಗಳನ್ನು ಈ ಮೇಳದೊಂದಿಗೆ ಸಂಪರ್ಕಿಸಲಾಗಿತ್ತು.

ಸಭೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು, ಬೈಸಾಖಿಯ ಶುಭ ಸಂದರ್ಭದಲ್ಲಿ ದೇಶಕ್ಕೆ ಶುಭಾಶಯ ಕೋರಿದರು. ನೇಮಕಾತಿ ಪತ್ರಗಳನ್ನು ಪಡೆದ ಅಭ್ಯರ್ಥಿಗಳಿಗೆ ಮತ್ತು ಅವರ ಕುಟುಂಬಗಳಿಗೆ ಅವರು ಅಭಿನಂದನೆ ಸಲ್ಲಿಸಿದರು.

ಅಭಿವೃದ್ಧಿ ಹೊಂದಿದ ಭಾರತದ ಸಂಕಲ್ಪಗಳನ್ನು ಸಾಧಿಸಲು ಯುವಕರ ಪ್ರತಿಭೆ ಮತ್ತು ಶಕ್ತಿಗೆ ಸರಿಯಾದ ಅವಕಾಶಗಳನ್ನು ಒದಗಿಸಲು ಸರ್ಕಾರ ಬದ್ಧವಾಗಿದೆ ಎಂದು ಪ್ರಧಾನಮಂತ್ರಿಯವರು ಹೇಳಿದರು. ಗುಜರಾತ್‌ನಿಂದ ಅಸ್ಸಾಂ ಮತ್ತು ಉತ್ತರ ಪ್ರದೇಶದಿಂದ ಮಹಾರಾಷ್ಟ್ರದವರೆಗೆ ಎನ್‌ಡಿಎ ಆಡಳಿತದ ರಾಜ್ಯಗಳಲ್ಲಿ ಸರ್ಕಾರಿ ನೇಮಕಾತಿ ಪ್ರಕ್ರಿಯೆ ವೇಗವಾಗಿ ನಡೆಯುತ್ತಿದೆ ಎಂದು ಪ್ರಧಾನಮಂತ್ರಿಯವರು ಎತ್ತಿ ತೋರಿಸಿದರು. ನಿನ್ನೆ ಮಧ್ಯಪ್ರದೇಶದಲ್ಲಿ ಮಾತ್ರ 22,000 ಕ್ಕೂ ಹೆಚ್ಚು ಶಿಕ್ಷಕರಿಗೆ ನೇಮಕಾತಿ ಪತ್ರಗಳನ್ನು ಹಸ್ತಾಂತರಿಸಲಾಗಿದೆ ಎಂದು ಅವರು ಗಮನಿಸಿದರು. "ಈ ಉದ್ಯೋಗ ಮೇಳವು ದೇಶದ ಯುವಕರ ಬಗ್ಗೆ ನಮ್ಮ ಬದ್ಧತೆಗೆ ಪುರಾವೆಯಾಗಿದೆ."

ಭಾರತವು ವಿಶ್ವದ ಅತಿ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಗಳಲ್ಲಿ ಒಂದಾಗಿದೆ ಎಂದು ಗಮನಿಸಿದ ಪ್ರಧಾನಮಂತ್ರಿಯವರು, ಆರ್ಥಿಕ ಹಿಂಜರಿತ ಮತ್ತು ಸಾಂಕ್ರಾಮಿಕ ರೋಗದ ಜಾಗತಿಕ ಸವಾಲುಗಳ ನಡುವೆ ವಿಶ್ವವು ಭಾರತವನ್ನು ಉಜ್ವಲ ತಾಣವಾಗಿ ನೋಡುತ್ತಿದೆ ಎಂದು ಹೇಳಿದರು. "ಇಂದಿನ ಹೊಸ ಭಾರತವು ಹೊಸ ಸಾಧ್ಯತೆಗಳಿಗೆ ಬಾಗಿಲು ತೆರೆದಿರುವ ನೀತಿಗಳು ಮತ್ತು ಕಾರ್ಯತಂತ್ರಗಳೊಂದಿಗೆ ಮುನ್ನಡೆಯುತ್ತಿದೆ" ಎಂದು ಅವರು ಹೇಳಿದರು. 2014 ರ ನಂತರ, ಹಿಂದಿನ ಸಮಯದ ಪ್ರತಿಕ್ರಿಯಾತ್ಮಕ ನಿಲುವಿಗೆ ವಿರುದ್ಧವಾಗಿ ಭಾರತವು ಸಕ್ರಿಯ ವಿಧಾನವನ್ನು ಅಳವಡಿಸಿಕೊಂಡಿದೆ ಎಂದು ಅವರು ಹೇಳಿದರು. "ಇದರ ಪರಿಣಾಮವಾಗಿ, 21 ನೇ ಶತಮಾನದ ಈ ಮೂರನೇ ದಶಕವು ಹಿಂದೆ ಊಹಿಸಲೂ ಸಾಧ್ಯವಾಗದ ಉದ್ಯೋಗ ಮತ್ತು ಸ್ವಯಂ ಉದ್ಯೋಗದ ಅವಕಾಶಗಳಿಗೆ ಸಾಕ್ಷಿಯಾಗಿದೆ. ಹತ್ತು ವರ್ಷಗಳ ಹಿಂದೆ ಅಸ್ತಿತ್ವದಲ್ಲಿಲ್ಲದ ವಲಯಗಳನ್ನು ಯುವಕರು ಕಂಡುಕೊಳ್ಳುತ್ತಿದ್ದಾರೆ" ಎಂದು ಪ್ರಧಾನಮಂತ್ರಿಯವರು ಹೇಳಿದರು. ನವೋದ್ಯಮಗಳು (ಸ್ಟಾರ್ಟ್‌ಅಪ್‌ಗಳು) ಮತ್ತು ಭಾರತೀಯ ಯುವಕರ ಉತ್ಸಾಹದ ಉದಾಹರಣೆಗಳನ್ನು ನೀಡಿದ ಪ್ರಧಾನಮಂತ್ರಿಯವರು, ನವೋದ್ಯಮಗಳು 40 ಲಕ್ಷಕ್ಕೂ ಹೆಚ್ಚು ನೇರ ಅಥವಾ ಪರೋಕ್ಷ ಉದ್ಯೋಗಗಳನ್ನು ಸೃಷ್ಟಿಸಿವೆ ಎಂದು ಹೇಳಿದ ವರದಿಯನ್ನು ಉಲ್ಲೇಖಿಸಿದರು. ಉದ್ಯೋಗದ ಹೊಸ ಮಾರ್ಗಗಳಾಗಿ ಅವರು ಮಾನವ ರಹಿತ ವಿಮಾನಗಳು (ಡ್ರೋನ್‌ಗಳು) ಮತ್ತು ಕ್ರೀಡಾ ವಲಯವನ್ನು ಸಹ ಉಲ್ಲೇಖಿಸಿದರು.

ಪ್ರಧಾನಮಂತ್ರಿಯವರು ಹೀಗೆ ಹೇಳಿದರು: "ಆತ್ಮನಿರ್ಭರ ಭಾರತ ಅಭಿಯಾನದ ಚಿಂತನೆ ಮತ್ತು ವಿಧಾನವು ಸ್ವದೇಶಿ ಉತ್ಪನ್ನಗಳನ್ನು ಅಳವಡಿಸಿಕೊಳ್ಳುವುದು ಮತ್ತು 'ಸ್ಥಳೀಯ ಉತ್ಪನ್ನಗಳಿಗೆ ದನಿ' ನೀಡುವುದಕ್ಕಿಂತ ಹೆಚ್ಚಿನದಾಗಿದೆ. ಆತ್ಮನಿರ್ಭರ ಭಾರತ ಅಭಿಯಾನವು ಹಳ್ಳಿಗಳಿಂದ ನಗರಗಳವರೆಗೆ ಕೋಟ್ಯಂತರ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಒಂದು ಅಭಿಯಾನವಾಗಿದೆ." ಸ್ವದೇಶಿ ನಿರ್ಮಿತ ಆಧುನಿಕ ಉಪಗ್ರಹಗಳು ಮತ್ತು ಅರೆ-ಅತಿವೇಗದ ರೈಲುಗಳ ಉದಾಹರಣೆಗಳನ್ನು ಅವರು ನೀಡಿದರು. ಕಳೆದ 8-9 ವರ್ಷಗಳಲ್ಲಿ ಭಾರತದಲ್ಲಿ 30,000 ಕ್ಕೂ ಹೆಚ್ಚು ಎಲ್‌ಎಚ್‌ಬಿ ರೈಲು ಬೋಗಿಗಳನ್ನು ತಯಾರಿಸಲಾಗಿದೆ ಎಂದು ಅವರು ಹೇಳಿದರು. ಈ ಬೋಗಿಗಳಿಗೆ ಬೇಕಾದ ತಂತ್ರಜ್ಞಾನ ಮತ್ತು ಕಚ್ಚಾ ವಸ್ತುಗಳು ಭಾರತದಲ್ಲಿ ಸಾವಿರಾರು ಉದ್ಯೋಗಗಳನ್ನು ಸೃಷ್ಟಿಸಿವೆ.

ಭಾರತದ ಆಟಿಕೆಗಳ ಉದ್ಯಮದ ಉದಾಹರಣೆಯನ್ನು ನೀಡಿದ ಪ್ರಧಾನಮಂತ್ರಿಯವರು, ದಶಕಗಳಿಂದ ಭಾರತದ ಮಕ್ಕಳು ಆಮದು ಮಾಡಿಕೊಂಡ ಆಟಿಕೆಗಳೊಂದಿಗೆ ಮಾತ್ರ ಆಡುತ್ತಿದ್ದರು ಎಂದು ಹೇಳಿದರು. ಆ ಆಟಿಕೆಗಳು ಉತ್ತಮ ಗುಣಮಟ್ಟದವೂ ಆಗಿರಲಿಲ್ಲ ಅಥವಾ ಭಾರತೀಯ ಮಕ್ಕಳನ್ನು ಗಮನದಲ್ಲಿಟ್ಟುಕೊಂಡು ವಿನ್ಯಾಸಗೊಳಿಸಲ್ಪಟ್ಟವೂ ಆಗಿರಲಿಲ್ಲ ಎಂದು ಅವರು ಹೇಳಿದರು. ಆಮದು ಮಾಡಿಕೊಂಡ ಆಟಿಕೆಗಳ ಗುಣಮಟ್ಟದ ಮಾನದಂಡಗಳನ್ನು ಸರ್ಕಾರವು ನಿಗದಿಪಡಿಸಿತು ಮತ್ತು ಸ್ಥಳೀಯ ಆಟಿಕೆ ಉದ್ಯಮವನ್ನು ಉತ್ತೇಜಿಸಲು ಪ್ರಾರಂಭಿಸಿತು ಎಂದು ಪ್ರಧಾನಮಂತ್ರಿಯವರು ತಿಳಿಸಿದರು. ಪರಿಣಾಮವಾಗಿ, ಭಾರತದಲ್ಲಿ ಆಟಿಕೆ ಉದ್ಯಮದ ಸ್ವರೂಪವು ಸಂಪೂರ್ಣವಾಗಿ ರೂಪಾಂತರಗೊಂಡಿದೆ ಮತ್ತು ಹಲವಾರು ಉದ್ಯೋಗಾವಕಾಶಗಳನ್ನು ಸೃಷ್ಟಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂದು ಪ್ರಧಾನಮಂತ್ರಿಯವರು ಹೇಳಿದರು.

ಭಾರತದಲ್ಲಿ ರಕ್ಷಣಾ ಉಪಕರಣಗಳನ್ನು ಕೇವಲ ಆಮದು ಮಾಡಿಕೊಳ್ಳಬಹುದು ಎಂಬ ದಶಕಗಳ ಹಳೆಯ ಪ್ರಬಲ ಮನಸ್ಥಿತಿಯನ್ನು ಎದುರಿಸಿದ ಪ್ರಧಾನಮಂತ್ರಿಯವರು, ಸ್ವದೇಶಿ ತಯಾರಕರ ಮೇಲೆ ವಿಶ್ವಾಸವಿಡುವ ಮೂಲಕ ಸರ್ಕಾರವು ಈ ವಿಧಾನವನ್ನು ಬದಲಾಯಿಸಿತು, ಇದರ ಪರಿಣಾಮವಾಗಿ ಸಶಸ್ತ್ರ ಪಡೆಗಳು ಭಾರತದಲ್ಲಿ ಮಾತ್ರ ತಯಾರಿಸಲ್ಪಡುವ 300 ಕ್ಕೂ ಹೆಚ್ಚು ಉಪಕರಣಗಳು ಮತ್ತು ಶಸ್ತ್ರಾಸ್ತ್ರಗಳ ಪಟ್ಟಿಯನ್ನು ಸಿದ್ಧಪಡಿಸಿವೆ ಎಂದು ಎತ್ತಿ ತೋರಿಸಿದರು. ₹15,000 ಕೋಟಿ ಮೌಲ್ಯದ ರಕ್ಷಣಾ ಉಪಕರಣಗಳನ್ನು ಪ್ರಪಂಚದಾದ್ಯಂತ ರಫ್ತು ಮಾಡಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದರು.

ಕಳೆದ ಕೆಲವು ವರ್ಷಗಳಲ್ಲಿ ಮೊಬೈಲ್ ದೂರವಾಣಿಗಳ ತಯಾರಿಕಾ ಕ್ಷೇತ್ರದಲ್ಲಿ ಮಾಡಿದ ಪ್ರಗತಿಯನ್ನು ಶ್ರೀ ಮೋದಿ ಉಲ್ಲೇಖಿಸಿದರು. ಸ್ಥಳೀಯ ತಯಾರಿಕೆಯನ್ನು ಪ್ರೋತ್ಸಾಹಿಸುವ ಮೂಲಕ ಮತ್ತು ಅದಕ್ಕಾಗಿ ಉತ್ತೇಜನಗಳನ್ನು ನೀಡುವ ಮೂಲಕ, ಭಾರತವು ಹೆಚ್ಚಿನ ವಿದೇಶಿ ವಿನಿಮಯವನ್ನು ಉಳಿಸಿದೆ, ಏಕೆಂದರೆ ಭಾರತವು ಈಗ ಸ್ಥಳೀಯ ಬೇಡಿಕೆಯನ್ನು ಪೂರೈಸುವುದರ ಜೊತೆಗೆ ಮೊಬೈಲ್ ದೂರವಾಣಿಗಳನ್ನು ರಫ್ತು ಮಾಡುತ್ತಿದೆ ಎಂದು ಅವರು ಹೇಳಿದರು.

ಉದ್ಯೋಗ ಸೃಷ್ಟಿಯಲ್ಲಿ ಮೂಲಸೌಕರ್ಯದಲ್ಲಿನ ಹೂಡಿಕೆಯ ಪಾತ್ರವನ್ನು ಸಹ ಪ್ರಧಾನಮಂತ್ರಿಯವರು ಎತ್ತಿ ತೋರಿಸಿದರು. ಬಂಡವಾಳ ವೆಚ್ಚಕ್ಕೆ ಒತ್ತು ನೀಡುವುದರಿಂದ ರಸ್ತೆಗಳು, ರೈಲ್ವೆಗಳು, ಬಂದರುಗಳು ಮತ್ತು ಕಟ್ಟಡಗಳಂತಹ ಮೂಲಸೌಕರ್ಯಗಳನ್ನು ಸೃಷ್ಟಿಸಲಾಗುತ್ತಿದೆ ಎಂದು ಅವರು ಹೇಳಿದರು. ಮೂಲಸೌಕರ್ಯದ ಉದ್ಯೋಗ ಸಾಮರ್ಥ್ಯವನ್ನು ಎತ್ತಿ ತೋರಿಸಿದ ಪ್ರಧಾನಮಂತ್ರಿಯವರು, ಪ್ರಸ್ತುತ ಸರ್ಕಾರದ ಅವಧಿಯಲ್ಲಿ ಬಂಡವಾಳ ವೆಚ್ಚವು ನಾಲ್ಕು ಪಟ್ಟು ಹೆಚ್ಚಾಗಿದೆ ಎಂದು ಮಾಹಿತಿ ನೀಡಿದರು.

2014 ಕ್ಕಿಂತ ಮೊದಲು ಮತ್ತು ನಂತರದ ಬೆಳವಣಿಗೆಗಳ ಉದಾಹರಣೆಗಳನ್ನು ನೀಡಿದ ಪ್ರಧಾನಮಂತ್ರಿಯವರು, ಭಾರತೀಯ ರೈಲ್ವೆಯನ್ನು ಉಲ್ಲೇಖಿಸಿದರು ಮತ್ತು 2014ರ ಮೊದಲು ಕಳೆದ ಏಳು ದಶಕಗಳಲ್ಲಿ ಕೇವಲ 20,000 ಕಿಲೋಮೀಟರ್ ರೈಲು ಮಾರ್ಗಗಳ ವಿದ್ಯುದ್ದೀಕರಣ ನಡೆದಿದ್ದರೆ, ಕಳೆದ 9 ವರ್ಷಗಳಲ್ಲಿ 40,000 ಕಿಲೋಮೀಟರ್ ರೈಲು ಮಾರ್ಗಗಳನ್ನು ವಿದ್ಯುದ್ದೀಕರಿಸಲಾಗಿದೆ ಎಂದು ಹೇಳಿದರು. ಮೆಟ್ರೋ ರೈಲು ಮಾರ್ಗಗಳ ಅಳವಡಿಕೆಯು 2014ರ ಮೊದಲು ತಿಂಗಳಿಗೆ 600 ಮೀಟರ್‌ನಿಂದ ಇಂದು ತಿಂಗಳಿಗೆ 6 ಕಿಲೋಮೀಟರ್‌ಗೆ ಹೆಚ್ಚಾಗಿದೆ ಎಂದು ಅವರು ತಿಳಿಸಿದರು. 2014ರ ಮೊದಲು ದೇಶದಲ್ಲಿ ಅನಿಲ ಜಾಲವು 70 ಕ್ಕಿಂತ ಕಡಿಮೆ ಜಿಲ್ಲೆಗಳಿಗೆ ಸೀಮಿತವಾಗಿತ್ತು, ಆದರೆ ಇಂದು ಈ ಸಂಖ್ಯೆ 630 ಜಿಲ್ಲೆಗಳಿಗೆ ಏರಿದೆ ಎಂದು ಅವರು ಹೇಳಿದರು. ಗ್ರಾಮೀಣ ಪ್ರದೇಶಗಳಲ್ಲಿನ ರಸ್ತೆಗಳ ಉದ್ದದ ಬಗ್ಗೆ ಮಾತನಾಡಿದ ಪ್ರಧಾನಮಂತ್ರಿಯವರು, ಅದು 2014ರ ನಂತರ 4 ಲಕ್ಷ ಕಿಲೋಮೀಟರ್‌ಗಳಿಂದ 7 ಲಕ್ಷ ಕಿಲೋಮೀಟರ್‌ಗೆ ಹೆಚ್ಚಾಗಿದೆ ಎಂದು ಗಮನಿಸಿದರು. "ರಸ್ತೆಗಳು ಹಳ್ಳಿಗಳನ್ನು ತಲುಪಿದಾಗ, ಅದು ಇಡೀ ಪರಿಸರ ವ್ಯವಸ್ಥೆಯಲ್ಲಿ ವೇಗವಾಗಿ ಉದ್ಯೋಗ ಸೃಷ್ಟಿಗೆ ಕಾರಣವಾಗುತ್ತದೆ" ಎಂದು ಅವರು ಹೇಳಿದರು.

ವಾಯುಯಾನ ವಲಯದ ಬಗ್ಗೆ ಮಾತನಾಡಿದ ಶ್ರೀ ಮೋದಿ, 2014ರಲ್ಲಿ 74 ಇದ್ದ ವಿಮಾನ ನಿಲ್ದಾಣಗಳ ಸಂಖ್ಯೆ ಇಂದು 148ಕ್ಕೆ ಬೆಳೆದಿದೆ ಎಂದು ತಿಳಿಸಿದರು. ವಿಮಾನ ನಿಲ್ದಾಣದ ಕಾರ್ಯಾಚರಣೆಗಳ ಉದ್ಯೋಗ ಸಾಮರ್ಥ್ಯದ ಕಡೆಗೆ ಅವರು ಗಮನ ಸೆಳೆದರು. ಏರ್ ಇಂಡಿಯಾದ ದಾಖಲೆಯ ವಿಮಾನಗಳ ಬೇಡಿಕೆ ಮತ್ತು ಕೆಲವು ಇತರ ಕಂಪನಿಗಳ ಇದೇ ರೀತಿಯ ಯೋಜನೆಗಳನ್ನು ಅವರು ಉಲ್ಲೇಖಿಸಿದರು. ಬಂದರು ವಲಯದಲ್ಲಿಯೂ ಇದೇ ರೀತಿಯ ಪ್ರಗತಿ ಕಂಡುಬರುತ್ತಿದೆ, ಸರಕು ನಿರ್ವಹಣೆಯು ಹಿಂದಿನದಕ್ಕೆ ಹೋಲಿಸಿದರೆ ದುಪ್ಪಟ್ಟಾಗಿದೆ ಮತ್ತು ಸಮಯವನ್ನು ಅರ್ಧಕ್ಕೆ ಇಳಿಸಲಾಗಿದೆ ಎಂದು ಅವರು ಹೇಳಿದರು. ಈ ಬೆಳವಣಿಗೆಗಳು ದೊಡ್ಡ ಸಂಖ್ಯೆಯ ಉದ್ಯೋಗಗಳನ್ನು ಸೃಷ್ಟಿಸುತ್ತಿವೆ.
ಆರೋಗ್ಯ ವಲಯಕ್ಕೆ ಬದಲಾಯಿಸಿದ ಪ್ರಧಾನಮಂತ್ರಿಯವರು, 2014 ರ ಮೊದಲು ದೇಶದಲ್ಲಿ 400 ಕ್ಕಿಂತ ಕಡಿಮೆ ವೈದ್ಯಕೀಯ ಕಾಲೇಜುಗಳು ಇದ್ದವು, ಆದರೆ ಇಂದು 660 ವೈದ್ಯಕೀಯ ಕಾಲೇಜುಗಳಿವೆ ಎಂದು ಹೇಳಿದರು. ಅದೇ ರೀತಿ, ಪದವಿಪೂರ್ವ ವೈದ್ಯಕೀಯ ಸೀಟುಗಳು 2014ರಲ್ಲಿ 50 ಸಾವಿರದಿಂದ ಇಂದು 1 ಲಕ್ಷಕ್ಕಿಂತ ಹೆಚ್ಚು ಬೆಳೆದಿವೆ ಮತ್ತು ಇಂದು ಪದವಿ ಪಡೆಯುವ ವೈದ್ಯರ ಸಂಖ್ಯೆ ದುಪ್ಪಟ್ಟಾಗಿದೆ.

ಗ್ರಾಮೀಣ ಪ್ರದೇಶಗಳಲ್ಲಿ, ಪ್ರಧಾನಮಂತ್ರಿಯವರು ಮುಂದುವರಿಸಿದರು, ರೈತ ಉತ್ಪಾದಕ ಸಂಸ್ಥೆಗಳು (FPOs) ಮತ್ತು ಸ್ವಸಹಾಯ ಗುಂಪುಗಳಿಗೆ ಲಕ್ಷಾಂತರ ಕೋಟಿ ಮೌಲ್ಯದ ಸಹಾಯ ದೊರೆಯುತ್ತಿದೆ, ಶೇಖರಣಾ ಸಾಮರ್ಥ್ಯವನ್ನು ಹೆಚ್ಚಿಸಲಾಗುತ್ತಿದೆ, 2014ರ ನಂತರ 3 ಲಕ್ಷಕ್ಕೂ ಹೆಚ್ಚು ಸಾಮಾನ್ಯ ಸೇವಾ ಕೇಂದ್ರಗಳನ್ನು ರಚಿಸಲಾಗಿದೆ, 6 ಲಕ್ಷ ಕಿಲೋಮೀಟರ್‌ಗಿಂತ ಹೆಚ್ಚು ಆಪ್ಟಿಕಲ್ ಫೈಬರ್ ಅನ್ನು ಹಳ್ಳಿಗಳಲ್ಲಿ ಅಳವಡಿಸಲಾಗಿದೆ, ಪಿಎಂಎವೈ ಅಡಿಯಲ್ಲಿ 3 ಕೋಟಿ ಮನೆಗಳಲ್ಲಿ 2.5 ಕೋಟಿಗೂ ಹೆಚ್ಚು ಮನೆಗಳನ್ನು ಹಳ್ಳಿಗಳಲ್ಲಿ ನಿರ್ಮಿಸಲಾಗಿದೆ, 10 ಕೋಟಿಗೂ ಹೆಚ್ಚು ಶೌಚಾಲಯಗಳು, 1.5 ಲಕ್ಷಕ್ಕೂ ಹೆಚ್ಚು ಕ್ಷೇಮ ಕೇಂದ್ರಗಳು ಮತ್ತು ಕೃಷಿ ವಲಯದಲ್ಲಿ ಯಾಂತ್ರೀಕರಣ ಹೆಚ್ಚಾಗಿದೆ. "ಇವೆಲ್ಲವೂ ಅಪಾರ ಉದ್ಯೋಗಾವಕಾಶಗಳನ್ನು ಸೃಷ್ಟಿಸಿವೆ" ಎಂದು ಅವರು ಹೇಳಿದರು.

ಶ್ರೀ ಮೋದಿ ಅವರು ಬೆಳೆಯುತ್ತಿರುವ ಉದ್ಯಮಶೀಲತೆ ಮತ್ತು ಸಣ್ಣ ಕೈಗಾರಿಕೆಗಳಿಗೆ ನೀಡುವ ಬೆಂಬಲದ ಬಗ್ಗೆಯೂ ಮಾತನಾಡಿದರು. ಇತ್ತೀಚೆಗೆ 8 ವರ್ಷಗಳನ್ನು ಪೂರೈಸಿದ ಪ್ರಧಾನಮಂತ್ರಿ ಮುದ್ರಾ ಯೋಜನೆಯನ್ನು ಅವರು ಉಲ್ಲೇಖಿಸಿದರು. ಈ ಯೋಜನೆಯಡಿ ₹23 ಲಕ್ಷ ಕೋಟಿ ಮೌಲ್ಯದ ಬ್ಯಾಂಕ್ ಖಾತರಿ-ಮುಕ್ತ ಸಾಲಗಳನ್ನು ವಿತರಿಸಲಾಗಿದೆ ಮತ್ತು 70 ಪ್ರತಿಶತಕ್ಕಿಂತ ಹೆಚ್ಚು ಫಲಾನುಭವಿಗಳು ಮಹಿಳೆಯರು. "ಈ ಯೋಜನೆಯು 8 ಕೋಟಿ ಹೊಸ ಉದ್ಯಮಿಗಳನ್ನು ಸೃಷ್ಟಿಸಿದೆ. ಮುದ್ರಾ ಯೋಜನೆಯ ಸಹಾಯದಿಂದ ಮೊದಲ ಬಾರಿಗೆ ತಮ್ಮ ವ್ಯವಹಾರವನ್ನು ಪ್ರಾರಂಭಿಸಿದ ಜನರು ಇವರು" ಎಂದು ಅವರು ಹೇಳಿದರು. ತಳಮಟ್ಟದಲ್ಲಿ ಆರ್ಥಿಕತೆಗೆ ಶಕ್ತಿ ತುಂಬುವಲ್ಲಿ ಸೂಕ್ಷ್ಮ ಹಣಕಾಸು (ಸಣ್ಣ ಪ್ರಮಾಣದ ಹಣಕಾಸು) ನ ಶಕ್ತಿಯನ್ನು ಸಹ ಅವರು ಎತ್ತಿ ತೋರಿಸಿದರು.

ಇಂದು ನೇಮಕಾತಿ ಪತ್ರಗಳನ್ನು ಪಡೆದವರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು, 2047ರ ವೇಳೆಗೆ ಅಭಿವೃದ್ಧಿ ಹೊಂದಿದ ಭಾರತವಾಗುವ ಗುರಿಯೊಂದಿಗೆ ರಾಷ್ಟ್ರವು ಮುನ್ನಡೆಯುತ್ತಿರುವಾಗ, ದೇಶದ ಅಭಿವೃದ್ಧಿಗೆ ಕೊಡುಗೆ ನೀಡಲು ಇದು ಒಂದು ಅವಕಾಶ ಎಂದು ಹೇಳಿದರು. "ಇಂದು ನೀವು ಸರ್ಕಾರಿ ಸೇವಕರಾಗಿ ನಿಮ್ಮ ಪ್ರಯಾಣವನ್ನು ಪ್ರಾರಂಭಿಸುತ್ತಿದ್ದೀರಿ" ಎಂದು ಪ್ರಧಾನಮಂತ್ರಿಯವರು ಮುಂದುವರಿಸಿದರು, "ಈ ಪ್ರಯಾಣದಲ್ಲಿ, ಒಬ್ಬ ಸಾಮಾನ್ಯ ನಾಗರಿಕರಾಗಿ ನೀವು ಅನುಭವಿಸುತ್ತಿದ್ದ ವಿಷಯಗಳನ್ನು ನೀವು ಯಾವಾಗಲೂ ನೆನಪಿಟ್ಟುಕೊಳ್ಳಬೇಕು." ಸರ್ಕಾರದಿಂದ ಹೊಸ ನೇಮಕಾತಿದಾರರ ನಿರೀಕ್ಷೆಗಳನ್ನು ಗಮನಿಸಿದ ಪ್ರಧಾನಮಂತ್ರಿಯವರು, ಇತರರ ನಿರೀಕ್ಷೆಗಳನ್ನು ಈಡೇರಿಸುವುದು ಈಗ ಅವರ ಜವಾಬ್ದಾರಿಯಾಗಿದೆ ಎಂದು ಎತ್ತಿ ತೋರಿಸಿದರು. "ನಿಮ್ಮಲ್ಲಿ ಪ್ರತಿಯೊಬ್ಬರೂ ನಿಮ್ಮ ಕೆಲಸದ ಮೂಲಕ ಒಂದು ಅಥವಾ ಇನ್ನೊಂದು ರೀತಿಯಲ್ಲಿ ಸಾಮಾನ್ಯ ಮನುಷ್ಯನ ಜೀವನದ ಮೇಲೆ ಪರಿಣಾಮ ಬೀರುತ್ತೀರಿ" ಎಂದು ಅವರು ಹೇಳಿದರು. ಕೆಲಸದಲ್ಲಿ ಸಕಾರಾತ್ಮಕ ಪರಿಣಾಮವನ್ನು ಸೃಷ್ಟಿಸಲು ಮತ್ತು ಸಾಮಾನ್ಯ ಮನುಷ್ಯನ ಜೀವನವನ್ನು ಸುಧಾರಿಸಲು ಪ್ರಯತ್ನಗಳನ್ನು ಮಾಡಬೇಕು ಎಂದು ಪ್ರಧಾನಮಂತ್ರಿಯವರು ಒತ್ತಿ ಹೇಳಿದರು. ಭಾಷಣವನ್ನು ಮುಕ್ತಾಯಗೊಳಿಸುತ್ತಾ, ಪ್ರಧಾನಮಂತ್ರಿಯವರು ಹೊಸ ನೇಮಕಾತಿದಾರರಿಗೆ ತಮ್ಮ ಕಲಿಕೆಯ ಪ್ರಕ್ರಿಯೆಯನ್ನು ನಿಲ್ಲಿಸದಂತೆ ಒತ್ತಾಯಿಸಿದರು ಮತ್ತು ಹೊಸದನ್ನು ತಿಳಿದುಕೊಳ್ಳುವ ಅಥವಾ ಕಲಿಯುವ ಸ್ವಭಾವವು ಕೆಲಸ ಮತ್ತು ವ್ಯಕ್ತಿತ್ವ ಎರಡರಲ್ಲೂ ಪ್ರತಿಫಲಿಸುತ್ತದೆ ಎಂದು ಹೇಳಿದರು. iGoT ಕರ್ಮಯೋಗಿ ಎಂಬ ಆನ್‌ಲೈನ್ ಕಲಿಕಾ ವೇದಿಕೆಗೆ ಸೇರುವ ಮೂಲಕ ತಮ್ಮ ಕೌಶಲ್ಯಗಳನ್ನು ಉನ್ನತೀಕರಿಸಲು ಸಹ ಅವರು ಸಲಹೆ ನೀಡಿದರು.

ಹಿನ್ನೆಲೆ

ಉದ್ಯೋಗ ಸೃಷ್ಟಿಗೆ ಹೆಚ್ಚಿನ ಆದ್ಯತೆ ನೀಡುವ ಪ್ರಧಾನ ಮಂತ್ರಿಯವರ ಬದ್ಧತೆಯನ್ನು ಈಡೇರಿಸುವತ್ತ ರೋಜ್‌ಗಾರ್ ಮೇಳವು ಒಂದು ಹೆಜ್ಜೆಯಾಗಿದೆ. ರೋಜ್‌ಗಾರ್ ಮೇಳವು ಮತ್ತಷ್ಟು ಉದ್ಯೋಗ ಸೃಷ್ಟಿಯಲ್ಲಿ ವೇಗವರ್ಧಕವಾಗಿ ಕಾರ್ಯನಿರ್ವಹಿಸುತ್ತದೆ ಮತ್ತು ಯುವಜನರಿಗೆ ಅವರ ಸಬಲೀಕರಣ ಮತ್ತು ರಾಷ್ಟ್ರೀಯ ಅಭಿವೃದ್ಧಿಯಲ್ಲಿ ಭಾಗವಹಿಸುವಿಕೆಗಾಗಿ ಅರ್ಥಪೂರ್ಣ ಅವಕಾಶಗಳನ್ನು ಒದಗಿಸುತ್ತದೆ ಎಂದು ನಿರೀಕ್ಷಿಸಲಾಗಿದೆ.

 

*****


(Release ID: 2187326) Visitor Counter : 8